Tag: ವೇಗ ಮಿತಿ

  • ಒಂದೇ ವರ್ಷದಲ್ಲಿ 127 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಕಾರು ಮಾಲೀಕನಿಗೆ ಬಿತ್ತು ಲಕ್ಷ ಲಕ್ಷ ದಂಡ!

    ಒಂದೇ ವರ್ಷದಲ್ಲಿ 127 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಕಾರು ಮಾಲೀಕನಿಗೆ ಬಿತ್ತು ಲಕ್ಷ ಲಕ್ಷ ದಂಡ!

    ಹೈದರಾಬಾದ್: ನಗರದ ಹೊಂಡಾ ಜಾಜ್ ಮಾಲೀಕನಿಗೆ ಸಂಚಾರಿ ಪೊಲೀಸರು ಒಂದು ವರ್ಷದಲ್ಲಿ ಸುಮಾರು 1.82 ಲಕ್ಷ ರೂ. ದಂಡ ವಿಧಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಭಾರೀ ಮೊತ್ತದ ದಂಡ ವಿಧಿಸಲು ಪ್ರಮುಖ ಕಾರಣ ಕಾರು ಮಾಲೀಕ ಒಂದು ವರ್ಷದಲ್ಲಿ ಅಂದರೆ 2017 ಏಪ್ರಿಲ್ 4 ರಿಂದ 2018 ಮಾರ್ಚ್ 10 ರ ನಡುವೆ ಸುಮಾರು 127 ಬಾರಿ ವೇಗ ಮಿತಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಪ್ರತಿ ಬಾರಿಯೂ ಪೊಲೀಸರು ಕಾರು ಮಾಲೀಕನಿಗೆ ಇ-ಚಲನ್ ಪೋರ್ಟಲ್ ಮೂಲಕ ದಂಡ ವಿಧಿಸಿ ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಮೂಲಗಳ ಪ್ರಕಾರ ನಗರದ ಹೊರ ವರ್ತುಲ ರಸ್ತೆಯು ಹೆಚ್ಚು ಅಪಘಾತ ಸಂಭವಿಸುವ ರಸ್ತೆಯಾಗಿದ್ದು, ಸಾಲು ಸಾಲು ಸರಣಿ ಅಪಘಾತ ಪ್ರಕರಣಗಳಿಂದಾಗಿ ರಸ್ತೆಯ ವೇಗದ ಮಿತಿಯನ್ನು ಗಂಟೆಗೆ 120 ಕಿ.ಮೀ ನಿಂದ 100 ಕಿ.ಮೀ ಇಳಿಸಲಾಗಿತ್ತು. ಆದರೆ ಪ್ರತಿ ಬಾರಿ ಈ ಸ್ಥಳದಲ್ಲೇ ಹೋಂಡ ಜಾಜ್ ಕಾರು ಮಾಲೀಕ ಅತೀ ವೇಗದಿಂದ ಕಾರು ಚಾಲನೆ ಮಾಡಿ ನಿಯಮ ಉಲ್ಲಂಘಿಸಿದ್ದಾನೆ. ಇದರಿಂದ ಪ್ರತಿ ಬಾರಿ ದಂಡ ಪ್ರಮಾಣ 1,435 ರೂ. ಆಗಿದ್ದ ಹಿನ್ನೆಲೆಯಲ್ಲಿ ಈಗ ದಂಡದ ಮೊತ್ತ 1.82 ಲಕ್ಷ ರೂ. ಆಗಿದೆ.

    ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಾಫಿಕ್ ಪೊಲೀಸ್ ಆಧಿಕಾರಿಯೊಬ್ಬರು, ಕಾರು ನೋಂದಣಿ ದಾಖಲಾತಿ ಸಮಯದಲ್ಲಿ ಕೊಟ್ಟ ಫೋನ್ ನಂಬರ್ ಗೆ ಪ್ರತಿ ಬಾರಿ ಉಲ್ಲಂಘನೆಯ ವಿಷಯವನ್ನು ತಕ್ಷಣ ಇ-ಚಲನ್ ಪೋರ್ಟಲ್ ಕಳುಹಿಸಲಾಗುತ್ತದೆ. ಈಗ ಈ ಕಾರು ಎಲ್ಲಿದೆ ಎಂದು ತಿಳಿದು ಬಂದಿಲ್ಲ ಆದರೆ ಎಲ್ಲ ಟೋಲ್ ಗೇಟ್‍ಗಳಿಗೆ ವಾಹನದ ಸಂಖ್ಯೆಯನ್ನು ನೀಡಿ ವಾಹನವನ್ನು ತಡೆ ಹಿಡಿಯುವಂತೆ ಆದೇಶಿಸುತ್ತೇವೆ ಹಾಗೂ ಆದಷ್ಟು ಬೇಗ ದಂಡವನ್ನು ಪಾವತಿಸುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ನಗರ ಮತ್ತು ಹೈವೇಯಲ್ಲಿ ಕಾರು, ಬೈಕ್‍ಗಳು ಮತ್ತಷ್ಟು ಜಾಸ್ತಿ ವೇಗದಲ್ಲಿ ಹೋಗಬಹುದು!

  • ಇನ್ನು ಮುಂದೆ ನಗರ ಮತ್ತು ಹೈವೇಯಲ್ಲಿ ಕಾರು, ಬೈಕ್‍ಗಳು ಮತ್ತಷ್ಟು ಜಾಸ್ತಿ ವೇಗದಲ್ಲಿ ಹೋಗಬಹುದು!

    ಇನ್ನು ಮುಂದೆ ನಗರ ಮತ್ತು ಹೈವೇಯಲ್ಲಿ ಕಾರು, ಬೈಕ್‍ಗಳು ಮತ್ತಷ್ಟು ಜಾಸ್ತಿ ವೇಗದಲ್ಲಿ ಹೋಗಬಹುದು!

    ನವದೆಹಲಿ: ನಗರ ರಸ್ತೆ ಮತ್ತು ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೊಸ ನಿಯಮದ ಪ್ರಕಾರ ನಗರದಲ್ಲಿ ಕಾರುಗಳು ಗಂಟೆಗೆ 70 ಕಿ.ಮೀ. ವೇಗ ಮತ್ತು ಬೈಕುಗಳಿಗೆ 60 ಕಿ.ಮೀ. ವೇಗದ ಮಿತಿಯನ್ನು ನಿಗದಿ ಪಡಿಸಿದೆ.

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಬುಧವಾರದಂದು ನಗರದ ರಸ್ತೆಗಳು ಮಾತ್ರವಲ್ಲದೇ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳಲ್ಲೂ ವೇಗದ ಮಿತಿಯನ್ನು ಹೆಚ್ಚಿಸಲು ಒಪ್ಪಿಗೆ ನೀಡಿದ್ದಾರೆ. ಅಧಿಸೂಚನೆ ಹೊರಡಿಸಲು ಈ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯಕ್ಕೆ ಈಗ ಕಳುಹಿಸಲಾಗಿದೆ.

    ಹೊಸ ವ್ಯವಸ್ಥೆಯ ಪ್ರಕಾರ ಒಂದು ವೇಳೆ ನಿಗದಿಯಾಗಿರುವ ಮಿತಿಯ 5% ರಷ್ಟು ಜಾಸ್ತಿ ವೇಗದಲ್ಲಿ ಸಂಚರಿಸಿದ್ದಲ್ಲಿ ಎಚ್ಚರಿಕೆ ನೀಡಲಾಗುತ್ತದೆ ಅಷ್ಟೇ ಅಲ್ಲದೇ ದಂಡ ವಿಧಿಸಲಾಗುವುದಿಲ್ಲ. ನಗರದಲ್ಲಿ ಗಂಟೆಗೆ 70 ಕಿ.ಮೀ ವೇಗದಲ್ಲಿ ಸಂಚರಿಸುವುದು ಪ್ರಯೋಗಿಕವಾಗಿ ಸಾಧ್ಯವಾಗದೇ ಇದ್ದರೂ ಹಲವು ನಗರಗಳಲ್ಲಿ ರಿಂಗ್ ರಸ್ತೆಗಳು ಇರುವ ಕಾರಣ ವೇಗದ ಮಿತಿಯನ್ನು ಏರಿಸಲಾಗಿದೆ.

    ದೇಶಾದ್ಯಂತ ವೇಗ ಮಿತಿಯನ್ನ ಹೆಚ್ಚಿಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇದ್ದು, ರಾಜ್ಯ ಸರ್ಕಾರ ಮತ್ತು ಇನ್ನಿತರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆಯ ಮೇಲೆ ವೇಗದ ಮಿತಿಯನ್ನು ಹೇರಲು ಅನುಮತಿ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಗರಿಷ್ಟ ವೇಗದ ಮಿತಿಯನ್ನು ಮೀರುವಂತಿಲ್ಲ.

    ಬದಲಾಗಿರುವ ನಿಯಮಗಳ ಪ್ರಕಾರ ಎಕ್ಸ್ ಪ್ರೆಸ್ ವೇನಲ್ಲಿ ಇಲ್ಲಿಯವರೆಗೆ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದ ಕಾರು ಇನ್ನು ಮುಂದೆ ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸಬಹುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ಕಾರುಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸಬಹುದಾಗಿದೆ.