Tag: ವೈದ್ಯರ ಪ್ರತಿಭಟನೆ

  • ಇಂದು ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ – ಹೊರರೋಗಿಗಳಿಗಿಲ್ಲ ಚಿಕಿತ್ಸೆ

    ಇಂದು ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ – ಹೊರರೋಗಿಗಳಿಗಿಲ್ಲ ಚಿಕಿತ್ಸೆ

    – ಕೋಲ್ಕತ್ತ ವೈದ್ಯೆಯ ಹತ್ಯೆ ಖಂಡಿಸಿ ಐಎಂಎ ಪ್ರತಿಭಟನೆಗೆ ಕರೆ; ಸರ್ಕಾರಿ ವೈದ್ಯರ ಬೆಂಬಲ
    – ತುರ್ತು ಸೇವೆಗಳು ಮಾತ್ರ ಲಭ್ಯ

    ಬೆಂಗಳೂರು: ಕೋಲ್ಕತ್ತ ವೈದ್ಯೆಯ (Kolkata Doctor) ಹತ್ಯೆ ಖಂಡಿಸಿ ಐಎಂಎ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಓಪಿಡಿ ಇಂದು ಬಂದ್ (OPD Bandh) ಆಗಲಿವೆ. ತುರ್ತು ಸೇವೆಗಳು ಮಾತ್ರ ಲಭ್ಯವಿರಲಿವೆ.

    ಕೋಲ್ಕತ್ತದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನ ಖಂಡಿಸಿ ಇಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರತಿಭಟನೆಗೆ ಕರೆ ಕೊಟ್ಟಿದೆ. ಐಎಂಎ ಕೊಟ್ಟಿರುವ ಕರೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಖಾಸಗಿ ಆಸ್ಪತ್ರೆಗಳ ಒಕ್ಕೂಟ ಮತ್ತು ಹಲವು ವೈದ್ಯಕೀಯ ಅಸೋಸಿಯೇಶನ್‌ಗಳು ಬೆಂಬಲ ಕೊಟ್ಟಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೂ ಓಪಿಡಿ ಬಂದ್ ಆಗಲಿದೆ. ಅಂದರೆ 24 ಗಂಟೆಗಳ ಕಾಲ ಓಪಿಡಿ ಸೇವೆ ಸ್ಥಗಿತ ಆಗಲಿದೆ. ಇದನ್ನೂ ಓದಿ: ಸುಡಾನ್ ಅರೆಸೇನಾ ಪಡೆಯಿಂದ ನಾಗರಿಕರ ಮೇಲೆ ದಾಳಿ – 80 ಜನರ ಬಲಿ

    ಓಪಿಡಿ ಸೇವೆ ಬಂದ್ ಆಗುವ ಕಾರಣ ರೋಗಿಗಳು ಆಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗುವುದಿಲ್ಲ. ತುರ್ತು ಸೇವೆ ಮಾತ್ರ ಲಭ್ಯವಿರಲಿದೆ. ಬೆಂಗಳೂರಿನಲ್ಲಿ ಇರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಪ್ರತಿಭಟನೆ ಕಾವು ಜೋರಾಗಿ ಇರಲಿದೆ.

    ಇಂದಿನ ವೈದ್ಯರ ಪ್ರತಿಭಟನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಪ್ರತಿಭಟನೆ ಉದ್ದೇಶ ಸರಿ ಇದೆ. ಅವರ ಹಕ್ಕನ್ನ ಅವರು ವ್ಯಕ್ತಪಡಿಸಲಿ. ಸಾರ್ವಜನಿಕರಿಗೆ ತೊಂದರೆ ಆಗದೇ ಇರೋಥರ ಮಾಡಲಿ ಎಂದಿದ್ದಾರೆ. ಜೊತೆಗೆ ಪ್ರತಿಭಟನೆ ಇರುವ ಹಿನ್ನೆಲೆ ಇಂದು ವೈದ್ಯರಿಗೆ ರಜೆ ಮಂಜೂರು ಮಾಡದಂತೆ ಸರ್ಕಾರ ಕೂಡ ಆದೇಶ ಮಾಡಿದೆ. ಇದನ್ನೂ ಓದಿ: ಐಫೋನ್ ತಯಾರಕ ಫಾಕ್ಸ್‌ಕಾನ್ ಕಂಪನಿ ಮುಖ್ಯಸ್ಥನ ಜೊತೆ ಸಿಎಂ, ಡಿಸಿಎಂ ಡಿನ್ನರ್

    ಪ್ರತಿಭಟನೆಗೆ ಯರ‍್ಯಾರ ಬೆಂಬಲ?
    ರಾಜ್ಯಾದ್ಯಂತ ಐಎಂಎ ವ್ಯಾಪ್ತಿಯಲ್ಲಿ 30,000 ವೈದ್ಯರಿದ್ದು, ಪ್ರತಿಭಟನೆಗೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಶನ್, ಮಕ್ಕಳ ವೈದ್ಯರ ಅಸೋಸಿಯೇಶನ್, ಅರ್ಥೋಪಿಡಿಕ್ ಅಸೋಸಿಯೇಶನ್, ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಶನ್, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

  • ಓಮಿಕ್ರಾನ್‌ ಆತಂಕದ ನಡುವೆ ಓಪಿಡಿ ಬಂದ್‌ ಮಾಡಿ ವೈದ್ಯರಿಂದ ಪ್ರತಿಭಟನೆ

    ಓಮಿಕ್ರಾನ್‌ ಆತಂಕದ ನಡುವೆ ಓಪಿಡಿ ಬಂದ್‌ ಮಾಡಿ ವೈದ್ಯರಿಂದ ಪ್ರತಿಭಟನೆ

    ಹುಬ್ಬಳ್ಳಿ: ಕೋವಿಡ್ ರೂಪಾಂತರಿ ಓಮಿಕ್ರಾನ್ ಭೀತಿ ಸೃಷ್ಟಿಸಿರುವ ಸಂದರ್ಭದಲ್ಲಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹುಬ್ಬಳ್ಳಿಯ ಕಿಮ್ಸ್ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ.

    ಕಿಮ್ಸ್ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸುತ್ತಿರುವ ವೈದ್ಯರು, 6 ತಿಂಗಳ ಕೋವಿಡ್ ಭತ್ಯೆ ನೀಡಬೇಕು. ಸರ್ಕಾರ ಪ್ರತಿ ತಿಂಗಳು 10 ಸಾವಿರ ರೂಪಾಯಿಯಂತೆ ಒಟ್ಟು 60 ಸಾವಿರ ರೂಪಾಯಿ ಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಜೊತೆಗೆ ಕೌನ್ಸಿಲಿಂಗ್ ನಡೆಸಿ, ಸ್ನಾತಕೋತ್ತರ ಶುಲ್ಕ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಯಾವಾಗ ಕುಡಿತಾರೋ, ಯಾವಾಗ ಕುಡಿಯಲ್ಲೊ ಗೊತ್ತಿಲ್ಲ: ಕೆ.ಎಸ್.ಈಶ್ವರಪ್ಪ

    ರಾಜ್ಯ ಸರ್ಕಾರ ಆರು ತಿಂಗಳು ಕಳೆದರೂ ಕೋವಿಡ್ ಭತ್ಯ ನೀಡಿಲ್ಲ, ಶುಲ್ಕ ಕಡಿಮೆ ಮಾಡಿಲ್ಲ. ಸಚಿವ ಸುಧಾಕರ್ ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಈವರೆಗೂ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಇಂದು ಮತ್ತು ನಾಳೆ ಓಪಿಡಿ ಬಂದ್ ಮಾಡಿ ಪ್ರತಿಭಡನೆ ನಡೆಸಲಾಗುವುದು. ಸರ್ಕಾರ ಸ್ಪಂದಿಸದಿದ್ದರೇ ತುರ್ತು ಚಿಕಿತ್ಸಾ ವಿಭಾಗದ ಸೇವೆಯನ್ನೂ ಸ್ಥಗಿತಗೊಳಿಸಿ ಉಗ್ರ ಹೋರಾಟ ಮಾಡುವುದಾಗಿ ಪಿಜಿ ವೈದ್ಯರು ಹಾಗೂ ವಿದ್ಯಾರ್ಥಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೇರಳದಿಂದ ಬಂದ 15 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕ್ವಾರಂಟೈನ್

    ಕೋವಿಡ್‌ ಹೊಸ ತಳಿ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದ್ದು, ಎಲ್ಲೆಡೆ ಮುಂಜಾಗ್ರತೆ ವಹಿಸಲಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಬಗ್ಗೆ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ. ಇದರ ನಡುವೆಯೇ ವೈದ್ಯರು ಓಪಿಡಿ ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತಿರುವುದು ರೋಗಿಗಳಲ್ಲಿ ಆತಂಕ ಹೆಚ್ಚಿಸಿದೆ.

  • ಯಾದಗಿರಿ ನಗರದ ಖಾಸಗಿ ಆಸ್ಪತ್ರೆಗಳ OPD ಬಂದ್

    ಯಾದಗಿರಿ ನಗರದ ಖಾಸಗಿ ಆಸ್ಪತ್ರೆಗಳ OPD ಬಂದ್

    ಯಾದಗಿರಿ: ನಗರದ ಆದರ್ಶ ಆಸ್ಪತ್ರೆಯಲ್ಲಿ ಶನಿವಾರ ನಡೆದಿದ್ದ ಗಲಾಟೆ ಪ್ರಕರಣ ಖಂಡಿಸಿ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸದಸ್ಯ ವೈದ್ಯರು ನಗರದ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಿ ಸಾಂಕೇತಿಕ ಧರಣಿ ನಡೆಸಿದ್ದಾರೆ.

    ಶನಿವಾರ ಮನಗಿನಾಳ ಗ್ರಾಮದ ಕಲಾವತಿ ಹೆರಿಗೆ ನಂತರ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದ ಕಲಾವತಿ ಕುಟುಂಬಸ್ಥರು ಗಲಾಟೆ ನಡೆಸಿ ಗಾಜು ಒಡೆದು, ವೈದ್ಯೆ ಪ್ರೇಮಾ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ವೈದ್ಯರು ನಗರದ 25 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಯ ಒಪಿಡಿ ಹಾಗೂ ಲ್ಯಾಬ್ ಗಳನ್ನ ಬಂದ್ ಮಾಡಿ ಸಾಂಕೇತಿಕ ಧರಣಿ ನಡೆಸುತ್ತಿದ್ದಾರೆ.

    ಈ ರೀತಿಯ ಗಲಾಟೆಗಳ ನಡೆದಾಗ ಆಸ್ಪತ್ರೆ ಮತ್ತು ಸಿಬ್ಬಂದಿಗೆ ಸೂಕ್ತ ಭದ್ರತೆಯನ್ನು ನೀಡಬೇಕೆಂದು ವೈದ್ಯ ಮಂಡಳಿಯ ಸದಸ್ಯರು ಆಗ್ರಹಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆಯವರನ್ನ ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ.

  • ವೈದ್ಯರ ಪ್ರತಿಭಟನೆ- ಕರವೇ ಅಶ್ವಿನಿಗೌಡ ಸೇರಿ 15ಕ್ಕೂ ಹೆಚ್ಚು ಜನ ಶರಣಾಗಲು ನಿರ್ಧಾರ

    ವೈದ್ಯರ ಪ್ರತಿಭಟನೆ- ಕರವೇ ಅಶ್ವಿನಿಗೌಡ ಸೇರಿ 15ಕ್ಕೂ ಹೆಚ್ಚು ಜನ ಶರಣಾಗಲು ನಿರ್ಧಾರ

    ಬೆಂಗಳೂರು: ಕರವೇ ಅಶ್ವಿನಿ ಗೌಡ ಸೇರಿದಂತೆ 15 ಜನ ಕಾರ್ಯಕರ್ತರು ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರು ದಕ್ಷಿಣ ಡಿಸಿಪಿ ಕಚೇರಿಯಲ್ಲಿ ಶರಣಾಗಲಿದ್ದಾರೆ.

    ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ತಡರಾತ್ರಿ ಸಭೆ ನಡೆಸಿ ಪೊಲೀಸರಿಗೆ ಶರಣಾಗುವ ಬಗ್ಗೆ ತೀರ್ಮಾನಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಾರಾಯಣಗೌಡ ಹಾಗೂ ಹಲ್ಲೆ ಆರೋಪಿ ಅಶ್ವಿನಿಗೌಡ, ವೈದ್ಯರಿಗೆ ಹೆದರಿ ಈ ತೀರ್ಮಾನ ತೆಗೆದುಕೊಂಡಿಲ್ಲ. ಜನರಿಗೆ ತೊಂದರೆಯಾಗಬಾರದೆಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕಳೆದ ಒಂದು ವಾರದಿಂದ ನಡೆಯುತ್ತಿರುವ ಸರ್ಕಾರಿ ಕಿರಿಯ ವೈದ್ಯರ ಪ್ರತಿಭಟನೆಗೆ ಐಎಂಎ ಕೈ ಜೋಡಿಸಿದೆ. ವೈದ್ಯರ ಮೇಲೆ ಹಲ್ಲೆ ಮಾಡಿರುವ ಕರವೇ ಕಾರ್ಯಕರ್ತರನ್ನ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಯಲ್ಲಿ ವೈದ್ಯರು ಭಾಗಿಯಾಗಲಿದ್ದಾರೆ. ಸರ್ಕಾರಿ ಆಸ್ಪತ್ರೆಯ ಜೊತೆಗೆ ಇಂದು ರಾಜ್ಯದ ಖಾಸಗಿ ಆಸ್ಪತ್ರೆಯ ಹೊರ ರೋಗಿ ವಿಭಾಗವನ್ನ 24 ಗಂಟೆಗಳ ಸಂಪೂರ್ಣ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಿದ್ಧರಾಗಿದ್ದಾರೆ.

    ಇಂದು ಬೆಳಗ್ಗೆ 6ರಿಂದ ನಾಳೆ ಬೆಳಗ್ಗೆ 6 ರವರೆಗೆ ಖಾಸಗಿ ಆಸ್ಪತ್ರೆಯ ಓಪಿಡಿ ಸೇರಿದಂತೆ ಬಹುತೇಕ ಕ್ಲಿನಿಕ್ ಗಳು ಸಹ ಬಂದ್ ಆಗಲಿದ್ದು, ರೋಗಿಗಳಿಗೆ ಚಿಕಿತ್ಸೆ ದೊರೆಯುವುದು ಅನುಮಾನವಾಗಿದೆ. ಇದರಿಂದ ರೋಗಿಗಳಿಗೆ ತೊಂದರೆ ಆಗಲಿದೆ.  ಇತ್ತ ಕರವೇ ಕಾರ್ಯಕರ್ತರು ಶರಣಾಗಲು ಒಪ್ಪಿಕೊಂಡಿದ್ದರಿಂದ ವೈದ್ಯರು ಪ್ರತಿಭಟನೆಯಿಂದ ಹಿಂದೆ ಸರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • ಇದು ಜನರ ಜೀವನ್ಮರಣದ ಪ್ರಶ್ನೆ, ಮುಷ್ಕರವನ್ನು ಕೈಬಿಡಿ: ವೈದ್ಯರಲ್ಲಿ ಹೈಕೋರ್ಟ್ ಮನವಿ

    ಇದು ಜನರ ಜೀವನ್ಮರಣದ ಪ್ರಶ್ನೆ, ಮುಷ್ಕರವನ್ನು ಕೈಬಿಡಿ: ವೈದ್ಯರಲ್ಲಿ ಹೈಕೋರ್ಟ್ ಮನವಿ

    ಬೆಂಗಳೂರು: ರೋಗಿಗಳು ತೊಂದರೆ ಅನುಭವಿಸುತ್ತಿದ್ದು, ಮೊದಲು ಮಾತುಕತೆ ನಡೆಸಿ ತೀರ್ಮಾನಕ್ಕೆ ಬನ್ನಿ. ಈ ಕೂಡಲೇ ಮುಷ್ಕರವನ್ನು ಕೈಬಿಡಿ ಎಂದು ಹೈಕೋರ್ಟ್ ಖಾಸಗಿ ಆಸ್ಪತ್ರೆಗಳ ವೈದ್ಯರಲ್ಲಿ ಮನವಿ ಮಾಡಿದೆ.

    ವೈದ್ಯರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಎನ್.ಪಿ.ಅಮೃತೇಶ್, ಜಿ.ಆರ್.ಮೋಹನ್ ಹಾಗೂ ಆದಿನಾರಾಯಣ ಎಂಬುವರು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಗುರುವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

    ಸರ್ಕಾರದ ಪರ ವಾದ ಮಂಡನೆ ಮಾಡಿದ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್, ನಾವು ಇನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ಮಂಡನೆ ಮಾಡಿಲ್ಲ. ಅಷ್ಟೇ ಅಲ್ಲದೇ ವೈದ್ಯರ ಜೊತೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಮಾತುಕತೆ ನಡೆಸಲು ಸಿದ್ಧರಿದ್ದಾರೆ. ಆದರೂ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ ಎಂದು ವಾದಿಸಿದರು.

    ಮಧ್ಯಪ್ರವೇಶ ಮಾಡಿದ ಖಾಸಗಿ ವೈದ್ಯರ ಪರ ವಕೀಲ ಬಸವರಾಜು, ಈ ಮಸೂದೆ ಮಂಡನೆಯಾದರೆ ವೈದ್ಯರು ತಮ್ಮ ವೃತ್ತಿಯನ್ನೇ ಬಿಡಬೇಕಾಗುತ್ತದೆ. ಅಷ್ಟೇ ಅಲ್ಲದೇ ವೈದ್ಯರು ಸ್ವಯಂ ಪ್ರೇರಿತರಾಗಿ ಮುಷ್ಕರ ಮಾಡುತ್ತಿದ್ದಾರೆ ಹೊರತು ಭಾರತೀಯ ವೈದ್ಯ ಸಂಘ(ಐಎಂಎ) ಮುಷ್ಕರಕ್ಕೆ ಕರೆ ನೀಡಿಲ್ಲ. ಆರೋಗ್ಯ ಸಚಿವರು ವೈದ್ಯರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ವಾದ ಮಂಡಿಸಿದರು.

    ಈ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್, ಈಗಾಗಲೇ ಮುಷ್ಕರದಿಂದ ಸಾಕಷ್ಟು ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ನಿಮ್ಮ ವೈದ್ಯರಿಗೆ ಮುಷ್ಕರ ವಾಪಸ್ ಪಡೆಯಲು ಹೇಳಿ ಎಂದು ವಕೀಲರಲ್ಲಿ ಮನವಿ ಮಾಡಿದರು.

    ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂದು ಈಗಾಗಲೇ ಹೇಳಿದೆ. ಅಷ್ಟೇ ಅಲ್ಲದೇ ಅಧಿವೇಶನದಲ್ಲಿ ಇನ್ನೂ ಮಸೂದೆ ಮಂಡನೆಯೇ ಆಗಿಲ್ಲ. ರೋಗಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಪರಿಸ್ಥಿತಿ ಅರ್ಥಮಾಡಿಕೊಳ್ಳಿ. ಇದು ಜನರ ಜೀವನ್ಮರಣದ ಪ್ರಶ್ನೆ. ಕೂಡಲೇ ಸೇವೆಗೆ ಮರಳಿ ಚಿಕಿತ್ಸೆ ನೀಡಿ ಎಂದು ನ್ಯಾಯಮೂರ್ತಿಗಳು ಪರಿಪರಿಯಾಗಿ ಮನವಿ ಮಾಡಿದರು.

    ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಒಂದು ವೇಳೆ ಮುಷ್ಕರ ಕೈ ಬಿಡದೇ ಇದ್ದಲ್ಲಿ ಶುಕ್ರವಾರ ಹೈಕೋರ್ಟ್ ಖಡಕ್ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.

    img class=”alignnone size-full wp-image-194314″ src=”https://publictv.in/wp-content/uploads/2017/11/doctors-protest-19.png” alt=”” width=”786″ height=”576″ />