Tag: ವೆಸ್ಟ್ ಇಂಡೀಸ್

  • ವಿಂಡೀಸ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಕರಿನೆರಳು – ಲಂಕಾ ನಾಯಕನಿಗೆ ದಂಡ

    ವಿಂಡೀಸ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಕರಿನೆರಳು – ಲಂಕಾ ನಾಯಕನಿಗೆ ದಂಡ

    ಸೇಂಟ್ ಲೂಸಿಯಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಂಡಿಮಾಲ್ ಗೆ ದಂಡ ವಿಧಿಸಲಾಗಿದೆ.

    ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂರನೇ ದಿನದಾಟ ಆರಂಭಕ್ಕೂ ಮುನ್ನ ಘಟನೆ ನಡೆದಿದ್ದು, ಅನ್ ಫೀಲ್ಡ್ ಅಂಪೈರ್ ಗಳು ಶ್ರೀಲಂಕಾ ತಂಡ ಆಟಗಾರರು ಚೆಂಡು ವಿರೂಪಗೊಳಿಸಿದ್ದಾರೆ ಶಂಕಿಸಿ ಚೆಂಡು ಬದಲಾಯಿಸಲು ನಿರ್ಧರಿಸಿದ್ದರು.

    ಅಂಪೈರ್ ಗಳ ನಡೆಗೆ ವಿರೋಧ ವ್ಯಕ್ತಪಡಿಸಿದ ದಿನೇಶ್ ಚಂಡಿಮಾಲ್ ಶನಿವಾರ ಆಟ ಮುಂದುವರಿಸಲು ವಿರೋಧ ವ್ಯಕ್ತಪಡಿಸಿ ಮೈದಾನಕ್ಕೆ ಆಗಮಿಸಲು ನಿರಾಕರಿಸಿದ್ದರು. ಈ ವೇಳೆ ಮ್ಯಾಚ್ ರೆಫರಿಯಾಗಿದ್ದ ಜಾವಗಲ್ ಶ್ರೀನಾಥ್ ಅವರೊಂದಿಗೆ ಶ್ರೀಲಂಕಾ ಕೋಚ್ ಸುದೀರ್ಘ ಮಾತುಕತೆ ನಡೆಸಿದ ಬಳಿಕ 2 ಗಂಟೆಗಳ ತಡವಾಗಿ ಪ್ರತಿಭಟನೆ ಮೇಲೆಯೇ ಲಂಕಾ ತಂಡ ಆಟ ಮುಂದುವರೆಸಿತು. ಮೈದಾನಕ್ಕೆ ತಡವಾಗಿ ಆಗಮಿಸಿದ ಕಾರಣ ಲಂಕಾ ತಂಡಕ್ಕೆ 5 ರನ್ ಗಳ ದಂಡವನ್ನು ವಿಧಿಸಿದ್ದರು.

    ಈ ಕುರಿತು ಟ್ವೀಟ್ ಮಾಡಿದ್ದ ಐಸಿಸಿ, ಚಂಡಿಮಾಲ್ ಐಸಿಸಿ ನೀತಿ ಸಂಹಿತೆ 2.2.9 ರ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದೆ. ಈ ನಿಯಮವು ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ್ದು, ಈಗಾಗಲೇ ಶ್ರೀಲಂಕಾ ತಂಡಕ್ಕೆ ಐದು ರನ್ ಗಳ ದಂಡ ವಿಧಿಸಿದ್ದರೂ ಮುಂದಿನ ದಿನಗಳಲ್ಲಿ ಶ್ರೀಲಂಕಾ ಆಟಗಾರರ ವರ್ತನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ನಿರೀಕ್ಷೆ ಇದೆ. ಅಲ್ಲದೇ ಚಂಡಿಮಾಲ್ ಐಸಿಸಿ ನಿಯಮ ಉಲ್ಲಂಘಿಸಿದ ಕಾರಣ ಪಂದ್ಯದ ಸಂಭಾವನೆಯ ಶೇ.75 ರಷ್ಟು ದಂಡ ಹಾಗೂ 3 ಋಣಾತ್ಮಕ ಅಂಕದ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ತಿಳಿಸಿದೆ.

    ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ಆಟಗಾರರಿಗೆ ಮೈದಾನಕ್ಕೆ ತೆರಳಿ ಪಂದ್ಯ ಮುಂದುವರಿಸಲು ಸೂಚಿಸಿತ್ತು. ಆದರೆ ತಮ್ಮ ತಂಡ ಆಟಗಾರರು ಚೆಂಡು ವಿರೂಪಗೊಳಿಸುವ ಕುರಿತ ಆರೋಪವನ್ನು ತಳ್ಳಿ ಹಾಕಿದೆ.

    ಈ ವರ್ಷದ ಮಾರ್ಚ್ ನಲ್ಲಿ ಆಸೀಸ್ ಆಟಗಾರು ಚೆಂಡು ವಿರೂಪಗೊಳಿಸಿ ಸಿಕ್ಕಿ ಬಿದ್ದಿದ್ದರು. ಈ ಘಟನೆ ಕ್ರಿಕೆಟ್ ಇತಿಹಾಸದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅಸೀಸ್ ತಂಡದ ನಾಯಕ ಸ್ಮಿತ್, ಉಪನಾಯಕ ವಾರ್ನರ್ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು.