Tag: ವೇತನ

  • ವೇತನ ಹೆಚ್ಚಳಕ್ಕೆ ಆಗ್ರಹ – ಮಳೆಯಲ್ಲೂ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

    ವೇತನ ಹೆಚ್ಚಳಕ್ಕೆ ಆಗ್ರಹ – ಮಳೆಯಲ್ಲೂ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

    ಧಾರವಾಡ: ಜಿಲ್ಲೆಯಲ್ಲಿ ಇವತ್ತು ಆಶಾ ಕಾರ್ಯಕರ್ತೆರು ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ ಎದುರು ಮಳೆಯನ್ನು ಲೆಕ್ಕಿಸದೇ ಪ್ರತಿಭಟನೆ ಮಾಡಿದ್ದಾರೆ.

    ಪ್ರತಿಭಟನೆಗೆ ಸರ್ಕಾರ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಇವತ್ತು ವಿವಿಧ ಗ್ರಾಮಗಳಲ್ಲಿ ಇರುವ ಪ್ರಾಥಮಿಕ ಆರೋಗ್ಯಗಳ ಮುಂದೆ ಪ್ರತಿಭಟನೆ ಮಾಡಿದರು.

    ಜಿಲ್ಲೆಯ ಮುಗದ, ಉಪ್ಪಿನಬೇಟಗೇರಿ, ಅಮ್ಮಿನಬಾವಿ ಸೇರಿದಂತೆ ಹಲವು ಕಡೆಗಳಲ್ಲಿ ಇವರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ಮೊದಲೇ ಸರ್ಕಾರಕ್ಕೆ 12 ಸಾವಿರ ವೇತನಕ್ಕೆ ಇವರು ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಇದಕ್ಕೆ ಸ್ಪಂದನೆ ಮಾಡಿಲ್ಲ. ಜಿಲ್ಲೆಯ ಹಲವು ಭಾಗಗಳಲ್ಲಿ ಇಂದು ಮಳೆ ಬರುತ್ತಿದ್ದು, ಈ ಮಳೆಯಲ್ಲಿಯೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ದು ಕಂಡು ಬಂತು.

  • KSRTC ಸಿಬ್ಬಂದಿಗೆ ವೇತನವನ್ನು ನೀಡುತ್ತೇವೆ: ಸಾರಿಗೆ ಸಚಿವ ಸವದಿ

    KSRTC ಸಿಬ್ಬಂದಿಗೆ ವೇತನವನ್ನು ನೀಡುತ್ತೇವೆ: ಸಾರಿಗೆ ಸಚಿವ ಸವದಿ

    ಚಿಕ್ಕೋಡಿ: ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಂಬಳ ನೀಡುವುದನ್ನು ನಿಲ್ಲಿಸುವುದಿಲ್ಲ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆ ನಿಪ್ಪಾಣಿ ಪಟ್ಟಣದಲ್ಲಿ ನೂತನ ಪ್ರವಾಸಿ ಮಂದಿರ ಹಾಗೂ ಅಂಬೇಡ್ಕರ್ ಭವನ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 2,652 ಕೋಟಿ ನಷ್ಟವನ್ನು ಕೆ.ಎಸ್.ಆರ್.ಟಿ.ಸಿ ಅನುಭವಿಸುತ್ತಿದೆ. ಆದರೂ ಸಂಸ್ಥೆಯ 1 ಲಕ್ಷ 30 ಸಾವಿರ ಸಿಬ್ಬಂದಿಗೆ ವೇತನ ನೀಡಲಾಗುವುದು ಎಂದರು.

    ಪ್ರತಿ ತಿಂಗಳು 126 ಕೋಟಿ ಸಿಬ್ಬಂದಿ ವೇತನವನ್ನು ನೀಡಬೇಕಾಗುತ್ತದೆ. ಮುಖ್ಯಮಂತ್ರಿಗಳು 326 ಕೋಟಿ ನೀಡಿದ್ದು, ಸಿಬ್ಬಂದಿಯ 2 ತಿಂಗಳ ವೇತನ ನೀಡಲಾಗಿದೆ. ಸಿಬ್ಬಂದಿಗೆ ವೇತನ ರಹಿತ ರಜೆಯನ್ನು ಪಡೆಯುವಂತೆ ಒತ್ತಾಯ ಹಾಕುತ್ತಿಲ್ಲ. ಯಾವುದೇ ಕಾರಣಕ್ಕೂ ಸಿಬ್ಬಂದಿಯ ವೇತನವನ್ನು ಸರಕಾರ ತಡೆ ಹಿಡಿಯಲ್ಲ ಎಂದು ಸವದಿ ಅವರು ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಅಭಯ ನೀಡಿದ್ದಾರೆ.

  • ಪ್ರತಿ ವಾರ 20 ಗಂಟೆ ಟಿವಿ ನೋಡಿದ್ರೆ 65 ಸಾವಿರ ರೂ. ವೇತನ!

    ಪ್ರತಿ ವಾರ 20 ಗಂಟೆ ಟಿವಿ ನೋಡಿದ್ರೆ 65 ಸಾವಿರ ರೂ. ವೇತನ!

    ನವದೆಹಲಿ: ನೀವು ಟಿವಿ ನೋಡುವುದನ್ನು ಇಷ್ಟಪಡುತ್ತೀರಾ? ಹಾಗಿದ್ದರೆ ಟಿವಿ ನೋಡುವುದನ್ನೇ ಉದ್ಯೋಗ ಮಾಡಿಕೊಳ್ಳಬಹುದು. ಹೌದು, ಕಂಪನಿಯೊಂದು ಪ್ರತಿ ವಾರ 20 ಗಂಟೆ ಟಿವಿ ನೋಡುವುದಕ್ಕಾಗಿಯೇ 65 ಸಾವಿರ ರೂ. ವೇತನ ನೀಡುತ್ತಿದೆ.

    ಟಿವಿ ನೋಡುವ ಪಾರ್ಟ್ ಟೈಮ್ ಕೆಲಸಕ್ಕೆ ಉತ್ತಮ ಬರವಣಿಗೆಯ ಕೌಶಲ್ಯ, ಇಂಗ್ಲಿಷ್‍ನಲ್ಲಿ ಮಾತನಾಡುವವರೇ ಆಗಿರಬೇಕು. ಜೊತೆಗೆ ವಯಸ್ಸು 18 ವರ್ಷ ಮೀರಬೇಕು. ಹೀಗೆ ಕೆಲವು ನಿಯಮಗಳನ್ನು ಕಂಪನಿ ವಿಧಿಸಿದೆ. ಇದಕ್ಕೆ ಒಪ್ಪಿದರೆ ನೀವು ಪಾರ್ಟ್ ಟೈಮ್ ಜಾಬ್ ಮಾಡಬಹುದಾಗಿದೆ. ಇದನ್ನೂ ಓದಿ: ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಸಿಗಲಿದೆ 1 ಲಕ್ಷ

    ಆನ್‍ಬೈ ಎಂಬ ಕಂಪನಿ ಇಂತಹ ಪಾರ್ಟ್ ಟೈಮ್ ಜಾಬ್ ಕಲ್ಪಿಸಿದೆ. ಆದರೆ ಕೆಲಸ ಮಾಡಲು ಬಯಸುವವರು ಟಿವಿ, ಕ್ಯಾಮೆರಾ, ಸ್ಮಾರ್ಟ್ ಸಾಧನ, ಹೆಡ್‍ಫೋನ್ ಮತ್ತು ಹೋಮ್ ಸಿನಿಮಾ ವ್ಯವಸ್ಥೆಗಳು ಸೇರಿದಂತೆ ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳ ಬಗ್ಗೆ ಮಾಹಿತಿ ಹೊಂದಿಬೇಕು.

    ಒಂದು ವೇಳೆ ನೀವು ಕೆಲಸಕ್ಕೆ ಆಯ್ಕೆಯಾದರೆ ಉತ್ಪನ್ನ ಪುಟವನ್ನು ಆನ್‍ಸೈಟ್‍ನಲ್ಲಿ ಸುಧಾರಿಸಲು ಪರೀಕ್ಷಿಸಲು ಪ್ರತಿ ತಿಂಗಳು ಉತ್ಪನ್ನಗಳ ಆಯ್ಕೆಯನ್ನು ಪಡೆಯುತ್ತೀರಿ. ಉತ್ಪನ್ನಗಳ ವಿನ್ಯಾಸ, ಕಾರ್ಯಕ್ಷಮತೆ, ಬಾಳಿಕೆ, ಧ್ವನಿ, ಪ್ರದರ್ಶನ, ಕಾರ್ಯಕ್ಷಮತೆ ಮತ್ತು ಹಣದ ಮೌಲ್ಯವನ್ನು ಪರೀಕ್ಷಿಸಬೇಕು. ಬಳಿಕ ನೀವು ಪರೀಕ್ಷಿಸಿದ ಉತ್ಪನ್ನದ ಬಗ್ಗೆ 200 ಪದಗಳ ವಿಮರ್ಶೆಯನ್ನು ಬರೆಯಬೇಕು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಆನ್‍ಬೈ ಸಂಸ್ಥಾಪಕ ಕ್ಯಾಸ್ ಪ್ಯಾಟನ್, “ನಾವು ಗ್ರಾಹಕರಿಗೆ ನಿಖರವಾದ ಮಾಹಿತಿ ಮತ್ತು ಉತ್ತಮ ವಸ್ತುಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಆದ್ದರಿಂದ ತಾಂತ್ರಿಕ ತಜ್ಞರಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸುವ ಮೂಲಕ, ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತದೆ. ಗ್ರಾಹಕರ ವಿಶ್ವಾಸ ಗಳಿಸಲು ಇದು ಉತ್ತಮ ವಿಧಾನವಾಗಿದೆ” ಎಂದು ತಿಳಿಸಿದ್ದಾರೆ.

  • ವೇತನವಿಲ್ಲದೆ ಕೆಎಸ್‌ಆರ್‌ಟಿಸಿ ನೌಕರರು ಕಂಗಾಲು

    ವೇತನವಿಲ್ಲದೆ ಕೆಎಸ್‌ಆರ್‌ಟಿಸಿ ನೌಕರರು ಕಂಗಾಲು

    ಬೆಂಗಳೂರು: ಲಾಕ್‍ಡೌನ್ ಎಫೆಕ್ಟ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೆಎಸ್‌ಆರ್‌ಟಿಸಿ ಈ ತಿಂಗಳ ವೇತನವನ್ನು ಇನ್ನೂ ನೌಕರರಿಗೆ ಪಾವತಿಸಿಲ್ಲ.

    ಸಾಮಾನ್ಯವಾಗಿ ತಿಂಗಳ 2ನೇ ದಿನಾಂಕದಂದೇ ಸಂಬಳ ನೌಕರರ ಬ್ಯಾಂಕ್ ಖಾತೆಗೆ ಬಂದು ಬೀಳುತ್ತಿತ್ತು. ಆದರೆ ಆರನೇ ತಾರೀಖು ಮುಗಿದರೂ ಸಾರಿಗೆ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. ನಾಳೆ ಭಾನುವಾರ ಬೇರೆ, ಸೋಮವಾರ ಕೂಡ ಆಗುತ್ತೋ ಇಲ್ವೋ ಅನ್ನೋ ಗ್ಯಾರಂಟಿ ಇಲ್ಲ. ಯಾಕಂದ್ರೆ ಈ ತಿಂಗಳ ಅರ್ಧ ಸಂಬಳ ನೀಡಿ ನೆರವಾಗುವಂತೆ ಸಾರಿಗೆ ಮಂತ್ರಿ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ಆದರೆ ಇದುವರೆಗೂ ಸಿಎಂ ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ವೇತನ ಇಲ್ದೇ ಸಾರಿಗೆ ಸಿಬ್ಬಂದಿ ಪರದಾಡುತ್ತಿದ್ದಾರೆ.

    ಬಸ್‍ಗಳಲ್ಲಿ ಸಾಮಾಜಿಕ ಅಂತರ ಪಾಲಿಸಿದರೆ ಮೊದಲಿನಂತೆ ಆದಾಯ ಗಳಿಸುವುದು ಕಷ್ಟ. ಹೀಗಾಗಿ ಸಾಮಾಜಿಕ ಅಂತರ ನಿಯಮ ಕೈ ಬಿಡುವಂತೆ ಕೋರಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಸಂಸ್ಥೆಗೆ 531 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕೆಎಸ್‌ಆರ್‌ಟಿಸಿ ಮೇ 11ರಂದು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಸದ್ಯ ಬಸ್‍ಗಳು ಓಡಾಡುತ್ತಿದ್ದರೂ ಸಾಮಾಜಿಕ ಅಂತರ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸಂಸ್ಥೆ ನಷ್ಟವನ್ನು ಎದುರಿಸುತ್ತಿದೆ.

  • ಆರ್ಥಿಕ ಸಂಕಷ್ಟದಲ್ಲಿದ್ರೂ ಆಟಗಾರರ ವೇತನ ಕಡಿತವಿಲ್ಲ- ಬಿಸಿಸಿಐ

    ಆರ್ಥಿಕ ಸಂಕಷ್ಟದಲ್ಲಿದ್ರೂ ಆಟಗಾರರ ವೇತನ ಕಡಿತವಿಲ್ಲ- ಬಿಸಿಸಿಐ

    ಮುಂಬೈ: ಕೊರೊನಾ ವೈರಸ್‍ನಿಂದಾಗಿ ಎರಡು ತಿಂಗಳಿನಿಂದ ಯಾವುದೇ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಸೇರಿದಂತೆ ಅನೇಕ ಕ್ರಿಕೆಟ್ ಮಂಡಳಿಗಳು ಆಟಗಾರರ ವೇತನವನ್ನು ಕಡಿತಗೊಳಿಸಿವೆ. ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರ ವೇತನವನ್ನು ಕಡಿತಗೊಳಿಸದಿರಲು ನಿರ್ಧರಿಸಿದೆ.

    ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು ಇತರ ಖರ್ಚುಗಳನ್ನು ಕಡಿತಗೊಳಿಸುವ ಮೂಲಕ ನಷ್ಟವನ್ನು ಸರಿದೂಗಿಸಲಾಗುವುದು. ಯಾವುದೇ ಕಾರಣಕ್ಕೂ ಆಟಗಾರರ ವೇತನದಲ್ಲಿ ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    “ಆಟಗಾರರ ವೇತನವನ್ನು ಕಡಿತಗೊಳಿಸುವ ಬಗ್ಗೆ ನಾವು ಇನ್ನೂ ಯೋಚಿಸಿಲ್ಲ. ಹಣಕಾಸಿನ ಬಿಕ್ಕಟ್ಟನ್ನು ನಿವಾರಿಸಲು ನಮಗೆ ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ. ಆದರೆ ಈ ಬಾರಿಯ ಐಪಿಎಲ್ ರದ್ದಾದರೆ ಬಿಸಿಸಿಐ ದೊಡ್ಡ ನಷ್ಟವನ್ನು ಅನುಭವಿಸಬಹುದು. ಈ ರೀತಿಯ ಪರಿಸ್ಥಿತಿ ಸಂಭವಿಸಿದಾಗ ಅದರ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇವೆ. ಆದರೆ ಆಟಗಾರರ ವೇತನ ಕಡಿತಗೊಳಿಸುವುದು ಕೊನೆಯ ಮಾರ್ಗವಾಗಿದೆ” ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಐಪಿಎಲ್ ರದ್ದುಗೊಂಡರೆ ಮಂಡಳಿಗೆ ಸುಮಾರು 4 ಸಾವಿರ ಕೋಟಿ ರೂ.ಗಳ ಆದಾಯ ನಷ್ಟವಾಗಲಿದೆ ಎಂದು ಅರುಣ್ ಧುಮಾಲ್ ಇತ್ತೀಚೆಗೆ ಹೇಳಿದ್ದರು.

    “ಇಲ್ಲಿಯವರೆಗೆ ಆಟಗಾರರ ವೇತನ ಕಡಿತದ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಆದರೆ ಸಿಬ್ಬಂದಿ ಮತ್ತು ಅಧಿಕಾರಿಗಳ ವೆಚ್ಚವನ್ನು ಕಡಿತಗೊಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಪ್ರಯಾಣ, ವಸತಿ ಅಥವಾ ಸಿಬ್ಬಂದಿ ಸೇರಿದಂತೆ ಎಲ್ಲೆಲ್ಲಿ ವೆಚ್ಚ ಕಡಿತಕ್ಕೆ ಅವಕಾಶವಿದೆ ಎಂಬುದನ್ನು ಗಮನಿಸಲಾಗುತ್ತಿದೆ” ಎಂದು ತಿಳಿಸಿದರು.

