– ಕಿಲ್ಲರ್ ಕೆಮ್ಮಿನ ಸಿರಪ್ ಕೇಸ್; ಪ್ರತಿಷ್ಟಿತ ಹೆರಿಗೆ ಆಸ್ಪತ್ರೆ, ಮಕ್ಕಳ ಆಸ್ಪತ್ರೆಗೆ ವಿಶೇಷ ಸೂಚನೆ
ಬೆಂಗಳೂರು: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ (Cough Syrup) ಸೇವಿಸಿ 6 ಮಕ್ಕಳು ಸಾವನ್ನಪ್ಪಿದ ಬಳಿಕ, ಸಿರಪ್ ಬಳಕೆಗೆ ಆರೋಗ್ಯ ಇಲಾಖೆ ಗೈಡ್‌ಲೈನ್ಸ್ ಬಿಡುಗಡೆ ಮಾಡಿತ್ತು. ಈಗ ವೈದ್ಯಕೀಯ ಶಿಕ್ಷಣ ಇಲಾಖೆ (Medical Education Department) ಕೂಡ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಹೆರಿಗೆ ಆಸ್ಪತ್ರೆಗಳಲ್ಲಿ ವೈದ್ಯರು, ಗರ್ಭಿಣಿಯರು ಹಾಗೂ ಬಾಣಂತಿಯರ ಬಗ್ಗೆ ಎಚ್ಚರಿಕೆ ವಹಿಸುತ್ತಾ ಇದ್ದಾರೆ.
ಹೊರ ರಾಜ್ಯಗಳಲ್ಲಿ ಸಿರಪ್‌ನಿಂದ ಮಕ್ಕಳು ಸಾವನ್ನಪ್ಪಿದ ಪ್ರಕರಣದ ಬಳಿಕ ಎಲ್ಲಾ ರಾಜ್ಯಗಳಲ್ಲೂ ಮಾರ್ಗಸೂಚಿ ಬಿಡುಗಡೆ ಆಗಿದೆ. ಕರ್ನಾಟಕದ ಆರೋಗ್ಯ ಇಲಾಖೆಯಿಂದ ಕೂಡ ಮಾರ್ಗಸೂಚಿ ಬಿಡುಗಡೆ ಆಗಿತ್ತು. ಈಗ ವೈದ್ಯಕೀಯ ಶಿಕ್ಷಣ ಇಲಾಖೆಯೂ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ಪತ್ರೆಗಳು ಮಾರ್ಗಸೂಚಿಯನ್ನು ಅನುಸರಿಸುವಂತೆ ಸೂಚಿಸಿದೆ.
ಅದರಲ್ಲೂ ಹೆರಿಗೆ ಆಸ್ಪತ್ರೆಗಳು ಗರ್ಭಿಣಿಯರ ಮೇಲೆ ಹೆಚ್ಚು ನಿಗಾವಹಿಸಬೇಕು ಎಂದು ಸೂಚಿಸಿದ್ದು, ವಾಣಿ ವಿಲಾಸ ಆಸ್ಪತ್ರೆಗೆ ಬರುವ ಬಾಣಂತಿಯರು ಮತ್ತು ಪೋಷಕರಿಗೆ ಸಿರಪ್ ಬಳಕೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿದ್ದಾರೆ.
ಸಿರಪ್ ಬಳಕೆಗೆ ಮುಂಜಾಗ್ರತಾ ಕ್ರಮವೇನು?
* ಆರು ತಿಂಗಳ ಮಗುವಿಗೆ ಕೆಮ್ಮಿದ್ದರೆ ಎದೆ ಹಾಲುಣಿಸಬೇಕು. ಸಿರಪ್ ನೀಡಬಾರದು.
* ಮಗುವಿಗೆ ನ್ಯುಮೋನಿಯಾದಂತಹ ಲಕ್ಷಣ ಕಂಡುಬಂದಾಗ ಸಿರಪ್ ಬಳಕೆ ಮಾಡಬಾರದು. ವೈದ್ಯರ ಸಲಹೆ ಪಡೆಯಬೇಕು.
