Tag: ವೋಲ್ಟ್

  • ಶೀಘ್ರದಲ್ಲಿ ಕಡಿತವಾಗಲಿದೆ ಕರೆ ದರ: ಏನಿದು ಐಯುಸಿ?

    ಶೀಘ್ರದಲ್ಲಿ ಕಡಿತವಾಗಲಿದೆ ಕರೆ ದರ: ಏನಿದು ಐಯುಸಿ?

    ನವದೆಹಲಿ: ಶೀಘ್ರದಲ್ಲಿ ಟೆಲಿಕಾಂ ಕಂಪೆನಿಗಳು ಕರೆ ದರವನ್ನು ಕಡಿತಗೊಳಿಸುವ ಸಾಧ್ಯತೆಯಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇಂಟರ್‍ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಬೆಲೆಯನ್ನು ಕಡಿತಗೊಳಿಸಲು ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಪ್ರಸ್ತುತ ಈಗ ಪ್ರತಿ ನಿಮಿಷಕ್ಕೆ 14 ಪೈಸೆ ಐಯುಸಿ ಇದ್ದು ಇದನ್ನು 10 ಪೈಸೆಗೆ ಇಳಿಸಲು ಟ್ರಾಯ್ ಮುಂದಾಗಿದೆ ಎಂದು ವರದಿಯಾಗಿದೆ.

    ಐಯುಸಿ ನಿಗದಿ ಪಡಿಸಿದ್ದಕ್ಕೆ ಜಿಯೋ ವಿರೋಧ ವ್ಯಕ್ತಪಡಿಸಿದ್ದು, ನಾವು ಕರೆಗೆಂದೇ ಪ್ರತ್ಯೇಕವಾಗಿ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ ಐಯುಸಿಯಿಂದ ನಮಗೆ ಹೊರೆಯಾಗುತ್ತಿದೆ. ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ವಾದಿಸಿದೆ.

    ಏನಿದು ಐಯುಸಿ?
    2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿತ್ತು.

    ಇಂಟರ್‍ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ಏರ್‍ಟೆಲ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ಏರ್‍ಟೆಲ್ ಗೆ ಪಾವತಿಸಬೇಕಾಗುತ್ತದೆ.

    ಐಯುಸಿಯಿಂದಾಗಿ ಏರ್‍ಟೆಲ್, ವೊಡಾಫೋನ್, ಐಡಿಯಾ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ. ಕಳೆದ ವರ್ಷ ದೇಶದ ಅತಿ ದೊಡ್ಡ ಟೆಲಿಕಾಂ ಕಂಪೆನಿ ಏರ್‍ಟೆಲ್ 10,279 ಕೋಟಿ ರೂ. ಆದಾಯವನ್ನು ಗಳಿಸಿದ್ದು, ಈಗ 14 ಪೈಸೆಯಿಂದ 30 ಪೈಸೆಗೆ ಏರಿಸಬೇಕೆಂಬ ಪ್ರಸ್ತಾಪವನ್ನು ಟ್ರಾಯ್ ಮುಂದಿಟ್ಟಿದೆ.

    ಭಾರತಿ ಎಂಟರ್‍ಪ್ರೈಸಸ್ ಮುಖ್ಯಸ್ಥ ಸುನೀಲ್ ಮಿತ್ತಲ್ ಟ್ರಾಯ್ ಮುಖ್ಯಸ್ಥ ಆರ್‍ಎಸ್ ಶರ್ಮಾ ಅವರಿಗೆ ಪತ್ರ ಬರೆದಿದ್ದು, ಪ್ರಸ್ತುತ ಐಯುಸಿ ಕಡಿಮೆ ಇದ್ದು, ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದ್ದಾರೆ.

    ಜಿಯೋ ವಿರೋಧ ಯಾಕೆ?
    ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ಈ ಕಾರಣಕ್ಕಾಗಿ ಜಿಯೋ ಸಂಪೂರ್ಣವಾಗಿ ಐಯುಸಿಯನ್ನು ತೆಗೆದು ಹಾಕಬೇಕೆಂದು ವಾದ ಮಂಡಿಸುತ್ತಿದೆ.

    ಏರ್‍ಟೆಲ್ ಮತ್ತು ವೊಡಾಫೋನ್‍ಗಳು ಪ್ರಯೋಗಿಕ ಪರೀಕ್ಷೆ ನಡೆಸುತ್ತಿದ್ದು ಕೆಲ ತಿಂಗಳಿನಲ್ಲಿ ಈ ವೋಲ್ಟ್ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇವೆ ಆರಂಭವಾದ ಬಳಿಕ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಬಹುತೇಕ ಕಂಪೆನಿಗಳ ಫೋನ್ ಗಳು ಎಲ್‍ಟಿಇ ಟೆಕ್ನಾಲಜಿಯನ್ನು ಬೆಂಬಲಿಸುತ್ತಿದೆ.