Tag: ವೆಂಟಿಲೇಟರ್

  • ವೆಂಟಿಲೇಟರ್ ಹೆಸರಲ್ಲಿ ಭಾರೀ ಅವ್ಯವಹಾರ- ಸರ್ಕಾರದ ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ

    ವೆಂಟಿಲೇಟರ್ ಹೆಸರಲ್ಲಿ ಭಾರೀ ಅವ್ಯವಹಾರ- ಸರ್ಕಾರದ ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ

    ಹಾಸನ: ಸರ್ಕಾರ ಕೊರೊನಾ ಹೆಸರಲ್ಲಿ ವೆಂಟಿಲೇಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಿದೆ ಎಂದು ಹಾಸನದ ಅರಕಲಗೂಡಿನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಆರೋಪ ಮಾಡಿದ್ದಾರೆ.

    ಅರಕಲಗೂಡು ಪಟ್ಟಣ ಪಂಚಾಯತ್‍ನಲ್ಲಿ ನಡೆದ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

    ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದ ಹೆಸರಿನಲ್ಲಿ ಭಾರೀ ಲೂಟಿ ಮಾಡುತ್ತಿದೆ. ಒಂದು ವೆಂಟಿಲೇಟರ್ ಖರೀದಿಗೆ 8.5 ಲಕ್ಷ ಚಾರ್ಜ್ ಮಾಡಿದೆ. ಆದರೆ ನಾನು ಕೇವಲ 2.5 ಲಕ್ಷವನ್ನು ನೀಡಿ ಸಂಸದರ ನಿಧಿಯಿಂದ ಸಕಲೇಶಪುರ ಆಸ್ಪತ್ರೆಗೆ ವೆಂಟಿಲೇಟರ್ ನೀಡಿದ್ದೇನೆ ಎಂದಿದ್ದಾರೆ.

    ರಾಜ್ಯ ಸರ್ಕಾರ ವೆಂಟಿಲೇಟರ್ ಹೆಸರಲ್ಲಿ 40 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿದೆ. ಸಾರ್ವಜನಿಕರ ಹಣ ದುರುಪಯೋಗ ಆಗುತ್ತಿದ್ದು, ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದ್ದಾರೆ.

  • ಪಿಎಂ ಕೇರ್ಸ್‍ನಿಂದ 2ನೇ ಹಂತದ ಅನುದಾನ ಬಿಡುಗಡೆ – ವೆಂಟಿಲೇಟರ್ ಖರೀದಿಗೆ ಆದ್ಯತೆ

    ಪಿಎಂ ಕೇರ್ಸ್‍ನಿಂದ 2ನೇ ಹಂತದ ಅನುದಾನ ಬಿಡುಗಡೆ – ವೆಂಟಿಲೇಟರ್ ಖರೀದಿಗೆ ಆದ್ಯತೆ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ವೆಂಟಿಲೇಟರ್ ಗಳ ಖರೀದಿಗಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಂದ ಎರಡನೇ ಹಂತದಲ್ಲಿ ಅನುದಾನ ಬಿಡುಗಡೆ ಮಾಡಿದೆ.

    ಎರಡನೇ ಹಂತದಲ್ಲಿ ಮೂರು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದು, ದೇಶದಲ್ಲಿ ತಯಾರಾದ ವೆಂಟಿಲೇಟರ್ ಖರೀದಿಗೆ 2,000 ಕೋಟಿ ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಹಂಚಿಕೆ 1,000 ಕೋಟಿ ಮೀಸಲಿಟ್ಟಿದೆ.

    2,000 ಕೋಟಿ ವೆಚ್ಚ ದಲ್ಲಿ ಸುಮಾರು 50,000 ವೆಂಟಿಲೇಟರ್ ಖರೀದಿ ಮಾಡಲು ನಿರ್ಧರಿಸಿದ್ದು ಈ ಪೈಕಿ 30,000 ವೆಂಟಿಲೇಟರ್ ಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ತಯಾರಿಸುತ್ತಿದೆ. ಆಗ್ವಾ ಹೆಲ್ತ್‍ಕೇರ್ 10,000 ಎಎಂಟಿಝಡ್ ಬೇಸಿಕ್ 5,650 ಎಎಂಟಿಝಡ್ ಹೈ ಎಂಡ್ 4,000 ಹಾಗೂ ಅಲೈಡ್ ಮೆಡಿಕಲ್ ನಿಂದ 350 ವೆಂಟಿಲೇಟರ್ ಖರೀದಿಯಾಗಲಿದೆ.

    ಈವರೆಗೂ 2,923 ವೆಂಟಿಲೇಟರ್ ತಯಾರಿಸಿದ್ದು 1340 ವೆಂಟಿಲೇಟರ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಹಂಚಿಕೆ ಮಾಡಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ 275, ದೆಹಲಿಗೆ 275, ಗುಜರಾತ್ 175, ಬಿಹಾರ್ 100, ಕರ್ನಾಟಕಕ್ಕೆ 90, ರಾಜಸ್ಥಾನಕ್ಕೆ 75 ವೆಂಟಿಲೇಟರ್ ನೀಡಿದ್ದು ಮುಂದಿನ ಹಂತದಲ್ಲಿ 14,000 ವೆಂಟಿಲೇಟರ್ ಹಂಚಿಕೆಯಾಗಲಿದೆ.

    ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಾವಿರ ಕೋಟಿ ನೀಡಿದ್ದು, ಕಾರ್ಮಿಕರ ಜನಸಂಖ್ಯೆ ಆಧಾರದಡಿ ಅನುದಾನ ನೀಡಿದೆ. ಮಹಾರಾಷ್ಟ್ರ 181 ಕೋಟಿ, ಉತ್ತರ ಪ್ರದೇಶ 103 ಕೋಟಿ, ತಮಿಳುನಾಡು 83 ಕೋಟಿ, ಗುಜರಾತ್ 66 ಕೋಟಿ, ದೆಹಲಿ 55 ಕೋಟಿ, ಪಶ್ಚಿಮ ಬಂಗಾಳ 53 ಕೋಟಿ, ಬಿಹಾರ 51 ಕೋಟಿ, ಮಧ್ಯಪ್ರದೇಶ 50 ಕೋಟಿ, ರಾಜಸ್ಥಾನ 50 ಕೋಟಿ ಮತ್ತು ಕರ್ನಾಟಕ 34 ಕೋಟಿ ನೀಡಲಾಗಿದೆ.

    ಈ ಹಿಂದೆ ಮೊದಲ ಹಂತದಲ್ಲಿ 3,100 ಕೋಟಿ ಹಣವನ್ನು ಪಿಎಂ ಕೇರ್ಸ್ ನಿಂದ ಬಿಡುಗಡೆ ಮಾಡಲಾಗಿತ್ತು. ಮೊದಲ ಕಂತಿನಲ್ಲೂ ವೆಂಟಿಲೇಟರ್ ಖರೀದಿಗೆ ಎರಡು ಸಾವಿರ, ವಲಸೆ ಕಾರ್ಮಿರಿಗೆ ಸಾವಿರ ಹಾಗೂ ಲಸಿಕೆ ಅಭಿವೃದ್ಧಿ ನೂರು ಕೋಟಿ ಬಿಡುಗಡೆ ಮಾಡಲಾಗಿತ್ತು.

    ಪಿಎಂ ಕೇರ್ಸ್ ಗೆ ಕೋಟ್ಯಾಂತರ ರೂ. ದಾನ ಬಂದಿದ್ದು ಕೇಂದ್ರ ಸರ್ಕಾರ ಇದರ ಲೆಕ್ಕ ನೀಡುತ್ತಿಲ್ಲ ಮತ್ತು ಅದರ ಬಳಕೆ ಮಾಡುತ್ತಿಲ್ಲ ಎನ್ನುವ ಟೀಕೆಗಳು ಕೇಳಿ ಬಂದಿದ್ದವು. ಈ ಬಗ್ಗೆ ಮಾಹಿತಿ ನೀಡಲು ಸೂಚಿಸುವಂತೆ ಸುಪ್ರೀಂಕೋರ್ಟ್, ದೆಹಲಿ ಮದ್ರಾಸ್ ಸೇರಿಸಂತೆ ಹಲವು ಹೈಕೋರ್ಟ್ ಗಳಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಬೆನ್ನಲ್ಲೆ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಂದ ಅನುದಾನ ಬಿಡುಗಡೆ ಮಾಡಿದೆ.

  • ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಭಾರತದ ಜೊತೆಗಿದ್ದೇವೆ: ಟ್ರಂಪ್

    ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಭಾರತದ ಜೊತೆಗಿದ್ದೇವೆ: ಟ್ರಂಪ್

    – ಭಾರತಕ್ಕೆ ಅಮೆರಿಕದಿಂದ ವೆಂಟಿಲೇಟರ್ ದಾನ

    ನವದೆಹಲಿ: ಕೊರೊನಾ ವಿರುದ್ಧ ಹೋರಾಟದಲ್ಲಿ ನಾವು ಮೋದಿ ಮತ್ತು ಭಾರತದ ಜೊತೆಗೆ ಇದ್ದೇವೆ. ನಾವು ಇಂಡಿಯಾಗೆ ವೆಂಟಿಲೇಟರ್ ಗಳನ್ನು ಸಪ್ಲೈ ಮಾಡುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

    ಭಾರತದಲ್ಲಿ 85,000 ಸಾವಿರಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಸದ್ಯ ಚೀನಾಗಿಂತ ಭಾರತದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಚೀನಾದಲ್ಲಿ ಈಗ 83 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈಗ ಅಮೆರಿಕ ಕೂಡ ಕೊರೊನಾ ವಿರುದ್ಧ ಹೋರಾಟದಲ್ಲಿ ಇಂಡಿಯಾ ಜೊತೆ ಕೈ ಜೋಡಿಸುವುದಾಗಿ ಘೋಷಣೆ ಮಾಡಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಟ್ರಂಪ್ ಅವರು, ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ಅಮೆರಿಕ ವೆಂಟಿಲೇಟರ್ ಗಳನ್ನು ದಾನ ಮಾಡುತ್ತದೆ ಎಂದು ಘೋಷಿಸಲು ನನಗೆ ಹೆಮ್ಮೆ ಇದೆ. ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾವು ಭಾರತ ಮತ್ತು ನರೇಂದ್ರ ಮೋದಿ ಅವರ ಜೊತೆಗೆ ನಿಲ್ಲುತ್ತೇವೆ. ಜೊತೆಗೆ ಕೊರೊನಾಗೆ ಲಸಿಕೆ ತಯಾರಿಸಲು ನಾವು ಭಾರತದ ಜೊತೆ ಸಹಕರಿಸುತ್ತಿದ್ದೇವೆ. ನಾವು ಒಟ್ಟಾಗಿ ಕಣ್ಣಿಗೆ ಕಾಣದ ಶತ್ರುವನ್ನು ಸೋಲಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಭಾರತ ಮತ್ತು ಅಮೆರಿಕದ ಸಂಬಂಧ ಚೆನ್ನಾಗಿದ್ದು, ಟ್ರಂಪ್ ಅವರ ಕೋರಿಕೆಯ ಮೇರೆಗೆ ಭಾರತವು ಕಳೆದ ತಿಂಗಳು 50 ಮಿಲಿಯನ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಅಮೆರಿಕಗೆ ರಫ್ತು ಮಾಡಿತ್ತು. ಅಮೆರಿಕದಲ್ಲೂ ಕೂಡ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಕೊರೊನಾ ರೋಗಿಗಳಿಗೆ ನೀಡಲು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಬೇಕೆಂದು ಟ್ರಂಪ್ ಭಾರತಕ್ಕೆ ಮನವಿ ಮಾಡಿದ್ದರು. ಭಾರತ ಕೂಡ ಮಾತ್ರೆಗಳನ್ನು ರಫ್ತು ಮಾಡಿತ್ತು.

    ಭಾರತಕ್ಕೆ ವೆಂಟಿಲೇಟರ್ ನೀಡುವ ವಿಚಾರದಲ್ಲಿ ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪತ್ರಿಕಾ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ, ನಮ್ಮ ಅಧ್ಯಕ್ಷರು ಭಾರತದೊಂದಿಗೆ ನಮ್ಮ ಉತ್ತಮ ಸಂಬಂಧವನ್ನು ಶ್ಲಾಘಿಸಿದರು. ಭಾರತದ ನಮಗೆ ಉತ್ತಮ ಸ್ನೇಹಿ ದೇಶವಾಗಿದೆ. ಅವರಿಗೆ ವೆಂಟಿಲೇಟರ್ ಗಳನ್ನು ನೀಡುತ್ತಿದ್ದೇವೆ. ಜೊತೆಗೆ ಬೇರೆ ದೇಶಗಳಿಗೂ ನಾವು ವೆಂಟಿಲೇಟರ್ ನೀಡುತ್ತಿದ್ದೇವೆ ಎಂದು ಹೇಳಿದರು. ಆದರೆ ಭಾರತಕ್ಕೆ ಎಷ್ಟು ವೆಂಟಿಲೇಟರ್ ನೀಡುತ್ತೇವೆ ಎಂದು ಅಮೆರಿಕ ತಿಳಿಸಿಲ್ಲ.

    ಇದೇ ವೇಳೆ ಭಾರತದ ಪ್ರಧಾನಿ ಮೋದಿ ಅವರನ್ನು ಹಾಡಿಹೊಗಳಿರುವ ಟ್ರಂಪ್, ಇಂಡಿಯಾ ತುಂಬ ವಿಶಾಲವಾದ ದೇಶ. ನಿಮಗೆ ತಿಳಿದಿರುವಂತೆ ಭಾರತದ ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ. ನಾನು ಈ ಹಿಂದೆ ಭಾರತಕ್ಕೆ ಹೋಗಿ ಬಂದಿದ್ದೆ. ನಾವು ಒಟ್ಟಿಗೆ ಇದ್ದೇವೆ ಎಂದು ಹೇಳುವ ಮೂಲಕ ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಮಯವನ್ನು ಟ್ರಂಪ್ ಅವರು ನೆನಪು ಮಾಡಿಕೊಂಡಿದ್ದಾರೆ.

    ಇದರ ಜೊತೆಗೆ ಭಾರತದೊಂದಿಗೆ ಸೇರಿಕೊಂಡು ಕೊರೊನಾಗೆ ಲಸಿಕೆ ಕಂಡುಹಿಡಿಯಲು ಟ್ರಂಪ್ ಅವರು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಭಾರತ ಮತ್ತು ಅಮೆರಿಕ ತಜ್ಞರನ್ನೊಳಗೊಂಡ ಒಂದು ತಂಡವನ್ನು ರಚಿಸಿದ್ದಾರೆ. ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ ನಾವು ಕೊರೊನಾಗೆ ನಿರ್ದಿಷ್ಟ ಲಸಿಕೆಯನ್ನು ಸಿದ್ಧ ಪಡಿಸುತ್ತೇವೆ ಎಂದು ಟ್ರಂಪ್ ತಿಳಿಸಿದ್ದಾರೆ.

  • ಕೊರೊನಾದಿಂದ ರೋಗಿ ಗುಣಮುಖರಾದ್ರೆ ಐಸಿಯುನಲ್ಲೇ ಡಾಕ್ಟರ್ಸ್ ಡ್ಯಾನ್ಸ್

    ಕೊರೊನಾದಿಂದ ರೋಗಿ ಗುಣಮುಖರಾದ್ರೆ ಐಸಿಯುನಲ್ಲೇ ಡಾಕ್ಟರ್ಸ್ ಡ್ಯಾನ್ಸ್

    – ನೃತ್ಯದ ಮೂಲಕ ಧೈರ್ಯ ಹೇಳುತ್ತಿರುವ ವೈದ್ಯರು

    ವಾಷಿಂಗ್ಟನ್: ಕೊರೊನಾ ಸೋಂಕಿನಿಂದ ರೋಗಿ ಗುಣಮುಖನಾಗಿ ವೆಂಟಿಲೇಟರ್ ನಿಂದ ಎದ್ದರೆ ಐಸಿಯುನಲ್ಲಿರುವ ವೈದ್ಯರ ತಂಡ ಡ್ಯಾನ್ಸ್ ಮಾಡಿ ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

    ಕೊರೊನಾ ವೈರಸ್ ಮಹಾಮಾರಿ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಗೆಲವು ಸಾಧಿಸಲು ವಿಶ್ವಾದ್ಯಂತ ವೈದ್ಯರು ದೊಡ್ಡ ಹೋರಾಟವನ್ನೇ ಮಾಡುತ್ತಿದ್ದಾರೆ. ಈ ನಡುವೆ ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‍ನಲ್ಲಿರುವ ರೊನಾಲ್ಡ್ ರೇಗನ್ ಯುಸಿಎಲ್‍ಎ ಆಸ್ಪತ್ರೆಯ ಐಸಿಯುನಲ್ಲಿರುವ ವೈದ್ಯರ ತಂಡವು ಕೊರೊನಾ ವೈರಸ್ ನಿಂದ ರೋಗಿ ಗುಣಮುಖವಾದರೆ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿದೆ.

    ವೈದ್ಯರು ಡ್ಯಾನ್ಸ್ ಮಾಡುವ ವಿಡಿಯೋವನ್ನು ಅಮೆರಿಕದ ವೈದ್ಯೆ ಡಾ. ನಿಡಾ ಖಾದಿರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು, ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖವಾದರೆ, ವೆಂಟಿಲೇಟರ್ ನಿಂದ ಎದ್ದು ಬಂದರೆ ನಮ್ಮ ಐಸಿಯು ಸಿಬ್ಬಂದಿ ಡ್ಯಾನ್ಸ್ ಮಾಡುತ್ತಾರೆ. ಈ ಮೂಲಕ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    https://twitter.com/HungryDes/status/1247369358705176577

    ಈ ಪೋಸ್ಟ್ ಅನ್ನು ಶೇರ್ ಮಾಡಿರುವ ಖಾದಿರ್ ಅವರು ಸಹೋದ್ಯೋಗಿ, ಕೊರೊನಾ ವಿರುದ್ಧ ಹೋರಾಟದಲ್ಲಿ ನಮ್ಮ ಸಿಬ್ಬಂದಿ ಸಣ್ಣ ಗೆಲುವನ್ನು ಕೂಡ ಆಚರಣೆ ಮಾಡುತ್ತಿದ್ದಾರೆ. ನಿನ್ನೆ ನಮ್ಮ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ವೆಂಟಿಲೇಟರ್ ನಿಂದ ಎದ್ದು ಸ್ವತಃ ತಾವೇ ಉಸಿರಾಡುತ್ತಿದ್ದಾರೆ. ಇದರಿಂದ ನಮಗೆ ಸಂತೋಷವಾಗಿ ಸ್ವಲ್ಪ ಡ್ಯಾನ್ಸ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿರುವ ಈ ವಿಡಿಯೋವನ್ನು 8 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಜೊತೆ 30 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಎಲ್ಲರೂ ಆರೋಗ್ಯ ಯೋಧರ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಅಮೆರಿಕದ ಜನರಿಗೆ ನೀವು ಮಾಡಿದ ಕೆಲಸಕ್ಕೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು. ನೀವು ನಿಜವಾದ ಹೀರೋಗಳು ಎಂದು ಜನ ಕಮೆಂಟ್ ಮಾಡಿದ್ದಾರೆ.

  • ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

    ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

    ಬೆಂಗಳೂರು: ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್(44) ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಕೆಲ ದಿನಗಳಿಂದ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೆಂಟಿಲೇಟರಿನಲ್ಲಿ  ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

    ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಆಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. 6 ದಿನಗಳ ಹಿಂದೆ ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿ ವೈಫಲ್ಯದ ಜೊತೆಗೆ ಕಾಲಿಗೆ ಗ್ಯಾಂಗ್ರಿನ್ ಕೂಡ ಆಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಕಾರಣ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

    ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಬುಲೆಟ್ ಪ್ರಕಾಶ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆಯೇ ಅವರ ಜೀವಕ್ಕೆ ಮುಳ್ಳಾಯಿತೇ ಎಂಬ ಪ್ರಶ್ನೆ ಎದ್ದಿತ್ತು. ಅಲ್ಲದೆ ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ಹೀಗಾಗಿ ಹಾಸ್ಯನಟ ಮಾನಸಿಕವಾಗಿ ಬಹಳ ನೊಂದಿದ್ದ ವಿಚಾರ ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.

    ಬುಲೆಟ್ ಪ್ರಕಾಶ್ ಒಟ್ಟು 300ಕ್ಕೂ ಹೆಚ್ಚು ಚಲನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ರಾಯಲ್ ಎನ್‍ಫೀಲ್ಡ್ ಬೈಕಿನಿಂದಾಗಿ ‘ಬುಲೆಟ್’ ಹೆಸರು ಬಂದಿತ್ತು. 2015ರಲ್ಲಿ ಬಿಜೆಪಿ ಪಕ್ಷವನ್ನು ಬುಲೆಟ್ ಪ್ರಕಾಶ್ ಸೇರಿದ್ದರು.

  • ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬೆಂಗಳೂರು: ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದೀಗ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಾಗಿ ಬುಲೆಟ್ ಪ್ರಕಾಶ್ ಶನಿವಾರ ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು.

    ಇದುವರೆಗೆ ಮೂರು ಆಸ್ಪತ್ರೆಯನ್ನು ಬದಲಿಸಿರುವ ಬುಲೆಟ್ ಪ್ರಕಾಶ್ ಶನಿವಾರ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಇದೀಗ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಲಿವರ್ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್, ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಅಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಿ ವೈಫಲ್ಯದ ಜೊತೆಗೆ ಕಾಲಿಗೆ ಗ್ಯಾಂಗ್ರಿನ್ ಕೂಡ ಆಗಿದೆ. ಹೀಗಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ವೆಂಟಿಲೇಟರ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

    ಕೃತಕ ಉಸಿರಾಟ ಸಾಧನದಿಂದ ಉಸಿರಾಡುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ. ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆಯೇ ಅವರ ಜೀವಕ್ಕೆ ಮುಳ್ಳಾಯಿತಾ ಎಂಬ ಪ್ರಶ್ನೆ ಎದ್ದಿತ್ತು. ಅಲ್ಲದೆ ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ಹೀಗಾಗಿ ಹಾಸ್ಯನಟ ಮಾನಸಿಕವಾಗಿ ಬಹಳ ನೊಂದಿದ್ದ ವಿಚಾರ ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.

