Tag: ವೆಂಟಿಲೇಟರ್

  • ವೆಂಟಿಲೇಟರ್ ಸಿಗದೆ 31 ವರ್ಷದ ಯುವಕ ಕೊರೊನಾಗೆ ಬಲಿ

    ವೆಂಟಿಲೇಟರ್ ಸಿಗದೆ 31 ವರ್ಷದ ಯುವಕ ಕೊರೊನಾಗೆ ಬಲಿ

    – ಐಸಿಯುಗೆ ಶಿಫ್ಟ್ ಮಾಡಿದ್ದೇವೆಂದು ಸುಳ್ಳು ಹೇಳಿತಾ ಆಸ್ಪತ್ರೆ

    ಚಿಕ್ಕಮಗಳೂರು: ವೆಂಟಿಲೇಟರ್ ಸಿಗದ 31 ವರ್ಷದ ಯುವಕ ಕೊರೊನಾಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ನಡೆದಿದೆ.

    31 ವರ್ಷದ ಮೇಘರಾಜ್ ಮೃತ ದುರ್ದೈವಿ. ಮೃತ ಮೇಘರಾಜ್ ಮೂಲತಃ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಸಮೀಪದ ಬಸನಿ ಗ್ರಾಮದ ನಿವಾಸಿ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಮೇಘರಾಜ್ ಕಳೆದೊಂದು ವಾರದ ಹಿಂದೆ ನಗರದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೊಂದು ವಾರದಿಂದ ಚಿಕಿತ್ಸೆಯಲ್ಲಿದ್ದ ಮೇಘರಾಜ್ ಕಳೆದ ರಾತ್ರಿ 1.30ರವರೆಗೂ ಚೆನ್ನಾಗಿದ್ದರು. ಆದರೆ, ಇಂದು ಬೆಳಗ್ಗೆ ಮೇಘರಾಜ್ ಮೊಬೈಲ್‍ಗೆ ಕರೆ ಮಾಡಿದಾಗ ಆಸ್ಪತ್ರೆಯವರು ಅವರು ಸಾವನ್ನಪ್ಪಿರುವುದಾಗಿ ತಿಳಿದ್ದಾರೆ.

    ವಿಷಯ ಕೇಳಿ ಕುಟುಂಬಸ್ಥರು, ಸ್ನೇಹಿತರಿಗೆ ಬರಸಿಡಿಲು ಬಡಿದಂತಾಗಿದೆ. ಅಯ್ಯೋ… ದೇವ್ರೆ, ರಾತ್ರಿ 1.30ರ ತನಕ ಚೆನ್ನಾಗಿದ್ದವನು ದಿಢೀರ್ ಎಂದು ಹೇಗೆ ಸತ್ತ ಎಂದು ಕಂಗಾಲಾಗಿದ್ದಾರೆ. ಮೃತ ಮೇಘರಾಜ್ ರಾತ್ರಿ 1:30ರವರೆಗೆ ಚಾಟ್ ಮಾಡಿದ್ದಾನೆ. ನಾನು ಜನರಲ್ ವಾರ್ಡಿನಲ್ಲಿ ಇದ್ದೇನೆ. ನನಗೆ ಉಸಿರಾಟದ ಸಮಸ್ಯೆ ಇದೆ. ಐಸಿಯು ಬೆಡ್ ಬೇಕಿದೆ ಎಂದು ಸ್ನೇಹಿತರಿಗೆ ಮೆಸೇಜ್ ಮಾಡಿದ್ದಾನೆ.

    ಉಸಿರಾಟದ ಸಮಸ್ಯೆ ಇದೆ ಎಂದು ವೆಂಟಿಲೇಟರ್‍ಗಾಗಿ ಆಸ್ಪತ್ರೆಯವರಿಗೆ ಕೇಳಿಕೊಂಡಿದ್ದನಂತೆ. ಇಂದು ಬೆಳಗ್ಗೆ ಮೃತ ಮೇಘರಾಜ್ ಕುಟುಂಬಸ್ಥರು ಬೆಳಗ್ಗೆ ಆಸ್ಪತ್ರೆಯವರಿಗೆ ಕೇಳಿದಾಗ ರಾತ್ರಿ 12 ಗಂಟೆಗೆ ಐಸಿಯುಗೆ ಶಿಫ್ಟ್ ಮಾಡಿದ್ದೆವು, ಬೆಳಗ್ಗೆ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರಂತೆ. ಮೇಘರಾಜ್ 1.30ರವರೆಗೆ ಜನರಲ್ ವಾರ್ಡಿನಲ್ಲಿ ಇದ್ದೇನೆ ಎಂದು ಮೆಸೇಜ್ ಮಾಡಿದ್ದಾನೆ. ಆಸ್ಪತ್ರೆಯವರು ರಾತ್ರಿ 12 ಗಂಟೆಗೆ ಐಸಿಯುಗೆ ಶಿಫ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮೇಘರಾಜ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ಆಸ್ಪತ್ರೆಯವರು ಜನರಲ್ ವಾರ್ಡಿನಲ್ಲೇ ಇಟ್ಟು ಚಿಕಿತ್ಸೆ ನೀಡಿ ಆತನ ಸಾವಿಗೆ ಕಾರಣರಾಗಿದ್ದಾರೆ ಎಂದು ಮೇಘರಾಜ್ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಸ್ಪತ್ರೆಯವರು ಆಗಲ್ಲ ಎಂದು ಹೇಳಿದ್ದರೆ, ನಾವು ಬೇರೆ ಕಡೆ ಶಿಫ್ಟ್ ಮಾಡುತ್ತಿದ್ದೆವು. ಆದರೆ, ಆಸ್ಪತ್ರೆಯವರು ಜನರಲ್ ವಾರ್ಡಿನಲ್ಲಿ ಇಟ್ಟು ನಿಗಾ ವಹಿಸಿ ಸೂಕ್ತ ಚಿಕಿತ್ಸೆ ನೀಡದಿರುವುದರಿಂದ ನಮ್ಮ ಹುಡುಗ ಸಾವನ್ನಪ್ಪಿದ್ದಾನೆ ಎಂದು ಮೃತನ ಪೋಷಕರು ಆಸ್ಪತ್ರೆ ಮುಂದೆ ಕಣ್ಣೀರಿಟ್ಟಿದ್ದಾರೆ. ಇತ್ತೀಚೆಗಷ್ಟೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಯುವಕ ಹಳ್ಳಿಯ ಅಭಿವೃದ್ಧಿ ಬಗ್ಗೆಯೂ ತೀವ್ರ ಕನಸು ಕಂಡಿದ್ದು, ಗ್ರಾಮದ ಯುವಕರ ಜೊತೆ ಅಭಿವೃದ್ಧಿಯ ಕುರಿತು ಚರ್ಚೆ ನಡೆಸುತ್ತಿದ್ದ. ಇದನ್ನೆಲ್ಲಾ ನೆನೆದ ಸ್ನೇಹಿತರು ಕೂಡ ಆತನ ಸಾವಿಗೆ ಕಣ್ಣೀರಿಟ್ಟಿದ್ದಾರೆ. ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಹಾಗೂ ಶಿವಗಿರಿ ಸೇವಾ ಯುವಕರ ತಂಡ ಮೇಘರಾಜ್ ಸ್ವಗ್ರಾಮ ಬಸನಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

  • ನಮ್ಮ ದೇಶಕ್ಕೆ ಸಹಾಯ ಹಸ್ತದ ಅವಶ್ಯಕತೆ ಇದೆ: ರಾಹುಲ್ ಗಾಂಧಿ

    ನಮ್ಮ ದೇಶಕ್ಕೆ ಸಹಾಯ ಹಸ್ತದ ಅವಶ್ಯಕತೆ ಇದೆ: ರಾಹುಲ್ ಗಾಂಧಿ

    ನವದೆಹಲಿ: ಕೊರೊನಾ ಪಿಡುಗಿನ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕಷ್ಟದಲ್ಲಿ ಸಿಲುಕಿರುವವರಿ ಸಹಾಯ ಮಾಡುವಂತೆ ಮನವಿ ಮಾಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.

    ಈ ಬಿಕ್ಕಟ್ಟಿನ ಸಮಯದಲ್ಲಿ ನಮ್ಮ ದೇಶಕ್ಕೆ ಸಹಾಯ ಹಸ್ತದ ಅವಶ್ಯಕತೆ ಇದೆ. ಜೀವಗಳನ್ನು ಉಳಿಸಲು ನಮ್ಮಿಂದಾಗುವ ಎಲ್ಲಾ ಸಹಾಯವನ್ನು ಮಾಡೋಣ ಕೊರೊನಾ ವೈಸರ್ ವಿರುದ್ಧದ ಹೋರಾಟದಲ್ಲಿ ಇನ್ನಷ್ಟು ಬಲಿಷ್ಠಹೊಳಿಸಲು ಸ್ವೀಕ್ ಅಪ್ ಟು ಸೇವ್ ಲೈವ್ಸ್ ಅಭಿಯಾನದೊಂದಿಗೆ ಕೈ ಜೋಡಿಸಿ ಎಂದು ಟ್ವೀಟ್ ಮೂಲಕವಾಗಿ ಮನವಿ ಮಾಡಿದ್ದಾರೆ.

    ಆಮ್ಲಜನಕ, ಹಾಸಿಗೆ ಮತ್ತು ವೆಂಟಿಲೇಟರ್ ಕೊರತೆಗೆ ಸಂಬಧಿಸಿದ ಸಣ್ಣ ವೀಡಿಯೋ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವು ಜನರಿಗೆ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಎಐಸಿಸಿಯ ಮುಖ್ಯ ಕಚೇರಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ(ಪಿಸಿಸಿ) ಕಚೇರಿಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ. ರಾಹುಲ್ ಗಾಂಧಿ ಕೊರೊನಾ ಜಾಗೃತಿ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರದ ಕೆಲಸಗಳ ಕುರಿತಾಗಿ ಟ್ವೀಟ್ ಮಾಡುತ್ತಲೇ ಇರುತ್ತಾರೆ.

  • ಬೆಳಗಾವಿಯಲ್ಲಿ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರ ಸಾವು – ಕುಟುಂಬಸ್ಥರ ಮುಂದೆಯೇ ಪ್ರಾಣ ಬಿಟ್ರು!

    ಬೆಳಗಾವಿಯಲ್ಲಿ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರ ಸಾವು – ಕುಟುಂಬಸ್ಥರ ಮುಂದೆಯೇ ಪ್ರಾಣ ಬಿಟ್ರು!

    ಬೆಳಗಾವಿ: ಸರಿಯಾದ ಸಮಯಕ್ಕೆ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರು ರೋಗಿಗಳು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎರಡು ಗಂಟೆಯಲ್ಲಿ ನಾಲ್ವರು ರೋಗಿಗಳು ಕುಟುಂಬಸ್ಥರ ಮುಂದೆಯೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ.

    ನಾಲ್ಕು ಗಂಟೆಗಳ ಹಿಂದೆ 56 ವರ್ಷ ವ್ಯಕ್ತಿಯನ್ನ ಬೆಳಗಾವಿಯ ಬಿಮ್ಸ್ ಗೆ ಕರೆತರಲಾಗಿತ್ತು. ಆಕ್ಸಿಜನ್ ಬೆಡ್ ನೀಡುವಂತೆ ರೋಗಿಯ ಸಂಬಂಧಿ ಆಸ್ಪತ್ರೆಯ ಸಿಬ್ಬಂದಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು. ಬೆಡ್ ಸಿಗುವ ವೇಳೆಗಾಗಲೇ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದರಿಂದ ಆಕ್ರೋಶಗೊಂಡ ಮಹಿಳೆ, ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ನಮಗೆ ಬೆಡ್ ಸಿಗಲಿಲ್ಲ. ಸರ್ಕಾರಕ್ಕೆ ಒಂದು ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಡಲು ಸಾಧ್ಯ ಆಗಲಿಲ್ಲ. ಮನುಷ್ಯರ ಜೀವ ಉಳಿಸುವ ಮಾನವೀಯತೆ ಸಹ ಇಲ್ಲಿಲ್ಲ ಎಂದು ಸರ್ಕಾರಕ್ಕೆ ಹಿಡಿ ಶಾಪ ಹಾಕಿದರು.

    ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರೋರಿಗೆ ಬೆಡ್, ಆಕ್ಸಿಜನ್ ಸಿಗುತ್ತಿಲ್ಲ. ನನ್ನ ಮುಂದೆಯೇ ವೆಂಟಿಲೇಟರ್ ಇಲ್ಲದೇ ನಾಲ್ವರು ಸಾವನ್ನಪ್ಪಿದ್ದಾರೆ. ನಾವುಇ ಕರೆದುಕೊಂಡ ಬಂದ ರೋಗಿಯ ಪಲ್ಸ್ ರೇಟ್ ಕಡಿಮೆ ಆಗಿತ್ತು. ಆ ವೇಳೆಗೆ ಆಕ್ಸಿಜನ್ ಬಂದಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ರೋಗಿಗಳ ಸಂಬಂಧಿಕರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಲಾಗುತ್ತಿದೆ. ಹೊರಗಡೆ ಚಿಕ್ಕ ಚಿಕ್ಕ ಆಕ್ಸಿಜನ್ ಸಿಲಿಂಡರ್ ಗಳು ಟೋಕನ್ ವ್ಯವಸ್ಥೆಯಲ್ಲಿ ಸಿಗುತ್ತಿವೆ. ನಮಗೆ ಆಕ್ಸಿಜನ್ ಸಿಲಿಂಡರ್ ತರಲು ಹೇಳಿದ್ರೆ ಹೇಗೆ ಎಂದು ಯುವಕ ಪ್ರಶ್ನೆ ಮಾಡಿದ್ದಾನೆ.

  • 40 ವೆಂಟಿಲೇಟರ್ ಇದ್ರೂ ಬಳಕೆ ಮಾಡ್ತಿಲ್ಲ, ಇದೊಂದು ದೊಡ್ಡ ಅಪರಾಧ: ಸುಧಾಕರ್

    40 ವೆಂಟಿಲೇಟರ್ ಇದ್ರೂ ಬಳಕೆ ಮಾಡ್ತಿಲ್ಲ, ಇದೊಂದು ದೊಡ್ಡ ಅಪರಾಧ: ಸುಧಾಕರ್

    ಕೋಲಾರ: 40 ವೆಂಟಿಲೇಟರ್ ಇದ್ದರೂ ಬಳಕೆ ಮಾಡುತ್ತಿಲ್ಲ. ಇದೊಂದು ದೊಡ್ಡ ಅಪರಾಧ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೆಂಟಿಲೇಟರ್ ಬಳಕೆ ಮಾಡಿದ್ದರೆ ಕನಿಷ್ಠ ನಲವತ್ತು ಜನರನ್ನು ಉಳಿಸಬಹುದಿತ್ತು. ಆಸ್ಪತ್ರೆಯಲ್ಲಿ ಸಾಕಷ್ಟು ಲೋಪ ದೋಷಗಳಿವೆ. ಪ್ರತಿನಿತ್ಯ ಹತ್ತರಿಂದ ಹನ್ನೊಂದು ಜನ ಸಾಯುತ್ತಿದ್ದಾರೆ ಎಂದರು.

    ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಅಟೆಂಡರ್ ಇಟ್ಟಿದ್ದಾರೆ. ಇದು ರಾಜ್ಯದಲ್ಲೆಲ್ಲೂ ಇಲ್ಲ ಇದು ತಪ್ಪು. ಕೊರೊನಾ ನಿರ್ವಹಣೆಗೆ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

    ನಿನ್ನೆ ನಡೆದ ಆಕ್ಸಿಜನ್ ಸರಬರಾಜಲ್ಲಿ ಆದ ದೋಷ ಕುರಿತು ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ಅಲ್ಲದೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳಿಂದ ನಿರ್ವಹಣೆ ಮಾಡುತ್ತಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಆರ್.ಎಂ.ಓ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.

    ಏನಿದು ಘಟನೆ..?
    ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಗುತ್ತಿರುವ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ 25 ಜನ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲೇ ಶನಿವಾರ ಒಂದೇ ದಿನ ಎಂಟು ಜನ ಮೃತಪಟ್ಟಿದ್ದರು. ರಾತ್ರಿ ಆಕ್ಸಿಜನ್ ಸಮಸ್ಯೆಯಿಂದ ಐದು ಜನ ಕೊರೊನಾಗೆ ಬಲಿಯಾಗಿದ್ದರು.

  • ಕೊರೊನಾ ಮಣಿಸಿದ ಎಸ್‍ಪಿಬಿ- ಆರೋಗ್ಯದಲ್ಲಿ ಚೇತರಿಕೆ

    ಕೊರೊನಾ ಮಣಿಸಿದ ಎಸ್‍ಪಿಬಿ- ಆರೋಗ್ಯದಲ್ಲಿ ಚೇತರಿಕೆ

    – ಕ್ರಿಕೆಟ್, ಫುಟ್‍ಬಾಲ್ ಮ್ಯಾಚ್ ವೀಕ್ಷಣೆ
    – ಎಸ್‍ಪಿಬಿ ಪುತ್ರ ಚರಣ್ ಮಾಹಿತಿ

    ಚೆನ್ನೈ: ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಕಳೆದ ವಾರಕ್ಕಿಂತ ಈ ವಾರ ತುಂಬಾ ಸುಧಾರಣೆಯಾಗಿದೆ ಎಂದು ಎಸ್‍ಪಿಬಿ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ.