    ಲಾಕ್‍ಡೌನ್ ನಂತರ ಆಟಗಾರರು ಅಭ್ಯಾಸಕ್ಕೆ ಮುಂದಾಗುವಂತೆ ಕೆಲಸ ಮಾಡುತ್ತಿದ್ದೇವೆ. ಪ್ರಸ್ತುತ ಲಾಕ್‍ಡೌನ್ ದೃಷ್ಟಿಯಿಂದ ಮನೆಯಲ್ಲಿರು ಆಟಗಾರರಿಗೆ ಕೋಚಿಂಗ್ ನೀಡಲಾಗುತ್ತಿದೆ. ಜೊತೆಗೆ ಸಹಾಯಕ ಸಿಬ್ಬಂದಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು.

    ಕ್ರಿಕೆಟ್ ತಜ್ಞರ ಪ್ರಕಾರ, ಈ ವರ್ಷ ಭಾರತ-ಆಸ್ಟ್ರೇಲಿಯಾ ಸರಣಿಗಳು ಮಾತ್ರ ನಡೆಯುವ ಸಾಧ್ಯವೆಂದು ತೋರುತ್ತದೆ. ಅದು ನವೆಂಬರ್-ಡಿಸೆಂಬರ್‍ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ 4 ಟೆಸ್ಟ್ ಮತ್ತು 3 ಏಕದಿನ ಸರಣಿಗಳನ್ನು ಆಡಬೇಕಾಗಿದೆ. ಪಾಕಿಸ್ತಾನವು ಈ ವರ್ಷದ ಏಷ್ಯಾಕಪ್ ಅನ್ನು ಸೆಪ್ಟೆಂಬರ್ ನಲ್ಲಿ ದುಬೈನಲ್ಲಿ ನಡೆಸಲು ನಿರ್ಧರಿಸಿದೆ. ಇತ್ತ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಿದೆ. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಈ ಎರಡೂ ಟೂರ್ನಿಗಳನ್ನು ನಡೆಸಲು ಸಾಧ್ಯವಿಲ್ಲ.

  • ಪೊಲೀಸರಿಗೆ ವೇತನ ಕೊಡೋಕೆ ಬೊಕ್ಕಸದಲ್ಲಿ ದುಡ್ಡಿಲ್ವೇ..?

    ಪೊಲೀಸರಿಗೆ ವೇತನ ಕೊಡೋಕೆ ಬೊಕ್ಕಸದಲ್ಲಿ ದುಡ್ಡಿಲ್ವೇ..?

    ಬೆಂಗಳೂರು: ಪೊಲೀಸರಿಗೆ ವೇತನವನ್ನು ಸಕಾಲಕ್ಕೆ ನೀಡಲು ಸಾಧ್ಯವಾಗದಷ್ಟು ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆದಂತೆ ಕಾಣುತ್ತಿದೆ. ಯಾಕಂದ್ರೆ ರಾಜ್ಯದ ಅರ್ಧದಷ್ಟು ಪೊಲೀಸರಿಗೆ ಇನ್ನೂ ಫೆಬ್ರವರಿ ತಿಂಗಳ ಸಂಬಳ ಆಗಿಲ್ಲ.

    ಬೆಂಗಳೂರಿನಲ್ಲಿ ಖಜಾನೆ ಒಂದರ ಅಡಿ ಬರುವ ಪೊಲೀಸರಲ್ಲಿ ಬಹುತೇಕರ ಖಾತೆಗೆ ವೇತನ ಬಂದಿದೆ. ಆದರೆ ಖಜಾನೆ ಎರಡರ ಅಡಿ ಬರುವ ಪೊಲೀಸರಿಗೆ ಇನ್ನೂ ಸಂಬಳವೇ ಆಗಿಲ್ಲ. ಅನುದಾನದ ಕೊರತೆ ಹಿನ್ನೆಲೆಯಲ್ಲಿ ವೇತನ ವಿಳಂಬ ಆಗುವ ಸಾಧ್ಯತೆ ಇದೆ. ಈ ವಿಷಯವನ್ನು ಎಲ್ಲಾ ಪೊಲೀಸರಿಗೆ ತಿಳಿಸಬೇಕೆಂದು ಸೂಚಿಸಿ ಹುಬ್ಬಳ್ಳಿ ಧಾರವಾಡದ ಪೊಲೀಸ್ ಆಯುಕ್ತ ಆರ್ ದಿಲೀಪ್, ತಮ್ಮ ಅಧೀನ ಅಧಿಕಾರಿಗಳಿಗೆ ಫ್ಯಾಕ್ಸ್ ಸಂದೇಶ ರವಾನಿಸಿದ್ದಾರೆ.

    ಡಿಸಿಎಂ ಅಶ್ವಥ್ ನಾರಾಯಣ್ ಅವರು ಮಾತ್ರ, ಸರ್ಕಾರಕ್ಕೆ ಅಂತಹ ಪರಿಸ್ಥಿತಿ ಏನು ಬಂದಿಲ್ಲ ಎಂದಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಮಾತನಾಡಿ, ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ. ಆದರೆ ರಾಜಕಾರಣಿಗಳ ಆರ್ಥಿಕ ಬಲ ಜಾಸ್ತಿ ಆಗುತ್ತಿದೆ ಎಂದು ಹೇಳಿದ್ದಾರೆ.

  • ಅರಣ್ಯಾಧಿಕಾರಿ ದೌರ್ಜನ್ಯಕ್ಕೆ ಬೇಸತ್ತು ಡಿಸಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಅರಣ್ಯಾಧಿಕಾರಿ ದೌರ್ಜನ್ಯಕ್ಕೆ ಬೇಸತ್ತು ಡಿಸಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    – ವೇತನ ತಾರತಮ್ಯ ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ದೌರ್ಜನ್ಯ

    ಚಿತ್ರದುರ್ಗ: ಅರಣ್ಯ ಇಲಾಖೆ ಅಧಿಕಾರಿಯ ದೌರ್ಜನ್ಯದಿಂದ ಮನನೊಂದ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲೇ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ಇಂದು ನಡೆದಿದೆ.

    ಅರಣ್ಯ ಇಲಾಖೆ ಕಚೇರಿಯಲ್ಲಿ ಗುತ್ತಿಗೆ ಆಧಾರ ಮೇಲೆ ಕಸಗೂಡಿಸುವ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಗಂಡ ಬಿಟ್ಟು ನಿರ್ಗತಿಕಳಾದ ಲಕ್ಷ್ಮಿ ಅವರಿಗೆ ಒಬ್ಬಳು ಮಗಳಿದ್ದು, ಆಕೆಯ ವಿದ್ಯಾಭ್ಯಾಸ ಹಾಗೂ ಜೀವನೋಪಾಯಕ್ಕೆ ಕಳೆದ ನಾಲ್ಕು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಆದರೆ ಚಿತ್ರದುರ್ಗದ ಆರ್.ಎಫ್.ಓ ಸಂದೀಪ್‍ನಾಯಕ ಅವರು ಲಕ್ಷ್ಮಿ ಅವರಿಗೆ 9,000 ರೂ. ಬದಲಾಗಿ 7,000 ರೂ. ನೀಡುತ್ತಿದ್ದರು. ಆದರೂ ಕೊಟ್ಟಷ್ಟು ಕೊಡಲಿ ಅಂತ ಸಹನೆಯಿಂದ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಅವರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡ ಸಂದೀಪ್ ನಾಯಕ ವೇತನವನ್ನು ದಿಢೀರ್ ಆರು ಸಾವಿರ ರೂ.ಗೆ ಇಳಿಸಿದ್ದರು.

    ವೇತನವನ್ನು ದಿಢೀರ್ ಅಂತಾ ಇಳಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸಂದೀಪ್ ಅವರು ಜನವರಿ ತಿಂಗಳಿಂದಲೇ ಲಕ್ಷ್ಮಿ ಅವರ ಮೇಲೆ ದೌರ್ಜನ್ಯ ಎಸಗಿದ್ದರು. ಅಷ್ಟೇ ಅಲ್ಲದೆ ಕೆಲಸದಿಂದಲೇ ತೆಗೆದು ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ.

    ಅರಣ್ಯಾ ಇಲಾಖೆ ಅಧಿಕಾರಿ ದೌರ್ಜನುದಿಂದ ಮನನೊಂದ ಲಕ್ಷ್ಮಿ, ಸ್ಥಳೀಯ ಶಾಸಕ ತಿಪ್ಪಾರೆಡ್ಡಿ ಬಳಿ ಹೋಗಿ ಅಳಲನ್ನು ತೋಡಿಕೊಂಡಿದ್ದರು. ಆದರೂ ಸಹ ಅಲ್ಲಿಯೂ ನ್ಯಾಯ ಸಿಕ್ಕಿರಲಿಲ್ಲ. ಹೀಗಾಗಿ ಚಿತ್ರದುರ್ಗ ಡಿಸಿ ವಿನೋತ್ ಪ್ರಿಯಾ ಅವರ ಬಳಿ ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಸಲು ಆಗಮಿಸಿದ್ದರು. ಆದರೆ ಜಿಲ್ಲಾಧಿಕಾರಿ ಇವರ ಕೈಗೆ ಸಿಗಲಾರದೇ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಕಂಗಾಲಾದ ಮಹಿಳೆಯು ಕಚೇರಿಯಲ್ಲೇ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಡಿಸಿ ಕಚೇರಿ ಸಿಬ್ಬಂದಿ ಲಕ್ಷ್ಮಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಲಕ್ಷ್ಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • 11 ತಿಂಗಳಿನಿಂದ ಸರ್ಕಾರಿ ವೈದ್ಯರಿಗೆ ವೇತನ ನೀಡದ ರಾಜ್ಯ ಸರ್ಕಾರ

    11 ತಿಂಗಳಿನಿಂದ ಸರ್ಕಾರಿ ವೈದ್ಯರಿಗೆ ವೇತನ ನೀಡದ ರಾಜ್ಯ ಸರ್ಕಾರ

    – ಮಂಗ್ಳೂರಿನಲ್ಲಿ ಬೀದಿಗಿಳಿದು ಪ್ರತಿಭಟಿಸಿದ ಸರ್ಕಾರಿ ವೈದ್ಯರು

    ಮಂಗಳೂರು: ಕಳೆದ ಹನ್ನೊಂದು ತಿಂಗಳಿನಿಂದ ವೇತವೇ ಆಗದ ಹಿನ್ನೆಲೆಯಲ್ಲಿ ಮಂಗಳೂರಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

    ಸರ್ಕಾರಿ ಆಸ್ಪತ್ರೆಗಳಿಗೆ ಇತ್ತೀಚಿನ ದಿನಗಳಲ್ಲಿ ವೈದ್ಯರು ಬರುವುದೇ ಕಡಿಮೆಯಾಗಿದೆ. ಸಿಇಟಿ ರ‌್ಯಾಂಕ್ ಪಡೆದು ಬರುವ ಕೆಲವು ವೈದ್ಯರು ಮಾತ್ರ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಾರೆ. ಸರ್ಕಾರದಿಂದ ಸರಿಯಾದ ಪ್ರೋತ್ಸಾಹ ಸಿಗದೇ ಇರುವುದರಿಂದಲೇ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರು ಬರೋದು ಕಡಿಮೆ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಗಳೂರಿನಲ್ಲಿ ಬುಧವಾರ ವೈದ್ಯರು ವೇತನಕ್ಕಾಗಿ ಬೀದಿಗೆ ಇಳಿದು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಸರ್ಕಾರಿ ಕೋಟಾದಲ್ಲಿ ಮೆಡಿಕಲ್ ಸೀಟ್ ಪಡೆದು ಕಷ್ಟ ಪಟ್ಟು ಓದಿ ವೈದ್ಯರಾದವರು, ಸರ್ಕಾರಿ ನಿಯಮದಂತೆ ನೇಮಕಾತಿಗೆ ಮುನ್ನ ಜಿಲ್ಲಾಸ್ಪತ್ರೆಗಳಲ್ಲಿ ಇಂಟರ್ನ್ ಶಿಪ್ ಮಾಡುಬೇಕು. ಆದರೆ ಮಂಗಳೂರಿನ ಸರ್ಕಾರಿ ವೆನಗಲಾಕ್ ಹಾಗೂ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರು ಕಳೆದ ಹನ್ನೊಂದು ತಿಂಗಳಿಂದ ಸಂಭಾವನೆ ಸಿಗದೆ ಈಗ ವೇತನಕ್ಕಾಗಿ ಧರಣಿ ಕುಳಿತಿದ್ದಾರೆ.

    ಸುಮಾರು 52 ವಿದ್ಯಾರ್ಥಿಗಳು ಮಂಗಳೂರಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಇವರ ಸೇವೆಗಾಗಿ ಮಾಸಿಕ ಸಂಭಾವನೆ ನೀಡುತ್ತದೆ. ಆದರೆ ರಾಜ್ಯ ಸರ್ಕಾರ ಹನ್ನೊಂದು ತಿಂಗಳಿನಿಂದ ಪುಡಿಗಾಸನ್ನೂ ನೀಡದೆ ಸತಾಯಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಹಲವರಿಗೆ ವೈದ್ಯರು ಮನವಿ ಮಾಡಿದ್ದಾರೆ. ಆದರೆ ಇವರ ಮನವಿಗೆ ಸರ್ಕಾರ ಮಾತ್ರ ಕ್ಯಾರೇ ಅಂದಿರಲಿಲ್ಲ.

    ಸಿಎಂ ಯಡಿಯೂರಪ್ಪ ಅವರು ಕಳೆದ ಡಿಸೆಂಬರ್ 24ರಂದು ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನವಿಗೆ ಸ್ಪಂದಿಸಿ, ವೆನ್ಲಾಕ್ ಆಸ್ಪತ್ರೆಯ ಎಮರ್ಜೆನ್ಸಿ ನಿಧಿಯಿಂದ ಹಣ ಬಿಡುಗಡೆ ಮಾಡುವಂತೆ ಆದೇಶಿಸಿದ್ದರು. ಆದರೆ ಇನ್ನೂ ಪುಡಿಗಾಸು ಸಿಕ್ಕಿಲ ಒಟ್ಟಿನಲ್ಲಿ ಸರ್ಕಾರದ ದಿವ್ಯ ನಿರ್ಲಕ್ಷ್ಯ ಮತ್ತು ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿಯ ಅಸಡ್ಡೆಗೆ ಯುವ ವೈದ್ಯರು ಹೈರಾಣಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಸರಿಯಾಗಿ ವೈದ್ಯರ ನೇಮಕವೇ ಆಗದ ಸಂದರ್ಭದಲ್ಲಿ ಕಷ್ಟ ಪಟ್ಟು ಓದಿ, ವೈದ್ಯರಾದವರು ಸರ್ಕಾರದ ಪುಡಿಗಾಸಿಗಾಗಿ ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಬೇಕಾದ ಸ್ಥಿತಿ ಬಂದಿರುವುದು ಮಾತ್ರ ವಿಪರ್ಯಾಸ.

  • ಪಿಯುಸಿಗೆ ಮೌಲ್ಯಮಾಪನ ಸಂಕಟ – ಎಸ್‍ಎಸ್‍ಎಲ್‍ಸಿ ಹಾದಿ ಸುಗಮ

    ಪಿಯುಸಿಗೆ ಮೌಲ್ಯಮಾಪನ ಸಂಕಟ – ಎಸ್‍ಎಸ್‍ಎಲ್‍ಸಿ ಹಾದಿ ಸುಗಮ

    ಬೆಂಗಳೂರು: ದ್ವೀತಿಯ ಪಿಯುಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬಂದ ಕೂಡಲೇ ಮೌಲ್ಯಮಾಪನ ಬಹಿಷ್ಕಾರ ಎನ್ನುವ  ಪದ ಕೇಳ್ತಾನೆ ಇರುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಮೌಲ್ಯಮಾಪನ ಬಹಿಷ್ಕಾರ ಮಾಡಲು ಪಿಯುಸಿ ಉಪನ್ಯಾಸಕರು ನಿರ್ಧಾರ ಮಾಡಿದ್ದಾರೆ. ಆದರೆ ಎಸ್‍ಎಸ್‍ಎಲ್‍ಸಿ ಶಿಕ್ಷಕರು ಮಾತ್ರ ನಾವು ಮೌಲ್ಯಮಾಪನ, ಪರೀಕ್ಷಾ ಕೆಲಸ ಬಹಿಷ್ಕಾರ ಮಾಡದೇ ಇರಲು ನಿರ್ಧಾರ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪನ್ಯಾಸಕ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಬೇಡಿಕೆ ಈಡೇರದೇ ಇದ್ದರೆ ಮೌಲ್ಯಮಾಪನ ಬಹಿಷ್ಕಾರ ಗ್ಯಾರಂಟಿ ಅಂತಿದ್ದಾರೆ. ವೇತನ ತಾರತಮ್ಯ ಸೇರಿದಂತೆ 20 ಬೇಡಿಕೆಗಳನ್ನು ಅನೇಕ ವರ್ಷಗಳಿಂದ ಸರ್ಕಾರದ ಮುಂದೆ ಇಟ್ಟುಕೊಂಡು ಬರುತ್ತಿದ್ದೇವೆ. ಆದರೆ ಸರ್ಕಾರ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದೆ. ಹೀಗಾಗಿ ಈ ಬಾರಿ ಹೋರಾಟ ಶತಸಿದ್ಧ ಅಂತ ಎಚ್ಚರಿಕೆ ನೀಡಿದ್ದಾರೆ. ಜನವರಿ 30ರಂದು ಎರಡನೇ ಹಂತದ ಹೋರಾಟ ಫ್ರೀಡಂ ಪಾರ್ಕ್ ನಲ್ಲಿ ಮಾಡುತ್ತಿದ್ದೇವೆ. ಸರ್ಕಾರ ಅಷ್ಟರಲ್ಲಿ ಬೇಡಿಕೆ ಈಡೇರಿಸದೇ ಇದ್ದರೆ ಮೌಲ್ಯಮಾಪನ ಬಹಿಷ್ಕಾರ ಗ್ಯಾರಂಟಿ ಅಂತ ಎಚ್ಚರಿಕೆ ನೀಡಿದ್ದಾರೆ.

    ಉಪನ್ಯಾಸಕರ ಬೇಡಿಕೆಗಳು ಏನು?
    1. ವೇತನ ತಾರತಮ್ಯ ಸರಿಪಡಿಸಬೇಕು. ಕುಮಾರ್ ನಾಯಕ್ ವರದಿ ಜಾರಿ ಮಾಡಬೇಕು.
    2. ಉಪನ್ಯಾಸಕರ ಕಾರ್ಯಭಾರ ಕುರಿತು ನಿರ್ಧಾರಕ್ಕೆ ಉನ್ನತ ಮಟ್ಟದ ಪರಿಷತ್ ಸಮಿತಿ ರಚಿಸಬೇಕು. ಉಪನ್ಯಾಸಕರಿಗೆ 16 ಗಂಟೆ ಬೋಧನಾ ಅವಧಿ ಮುಂದುವರಿಸಬೇಕು.
    3. ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿದ ಪಿಯುಸಿ ಉಪನ್ಯಾಸಕರಿಗೆ 10, 15, 20, 25 ವರ್ಷಗಳ ಕಾಲಮಿತಿ ಬಡ್ತಿ ಕೂಡಲೇ ನೀಡಬೇಕು.
    4. ಪಿಯುಸಿ ಉಪನ್ಯಾಸಕರಿಗೆ ಪದವಿ ಕಾಲೇಜಿಗೆ ಬಡ್ತಿ ನೀಡಬೇಕು. ಕರ್ನಾಟಕ ಪಬ್ಲಿಕ್ ಶಾಲೆಯಿಂದ ಆಗಿರುವ ಸಮಸ್ಯೆ ಪರಿಹಾರ ಮಾಡಬೇಕು.
    5. ಅನುದಾನಿತ ಪದವಿ ಪೂರ್ವ ಕಾಲೇಜುಗಳ ಕಾಲ್ಪನಿಕ ವೇತನ ಸಮಸ್ಯೆ ಪರಿಹಾರ ಮಾಡಬೇಕು.
    6. ಪಿಯು ಕಾಲೇಜಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆ ತುಂಬಬೇಕು.

    ಬೆಂಬಲ ನೀಡಲ್ಲ: ಪಿಯುಸಿ ಉಪನ್ಯಾಸಕರ ಹೋರಾಟಕ್ಕೆ ಪ್ರೌಢಶಾಲಾ ಸಹ ಶಿಕ್ಷಕರು ಕೈ ಜೋಡಿಸದೇ ಇರಲು ನಿರ್ಧರಿಸಿದ್ದಾರೆ. ಮೌಲ್ಯಮಾಪನಕ್ಕೆ ಗೈರಾಗದೇ ಇರಲು ನಿರ್ಧಾರ ಮಾಡಿದ್ದು, ಪರೀಕ್ಷಾ ಕೆಲಸಕ್ಕೂ ಹಾಜರಾಗಲು ನಿರ್ಧಾರ ಮಾಡಿದ್ದೇವೆ. ಜೂನ್ ನಂತರ ನಮ್ಮ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

  • ತೆಲಂಗಾಣದಂತೆ ವೇತನ ನೀಡಿ, ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ: ಶಶಿಧರ್ ವೇಣುಗೋಪಾಲ್

    ತೆಲಂಗಾಣದಂತೆ ವೇತನ ನೀಡಿ, ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ: ಶಶಿಧರ್ ವೇಣುಗೋಪಾಲ್

    ಹಾವೇರಿ: ಪೊಲೀಸ್ ಇಲಾಖೆಯ ಸಿಬ್ಬಂದಿಗೆ ತೆಲಂಗಾಣದಂತೆ ವೇತನ ನೀಡಿ. ಮುಂದಿನ ಒಂದು ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾ ಸಂಘದ ರಾಜ್ಯಾಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಕದ ರಾಜ್ಯ ತೆಲಂಗಾಣದಲ್ಲಿ ಒಬ್ಬ ಸಿವಿಲ್ ಪೊಲೀಸ್ 45 ಸಾವಿರ ರೂ. ಸಂಬಳ ಪಡೆಯುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ 30 ಸಾವಿರ ರೂ. ಪಡೆಯುತ್ತಾರೆ. ಈ ವೇತನ ತಾರತಮ್ಯ ನಾವು ಖಂಡಿಸುತ್ತೇವೆ. ಜೊತೆಗೆ ಒಂದು ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ಮಾಡದಿದ್ದರೆ, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಗಳ ಸಹಭಾಗಿತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು.

    ಪೊಲೀಸ್ ಇಲಾಖೆ ನಿತ್ಯ ಆಡಳಿತದಲ್ಲಿ ರಾಜಕಾರಣಿ ಕಪಿಮುಷ್ಠಿಯಲ್ಲಿ ಸಿಲುಕಿದೆ. ಇಲಾಖೆಯು ರಾಜಕಾರಣಿಗಳ ಅಣತಿ ಮೇಲೆ ಕಾರ್ಯನಿರ್ವಹಿಸುವ ಕೇಂದ್ರಗಳಾಗಿವೆ. ರಾಜಕೀಯ ನಾಯಕರ ಹಸ್ತಕ್ಷೇಪದಿಂದ ಇಲಾಖೆ ನಲುಗಿ ಹೋಗಿದೆ. ಸರಕಾರಗಳು ಬದಲಾದ ಸಮಯದಲ್ಲಿ ಪೊಲೀಸ್ ವರ್ಗಾವಣೆಯು ಒಂದು ರೀತಿಯಲ್ಲಿ ಹಣಗಳಿಸುವ ದಂಧೆಗಳಾಗಿ ಮಾರ್ಪಾಡು ಆಗಿವೆ. ಇಲಾಖೆಯಲ್ಲಿ ಕಾನೂನಿಗೆ ಅವಕಾಶ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪೊಲೀಸರಲ್ಲಿ ರಾಜಕೀಯ ವ್ಯವಸ್ಥೆಯಿಂದ ಅಸಹಾಯಕತೆ ಹೆಚ್ಚಾಗಿದೆ. ಇಲಾಖೆಯ ಸಿಬ್ಬಂದಿಗಳು ವೇತನ ತಾರತಮ್ಯ ಖಂಡಿಸಿ ಹೋರಾಟ ಮಾಡಿದ್ದು ನಿಜ. ಹೋರಾಟದ ಫಲವಾಗಿ ಔರಾದ್ಕರ್ ವರದಿ ಬಂದಿದೆ. ಈ ವರದಿ ತುಲನಾತ್ಮಕವಾಗಿ ವಾಸ್ತವಿಕ ವಿಚಾರಗಳನ್ನು ಹೊಂದಿದೆ. ಆದರೆ ವರದಿಯಂತೆ ಪೊಲೀಸ್ ಇಲಾಖೆಯಲ್ಲಿ ವೇತನ ಹೆಚ್ಚಳವಾಗಿಲ್ಲ ಎಂದರು. ಇದನ್ನು ಓದಿ: ಔರಾದ್ಕರ್ ವರದಿ ಜಾರಿಗೆ ಮತ್ತೆ ಕಣ್ಣಾಮುಚ್ಚಾಲೆ

    2018 ರಲ್ಲಿ ನೇಮಕಗೊಂಡ ಪೊಲೀಸ್ ಕಾನ್ಸಸ್ಟೆಬಲ್ 23,500 ರೂ. ವೇತನ ಪಡೆಯುತ್ತಾರೆ. ಆದರೆ 2012 ರಲ್ಲಿ ನೇಮಕಗೊಂಡವರು ಅಷ್ಟೇ ಪ್ರಮಾಣದಲ್ಲಿ ವೇತನ ಪಡೆಯುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ನಾವು ಸೇವಾ ಹಿರಿತನವನ್ನು ಪ್ರಶ್ನೆ ಮಾಡುತ್ತಿದ್ದೇವೆ. ವೇತನ ಪರಿಷ್ಕರಣೆ ಮಾಡಿ ಎನ್ನುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಂಡ ಸಾಮಾಜಿಕ ಜಾಲತಾಣದ ಮೂಲಕ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಕುಮಾರಸ್ವಾಮಿ ಸರ್ಕಾರ ನಾನು 420 ಸರ್ಕಾರ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಬಂಧಿಸಿದರು. ಆಡಳಿತ ನಡೆಸುವರು ನನ್ನ ಧ್ವನಿ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

    ನಿರ್ಲಕ್ಷ್ಯ ಸರಿಯಲ್ಲ: ಔರಾದ್ಕರ್ ವರದಿ ಜಾರಿ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ಮಾಡಬಾರದು. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಅದನ್ನು ಗೃಹ ಸಚಿವರು ಸರಿಯಾಗಿ ನಿಭಾಯಿಸಬೇಕು. ಇನ್ನು ಒಂದು ತಿಂಗಳೊಳಗೆ ವರದಿಯನ್ನು ಜಾರಿಗೆ ತರದಿದ್ದರೆ 3 ಹಂತದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಮೊದಲ ಹಂತದಲ್ಲಿ 35 ಸಾವಿರ ಸಿಬ್ಬಂದಿಗಳು, ಡಿಜಿಪಿ ಮನವಿ ಸಲ್ಲಿಸುವುದು. 2ನೇ ಹಂತದಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಹೋರಾಟ ಮಾಡುವುದು. 3ನೇ ಹಂತವಾಗಿ ಹೈ ಕೋರ್ಟ್, ಸುಪ್ರೀಂ ಕೋರ್ಟಿನಲ್ಲಿ ಕಾನೂನ ಸಮರ ಮಾಡುತ್ತೇವೆ. ಈ ದೇಶ ನಮ್ಮದು, ಈ ಮಣ್ಣು ನಮ್ಮದು, ಇದನ್ನು ಹಾಳು ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.