  • ಎಮರ್ಜೆನ್ಸಿ ಅಂಬುಲೆನ್ಸ್‌ನಿಂದ್ಲೇ ರೋಗಿಗಳ ಜೀವಕ್ಕೆ ಕುತ್ತು

    ಎಮರ್ಜೆನ್ಸಿ ಅಂಬುಲೆನ್ಸ್‌ನಿಂದ್ಲೇ ರೋಗಿಗಳ ಜೀವಕ್ಕೆ ಕುತ್ತು

    -ಪಬ್ಲಿಕ್ ಟಿವಿ ಸ್ಟಿಂಗ್ ಕ್ಯಾಮೆರಾದಲ್ಲಿ ಬಯಲು

    ಬೆಂಗಳೂರು: 108 ಅಂಬುಲೆನ್ಸ್ ರೋಗಿಗಳ ಪಾಲಿಗೆ ಮಿನಿ ಸಂಜೀವಿನಿ ಇದ್ದಂತೆ. ತುರ್ತು ಆರೋಗ್ಯ ಚಿಕಿತ್ಸೆಗೆ ಕ್ಷಣಾರ್ಧದಲ್ಲೇ ರೋಗಿಯ ಪ್ರಾಣವನ್ನು ಉಳಿಸುವ ಕೆಲಸ ಮಾಡುವ ಈ ಅಂಬುಲೆನ್ಸ್ ಇದೀಗ ಸಾವಿನ ಹಾದಿಯನ್ನು ತೋರಿಸುತ್ತಿವೆ.

    ರಾಜಧಾನಿ ಬೆಂಗಳೂರಿನಲ್ಲಿರುವ ಅಂಬುಲೆನ್ಸ್‌ಗಳಿಗೆ ವೆಂಟಿಲೇಟರ್ ಕೊರತೆ ಉಂಟಾಗಿದೆ. ಬೆಂಗಳೂರಿನಲ್ಲಿ ಒಟ್ಟು 73 ಅಂಬುಲೆನ್ಸ್‌ಗಳಿವೆ. ಈ ಪೈಕಿ ಕೇವಲ 17ರಲ್ಲಿ ಮಾತ್ರ ವೆಂಟಿಲೇಟರ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವುದಕ್ಕೆ ತುಂಬಾ ಸಮಸ್ಯೆಯಾಗಿದೆ. ವೆಂಟಿಲೇಟರ್ ಇರುವ ಖಾಸಗಿ ಅಂಬುಲೆನ್ಸ್ ಡ್ರೈವರ್‌ಗಳು, ಇದನ್ನೇ ಬಂಡಾವಳ ಮಾಡಿಕೊಂಡು ದುಪ್ಪಟ್ಟು ಹಣ ಪೀಕುತ್ತಿದ್ದಾರೆ. ತುರ್ತು ಪರಸ್ಥಿತಿಯಲ್ಲಿರುವ ರೋಗಿಯನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸಲು ಕೈ ತುಂಬಾ ಹಣ ನೀಡಲೇಬೇಕು. ಪಬ್ಲಿಕ್ ಟಿವಿ ಸ್ಟಿಂಗ್ ತಂಡ ಖಾಸಗಿ ಅಂಬುಲೆನ್ಸ್ ಡ್ರೈವರ್‌ಗಳ ಜೊತೆ ಮಾತಿಗಿಳಿದಾಗ ಈ ಬಗ್ಗೆ ಮಾಫಿಯಾ ಬಯಲಾಗಿದೆ.

    ಪ್ರತಿನಿಧಿ: ಒಂದೊಂದು ಡ್ರೈವರ್‌ಗಳು ವೆಂಟಿಲೇಟರ್ ಗಳೇ ಹಾಕಿರಲ್ವಲ್ಲ
    ಚಾಲಕ: ಹೇ. ಇರ್ತಾವೆ
    ಪ್ರತಿನಿಧಿ: ಸುಮಾರು ಅಂಬುಲೆನ್ಸ್ ಗೆ ಇರಲ್ಲ
    ಚಾಲಕ: ಹಾ. ಹೌದು
    ಪ್ರತಿನಿಧಿ: ಮೊನ್ನೆ ನಮ್ಮ ಬ್ರದರ್ ನಾ ಕರ್ಕೊಂಡು ಬಂದ್ವಿ. ಇರಲಿಲ್ಲ
    ಚಾಲಕ: ವೆಂಟಿಲೇಟರ್ ಇರೋ ಗಾಡಿ ಕಾಸ್ಟ್ಲಿ ಅದು
    ಪ್ರತಿನಿಧಿ: ಮೊನ್ನೆ ನಮ್ಮ ಬ್ರದರ್‍ನಾ ಕರ್ಕೊಂಡು ಬಂದಿದ್ವಿ. ವೆಂಟಿಲೇಟರ್ ಇರಲಿಲ್ಲ
    ಚಾಲಕ: ಪೇಷೆಂಟ್ ಎಲ್ಲಿದಾರೆ
    ಪ್ರತಿನಿಧಿ: ಮೊನ್ನೆ ಕರ್ಕೊಂಡು ಬಂದಿದ್ವಿ
    ಚಾಲಕ: ಬೇಕಾದ್ರೆ ಹೇಳಿ ಇರ್ತಿವಿ. ವೆಂಟಿಲೇಟರ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
    ಪ್ರತಿನಿಧಿ: ದುಡ್ಡೇನಾದ್ರೂ ಚಾರ್ಜ್ ಮಾಡ್ತೀರಾ
    ಚಾಲಕ: ಹೌದು
    ಪ್ರತಿನಿಧಿ: ಎಷ್ಟು?
    ಚಾಲಕ: ಯಾವ ಆಸ್ಪತ್ರೆಗೆ ಹೋಗ್ತೀರಾ

