Tag: ವೇತನ

  • 12 ಲಕ್ಷ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ – ಇಲ್ಲಿದೆ ಸರಳ ಲೆಕ್ಕಾಚಾರ

    12 ಲಕ್ಷ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ – ಇಲ್ಲಿದೆ ಸರಳ ಲೆಕ್ಕಾಚಾರ

    ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ (Union Budget) ಮಧ್ಯಮವರ್ಗ ಮತ್ತು ವೇತನಜೀವಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. 12 ಲಕ್ಷ ಆದಾಯದವರೆಗೂ ಯಾವುದೇ ತೆರಿಗೆ (Tax) ಪಾವತಿ ಮಾಡುವ ಅಗತ್ಯವಿಲ್ಲದೇ ರಿಬೆಟ್ ಪ್ರಕಟಿಸಲಾಗಿದೆ.

    ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲಾಬ್‌ಗಳನ್ನು ಬದಲಿಸಲಾಗಿದೆ. ಇದಕ್ಕೆ 75ಸಾವಿರ ಸ್ಟಾಂಡರ್ಡ್ ಡಿಡಕ್ಷನ್ (Standard deduction) ಸೇರಿಸಿದರೆ 12.75 ಲಕ್ಷ ರೂಪಾಯಿಗೆ ತೆರಿಗೆ ಇರುವುದಿಲ್ಲ. ಆದರೆ ಷೇರು ಮತ್ತು ಸಾಲಪತ್ರಗಳಿಂದ ಬರುವ ಕ್ಯಾಪಿಟಲ್ ಗೈನ್ಸ್‌ ಪ್ರತ್ಯೇಕ ಆದಾಯ ಹೊರತುಪಡಿಸಿ ಸರಾಸರಿ ತಿಂಗಳಿಗೆ 1 ಲಕ್ಷ ರೂ. ಆದಾಯ ಹೊಂದಿರುವವರು ಯಾವುದೇ ತೆರಿಗೆ ಕಟ್ಟಬೇಕಿಲ್ಲ.

    ಕೇಂದ್ರದ ಈ ನಿರ್ಧಾರದಿಂದ ಸುಮಾರು 1 ಕೋಟಿ ಮಂದಿಗೆ ಅನುಕೂಲ ಆಗಲಿದೆ. ಹಳೆ ತೆರಿಗೆ ವಿಧಾನವನ್ನು ನಿರ್ಮಲಾ ಸೀತಾರಾಮನ್‌ ಮುಟ್ಟಲು ಹೋಗಿಲ್ಲ. ಈ ಮೂಲಕ ಜನರು ಸ್ವಯಂಪ್ರೇರಿತವಾಗಿ ಹೊಸ ತೆರಿಗೆ ಸ್ಲ್ಯಾಬ್‌ ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತಿದ್ದಾರೆ. ಜನರ ಕೈಯಲ್ಲಿ ನಗದು ಹೆಚ್ಚಿಸಲು, ಹೊಸ ತೆರಿಗೆ ವಿಧಾನವನ್ನು ಆಕರ್ಷಣಿಯವಾಗಿಸಲು ಈ ನಿರ್ಣಯವನ್ನು ಕೇಂದ್ರ ತೆಗೆದುಕೊಂಡಿದೆ.

    ಕೇಂದ್ರದ ಈ ಐತಿಹಾಸಿಕ ನಿರ್ಧಾರದಿಂದ ಮಧ್ಯಮ ವರ್ಗದ ಈ ಉಳಿಕೆ ಆದಾಯ ಮ್ಯೂಚುವಲ್ ಫಂಡ್‌, ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೇಟ್ ರಂಗಕ್ಕೆ ಬಿಗ್ ಬೂಸ್ಟ್ ಸಿಗುವ ಸಾಧ್ಯತೆಯಿದೆ.

    12 ಲಕ್ಷಕ್ಕೆ ಯಾವುದೇ ತೆರಿಗೆ ಇಲ್ಲ ಹೇಗೆ?
    ನಿಮ್ಮ ಅದಾಯ 12 ಲಕ್ಷ ಇದೆ ಎಂದಿಟ್ಟುಕೊಳ್ಳಿ. ಹೊಸ ಆದಾಯ ತೆರಿಗೆ ಸ್ಲ್ಯಾಬ್‌ ಪ್ರಕಾರ 0-4 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. 4 ಲಕ್ಷದಿಂದ 8 ಲಕ್ಷ ರೂ.ವರೆಗಿನ ಆದಾಯಕ್ಕೆ 5% ತೆರಿಗೆ ಇದೆ. ಅಂದರೆ 20 ಸಾವಿರ ರೂ. ತೆರಿಗೆ ಬೀಳುತ್ತದೆ.

    8 ಲಕ್ಷದಿಂದ 12 ಲಕ್ಷ ರೂ.ವರೆಗಿನ ಆದಾಯಕ್ಕೆ 10% ತೆರಿಗೆ ಇದೆ. ಈ ಲೆಕ್ಕಾಚಾರ ಮಾಡಿದರೆ 40 ಸಾವಿರ ರೂ. ತೆರಿಗೆ ಬೀಳುತ್ತದೆ. ಈಗ ಒಟ್ಟು ತೆರಿಗೆ ಲೆಕ್ಕ ಹಾಕಿದರೆ 60 ಸಾವಿರ ರೂ. ಆಗುತ್ತದೆ. ಆದರೆ ಸ್ಟ್ಯಾಡರ್ಡ್‌ ಡಿಡಕ್ಷನ್‌ ರಿಬೆಟ್ 75 ಸಾವಿರ ರೂ. ಇರುವ ಕಾರಣ ಒಟ್ಟು 12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಇದನ್ನೂ ಓದಿ: Budget 2025: ಬಾಡಿಗೆ ಮೇಲಿನ TDS ಕಡಿತ ಮಿತಿ 6 ಲಕ್ಷಕ್ಕೆ ಏರಿಕೆ

    ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸಲಾಗಿದೆ. ಅಂದರೆ ನಿಮ್ಮ ಒಟ್ಟಾರೆ ಆದಾಯದಲ್ಲಿ 75,000 ರೂ ಹಣವನ್ನು ಹೊರಗಿಡಬಹುದು. ಇದು ಹೊಸ ಆದಾಯ ತೆರಿಗೆ ಸ್ಲಾಬ್‌ ಬಳಸುವ ತೆರಿಗೆ ಪಾವತಿದಾರರಿಗೆ ಮಾತ್ರ ಅನ್ವಯವಾಗುತ್ತದೆ. ಹಳೆ ತೆರಿಗೆ ಸ್ಲ್ಯಾಬ್‌ನಲ್ಲಿ 50,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಇದ್ದು ಯಾವುದೇ ಬದಲಾವಣೆ ಮಾಡಿಲ್ಲ. ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ

    ಸ್ಟ್ಯಾಂಡರ್ಡ್ ಡಿಡಕ್ಷನ್ ಸಂಬಳದ ಆದಾಯದಿಂದ ಕಡಿತಗೊಳಿಸಲಾಗುವ ಸ್ಥಿರ ಮೊತ್ತವಾಗಿದ್ದು ಹೂಡಿಕೆ ಮಾಡಿದ್ದಕ್ಕೆ ಪುರಾವೆ ಇತ್ಯಾದಿ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ.

     

  • ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ

    ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ

    ನವದೆಹಲಿ: ವೇತನ ಪಡೆಯುವ ತೆರಿಗೆದಾರರಿಗೆ 12 ಲಕ್ಷ ರೂ.ವರೆಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಈಗ ತೆರಿಗೆದಾರರು ಹೊಂದಿರುವ ಎರಡನೇ ಮನೆಗೂ (Second Self-Occupied House) ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದ್ದಾರೆ.

    ಇಲ್ಲಿಯವರೆಗೆ ಒಂದು ಮನೆಗೆ ಮಾತ್ರ ತೆರಿಗೆ (Tax) ವಿನಾಯಿತಿ ಇತ್ತು. ಎರಡನೇ ಮನೆ ಹೊಂದಿದ್ದರೆ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಎರಡನೇ ಮನೆಗೂ ತೆರಿಗೆ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ ಸುದ್ದಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಉತ್ತೇಜನ – ಹೋಂಸ್ಟೇ ನಿರ್ಮಾಣಕ್ಕೆ ಮುದ್ರಾ ಲೋನ್‌ ವಿಸ್ತರಣೆ

    ಈ ಸೌಲಭ್ಯದಿಂದ ಎರಡು ಮನೆ ಹೊಂದಿರುವವರು ಒಂದನ್ನು ವಾಸಕ್ಕೆ ಮತ್ತೊಂದು ಆಗಾಗ್ಗೆ ಬಂದು ಹೋಗುವ ಪ್ರವಾಸದ ಮನೆಯಾಗಿ ಹೊಂದಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಬಂಪರ್‌ – 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ

    ಹೆಚ್ಚುವರಿಯಾಗಿ ಬಾಡಿಗೆಯ ಮೇಲಿನ ವಾರ್ಷಿಕ ಟಿಡಿಎಸ್ ಮೊತ್ತವನ್ನು 2.40 ಲಕ್ಷ ರೂ.ನಿಂದ 6 ಲಕ್ಷ ರೂ.ಗೆ ಏರಿಸಲಾಗುತ್ತದೆ.

     

  • ಮಂಡ್ಯ| ಎರಡು ತಿಂಗಳಿಂದ ಮೈಶುಗರ್ ನೌಕರರಿಗಿಲ್ಲ ಸಂಬಳ

    ಮಂಡ್ಯ| ಎರಡು ತಿಂಗಳಿಂದ ಮೈಶುಗರ್ ನೌಕರರಿಗಿಲ್ಲ ಸಂಬಳ

    – ವೇತನಕ್ಕಾಗಿ ಹೋರಾಟಕ್ಕಿಳಿದ ನೌಕರರು

    ಮಂಡ್ಯ: ಮೈಶುಗರ್ ಕಾರ್ಖಾನೆ (Mysugar Factory) ಸಕ್ಕರೆ ನಾಡು ಮಂಡ್ಯ ಜನರಿಗೆ ಪ್ರತಿಷ್ಠೆ ಸಂಕೇತ. ಯಾವುದೇ ಚುನಾವಣೆ ಎದುರಾಗಲಿ ರಾಜಕೀಯ ಪಕ್ಷಗಳು ಮೈಶುಗರ್ ಅಸ್ತ್ರ ಪ್ರಯೋಗ ಮಾಡೋದನ್ನು ಮಾತ್ರ ಮರೆಯೋದಿಲ್ಲ. ಕಳೆದ ಎರಡು ದಶಕದಿಂದ ರಾಜ್ಯ ಸರ್ಕಾರ ಕಾರ್ಖಾನೆ ಪುನಶ್ಚೇತನಕ್ಕೆಂದು ನೂರಾರು ಕೋಟಿ ಅನುದಾನ ನೀಡಿದೆ. ಆದರೆ ಇಂದಿಗೂ ರೋಗಗ್ರಸ್ತ ಹಣೆಪಟ್ಟಿಯಿಂದ ಹೊರ ಬಂದಿಲ್ಲ. ಒಂದಲ್ಲೊಂದು ಸಮಸ್ಯೆಗಳಿಂದಲೇ ಸುದ್ದಿಯಾಗುತ್ತಿದ್ದು, ಇದೀಗ ಕಾರ್ಖಾನೆಯ ನೌಕರರು ತಮ್ಮ ಸಂಬಳ ನೀಡುವಂತೆ ಆಗ್ರಹಿಸಿ ಬೀದಿಗೆ ಇಳಿದಿದ್ದಾರೆ.

    ಮೈಶುಗರ್ ಕಾರ್ಖಾನೆಯಲ್ಲಿ 250ಕ್ಕೂ ಹೆಚ್ಚು ನೌಕರರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಮಾತ್ರವಲ್ಲ ಬಿಹಾರ ಸೇರಿದಂತೆ ಹೊರ ರಾಜ್ಯದ ಕಾರ್ಮಿಕರೂ ಕಡಿಮೆ ಸಂಬಳಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ. ಈ ನೌಕರರಿಗೆ ಕಳೆದ ಎರಡು ತಿಂಗಳಿಂದ ವೇತನ ನೀಡಿಲ್ಲ. ಸಂಬಳ (Salary) ನೀಡುವಂತೆ ಹಲವು ಭಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಮೊದಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾರ್ಮಿಕರು ಇದೀಗ ದಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಆಕ್ರೋಶಗೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪಿ ಬಂಧನ

    ಇನ್ನು ಮೈಶುಗರ್ ವ್ಯಾಪ್ತಿಯ ಕಬ್ಬು ಸಂಪೂರ್ಣ ಖಾಲಿಯಾಗುವ ಮೊದಲೇ ಕಬ್ಬು ಅರೆಯುವ ಕಾರ್ಯ ಬಂದ್ ಮಾಡಿದ್ದರಿಂದ ಇತ್ತೀಚೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ನೌಕರರು ಆಡಳಿತ ಮಂಡಳಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಗುತ್ತಿಗೆ ಪಡೆದಿರುವ ಆರ್.ಬಿ.ಟೆಕ್ ಏಜೆನ್ಸಿ ಅಧಿಕಾರಿಗಳನ್ನು ಕೇಳಿದರೆ ಕಾರ್ಖಾನೆಯಿಂದ ಹಣ ಬಿಡುಗಡೆಯಾಗಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಮತ್ತೊಂದೆಡೆ ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೂಚನೆ ನೀಡಿದರೂ ಕೆಲವು ಅಧಿಕಾರಿಗಳು ಸಂಬಳದ ಹಣ ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಹಾಯುತಿ 2.0 ಸರ್ಕಾರ – ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಇಂದು ಪ್ರಮಾಣವಚನ

  • 6 ತಿಂಗಳಿನಿಂದ ಸಿಕ್ಕಿಲ್ಲ ವೇತನ – ಹಲವು ಇಂದಿರಾ ಕ್ಯಾಂಟೀನ್‌ಗಳಿಗೆ ಬಿತ್ತು ಬೀಗ!

    6 ತಿಂಗಳಿನಿಂದ ಸಿಕ್ಕಿಲ್ಲ ವೇತನ – ಹಲವು ಇಂದಿರಾ ಕ್ಯಾಂಟೀನ್‌ಗಳಿಗೆ ಬಿತ್ತು ಬೀಗ!

    ಬೆಂಗಳೂರು: ಸಿಬ್ಬಂದಿಗೆ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ನಗರದ ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ (Indira Canteen) ಊಟ ಸ್ಥಗಿತವಾಗಿದೆ. ಬಡವರ ಹಸಿವು ನೀಗಿಸುವ ಕೆಲ ಇಂದಿರಾ ಕ್ಯಾಂಟೀನ್‌ಗಳು ಮುಚ್ಚಿವೆ.