    ತಂದೆಯ ಆರೋಗ್ಯದ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು, ಇಷ್ಟು ದಿನ ಅಪ್‍ಡೇಟ್ ನೀಡದ್ದಕ್ಕೆ ದಯವಿಟ್ಟು ಕ್ಷಮಿಸಿ, ವೀಕೆಂಡ್ ಬಳಿಕ ನಮಗೆ ಗುಡ್ ನ್ಯೂಸ್ ಲಭ್ಯವಾಗಿದ್ದು, ಅವರ ಲಂಗ್ಸ್‍ನಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಆದರೆ ಇನ್ನೂ ಹೆಚ್ಚಿನ ಸುಧಾರಣೆಯಾಗಬೇಕಿರುವುದರಿಂದ ವೆಂಟಿಲೇಟರ್‍ನಲ್ಲಿಯೇ ಇಡಲಾಗಿದೆ. ಖುಷಿಯ ವಿಚಾರ ಎಂಬಂತೆ ಅವರ ಕೋವಿಡ್-19 ವರದಿ ನೆಗೆಟಿವ್ ಬಂದಿದೆ. ಆದರೆ ಕೋವಿಡ್ ವರದಿ ನೆಗೆಟಿವ್ ಪಾಸಿಟಿವ್ ಏನೇ ಇರಲಿ ನಮಗೀಗ ಶ್ವಾಸಕೋಶಗಳು ಬೇಗನೇ ಗುಣಮುಖವಾಗಬೇಕಿದೆ ಎಂದು ತಿಳಿಸಿದ್ದಾರೆ.

    ಶ್ವಾಸಕೋಶಗಳು ಗುಣಮುಖವಾಗುತ್ತಿವೆ. ಆದರೆ ಕೆಲ ಸಮಯವನ್ನು ತೆಗೆದುಕೊಳ್ಳುತ್ತವೆ. ಮತ್ತೊಂದು ವಿಚಾರವೆಂದರೆ ನಮ್ಮ ತಂದೆ, ತಾಯಿಯ ವಿವಾಹ ವಾರ್ಷಿಕೋತ್ಸವವನ್ನು ಕಳೆದ ವಾರ ಸರಳವಾಗಿ ಸೆಲೆಬ್ರೇಟ್ ಮಾಡಿದ್ದೇವೆ. ತಂದೆಯವರು ಅವರ ಐ ಪ್ಯಾಡ್‍ನಲ್ಲಿಯೇ ಕ್ರಿಕೆಟ್ ಹಾಗೂ ಟೆನ್ನಿಸ್ ವೀಕ್ಷಿಸುತ್ತಿದ್ದಾರೆ. ಐಪಿಎಲ್ ಆರಂಭವಾಗುವುದನ್ನು ಕಾಯುತ್ತಿದ್ದಾರೆ. ಅಲ್ಲದೆ ಬರವಣಿಗೆ ಹಾಗೂ ಮಾತನಾಡುವುದನ್ನು ಮಾಡುತ್ತಿದ್ದಾರೆ. ಫಿಸಿಯೋಥೆರಪಿಯನ್ನು ಸಹ ಮಾಡಲಾಗುತ್ತಿದೆ. ನಿಮ್ಮೆಲ್ಲರ, ಪ್ರೀತಿ, ಕಾಳಜಿ, ಪ್ರಾರ್ಥನೆಗೆ ಧನ್ಯವಾದಗಳು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

     

    View this post on Instagram

     

    A post shared by S. P. Charan/Producer/Director (@spbcharan) on

    ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡಿದ್ದವು. ಕಳೆದ 19 ದಿನಗಳಿಂದ ಎಸ್‍ಪಿಬಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತು. ಕೊರೊನಾ ವೈರಸ್‍ನಿಂದ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ರಕ್ತಸ್ರಾವ ಹೆಚ್ಚಾಗಿದೆ. ಆದ್ದರಿಂದ ಎಕ್ಮೋ ಮೆಷಿನ್ ಅಳವಡಿಸಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದರು. ಅಲ್ಲದೆ ಆಗಸ್ಟ್ 24ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು.

  • ಅನಾಥವಾಗಿ ಬಿದ್ದಿವೆ ಹತ್ತಕ್ಕೂ ಹೆಚ್ಚು ವೆಂಟಿಲೇಟರ್

    ಅನಾಥವಾಗಿ ಬಿದ್ದಿವೆ ಹತ್ತಕ್ಕೂ ಹೆಚ್ಚು ವೆಂಟಿಲೇಟರ್

    – ಪಿಎಂ ಕೇರ್ಸ್‍ನಿಂದ ನೀಡಿದ ಹೊಸ ವೆಂಟಿಲೇಟರ್ ಗಳು

    ಕೊಪ್ಪಳ: ಹಲವೆಡೆ ವೆಂಟಿಲೇಟರ್ ಗಳಿಲ್ಲ ಎಂದು ರೋಗಿಗಳು ನರಳುತ್ತಿದ್ದಾರೆ, ಕೆಲವರು ಸಾವನ್ನಪ್ಪುತ್ತಿದ್ದಾರೆ. ವೈದ್ಯರು, ಆಸ್ಪತ್ರೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಆದರೆ ಈ ಆಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಹೊಸ ವೆಂಟಿಲೇಟರ್ ಇದ್ದರೂ ಪ್ರಯೋಜನವಿಲ್ಲದಂತಾಗಿದೆ.

