Tag: ವೆಬ್ ಸೀರೀಸ್

  • ವೆಬ್ ಸಿರೀಸ್‍ನಿಂದ ಪ್ರೇರಣೆ – ದಂಪತಿ ಕೊಲೆಗೈದು ದರೋಡೆ ಮಾಡಿದ್ದ ಲಾ ಸ್ಟೂಡೆಂಟ್ ಅರೆಸ್ಟ್

    ವೆಬ್ ಸಿರೀಸ್‍ನಿಂದ ಪ್ರೇರಣೆ – ದಂಪತಿ ಕೊಲೆಗೈದು ದರೋಡೆ ಮಾಡಿದ್ದ ಲಾ ಸ್ಟೂಡೆಂಟ್ ಅರೆಸ್ಟ್

    ಲಕ್ನೋ: ದಂಪತಿಯನ್ನು ಕೊಲೆಗೈದು ಚಿನ್ನಾಭರಣ ಹಾಗೂ ಹಣ ದೋಚಿದ್ದ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶ (Uttar Pradesh) ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತ ಓರ್ವ ಆರೋಪಿ ಅಂತಿಮ ವರ್ಷದ ಎಲ್‍ಎಲ್‍ಬಿ ಪದವಿ ವ್ಯಾಸಾಂಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತರನ್ನು ಪ್ರಿಯಾಂಕ್ ಶರ್ಮಾ (25) ಅಲಿಯಾಸ್ ಪರುಷ್ ಮತ್ತು ಆತನ ಸ್ನೇಹಿತ ಯಶ್ ಶರ್ಮಾ ಅಲಿಯಾಸ್ ಯಶು (24) ಎಂದು ಗುರುತಿಸಲಾಗಿದೆ. ಯಶು ಶರ್ಮಾ 8 ನೇ ತರಗತಿಯವರೆಗೆ ಓದಿದ್ದು, ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೊಲೆ ಸಂಚು ರೂಪಿಸಲು 2020 ರಲ್ಲಿ ಬಿಡುಗಡೆಯಾದ `ಅಸುರ್’ ವೆಬ್ ಸಿರೀಸ್‍ನಿಂದ (Web Series) ಪ್ರೇರಣೆ ಹೊಂದಿರುವುದಾಗಿ ತನಿಖೆ ವೇಳೆ ಆರೋಪಿಗಳು ಹೇಳಿದ್ದಾರೆ. ಇದನ್ನೂ ಓದಿ: ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ – ರೌಡಿಶೀಟರ್ ಕಾಲಿಗೆ ಗುಂಡೇಟು

    ವಿಚಾರಣೆಯ ವೇಳೆ ಪ್ರಿಯಾಂಕ್ ವೆಬ್ ಸರಣಿಯಿಂದ ಪೊಲೀಸರಿಂದ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿದ್ದಾಗಿ ಹೇಳಿಕೊಂಡಿದ್ದಾನೆ. ಗುರುತನ್ನು ಮರೆಮಾಚಲು ಕೈಗವಸುಗಳು, ಮುಖವಾಡಗಳು ಮತ್ತು ಹೆಲ್ಮೆಟ್‍ಗಳನ್ನು ಬಳಸಿದ್ದಾರೆ. ಅಪರಾಧ ಮಾಡಿದ ನಂತರ ಬೈಕ್‍ನ ನಂಬರ್ ಪ್ಲೇಟ್ ಬದಲಾಯಿಸಿದ್ದಾರೆ. ಅಲ್ಲದೇ ದರೋಡೆಗೆ ಬರಲು ಸಿಸಿ ಕ್ಯಾಮೆರಾಗಳಿಲ್ಲದ ಮಾರ್ಗಗಳನ್ನು ಹುಡುಕಿಕೊಂಡಿದ್ದರು ಎಂದು ತಿಳಿದು ಬಂದಿದೆ.

    ಆರೋಪಿಗಳು ಗುರುವಾರ ಬ್ರಹ್ಮಪುರಿ ಪ್ರದೇಶದ ನಿವಾಸಿ ಧನ್ ಕುಮಾರ್ ಜೈನ್ (70) ಅವರ ಪತ್ನಿ ಅಂಜು ಜೈನ್ (65) ಅವರ ಮನೆಗೆ ನುಗ್ಗಿ ಇಬ್ಬರ ಮೇಲೂ ದಾಳಿ ಮಾಡಿ ಲೂಟಿ ಮಾಡಿದ್ದರು. ಈ ವೇಳೆ ಧನ್ ಕುಮಾರ್ ಸ್ಥಳದಲ್ಲೇ ಮೃತ ಪಟ್ಟಿದ್ದರು. ಅಂಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣವನ್ನು ಭೇದಿಸಲು ಎಂಟು ತಂಡಗಳನ್ನು ರಚಿಸಲಾಗಿತ್ತು.

    ಘಟನೆಗೆ ಒಂದು ದಿನ ಮೊದಲು ಆರೋಪಿಗಳು ಬಾಡಿಗೆಗೆ ಕೊಠಡಿ ಹುಡುಕುವ ನೆಪದಲ್ಲಿ ಉದ್ಯಮಿಯ ಮನೆಗೆ ಹೋಗಿದ್ದರು. ಬಂಧಿತರಿಂದ ಪಿಸ್ತೂಲ್, ಬೈಕ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಹದೇಶ್ವರ ಬೆಟ್ಟದಲ್ಲಿ ವೃದ್ಧೆಗೆ ಚಿತ್ರಾನ್ನ ತಿನ್ನಿಸಿ 10,000 ನಗದು, ಮೊಬೈಲ್ ದೋಚಿ ಪರಾರಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆಕ್ಸ್​​ಗಿಂತ ರೇಪ್ ಮಾಡೋದು ಒಳ್ಳೆಯದಾ?- ಏಕ್ತಾ ಕಪೂರ್

    ಸೆಕ್ಸ್​​ಗಿಂತ ರೇಪ್ ಮಾಡೋದು ಒಳ್ಳೆಯದಾ?- ಏಕ್ತಾ ಕಪೂರ್

    -ವಿವಾದದ ಸುಳಿಯಲ್ಲಿ ತ್ರಿಪಲ್ ಎಕ್ಸ್ 2

    ಮುಂಬೈ: ಕಳೆದ ಕೆಲವು ದಿನಗಳಿಂದ ಧಾರಾವಾಹಿ ಮತ್ತು ಸಿನಿಮಾ ನಿರ್ಮಾಪಕಿ ಏಕ್ತಾ ಕಪೂರ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಇದೀಗ ಸೆಕ್ಸ್​​ಗಿಂತ ರೇಪ್ ಮಾಡೋದು ಒಳ್ಳೆಯದಾ ಎಂದು ಪ್ರಶ್ನಿಸುವ ಮೂಲಕ ಮೌನ ಮುರಿದು ಸ್ಪಷ್ಟನೆ ನೀಡಿದ್ದಾರೆ.

    ಏಕ್ತಾ ಕಪೂರ್ ನಿರ್ಮಾಣದ ‘ತ್ರಿಪಲ್ ಎಕ್ಸ್-2’ ವೆಬ್ ಸೀರೀಸ್ ವಿವಾದದಲ್ಲಿ ಸಿಲುಕಿತ್ತು. ಸೀರೀಸ್ ನಲ್ಲಿ ಸೇನೆಯನ್ನು ಅಪಮಾನ ಮಾಡಿದ್ದು, ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಎಫ್‍ಐಆರ್ ಸಹ ದಾಖಲಾಗಿದೆ. ನನಗೆ ಭಾರತೀಯ ಸೇನೆಗೆ ಕ್ಷಮೆ ಕೇಳಲು ಯಾವುದೇ ಹಿಂಜರಿಕೆ ಇಲ್ಲ. ಈಗಾಗಲೇ ವೆಬ್ ಸೀರೀಸ್ ನಲ್ಲಿ ವಿವಾದಾತ್ಮಕ ಎನ್ನಲಾದ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ಏಕ್ತಾ ಕಪೂರ್ ಸ್ಪಷ್ಟಪಡಿಸಿದ್ದಾರೆ.

    ವೆಬ್ ಸೀರೀಸ್ ಆ ತುಣುಕುಗಳಿಗೆ ಕತ್ತರಿ ಹಾಕಿ, ಭಾರತೀಯ ಸೇನೆ ಮತ್ತು ಸೈನಿಕರ ಪತ್ನಿಯರ ಬಳಿ ನಾನು ಕ್ಷಮೆ ಕೇಳಲು ಸಿದ್ಧಳಿದ್ದೇನೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿರೋದರಿಂದ ನನಗೆ ಬೇಸರವಾಗಿದೆ ಎಂದಿದ್ದಾರೆ.

    ಭಾರತೀಯ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಕೆಲ ವ್ಯಕ್ತಿಗಳು ತಾವು ದೊಡ್ಡ ಹೋರಾಟಗಾರರು ಎಂದು ತಿಳಿದು ನನ್ನನ್ನು ಮತ್ತು ನನ್ನ ತಾಯಿಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ನಮ್ಮನ್ನು ಆಶ್ಲೀಲವಾಗಿ ಟ್ರೋಲ್ ಮಾಡುವದರ ಜೊತೆಗೆ ಆತ್ಯಾಚಾರದ ಬೆದರಿಕೆಯೊಡ್ಡಿದ್ದಾರೆ. ಇದು ಸೆಕ್ಸ್ ಅಥವಾ ಸೇನೆಗೆ ಸಂಬಂಧಿಸಿದ ಸಮಸ್ಯೆ ಅಲ್ಲ. ರೇಪ್ ಮಾಡುವದಾಗಿ ಬೆದರಿಕೆಯೊಡ್ಡುವ ವ್ಯಕ್ತಿ ನನ್ನನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದೀನಿ ಅಂತಾ ಆರೋಪಿಸುತ್ತಾನೆ. ಹಾಗಾದಾರೆ ರೇಪ್ ಮಾಡೋದಕ್ಕಿಂತ ಸೆಕ್ಸ್ ತುಂಬಾನೇ ಕೆಟ್ಟದ್ದು ಅಲ್ವಾ? ಎಂದು ಟ್ರೋಲರ್ ಗಳಿಗೆ ತಿರುಗೇಟು ನೀಡಿದ್ದಾರೆ.

    ವೈಯಕ್ತಿಕವಾಗಿ ನಾನು ಸೈನಿಕರನ್ನು ಗೌರವಿಸುತ್ತೇನೆ. ವೆಬ್ ಸೀರೀಸ್ ನಲ್ಲಿರೋದು ಕೇವಲ ಒಂದು ಕಾಲ್ಪನಿಕ ಪಾತ್ರ. ಹೌದು, ಈ ಪಾತ್ರ ಸೃಷ್ಟಿಸಿದ್ದು ತಪ್ಪು. ಹಾಗಾಗಿ ತಪ್ಪನ್ನು ಒಪ್ಪಿಕೊಂಡು ವಿವಾದಾತ್ಮಕ ದೃಶ್ಯಗಳನ್ನು ತೆಗೆದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ಟ್ರೋಲ್‍ಗಳಿಗೆ ಸರಿಯಾದ ಉತ್ತರ ನೀಡುತ್ತೇನೆ. ಸೈಬರ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲು ನಿರ್ಧರಿಸಿದ್ದೇನೆ. ನನಗಾದ ಮಾನಸಿಕ ನೋವು ಬೇರೆ ಮಹಿಳೆಯರಿಗೆ ಆಗೋದು ಬೇಡ ಎಂದು ಹೇಳಿದ್ದಾರೆ.

  • ಅನುಷ್ಕಾ ಶರ್ಮಾಗೆ ಲೀಗಲ್ ನೋಟಿಸ್

    ಅನುಷ್ಕಾ ಶರ್ಮಾಗೆ ಲೀಗಲ್ ನೋಟಿಸ್

    ಮುಂಬೈ: ಬಾಲಿವುಡ್ ಪರಿ ಅನುಷ್ಕಾ ಶರ್ಮಾಗೆ ಲೀಗಲ್ ನೋಟಿಸ್ ನೀಡಲಾಗಿದೆ.