    ಬುಧವಾರದಿಂದ ಬೆಳಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಊಟ ಪೂರೈಕೆ ಸ್ಥಗಿತವಾಗಿದೆ. ಬಡವರ ಹಸಿವು ನೀಗಿಸುವ ಕೆಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಪೂರೈಕೆಯಾಗುತ್ತಿಲ್ಲ. ಇದರಿಂದ ಊಟ ಸಿಗದೇ ಜನ ಹಸಿದ ಹೊಟ್ಟೆಯಲ್ಲಿಯೇ ವಾಪಸ್ ಆಗುತ್ತಿದ್ದಾರೆ. ಕ್ಯಾಂಟೀನ್ ಸಿಬ್ಬಂದಿಗೆ ಆರು ತಿಂಗಳ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇದರಿಂದ ಊಟ ಕೂಡ ಪೂರೈಕೆಯಾಗುತ್ತಿಲ್ಲ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಾದಪ್ಪ – 2.43 ಕೋಟಿ ರೂ. ಕಾಣಿಕೆ ಹಣ ಸಂಗ್ರಹ

    ಪಶ್ಚಿಮ ವಲಯದ ಮಲ್ಲೇಶ್ವರಂ (Malleshwaram), ನಂದಿನಿಲೇಔಟ್ ಇಂದಿರಾ ಕಿಚನ್‌ಗಳ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟೀನ್‌ಗಳಿಗೆ ಊಟ ಪೂರೈಕೆಯಾಗುತ್ತಿಲ್ಲ. ನೂರಾರು ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ ನೀಡಿಲ್ಲ. ಈ ಕಿಚನ್‌ಗಳನ್ನು ಚೆಫ್ ಟಾಕ್ ಕಂಪನಿ ನಿರ್ವಹಣೆ ಮಾಡುತ್ತಿದೆ. ಈ ಕಂಪನಿಗೆ ಬಿಬಿಎಂಪಿ ಹಣ ಪಾವತಿ ಮಾಡಲಿಲ್ಲ. ಪಾಲಿಕೆ, ಚೆಫ್ ಟಾಕ್ ಕಂಪನಿಗೆ ಹಣ ನೀಡದ ಕಾರಣ ಸಿಬ್ಬಂದಿಗೂ ಸಂಬಳ ಸಿಗದೇ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಮನೋಹರ್‌ ತಹಶೀಲ್ದಾರ್‌ ವಿಧಿವಶ

    ನಗರದ ಯಾವ್ಯಾವ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ?
    ಮಂತ್ರಿ ಮಾಲ್ ರಸ್ತೆ, ಸುಭಾಶ್ ನಗರ, ಮೆಜೆಸ್ಟಿಕ್ (Mejestic) ಮೆಟ್ರೋ ನಿಲ್ದಾಣ ಸಮೀಪ, ಗಾಂಧಿನಗರ, ಅರಮನೆ ನಗರ, ಸರ್ಕಲ್ ಮಾರಮ್ಮ ದೇವಸ್ಥಾನ ಯಶವಂತಪುರ ರಸ್ತೆ, ಮಲ್ಲೇಶ್ವರಂ ಇಂದಿರಾ ಕಿಚನ್‌ಗಳಿಗೆ ಬೀಗ ಬಿದ್ದಿದೆ. ಇದನ್ನೂ ಓದಿ: ಧಾರವಾಡದಲ್ಲಿ ತಾಯಂದಿರಿಂದಲೇ ಮಕ್ಕಳ ಕಿಡ್ನ್ಯಾಪ್‌ – ತಾಯಂದಿರು, ಅವರ ಪ್ರೇಮಿಗಳು ಅರೆಸ್ಟ್‌

    ಉತ್ತರ ಪ್ರದೇಶದ (Uttar Pradesh )ಕೆಲ ಯುವಕರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೂ ವೇತನ ಆಗಿಲ್ಲ. ಮನೆ ನಿರ್ವಹಣೆ ಕಷ್ಟ ಆಗಿದೆ. ಸಂಬಳ ಕೊಟ್ಟರೆ ನಾವು ಊರಿಗೆ ಹೋಗುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಡವರ ಹಸಿವು ನೀಗಿಸಬೇಕಿದ್ದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈಗ ಊಟ ಸಿಗದೇ ಜನ ಪರದಾಡುತ್ತಿರುವುದು ವಿಪರ್ಯಾಸ. ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನ ಸ್ಥಗಿತಗೊಳಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಇದನ್ನೂ ಓದಿ: ತಾಯಿಯಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಮರಿ ಕರಡಿ ಸಾವು

  • ‘108’ ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್

    ‘108’ ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್

    – ಸೆಪ್ಟೆಂಬರ್‌ವರೆಗಿನ ವೇತನವನ್ನ ಏಜನ್ಸಿಯವರು ಪಾವತಿಸಿದ್ದಾರೆ ಎಂದ ಸಚಿವ

    ಬೆಂಗಳೂರು: 108 ಆರೋಗ್ಯ ಕವಚದ ಅಂಬುಲೆನ್ಸ್ (108 Ambulence) ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ (Salary) ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಂಬುಲೆನ್ಸ್ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನ ಕಾಲ ಕಾಲಕ್ಕೆ ಸರಿಯಾಗಿ ಸಂಬಂಧಿಸಿದ ಏಜನ್ಸಿಯವರಿಗೆ ಸರ್ಕಾರ ನೀಡುತ್ತಾ ಬಂದಿದೆ. ಚಾಲಕರ ವೇತನ ಬಾಕಿ ಉಳಿಸಿಕೊಳ್ಳದಂತೆ ಇ.ಎಂ.ಆರ್ ಏಜನ್ಸಿಯವರಿಗೂ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳ ವೇತನವನ್ನ ಏಜನ್ಸಿಯವರು ಚಾಲಕರಿಗೆ ಪಾವತಿ ಮಾಡಿದ್ದಾರೆ. ಅಕ್ಟೋಬರ್ ತಿಂಗಳ ವೇತನ ಪಾವತಿ ಕೂಡ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ಪಹಣಿಯಲ್ಲಿ ‘ವಕ್ಫ್’ ಬೋರ್ಡ್ ಹೆಸರು ರದ್ದು- ನಿರಾಳರಾದ ರೈತರು

    ಸಾಂದರ್ಭಿಕ ಚಿತ್ರ

    ವಿಪಕ್ಷ ನಾಯಕರಾದ ಆರ್. ಅಶೋಕ್ ಅರೆಬರೆ ಮಾಹಿತಿ ಪಡೆದು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಬ್ಬ ವಿಪಕ್ಷ ನಾಯಕರಾಗಿ ವಾಸ್ತವಾಂಶಗಳನ್ನ ಅರಿತು ಮಾತನಾಡಬೇಕು. 108 ಸಮಸ್ಯೆ ಆರಂಭವಾಗಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಏಜನ್ಸಿ ಹಾಗೂ ಚಾಲಕರ ನಡುವಿನ ಸಮಸ್ಯೆಯನ್ನು ಇಲಾಖೆ ಮಧ್ಯಸ್ಥಿಕೆ ವಹಿಸಿ ಸರಿಪಡಿಸುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 108 ವ್ಯವಸ್ಥೆಯಲ್ಲಿ ಒಂದಿಷ್ಟು ಲೋಪದೋಷಗಳು ಆಗಿರುವುದು ನಿಜ. 108 ಸಿಬ್ಬಂದಿಗಳಿಗೆ ಕನಿಷ್ಠ ವೇತನ ಜಾರಿಗೊಳಿಸಿದ್ದಲ್ಲದೇ ಸರ್ಕಾರದ ಅನುಮತಿ ಇಲ್ಲದೇ ನಿಯಮಬಾಹಿರವಾಗಿ 45% ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಆನೇಕಲ್| ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು – ಚಾಲಕ ಪಾರು