    ಅಂಬುಲೆನ್ಸ್‌ಗಳಲ್ಲಿ ಮುಖ್ಯವಾಗಿ ಎರಡು ಕ್ಯಾಟಗರಿ ಇರುತ್ತೆ. ಒಂದು ಬೇಸಿಕ್ ಲೈಫ್ ಸಪೋರ್ಟ್. ಮತ್ತೊಂದು ಅಡ್ವಾನ್ಸ್ ಲೈಫ್ ಸಪೊರ್ಟ್ ಅಂತ. ಅಡ್ವಾನ್ಸ್ ಲೈಫ್ ಸಪೊರ್ಟ್‍ನಲ್ಲಿ ವೆಂಟಿಲೇಟರ್ ಇರುತ್ತೆ. ಹೃದಯಘಾತ, ರಸ್ತೆ ಅಪಘಾತ ಹೀಗೆ ರೋಗಿಗಳು ತುಂಬಾ ಕ್ರಿಟಿಕಲ್ ಕಂಡಿಷನ್ ಇರುವ ಸಮಯದಲ್ಲಿ ಈ ಅಂಬುಲೆನ್ಸ್ ಬಳಸುತ್ತಾರೆ. ಬೇಸಿಕ್ ಲೈಫ್ ಸಪೋರ್ಟ್ ಮಶಿನ್, ವೆಂಟಿಲೇಟರ್ ಗಿಂತ ಕಡಿಮೆ ಗುಣಮಟ್ಟ ಇರುತ್ತೆ. ಲಘು ಹೃದಯಾಘಾತ ಹಾಗೂ ಸಾಮಾನ್ಯ ಸಂದರ್ಭಗಳಲ್ಲಿ ಇದರ ಉಪಯೋಗವಾಗುತ್ತೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹೃದಯಾಘಾತ, ರಸ್ತೆ ಅಪಘಾತಗಳಾದ್ರೆ ವೆಂಟಿಲೇಟರ್ ಇರಲೇಬೇಕು. ಹೃದಯ ಬಡಿತ ಸ್ಲೋ ಮೂವಿಂಗ್ ಆದಾಗ ಹೃದಯವನ್ನು ಈ ವೆಂಟಿಲೇಟರ್ ಆ್ಯಕ್ಟಿವ್ ಮಾಡುತ್ತೆ. ಆದರೆ ಬೆಂಗಳೂರಿನಲ್ಲಿ ಇದರ ಸಂಖ್ಯೆ ಕೇವಲ 17 ಮಾತ್ರ ಇದೆ.

    ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಕೇವಲ 17 ವೆಂಟಿಲೇಟರ್ ಇರುವ ಅಂಬುಲೆನ್ಸ್ ಗಳಿರುವುದು ಸರ್ಕಾರಕ್ಕೆ ನಾಚಿಕೆಗೇಡಿನ ವಿಷಯ. ಏಕಕಾಲಕ್ಕೆ ವೆಂಟಿಲೇಟರ್ ಇರುವ ಅಂಬುಲೆನ್ಸ್ ಗಳೇ ಬೇಕು ಎಂಬ ಮೂರ್ನಾಲ್ಕು ದೂರುಗಳು ಬಂದರೆ, ತುರ್ತಾಗಿ ಚಿಕಿತ್ಸೆ ನೀಡಲಾಗದಂತಹ ಸ್ಥಿತಿಯಲ್ಲಿ ನಮ್ಮ ರಾಜ್ಯ ಸರ್ಕಾರ ಇದೆ. ಈ ಸ್ಟೋರಿಯನ್ನ ನೋಡಿದ ಮೇಲೆನಾದ್ರೂ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಈ ಬಗ್ಗೆ ಗಮನ ಹರಿಸ್ತಾರಾ? ರೋಗಿಗಳ ಪ್ರಾಣ ಉಳಿಸುವ ನಿಟ್ಟಿನಲ್ಲಿ ಹೆಚ್ಚುವರಿ ವೆಂಟಿಲೇಟರ್ ಅಂಬುಲೆನ್ಸ್ ಸೇವೆಯನ್ನು ಓದಗಿಸುತ್ತಾರೆ ಎಂಬುದನ್ನು ನೋಡಬೇಕು.

    108 ಎಮರ್ಜೆನ್ಸಿ ತಂಡದ ಮುಖ್ಯಸ್ಥ ಡಾ. ಪ್ರಮೋದ್ ಈ ಬಗ್ಗೆ ಪ್ರತಿಕ್ರಿಯಿಸಿ, ತುರ್ತು ಆರೋಗ್ಯ ಚಿಕಿತ್ಸೆ ಸಂದರ್ಭದಲ್ಲಿ, ವೆಂಟಿಲೇಟರ್ ಇರೋ ಅಂಬುಲೆನ್ಸ್ ಗಳ ಸೇವೆ ತುಂಬಾ ಅವಶ್ಯಕತೆ ಇದೆ. ರೋಗಿಗೆ ಕ್ರಿಟಿಕಲ್ ಕಂಡಿಷನ್ ಇದ್ದಾಗ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸುವಾಗ ವೆಂಟಿಲೇಟರ್ ಇರಲೇಬೇಕು. ಆದರೆ ನಮ್ಮ ಬೆಂಗಳೂರಿನಲ್ಲಿ ಇದರ ಸಂಖ್ಯೆ ಕಡಿಮೆ ಇದೆ. ವೆಂಟಿಲೇಟರ್ ಇರುವ ಅಂಬುಲೆನ್ಸ್ ಅನ್ನು ಕಳುಹಿಸುವಷ್ಟರಲ್ಲಿ ತಡವಾಗುತ್ತೆ. ಹೀಗಾಗಿ ರೋಗಿಗೆ ಸಮಸ್ಯೆಯಾಗುತ್ತೆ. ಆದರೂ ನಾವು ನಮ್ಮ ಶಕ್ತಿ ಮೀರಿ ಕಡಿಮೆ ಸಮಯದಲ್ಲಿ ಈ ಅಂಬುಲೆನ್ಸ್ ಅನ್ನು ಕಳುಹಿಸಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

  • ಪ್ರಾಣದ ಜೊತೆ ಅಧಿಕಾರಿಗಳ ಆಟ – ಕೆ.ಆರ್ ಆಸ್ಪತ್ರೆಗೆ ಬರ್ಲಿಲ್ಲ ಜೀವರಕ್ಷಕ ವೆಂಟಿಲೇಟರ್

    ಪ್ರಾಣದ ಜೊತೆ ಅಧಿಕಾರಿಗಳ ಆಟ – ಕೆ.ಆರ್ ಆಸ್ಪತ್ರೆಗೆ ಬರ್ಲಿಲ್ಲ ಜೀವರಕ್ಷಕ ವೆಂಟಿಲೇಟರ್

    ಮೈಸೂರು: ನಗರದ ಕೆ.ಆರ್. ಆಸ್ಪತ್ರೆ ಎಂದರೆ ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗೆ ದೊಡ್ಡಾಸ್ಪತ್ರೆ ಎಂದೇ ಹೆಸರುವಾಸಿ. ಆದರೆ ಈ ಆಸ್ಪತ್ರೆಯೇ ದೀರ್ಘಕಾಲದ ರೋಗದಿಂದ ಬಳಲುತ್ತಿದೆ.

    ಹೌದು. ಚಾಮರಾಜನಗರ ಜಿಲ್ಲೆಯ ಹನೂರಿನ ಸುಳ್ವಾಡಿ ವಿಷಹಾರ ದುರಂತ ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿತ್ತು. ದುರಂತ ನಡೆದ ದಿನ ನೂರಾರು ರೋಗಿಗಳನ್ನ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಿದ್ದರು. ಆದರೆ ಅಂದು ಆಸ್ಪತ್ರೆಯಲ್ಲಿ ಸಾಕಷ್ಟು ವೆಂಟಿಲೇಟರ್ ವ್ಯವಸ್ಥೆ ಇಲ್ಲದೆ ಮೈಸೂರಿನ ಬೇರೆ ಬೇರೆ ಖಾಸಗಿ ಆಸ್ಪತ್ರೆಗೆ ಅಸ್ವಸ್ಥರನ್ನು ದಾಖಲಿಸಲಾಗಿತ್ತು. ಆಗ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಕೆ.ಆರ್. ಆಸ್ಪತ್ರೆಗೆ ಆಗತ್ಯವಿರುವಷ್ಟು ವೆಂಟಿಲೇಟರ್ ಮಂಜೂರು ಮಾಡೋದಾಗಿ ಹೇಳಿತ್ತು. ಆದರೆ ಘಟನೆ ನಡೆದು 7 ತಿಂಗಳಾದರೂ ಟೆಂಡರ್ ಪ್ರಕ್ರಿಯೆ ವಿಳಂಬವಾಗಿ ವೆಂಟಿಲೇಟರ್‍ಗಳು ಮಾತ್ರ ಆಸ್ಪತ್ರೆಗೆ ಸೇರಿಲ್ಲ ಎಂದು ಆಸ್ಪತ್ರೆ ಸೂಪರಿಡೆಂಟ್ ನಂಜುಂಡಸ್ವಾಮಿ ಹೇಳಿದ್ದಾರೆ.

    ಆಸ್ಪತ್ರೆಯಲ್ಲಿ ಸದ್ಯ 15 ವೆಂಟಿಲೇಟರ್ ಕಾರ್ಯನಿರ್ವಹಿಸುತ್ತಿದ್ದು, 7 ಹೊಸ ವೆಂಟಿಲೇಟರ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ ಕೆ.ಆರ್ ಆಸ್ಪತ್ರೆಯಲ್ಲಿ ಇರುವ ಯಾವುದೇ ಅಂಬುಲೆನ್ಸ್ ಗಳಿಗೂ ವೆಂಟಿಲೇಟರ್ ವ್ಯವಸ್ಥೆ ಇಲ್ಲ. ಇದರಿಂದ ಅಂಬುಲೆನ್ಸ್‍ಗಳಿಗೂ ವೆಂಟಿಲೇಟರ್ ಅಳವಡಿಸುವ ಬೇಡಿಕೆ ಸಹ ಇದೆ. ಆದರೂ ಸರ್ಕಾರ ಮಾತ್ರ ಇನ್ನು ಯಾವುದೇ ಕ್ರಮ ವಹಿಸಿಲ್ಲ.

    ಮೈಸೂರು ಜಿಲ್ಲೆಯಲ್ಲಿ ಜಿ.ಟಿ. ದೇವೇಗೌಡ, ಸಾರಾ ಮಹೇಶ್ ಇಬ್ಬರು ಸಚಿವರಿದ್ದಾರೆ. ಅದಾಗ್ಯೂ, ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ವೆಂಟಿಲೇಟರ್ ಒದಗಿಸುವಲ್ಲಿ ಇವರಿಗೂ ಕೂಡ ಕಾಳಜಿ ಇಲ್ಲದಂತಿದೆ.

  • ವಿಮ್ಸ್ ನಲ್ಲಿ ವೆಂಟಿಲೇಟರ್ ಸಮಸ್ಯೆ- ಅಪಘಾತದ ಗಾಯಾಳು ಸಾವು

    ವಿಮ್ಸ್ ನಲ್ಲಿ ವೆಂಟಿಲೇಟರ್ ಸಮಸ್ಯೆ- ಅಪಘಾತದ ಗಾಯಾಳು ಸಾವು

    ಬಳ್ಳಾರಿ: ವಿಮ್ಸ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗಲ್ಲ ಎನ್ನುವ ಆರೋಪ ಮಧ್ಯೆಯೇ ರೋಗಿಯೊಬ್ಬರು ವೆಂಟಿಲೇಟರ್ ವ್ಯವಸ್ಥೆ ಇಲ್ಲದೇ ಮೃತಪಟ್ಟ ಘಟನೆ ನಡೆದಿದೆ.

    ಗುರುವಾರ ಕುರುಗೋಡ್ ತಾಲೂಕಿಮ ಬೈಲೂರಿನಲ್ಲಿ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಬೈಲೂರಿನ ಜಿಎಂ ವೀರೇಶಯ್ಯ(48) ಗಂಭೀರವಾಗಿ ಗಾಯಗೊಂಡಿದ್ದರು. ಕೆಎಸ್‍ಆರ್ ಟಿಸಿ ಬಸ್ ಗುದ್ದಿದ ಪರಿಣಾಮ ವೀರೇಶಯ್ಯನ ಕಾಲು ಮುರಿದಿತ್ತು. ಹೀಗಾಗಿ ಕೂಡಲೇ ಗಾಯಾಳುವನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.

    ಆಸ್ಪತ್ರೆಗೆ ತಂದಾಗ ವೆಂಟಿಲೇಟರ್ ಇಲ್ಲ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಎಂದು ವಿಮ್ಸ್ ಸಿಬ್ಬಂದಿ ಹೇಳಿದ್ದಾರೆ. ಗಾಯಾಳಿಗೆ ಸರಿಯಾದ ಚಿಕಿತ್ಸೆ ನೀಡದ ಪರಿಣಾಮ ಆಸ್ಪತ್ರೆಗೆ ತಂದು ಎರಡು ಗಂಟೆಯಲ್ಲೇ ವೀರೇಶಯ್ಯ ಸಾವನ್ನಪ್ಪಿದ್ದಾರೆ.

    ವೈದ್ಯರು ಚಿಕಿತ್ಸೆ ನೀಡಲು ನಿರ್ಲಕ್ಷ್ಯ ಮಾಡಿದ್ದಾರೆಂದು ವಿರೇಶಯ್ಯನ ಸಂಬಂಧಿಗಳ ಆರೋಪಿಸಿದ್ದಾರೆ. ನಮಗಾದಂತೆ ಇನ್ಯಾರಿಗೂ ಈ ರೀತಿ ಆಗದಿರಲಿ ಆಸ್ಪತ್ರೆಯಲ್ಲಿ ಸೂಕ್ತ ವೆಂಟಿಲೇಟರ್ ವ್ಯವಸ್ಥೆ ಮಾಡುವಂತೆ ಅವರು ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಸಾವು

    ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಸಾವು

    ಮಂಡ್ಯ: ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಮೃತಪಟ್ಟ ಘಟನೆ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ಶಶಿಕುಮಾರ್ ಮತ್ತು ಶೃತಿ ದಂಪತಿಯ ಗಂಡು ಮಗು ಮೃತಪಟ್ಟಿದೆ. ಗುರುವಾರ ಬೆಳಗ್ಗೆ ಮಗುವಿಗೆ ಉಸಿರಾಟ ಸಮಸ್ಯೆ ಕಂಡುಬಂದಿತ್ತು. ಕೂಡಲೇ ಪೋಷಕರು ಮಗುವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಇದ್ದರಿಂದ ಮಗುವನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು.

    ವೈದ್ಯರು ನಿರಾಕರಿಸುತ್ತಿದ್ದಂತೆ ಮಗುವನ್ನು ಆ್ಯಂಬುಲೆನ್ಸ್ ಮುಖಾಂತರ ಮೈಸೂರು ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಮಿಮ್ಸ್ ಆಸ್ಪತ್ರೆಯ ವೈದ್ಯರು ಮಗುವನ್ನು ತಕ್ಷಣವೇ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರೇ ಮಗು ಬದುಕುಳಿಯುತ್ತಿತ್ತು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಗಂಭೀರ ಪರಿಸ್ಥಿತಿಯಲ್ಲಿದ್ದ ಮಗವನ್ನು ತಕ್ಷಣವೇ ದಾಖಲಿಸಿಕೊಳ್ಳದೇ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಮಗುವಿನ ಸಾವಿಗೆ ಮಿಮ್ಸ್ ವೈದ್ಯರುಗಳೇ ಕಾರಣವೆಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv