Tag: ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್

  • ಆರ್ಥಿಕ ಸಂಕಷ್ಟದಲ್ಲಿ ವಿಂಡೀಸ್ ಕ್ರಿಕೆಟ್ ಬೋರ್ಡ್- ಪಾವತಿಯಾಗಿಲ್ಲ ಆಟಗಾರರ ಮ್ಯಾಚ್ ಫೀಸ್

    ಆರ್ಥಿಕ ಸಂಕಷ್ಟದಲ್ಲಿ ವಿಂಡೀಸ್ ಕ್ರಿಕೆಟ್ ಬೋರ್ಡ್- ಪಾವತಿಯಾಗಿಲ್ಲ ಆಟಗಾರರ ಮ್ಯಾಚ್ ಫೀಸ್

    ಪೋರ್ಟ್‌ ಆಫ್ ಸ್ಪೇನ್‌: ಕೊರೊನಾ ಭೀತಿಯಿಂದ ವಿಶ್ವದ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಗಿತವಾಗಿದೆ. ಇತ್ತ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ಕಳೆದ ಕೆಲ ವರ್ಷಗಳಿಂದ ಕ್ರಿಕೆಟಿಗರಿಗೆ ಸಂಬಳ ನೀಡಲು ಪರದಾಡುತ್ತಿದ್ದ ಸಂಸ್ಥೆ ಸದ್ಯ ಆಟಗಾರರ ಪಂದ್ಯದ ಶುಲ್ಕವನ್ನು ಕಳೆದ ಜನವರಿಯಿಂದ ಪಾವತಿ ಮಾಡಿಲ್ಲ. ಅಂತಾರಾಷ್ಟ್ರೀಯ ಆಟಗಾರರೊಂದಿಗೆ ದೇಶಿ ಕ್ರಿಕೆಟ್ ಆಟಗಾರರ ಪಂದ್ಯದ ಶುಲ್ಕವನ್ನು ಬೋರ್ಡ್ ಪಾವತಿಸಿಲ್ಲ.

    ವರ್ಷದ ಆರಂಭದಲ್ಲಿ ಐರ್ಲೆಂಡ್ ತಂಡದೊಂದಿಗೆ ಟೂರ್ನಿ ಆಡಿದ್ದ ವೆಸ್ಟ್ ಇಂಡೀಸ್ ತಂಡ ಆ ಬಳಿಕ ಫೆಬ್ರವರಿ-ಮಾರ್ಚ್‍ನಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾಗಿಯಾಗಿತ್ತು. ಈ ಎರಡು ಟೂರ್ನಿಗಳಿಗೆ ಸಂಬಂಧಿಸಿದಂತೆ ಇದುವರೆಗೂ ಬೋರ್ಡ್ ಆಟಗಾರರಿಗೆ ಹಣ ಪಾವತಿ ಮಾಡಿಲ್ಲ. ಇತ್ತ ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲೂ ವೆಸ್ಟ್ ಇಂಡೀಸ್ ತಂಡ 4 ಪಂದ್ಯಗಳನ್ನಾಡಿತ್ತು.

    ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಆಟಗಾರ ನಡುವೆ ಪಂದ್ಯದ ಶುಲ್ಕ, ಕಾಂಟ್ರಾಕ್ಟ್ ವಿಷಯಗಳ ಕುರಿತಂತೆ ಈ ಹಿಂದೆ ವಿವಾದ ನಡೆದಿತ್ತು. ಕ್ರಿಸ್ ಗೇಲ್, ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ಸುನಿಲ್ ನರೇನ್, ಡ್ವೇನ್ ಸ್ಮಿತ್‍ರಂತಹ ಹಿರಿಯ ಆಟಗಾರರು ಬೋರ್ಡ್ ವಿವಾದದ ಕಾರಣದಿಂದ ಬಹು ಸಮಯ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ದೂರವಾಗಿದ್ದರು. ಇದುವರೆಗೂ ಹಲವು ಆಟಗಾರರು ವೆಸ್ಟ್ ಇಂಡೀಸ್ ತಂಡದ ಪರ ಆಡುವ ಬದಲು ಐಪಿಎಲ್ ನಂತಹ ಟೂರ್ನಿಗಳಲ್ಲಿ ಆಡಲು ಆಸ್ತಕಿ ತೋರುತ್ತಿದ್ದಾರೆ.

    ಕೊರೊನಾ ವೈರಸ್ ಕಾರಣದಿಂದ ಈಗಾಗಲೇ ಹಲವು ಕ್ರಿಕೆಟ್ ಬೋರ್ಡ್‍ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹಲವು ಬೋರ್ಡ್‍ಗಳು ಆಟಗಾರರಿಗೆ ಅರ್ಧ ಸಂಬಳ ಪಡೆಯಲು ಮನವಿ ಮಾಡಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೋರ್ಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನಿ ಗ್ರೇವ್, ಕ್ರಿಕೆಟ್ ವೆಸ್ಟ್ ಇಂಡೀಸ್ ಕೆಲ ಸಮಯದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದರೆ ಶೀಘ್ರವೇ ಆಟಗಾರರ  ಪಂದ್ಯದ ಬಾಕಿ ಶುಲ್ಕವನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.