Tag: ವೈರಲ್ ವಿಡಿಯೋ

  • ಅಂಧ ವೃದ್ಧನಿಗಾಗಿ ಓಡೋಡಿ ಬಂದು ಬಸ್ ನಿಲ್ಲಿಸಿದ ಮಹಿಳೆ- ವಿಡಿಯೋ ವೈರಲ್

    ಅಂಧ ವೃದ್ಧನಿಗಾಗಿ ಓಡೋಡಿ ಬಂದು ಬಸ್ ನಿಲ್ಲಿಸಿದ ಮಹಿಳೆ- ವಿಡಿಯೋ ವೈರಲ್

    – ಮಹಿಳೆಯ ಕಾರ್ಯಕ್ಕೆ ಶಹಬ್ಬಾಸ್ ಎಂದ ನೆಟ್ಟಿಗರು

    ತಿರುವನಂತಪುರಳ: ಮಹಾಮಾರಿ ಕೊರೊನಾ ವೈರಸ್ ನಮ್ಮ ದೇಶವನ್ನು ವಕ್ಕರಿಸಿದ ಬಳಿಕ ಅನೇಕ ಮಾನವೀಯ ಕಾರ್ಯಗಳನ್ನು ನಾವು ಕಂಡಿದ್ದೇವೆ. ಹಾಗೆಯೇ ಇದೀಗ ಕೇರಳದಲ್ಲಿ ಮಹಿಳೆಯೊಬ್ಬರು ಅಂಧ ವೃದ್ಧರೊಬ್ಬರಿಗೆ ಸಹಾಯ ಮಾಡಿರುವುದು ಇದೀಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

    ಹೌದು. ಸುಪ್ರಿಯಾ ಎಂಬ ಮಹಿಳೆ ಅಂಧ ವೃದ್ಧರೊಬ್ಬರಿಗೆ ಸಹಾಯ ಮಾಡಿದ್ದಾರೆ. ಅಜ್ಜ ಬಸ್ಸಿನಲ್ಲಿ ತೆರಳಬೇಕಿತ್ತು. ಈ ವಿಚಾರ ತಿಳಿದ ಮಹಿಳೆ ಬಸ್ಸಿನ ಬಳಿ ಓಡೋಡಿ ಬಂದು ಬಸ್ಸು ನಿಲ್ಲಿಸಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಮಹಿಳೆಯ ಕಾರ್ಯಕ್ಕೆ ನಟ-ನಟಿಯರು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ವಿಡಿಯೋದಲ್ಲಿ ಏನಿದೆ..?
    ಅಜ್ಜ ಬಸ್ಸಿಗಾಗಿ ಕಾಯುತ್ತಿದ್ದರು. ಆದರೆ ಅದಾಗಲೇ ನಿಲ್ದಾಣಕ್ಕೆ ಬಂದ ಬಸ್ಸು ಹೊರಡಲಾರಭಿಸಿದೆ. ಈ ವಿಚಾರ ಮಹಿಳೆಯ ಗಮನಕ್ಕೆ ಬಂದಿದ್ದು, ಕೂಡಲೇ ಹೊರಡಲು ಅಣಿಯಾದ ಬಸ್ಸನ್ನು ನಿಲ್ಲಿಸಿದ್ದಾರೆ. ಅಲ್ಲದೆ ಅಜ್ಜನ ಬಳಿ ಹೋಗಿ ಅವರ ಕೈಹಿಡಿದು ಬಸ್ಸಿನ ಬಳಿ ಕರೆತಂದು ಹತ್ತಿಸಿ ವಾಪಸ್ ಆಗಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಲ್ಲರೂ ತಮ್ಮ ಟ್ವಿಟ್ಟರ್ ಅಕೌಂಟ್ ಗಳಲ್ಲಿ ವಿಡಿಯೋ ಶೇರ್ ಮಾಡಿಕೊಂಡು ಮಹಿಳೆಯ ಕಾರ್ಯಕ್ಕೆ ಶಹಬ್ಬಾಸ್ ಅಂದಿದ್ದಾರೆ. ಅಂತೆಯೇ ಐಪಿಎಸ್ ಅಧಿಕಾರಿ ಕೂಡ ಈ ವಿಡಿಯೋವನ್ನು ಶೇರ್ ಮಾಡಿಕೊಂಡು, ಈ ಜಗತ್ತು ಬದುಕಲು ಒಂದು ಉತ್ತಮ ಸ್ಥಳ ಎಂಬುದನ್ನು ಈ ಮಹಿಳೆ ತೋರಿಸಿದ್ದಾರೆ. ಅವರ ಈ ಕುರುಣೆ ತುಂಬಾ ಸುಂದರವಾಗಿದೆ ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    41 ಸೆಕೆಂಡ್ ಇರುವ ಈ ವಿಡಿಯೋವನ್ನು ಸುಮಾರು 6.2 ಲಕ್ಷಕ್ಕಿಂತಯೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಕಮೆಂಟ್ ಮೂಲಕ ಎಲ್ಲರೂ ಮಹಿಳೆಯ ಕಾರ್ಯವನ್ನು ಮೆಚ್ಚಿ ಕೊಂಡಿದ್ದಾರೆ. ಮಹಿಳೆ ಜಾಲಿ ಸಿಲ್ಕ್ಸ್ ಎಂಬ ಟೆಕ್ಸ್ ಟೈಲ್ ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

  • ಭಾರತ, ಚೀನಾ ಗಡಿಪ್ರದೇಶದ ಸನಿಹ ನೋಡ ನೋಡುತ್ತಿದಂತೆ ಕುಸಿದು ಬಿದ್ದ ಸೇತುವೆ- ವೈರಲ್ ವಿಡಿಯೋ

    ಭಾರತ, ಚೀನಾ ಗಡಿಪ್ರದೇಶದ ಸನಿಹ ನೋಡ ನೋಡುತ್ತಿದಂತೆ ಕುಸಿದು ಬಿದ್ದ ಸೇತುವೆ- ವೈರಲ್ ವಿಡಿಯೋ

    ನವದೆಹಲಿ: ಭಾರತ ಹಾಗೂ ಚೀನಾ ಗಡಿಪ್ರದೇಶದ ಬಳಿ ಪ್ರಮುಖ ಸೇತುವೆಯೊಂದು ನೋಡ ನೋಡುತ್ತಿದಂತೆ ಕುಸಿದು ಬಿದ್ದಿರುವ ಘಟನೆ ಉತ್ತರಾಖಂಡ ರಾಜ್ಯದ ಪಿಥೋರ್‍ಗಢ ಜಿಲ್ಲೆಯಲ್ಲಿ ನಡೆದಿದೆ.

    ಭಾರೀ ಗಾತ್ರದ ನಿರ್ಮಾಣ ಯಂತ್ರವನ್ನು ಟ್ರಕ್‍ವೊಂದು ಹೊತ್ತು ಸಾಗುತ್ತಿದ್ದ ವೇಳೆ ಏಕಾಏಕಿ ಸೇತುವೆ ಕುಸಿದು ಬಿದ್ದಿದೆ. ಘಟನೆಯಲ್ಲಿ ವಾಹನದ ಚಾಲಕ ಹಾಗೂ ಸಹಾಯಕ ಗಂಭೀರವಾಗಿ ಗಾಯಗೊಂಡಿರುವ ಮಾಹಿತಿ ಲಭಿಸಿದೆ. ಲೀಲಾ ಜೋಹಾರ್ ಕಣಿವೆಯ ಧಾಪಾ-ಮಿಲಾಮ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.

    ಸದ್ಯ ಕುಸಿದು ಬಿದ್ದಿರುವ ಸೇತುವೆ ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರ ನಡುವೆ ಸಂಪರ್ಕ ಕಲ್ಪಿಸಲು ಇರುವ ಏಕೈಕ ಮಾರ್ಗ ಎನ್ನಲಾಗಿದೆ. ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾರ್ಯಗಳಲ್ಲಿ ಬಳಸಲು ಭಾರೀ ನಿರ್ಮಾಣ ಯಂತ್ರವನ್ನು ಟ್ರಕ್ ಮೂಲಕ ಸಾಗಿಸಲಾಗುತ್ತಿತ್ತು. ಸೇತುವೆ ಕುಸಿದ ಪರಿಣಾಮ ಈ ಮಾರ್ಗದ ಸಂಪರ್ಕ ಕಡಿತಗೊಂಡಿದೆ.

    ಸೇತುವೆ ಕುಸಿದು ಬೀಳುವ ದೃಶ್ಯ ಸೆರೆಯಾಗಿದ್ದು, ಟ್ರಕ್ ಸೇತುವೆಯ ಅರ್ಧ ಭಾಗಕ್ಕೆ ಆಗಮಿಸಿದ್ದ ವೇಳೆ ಅವಘಡ ಸಂಭವಿಸಿದೆ. ಗಡಿ ಪ್ರದೇಶದಿಂದ ಸುಮಾರು 65 ಕಿಮೀ ದೂರದಲ್ಲಿ ಘಟನೆ ಜರುಗಿದ್ದು, 25 ವರ್ಷ ಹಿಂದಿನ ಹಳೆಯ ಸೇತುವೆ ಎಂಬ ಮಾಹಿತಿ ಲಭಿಸಿದೆ. ಸೇತುವೆ ಮರು ನಿರ್ಮಾಣವಾಗದ ಹೊರತು ಸುಮಾರು 7 ಸಾವಿರ ಜನಸಂಖ್ಯೆ ಹೊಂದಿರುವ ಹಳ್ಳಿಗಳಿಗೆ ಸಂಪರ್ಕ ಸಾಧ್ಯವಾಗುವುದಿಲ್ಲ. ಬಾರ್ಡರ್ ರೋಡ್ ಆರ್ಗನೈಜೇಶನ್ (ಬಿಆರ್‍ಒ) ಸದ್ಯ ಸೇತುವೆ ಮರು ನಿರ್ಮಾಣದ ಕಾರ್ಯಕ್ಕೆ ಮುಂದಾಗಿದೆ. ಇತ್ತೀಚೆಗೆ ವಾಸ್ತವಿಕ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ಭಾರೀ ವಾಹನಗಳನ್ನು ರಸ್ತೆ ನಿರ್ಮಾಣದ ಕಾಮಗಾರಿಗೆ ಸಾಗಿಸಲಾಗಿತ್ತು. ಮಿಲಾಮ್‍ನಿಂದ ಚೀನಾ ಗಡಿ ಪ್ರದೇಶವರೆಗೂ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

  • ಜೀವನ್ಮರಣದ ನಡ್ವೆ ಒದ್ದಾಡ್ತಿದ್ದ ಯುವತಿಯನ್ನ ರಕ್ಷಿಸಿದ ಬಾಲಕಿ

    ಜೀವನ್ಮರಣದ ನಡ್ವೆ ಒದ್ದಾಡ್ತಿದ್ದ ಯುವತಿಯನ್ನ ರಕ್ಷಿಸಿದ ಬಾಲಕಿ

    – ಬಾಲಕಿ ಸಮಯಪ್ರಜ್ಞೆಗೆ ಭಾರೀ ಪ್ರಶಂಸೆ
    – ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ

    ಉಡುಪಿ: ಚಲಿಸುತ್ತಿದ್ದ ಕಾರು ಕೆರೆಗೆ ಬಿದ್ದು ಚಾಲಕ ಮೃತಪಟ್ಟು ಕಾರಿನಲ್ಲಿದ್ದ ಯುವತಿ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದಾಳೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬಾರ್ಕೂರಲ್ಲಿ ಈ ಘಟನೆ ನಡೆದಿದೆ.

    ಬಾರ್ಕೂರಿನ ಚೌಳಿಕೆರೆಗೆ ಕಾರು ಉರುಳಿ ಉದ್ಯಮಿ ಸಂತೋಷ್ ಶೆಟ್ಟಿ ಎಂಬವರು ಸ್ಥಳದಲ್ಲೇ ಮೃತರಾಗಿದ್ದರು. ಕಾರಿನಲ್ಲಿ ಜೊತೆಗಿದ್ದ ಸಂಸ್ಥೆಯ ಉದ್ಯೋಗಿ ಶ್ವೇತಾ ಅಪಘಾತದಿಂದ ಪವಾಡ ಸದೃಶ ರೂಪದಲ್ಲಿ ಬಚಾವಾಗಿದ್ದು, ಯುವತಿ ಶ್ವೇತಾಳನ್ನು ಬದುಕಿಸಿದ ವೀಡಿಯೋ ಸಿಕ್ಕಿದೆ.

    ನೀರು ತುಂಬಿದ್ದ ಕೆರೆಗೆ ಕಾರು ಬಿದ್ದಾಗ ಇಬ್ಬರೂ ಮುಳುಗಿದ್ದರು. ಸಂತೋಷ್ ಸ್ಥಳದಲ್ಲೇ ಸತ್ತರೆ, ಯುವತಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಳು. ಈ ವೇಳೆ ಸ್ಥಳೀಯ ಬಾಲಕಿ ಸಮಯಪ್ರಜ್ಞೆಯಿಂದ ಶ್ವೇತಾ ಬದುಕಿ ಬಂದಿದ್ದಾಳೆ. ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಯುವತಿ ಕೊನೆಗೂ ಬಚಾವಾಗಿದ್ದಾಳೆ. ಸಮಯ ಪ್ರಜ್ಞೆ ಮೆರೆದು ಯುವತಿಗೆ ಮರುಜೀವ ಕೊಟ್ಟ ಬಾಲಕಿಯ ಹೆಸರು ನಮನ. ಶ್ವೇತಾಳನ್ನು ಮೇಲಕ್ಕೆ ಎತ್ತಿದ ತಕ್ಷಣ ಎದೆಗೆ ಒತ್ತಡ ಹಾಕಿ ಚೇತರಿಸಿಕೊಳ್ಳುವಂತೆ ಮಾಡಿದ್ದಾಳೆ. ಪ್ರಾಥಮಿಕ ಚಿಕಿತ್ಸೆ ನೀಡಿ ಉಸಿರು ಮರಳುವಂತೆ ಮಾಡಿದ ಈಕೆ ಮತ್ತು ಸ್ಥಳೀಯ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಘಟನೆ ವೇಳೆ ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವೀಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ. ಈಕೆ ಲಿಟಲ್‍ರಾಕ್ ಶಾಲೆಯಲ್ಲಿ 10ನೇ ತರಗತಿ ಕಲಿಯುತ್ತಿದ್ದಾಳೆ. ಪ್ರಥಮ ಚಿಕಿತ್ಸೆ ಮೂಲಕ ದೇಹದಿಂದ ನೀರು ಹೊರ ಹಾಕಿದ ಬಳಿಕವೇ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರೂ ನಮನಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ್ದಲ್ಲದಿದ್ದರೆ ಜೀವಕ್ಕೇ ಅಪಾಯ ಇತ್ತು ಎಂದು ವೈದ್ಯರು ಹೇಳಿದ್ದಾರೆ.

    ವಿದ್ಯಾರ್ಥಿನಿ ನಮನ ಮಾತನಾಡಿ, ಮನೆಯಲ್ಲಿದ್ದಾಗ ಜೋರಾಗಿ ಶಬ್ದ ಕೇಳಿತು. ಸುತ್ತಮುತ್ತ ಇದ್ದ ಎಲ್ಲರೂ ಓಡಿ ಬಂದಿದ್ದಾರೆ. ಹಗ್ಗ ಕಟ್ಟಿ ಕೆಳಗೆ ಇಳಿಯಲಾಯ್ತು. ಮಹಿಳೆಯನ್ನು ಕೆರೆಯಿಂದ ಮೇಲಕ್ಕೆತ್ತಲಾಯ್ತು. ಚಾಲಕರು ಕಾರೊಳಗೆ ಸಿಲುಕಿದ್ದರು. ಹೊಟ್ಟೆಯಿಂದ ನೀರು ತೆಗೆದು, ಎದೆ ಒತ್ತಿ ಉಸಿರು ಬರುವಂತೆ ಮಾಡಿದೆವು. ಕೆರೆಗೆ ಆವರಣ ಗೋಡೆ ನಿರ್ಮಿಸಿದರೆ ಅವಘಡ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾಳೆ.

  • ನೀರು ಕುಡಿಯುತ್ತಿರುವ ವಿಡಿಯೋ ವೈರಲ್‌ – ಟ್ರಂಪ್‌ ಆರೋಗ್ಯದಲ್ಲಿ ಸಮಸ್ಯೆ ಆಗಿದ್ಯಾ?

    ನೀರು ಕುಡಿಯುತ್ತಿರುವ ವಿಡಿಯೋ ವೈರಲ್‌ – ಟ್ರಂಪ್‌ ಆರೋಗ್ಯದಲ್ಲಿ ಸಮಸ್ಯೆ ಆಗಿದ್ಯಾ?

    – ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಗ್ಯದಲ್ಲಿ ಸಮಸ್ಯೆ ಆಗಿದ್ಯಾ ಹೀಗೊಂದು ಪ್ರಶ್ನೆಯನ್ನು ಇಟ್ಟುಕೊಂಡು ಜನ ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.

    ಟ್ರಂಪ್‌ ಗ್ಲಾಸ್‌ನಲ್ಲಿ ನೀರು ಕುಡಿಯತ್ತಿರುವ ವಿಡಿಯೋ ಈಗ ವೈರಲ್‌ ಆಗಿದೆ. ವೈರಲ್‌ ಆಗಿರುವ ವಿಡಿಯೋದಿಂದಾಗಿ ಟ್ರಂಪ್‌ ಆರೋಗ್ಯ ಸಮಸ್ಯೆಯಲ್ಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

    ನಡೆದಿದ್ದು ಏನು?
    ಶನಿವಾರ ಅಮೆರಿಕ ಸೇನಾ ಅಕಾಡೆಮಿಯಲ್ಲಿನ ಪದವಿ ಸಮಾರಂಭದಲ್ಲಿ ಟ್ರಂಪ್‌ ಭಾಷಣ ಮಾಡುತ್ತಿದ್ದರು. ಈ ವೇಳೆ ಬಲಗೈಯಿಂದ ನೀರು ಕುಡಿಯಲು ಯತ್ನಿಸಿದ್ದು ಸಾಧ್ಯವಾಗದಿದ್ದಾಗ ಎಡಗೈ ಸಹಾಯ ಪಡೆದಿದ್ದಾರೆ. ನೀರು ಕುಡಿಯಲು ಬಹಳ ಕಷ್ಟ ಪಟ್ಟಿದ್ದನ್ನು ನೋಡಿ ಜನ ಈಗ ತಮ್ಮದೇ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕ್ರಮ ಮುಗಿಸಿ ಟ್ರಂಪ್‌ ಮೆಟ್ಟಿಲುಗಳಿಂದ ಇಳಿಯಲು ಬಹಳ ಕಷ್ಟಪಟ್ಟಿರುವ ವಿಡಿಯೋ ಸಹ ಹರಿದಾಡುತ್ತಿದೆ.

    ವಿಡಿಯೋ ಬಗ್ಗೆ ಚರ್ಚೆ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಟ್ರಂಪ್‌ ಇಳಿಯುವ ಸಂದರ್ಭದಲ್ಲಿ ಹಿಡಿದುಕೊಳ್ಳಲು ಹ್ಯಾಂಡ್ರೈಲ್‌ ಇರಲಿಲ್ಲ. ಹೀಗಾಗಿ ಜಾರಿ ಬೀಳದೇ ಇರಲು ನಿಧಾನವಾಗಿ ಇಳಿಯುತ್ತಿದ್ದೆ. ಫೇಕ್‌ ನ್ಯೂಸ್‌ ಗಳು ಇದನ್ನು ಸಂಭ್ರಮಿಸುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

    ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಅಮೆರಿಕದಲ್ಲಿ ವರ್ಣತಾರತಮ್ಯ ಗಲಾಟೆ ಜೋರಾಗಿದೆ. ಈ ವರ್ಷವೇ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಕಾರಣ ಟ್ರಂಪ್‌ ಈಗ ಏನೇ ಎಡವಟ್ಟು ಮಾಡಿದರೂ ಅದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತದೆ.

    ಈ ಹಿಂದೆ ಟ್ರಂಪ್‌ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಒಂದು ವಾರಕ್ಕೂ ಹೆಚ್ಚು ಕಾಲ ನಾನು ಮಾತ್ರೆಯನ್ನು ಸೇವಿಸಿದ್ದು, ಈ ಮಾತ್ರೆಯ ಬಗ್ಗೆ ನಾನು ಬಹಳಷ್ಟು ತಿಳಿದಿರುವುದಾಗಿ ಹೇಳಿದ್ದರು. ಭಾರತ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧಿಗಳನ್ನು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಿದೆ.

  • ಕಿಮ್ಸ್ ಕರ್ಮಕಾಂಡ: ಸ್ಟ್ರೆಚರ್ ಇಲ್ಲದೇ ಮಗುವನ್ನು ಹೊತ್ತುಕೊಂಡು ಹೋದ ತಂದೆ!

    ಕಿಮ್ಸ್ ಕರ್ಮಕಾಂಡ: ಸ್ಟ್ರೆಚರ್ ಇಲ್ಲದೇ ಮಗುವನ್ನು ಹೊತ್ತುಕೊಂಡು ಹೋದ ತಂದೆ!

    ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಆಕ್ಸಿಜನ್ ನೀಡಿದ್ದ ಸಂದರ್ಭದಲ್ಲಿ ಯಾವುದೇ ಸ್ಟ್ರೆಚರ್ ಸಹಾಯ ಇಲ್ಲದಿರುವುದರಿಂದ ತಂದೆಯೇ ಹೊತ್ತುಕೊಂಡು ಹೋಗಿರುವ ಘಟನೆಯೊಂದು ಹುಬ್ಬಳ್ಳಿ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಕಿಮ್ಸ್ ಸಿಬ್ಬಂದಿಗಳ ನಿಷ್ಕಾಳಜಿಯನ್ನು ಎತ್ತಿ ತೋರುವ ದೃಶ್ಯವೊಂದು ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಾರ್ವಜನಿಕ ಸೇವೆಗೆ ಕೈ ಜೋಡಿಸಿದ್ದು, ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಉತ್ತರ ಕರ್ನಾಟಕದ ಧನ್ವಂತರಿ ಎಂಬುವಂತ ಹೆಗ್ಗಳಿಕೆ ಪಾತ್ರವಾಗಿರುವ ಕಿಮ್ಸ್ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಆದರೆ ಸಿಬ್ಬಂದಿಗಳ ನಿಷ್ಕಾಳಜಿಯಿಂದ ಕಿಮ್ಸ್ ಆಸ್ಪತ್ರೆಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಇನ್ನೂ ಸಿಬ್ಬಂದಿಗಳು ಏನು ಗೊತ್ತಿರದ ಮಗುವಿನ ತಂದೆಯ ಕೈಯಲ್ಲಿ ಆಕ್ಸಿಜನ್ ಹಾಕಿದ್ದ ಮಗುವನ್ನು ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಸಿಬ್ಬಂದಿಗಳ ವರ್ತನೆಯಿಂದ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದ ಕಿಮ್ಸ್ ಆಸ್ಪತ್ರೆ ಮತ್ತೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಯಾವುದೇ ಸ್ಟ್ರೆಚರ್ ಸಿಗದ ಹಿನ್ನಲೆಯಲ್ಲಿ ತಂದೆಯೇ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿರುವ ವಿಡಿಯೋ ಮನ ಕಲಕುವಂತಿದೆ. ಕೂಡಲೇ ಅಧಿಕಾರಿಗಳು ಹಾಗೂ ಕಿಮ್ಸ್ ನಿರ್ದೇಶಕರು ಎಚ್ಚೆತ್ತುಕೊಂಡ ಅವ್ಯವಸ್ಥೆ ಸರಿಪಡಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಸೆಯಾಗಿದೆ.

  • ತನ್ನ ಜೀವ ಪಣಕ್ಕಿಟ್ಟು ಪುಟ್ಟ ಮರಿಯನ್ನು ರಕ್ಷಿಸಿದ ತಾಯಿ ಕೋತಿ – ವಿಡಿಯೋ ವೈರಲ್

    ತನ್ನ ಜೀವ ಪಣಕ್ಕಿಟ್ಟು ಪುಟ್ಟ ಮರಿಯನ್ನು ರಕ್ಷಿಸಿದ ತಾಯಿ ಕೋತಿ – ವಿಡಿಯೋ ವೈರಲ್

    ನವದೆಹಲಿ: ತಾಯಿ ಪ್ರೀತಿಗೆ ಸಾಟಿಯಿಲ್ಲ, ತಾಯಿ ಎದುರು ಆ ದೇವರೇ ಸಲಾಂ ಹೊಡೆಯುತ್ತಾನೆ ಎಂಬ ಮಾತಿದೆ. ಮನುಷ್ಯರೇ ಆಗಲಿ, ಪ್ರಾಣಿಗಳೇ ಆಗಲಿ ತಾಯಿ ಮಮತೆ, ಪ್ರೀತಿ ಒಂದೆ. ಇದಕ್ಕೆ ಉದಾಹರಣೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ತಾಯಿ ಕೋತಿ ತನ್ನ ಮರಿಯನ್ನು ರಕ್ಷಣೆ ಮಾಡಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ತನ್ನ ಪ್ರಣವನ್ನು ಲೆಕ್ಕಿಸದೆ ತಾಯಿ ಕೋತಿ ತನ್ನ ಪುಟ್ಟ ಮರಿಯ ಜೀವ ಉಳಿಸಿದ ದೃಶ್ಯ ನೆಟ್ಟಿಗರ ಮನ ಮುಟ್ಟಿದೆ.

    ವೈರಲ್ ವಿಡಿಯೋದಲ್ಲಿ ಕೋತಿಯೊಂದು ತನ್ನ ಕಂದನನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ದೃಶ್ಯ ಸೆರೆಯಾಗಿದೆ. ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹಾರುವಾಗ ವಿದ್ಯುತ್ ತಂತಿಯ ಮಧ್ಯದಲ್ಲಿ ಸಿಲುಕಿ, ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಪುಟ್ಟ ಮರಿಯನ್ನು ತಾಯಿ ಕೋತಿ ತನ್ನ ಜೀವ ಪಣಕ್ಕಿಟ್ಟು ರಕ್ಷಿಸಿರುವ ದೃಶ್ಯ ನೋಡಿ ನೆಟ್ಟಿಗರು ಮನಸೋತಿದ್ದಾರೆ.

    ತನ್ನ ಜೀವವನ್ನು ಲೆಕ್ಕಿಸದೆ ಮರಿಗಾಗಿ ತಾಯಿ ಕೋತಿ ಕಟ್ಟದದಿಂದ ವಿದ್ಯುತ್ ತಂತಿಯ ಮೇಲೆ ಹಾರಿ, ತನ್ನ ಕರುಳ ಕುಡಿಯನ್ನು ರಕ್ಷಿಸಿರುವುದು ತಾಯಿಯ ನಿಸ್ವಾರ್ಥ ಪ್ರೀತಿ ಏನು ಎಂಬುದನ್ನು ತಿಳಿಸುತ್ತೆ ಎಂದು ನೆಟ್ಟಿಗರು ಈ ದೃಶ್ಯವನ್ನು ವರ್ಣಿಸಿದ್ದಾರೆ.

    ಈ ಹೃದಯಸ್ಪರ್ಶಿ ವಿಡಿಯೋವನ್ನು ಅರಣ್ಯ ಅಧಿಕಾರಿ ಪ್ರವೀಣ್ ಕಾಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ತಾಯಿ ನಡೆಸಿದ ರಕ್ಷಣಾ ಕಾರ್ಯಾಚರಣೆ, ವಿಫಲವಾಗಲು ಸಾಧ್ಯವೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ತಾಯಿ ಪ್ರೀತಿಗೆ, ದಿಟ್ಟತನಕ್ಕೆ ಸಲಾಂ ಎಂದಿದ್ದಾರೆ.

  • ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿದ ರಾಕುಲ್ ಪ್ರೀತ್ – ವೈರಲ್ ವಿಡಿಯೋದ ಅಸಲಿಯತ್ತೇ ಬೇರೆ

    ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿದ ರಾಕುಲ್ ಪ್ರೀತ್ – ವೈರಲ್ ವಿಡಿಯೋದ ಅಸಲಿಯತ್ತೇ ಬೇರೆ

    ಮುಂಬೈ: ಲಾಕ್‍ಡೌನ್‍ನಲ್ಲಿ ಎಣ್ಣೆ ಸಿಗದೆ ಮದ್ಯಪ್ರಿಯರು ಪರದಾಡಿದ್ದರು. ಆದರೆ ಈಗ ಮದ್ಯದಂಗಡಿ ತೆರೆದಿರುವ ಹಿನ್ನೆಲೆ ಕ್ಯೂನಲ್ಲಿ ನಿಂತು ಮದ್ಯಪ್ರಿಯರು ಎಣ್ಣೆ ಖರೀದಿಸುವಲ್ಲಿ ಬ್ಯೂಸಿ ಆಗಿದ್ದಾರೆ. ಮದ್ಯ ಖರೀದಿಗೆ ಪುರುಷರು, ಮಹಿಳೆಯರು, ಯುವಕ-ಯುವತಿಯರು ಕ್ಯೂನಲ್ಲಿನಿಂತ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಮಧ್ಯೆ ರಸ್ತೆ ಬದಿಯ ವೈನ್ ಸ್ಟೋರ್ ನಿಂದ ನಟಿ ರಾಕುಲ್ ಪ್ರೀತ್ ಸಿಂಗ್ ಮದ್ಯ ಖರೀದಿಸಿ ಹೋಗುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಕೂಡ ವೈರಲ್ ಆಗಿದೆ.

    ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಂತೆಯೇ ಮುಖಕ್ಕೆ ಮಾಸ್ಕ್ ಹಾಕಿಕೊಂಡು ರಾಕುಲ್ ವೈನ್ ಸ್ಟೋರ್‍ಗೆ ಹೋಗಿ, ಮದ್ಯ ಖರೀದಿಸಿಕೊಂಡು ಬಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಆಗಿದೆ. ರಾಕುಲ್ ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ಬರುತ್ತಿದ್ದಾರೆ ಎಂಬ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಆದರೆ ಆ ವಿಡಿಯೋ ಅಸಲಿಯತ್ತೆ ಬೇರೆಯಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

    https://www.instagram.com/p/B_ysdMlHBxE/?utm_source=ig_embed

    ರಾಕುಲ್ ಯಾವುದೇ ಮದ್ಯದಂಗಡಿಗೆ ಹೋಗಿರಲಿಲ್ಲ. ಬದಲಿಗೆ ಅವರು ಮೆಡಿಕಲ್ ಶಾಪ್‍ಗೆ ತೆರಳಿ ಔಷಧಿ ತೆಗೆದುಕೊಂಡು ಬರುತ್ತಿದ್ದರು. ಈ ವೇಳೆ ಅವರು ಕೈಯಲ್ಲಿ ಸಿರಪ್ ಬಾಟಲ್ ಹಿಡಿದುಕೊಂಡು ಬರುತ್ತಿದ್ದರು ಎನ್ನಲಾಗಿದ್ದು, ಈ ವಿಡಿಯೋವನ್ನು ಕೆಲವರು ಸೆರೆಹಿಡಿದಿದ್ದರು. ಆದರೆ ಬಳಿಕ ರಾಕುಲ್ ಮದ್ಯವನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಇದೇ ವಿಡಿಯೋವನ್ನು ಹರಿಬಿಟ್ಟಿದ್ದಾರೆ ಎನ್ನಲಾಗಿದೆ.

    ಆದರೆ ಈ ವಿಡಿಯೋವನ್ನು ನೋಡಿದ ರಾಕುಲ್ ಅಭಿಮಾನಿಗಳು ಸಿಟ್ಟಿಗೆದಿದ್ದು, ಸುಳ್ಳು ಸುದ್ದಿಗಳನ್ನು ಹರಡುವ ಮೊದಲು ಖಚಿತಪಡಿಸಿಕೊಳ್ಳಿ ಎಂದು ಕಾಮೆಂಟ್ ಮಾಡಿ ಕಿಡಿಕಾಡಿದ್ದಾರೆ. ಇನ್ನೂ ಕೆಲವರು ರಾಕುಲ್ ಫಿಟ್‍ನೆಸ್‍ಗೆ ಹೆಚ್ಚು ಒತ್ತು ನೀಡುತ್ತಾರೆ, ಅವರು ಹೀಗೆಲ್ಲ ಮದ್ಯ ಸೇವನೆ ಮಾಡಲ್ಲ ಎಂದು ನಟಿ ಪರ ನಿಂತಿದ್ದಾರೆ. ಅಷ್ಟೇ ಅಲ್ಲದೇ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ರಾಕುಲ್ ಅವರೇನಾ? ಇಲ್ಲ ಬೇರೆಯವರ ಎಂಬ ಅನುಮಾನಗಳೂ ಇವೆ. ಅದೇನೇ ಇರಲಿ ಅಭಿಮಾನಿಗಳು ಮಾತ್ರ ನೀವೆಷ್ಟೇ ಟ್ರೋಲ್ ಮಾಡಿ, ಆದರೆ ರಾಕುಲ್ ಮಾತ್ರ ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿಲ್ಲ ಎಂದು ನಟಿ ಪರ ನಿಂತಿದ್ದಾರೆ.

    ಸದ್ಯ ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿ ಕಾಲ ಕಳೆಯುತ್ತಿರುವ ರಾಕುಲ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಲೈವ್ ಬರುವ ಮೂಲಕ, ಫಿಟ್ನೆಟ್ ವಿಡಿಯೋಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಖುಷಿ ಪಡಿಸುತ್ತಿದ್ದಾರೆ.

  • ಮನೆಯ ಟೆರೇಸ್‍ನಲ್ಲಿ ಮದ್ವೆಯಾದ ಬಿಗ್‍ಬಾಸ್ ಜೋಡಿ- ವಿಡಿಯೋ ವೈರಲ್

    ಮನೆಯ ಟೆರೇಸ್‍ನಲ್ಲಿ ಮದ್ವೆಯಾದ ಬಿಗ್‍ಬಾಸ್ ಜೋಡಿ- ವಿಡಿಯೋ ವೈರಲ್

    ನವದೆಹಲಿ: ಕೊರೊನಾ ವೈರಸ್ ಹರಡುವುದನ್ನು ತೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಹಲವಾರು ಕಾರ್ಯಕ್ರಮಗಳು, ಮದುವೆಗಳು ರದ್ದಾಗಿವೆ. ಆದರೆ ಹಿಂದಿ ಬಾಗ್ ಬಾಸ್ ಸೀಸನ್ 2ರ ವಿನ್ನರ್ ಅಶುತೋಷ್ ಕೌಶಿಕ್ ಲಾಕ್ ಡೌನ್ ನಡುವೆಯೇ ಮದುವೆಯಾಗಿ ಇದೀಗ ಭಾರೀ ಸುದ್ದಿಯಾಗಿದ್ದಾರೆ.

    ಹೌದು. ಅಶುತೋಷ್ ಅವರು ತಮ್ಮ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಳ್ಳದೆ, ಹಿರಿಯರ ಸಮ್ಮುಖದಲ್ಲಿ ಗೆಳತಿ ಅರ್ಪಿತಾ ತಿವಾರಿಯನ್ನು ನೊಯ್ಡಾದಲ್ಲಿರುವ ಮನೆಯ ಟೆರೇಸ್ ಮೇಲೆಯೇ ವರಿಸಿದ್ದಾರೆ. ಸದ್ಯ ಇವರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಮದುವೆ ಕಾರ್ಯಕ್ರಮದಲ್ಲಿ ಅಶುತೋಷ್ ಕುಟುಂಬದ ಆಪ್ತರಷ್ಟೇ ಭಾಗಿಯಾಗಿದ್ದು, ಉಳಿದವರು ವಿಡಿಯೋ ಕಾನ್ಫರೆನ್ಸ್ ಮೂಲಕ ನೂತನ ವಧು-ವರರಿಗೆ ಶುಭ ಕೋರಿದ್ದಾರೆ. ಅಶುತೋಷ್ ಬಳಿ ಬಣ್ಣದ ಶರ್ಟ್ ಹಾಗೂ ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರೆ, ವಧು ಕೆಂಪು ಬಣ್ಣದ ಡ್ರೆಸ್ ಧರಿಸಿ ಬಹಳ ಸರಳವಾಗಿ ಹಸೆಮಣೆ ಏರಿದ್ದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಅಶುತೋಷ್, ಲಾಕ್ ಡೌನ್ ಘೋಷಣೆಯಾಗುವ ಮೊದಲೇ ಅಂದರೆ ಫೆಬ್ರವರಿಯಲ್ಲಿ ನನ್ನ ಮದುವೆ ದಿನಾಂಕ ನಿಗದಿಯಾಗಿತ್ತು. ಈ ಬಾರಿ ಅಕ್ಷಯ ತೃತೀಯದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಒಳ್ಳೆಯದು ಎಂಬುದಾಗಿ ಅಂದೇ ಮದುವೆ ದಿನಾಂಕವನ್ನು ಫಿಕ್ಸ್ ಮಾಡಿದ್ದೆವು. ದಿನ ನಿಗದಿ ಆದ ಬಳಿಕ ಲಾಕ್ ಡೌನ್ ಘೋಷಣೆಯಾಯಿತು. ಆದರೆ ಮದುವೆಯ ದಿನವನ್ನು ಮುಂದೂಡಲು ಇಬ್ಬರಿಗೂ ಇಷ್ಟವಿರಲಿಲ್ಲ. ಹೀಗಾಗಿ ಅಂದೇ ಇಬ್ಬರೂ ವೂವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆವು.

    ನಾನು ಸೇರಿದಂತೆ ಕೇವಲ 4 ಮಂದಿ ಕಾರಿನಲ್ಲಿ ಅರ್ಪಿತಾಳ ಮನೆಗೆ ತೆರಳಿದೆವು. ಪಂಡಿತರಲ್ಲಿ ಗ್ಲೌಸ್ ಹಾಗೂ ಮಾಸ್ಕ್ ಧರಿಸಲು ಮನವಿ ಮಾಡಿದೆವು. ಈ ಮೂಲಕ ಸರಳವಾಗಿ ಅರ್ಪಿತಾ ಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ಅಶುತೋಷ್ ತಿಳಿಸಿದರು.

    ನಮ್ಮ ಮದುವೆಗೆ ಖರ್ಚು ಮಾಡುವ ಹಣವನ್ನು ದಾನ ಮಾಡಲು ನಿರ್ಧರಿಸಿದ್ದೇನೆ. ಈ ಬಗ್ಗೆ ಅರ್ಪಿತಾ ಮನೆಯವರಿಗೂ ತಿಳಿಸಿದ್ದು, ಅವರು ಕೂಡ ನಮ್ಮ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದರು.

  • ಸಾಬೂನಿನಿಂದ ಕೈ ತೊಳೆದ್ರೆ ಆಗುವ ಲಾಭ ಮಕ್ಕಳಿಗೆ ತಿಳಿಸಿದ ಶಿಕ್ಷಕಿ-ವಿಡಿಯೋ ವೈರಲ್

    ಸಾಬೂನಿನಿಂದ ಕೈ ತೊಳೆದ್ರೆ ಆಗುವ ಲಾಭ ಮಕ್ಕಳಿಗೆ ತಿಳಿಸಿದ ಶಿಕ್ಷಕಿ-ವಿಡಿಯೋ ವೈರಲ್

    ಬೆಂಗಳೂರು: ಸಾಬೂನಿನಿಂದ ಕೈ ತೊಳೆದರೆ ಆಗುವ ಲಾಭವನ್ನ ಶಿಕ್ಷಕಿ ಮಕ್ಕಳಿಗೆ ತಿಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶುಚಿಯಾಗಿರಬೇಕು ಎಂಬ ಮಾತುಗಳಿ ಕೇಳಿ ಬರುತ್ತಿವೆ. ಕೈಯನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂಬ ಸಲಹೆ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಮಾರ್ಚ್ 13ರಂದು ಈ ವಿಡಿಯೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಆಗಿದ್ದು, 61 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಕಾಳು ಮೆಣಸಿನ ಪೌಡರ್ ಬಳಸಿ ಮಕ್ಕಳಿಗೆ ಶಿಕ್ಷಕಿ ಸರಳವಾಗಿ ಪಾಠ ಮಾಡಿದ್ದಾರೆ. ಸರಳ ವಿಧಾನ ನೋಡಿದ ನೆಟ್ಟಿಗರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ವಿಡಿಯೋದಲ್ಲಿ ಎರಡು ತಟ್ಟೆಗಳು ಇರೋದನ್ನು ಕಾಣಬಹುದು. ಒಂದರಲ್ಲಿ ನೀರು ಹಾಕಿ ಮೇಲ್ಗಡೆ ಕಾಳು ಮೆಣಸಿನ ಪುಡಿ ಹಾಕಲಾಗಿದೆ. ಮತ್ತೊಂದರಲ್ಲಿ ಸಾಬೂನು (ದ್ರವ ರೂಪದಲ್ಲಿರುವ) ಇರಿಸಲಾಗಿದೆ. ನೀರಿನ ಮೇಲೆ ತೇಲುತ್ತಿರುವ ಮೆಣಸಿನ ಪುಡಿಯನ್ನು ವೈರಸ್ ಗೆ ಹೋಲಿಸುತ್ತಾರೆ. ನಂತರ ತಮ್ಮ ಬೆರಳನ್ನು ನೀರಿನಲ್ಲಿ ಅದ್ದಿದಾಗ ಮೆಣಸಿನ ಪುಡಿ ಅಂಟಿಕೊಳ್ಳುತ್ತದೆ. ಆವಾಗ ನೋಡಿ ಹೇಗೆ ವೈರಸ್ ನನ್ನ ಬೆರಳಿಗೆ ಅಂಟಿಕೊಳ್ತು. ಅದೇ ಬೆರಳನ್ನು ಸಾಬೂನು ಇರಿಸಲಾಗಿದ್ದ ತಟ್ಟೆಯಲ್ಲಿ ಅದ್ದಿದಾಗ ಕೈ ಶುಚಿಯಾಗುತ್ತೆ. ಕೊನೆಗೆ ಶುಚಿಯಾದ ಬೆರಳನ್ನು ಮೆಣಸಿನ ಪುಡಿ ಹಾಕಲಾಗಿರುವ ತಟ್ಟೆಯಲ್ಲಿ ಇರಿಸುತ್ತಾರೆ. ಶುಚಿಯಾದ ಬೆರಳು ತಟ್ಟೆಯಲ್ಲಿಡುತ್ತಿದ್ದಂತೆ ಮೆಣಸಿನ ಪುಡಿ ದೂರ ಹೋಗುತ್ತೆ.

    ಮೆಣಸಿನ ಪುಡಿ ದೂರ ಹೋಗುತ್ತಿದ್ದಂತೆ ಮಕ್ಕಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೊನೆಗೆ ಶಿಕ್ಷಕಿ ಸಾಬೂನಿನಿಂದ ಕೈ ತೊಳೆದ್ರೆ ಯಾವ ವೈರಾಣುಗಳು ನಿಮ್ಮ ಬಳಿ ಸುಳಿಯಲ್ಲ ಎಂಬುದನ್ನ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

  • ಹಿಂಬಾಲಿಸಿದವನಿಗೆ ಚಪ್ಪಲಿಯಿಂದ ಚಳಿ ಬಿಡಿಸಿದ ಮಹಿಳೆ

    ಹಿಂಬಾಲಿಸಿದವನಿಗೆ ಚಪ್ಪಲಿಯಿಂದ ಚಳಿ ಬಿಡಿಸಿದ ಮಹಿಳೆ

    -ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

    ಲಕ್ನೋ: ತನ್ನನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಗೆ ಮಹಿಳೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಉತ್ತರ ಪ್ರದೇಶದ ಮುಜಾಫರ್ ನಗರದ ಜಾನಸಠ ಕೋತವಾಲಿಯಲ್ಲಿ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಬಹಳ ಸಮಯದಿಂದ ನನ್ನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವ್ಯಕ್ತಿಗೂ ಉತ್ತರಿಸಲು ಅವಕಾಶ ನೀಡದ ಮಹಿಳೆ ಚಪ್ಪಲಿಯಿಂದ ಥಳಿಸಿದ್ದಾರೆ.

    ಮಹಿಳೆ ಮತ್ತು ವ್ಯಕ್ತಿ ಇಬ್ಬರೂ ಪರಿಚಯಸ್ಥರು ಎಂದು ವರದಿಯಾಗಿದೆ. ವಿಡಿಯೋ ವೈರಲ್ ಬಳಿಕ ಪೊಲೀಸರು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ.