Tag: ವೈಮಾನಿಕ ಸಮೀಕ್ಷೆ

  • ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕದಲ್ಲಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

    ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕದಲ್ಲಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

    ಕಲಬುರಗಿ: ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕ (Kalyana Karnataka) ಭಾಗಗಳಾದ ಕಲಬುರಗಿ, ವಿಜಯಪುರ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು ವೈಮಾನಿಕ ಸಮೀಕ್ಷೆ ನಡೆಸಿದರು.

     

    ಮಂಗಳವಾರ (ಸೆ.30) ಬೆಳಗ್ಗೆ 10:45ರ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಅವರು ಕಲಬುರಗಿ ವಿಮಾನ ನಿಲ್ದಾಣಕ್ಕೆ (Kalaburagi Airport) ಆಗಮಿಸಿ, ಬಳಿಕ ವಿಮಾನ ನಿಲ್ದಾಣದಲ್ಲೇ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ನಂತರ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆಗೆ ತೆರಳಿದರು. ಈ ವೇಳೆ ನಾಲ್ಕು ಜಿಲ್ಲೆಗಳ ಹನ್ನೊಂದು ಪಾಯಿಂಟ್‌ನಲ್ಲಿ ಸಮೀಕ್ಷೆ ನಡೆಸಿದರು. ಸಿಎಂ ಜೊತೆ ವೈಮಾನಿಕ ಸಮೀಕ್ಷೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ ಹಾಗೂ ಎಂ.ಬಿ ಪಾಟೀಲ್, ಶರಣಪ್ರಕಾಶ್ ಪಾಟೀಲ್ ಭಾಗಿಯಾಗಿದ್ದರು.ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದ್ರು ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ – ಸಿಸಿ ಪಾಟೀಲ್

    ಸಮೀಕ್ಷೆ ಬಳಿಕ ಸಂಜೆ 4:30ಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಲಿದ್ದು, ಪರಿಹಾರ ವಿತರಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ.

  • ಉತ್ತರ ಕರ್ನಾಟಕದಲ್ಲಿ ಮಳೆ ಅವಾಂತರ – ಮಂಗಳವಾರ ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

    ಉತ್ತರ ಕರ್ನಾಟಕದಲ್ಲಿ ಮಳೆ ಅವಾಂತರ – ಮಂಗಳವಾರ ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

    ಕಲಬುರಗಿ: ಮಳೆಯಿಂದಾಗಿ ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ವಿಪರೀತ ಹಾನಿಯುಂಟಾದ ಹಿನ್ನೆಲೆ ಮಂಗಳವಾರ (ಸೆ.30) ಸಿಎಂ ಸಿದ್ದರಾಮಯ್ಯ (CM Siddaramaiah) ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

    ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣದಿಂದ (Kalaburagi Airport) ವೈಮಾನಿಕ ಸಮೀಕ್ಷೆ ಆರಂಭಿಸಲಿದ್ದಾರೆ. ವೈಮಾನಿಕ ಸಮೀಕ್ಷೆಯ ನಂತರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಯಾವುದೇ ಕ್ಷಣದಲ್ಲಿ ಸಚಿವ ಸಂಪುಟ ವಿಸ್ತರಣೆ, ಸಿದ್ದರಾಮಯ್ಯ 5 ವರ್ಷ ಸಿಎಂ: ಜಮೀರ್‌ ಅಹ್ಮದ್‌

    ಕಲಬುರಗಿಯಲ್ಲಿ ಕಾಗಿಣಾ ನದಿ ಪ್ರವಾಹಕ್ಕೆ ಸೇಡಂ ತಾಲೂಕಿನ ಮಳಖೇಡ ತಾಂಡಾದ ಹಲವು ಮನೆಗಳಿಗೆ ನೀರು ನುಗ್ಗಿದೆ. ಒಂದು ತಿಂಗಳ ಕಂದಮನನ್ನು ಹೊತ್ತು ಎರಡು ದಿನಗಳಿಂದ ಛಾವಣಿ ಮೇಲೆ ತಾಯಿ ಆಶ್ರಯ ಪಡೆದಿದ್ದಾಳೆ. ಜೇವರ್ಗಿ ತಾಲೂಕಿನ ಮಾಹೂರ ಗ್ರಾಮ ನಡುಗಡ್ಡೆಯಾಗಿದೆ. ಶಾಸಕ ಡಾ.ಅಜಯ್ ಸಿಂಗ್ ಬೋಟ್‌ನಲ್ಲಿ ಮಾಹೂರ ಗ್ರಾಮಕ್ಕೆ ಭೇಟಿ ನೀಡಿ, ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ಚಿಂಚೋಳಿ ತಾಲೂಕಿನ ಜೆಟ್ಟೂರ್ ಗ್ರಾಮದಲ್ಲಿ ಹಳ್ಳದ ನೀರು ಕೊಟ್ಟಿಗೆ ನುಗ್ಗಿ 42 ಎತ್ತುಗಳು ಮೃತಪಟ್ಟಿದ್ದು, 5 ಜಾನುವಾರು ನೀರು ಪಾಲಾಗಿವೆ.

    ಇನ್ನೂ ಭೀಮಾ ನದಿಯ ಅಬ್ಬರಕ್ಕೆ ಯಾದಗಿರಿ ನಗರದಲ್ಲಿನ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ನಗರದ ಹಲವು ಪ್ರಮುಖ ರಸ್ತೆಗಳು ಬಂದ್ ಆಗಿರುವುದರಿಂದ ಜನ ಪರದಾಟ ನಡೆಸಿದ್ದಾರೆ. ಹೀರೇಹಳ್ಳದ ಸೇತುವೆ ಮುಳುಗಡೆಯಿಂದ ಯಾದಗಿರಿ-ಕಲಬುರಗಿ ರಸ್ತೆ ಮಾರ್ಗ ಬಂದ್ ಆಗಿದೆ. ಇನ್ನೂ ಗಡಿಜಿಲ್ಲೆ ಬೀದರ್‌ನಲ್ಲಿ ಭಾರೀ ಮಳೆಯಾಗಿದೆ. ಭಾಲ್ಕಿಯ ಎಡದಂಡೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಸಾವಿರಾರು ಎಕರೆ ಬೆಳೆ ನೀರುಪಾಲಾದ್ರೆ ಕಟ್ಟಿತೂಗಾಂವ್ ಗ್ರಾಮದ ಮಹಾದೇವ ದೇವಸ್ಥಾನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಮಹಾರಾಷ್ಟ್ರದಿಂದ ಡ್ಯಾಂಗಳಿಗೆ ಭಾರೀ ಪ್ರಮಾಣದಿಂದ ನೀರು ಬಿಟ್ಟಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.ಇದನ್ನೂ ಓದಿ: ರಾಹುಲ್ ಗಾಂಧಿಯ ಎದೆಗೆ ಗುಂಡಿಕ್ಕಬೇಕು – ಕೇರಳ ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ

  • ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ಮೋದಿ ಭೇಟಿ – ವೈಮಾನಿಕ ಸಮೀಕ್ಷೆ, ಪರಿಸ್ಥಿತಿ ಅವಲೋಕನ

    ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ಮೋದಿ ಭೇಟಿ – ವೈಮಾನಿಕ ಸಮೀಕ್ಷೆ, ಪರಿಸ್ಥಿತಿ ಅವಲೋಕನ

    ಶಿಮ್ಲಾ: ಪ್ರವಾಹ (Flood) ಮತ್ತು ಭೂಕುಸಿತಗಳಿಂದ (Landslide) ಉಂಟಾದ ಹಾನಿಯನ್ನು ಪರಿಶೀಲಿಸುವ ಸಲುವಾಗಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಹಿಮಾಚಲ ಪ್ರದೇಶಕ್ಕೆ (Himachal Pradesh) ಭೇಟಿ ನೀಡಿದರು. ಕಾಂಗ್ರಾ ಜಿಲ್ಲೆಯ ಗಗ್ಗಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿಯನ್ನು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹಾಗೂ ಅಧಿಕಾರಿಗಳು ಬರಮಾಡಿಕೊಂಡರು.

    ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ಪ್ರಧಾನಿ ಮೋದಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಮನೆಗಳು, ರಸ್ತೆಗಳು ಮತ್ತು ಮೂಲಸೌಕರ್ಯಗಳಿಗೆ ಆಗಿರುವ ವ್ಯಾಪಕ ಹಾನಿಯನ್ನು ಅವಲೋಕಿಸಿದರು. ಬಳಿಕ ಪ್ರವಾಹದಿಂದ ಹಾನಿಗೊಳಗಾದ ನಿವಾಸಿಗಳೊಂದಿಗೆ ಸಂವಹನ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಇದನ್ನೂ ಓದಿ: ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ; 12 ಸೆಕೆಂಡ್ ವೀಡಿಯೋ ಪರಿಶೀಲಿಸಿ ಕ್ರಮ: ಮಧು ಬಂಗಾರಪ್ಪ

    ತಮ್ಮ ಭೇಟಿಯ ಸಮಯದಲ್ಲಿ ಮೋದಿ ರಾಜ್ಯಾದ್ಯಂತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿಯನ್ನು ಭೇಟಿಯಾದರು. ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆ – ಸಂಜೆ ಫಲಿತಾಂಶ ಪ್ರಕಟ

    ಮಧ್ಯಾಹ್ನ 1:30ರ ಸುಮಾರಿಗೆ ಪ್ರಧಾನಿ ಮೋದಿ ಕಾಂಗ್ರಾಗೆ ಆಗಮಿಸಿದ್ದಾರೆ. ನಂತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ವೇಳೆ ಕಳೆದ ವಾರದ ಭಾರೀ ಮಳೆಯಿಂದ ಉಂಟಾದ ನಷ್ಟವನ್ನು ಮುಖ್ಯಮಂತ್ರಿ ಸುಖವಿಂದರ್ ಸಿಂಗ್, ಮೋದಿಯವರಿಗೆ ವಿವರಿಸಿದರು. ಹಿಮಾಚಲ ಭೇಟಿ ಬಳಿಕ ಪಂಜಾಬ್ ರಾಜ್ಯಕ್ಕೂ ಮೋದಿ ಭೇಟಿ ನೀಡಲಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಇದನ್ನೂ ಓದಿ: ಜಿಎಸ್‍ಟಿ ಬಗ್ಗೆ ಅರಿವು ಮೂಡಿಸಲು ಸಮ್ಮೇಳನ ಆಯೋಜಿಸಿ – ಎನ್‍ಡಿಎ ಸಂಸದರಿಗೆ ಮೋದಿ ಸೂಚನೆ

    ಹಿಮಾಚಲ ಪ್ರದೇಶ ಭೇಟಿಗೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮೋದಿ ಪೋಸ್ಟ್ ಮಾಡಿದ್ದು, ಈ ಸಂಕಷ್ಟದ ಸಮಯದಲ್ಲಿ ಪ್ರವಾಹ ಪೀಡಿತರೊಂದಿಗೆ ಕೇಂದ್ರ ಸರ್ಕಾರ ಹೆಗಲು ಕೊಟ್ಟು ನಿಲ್ಲಲಿದೆ ಎಂದು ತಿಳಿಸಿದ್ದರು. ಪ್ರಧಾನಿ ಮೋದಿ ಅವರು ಎರಡೂ ರಾಜ್ಯಗಳ ಅಧಿಕಾರಿಗಳೊಂದಿಗೆ ಈಗಾಗಲೇ ಉನ್ನತ ಮಟ್ಟದ ಚರ್ಚೆ ನಡೆಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ಹಿಮಾಚಲ ಪ್ರದೇಶವು 4,122 ಕೋಟಿ ರೂ.ಗಳಷ್ಟು ನಷ್ಟವನ್ನು ಅನುಭವಿಸಿದೆ. ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳು ಮತ್ತು ರಸ್ತೆ ಅಪಘಾತಗಳಲ್ಲಿ 370 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ಇದನ್ನೂ ಓದಿ: ದೆಹಲಿ ಅಂಗಳ ತಲುಪಿದ ಕೊಪ್ಪಳದ ಗವಿಸಿದ್ದಪ್ಪ ಹತ್ಯೆ ಕೇಸ್‌ – ಬಿಜೆಪಿ ನಿಯೋಗದಿಂದ ಅಮಿತ್ ಶಾ ಭೇಟಿ

  • ತೌಕ್ತೆ ಚಂಡಮಾರುತ – ಗುಜರಾತ್‍ನಲ್ಲಿಂದು ಮೋದಿ ವೈಮಾನಿಕ ಸಮೀಕ್ಷೆ

    ತೌಕ್ತೆ ಚಂಡಮಾರುತ – ಗುಜರಾತ್‍ನಲ್ಲಿಂದು ಮೋದಿ ವೈಮಾನಿಕ ಸಮೀಕ್ಷೆ

    ಗಾಂಧಿನಗರ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತ್‍ಗೆ ಭೇಟಿ ನೀಡಲಿದ್ದಾರೆ.

    ಗುಜರಾತ್, ಮುಂಬೈ, ಕರ್ನಾಟಕದ ಕೆಲವು ಭಾಗಗಳಲ್ಲಿ ಅಬ್ಬರಿಸಿದ ತೌಕ್ತೆ ಚಂಡಮಾರುತದಿಂದ ಹಾನಿಗೊಂಡ ಪ್ರದೇಶಗಳನ್ನು ಪರಿಶೀಲಿಸಲು ಪ್ರಧಾನಿ ಮೋದಿಯವರು ಡಿಯುಗೆ ಭೇಟಿ ನೀಡಲಿದ್ದಾರೆ.

    ಬೆಳಗ್ಗೆ 9.30ರ ಸುಮಾರಿಗೆ ಮೋದಿಯವರು ದೆಹಲಿಯಿಂದ ಹೊರಡಲಿದ್ದು ಭಾವನಗರದಲ್ಲಿ ತಲುಪಿ, ಅಲ್ಲಿಂದ ಉನಾ, ಡಿಯು, ಜಫರಾಬಾದ್ ಮತ್ತು ಮಾಹುವಾಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಲಿದ್ದಾರೆ. ಸಮೀಕ್ಷೆಯ ನಂತರ ಮೋದಿಯವರು ಅಹಮದಾಬಾದ್ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

    ತೌಕ್ತೆ ಚಂಡಮಾರುತದಿಂದ ಸೋಮವಾರ ರಾತ್ರಿ ಡಿಯು ಮತ್ತು ಉನಾ ನಡುವಿನ ಸೌರಾಷ್ಟ್ರ ಪ್ರದೇಶದ ಗುಜರಾತ್ ಕರಾವಳಿಯಲ್ಲಿ ಭೂ ಕುಸಿತ ಉಂಟಾಗಿದೆ ಹಾಗೂ ಚಂಡಮಾರುತದಿಂದ 13 ಜನರು ಮೃತಪಟ್ಟಿದ್ದಾರೆ.

  • ಮಳೆ, ನೆರೆ ಪೀಡಿತ ಸಂತ್ರಸ್ತರಿಗೆ ಪರಿಹಾರ- ಎಷ್ಟು ಹಾನಿಯಾದ್ರೆ ಎಷ್ಟು ರೂ. ಸಿಗುತ್ತೆ?

    ಮಳೆ, ನೆರೆ ಪೀಡಿತ ಸಂತ್ರಸ್ತರಿಗೆ ಪರಿಹಾರ- ಎಷ್ಟು ಹಾನಿಯಾದ್ರೆ ಎಷ್ಟು ರೂ. ಸಿಗುತ್ತೆ?

    ಬೆಂಗಳೂರು: ಮಳೆ, ನೆರೆ ಪೀಡಿತ ಜಿಲ್ಲೆಗಳ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಮೊತ್ತಕ್ಕೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆ.

    ಶೇ.75 ಕ್ಕಿಂತ ಹೆಚ್ಚು ಹಾನಿಯಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ತಿಳಿಸಿದೆ. ಶೇ.25-75 ರಷ್ಟು ಭಾಗಶಃ ಹಾನಿಯಾದ ಮನೆಗಳನ್ನು ಕೆಡವಿ ಕಟ್ಟಲು 5 ಲಕ್ಷ ರೂ. ಪರಿಹಾರ, ಶೇ.25-75 ರಷ್ಟು ಭಾಗಶಃ ಹಾನಿಯಾದ ಮನೆಗಳ ದುರಸ್ತಿಗೆ 3 ಲಕ್ಷ ರೂ. ಪರಿಹಾರದ ಮೊತ್ತವನ್ನು ನಿಗದಿ ಮಾಡಿದೆ.

    ಶೇ.15-35 ರಷ್ಟು ಅಲ್ಪ ಹಾನಿಯಾದ ಮನೆಗಳ ದುರಸ್ತಿಗೆ 50 ಸಾವಿರ ರೂ. ಹಾಗೂ ಬಟ್ಟೆ, ದಿನಬಳಕೆ ವಸ್ತುಗಳ ಹಾನಿಗೆ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂ. ಪರಿಹಾರ ಸಿಗಲಿದೆ.

    ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದು, ಬಳ್ಳಾರಿಗೆ ತೆರಳಿದ್ದಾರೆ, ಸಿಎಂ ಜೊತಡ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ತೆರಳಿದ್ದಾರೆ. ಹೆಚ್‍ಎಎಲ್ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿ ಬಳ್ಳಾರಿಯ ಜಿಂದಾಲ್ ಏರ್ ಸ್ಟ್ರಿಪ್ ನಿಂದ 10.15ಕ್ಕೆ ವೈಮಾನಿಕ ಸಮೀಕ್ಷೆ ಆರಂಭಿಸಿದ್ದಾರೆ. ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

  • ನೆರೆ ಪೀಡಿತ ಜಿಲ್ಲೆಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ

    ನೆರೆ ಪೀಡಿತ ಜಿಲ್ಲೆಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ

    ಬೆಂಗಳೂರು: ಉತ್ತರ ಕರ್ನಾಟಕದ ನೆರೆ ಪೀಡಿತ ಜಿಲ್ಲೆಗಳಲ್ಲಿ ಅಕ್ಟೋಬರ್ 21ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಪ್ರವಾಹಕ್ಕೆ ತುತ್ತಾಗಿರುವ ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ.

    ಉತ್ತರ ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹದ ಕೂಪದಲ್ಲಿ ಸಿಲುಕಿ ಇಂದಿಗೆ ಬರೋಬ್ಬರಿ 9 ದಿನವಾಗಿದೆ. ಜಲ ಪ್ರಳಯಕ್ಕೆ ಲಕ್ಷಾಂತರ ಜನ ನಲುಗಿ ಹೋಗಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಮನೆ ಮಠ ಕಳೆದುಕೊಂಡು ಜನ ನೀರು ನೆರಳು ಇಲ್ದೇ ಬೀದಿಲಿ ಪರದಾಡುತ್ತಿದ್ದಾರೆ.

    ಉತ್ತರ ಭಾಗ ತತ್ತರಿಸಿ ಹೋಗಿದ್ರೂ ಈ ಬಗ್ಗೆ ಸಿಎಂ ಯಡಿಯೂರಪ್ಪ ಕೂಡ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಕಲ್ಯಾಣ ಕರ್ನಾಟಕ ಜಲಮಯವಾಗಿರುವ ಹೊತ್ತಲ್ಲಿ, ಅಲ್ಲಿ ಹೋಗಿ ನೆಪ ಮಾತ್ರಕ್ಕಾದ್ರೂ ಪರಿಶೀಲಿಸುವ ಕೆಲಸ ಮಾಡದ ಸಿಎಂ, ಮೂರು ದಿನ ತಮ್ಮ ಸ್ವಂತ ಜಿಲ್ಲೆಯ ಪ್ರವಾಸ ಕೈಗೊಂಡು ಟೆಂಪಲ್ ರನ್ ನಡೆಸುತ್ತಿದ್ದಾರೆ.

  • ಕರ್ನಾಟಕ ನೆರೆ: ಹೆಚ್ಚಿನ ಪರಿಹಾರ ಕೋರಲು ಮುಂದಿನ ವಾರ ದೆಹಲಿಗೆ ಸಿಎಂ ಬಿಎಸ್‍ವೈ

    ಕರ್ನಾಟಕ ನೆರೆ: ಹೆಚ್ಚಿನ ಪರಿಹಾರ ಕೋರಲು ಮುಂದಿನ ವಾರ ದೆಹಲಿಗೆ ಸಿಎಂ ಬಿಎಸ್‍ವೈ

    ಬೆಳಗಾವಿ: ಶೀಘ್ರ ಎಲ್ಲಾ ಶಾಸಕರ ಸಭೆ ಕರೆದು ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಸಮರ್ಪಕ ಪರಿಹಾರ ನೀಡಲು ಯೋಜನೆ ರೂಪಿಸಲಾಗುವುದು. ಎಲ್ಲಾ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುವುದು. ಮುಂದಿನ ವಾರ ದೆಹಲಿಗೆ ಹೋಗಿ ಹೆಚ್ಚಿನ ಪರಿಹಾರ ಬಿಡುಗಡೆಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

    ಅತಿವೃಷ್ಟಿಗೆ ಸಂಬಂಧಿಸಿದಂತೆ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು ನಡೆದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸಿಎಂ ಬಿಎಸ್‍ವೈ ಮಾತನಾಡಿದರು. ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಕೋವಿಡ್-19 ಇರುವುದರಿಂದ ಎನ್.ಡಿ.ಆರ್.ಎಫ್ ಅನುದಾನದಡಿ ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.

    ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರ್ಕಾರಕ್ಕೆ ಕಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹ ನಿರ್ವಹಣೆ ಮತ್ತಿತರ ತುರ್ತು ಕೆಲಸಕ್ಕೆ ಬೆಳಗಾವಿ ಜಿಲ್ಲೆಯಲ್ಲಿ 412 ಕೋಟಿ ರೂಪಾಯಿ ಅನುದಾನ ಲಭ್ಯವಿದೆ. ಹೆಚ್ಚಿನ ಹಣ ಬೇಕಾದರೆ ತಕ್ಷಣವೇ ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ 174 ಕೋಟಿ ರೂಪಾಯಿ ಇದೆ. ಇದಲ್ಲದೇ ಉಳಿದಿರುವ ಅನುದಾನದಲ್ಲಿ ರಸ್ತೆ ದುರಸ್ತಿ ಮತ್ತಿತರ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದರು.

    ಇದೇ ರೀತಿ ಇತರೆ ಜಿಲ್ಲೆಗಳಲ್ಲಿ ಸಾಕಷ್ಟು ಹಣ ಲಭ್ಯವಿದೆ. ಮನೆ ಕಳೆದುಕೊಂಡಿರುವ ಬೆಳಗಾವಿಯ 44,156 ಫಲಾನುಭವಿಗಳಿಗೆ 488 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರ್ಕಾರಕ್ಕೆ ಕಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳಗಾವಿ-ಧಾರವಾಡ ಸಮಸ್ಯೆಗಳನ್ನು ಗಮನಕ್ಕೆ ಬಂದಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಆಧರಿಸಿ ಮನೆ ಹಾಗೂ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

    ಕಂದಾಯ ಸಚಿವರಾದ ಆರ್.ಅಶೋಕ್ ಕಳೆದ ವರ್ಷದ ಮನೆಪರಿಹಾರ ನೀಡುವ ತಂತ್ರಾಂಶ ಪುನಃ ಆರಂಭಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಪ್ರವಾಹ ನಿರ್ವಹಣೆ ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿದರು.

    ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಜಿಲ್ಲೆಯ ಇನ್ನೂ 9 ಸಾವಿರ ಮನೆಗಳನ್ನು ಪರಿಹಾರದ ಪಟ್ಟಿಗೆ ಸೇರ್ಪಡೆ ಮಾಡಿ ವಿವಿಧ ಕಂತುಗಳ ಬಿಡುಗಡೆ ಮಾಡಲು ವಿನಂತಿಸಿದರು. ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿ, ಬೆಳೆವಿಮೆಯಲ್ಲಿ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ನಡುವೆ ಪ್ರತಿವರ್ಷ ವ್ಯತ್ಯಾಸ ಕಂಡುಬರುತ್ತಿದೆ. ಇದನ್ನು ಸರಿಪಡಿಸಲು ಮನವಿ ಮಾಡಿಕೊಂಡರು.

    ಶಾಸಕರಾದ ಮಹಾದೇವಪ್ಪ ಯಾದವಾಡ ಅವರು ಕಳೆದ ಬಾರಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಭಯ್ ಪಾಟೀಲ ಮಾತನಾಡಿ, ಬೆಳಗಾವಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ 320 ಕೋಟಿ ರೂಪಾಯಿ ರಸ್ತೆ ಅಭಿವೃದ್ಧಿಗೆ ಅಗತ್ಯವಿದೆ. ಕಳೆದ ವರ್ಷ ಹಾನಿಗೊಳಗಾದ ಮನೆಗಳ ಮರು ಸಮೀಕ್ಷೆ ನಡೆಸಿ ಲಾಗಿನ್ ಆಗಲು ಅನುಕೂಲ ಕಲ್ಪಿಸಬೇಕು. ನಗರೋತ್ಥಾನ ಯೋಜನೆ ಅನುದಾನ ತಕ್ಷಣ ಬಿಡುಗಡೆಗೆ ಒತ್ತಾಯಿಸಿದರು.

    ಮಹೇಶ್ ಕುಮಠಳ್ಳಿ ಅವರು ಅಥಣಿ ಮತಕ್ಷೇತ್ರದಲ್ಲಿ ಬೆಳೆಹಾನಿ ಮತ್ತು ಮನೆ ಪರಿಹಾರ ಇನ್ನೂ ಪಾವತಿಸುವುದು ಬಾಕಿಯಿದೆ. ರಸ್ತೆಗಳು ಹಾಳಾಗಿರುವುದರಿಂದ ತುರ್ತಾಗಿ 50-60 ಕೋಟಿ ಬಿಡುಗಡೆಗೆ ಆಗ್ರಹಿಸಿದರು.

    ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕೆರೆಗಳು ಹಾಗೂ ಬಾಂದಾರಗಳು ಒಡೆದಿರುವುದರಿಂದ ಬೆಳೆ ಕೂಡ ಹಾನಿಯಾಗಿದೆ. ಆದ್ದರಿಂದ ಇವುಗಳ ಶಾಶ್ವತ ದುರಸ್ತಿಗೆ ಮತ್ತು ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

    ಧಾರವಾಡ ಜಿಲ್ಲೆಯ ಶಾಸಕ ಅರವಿಂದ ಬೆಲ್ಲದ, ಮಳೆಯ ಪ್ರಮಾಣ ತಿಳಿಯಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದೆ ಎಂದರು. ಅಲ್ಲದೇ ಹುಬ್ಬಳ್ಳಿ-ಧಾರವಾಡ ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹಿಸಿದರು.

    ಶಾಸಕ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಅಮೃತ ದೇಸಾಯಿ ಅವರು ಮಾತನಾಡಿ, ಪ್ರತಿ ಮಳೆಗಾಲದಲ್ಲಿ ಬೆಣ್ಣಿಹಳ್ಳದಿಂದ ಉದ್ಭವಿಸುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮನವಿ ಮಾಡಿಕೊಂಡರು. ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡ್ರ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

    ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಸ್ಥಿತಿ ಮತ್ತು ನಿರ್ವಹಣೆಯ ಸ್ಥಿತಿಗತಿಗಳನ್ನು ವಿವರಿಸಿದರು. ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಅತ್ಯಂತ ಮುತುವರ್ಜಿಯಿಂದ ಮಹಾರಾಷ್ಟ್ರ ಸರ್ಕಾರದ ಜತೆ ಸಮನ್ವಯ ಸಾಧಿಸಿದ್ದರಿಂದ ಪ್ರವಾಹ ನಿರ್ವಹಣೆ ಸಾಧ್ಯವಾಯಿತು. ಪ್ರವಾಹ ನಿರ್ವಹಣೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಮ್ಮ ಅಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳ ಜತೆ ಸತತ ಸಂಪರ್ಕದಲ್ಲಿದ್ದ ಪರಿಣಾಮ ಯಾವುದೇ ತೊಂದರೆಯಾಗಿಲ್ಲ. ಜಿಲ್ಲೆಯಲ್ಲಿ ಬೀಜ, ಗೊಬ್ಬರ ಸಮರ್ಪಕವಾಗಿ ವಿತರಿಸಲಾಗಿದ್ದು, ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

    ಧಾರವಾಡ ಜಿಲ್ಲೆಯ ಮಾಹಿತಿಯನ್ನು ಅಲ್ಲಿನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ, ಸಂಸದರಾದ ಅಣ್ಣಾ ಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಪಿ.ರಾಜೀವ್, ದುರ್ಯೋಧನ ಐಹೊಳೆ, ಉಮೇಶ್ ಕತ್ತಿ, ಮಹಾಂತೇಶ ಕೌಜಲಗಿ, ಶಾಸಕ ಅನಿಲ್ ಬೆನಕೆ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಎಲ್.ಅತೀಕ್, ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

  • ಪ್ರವಾಹ- ಮಂಗಳವಾರ ಉತ್ತರ ಕರ್ನಾಟಕ ಭಾಗದಲ್ಲಿ ಸಿಎಂ ವೈಮಾನಿಕ ಸಮೀಕ್ಷೆ

    ಪ್ರವಾಹ- ಮಂಗಳವಾರ ಉತ್ತರ ಕರ್ನಾಟಕ ಭಾಗದಲ್ಲಿ ಸಿಎಂ ವೈಮಾನಿಕ ಸಮೀಕ್ಷೆ

    – ಉತ್ತರ ಕರ್ನಾಟಕದ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ವೀಕ್ಷಣೆ

    ಬೆಂಗಳೂರು: ಭಾರೀ ಮಳೆಯಿಂದಾಗಿ ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಹಾನಿ ಸಂಭವಿಸಿದ್ದು, ಈ ಕುರಿತು ಪರಿಸ್ಥಿತಿ ವೀಕ್ಷಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಾರೆ.

    ಮಂಗಳವಾರ ಬೆಳಗ್ಗೆ 9 ಗಂಟೆಗೆ ಹೆಚ್‍ಎಎಲ್‍ನಿಂದ ಬೆಳಗಾವಿಗೆ ಸಿಎಂ ಪ್ರಯಾಣ ಬೆಳೆಸಲಿದ್ದು, ಬೆಳಗ್ಗೆ 10.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಗಾವಿ, ಧಾರವಾಡ ಜಿಲ್ಲೆಗಳ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ಮಳೆ ಹಾನಿ ಸಂಬಂಧ ಸಭೆ ನಡೆಸಲಿದ್ದಾರೆ. ಬಳಿಕ 11.15ಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ಕೈಗೊಳ್ಳಲಿದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಿದ್ದಾರೆ.

    ನಂತರ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ಮಳೆ ಹಾನಿ ಸಂಬಂಧಿಸಿದಂತೆ ಸಭೆ ನಡೆಸಲಿದ್ದಾರೆ. ಮತ್ತೆ ಮಧ್ಯಾಹ್ನ 2.30ಕ್ಕೆ ವೈಮಾನಿಕ ಸಮೀಕ್ಷೆ ಕೈಗೊಳ್ಳಲಿದ್ದು, ಸಂಜೆ 5 ಗಂಟೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಸಿಎಂಗೆ ಸಾತ್ ಕೊಡಲಿದ್ದಾರೆ.

    ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಹುಲಗವಾಡಿ ಗ್ರಾಮದಲ್ಲಿ ಪ್ರವಾಹ ಹಿನ್ನೆಲೆ ಇಂದು ಸಹ ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿದ ಸಿಎಂ ಯಡಿಯೂರಪ್ಪ, ಗ್ರಾಮಸ್ಥರಿಗೆ ಓಡಾಡಲು ತಕ್ಷಣ ಬೋಟ್ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಭಾರೀ ಮಳೆಯಿಮದಾಗಿ ಪ್ರವಾಹ ಉಂಟಾಗಿದ್ದು, ಹುಲಗವಾಡಿ ಗ್ರಾಮ ನಡುಗಡ್ಡೆಯಾಗಿದೆ. ಜನರ ಓಡಾಟಕ್ಕೆ ಕಷ್ಟವಾಗುತ್ತಿರುವ ಕುರಿತು ಮಾಧ್ಯಮಗಳ ವರದಿಯನ್ನು ಗಮನಿಸಿ ಜಿಲ್ಲಾಧಿಕಾರಿಗೆ ಸಿಎಂ ಸೂಚನೆ ನೀಡಿದ್ದಾರೆ.

  • ಅಂಫಾನ್ ಚಂಡಮಾರುತದ ಹೊಡೆತಕ್ಕೆ ನಲುಗಿದ ಪಶ್ಚಿಮ ಬಂಗಾಳ – 72 ಮಂದಿ ಬಲಿ

    ಅಂಫಾನ್ ಚಂಡಮಾರುತದ ಹೊಡೆತಕ್ಕೆ ನಲುಗಿದ ಪಶ್ಚಿಮ ಬಂಗಾಳ – 72 ಮಂದಿ ಬಲಿ

    – ಇಂದು ಮೋದಿ ವೈಮಾನಿಕ ಸಮೀಕ್ಷೆ
    – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

    ಕೋಲ್ಕತಾ: ಕೊರೊನಾ ಅಟ್ಟಹಾಸದ ನಡುವೆ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಅಂಫಾನ್ ಚಂಡಮಾರುತ ರೌದ್ರನರ್ತನ ಮುಂದುವರೆದಿದ್ದು, ಪಶ್ಚಿಮ ಬಂಗಾಳ ಅಕ್ಷರಶಃ ಚಂಡಮಾರುತದ ಆರ್ಭಟಕ್ಕೆ ನಲುಗಿ ಹೋಗಿದೆ.

    ಅಂಫಾನ್ ಚಂಡಮಾರುತದ ಅಬ್ಬರಕ್ಕೆ ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ 72 ಮಂದಿ ಮೃತಪಟ್ಟಿದ್ದಾರೆ ವರದಿಯಾಗಿದೆ. ಮೃತಪಟ್ಟ 72 ಮಂದಿ ಪೈಕಿ 15 ಮಂದಿ ಕೋಲ್ಕತ್ತಾದಲ್ಲಿಯೇ ಸಾವನ್ನಪ್ಪಿದ್ದಾರೆ. ಇತರೆ ಐದು ಜಿಲ್ಲೆಗಳಲ್ಲಿ ಹೆಚ್ಚು ಸಾವು ಸಂಭವಿಸಿವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

    ಅಂಫಾನ್ ಚಂಡಮಾರುತ ಸೃಷ್ಟಿಸಿರುವ ಅವಾಂತರಗಳಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಅಲ್ಲದೆ ಚಂಡಮಾರುತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೀದಿ ಮನವಿ ಮಾಡಿದ್ದು, ಇಂದು ಪ್ರಧಾನಿ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ಪರಿಸ್ಥಿತಿಯನ್ನು ಅರಿಯಲಿದ್ದಾರೆ.

    ಬೆಳಗ್ಗೆ 10.30ಕ್ಕೆ ಕೋಲ್ಕತ್ತಾಗೆ ಆಗಮಿಸಲಿರುವ ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ, ಸಿಎಂ ಹಾಗೂ ಇತರೆ ಸಚಿವರು, ಅಧಿಕಾರಿಗಳೊಂದಿಗೆ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತಕ್ಕೆ ತುತ್ತಾಗಿರುವ ಉತ್ತರ ಹಾಗೂ ದಕ್ಷಿಣ ಕರಾವಳಿ ಭಾಗದ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

    ಪಶ್ಚಿಮ ಬಂಗಾಳದಿಂದ ಒಡಿಶಾಗೆ ತೆರಳಲಿರುವ ಪ್ರಧಾನಿ, ಅಲ್ಲಿನ ಸಿಎಂ ನವೀನ್ ಪಟ್ನಾಯಕ್ ಅವರೊಂದಿಗೆ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ. ಇದೇ ವೇಳೆ ಎರಡೂ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ಅಂಫಾನ್ ಚಂಡಮಾರುತ ಸೃಷ್ಟಿಸಿರುವ ಅವಘಡದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಗರಿಷ್ಠ ಗಾಳಿಯ ವೇಗ 190 ಕಿ.ಮೀ ಮತ್ತು ಧಾರಾಕಾರ ಮಳೆಯೊಂದಿಗೆ ಅಬ್ಬರಿಸುತ್ತಿರುವ ಅಫಾನ್ ನಿಂದ ಸುಂದರಬನ್ ಪ್ರದೇಶ ಮತ್ತು ದಕ್ಷಿಣ ಬಂಗಾಳದ ಆರು ಜಿಲ್ಲೆಗಳು ತತ್ತರಿಸಿವೆ. ಒಡಿಶಾದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಆತಂಕ ಸೃಷ್ಟಿಸಿದ್ದು, ಇತ್ತ ಬಾಂಗ್ಲಾದೇಶದಲ್ಲೂ ಚಂಡಮಾರುತದ ಆರ್ಭಟ ಜೋರಾಗಿದ್ದು, 26 ಮಂದಿ ಬಲಿಯಾಗಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಅಂದಾಜು 88 ಸಾವಿರ ಹೆಕ್ಟರ್ ಭತ್ತದ ಬೆಳೆ ಹಾಗೂ ಸುಮಾರು 1 ಲಕ್ಷ ಹೆಕ್ಟರ್ ತರಕಾರಿಗಳು ಹಾಗೂ ಇತರೆ ಬೆಳೆಗಳು ಬಿರುಗಾಳಿ ಸಹಿತ ಮಳೆಗೆ ಹಾನಿಗೊಳಗಾಗಿದೆ. ಎರಡು ರಾಜ್ಯಗಳಲ್ಲಿ ಸಂತ್ರಸ್ತರ ಸ್ಥಳಾಂತರ ಕಾರ್ಯ ಭರದಿಂದ ಸಾಗಿದ್ದು, ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯಾದಲ್ಲಿ ನಿರತವಾಗಿದೆ. ಸುಮಾರು 6.5 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಒಡಿಶಾದಲ್ಲಿ 44 ಲಕ್ಷಕ್ಕೂ ಅಧಿಕ ಮಂದಿ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

  • ವೈಮಾನಿಕ ಸಮೀಕ್ಷೆ ನಡೆಸಲು ಬೆಳಗಾವಿಗೆ ಬಂದಿಳಿದ ಅಮಿತ್ ಶಾ

    ವೈಮಾನಿಕ ಸಮೀಕ್ಷೆ ನಡೆಸಲು ಬೆಳಗಾವಿಗೆ ಬಂದಿಳಿದ ಅಮಿತ್ ಶಾ

    ಬೆಳಗಾವಿ: ಭೀಕರ ಪ್ರವಾಹದಿಂದ ತತ್ತರಿಸಿರುವ ಕರ್ನಾಟಕದ ಪರಿಸ್ಥಿತಿಯ ಬಗ್ಗೆ ತಿಳಿಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿಗೆ ಆಗಮಿಸಿದ್ದು, ಜಿಲ್ಲೆಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಮಿತ್ ಶಾರಿಗೆ ಹೂಗುಚ್ಚ ನೀಡಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸ್ವಾಗತಿಸಿದರು.

    ಈ ವೇಳೆ ಸಿಎಂಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸುರೇಶ ಅಂಗಡಿ, ಉಮೇಶ್ ಕತ್ತಿ, ಮಹಾಂತೇಶ್ ಕವಟಗಿಮಠ, ಡಾ.ವಿಶ್ವನಾಥ್ ಪಾಟೀಲ್ ಅವರು ಸಾಥ್ ನೀಡಿದರು. ಹಾಗೆಯೇ ಜಿಲ್ಲಾಡಳಿತ ವತಿಯಿಂದ ಅಮೀತ್ ಶಾರನ್ನು ಹೂಗುಚ್ಚ ನೀಡಿ ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರು ಸ್ವಾಗತಿಸಿದರು. ಪ್ರವಾಹದ ಬಗ್ಗೆ ಮಾಹಿತಿ ಪಡೆಯಲು ಅಮಿತ್ ಶಾ ಹಾಗೂ ಸಿಎಂ ಜಂಟಿಯಾಗಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎನ್ನಲಾಗಿದೆ.

    ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆಯಲ್ಲಿ ನಾಯಕರು ವೈಮಾನಿಕ ಸಮೀಕ್ಷೆ ನಡೆಸಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಬಳಿಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಜೊತೆ ಶಾ ಸಭೆ ನಡೆಸಲಿದ್ದಾರೆ. ನೆರೆ ಪರಿಸ್ಥಿತಿ ಹಾನಿ, ಪ್ರವಾಹದಲ್ಲಿ ಜನರ ರಕ್ಷಣೆ ಬಗ್ಗೆ ಅಮಿತ್ ಶಾ ಅವರು ಮಾಹಿತಿಯನ್ನು ಪಡೆಯಲಿದ್ದಾರೆ.