    ಇದೀಗ 108 ಸಿಬ್ಬಂದಿ 45% ರಷ್ಟು ವೇತನ ಹೆಚ್ಚಳ ಮಾಡಿರುವುದನ್ನು ಕಡಿತಗೊಳಿಸದಂತೆ ಬೇಡಿಕೆ ಇಡುತ್ತಿದ್ದಾರೆ. ನಮ್ಮ ಸರ್ಕಾರ ನಿಯಮಾನುಸಾರ ಕನಿಷ್ಠ ವೇತನ ನೀಡಲು ಬದ್ಧವಾಗಿದ್ದು, ಅದರಂತೆ ಅನುದಾನವನ್ನ ನೀಡುತ್ತಾ ಬಂದಿದೆ. ಪ್ರತಿಯೊಬ್ಬ ಅಂಬುಲೆನ್ಸ್ ಚಾಲಕರಿಗೆ 35 ಸಾವಿರಕ್ಕೂ ಹೆಚ್ವು ವೇತನ ದೊರೆಯುತ್ತಿದೆ. ಇದರ ಮೇಲೂ ಮೂಲ ವೇತನದಲ್ಲಿ 45% ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಿಬ್ಬಂದಿ ಬೇಡಿಕೆ ಇಟ್ಟಿದ್ದು, ನಿಯಮಬಾಹಿರವಾಗಿ ಈ ಕ್ರಮ ಕೈಗೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ನುಡಿದರು. ಇದನ್ನೂ ಓದಿ: ಬಿಡಿಎ ಭರ್ಜರಿ ಬೇಟೆ – ನಾಗರಬಾವಿ ಬಡಾವಣೆಯಲ್ಲಿ 60 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಸರ್ಕಾರದಲ್ಲಿ ಯಾವುದೇ ಹಣಕಾಸಿನ ತೊಂದರೆ ಇಲ್ಲ. 2024-25ನೇ ಸಾಲಿನಲ್ಲಿ 108 ಆರೋಗ್ಯ ಕವಚ ಯೋಜನೆಗೆ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ 260.33 ಕೋಟಿ ರೂ. ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದ್ದು, ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ವಾರ್ಷಿಕ 162.40 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಆರೋಗ್ಯ ಇಲಾಖೆ ಹಾಗೂ ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸಂಸ್ಥೆಯವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ಪ್ರತಿ ತ್ರೈಮಾಸಿಕಕ್ಕೆ 40.60 ಕೋಟಿಗಳಂತೆ ವಾರ್ಷಿಕ 162.40 ಕೋಟಿ ರೂ. ಅನುದಾನವನ್ನು ಕಾಲ ಕಾಲಕ್ಕೆ ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಾವೇರಿ | ಯತ್ನಳ್ಳಿ ಬಳಿ 10 ಬ್ಯಾಲೇಟ್ ಬಾಕ್ಸ್ ಪತ್ತೆ!

    ಈ ಬಗ್ಗೆ 108 ಸಿಬ್ಬಂದಿಯನ್ನ ಕರೆದು ಚರ್ಚಿಸಿ ಮನವರಿಕೆ ಮಾಡಿಕೊಡಲಾಗಿದೆ. ನ್ಯಾಯಯುತ ಕನಿಷ್ಠ ವೇತನ ಸರ್ಕಾರ ನೀಡುತ್ತಿದ್ದು, ಸರ್ಕಾರದಲ್ಲಿ ಯಾವುದೇ ಹಣಕಾಸಿನ ಕೊರತೆಯಿಲ್ಲ. ಹಿಂದಿನ ಸರ್ಕಾರವಿದ್ದ ವೇಳೆ ವ್ಯವಸ್ಥೆಯಲ್ಲಾದ ಲೋಪವನ್ನು ನಮ್ಮ ಸರ್ಕಾರ ಸರಿಪಡಿಸುತ್ತಿದೆ. ಟೆಂಡರ್‌ಗಳನ್ನ ಕರೆಯದೇ ಜಿವಿಕೆ ಇಎಂಆರ್ ಸಂಸ್ಥೆಯೊಂದಿಗೆ ಒಡಂಬಡಿಕೆಯ ಮೂಲಕವೇ 108 ವ್ಯವಸ್ಥೆಯನ್ನ ಮುಂದುವರಿಸಿಕೊಂಡು ಬರಲಾಗಿದೆ. ನಮ್ಮ ಸರ್ಕಾರ ಬಂದ ಬಳಿಕ ನಿಯಮಾನುಸಾರ ಟೆಂಡರ್ ಕರೆಯಲು ಕ್ರಮ ಕೈಗೊಳ್ಳುತ್ತಿದೆ. ವ್ಯವಸ್ಥೆಯಲ್ಲಾದ ಲೋಪಗಳನ್ನ ಸರಿಪಡಿಸುತ್ತಿರುವಾಗ ಸಿಬ್ಬಂದಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮುಖಂಡರು, ಕಾರ್ಯಕರ್ತರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ, ನಿಮ್ಮ ಜೊತೆ ಶಾಶ್ವತವಾಗಿ ಇರ್ತೇನೆ: ನಿಖಿಲ್ ಭರವಸೆ

  • ಹಾವೇರಿ| 3 ತಿಂಗಳಿನಿಂದ ಪಾವತಿಯಾಗಿಲ್ಲ ಅಂಗನವಾಡಿ ಟೀಚರ್‌ಗಳ ಸಂಬಳ

    ಹಾವೇರಿ| 3 ತಿಂಗಳಿನಿಂದ ಪಾವತಿಯಾಗಿಲ್ಲ ಅಂಗನವಾಡಿ ಟೀಚರ್‌ಗಳ ಸಂಬಳ

    – ಗೌರವ ಧನ, ಮೊಟ್ಟೆ ಬಾಕಿ ಪಾವತಿಸದಿದ್ದರೆ ಅಂಗನವಾಡಿ ಬಂದ್

    ಹಾವೇರಿ: ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಅಂಗನವಾಡಿ (Anganwadi) ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ವೇತನವೇ ಪಾವತಿಯಾಗಿಲ್ಲ. ಸರ್ಕಾರ ಸುಮಾರು 1.30 ಕೋಟಿ ರೂ. ಮೊಟ್ಟೆ ಖರೀದಿ ಬಾಕಿ ಹಣ ಉಳಿಸಿಕೊಂಡಿದೆ. ಇತ್ತ ಮೊಟ್ಟೆ ಖರೀದಿ ಮಾಡಿದ ಬಾಕಿಯನ್ನೂ ಸರ್ಕಾರ ಕೊಡದೇ ಸತಾಯಿಸುತ್ತಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಹೈರಾಣಾಗಿ ಹೋಗಿದ್ದಾರೆ.

    ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಕೊಡುವ ಅಲ್ಪ ವೇತನವೂ ಬಾರದೇ ಕಾರ್ಯಕರ್ತೆಯರು, ಸಹಾಯಕರು ಹೈರಾಣಾಗಿದ್ದಾರೆ. ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ವೃದ್ಧರ ಆರೈಕೆ ಮುಂತಾದವುಗಳ ನಿರ್ವಹಣೆಗೆ ಇದೇ ವೇತನ ನಂಬಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ವಿಳಂಬ ನೀತಿಯಿಂದ ನಲುಗಿ ಹೋಗಿದ್ದಾರೆ. ಹಾವೇರಿ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಗೌರವ ಧನ, ಮೊಟ್ಟೆ ಬಾಕಿ ಪಾವತಿಸದಿದ್ದರೆ ಅಂಗನವಾಡಿ ಬಂದ್ ಎಚ್ಚರಿಕೆ ನೀಡಲಾಗಿದೆ. ಮಕ್ಕಳಿಗೆ ಮೊಟ್ಟೆ ವಿತರಣೆ ಸ್ಥಗಿತಗೊಳಿಸಬೇಕಾಗುತ್ತೆ ಎಂದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಶನ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್‌ನಲ್ಲಿ ನಿಲ್ಲುವ ಕಾಲ ಬರುತ್ತೆ – ಸಿಎಂ ವಿರುದ್ಧ ರೇವಣ್ಣ ಕಿಡಿ

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ (Lakshmi Hebbalkar) ಪತ್ರ ಬರೆದ ಎಐಟಿಯುಸಿ, ಅಂಗನವಾಡಿ ಬಂದ್‌ಗೆ ಎಚ್ಚರಿಕೆ ನೀಡಿದೆ. ಅ.5 ರಂದೇ ಪತ್ರ ಬರೆಯಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನವೂ ಇಲ್ಲ, ಮೊಟ್ಟೆ ಹಣ ಬಾಕಿನೂ ಪಾವತಿಸಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ 2 ತಿಂಗಳಿಂದ ಮೊಟ್ಟೆ ಹಣವನ್ನೇ ನೀಡಿಲ್ಲ. ಸರ್ಕಾರ ಅನುದಾನದ ಕೊರತೆ ಹಿನ್ನೆಲೆಯಲ್ಲಿ 2 ತಿಂಗಳಿಂದ ಮೊಟ್ಟೆ ಹಣ ನೀಡಲಿಲ್ಲ. ಸ್ವಂತ ಹಣದಲ್ಲಿ ಮೊಟ್ಟೆ ಖರೀದಿಸಿ ಮಕ್ಕಳು, ಗರ್ಭಿಣಿ ಬಾಣಂತಿಯರಿಗೆ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ವಿನಯ್ ಕುಲಕರ್ಣಿ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರ ನಡೆದಿದೆ: ಏಗನಗೌಡರ

    ಹಾವೇರಿ ಜಿಲ್ಲೆಯಲ್ಲಿ 1.55 ಲಕ್ಷ ಫಲಾನುಭವಿಗಳಿದ್ದಾರೆ. 3 ರಿಂದ 6 ವರ್ಷದ ಮಕ್ಕಳು, ಗರ್ಭಿಣಿ ಮಹಿಳೆಯರು, ಬಾಣಂತಿಯರು ಸೇರಿ 1.55 ಲಕ್ಷ ಫಲಾನುಭವಿಗಳಿದ್ದಾರೆ. ತಿಂಗಳಿಗೆ ಮೊಟ್ಟೆ ಖರೀದಿಸಲು ಸುಮಾರು 66 ಲಕ್ಷ ರೂ ಅನುದಾನ ಬೇಕು. ಈಗ 2 ತಿಂಗಳಿಂದ ಮೊಟ್ಟೆ ಬಾಕಿ ಬಂದೇ ಇಲ್ಲ. ಹಾವೇರಿ ಜಿಲ್ಲೆಯಲ್ಲೇ ಸುಮಾರು 1.30 ಕೋಟಿ ರೂ. ಮೌಲ್ಯದ ಮೊಟ್ಟೆ ಖರೀದಿ ಬಾಕಿ ನೀಡಬೇಕಿದೆ. ಸರ್ಕಾರ ಕೂಡಲೇ ಬಿಡಗಡೆ ಮಾಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: Valmiki Scam | ನಾಗೇಂದ್ರಗೆ ಬಿಗ್‌ ರಿಲೀಫ್‌ – ಜಾಮೀನು ಮಂಜೂರು

    ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರಿಗೆ ಗೌರವ ಧನವೂ ಸಿಗಲಿಲ್ಲ. ಹಾವೇರಿ ಜಿಲ್ಲೆಯಲ್ಲಿ 1921 ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. 1835 ಅಂಗನವಾಡಿ ಸಹಾಯಕರಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 11,500 ರೂ. ಗೌರವ ಧನ ನೀಡಲಾಗ್ತಿದೆ. ಅಂಗನವಾಡಿ ಸಹಾಯಕಿಯರಿಗೆ ತಿಂಗಳಿಗೆ 5000 ರೂ. ಗೌರವ ಧನ ನೀಡಲಾಗುತ್ತಿದೆ. ಮೂರು ತಿಂಗಳ ಗೌರವ ಧನ ಬಾಕಿ ಇದೆ. ಸರ್ಕಾರದ ಗಮನಕ್ಕೆ ತರಲಾಗಿದೆ. ಕೂಡಲೇ ಒಂದು ವಾರದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಯ ಉಪನಿರ್ದೇಶಕರು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ದೆಹಲಿ ಸಿಎಂ ಅತಿಶಿ

  • ಗ್ಯಾರಂಟಿ ಹೊಡೆತಕ್ಕೆ ಹಿಮಾಚಲ ತತ್ತರ – ಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ಸಂಬಳ ಕಟ್‌

    ಗ್ಯಾರಂಟಿ ಹೊಡೆತಕ್ಕೆ ಹಿಮಾಚಲ ತತ್ತರ – ಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ಸಂಬಳ ಕಟ್‌

    – 86,589 ಕೋಟಿ ರೂ. ಸಾಲದ ಹೊರೆ

    ಶಿಮ್ಲಾ: ರಾಜ್ಯವು (ಹಿಮಾಚಲ ಪ್ರದೇಶ) ಆರ್ಥಿಕ ಬಿಕ್ಕಟ್ಟಿಗೆ (Himachal faces financial crisis) ಒಳಗಾಗಿರುವ ಕಾರಣ ಎಲ್ಲಾ ರಾಜ್ಯ ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು (CPS) ಮತ್ತು ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ವರೆಗೆ ಯಾವುದೇ ವೇತನ ಹಾಗೂ ಭತ್ಯೆ ನೀಡಲಾಗುವುದಿಲ್ಲ ಎಂದು ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್‌ ಸಿಂಗ್ ಸುಖು (Sukhvinder Singh Sukhu) ಗುರುವಾರ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ.

    ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರ, ಮುಂದಿನ ದಿನಗಳಲ್ಲಿ ರಾಜ್ಯವು ಉತ್ತಮ ಸುಧಾರಣೆ ಕಾಣಬೇಕಿದೆ. ಆದ್ದರಿಂದ ಮುಂದಿನ 2 ತಿಂಗಳು ಯಾವುದೇ ಸಂಬಳ, ಟಿಎ, ಡಿಎ ತೆಗೆದುಕೊಳ್ಳುವುದಿಲ್ಲ ಅಂತ ಸಂಪುಟದ ಎಲ್ಲಾ ಸದಸ್ಯರು ನಿರ್ಧಸಿರುವುದಾಗಿ ಸಿಎಂ ತಿಳಿಸಿದ್ದಾರೆ. ಅಲ್ಲದೇ ವೇತನ ಉಳಿತಾಯವು ಒಂದು ಸಣ್ಣ ಮೊತ್ತವಾಗಿದೆ. ಇದರ ಹೊರತಾಗಿ ಎಲ್ಲಾ ಶಾಸಕರು ಸಹ ಕೊಡುಗೆ ನೀಡಬೇಕೆಂದು ನಾನು ವಿನಂತಿಸುತ್ತೇನೆ ಎಂದೂ ಸಹ ಅವರು ಮನವಿ ಮಾಡಿದ್ದಾರೆ.

    ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದು ಏಕೆ?
    ಹಿಮಾಚಲ ಪ್ರದೇಶದಲ್ಲಿ ಸರ್ಕಾರದ ಅಸಮರ್ಪಕ ಆಡಳಿತವೇ ಕಾರಣ ಎಂದು ಹೇಳಲಾಗಿದೆ. ಹಳೆಯ ಪಿಂಚಣಿ ಯೋಜನೆ (OPS), ಮಹಿಳೆಯರಿಗೆ 1,500 ರೂ. ಪಾವತಿಸುವ ಗ್ಯಾರಂಟಿ ಯೋಜನೆ, ಉಚಿತ ವಿದ್ಯುತ್ ಈ ಯೋಜನೆಗಳಿಂದಾಗಿ 86,589 ಕೋಟಿ ರೂ. ಸಾಲದ ಹೊರೆಯಾಗಿದೆ ಎಂದು ವರದಿಯಾಗಿದೆ.

    ಹೌದು. ರಾಜ್ಯ ಸರ್ಕಾರವು ಮಹಿಳೆಯರಿಗೆ 1,500 ರೂ. ಪಾವತಿಸುವ ಗ್ಯಾರಂಟಿ ಘೋಷಣೆ ಮಾಡಿದೆ. 5 ಲಕ್ಷಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳಿದ್ದು, ಈ ಯೋಜನೆಗೆ ವಾರ್ಷಿಕ 800 ಕೋಟಿ ರೂ. ವೆಚ್ಚ ತಗುಲಲಿದೆ. ಇನ್ನೂ ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆಯಿಂದ ಪ್ರತಿವರ್ಷ ಸರ್ಕಾರಕ್ಕೆ 1,000 ಕೋಟಿ ರೂ., ರಾಜ್ಯ ಸರ್ಕಾರ ನೌಕರರ ವೇತನಕ್ಕೆ 20,639 ಕೋಟಿ ಹೊಡೆಯಾಲಿದೆ. ಇನ್ನೂ ರಾಜ್ಯದಲ್ಲಿ 1,89,466 ಪಿಂಚಣಿದಾರರಿದ್ದು, 2030-31ರ ವೇಳೆಗೆ ಇದು 2,38,827ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಇದರಿಂದ ವಾರ್ಷಿಕ ಪಿಂಚಣಿ ಹೊರೆ ಸುಮಾರು 20,000 ಕೋಟಿ ರೂ. ಹೆಚ್ಚಾಗಲಿದೆ ಎನ್ನಲಾಗಿದೆ.

    ಇದರೊಂದಿಗೆ 680 ಕೋಟಿ ರೂ.ಗಳ ರಾಜೀವ್ ಗಾಂಧಿ ಸ್ವಯಂ ಉದ್ಯೋಗ ಪ್ರಾರಂಭ ಯೋಜನೆಯಡಿ ಇ-ಟ್ಯಾಕ್ಸಿ ಯೋಜನೆ ಆರಂಭಿಸಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಬೊಕ್ಕಸ ಖಾಲಿಯಾಗುತ್ತಿದ್ದು, ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜನಪ್ರತಿನಿಧಿಗಳೇ ಒತ್ತಾಯಿಸಿದೆ. ಹಾಗಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

    ಈ ವರ್ಷ ಜುಲೈನಲ್ಲಿ ರಾಜ್ಯ ಸರ್ಕಾರ ತೆರಿಗೆದಾರರಿಗೆ ವಿದ್ಯುತ್ ಸಬ್ಸಿಡಿಯನ್ನು ಹಿಂಪಡೆದು, ಬಿಪಿಎಲ್, ಐಆರ್‌ಡಿಪಿ ಮತ್ತು ದುರ್ಬಲ ವರ್ಗದ ಜನರಿಗೆ ಮಾತ್ರ ಈ ಸಬ್ಸಿಡಿ ನಿಗದಿಪಡಿಸಿತು. 2023-24ರಲ್ಲಿ ವಿದ್ಯುತ್‌ ಹಣ ಪಾವತಿ ದುಬಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಈಗಾಗಲೇ 86,589 ಕೋಟಿ ರೂ. ಸಾಲದ ಹೊರೆಯಲ್ಲಿ ಸಿಲುಕಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಸಾಲದ ಪ್ರಮಾಣ 1 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ಆರ್ಥಿಕ ತಜ್ಞರು ಉಲ್ಲೇಖಿಸಿದ್ದಾರೆ.

    ಇನ್ನೂ ಮಂತ್ರಿಗಳಿಗೆ ವೇತನ ಕಡಿತಗೊಳಿಸುವ ಸರ್ಕಾರದ ನಿರ್ಧಾರವನ್ನು ವಿಪಕ್ಷಗಳು ಟೀಕಿಸಿವೆ.

  • ಸಿಬ್ಬಂದಿಗೆ ಸಂಬಳ ನೀಡಲು ಬೆಂಗ್ಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟ ಬೈಜೂಸ್ ಸಂಸ್ಥಾಪಕ!

    ಸಿಬ್ಬಂದಿಗೆ ಸಂಬಳ ನೀಡಲು ಬೆಂಗ್ಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟ ಬೈಜೂಸ್ ಸಂಸ್ಥಾಪಕ!

    ಬೆಂಗಳೂರು: ಶಿಕ್ಷಣ ಕ್ಷೇತ್ರದ ಪ್ರಮುಖ ಸ್ಟಾರ್ಟಪ್ ಕಂಪನಿ ಬೈಜೂಸ್‍  ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ವಿವಾದ, ಸಂಕಷ್ಟಕ್ಕೆ ಸಿಲುಕಿರುವ ಈ ಕಂಪನಿ ತನ್ನ ಉದ್ಯೋಗಿಗಳಿಗೆ ವೇತನವನ್ನು ಪಾವತಿ ಮಾಡಿರಲಿಲ್ಲ. ಆದರೆ ಇದೀಗ ತಮ್ಮ ಮನೆಯನ್ನೇ ಅಡವಿಟ್ಟು ಸಂಬಳ ನೀಡುವ ಮೂಲಕ ಭಾರೀ ಸುದ್ದಿಯಾಗಿದೆ.

    ಹೌದು. ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್ (Byju’s Founder Byju Raveendran), ತಮ್ಮ ಬೆಂಗಳೂರಿನ ಮನೆಯನ್ನೇ ಅಡವಿಟ್ಟು  ಸೋಮವಾರ ಒಂದು ಸಾವಿರ ಸಿಬ್ಬಂದಿಗೆ ಬಾಕಿ ವೇತನ ಪಾವತಿ ಮಾಡಿದ್ದಾರೆ ಎಂಬ ಸಂಗತಿಯೊಂದು ಇದೀಗ ಬಯಲಾಗಿದೆ.

    ಬೈಜು ರವೀಂದ್ರನ್ ಅವರ ಕುಟುಂಬವು ಬೆಂಗಳೂರಿನಲ್ಲಿ ಎರಡು ಮನೆಗಳು ಹಾಗೂ ನಿರ್ಮಾಣ ಹಂತದಲ್ಲಿರುವ ವಿಲ್ಲಾ ಒಂದು ಇದೆ. ಇವುಗಳನ್ನು ಅಡವಿಟ್ಟು ಸುಮಾರು 100 ಕೋಟಿ ರೂ. ಸಾಲ ಪಡೆದಿದ್ದಾರೆ. ಈ ಸಾಲದಿಂದ ತಮ್ಮ ಉದ್ಯೋಗಿಗಳಿಗೆ ನವೆಂಬರ್ ತಿಂಗಳ ವೇತನವನ್ನು ನೀಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ಸೋಮವಾರದಂದು ಮಾತೃ ಸಂಸ್ಥೆಯಾದ ಥಿಂಕ್ & ಲರ್ನ್ ಪ್ರೈವೇಟ್‍ನ 15,000 ಉದ್ಯೋಗಿಗಳಿಗೆ ಸಂಬಳ (Employees Salary) ಪಾವತಿಸಲು ಸ್ಟಾರ್ಟಪ್ ತನ್ನಲ್ಲಿರುವ ಹಣವನ್ನು ಬಳಸಿಕೊಂಡಿದ್ದಾರೆ. ಇನ್ನು ಕಡಿಮೆಯಾದ ಮೊತ್ತಕ್ಕೆ ಈ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೈಜೂಸ್‌ ಸಂಸ್ಥಾಪಕ ರವೀಂದ್ರನ್ ಮೇಲೆ ಇಡಿ ದಾಳಿ

    ಸಿಬ್ಬಂದಿಯ ಸಂಬಳ ವಿಳಂಬಕ್ಕೆ ಏಕಾಏಕಿ ಉಂಟಾದ ತಾಂತ್ರಿಕ ದೋಷವೆಂದು ಬೈಜೂಸ್ ಕಾರಣ ನೀಡಿತ್ತು. ಅಲ್ಲದೆ ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಸ್ಪಷ್ಟನೆ ನೀಡಿತ್ತು. ಡಿಸೆಂಬರ್ 4ರ ಸೋಮವಾರದೊಳಗೆ ಸಂತ್ರಸ್ತ ಉದ್ಯೋಗಿಗಳ ವೇತನವನ್ನು ಅವರ ಖಾತೆಗಳಿಗೆ ಜಮೆ ಮಾಡುವ ಭರವಸೆಯನ್ನು ನೀಡಿತ್ತು. ಅಂತೆಯೇ ಇದೀಗ ರವೀಂದ್ರನ್ ಅವರು ತಮ್ಮ ಮನೆಯನ್ನೇ ಅಡವಿಟ್ಟು ಉದ್ಯೋಗಿಗಳ ವೇತನ ಪಾವತಿ ಮಾಡಿದ್ದಾರೆ.

  • ಆರ್-ಕೆ ಡಿಸಿಸಿ ಬ್ಯಾಂಕ್ ನೌಕರರಿಗೆ ಕಿರುಕುಳ? – ಸಕಾರಣ ನೀಡದೇ 30 ನೌಕರರ ವೇತನ ಸ್ಥಗಿತ

    ಆರ್-ಕೆ ಡಿಸಿಸಿ ಬ್ಯಾಂಕ್ ನೌಕರರಿಗೆ ಕಿರುಕುಳ? – ಸಕಾರಣ ನೀಡದೇ 30 ನೌಕರರ ವೇತನ ಸ್ಥಗಿತ

    – ವಾರ್ಷಿಕ 6 ಕೋಟಿ ರೂ. ಲಾಭ ಹೊಂದಿರೋ ಹಣಕಾಸು ಸಂಸ್ಥೆ

    ಕೊಪ್ಪಳ: ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ನಲ್ಲಿ ಇದೂ ಒಂದು. ವಾರ್ಷಿಕ ಬರೋಬ್ಬರಿ 6 ಕೋಟಿ ನಿವ್ವಳ ಲಾಭ ಹೊಂದಿರುವ ಹೆಗ್ಗಳಿಕೆಯೂ ಇದೆ. ಆದರೆ, ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿಗೆ ವರ್ಷಪೂರ್ತಿ ವೇತನ ನೀಡಿಲ್ಲ.

    ರಾಯಚೂರು- ಕೊಪ್ಪಳ ಕೇಂದ್ರ ಸಹಕಾರಿ ಬ್ಯಾಂಕ್ (R-K DCC) ಆಡಳಿತ ಮಂಡಳಿ ಸರ್ವಾಧಿಕಾರಿ ಧೋರಣೆಗೆ ನೌಕರರು ಕಂಗಾಲಾಗಿದ್ದಾರೆ. ತಮ್ಮ ಅಣತಿಯಂತೆ ನಡೆಯದ ನೌಕರರನ್ನು ಇಲ್ಲ ಸಲ್ಲದ ನೆಪ ಮುಂದಿಟ್ಟು, ಮಾನಸಿಕ ಹಿಂಸೆ ನೀಡಲಾಗುತ್ತದೆ. ತಪ್ಪು ಮಾಡಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳುವ ಬದಲಿಗೆ ವರ್ಷಗಟ್ಟಲೆ ವೇತನ (Salary) ನೀಡದೇ ಕಿರುಕುಳ ನೀಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದ್ದು, ಆಡಳಿತ ಮಂಡಳಿ ನಡೆಯಿಂದ ಬೇಸತ್ತ ನೌಕರನೊಬ್ಬ ನ್ಯಾಯ ಕೊಡಿಸಲು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಅವೈಜ್ಞಾನಿಕ ವಾರಬಂದಿ ಪದ್ಧತಿ ರದ್ದು ಮಾಡಿ ರೈತರ ಹಿತ ಕಾಪಾಡಬೇಕು: ರಾಜೂ ಗೌಡ

    ವೇತನ ಸ್ಥಗಿತ:
    ರಾಯಚೂರಿನಲ್ಲಿ (Raichur) ಕೇಂದ್ರ ಕಚೇರಿ ಹೊಂದಿರುವ ಆರ್-ಕೆ ಡಿಸಿಸಿ ಬ್ಯಾಂಕ್, ಕೊಪ್ಪಳ- ರಾಯಚೂರು ಜಿಲ್ಲೆಯ ವ್ಯಾಪ್ತಿ ಒಳಗೊಂಡಿದೆ. ಎರಡೂ ಜಿಲ್ಲೆ ಸೇರಿ ಒಟ್ಟು 27 ಶಾಖೆ ಹೊಂದಿದ್ದು, 168 ಖಾಯಂ ನೌಕರರು ಮತ್ತು 22 ತಾತ್ಕಾಲಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಶಾಖಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಶಿವಪುತ್ರಪ್ಪ ಹಡಪದ ಎಂಬವರಿಗೆ ಕಳೆದ 17 ತಿಂಗಳಿನಿಂದ ವೇತನ ನೀಡಿಲ್ಲ. ಶಿವಪುತ್ರಪ್ಪ ಏನು ತಪ್ಪು ಮಾಡಿದ್ದಾನೆ ಎಂಬುದನ್ನೂ ಆಡಳಿತ ಮಂಡಳಿ ಆತನಿಗೆ ಹೇಳಿಲ್ಲ. ಇದರಿಂದ ಬೇಸತ್ತ ಶಿವಪುತ್ರಪ್ಪ ನ್ಯಾಯಕ್ಕಾಗಿ ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಮನೆಯ ಎರಡನೇ ಮಹಡಿಯಿಂದ ಬಿದ್ದು ಗೃಹಿಣಿ ಅನುಮಾನಾಸ್ಪದ ಸಾವು – ಪತಿ ಪರಾರಿ

    ಶಿವಪುತ್ರಪ್ಪ ಅಷ್ಟೇ ಅಲ್ಲದೇ ಸುಮಾರು 8 ಮಹಿಳಾ ಸಿಬ್ಬಂದಿ ಸೇರಿ ಸುಮಾರು 30ಕ್ಕೂ ಹೆಚ್ಚು ಬ್ಯಾಂಕ್ ನೌಕರರಿಗೆ ಇದೇ ರೀತಿ ವೇತನ ಸ್ಥಗಿತ ಮಾಡಿದ್ದಾರೆ. ಅಧ್ಯಕ್ಷರು ಮತ್ತು ಸಿಇಒ (CEO) ಅಣತಿಯಂತೆ ನಡೆದುಕೊಂಡಿಲ್ಲ. ಅವರು ಹೇಳಿದವರಿಗೆ ಕೇಳಿದಷ್ಟು ಸಾಲ ಕೊಟ್ಟಿಲ್ಲ ಎಂಬ ಕಾರಣಕ್ಕೆ ಇಲ್ಲಸಲ್ಲದ ಕಾರಣ ಮುಂದಿಟ್ಟು, ವೇತನ ಸ್ಥಗಿತಗೊಳಿದ್ದಾರೆ ಎಂಬುದು ನೌಕರರ ಆರೋಪ. ಇದು ಮಾನವ ಹಕ್ಕುಗಳ ಉಲ್ಲಂಘನೆ ಆಗಿದ್ದು, ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದು ನೊಂದ ನೌಕರ ಶಿವಪುತ್ರಪ್ಪ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಾಲಶ್ರೀ ಮಠಕ್ಕೆ 54 ಲಕ್ಷ ಹಣ ತಂದಿಟ್ಟ ಮೈಸೂರಿನ ವಕೀಲ