    ಕೊಪ್ಪಳ ಜಿಲ್ಲೆಯ ಕೋವಿಡ್-19 ವಾರ್ಡ್ ಪಕ್ಕದ ಕೊಠಡಿಯಲ್ಲಿ ವೆಂಟಿಲೇಟರ್ ಅನಾಥವಾಗಿ ಬಿದ್ದಿವೆ. ಇದನ್ನು ಸೂಕ್ತ ರೀತಿಯಲ್ಲಿ ಅಳವಡಿಸಿ ರೋಗಿಗಳಿಗೆ ಸಹಾಯಕವಾಗುವಂತೆ ವ್ಯವಸ್ಥೆ ಕಲ್ಪಿಸುವ ಬದಲು ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇದೀಗ ವೆಂಟಿಲೇಟರ್ ಅನಾಥವಾಗಿ ಮೂಲೆಯಲ್ಲಿ ಬಿದ್ದಿವೆ. ವೆಂಟಿಲೇಟರ್ ಮಾನಿಟರ್ ಮಾಡಲು ಸೂಕ್ತ ಸಿಬ್ಬಂದಿ ಇಲ್ಲದ ಕಾರಣ ಅನಾಥವಾಗಿ ಬಿದ್ದಿದ್ದು, ಸೂಕ್ತ ಸಿಬ್ಬಂದಿ ನೇಮಿಸಿ, ವೆಂಟಿಲೇಟರ್ ಕಾರ್ಯನಿರ್ವಹಿಸಲು ಅನುವು ಮಾಡಿಕೊಡದೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

    ಜಿಲ್ಲೆಯಲ್ಲಿ ಒಂದು ವಾರದಲ್ಲಿ 30ಕ್ಕೂ ಹೆಚ್ಚು ಜನ ಕೋವಿಡ್-19 ನಿಂದ  ಸಾವನ್ನಪ್ಪುತ್ತಿದ್ದಾರೆ. ಕಳೆದ ವಾರ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ವೆಂಟಿಲೇಟರ್ ಕೊರತೆಯೇ ಸಾವಿಗೆ ಕಾರಣ ಎಂಬ ಆರೋಪ ಸಹ ಕೇಳಿ ಬಂದಿದೆ. ಇಂತಹ ಗಂಭೀರ ಆರೋಪಗಳು ಕೇಳಿ ಬಂದಿದ್ದರೂ ಆರೋಗ್ಯ ಇಲಾಖೆ ಮಾತ್ರ ವೆಂಟಿಲೇಟರ್ ಇನ್‍ಸ್ಟಾಲ್ ಮಾಡಿ, ಕಾರ್ಯಾರಂಭಿಸಿಲ್ಲ ಇದರಿಂದಾಗಿ ಹಲವರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಸುಮಾರು ಹತ್ತಕ್ಕೂ ಹೆಚ್ಚು ವೆಂಟಿಲೇಟರ್ ಗಳು ಇದೀಗ ಆಸ್ಪತ್ರೆಯಲ್ಲಿ ಅನಾಥವಾಗಿ ಬಿದ್ದಿವೆ.

    ಪಿಎಂ ಕೇರ್ಸ್ ನಿಂದ ಈ ವೆಂಟಿಲೇಟರ್ ಗಳನ್ನು ನೀಡಲಾಗಿದ್ದು, ಅಗತ್ಯ ಇರುವ ಆಸ್ಪತ್ರೆಗಳಿಗೆ ಈ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಇಷ್ಟಾದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಅವುಗಳ ಕಾರ್ಯಾರಂಭದ ಬಗ್ಗೆ ಚಿಂತಿಸಿಲ್ಲ.

  • ಮರಣ ಪ್ರಮಾಣ ಇಳಿಕೆ- 4 ತಿಂಗಳ ಬಳಿಕ ವೆಂಟಿಲೇಟರ್‌ ರಫ್ತಿಗೆ ಅನುಮತಿ

    ಮರಣ ಪ್ರಮಾಣ ಇಳಿಕೆ- 4 ತಿಂಗಳ ಬಳಿಕ ವೆಂಟಿಲೇಟರ್‌ ರಫ್ತಿಗೆ ಅನುಮತಿ

    ನವದೆಹಲಿ: ಕೋವಿಡ್ 19‌ ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚಾಗಿ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ವದೇಶಿ ವೆಂಟಿಲೇಟರ್‌ಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    ಕೊರೊನಾ ಸೋಂಕು ದೇಶದಲ್ಲಿ ಹಬ್ಬುತ್ತಿದ್ದ ಕಾರಣ ಮಾರ್ಚ್‌ 24 ರಂದು ಸ್ವದೇಶಿ ವೆಂಟಿಲೇಟರ್‌ ರಫ್ತಿಗೆ ನಿಷೇಧ ಹೇರಲಾಗಿತ್ತು. ಈಗ ಸಾವಿನ ಪ್ರಮಾಣ ಶೇ.2.13ಕ್ಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಕೋವಿಡ್‌–19 ಉಸ್ತುವಾರಿ ಹೊಂದಿರುವ ಉನ್ನತ ಸಚಿವರ ತಂಡವು (ಜಿಒಎಂ) ವೆಂಟಿಲೇಟರ್‌ಗಳನ್ನು ರಫ್ತು ಮಾಡಲು ಅನುಮತಿ ನೀಡಿದೆ.

    ಕೋವಿಡ್‌–19 ರೋಗಿಗಳ ಪೈಕಿ ಶೇ. 0.28 ಮಂದಿ ವೆಂಟಿಲೇಟರ್‌ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಹರ್ಷವರ್ಧನ್‌ ಅವರು ಶುಕ್ರವಾರ ಜಿಒಎಂಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಪ್ರತಿ ನಿಮಿಷಕ್ಕೆ 500, ಪ್ರತಿ ಗಂಟೆಗೆ 30 ಸಾವಿರ ಸೀಸೆ ಲಸಿಕೆ ಉತ್ಪಾದಿಸುತ್ತೇವೆ: ಸೀರಮ್‌ ಸಿಇಓ

    ಕೆಲ ತಿಂಗಳ ಹಿಂದೆ ದೇಶದಲ್ಲಿ ಕೆಲ ಕಂಪನಿಗಳು ಮಾತ್ರ ವೆಂಟಿಲೇಟರ್‌ ನಿರ್ಮಾಣ ಮಾಡುತ್ತಿದ್ದವು. ಆದರೆ ಈಗ ಡಜನ್‌ಗಿಂತಲೂ ಹೆಚ್ಚಿನ ಸಂಖ್ಯೆಯ ಕಂಪನಿಗಳು ವೆಂಟಿಲೇಟರ್‌ ಅಭಿವೃದ್ಧಿ ಪಡಿಸುತ್ತಿವೆ. ಆರಂಭದಲ್ಲಿ ಬಹಳಷ್ಟು ವೆಂಟಿಲೇಟರ್‌ ಅಗತ್ಯವಿದೆ ಎಂದು ತಿಳಿಯಲಾಗಿತ್ತು. ಆದರೆ ಈಗ ಸಾವಿನ ಪ್ರಮಾಣ ಕಡಿಮೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಜೊತೆ ಚರ್ಚಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

    ಈ ಮೊದಲು ದೇಶದಲ್ಲಿ ವೆಂಟಿಲೇಟರ್‌ ಉತ್ಪಾದನೆ ಮಾಡುತ್ತಿದ್ದ ಕಂಪನಿಗಳು ಪ್ರತಿ ತಿಂಗಳು 50-100 ನಿರ್ಮಾಣ ಮಾಡುತ್ತಿತ್ತು. ಆದರೆ ಈಗ 5 ಸಾವಿರ – 10 ಸಾವಿರ ವೆಂಟಿಲೇಟರ್‌ ನಿರ್ಮಿಸುವ ಸಾಮರ್ಥ್ಯ ಪಡೆದಿದೆ.

    ಈಗ ಎಷ್ಟಿದೆ?
    ಸರ್ಕಾರದ ವರದಿ ಪ್ರಕಾರ ಜೂನ್‌ 18ಕ್ಕೆ ಶೇ.3.33 ರಷ್ಟಿದ್ದರೆ ಜುಲೈ 10ಕ್ಕೆ ಶೇ.2.72ಕ್ಕೆ ಇಳಿಕೆಯಾಗಿತ್ತು. ಆಗಸ್ಟ್‌ 1 ರಂದು ಶೇ.2.15ರಷ್ಟಿದ್ದರೆ ಆಗಸ್ಟ್‌ 2 ರಂದು ಶೇ.2.13ಕ್ಕೆ ಇಳಿಕೆಯಾಗಿದೆ.

    ಕರೊನಾ ಸೋಂಕಿತರ ಪೈಕಿ ದೇಶದಲ್ಲಿ ಒಟ್ಟು 11,45,629(ಶೇ.65.44) ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ. 5,67,730(ಶೇ.33.43) ಸಕ್ರಿಯ ಪ್ರಕರಣಗಳಿದ್ದು, 37,364(ಶೇ.2.13) ಮಂದಿ ಮೃತಪಟ್ಟಿದ್ದಾರೆ.

  • ಕಾಂಗ್ರೆಸ್‍ನವರು ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯುವ ಕೆಲಸ ಮಾಡ್ತಿದಾರೆ: ಆರ್.ಅಶೋಕ್

    ಕಾಂಗ್ರೆಸ್‍ನವರು ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯುವ ಕೆಲಸ ಮಾಡ್ತಿದಾರೆ: ಆರ್.ಅಶೋಕ್

    ಬೆಂಗಳೂರು: ಇಂಥ ಸಂಕಷ್ಟದ ವೇಳೆಯಲ್ಲಿ ಲೆಕ್ಕ ಕೊಡಿ ಎನ್ನುವುದು ಸರಿಯಲ್ಲ. ಕಾಂಗ್ರೆಸ್‍ನವರು ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

    ಬೆಂಗಳೂರು ದಕ್ಷಿಣ ವಲಯದ ಸಭೆ ಬಳಿಕ ಮಾತನಾಡಿದ ಅವರು, ವೆಂಟಿಲೇಟರ್ ಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿದರು. ಇಂಥ ಸಂಕಷ್ಟದ ವೇಳೆ ಲೆಕ್ಕ ಕೊಡಿ ಎಂದು ಕೇಳುವುದು ಸರಿಯಲ್ಲ. ಸಲಕರಣೆಗಳ ಬೆಲೆ ಬದಲಾಗುತ್ತಿರುತ್ತದೆ. ಪ್ರಸಕ್ತ ದರದಂತೆ ಖರೀದಿ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ಆತುರ ಬಿದ್ದು ಗೋತ್ರ ಕೆಡಿಸಿಕೊಳ್ಳೋದು ಬೇಡ. ಲೆಕ್ಕ ಕೇಳಲು ಒಂದು ಸಮಯ ಬರುತ್ತೆ, ಆಗ ಕೇಳಿ ಎಂದು ಹೇಳಿದ್ದಾರೆ.

    ಅಧಿವೇಶನ ವೇಳೆ ನಿಮ್ಮ ಮನೆಮನೆಗೆ ಲೆಕ್ಕ ಕಳಿಸುತ್ತೇವೆ. ಆಗ ನೀವು ಲೆಕ್ಕನಾದರೂ ಕೇಳಿ ನಾಟಕವಾದರೂ ಮಾಡಿ. 400-500 ಕೋಟಿ ರೂ.ಗಷ್ಟೇ ವೈದ್ಯಕೀಯ ಸಲಕರಣೆಗಳ ಖರೀದಿ ಮಾಡಲಾಗಿದೆ. ಕಾಂಗ್ರೆಸ್ ಆರೋಪದಂತೆ 3000 ಸಾವಿರ ಕೋಟಿ ರೂ. ವೆಚ್ಚ ಮಾಡಿಲ್ಲ. ಜೆಡಿಎಸ್ ನೋಡಿ ಕಾಂಗ್ರೆಸ್ ಕಲಿಯಬೇಕಿದೆ. ಜೆಡಿಎಸ್ ಸಮಯ ಪ್ರಜ್ಞೆ ತೋರಿಸುತ್ತಿದೆ, ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್‍ನವರು ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿಯೇ ಭೂಪಟದಿಂದ ಕಾಂಗ್ರೆಸ್ ಕಳಚಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ದಕ್ಷಿಣ ವಲಯದ ಖಾಸಗಿ ಆಸ್ಪತ್ರೆಗಳ ಹೊಣೆಗಾರಿಕೆಯನ್ನು ತಲಾ ಒಬ್ಬೊಬ್ಬ ಕಾರ್ಪೊರೇಟ್ ಹೆಗಲಿಗೆ ಹೊರಿಸಲಾಗಿದೆ. ಇವರ ಜೊತೆ ಒಬ್ಬೊಬ್ಬ ಪಾಲಿಕೆ ಅಧಿಕಾರಿ, ಪೊಲೀಸ್ ಸಿಬ್ಬಂದಿ ಇರುತ್ತಾರೆ. ವಾರ್ಡ್‍ಗೆ ತಲಾ ಹತ್ತು ಸ್ವಯಂ ಸೇವಕರ ನೇಮಕ ಮಾಡಲಾಗುವುದು. ಪ್ರತಿ ವಾರ್ಡ್‍ಗೂ 25 ಲಕ್ಷ ರೂ. ಕೋವಿಡ್-19 ನಿಧಿ ಇದೆ. ಈ ನಿಧಿ ಬಳಕೆ ಸಂಬಂಧ ನೀತಿ ನಿಯಮ ರೂಪಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಲಾಗುವುದು ಎಂದರು.

    ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾರಿ ಕೇಸ್ ಇರುವ ರೋಗಿಗಳು ಹೆಚ್ಚು ಸಾವನ್ನಪ್ಪುತ್ತಿದ್ದು, ಇವರನ್ನು ಕರೆದೊಯ್ಯುವ ಅಂಬುಲೆನ್ಸ್ ನಲ್ಲಿ ಕೃತಕ ಉಸಿರಾಟ ಯಂತ್ರ ಖರೀದಿಗೆ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಚರ್ಚಿಸಿ ಯಂತ್ರಗಳ ಖರೀದಿ ಮಾಡಲಾಗುವುದು. ವಾರ್ಡ್‍ವಾರು ಕೃತಕ ಉಸಿರಾಟ ಯಂತ್ರಗಳ ಖರೀದಿ ಮಾಡಲಾಗುವುದು ಎಂದರು.

    ಕೆಲವು ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆ ಕೊಡುವುದರಿಂದ ವಿನಾಯಿತಿ ಕೇಳಿ ಪತ್ರ ಬರೆಯುತ್ತಿದ್ದಾರೆ. ಇಂಥದ್ದಕ್ಕೆಲ್ಲ ವಿನಾಯಿತಿ ಸಾಧ್ಯವಿಲ್ಲ. ಕೊರೊನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಓಡಿ ಹೋಗಬಾರದು. ಖಾಸಗಿ ಆಸ್ಪತ್ರೆಗಳು ಈಗ ಸಮಾಜದ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ನುಣುಚಿಕೊಳ್ಳುವ ಯತ್ನ ಮಾಡಬಾರದು. ಸಹಕಾರ ಕೊಡದ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು, ಅದನ್ನು ಸಂಪೂರ್ಣ ಕೋವಿಡ್-19 ಆಸ್ಪತ್ರೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಟೆಲಿ ಕನ್ಸಲ್ಟೇಷನ್ ಸೇವೆ ನಮ್ಮ ವಲಯದಲ್ಲಿ ಆರಂಭ ಮಾಡುತ್ತಿದ್ದೇವೆ. ಹೋಮ್ ಐಸೋಲೇಷನ್ ನಲ್ಲಿರುವವರಿಗೆ ವೈದ್ಯರು ಅಗತ್ಯ ಸಲಹೆ ಸೂಚನೆ ಕೊಡುತ್ತಾರೆ. ಇದರ ಸಹಾಯವಾಣಿ ನಂಬರ್ ನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

    ಮಹಾರಾಷ್ಟ್ರ, ದೆಹಲಿಯಲ್ಲಿ ಪ್ರವಾಹ ಉಂಟಾಗುತ್ತಿದೆ. ನಮ್ಮ ರಾಜ್ಯದಲ್ಲೂ ಪ್ರವಾಹ ಎಲ್ಲೆಲ್ಲಿ ಆಗುತ್ತೆ ಎಂಬ ಬಗ್ಗೆ ಸದ್ಯದಲ್ಲೇ ಸಭೆ ಕರೆಯುತ್ತೇನೆ. ಡಿಸಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಅಶೋಕ್ ಹೇಳಿದ್ದಾರೆ.

  • ರಾಜ್ಯದಲ್ಲಿ ವೆಂಟಿಲೇಟರ್ ಖರೀದಿ ಹಗರಣ ಆರೋಪ- ‘ಉತ್ತರ ಕೊಡಿ ಬಿಜೆಪಿ’ ಎಂದ ಡಿಕೆಶಿ

    ರಾಜ್ಯದಲ್ಲಿ ವೆಂಟಿಲೇಟರ್ ಖರೀದಿ ಹಗರಣ ಆರೋಪ- ‘ಉತ್ತರ ಕೊಡಿ ಬಿಜೆಪಿ’ ಎಂದ ಡಿಕೆಶಿ

    ಬೆಂಗಳೂರು: ಕೊರೊನಾ ಚಿಕಿತ್ಸಾ ಉಪಕರಣ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಲೆಕ್ಕಕೊಡಿ ಅಭಿಯಾನ ಆರಂಭಿಸಿದ್ದರು. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಉತ್ತರ ಕೊಡಿ ಬಿಜೆಪಿ’ ಅಂತಾ ಸಮರ ಸಾರಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ವೆಂಟಿಲೇಟರ್ ಹಗರಣದ ಆರೋಪ ಮಾಡಿದ್ದಾರೆ.

    ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂಪಾಯಿಗೆ ಖರೀದಿಸಿದ ವೆಂಟಿಲೇಟರ್ ಗೆ ಕರ್ನಾಟಕ ಸರ್ಕಾರ 18.20 ಲಕ್ಷ ರೂಪಾಯಿ ಕೊಟ್ಟಿದೆ. ಬೊಕ್ಕಸಕ್ಕೆ ಆರು ಕೋಟಿಗೂ ಹೆಚ್ಚು ನಷ್ಟವಾಗಿದೆ. ಕೊರೊನಾ ಕರಪ್ಷನ್ ಬಗ್ಗೆ ಸಿಎಂ ಉತ್ತರ ಕೊಡಬೇಕಿದೆ ಅಂತಾ ಒತ್ತಾಯಿಸಿದ್ದಾರೆ. ಒಂದ್ಕಡೆ ವೆಂಟಿಲೇಟರ್ ಸಿಗದೇ ಸೋಂಕಿತರು ಸಾಯುತ್ತಿದ್ದಾರೆ. ಆದರೆ ಬಿಜೆಪಿ ಸಚಿವರು ಪಿಪಿಇ ಕಿಟ್‍ಗಳಿಂದ ಹಿಡಿದು ಪ್ರತಿಯೊಂದರ ಖರೀದಿಯಲ್ಲೂ ಲೂಟಿಗಿಳಿದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಏನದು ವೆಂಟಿಲೇಟರ್ ಖರೀದಿ ಹಗರಣ?
    * ತಮಿಳುನಾಡು ಸರ್ಕಾರದಿಂದ 4.78 ಲಕ್ಷ ರೂ.ಗೆ ಒಂದರಂತೆ 100 ವೆಂಟಿಲೇಟರ್ ಖರೀದಿ.
    * ಕರ್ನಾಟಕ ಸರ್ಕಾರದಿಂದ 18.20 ಲಕ್ಷ ರೂ.ಗೆ ಒಂದರಂತೆ 200 ವೆಂಟಿಲೇಟರ್ ಖರೀದಿ.
    * ಪ್ರತಿ ವೆಂಟಿಲೇಟರ್ ಗೆ ಕರ್ನಾಟಕ ಸರ್ಕಾರ ನೀಡಿದ ಹೆಚ್ಚುವರಿ ಹಣ 13.42 ಲಕ್ಷ ರೂ.
    * 9.65 ಕೋಟಿ ವೆಚ್ಚ ಮಾಡಬೇಕಿದ್ದ ಜಾಗದಲ್ಲಿ 15.86 ಕೋಟಿ ವೆಚ್ಚ ಮಾಡಿದ ಸರ್ಕಾರ.
    * ಈ ಅವ್ಯವಹಾರದಲ್ಲಿ ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ 6.40 ಕೋಟಿ ನಷ್ಟ.

  • ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ: ಡಿಕೆ ಶಿವಕುಮಾರ್

    ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ: ಡಿಕೆ ಶಿವಕುಮಾರ್

    ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯದ ಸರ್ಕರ ಕೊರೊನಾ ಸಂಕಷ್ಟದ ಸಂದರ್ಭವನ್ನು ಲೂಟಿ ಮಾಡಲು ಬಳಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

    ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಡಿಕೆಶಿ, ವೆಂಟಿಲೇಟರ್ ಸಿಗದೆ ಕರ್ನಾಟಕದ ಕೊರೊನಾ ಸೋಂಕಿತರು ಸಾಯುತ್ತಿದ್ದಾರೆ. ಬಿಜೆಪಿ ಮಂತ್ರಿಗಳು ಪಿಪಿಇ ಕಿಟ್‍ಗಳಿಂದ ಹಿಡಿದು ಬೆಡ್‍ಗಳವರೆಗೂ ಎಲ್ಲಾ ಕೊರೊನಾ ಚಿಕಿತ್ಸೆ ಸಲಕರಣೆಗಳ ಖರೀದಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಬಿಜೆಪಿ ಸರ್ಕಾರ ಕೊರೊನಾ ಸಂಕಷ್ಟ ಸಂದರ್ಭವನ್ನೂ ಲೂಟಿ ಮಾಡಲು ಬಳಸಿಕೊಂಡಿದೆ ಎಂದು ಹೇಳಿದ್ದಾರೆ.

    ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಡಿಕೆಶಿ, ವೆಂಟಿಲೇಟರ್ ಖರೀದಿಯಲ್ಲಿ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ. ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂ.ಗೆ ಖರೀದಿಸಿದ ವೆಂಟಿಲೇಟರ್ ಗೆ ಕರ್ನಾಟಕ ಸರ್ಕಾರ 18.20 ಲಕ್ಷ ರೂ. ಕೊಟ್ಟಿದೆ. ಈ ಕೊರೊನಾ ಭ್ರಷ್ಟಾಚಾರದ ಕುರಿತು ಸಿಎಂ ಉತ್ತರ ಕೊಡಬೇಕಿದೆ ಎಂದು ಆಗ್ರಹಿಸಿದ್ದಾರೆ.