Tag: ವೈದೇಹಿ

  • ನನ್ನ ಎದೆಗೆ ಗುಂಡು ಹೊಡೆದಂತಾಗಿದೆ: ಸಾಹಿತಿ ವೈದೇಹಿ

    ನನ್ನ ಎದೆಗೆ ಗುಂಡು ಹೊಡೆದಂತಾಗಿದೆ: ಸಾಹಿತಿ ವೈದೇಹಿ

    ಉಡುಪಿ: ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಅವರ ಹತ್ಯೆಯ ವಿಚಾರ ಕೇಳಿ ನನ್ನ ಎದೆಗೆ ಗುಂಡು ಹೊಡೆದಂತಾಗಿದೆ. ಮನಸ್ಸಿಗೆ ಬಹಳ ಬೇಸರವಾಗುತ್ತಿದೆ ಎಂದು ಸಾಹಿತಿ ವೈದೇಹಿ ಪ್ರತಿಕ್ರಿಯೆ ನೀಡಿದ್ದಾರೆ.

    ಉಡುಪಿಯ ಮಣಿಪಾಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಶಾಕಿಂಗ್ ನ್ಯೂಸ್, ಸೈದ್ಧಾಂತಿಕ ಭಿನ್ನತೆ ಇರೋದೇ ತಪ್ಪಾ..? ಗೌರಿ ಸ್ಪಷ್ಟತೆ ಇದ್ದ ದಿಟ್ಟ ಪತ್ರಕರ್ತೆ. ನಮ್ಮ ಧನಿಯನ್ನು ನಾವು ಆಡೋದೇ ತಪ್ಪಾ ಎಂದೇ ಪ್ರಶ್ನೆ ಮಾಡಿದ್ದಾರೆ.

    ಇದು ಪ್ರಜಾಪ್ರಭುತ್ವ ದೇಶನಾ ಅಂತ ಸಂಶಯ ಬರುವಂತಾಗಿದೆ. ಗೌರಿಯನ್ನು ಕೊಂದು ನೀವು ಏನು ಸಾಧಿಸಿದ್ದೀರಿ..? ಎಲ್ಲರನ್ನೂ ಗಿಳಿಗಳನ್ನಾಗಿ ಮಾಡಿದ್ದೀರಾ..? ಗುಂಡು ಹೊಡೆದು ಎಷ್ಟು ಜನರನ್ನು ಕೊಲೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

    ಬೆಂಗಳೂರಿನಲ್ಲೇ ಘಟನೆ ಆಗಿರೋದ್ರಿಂದ ಪೊಲೀಸರು ಹೈ ಅಲರ್ಟ್ ಘೋಷಿಸಬೇಕು. ಆರೋಪಿಗಳು ರಾಜಧಾನಿಯಲ್ಲೇ ಇದ್ದಾರೆ. ಸರ್ಕಾರ ಪೊಲೀಸ್ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

    ಗೌರಿ ಲಂಕೇಶ್ ನನ್ನ ಮಗಳಂತೆ ಇದ್ದರು. ಗೌರಿಯಷ್ಟು ನೇರವಾಗಿ ಬರೆಯುವವರು ಭಾರತದಲ್ಲೇ ವಿರಳ. ಒಂದು ನಿಜವಾದ ಧೀರ ಧನಿಯನ್ನು ಕಳೆದುಕೊಂಡಿದ್ದೇವೆ. ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷವಾಯ್ತು. ಇದೀಗ ಗೌರಿಯದ್ದು, ರಾಜ್ಯದ ಜನ ನಾವು ನಾಟಕವನ್ನು ನೋಡುತ್ತಿದ್ದೇವಾ ಅನ್ನುವ ಸಂಶಯ ಮೂಡುತ್ತಿದೆ. ಇವರಿಗೆ ಅಧಿಕಾರ ಕೊಟ್ಟದ್ದು ಯಾಕೆ ಎಂದು ಪ್ರಶ್ನಿಸಿ ಅವರು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಬೇಕು. ಸರ್ಕಾರ, ಪೊಲೀಸರು ದುರ್ಬಲರಲ್ಲ ಎಂಬುದನ್ನು ತೋರಿಸಿ ಎಂದು ವೈದೇಹಿ ಹೇಳಿದರು.