* ಮಗು ಅನಾರೋಗ್ಯ ತಪ್ಪಿದಾಗ ವೈದ್ಯರನ್ನ ಭೇಟಿ ಮಾಡಬೇಕು.
* ಮಗುವಿಗೆ ಕೆಮ್ಮು ಜಾಸ್ತಿ ಆದಾಗ ವೈದ್ಯರ ಸಲಹೆ ಮೇರೆಗೆ ಔಷಧಿ ಕೊಡಬೇಕು.
* ಯಾವುದೇ ಸಿರಪನ್ನು ದೀರ್ಘಕಾಲದವರೆಗೂ ಬಳಸಬಾರದು.
ಒಟ್ಟಾರೆ ಸಿರಪ್ ಬಗ್ಗೆ ಎಚ್ಚರಿಕೆಯ ಅಗತ್ಯವಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ವೈದ್ಯರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಿಯಮಗಳನ್ನ ಪಾಲಿಸಬೇಕಾಗಿದೆ.
-ಸಾಗಾಣೆ ಅನೂಕೂಲಕ್ಕಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಕ್ರಮ
ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯು (Department of Medical Education) ಸೌಲಭ್ಯಗಳನ್ನು ನವೀಕರಿಸಲು ಮತ್ತು ದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರವನ್ನು ಬೆಂಗಳೂರಿನಲ್ಲಿ (Bengaluru) ಸ್ಥಾಪಿಸಲು 1 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯು ತನ್ನ ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ನವೀಕರಿಸಲು ಮತ್ತು ಅಂಗಾಂಗ ಮರು ಪಡೆಯುವ ಕೇಂದ್ರ ಸ್ಥಾಪಿಸಲು 1 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಆದೇಶ ಹೊರಡಿಸಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ (Victoria Hospital) 125ನೇ ವರ್ಷಾಚರಣೆ ಸಂದರ್ಭದಲ್ಲಿಯೇ ಈ ಮಹತ್ವದ ಅಂಗಾಂಗ ಮರು ಪಡೆಯುವ ಕೇಂದ್ರ ಇಲ್ಲಿ ಆರಂಭವಾಗುತ್ತಿರುವುದು ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಮಾಧ್ಯಮ ಪ್ರಕಟಣೆಯ ಮೂಲಕ ಮಾಹಿತಿ ನೀಡಿ, ಮುಂದಿನ 4-6ತಿಂಗಳಲ್ಲಿ ಈ ಅಂಗಾಂಗ ಮರು ಪಡೆಯುವಿಕೆ ಕೇಂದ್ರವು ಕಾರ್ಯಾರಂಭ ಮಾಡಲಿದೆ. ಕಸಿ ಮಾಡಲು ಅಂಗಾಂಗಗಳ ಖರೀದಿಯನ್ನು ಸುಗಮಗೊಳಿಸುವ ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರವು, ಆಸ್ಪತ್ರೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಮೃತ ದಾನಿಗಳಿಂದ ಅಂಗಗಳನ್ನು ಸಂಗ್ರಹಿಸುವ ವಿಶೇಷ ಘಟಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಕೇಂದ್ರದಲ್ಲಿ ಐಸಿಯು, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಾಲಯ ಸೌಲಭ್ಯಗಳು ಮತ್ತು ವಿವಿಧ ಹಂತದ ತನಿಖಾ ಸಾಮರ್ಥ್ಯಗಳನ್ನು ಹೊಂದಿರುವ ಉದ್ದೇಶಿತ-ನಿರ್ಮಿತ ಸಮಗ್ರ ಸೇವೆ ದೊರೆಯಲಿದೆ ಎಂದರು.
ದಕ್ಷಿಣ ಭಾರತದ ಅತಿ ದೊಡ್ಡ ಆಸ್ಪತ್ರೆ:
ಅಪಘಾತ ಮತ್ತು ತುರ್ತು ಆರೈಕೆ ಕೇಂದ್ರವನ್ನು ಹೊಂದಿರುವ ವಿಕ್ಟೋರಿಯಾ ಆಸ್ಪತ್ರೆ, ಗ್ಯಾಸ್ಟ್ರೋ ಎಂಟರಾಲಜಿ ಸಂಸ್ಥೆ ಮತ್ತು ಮೂತ್ರಶಾಸ್ತ್ರ ಅಂಗಾಂಗ ಕಸಿ ಸಂಸ್ಥೆ, ಮಿಂಟೋ ಆಸ್ಪತ್ರೆಯಲ್ಲಿ ಪ್ರಾದೇಶಿಕ ನೇತ್ರಶಾಸ್ತ್ರ ಸಂಸ್ಥೆ ಮತ್ತು ಸ್ಕಿನ್ ಬ್ಯಾಂಕ್ ಹೀಗೆ ಎಲ್ಲವನ್ನೂ ಹೊಂದಿರುವ ಆಸ್ಪತ್ರೆಗಳ ಪೈಕಿ ನಮ್ಮ ವಿಕ್ಟೋರಿಯಾ ಆಸ್ಪತ್ರೆ ದಕ್ಷಿಣ ಭಾರತದ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇಲ್ಲಿ ಈಗ ನವೀಕೃತ ಕೇಂದ್ರ ಬರಲಿದೆ.
ಸಂಭಾವ್ಯ ದಾನಿಗಳ ಗುರುತಿಸುವಿಕೆ ಮತ್ತು ಸುರಕ್ಷಿತ ಅಂಗಾಂಗ ದಾನ ಪ್ರಕ್ರಿಯೆಗೆ ಕುಟುಂಬ ಸಮಾಲೋಚನೆ, ಉನ್ನತ ಮಟ್ಟದ ಐಸಿಯು ಆರೈಕೆ ಮತ್ತು ಕಾನೂನು ಕ್ರಮಗಳು ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಈ ಯೋಜನೆಯು ಅತ್ಯಂತ ಅರ್ಥಪೂರ್ಣವಾಗಿದೆ. ಇದು ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಮಗ್ರ ಕೇಂದ್ರವಾಗಿ ಕಾರ್ಯ ನಿರ್ವಹಣೆ:
ಈ ಕುರಿತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಮಾತನಾಡಿ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಮಗ್ರ ಅಂಗಾಂಗ ಮರುಪಡೆಯುವಿಕೆ ಕೇಂದ್ರವನ್ನು ಪ್ರಾರಂಭಿಸುವುದರಿಂದ ಅಂಗಾಂಗ ದಾನ ಕಾರ್ಯಕ್ರಮವನ್ನು ಹೆಚ್ಚಿಸಲು ನಮಗೆ ಅವಕಾಶ ಸಿಗುತ್ತದೆ. ಇದರಿಂದ ಬಡವರಿಗೆ ಅನುಕೂಲ ಕಲ್ಪಿಸಲಾಗುವುದು. ಈ ಕೇಂದ್ರವು ಮೀಸಲಾದ ಸಿಬ್ಬಂದಿ, ಐಸಿಯು ಮತ್ತು ಹಾಸಿಗೆಗಳನ್ನು ಹೊಂದಿರುತ್ತದೆ. ಬೇಡಿಕೆ ಬಂದ ಕೂಡಲೇ ಕುಟುಂಬವು ಅನುಮೋದನೆ ನೀಡಿದ ನಂತರ ಐಸಿಯುಗಳಿಂದ ಮೀಸಲಾದ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದರು.
ಸಾಗಣೆಗೆ ಅನುಕೂಲವಾಗಲೆಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
-ವೈದ್ಯಕೀಯ ಕಾಲೇಜ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಉಪಕರಣ ಖರೀದಿಗೆ ಅನುದಾನ
ಬೆಂಗಳೂರು: ಹಲವು ದಿನಗಳ ಬೇಡಿಕೆಯಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಇನ್ನಷ್ಟು ದಕ್ಷತೆ ತರುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು (Directorate of Medical Education) ಆಯುಕ್ತಾಲಯವನ್ನಾಗಿ ಉನ್ನತೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿರುವುದಕ್ಕೆ ವೈದ್ಯಕೀಯ ಶಿಕ್ಷಣ ಜೀವನೋಪಾಯ ಹಾಗೂ ಕೌಶಲ್ಯಾಭಿವೃಧಿ ಮತ್ತು ರಾಯಚೂರು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Sharan Prakash Patil) ಅಭಿನಂದನೆ ಸಲ್ಲಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಕ್ಷೇತ್ರವು ಸರ್ಕಾರಿ ವಲಯವೆಂದು ವ್ಯಾಪಕ ಬೆಳವಣಿಗೆ ಹೊಂದಿದ್ದು, ಇಲಾಖೆ ಕಾರ್ಯ ನಿರ್ವಹಣೆಯಲ್ಲಿ ಇನ್ನಷ್ಟು ದಕ್ಷತೆ ತರುವ ಕಾರಣಕ್ಕಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೇ ಪ್ರಥಮ- ಮೀನುಗಾರರ ರಕ್ಷಣೆಗೆ ಸಮುದ್ರ ಅಂಬುಲೆನ್ಸ್ ಖರೀದಿ: ಸಿಎಂ ಘೋಷಣೆ
ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮತ್ತು ಉಪಕರಣಗಳ ಖರೀದಿಗಾಗಿ 400 ಕೋಟಿ ರೂ. ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕಾಗಿ 350 ಕೋಟಿ ರೂ, ಮೈಸೂರಿನಲ್ಲಿರುವ 40 ಹಾಸಿಗೆ ಸಾಮರ್ಥ್ಯದ ನೆಪ್ರೊ ಯೂರಾಲಜಿ ಆಸ್ಪತ್ರೆ, 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಉನ್ನತೀಕರಿಸಲು ಮುಂದಾಗಿರುವುದು ಉತ್ತಮ ನಿರ್ಧಾರ ಎಂದು ಪಾಟೀಲ್ ಹೇಳಿದ್ದಾರೆ.
ಕಲಬುರಗಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಘಟಕವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಬೆಂಗಳೂರು ಇವರ ತಾಂತ್ರಿಕ ನೆರವಿನೊಂದಿಗೆ ಸ್ಥಾಪನೆ. ಗದಗ, ಕೊಪ್ಪಳ ಹಾಗೂ ಚಾಮರಾಜನಗರದಲ್ಲಿ 450 ಹಾಸಿಗೆ ಸಾಮರ್ಥ್ಯದ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳ ಖರೀದಿಗಾಗಿ 150 ಕೋಟಿ ರೂ. ಅನುದಾನ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನ ನೆಪ್ರೊ ಯೂರಾಲಜಿ ಸಂಸ್ಥೆಯ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ರೋಬೊಟಿಕ್ ಯಂತ್ರದ ಮೂಲಕ ಉತ್ತಮ ಚಿಕಿತ್ಸೆ ನೀಡಲು ಕ್ರಮ. ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 114 ಮಾಡೂಲರ್ ಓಟಿಗಳನ್ನು 177 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.
ಗದಗ ವೈದ್ಯಕೀಯ ಸಂಸ್ಥೆಯಲ್ಲಿ ಕ್ಯಾಥ್ಲಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಕ್ ಯೂನಿಟ್ ಪ್ರಾರಂಭ, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಸಂಸ್ಥೆಗಳಲ್ಲಿ 64 ಅನೇಸ್ತೇಷಿಯಾ ವರ್ಕ್ ಸ್ಟೇಷನ್‍ಗಳನ್ನು 34 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿ ಅಳವಡಿಕೆ, ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಹ್ಯೂಮನ್ ಮಿಲ್ಕ್ ಬ್ಯಾಂಕ್‍ಗಳನ್ನು ಇನ್ನು ಮುಂದೆ ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸ್ಥಾಪನೆ ಮಾಡಲು ಹೊರಟಿರುವುದು ಉತ್ತಮ ಬೆಳವಣಿಗೆ ಎಂದು ಪಾಟೀಲ್ ಹೇಳಿದ್ದಾರೆ.
ಕೊಡಗು ವೈದ್ಯಕೀಯ ಸಂಸ್ಥೆಯಲ್ಲಿ ಅಪಾಯಕಾರಿ ಸಾಂಕ್ರಾಮಿಕ ರೋಗ, ಸೋಂಕುಗಳನ್ನು ಪತ್ತೆ ಹಚ್ಚಲು ವೈರಲ್ ರಿಸರ್ಚ್ ಮತ್ತು ಡಯಾಗ್ನಸ್ಟಿಕ್ ಲ್ಯಾಬರೋಟರಿ ನಿರ್ಮಾಣ, ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಗತ್ಯವಿರುವ ಹೊಸ ವೈದ್ಯಕೀಯ ಕಟ್ಟಡ, ವಿದ್ಯಾರ್ಥಿ ವಸತಿ ನಿಲಯ, ಸಿಬ್ಬಂದಿ, ವಸತಿ ಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಶತಮಾನೋತ್ಸವದ ನೆನಪಿಗಾಗಿ ಕೆ.ಆರ್ ಆಸ್ಪತ್ರೆಯಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು BIECಯಿಂದ ತುಮಕೂರಿಗೆ, ಏರ್‌ಪೋರ್ಟಿಂದ ದೇವನಹಳ್ಳಿಗೆ ಮೆಟ್ರೋ ರೈಲು!
ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳು ಇಂದು ಬೆಳಗ್ಗೆ ಪಿಪಿಇ ಕಿಟ್ ಧರಿಸಿ ಸಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
ಪಿಂಚಣಿ ಯೋಜನೆ, ಜ್ಯೋತಿ ಸಂಜೀವಿನಿ ವಿಮೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದ್ದು, ಆಸ್ಪತ್ರೆ ಹೊರ ಆವರಣದಲ್ಲಿ ಪಿಪಿಇ ಕಿಟ್ ಧರಿಸಿ ಆಗಮಿಸಿದ್ದ ಖಾಯಂ ಶುಶ್ರೂಷಕರು ಪ್ರತಿಭಟನೆ ನಡೆಸಿದರು. ಕೈಯಲ್ಲಿ ತಮ್ಮ ಬೇಡಿಕೆ ಆಗ್ರಹಿಸಿ ಪ್ರದರ್ಶನ ಫಲಕಗಳನ್ನು ಹಿಡಿದು ಪ್ರತಿಭಟನೆ ಮಾಡಿದರು.
ಸರ್ಕಾರ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಲವು ದಿನಗಳಿಂದ ಸಿಬ್ಬಂದಿ ಮನವಿ ಮಾಡಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ನೂತನ ಪಿಂಚಣಿ ಯೋಜನೆ (ಎನ್‍ಪಿಎಸ್) ಯಲ್ಲಿ ಶುಶ್ರೂಷಕರ ವೇತನ ಕಡಿತ ಮಾಡಲಾಗಿತ್ತು. ಆದರೆ ಈಗ ಏಕಾಏಕಿ ಯೋಜನೆಯನ್ನು ನಿಲ್ಲಿಸಲಾಗಿದ್ದು, ಹಣವನ್ನು ಮರುಪಾವತಿ ಮಾಡಿಲ್ಲ. ಬೇರೆ ಸ್ವಯತ್ತ ಸಂಸ್ಥೆಗಳಲ್ಲಿನ ಸಿಬ್ಬಂದಿಗೆ ಹಣ ಬರುತ್ತಿದೆ ಎಂಬುವುದು ಸಿಬ್ಬಂದಿಯ ಆರೋಪವಾಗಿದೆ. ಉಳಿದಂತೆ ಜ್ಯೋತಿ ಸಂಜೀವಿನಿ ಆರೋಗ್ಯ ವ್ಯವಸ್ಥೆಗೆ ಜಾರಿ ಹಾಗೂ ಪ್ರೋತ್ಸಾಹ ಭತ್ಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.