    ಏನು ಹೇಳುತ್ತೆ ನಿಯಮ?
    ಸಾಮಾನ್ಯವಾಗಿ ಸರ್ಕಾರಿ- ಅರೆ ಸರ್ಕಾರಿ ಅಥವಾ ಖಾಸಗಿ ವಲಯದ ನೌಕರರು ಕರ್ತವ್ಯ ಲೋಪ ಎಸಗಿದಾಗ, ಕೂಡಲೇ ನೋಟಿಸ್ ನೀಡಬೇಕು. ಅಗತ್ಯ ಇದ್ದರೆ ಅಮಾನತು ಮಾಡಿ, ಅವರ ಮೇಲಿನ ಆರೋಪಗಳ ಬಗ್ಗೆ ತನಿಖೆ ಮಾಡಬೇಕು. ಮುಂದಿನ 6 ತಿಂಗಳಿನಲ್ಲಿ ವಿಚಾರಣೆ ಮುಗಿಸಿ, ತಕ್ಕ ಶಿಕ್ಷೆ ನೀಡಬೇಕು. ಇಲ್ಲವೇ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಆದರೆ, ಯಾವುದೇ ಕಾರಣಕ್ಕೂ ವರ್ಷಪೂರ್ತಿ ವೇತನ ಸ್ಥಗಿತಗೊಳಿಸಿ, ಕೆಲಸ ಮಾಡಿಸಿಕೊಳ್ಳಲು ಅವಕಾಶ ಇಲ್ಲ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಮೋದಿ ಮಧ್ಯಪ್ರವೇಶವಾಗಬೇಕು – ಸಿಎಂ ಮನವಿಗೆ ಬಿಜೆಪಿ ಸಂಸದರ ಆಕ್ಷೇಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಂಗಾಳದ ಶಾಸಕ, ಮಂತ್ರಿಗಳಿಗೆ ಸಂಬಳ ಬಂಪರ್ ಹೈಕ್ – ತನಗೆ ವೇತನ ಬೇಡ ಎಂದ ಮಮತಾ

    ಬಂಗಾಳದ ಶಾಸಕ, ಮಂತ್ರಿಗಳಿಗೆ ಸಂಬಳ ಬಂಪರ್ ಹೈಕ್ – ತನಗೆ ವೇತನ ಬೇಡ ಎಂದ ಮಮತಾ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಗುರುವಾರ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ರಾಜ್ಯದ ಸಚಿವರು, ಕ್ಯಾಬಿಬೆಟ್ ಮಂತ್ರಿಗಳ ಮಾಸಿಕ ವೇತನವನ್ನು (Salary) ಬಂಪರ್ ಹೆಚ್ಚಳ ಮಾಡಿದ್ದಾರೆ. ಆದರೂ ಬ್ಯಾನರ್ಜಿ ತನಗೆ ಯಾವುದೇ ವೇತನ ಬೇಡ ಎಂದು ಹೇಳಿದ್ದಾರೆ.

    ಬಂಗಾಳದ ಸಚಿವರು ಹಾಗೂ ಮಂತ್ರಿಗಳ ಮಾಸಿಕ ವೇತನವನ್ನು ಪ್ರತಿ ವರ್ಗಕ್ಕೆ 40,000 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳದಿಂದ ಶಾಸಕರಿಗೆ ಮಾಸಿಕವಾಗಿ 10,000 ರೂ. ಬದಲು 50,000 ರೂ. ಆಗಿದೆ. ಅದೇ ರೀತಿ ಮಂತ್ರಿಗಳಿಗೆ 10,900 ರೂ. ಬದಲು 50,900 ರೂ. ನೀಡಲಾಗುತ್ತದೆ.

    ಸಂಪುಟದ ಸಚಿವರಾದರೆ ವೇತನ 11,000 ರೂ. ನಿಂದ 51,000 ರೂ. ಹೆಚ್ಚಳವಾಗಿದೆ. ಕ್ಯಾಬಿನೆಟ್ ಮಂತ್ರಿಗಳು, ರಾಜ್ಯ ಸಚಿವರು ಮತ್ತು ಶಾಸಕರು ಮಾಸಿಕ ವೇತನದ ಜೊತೆಗೆ ಅರ್ಹರಾಗಿರುವ ಇತರ ಹೆಚ್ಚುವರಿ ಸವಲತ್ತುಗಳು ಮತ್ತು ಭತ್ಯೆಗಳು ಹಿಂದೆ ಇದ್ದಂತೆಯೇ ಮುಂದುವರಿಯಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಇನ್ನೂ ತಮ್ಮ ಪೂರ್ವಾಶ್ರಮ RSS ಗುಂಗಿನಲ್ಲಿದ್ದಂತಿದೆ – ಸಿದ್ದರಾಮಯ್ಯ ಕಿಡಿ

    ಇದರರ್ಥ ಶಾಸಕರು ಪಡೆಯುವ ನಿಜವಾದ ಮಾಸಿಕ ಪಾವತಿಯೊಂದಿಗೆ ಸಂಬಳ, ಭತ್ಯೆಗಳು ಮತ್ತು ಸವಲತ್ತುಗಳು ಈಗ ಮಾಸಿಕವಾಗಿ 81,000 ರೂ.ಗಳಿಂದ 1.21 ಲಕ್ಷ ರೂ.ಗೆ ಹೆಚ್ಚಾಗುತ್ತದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ರೀತಿ ಇನ್ನು ಮುಂದೆ ಸಚಿವರು ಪಡೆಯುವ ನಿಜವಾದ ಮಾಸಿಕ ವೇತನವನ್ನು ತಿಂಗಳಿಗೆ 1.10 ಲಕ್ಷ ರೂ.ಗಳಿಂದ ತಿಂಗಳಿಗೆ ಸುಮಾರು 1.50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುತ್ತಿದೆ.

    ಗುರುವಾರ ರಾಜ್ಯ ವಿಧಾನಸಭೆಯಲ್ಲಿ ವರ್ಧಿತ ವೇತನವನ್ನು ಘೋಷಿಸಿದ ಸಿಎಂ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಶಾಸಕರ ವೇತನ ಭಾರತದ ಇತರ ರಾಜ್ಯಗಳ ಶಾಸಕರಿಗೆ ಹೋಲಿಸಿದರೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಮಮತಾ ಬ್ಯಾನರ್ಜಿ ಈ ಹಿಂದಿನಿಂದಲೂ ಸಿಎಂ ಸ್ಥಾನಕ್ಕೆ ವೇತನವನ್ನು ಪಡೆಯದ ಹಿನ್ನೆಲೆ ತನಗೆ ಯಾವುದೇ ವೇತನ ಬೇಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆ ಸ್ಥಗಿತವಿಲ್ಲ, ತಪ್ಪು ಮಾಹಿತಿ ಕೊಟ್ಟವರ ವಿರುದ್ಧ ಕ್ರಮ: ಹೆಬ್ಬಾಳ್ಕರ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]