    ಅನುಷ್ಕಾ ಶರ್ಮಾ ನಿರ್ಮಾಣದ ವೆಬ್ ಸೀರಿಸ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಅದರಲ್ಲಿ ಬಳಸಲಾಗಿರುವ ಜಾತಿ ನಿಂದನಾತ್ಮಕ ಪದವುಳ್ಳ ಡೈಲಾಗ್ ತೆಗೆಯುವಂತೆ ಸೂಚಿಸಲಾಗಿದೆ. ಗಿಲ್ಡ್ ಸದಸ್ಯ ಮತ್ತು ಪ್ರಣಾಯ್ ರಾಯ್ ಅಸೋಸಿಯೇಟ್ಸ್ ಚೇಂಬರ ವಕೀಲ ವೀರೆನ್ ಶ್ರೀ ಗುರೂಂಗಾ ನೋಟಿಸ್ ಕಳುಹಿಸಿದ್ದಾರೆ. ವಕೀಲ ಗುರೂಂಗಾ, ವೆಬ್ ಸೀರೀಸ್ ಎರಡನೇ ಸಂಚಿಕೆಯಲ್ಲಿ ನೇಪಾಳಿ ಸಮುದಾಯವನ್ನು ಅವಮಾನಿಸುವ ಡೈಲಾಗ್ ಇದೆ ಎಂದು ಹೇಳಿದ್ದಾರೆ.

    ವೆಬ್ ಸೀರೀಸ್ ಎರಡನೇ ಸಂಚಿಕೆಯ ದೃಶ್ಯವೊಂದರಲ್ಲಿ ಮಹಿಳಾ ಪೊಲೀಸ್ ನೇಪಾಳಿ ವ್ಯಕ್ತಿಯ ಪಾತ್ರದ ವಿಚಾರಣೆ ವೇಳೆ ಜಾತಿಯನ್ನು ಗುರುತಿಸೋ ಪದ ಬಳಕೆ ಮಾಡಲಾಗುತ್ತದೆ. ನೇಪಾಳಿ ಪದಗಳ ಜೊತೆ ಮುಂದೆ ಬಳಸುವ ಡೈಲಾಗ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅನುಷ್ಕಾ ಶರ್ಮಾರ ನಿರ್ಮಾಣದಲ್ಲಿ ವೆಬ್ ಸೀರೀಸ್ ಮೂಡಿ ಬಂದಿರೋದರಿಂದ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ. ಇದುವರೆಗೂ ಅನುಷ್ಕಾ ಶರ್ಮಾರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಕೀಲ ವೀರೆನ್ ಶ್ರೀ ಗುರೂಂಗಾ ತಿಳಿಸಿದ್ದಾರೆ.

    ಗೊರಖಾ ಸಮುದಾಯ ಸಹ ವೆಬ್ ಸೀರೀಸ್ ನಲ್ಲಿರೋ ಡೈಲಾಗ್ ಬಗ್ಗೆ ಅಸಮಾಧಾನ ಹೊರ ಹಾಕಿದೆ. ವಿವಾದಾತ್ಮಕ ಡೈಲಾಗ್ ಗೆ ಕತ್ತರಿ ಹಾಕಬೇಕೆಂದು ಮೇ 18ರಂದು ಆನ್‍ಲೈನ್ ಪಿಟಿಶನ್ ಸಲ್ಲಿಸಲಾಗಿದೆ.

    ಅನುಷ್ಕಾ ಶರ್ಮಾ ನಿರ್ಮಾಣದ ವೆಬ್ ಸೀರೀಸ್ ನಲ್ಲಿ ಗೊರಖಾ ಸಮುದಾಯದ ಮಹಿಳೆಯರನ್ನು ನಿಂದಿಸಲಾಗಿದೆ. ಹಾಗಾಗಿ ಆ ಡೈಲಾಗ್‍ನ್ನು ಮ್ಯೂಟ್ ಮತ್ತು ಸಬ್ ಟೈಟಲ್ ಬ್ಲರ್ ಮಾಡಬೇಕು ಎಂದು ಪಿಟಿಶನ್ ನಲ್ಲಿ ಉಲ್ಲೇಖಿಸಲಾಗಿದೆ.

  • ‘ಗಂಟುಮೂಟೆ’ಯೊಂದಿಗೆ ಕನ್ನಡದ ಘನತೆ ಎತ್ತಿಹಿಡಿದ ರೂಪಾ ರಾವ್!

    ‘ಗಂಟುಮೂಟೆ’ಯೊಂದಿಗೆ ಕನ್ನಡದ ಘನತೆ ಎತ್ತಿಹಿಡಿದ ರೂಪಾ ರಾವ್!

    ಬೆಂಗಳೂರು: ಸದ್ದೇ ಇಲ್ಲದೆ ಚಿತ್ರೀಕರಣಗೊಂಡು ಬಿಡುಗಡೆಯ ಹೊಸ್ತಿಲಲ್ಲಿ ನಿಂತ ಕೆಲ ಚಿತ್ರಗಳು ತನ್ನ ತಾಜಾತನದಿಂದಲೇ ಎಲ್ಲರೂ ತಿರುಗಿ ನೋಡುವಂತೆ ಸದ್ದು ಮಾಡೋದಿದೆ. ಆದರೆ ರೂಪಾ ರಾವ್, ನಿರ್ದೇಶನ ಮಾಡಿರೋ ‘ಗಂಟುಮೂಟೆ’ ಎಂಬ ಚಿತ್ರದ ಮೂಲಕ ಬಿಡುಗಡೆ ಪೂರ್ವದಲ್ಲಿಯೇ ದೇಶ ವಿದೇಶಗಳಲ್ಲಿಯೂ ಕನ್ನಡದ ಘನತೆಯನ್ನು ಮಿನುಗಿಸಿದ್ದಾರೆ. ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿರೋ ಈ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಆ ಮಟ್ಟಕ್ಕೆ ಸಂಚಲನಕ್ಕೆ ಕಾರಣವಾಗಿರೋ ಗಂಟುಮೂಟೆಯ ಹೂರಣ ಕಂಡ ಪ್ರಖ್ಯಾತ ನಿರ್ದೇಶಕರುಗಳೇ ಅಚ್ಚರಿಗೀಡಾಗಿದ್ದಾರೆ. ಹಲವರು ಸಿನಿಮಾ ಒಂದನ್ನು ಹೀಗೂ ರೂಪಿಸಬಹುದಾ ಎಂಬ ಪ್ರಶ್ನೆಯೊಂದಿಗೆ ಥ್ರಿಲ್ ಆಗಿದ್ದಾರೆ!

    ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ, ಪ್ರದರ್ಶನಗೊಂಡಿದೆ ಅಂದ ಮಾತ್ರಕ್ಕೆ ಇದನ್ನು ಆರ್ಟ್ ಮೂವಿ ಅಂದುಕೊಳ್ಳಬೇಕಿಲ್ಲ. ಈಗಾಗಲೇ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ವೆಬ್ ಸೀರೀಸ್‍ಗಳ ಮೂಲಕ ಗಮನ ಸೆಳೆದಿರುವ, ಹಲವಾರು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ರೂಪಾ ರಾವ್ ಗಂಟುಮೂಟೆಯನ್ನು ರೂಪಿಸಿರೋ ರೀತಿಯೇ ಅಂಥಾದ್ದಿದೆ. ಅದಾಗ ತಾನೇ ಟೀನೇಜು ಪ್ರವೇಶಿಸೋ ಅಂಚಿನಲ್ಲಿ ನಿಂತು, ಅದರ ಮನೋದೈಹಿಕ ತೊಳಲಾಟಗಳಿಗೆ ಪಕ್ಕಾಗಿರುವ ಮನಸುಗಳ ವಿಚಾರಗಳನ್ನೊಳಗೊಂಡಿರೋ ಪ್ರೇಮಕಥೆಯಾಧಾರಿತವಾದ ಚಿತ್ರ.

    ಮಾಮೂಲಿಯಾಗಿ ಇಂಥಾ ಕಥೆಗಳನ್ನು ಹುಡುಗನ ದಿಕ್ಕಿನಿಂದ ನಿರೂಪಣೆ ಮಾಡಲಾಗುತ್ತದೆ. ಆದರೆ ಗಂಟುಮೂಟೆ ಹುಡುಗಿಯ ಕಡೆಯಿಂದಲೇ ಬಿಚ್ಚಿಕೊಳ್ಳುತ್ತದೆ. ಹಾಗಂತ ಇದೇನು ಹೆಣ್ಣುಮಕ್ಕಳ ಶೋಷಣೆಯಂಥಾ ಕಥೆಯನ್ನು ಹೊಂದಿರೋ ಚಿತ್ರ ಅಂದುಕೊಳ್ಳುವಂತಿಲ್ಲ. ಇಲ್ಲಿ ಹೈಸ್ಕೂಲು ದಿನಗಳಲ್ಲಿ ಚಿಗಿತುಕೊಳ್ಳುವ ಮೊದಲ ಪ್ರೇಮದ ನವಿರಾದ ಪುಳಕಗಳಿವೆ. ಹುಡುಗಿಯೊಳಗಿನ ಅನೇಕ ತುಮುಲ, ತೊಳಲಾಟಗಳ ಹೃದಯಸ್ಪರ್ಶಿ ಕಥಾನಕವನ್ನು ಈ ಚಿತ್ರ ಒಳಗೊಂಡಿದೆಯಂತೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ಪ್ರಕಾಶ್ ಬೆಳವಾಡಿಯವರ ಮಗಳು ತೇಜು ಬೆಳವಾಡಿ ನಿರ್ವಹಿಸಿದ್ದಾರೆ. ತೀರ್ಥಹಳ್ಳಿಯ ಹಳ್ಳಿಯೊಂದರ ಹುಡುಗ ನಿಶ್ವಿತ್ ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ವಿಶೇಷ ಪ್ರದರ್ಶನದಲ್ಲಿ ಈ ಚಿತ್ರವನ್ನು ನೋಡಿದ ಖ್ಯಾತ ನಿರ್ದೇಶಕರೊಬ್ಬರು ಈ ಥರದ ಕಥೆ ಹೊಂದಿರುವ, ನಿರೂಪಣಾ ಶೈಲಿಯ ಚಿತ್ರಗಳನ್ನು ಈವರೆಗೆ ನೋಡಿಲ್ಲ ಎಂಬಂಥಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ. ಇದನ್ನು ನೋಡಿದ ವಿತರಕರೂ ಕೂಡಾ ಇಂಥಾದ್ದೇ ಉದ್ಘಾರವೆತ್ತಿದ್ದಾರೆ.

    ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ಕಡಿಮೆಯಿದೆ. ಎತ್ತಲಿಂದ ಹುಡುಕಿದರೂ ಮಹಿಳಾ ನಿರ್ದೇಶಕಿಯರ ಸಂಖ್ಯೆ ಚಿಕ್ಕದಿದೆ. ಆದರೆ ಆ ಸಾಲಿನಲ್ಲಿ ಗಂಟುಮೂಟೆಯ ನಿರ್ದೇಶಕಿ ರೂಪಾ ರಾವ್ ವಿಶಿಷ್ಟವಾದ ಸ್ಥಾನ ಪಡೆದುಕೊಳ್ಳೋ ಎಲ್ಲ ಸಾಧ್ಯತೆಗಳೂ ಇವೆ. ಯಾಕೆಂದರೆ, ಅವರು ಈ ಸಿನಿಮಾವನ್ನು ರೂಪಿಸಿರೋ ರೀತಿಯೇ ಅಂಥಾದ್ದಿದೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕನ್ನಡ ಚಿತ್ರಗಳು ಪ್ರವೇಶ ಪಡೆಯೋದೇ ಸವಾಲಿನ ಸಂಗತಿ. ಅಂಥಾದ್ದರಲ್ಲಿ ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್‍ನ ಪ್ರೀಮಿಯರ್‍ನಲ್ಲಿ ಪ್ರದರ್ಶನ ಕಂಡಿರೋ ಈ ಚಿತ್ರ ಬೆಸ್ಟ್ ಸ್ಕ್ರೀನ್ ಪ್ಲೇ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಕೆನಡಾದಲ್ಲಿ ನಡೆದ ಒಟ್ಟಾವಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿಯೂ ಗಂಟುಮೂಟೆ ಸ್ಪರ್ಧಿಸಿದೆ.

    ಇದು ತೊಂಭತ್ತರ ದಶಕದಲ್ಲಿ ನಡೆಯೋ ಕಥೆ ಹೊಂದಿರೋ ಚಿತ್ರ. ಇದರಲ್ಲಿ ಹುಡುಗಿಯ ಪರಿಧಿಯಲ್ಲಿಯೇ ಬಿಚ್ಚಿಕೊಳ್ಳುತ್ತಾ ಆಕೆಯ ಮನೋ ತೊಳಲಾಟಗಳ ಸುತ್ತ ಹೆಣೆದ ವಿಶಿಷ್ಟವಾದ ಪ್ರೇಮ ಕಥೆಯನ್ನೊಳಗೊಂಡಿರೋ ಚಿತ್ರ. ವಿಷ್ಣುವರ್ಧನ ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ರೂಪಾ ರಾವ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕಿಯಾಗಿದ್ದಾರೆ. ಇವರು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಿರ್ದೇಶನ ಮಾಡಿರೋ ದ ಅದರ್ ಲವ್ ಸ್ಟೋರಿ ವೆಬ್ ಸೀರೀಸ್ ತುಂಬಾನೇ ಪ್ರಸಿದ್ಧಿ ಪಡೆದುಕೊಂಡಿದೆ. ಈ ವೆಬ್ ಸೀರೀಸ್ ರೂಪಾ ರಾವ್ ಅವರ ಪ್ರತಿಭೆಗೆ, ಭಿನ್ನ ಒಳನೋಟಕ್ಕೆ ಕನ್ನಡಿಯಂತೆಯೂ ಇದೆ.

    ಕನ್ನಡ ಚಿತ್ರವೊಂದು ಹೊಸತನದೊಂದಿಗೆ ಬಿಡುಗಡೆಗೆ ಮುನ್ನವೇ ಈ ಪಾಟಿ ಪ್ರಸಿದ್ಧಿ ಪಡೆದುಕೊಂಡಿರೋದು ನಿಜಕ್ಕೂ ಅಪರೂಪದಲ್ಲೇ ಅಪರೂಪದ ಬೆಳವಣಿಗೆ. ಪಕ್ಕಾ ಕಮರ್ಶಿಯಲ್ ಸ್ವರೂಪದ ಈ ಚಿತ್ರ ಪ್ರತೀ ಪ್ರೇಕ್ಷಕರನ್ನೂ ಬೆರಗಾಗಿಸಲಿದೆ ಅನ್ನೋ ಗಾಢವಾದ ಭರವಸೆ ರೂಪಾ ರಾವ್ ಅವರಲ್ಲಿದೆ. ದೇಶಾದ್ಯಂತ ಹೆಸರಾಗಬಲ್ಲ ಮಹಿಳಾ ನಿರ್ದೇಶಕಿಯಾಗಿ ಗುರುತಿಸಿಕೊಳ್ಳೋ ಎಲ್ಲ ಲಕ್ಷಣಗಳನ್ನೂ ಹೊಂದಿರೋ ರೂಪಾ ರಾವ್ ಬಿಡುಗಡೆ ಪೂರ್ವದಲ್ಲಿಯೇ ಕೇಳಿ ಬರುತ್ತಿರೋ ಸದಭಿಪ್ರಾಯಗಳಿಂದ ಮತ್ತಷ್ಟು ಖುಷಿಗೊಂಡಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ತೆರೆಕಾಣಲಿದೆ. ಆ ಮೂಲಕ ಕನ್ನಡಕ್ಕೆ ಏಕಕಾಲದಲ್ಲಿಯೇ ಒಂದೊಳ್ಳೆ ಚಿತ್ರ ಮತ್ತು ಕ್ರಿಯೇಟಿವ್ ನಿರ್ದೇಶಕಿಯ ಆಗಮನವೂ ಆಗಲಿದೆ.