Tag: ವೆಂಕಯ್ಯ ನಾಯ್ಡು

  • ಆಶಾ ಕಾರ್ಯಕರ್ತೆ, ಆಟೋ ಚಾಲಕಿಗೆ ಉಪರಾಷ್ಟ್ರಪತಿ ಶ್ಲಾಘನೆ

    ಆಶಾ ಕಾರ್ಯಕರ್ತೆ, ಆಟೋ ಚಾಲಕಿಗೆ ಉಪರಾಷ್ಟ್ರಪತಿ ಶ್ಲಾಘನೆ

    – ಕನ್ನಡದಲ್ಲೇ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ವೆಂಕಯ್ಯ ನಾಯ್ಡು

    ನವದೆಹಲಿ: ಬೆಳಗ್ಗಿನ ಜಾವ 3ಕ್ಕೆ ಕರೆ ಮಾಡಿದರೂ ನಿರ್ಲಕ್ಷ್ಯ ಮಾಡದೆ ತಾವೇ ಆಟೋ ಚಲಾಯಿಸಿಕೊಂಡು ಹೆರಿಗೆಗಾಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದ ಮಹಿಳೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಕರ್ನಾಟಕದ ಉಡುಪಿಯಲ್ಲಿ ಬೆಳಗ್ಗಿನ ಜಾವ 3 ಗಂಟೆಯಲ್ಲಿ ಗರ್ಭಿಣಿ ಮಹಿಳೆಯನ್ನು ತಮ್ಮ ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದ ಆಶಾ ಕಾರ್ಯಕರ್ತೆ  ರಾಜೀವಿ ಅವರ ಉದಾತ್ತ ಕಾರ್ಯವನ್ನು ಶ್ಲಾಘಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‍ನಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಆಟೋ ಚಲಾಯಿಸುವ ರಾಜೀವಿ ಅವರು ಗರ್ಭಿಣಿಯರಿಗೆ ಉಚಿತ ಸವಾರಿಯ ಸೇವೆ ಒದಗಿಸುತ್ತಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ದೇವರು ಆಕೆಗೆ ಮಂಗಳವನ್ನುಂಟು ಮಾಡಲಿ ಎಂದಿದ್ದಾರೆ. ಇದನ್ನೂ ಓದಿ: ಬೆಳಗ್ಗೆ ಆಶಾ ಕಾರ್ಯಕರ್ತೆ, ಮಧ್ಯಾಹ್ನ ನಂತರ ಆಟೋ ಚಾಲಕಿ

    ಇಂದು ಬೆಳಗ್ಗಿನ ಜಾವ 3.15ಕ್ಕೆ ಮಹಿಳೆಯೊಬ್ಬರು ರಾಜೀವಿ ಅವರಿಗೆ ಕರೆ ಮಾಡಿ ಹೆರಿಗೆ ನೋವು ಆಸ್ಪತ್ರೆಗೆ ಹೋಗಬೇಕು ಎಂದಿದಾರೆ. ತಕ್ಷಣವೇ ಎಚ್ಚೆತ್ತ ರಾಜೀವಿ ಅವರು, ಮಹಿಳೆಯನ್ನು ಕರೆದುಕೊಂಡು ಉಡುಪಿಯ ಆಸ್ಪತ್ರೆಗೆ ಹೋಗಿದ್ದಾರೆ. ಈ ಮೂಲಕ ಇಬ್ಬರ ಜೀವವನ್ನು ಉಳಿಸಿದ್ದಾರೆ. ಈ ಕುರಿತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಸ್ವತಃ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ರಾಜ್ಯಸಭೆ ಉಪಸಭಾಪತಿಗಳ ಸಮಿತಿಯಲ್ಲಿ ಸಂಸದ ಡಾ. ಎಲ್.ಹನುಮಂತಯ್ಯಗೆ ಸ್ಥಾನ

    ರಾಜ್ಯಸಭೆ ಉಪಸಭಾಪತಿಗಳ ಸಮಿತಿಯಲ್ಲಿ ಸಂಸದ ಡಾ. ಎಲ್.ಹನುಮಂತಯ್ಯಗೆ ಸ್ಥಾನ

    ನವದೆಹಲಿ: ರಾಜ್ಯಸಭೆಯ ಅಧ್ಯಕ್ಷ ವೆಂಕಯ್ಯನಾಯ್ಡು ಉಪ ಸಭಾಪತಿಗಳ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ಕರ್ನಾಟಕ ವಿಧಾನಸಭೆಯಿಂದ ಮೊದಲ ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಡಾ. ಎಲ್. ಹನುಮಂತಯ್ಯಗೆ ಅವಕಾಶ ನೀಡಲಾಗಿದೆ.

    ಡಾ. ಎಲ್. ಹನುಮಂತಯ್ಯ ಜೊತೆಗೆ ಎನ್‍ಸಿಪಿಯಿಂದ ವಂದನಾ ಚವಾಣ್, ತೃಣಮೂಲ ಕಾಂಗ್ರೆಸ್ ನಿಂದ ಸುಖೇಂಡು ಶೇಖರ್ ರೇ ಮತ್ತು ಬಿಜು ಜನತಾದಳದ ಸಸ್ಮಿತ್ ಪತ್ರ, ಭಾರತೀಯ ಜನತಾ ಪಕ್ಷದಿಂದ ಭುವನೇಶ್ವರ ಕಲಿತಾ ಮತ್ತು ಸುರೇಂದ್ರ ಸಿಂಗ್ ನಗರ ಅವರನ್ನು ಆಯ್ಕೆ ಮಾಡಲಾಗಿದೆ.

    ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಸಮಿತಿಯ ಇತರೆ ಉಪಾಧ್ಯಕ್ಷರಲ್ಲಿ ಒಬ್ಬರು ಸದನದ ಅಧ್ಯಕ್ಷತೆ ವಹಿಸಿ ಕಲಾಪಗಳನ್ನು ನಡೆಸುತ್ತಾರೆ. ಸಮಿತಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವಾಗ, ಅಧ್ಯಕ್ಷರು ಸಾಮಾನ್ಯವಾಗಿ ರಾಜ್ಯಸಭೆಯ ವಿವಿಧ ಪಕ್ಷಗಳ ಬಲವನ್ನು ಪರಿಗಣಿಸುತ್ತಾರೆ ಮತ್ತು ಅವರ ನಾಯಕರನ್ನು ಸಹ ಸಂಪರ್ಕಿಸಿ ಒಪ್ಪಿಗೆ ಪಡೆಯಲಾಗಿರುತ್ತದೆ.

  • ಹುಬ್ಬಳ್ಳಿಯಲ್ಲಿ ಉಪರಾಷ್ಟ್ರಪತಿಯಿಂದ ಯೋಗಾಸನ

    ಹುಬ್ಬಳ್ಳಿಯಲ್ಲಿ ಉಪರಾಷ್ಟ್ರಪತಿಯಿಂದ ಯೋಗಾಸನ

    ಹುಬ್ಬಳ್ಳಿ: ಇಲ್ಲಿನ ರೇಲ್ವೆ ಮೈದಾನದಲ್ಲಿ ನಡೆಯುತ್ತಿರುವ ಯೋಗಗುರು ಬಾಬಾ ರಾಮ್ ದೇವ್ ಅವರ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಭಾಗವಹಿಸಿ ಸ್ವತಃ ತಾಡಾಸನ ಪ್ರದರ್ಶಿಸಿದರು.

    ಉಪರಾಷ್ಟ್ರಪತಿಗಳ ಸಮ್ಮುಖದಲ್ಲಿ ಬಾಬಾ ರಾಮ್ ದೇವ್ ಅವರು ವೃಕ್ಷಾಸನ, ತ್ರಿಕೋನಾಸನ, ಉಷ್ಟ್ರಾಸನ, ವಜ್ರಾಸನ, ಮಂಡೂಕಾಸನ, ಧನುರಾಸನ, ಮರ್ಕಟಾಸನ, ಭುಜಂಗಾಸನ ಮತ್ತಿತರ ಯೋಗಾಸನಗಳನ್ನು ಪ್ರದರ್ಶಿಸಿದರು.

    ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ಬೀದರ್ ಸಂಸದ ಭಗವಂತ ಖೂಬಾ, ವಿಆರ್‍ಎಲ್ ಸಮೂಹ ಸಂಸ್ಥೆಗಳ ಎಂ.ಡಿ ಆನಂದ್ ಸಂಕೇಶ್ವರ, ಪತಂಜಲಿ ಯೋಗ ಸಮಿತಿಯ ಭವರಲಾಲ ಆರ್ಯ ಸೇರಿದಂತೆ ಗಣ್ಯರು ವೇದಿಕೆಯಲ್ಲಿದ್ದರು.

  • ಸಾಲಮನ್ನಾ ಮಾಡೋದಾದ್ರೆ ನಾನೂ ಸಾಲ ತೆಗೆದುಕೊಳ್ತಿದ್ದೆ: ಉಪರಾಷ್ಟ್ರಪತಿ

    ಸಾಲಮನ್ನಾ ಮಾಡೋದಾದ್ರೆ ನಾನೂ ಸಾಲ ತೆಗೆದುಕೊಳ್ತಿದ್ದೆ: ಉಪರಾಷ್ಟ್ರಪತಿ

    ಬೆಂಗಳೂರು: ದೇಶದಲ್ಲಿ ರೈತರ ಸಾಲಮನ್ನಾ ಮಾಡುವುದು ಒಳ್ಳೆಯ ಸಂಪ್ರದಾಯ ಅಲ್ಲ. ಸಾಲಮನ್ನಾ ಮಾಡುತ್ತಾರೆ ಎಂದಾದರೆ ನಾನು ಕೂಡ ಬ್ಯಾಂಕಿನಲ್ಲಿ ಸಾಲ ಪಡೆಯುತ್ತಿದ್ದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

    ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ 107ನೇ ಭಾರತೀಯ ಸೈನ್ಸ್ ಕಾಂಗ್ರೆಸ್ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ದೇಶ ಶೇ.60ರಷ್ಟು ಕೃಷಿ ಅವಲಂಬಿತವಾಗಿದೆ. ನಾನು ಒಬ್ಬ ರೈತನ ಮಗ. ಆದರೆ ರೈತರ ಸಾಲಮನ್ನಾ ತಾತ್ಕಾಲಿಕ ಪರಿಹಾರವಾಗುತ್ತದೆ ಎಂದರು.

    ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಕೇವಲ ರೈತರ ಸಾಲಮನ್ನಾ ಮಾಡಿದರೆ ಸಮಸ್ಯೆ ಪರಿಹಾರ ಆಗಲ್ಲ. ಆದ್ದರಿಂದ ರೈತರ ಸಾಲಮನ್ನಾ ಒಳ್ಳೆಯ ಯೋಜನೆ ಅಲ್ಲ ಎಂದಿದ್ದಾರೆ.

  • ಮಾತೃ ಭಾಷೆಯಲ್ಲಿ ಶಿಕ್ಷಣ ಸಿಗಲಿ ಉಪರಾಷ್ಟ್ರಪತಿ ಅಭಿಮತ

    ಮಾತೃ ಭಾಷೆಯಲ್ಲಿ ಶಿಕ್ಷಣ ಸಿಗಲಿ ಉಪರಾಷ್ಟ್ರಪತಿ ಅಭಿಮತ

    ಬೆಂಗಳೂರು : ಪ್ರತಿ ಮಗುವಿಗೆ ಮಾತೃ ಭಾಷೆ ಅನ್ನೋದು ಮುಖ್ಯ. ಯಾವ ಭಾಷೆ ಮರೆತರು ಮಾತೃ ಭಾಷೆ ಮಾತ್ರ ಮರೆಯಬಾರದು. ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವುದು ಅಗತ್ಯ. ಕ್ರಮೇಣ ಉನ್ನತ ಶಿಕ್ಷಣವನ್ನೂ ಮಾತೃಭಾಷೆಯಲ್ಲಿ ಕೊಡುವಂತಾಗಬೇಕು ಅಂತ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಲಹೆ ನೀಡಿದರು.

    ಇಂಗ್ಲಿಷ್, ಪರ್ಷಿಯನ್ ಸೇರಿದಂತೆ ಎಲ್ಲ ಭಾಷೆಯನ್ನೂ ಕಲಿಯಿರಿ. ಆದರೆ ಕನ್ನಡವನ್ನು ಮರೆಯಬೇಡಿ. ಮಾತೃಭಾಷೆ ನಮ್ಮ ಕಣ್ಣುಗಳು. ಅನ್ಯಭಾಷೆಗಳು ಅದರ ಮೇಲೆ ಹಾಕಿಕೊಳ್ಳುವ ಕನ್ನಡಕದಂತೆ.ಬ್ರಿಟಿಷರು ಭಾರತಕ್ಕೆ ಇಂಗ್ಲಿಷ್ ತಂದರು. ಇಂಗ್ಲಿಷ್ ವಸಹಾತುಕರಣದ ಸಂಕೇತ. ಹಾಗಾಗಿ ಒಂದು ಭಾಷೆಯಾಗಿ ಇಂಗ್ಲಿಷನ್ನೂ ಕಲಿಯಿರಿ. ಆದರೆ ಶಿಕ್ಷಣ ಮಾತ್ರ ಮಾತೃಭಾಷೆಯಲ್ಲೇ ಪಡೆಯುವುದು ಸೂಕ್ತ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.

    ವಿದ್ಯಾರ್ಥಿಗಳಿಗೆ ದೈಹಿಕ ಕ್ಷಮತೆ ಅನ್ನೋದು ಮುಖ್ಯ. ಮಕ್ಕಳು ಫಿಟ್ ಆಗಿರಬೇಕಾದರೆ ದೈಹಿಕ ತರಬೇತಿ ಅವಶ್ಯಕತೆ ಇದೆ. ಹೀಗಾಗಿ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ದೈಹಿಕ ಶಿಕ್ಷಣ ವಿಷಯ ಕಲಿಸಬೇಕು. ಅದಕ್ಕೆ ಅಂಕವನ್ನು ಕೊಡಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಕೂಡಾ ಫಿಟ್ ಇಂಡಿಯಾ ಮೂಲಕ ದೇಶ ಫಿಟ್ ಇಡೋಕೆ ಕಾರ್ಯಕ್ರಮ ರೂಪಿಸಿದ್ದಾರೆ ಅಂತ ತಿಳಿಸಿದರು.

  • ರಾಗಿ ಮುದ್ದೆ, ನಾಟಿಕೋಳಿ ಸಾರು, ಜನಾರ್ದನ ಹೋಟೆಲ್ ದೋಸೆ ನೆನಪಿಸಿಕೊಂಡ ವೆಂಕಯ್ಯನಾಯ್ಡು

    ರಾಗಿ ಮುದ್ದೆ, ನಾಟಿಕೋಳಿ ಸಾರು, ಜನಾರ್ದನ ಹೋಟೆಲ್ ದೋಸೆ ನೆನಪಿಸಿಕೊಂಡ ವೆಂಕಯ್ಯನಾಯ್ಡು

    ಬೆಂಗಳೂರು: ವೆಂಕಯ್ಯನಾಯ್ಡು ಭಾರತದ ಉಪ ರಾಷ್ಟ್ರಪತಿಗಳು. ಬಿಜೆಪಿಯ ಹಿರಿಯ ಮುಖಂಡರು. ಅನೇಕ ವರ್ಷ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರದ ಮಂತ್ರಿ ಆಗಿದ್ದರು. ಹುಟ್ಟೂರು ಆಂಧ್ರ ಆದರೂ ಕರ್ಮಭೂಮಿ ಮಾತ್ರ ನಾಯ್ಡು ಅವರಿಗೆ ಕರ್ನಾಟಕ. ಕರ್ನಾಟಕಕ್ಕೂ ವೆಂಕಯ್ಯನಾಯ್ಡು ಅವರಿಗೂ ಎಲ್ಲಿಲ್ಲದ ಬಾಂಧವ್ಯ.

    ನಾಯ್ಡು ಅವರು ಕರ್ನಾಟಕದ ಬಾಂಧವ್ಯವನ್ನ ಇವತ್ತು ಮೆಲುಕು ಹಾಕಿದರು. ರಾಜಭವನದಲ್ಲಿ ನಡೆದ ನ್ಯಾಕ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಲ್ಲಿನ ರಾಗಿಮುದ್ದೆ, ನಾಟಿ ಕೋಳಿ ಸಾಂಬಾರ್ ರುಚಿಯನ್ನು ನೆನಪಿಸಿಕೊಂಡರು. ಅಲ್ಲದೆ ರಾಜ್ಯಸಭೆ ಸದಸ್ಯರಾಗಿದ್ದಾಗ ಬೆಳಗ್ಗೆ ಟಿಫನ್ ಮಾಡೋಕೆ ಜನಾರ್ದನ ಹೊಟೇಲ್ ಗೆ ಹೋಗ್ತಿದ್ದರಂತೆ. ಅಲ್ಲಿನ ದೋಸೆ ಸವಿಯುತ್ತಿದ್ದೆ ಅಂತ ನೆನಪು ಮಾಡಿಕೊಂಡರು.

    ಭಾಷಣದ ವೇಳೆ ಆರೋಗ್ಯ ಪದ್ಧತಿ ನಮಗೆ ಸರಿಯಾಗಿ ಇರಬೇಕು. ಪ್ರೊಟಿನ್ ಅಂಶದ ಆಹಾರಗಳನ್ನ ಸೇವನೆ ಮಾಡಬೇಕು ಅಂತ ಎಲ್ಲರಿಗೂ ಕಿವಿಮಾತು ಹೇಳಿದರು. ಈ ವೇಳೆ ರಾಗಿಮುದ್ದೆ, ನಾಟಿಕೋಳಿ ಸಾರು, ದೋಸೆ ಬಗ್ಗೆ ನೆನಪು ಮಾಡಿಕೊಂಡರು. ಜನಾರ್ದನ ಹೊಟೇಲ್ ತಿಂಡಿಗೆ ಈಗಲೂ ಮಾರು ಹೋಗಿರೋ ವೆಂಕಯ್ಯನಾಯ್ಡು ಇವತ್ತು ರಾಜಭವನಕ್ಕೆ ಜನಾರ್ದನ ಹೋಟೆಲ್ ಅಡುಗೆ ಭಟ್ಟರನ್ನ ಕರೆಸಿಕೊಂಡು ದೋಸೆ ಮಾಡಿಸಿಕೊಂಡು ಸೇವಿಸುತ್ತಿದ್ದರು. ಒಟ್ಟಿನಲ್ಲಿ ಉಪ ರಾಷ್ಟ್ರಪತಿ ಅದರೂ ನಮ್ಮ ಬೆಂಗಳೂರಿನ ರುಚಿ ಮಾತ್ರ ನಾಯ್ಡು ಅವರು ಇನ್ನು ಮರೆತಿಲ್ಲ.

  • ಮನೆಗೆ ಬಂದಾಗ ಆಂಧ್ರ ಊಟ ಇಷ್ಟಪಡ್ತಿದ್ದರು- ಅನಂತ್‍ಕುಮಾರ್ ನೆನಪಿಸಿಕೊಂಡ ವೆಂಕಯ್ಯ ನಾಯ್ಡು

    ಮನೆಗೆ ಬಂದಾಗ ಆಂಧ್ರ ಊಟ ಇಷ್ಟಪಡ್ತಿದ್ದರು- ಅನಂತ್‍ಕುಮಾರ್ ನೆನಪಿಸಿಕೊಂಡ ವೆಂಕಯ್ಯ ನಾಯ್ಡು

    – ಅದಮ್ಯ ಚೇತನ ವೀಕ್ಷಿಸಿದ ಉಪರಾಷ್ಟ್ರಪತಿ
    – ಮಕ್ಕಳ ಆಹಾರದ ಬಗ್ಗೆ ಹೆಚ್ಚಿನ ಗಮನಹರಿಸಿ

    ಬೆಂಗಳೂರು: ಅಗತ್ಯವಿರುವ ಮಕ್ಕಳಿಗೆ ಆಹಾರ ನೀಡುತ್ತಿರುವ ಅದಮ್ಯ ಚೇತನಕ್ಕೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ದೆಹಲಿಗೆ ಹೋದಾಗ ದಿವಂಗತ ಅನಂತ್ ಕುಮಾರ್ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಅಲ್ಲಿ ಹಲವಾರು ಸವಿಯಾದ ಸಿಹಿ ತಿಂಡಿಗಳನ್ನು ಸವಿದಿದ್ದೇನೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು.

    ನಗರದಲ್ಲಿ ಇಂದು ಅದಮ್ಯ ಚೇತನದ ಪರಿಸರ ಸ್ನೇಹಿ ಅಡುಗೆ ಮನೆಯನ್ನ ವೀಕ್ಷಿಸಿದ ಉಪರಾಷ್ಟ್ರಪತಿ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದರು. ಅಲ್ಲದೆ ಅದಮ್ಯ ಚೇತನದ ಬಗ್ಗೆ ಖುಷಿ ವ್ಯಕ್ತಪಡಿಸಿದರು.

    ಅದಮ್ಯ ಚೇತನಕ್ಕೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ನಾನು ದೆಹಲಿಗೆ ಹೋದಾಗ ಅನಂತಕುಮಾರ್ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಅಲ್ಲಿ ನಾನು ಹಲವಾರು ಸವಿಯಾದ ಸಿಹಿ ತಿಂಡಿಗಳನ್ನು ಸವಿದಿದ್ದೇನೆ. ನಮ್ಮ ಮನೆಗೆ ಬಂದಾಗ ಆಂಧ್ರ ಊಟವನ್ನು ಬಹಳ ಇಷ್ಟಪಟ್ಟು ಅನಂತಕುಮಾರ್ ಸವಿಯುತ್ತಿದ್ದರು. ಇಲ್ಲಿ ಭೇಟಿ ನೀಡಿದಾಗ ನನಗೆ ಇಲ್ಲಿನ ಕೆಲಸಗಾರರ ಶ್ರದ್ಧೆ ಬಹಳ ಇಷ್ಟ ಆಯಿತು. ಶ್ರದ್ಧೆಯಿಂದ ತಯಾರಿಸುವ ಆಹಾರದ ಖುಷಿಯನ್ನು ಇಲ್ಲಿ ಕಂಡಿದ್ದೇನೆ. ಶೇ.38.7ರಷ್ಟು ಮಕ್ಕಳು ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ನಾವು ತಿನ್ನುತ್ತಿರುವ ಆಹಾರದಲ್ಲಿ ಪೌಷ್ಠಿಕಾಂಶದ ಕೊರತೆ ಇದೆ ಎಂದರು.

    ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ. ಸಮಾಜ ಇದರ ಬಗ್ಗೆ ಗಮನ ನೀಡಿ, ಮಕ್ಕಳ ಆಹಾರ ಪರಿಸ್ಥಿತಿಯ ಬಗ್ಗೆ ಗಮನ ನೀಡಬೇಕು. ಮಕ್ಕಳ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಸೇವೆ ಮಾಡಬೇಕು ಎಂದರೆ ಅದಮ್ಯ ಚೇತನದಂತಹ ಸಂಸ್ಥೆಗಳ ಜೊತೆ ಕೈ ಜೋಡಿಸಿ ಎಂದು ಕರೆ ನೀಡಿದ್ರು.

    ಯಾವುದೇ ಲಾಭದ ಆಸೆ ಇಲ್ಲದೆ ನೀಡುತ್ತಿರುವ ಈ ಸೇವೆ ಶ್ಲಾಘನೀಯ. ಅದಮ್ಯ ಚೇತನ ಸಂಸ್ಥೆಯಿಂದ ಒಂದು ಗುರಿಗಾಗಿ ಕೆಲಸ ಮಾಡುತ್ತಿರುವುದು ಸಂತಸದಾಯಕವಾಗಿದೆ. ಮುಂದಿನ ಪೀಳಿಗೆಯ ಭವಿಷ್ಯ ಹಾಳಾದರೆ ನಮ್ಮ ಅರ್ಥಿಕತೆಗೂ ಹೊಡೆತ ಬೀಳುತ್ತದೆ. ಅಪೌಷ್ಠಿಕತೆ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ. ಇಂತಹ ಸಂಧರ್ಭದಲ್ಲಿ ಆದಮ್ಯ ಚೇತನ ಸಂಸ್ಥೆ ನೀಡುತ್ತಿರುವ ಕೊಡುಗೆ ಅಪಾರವಾದದ್ದು. ಶೂನ್ಯ ತ್ಯಾಜ್ಯ ಅಡುಗೆ ಮನೆ/ಹಸಿರು ಅಡುಗೆ ಮನೆ ಮಾಡಿರುವುದು ಸಣ್ಣ ಸಾಧನೆ ಅಲ್ಲ. ಅದಮ್ಯ ಚೇತನ ಇನ್ನೂ ಹಲವು ಕೆಲಸಗಳನ್ನ ಮಾಡುವಂತಾಗಲಿ ಎಂದು ತಿಳಿಸಿದರು.

    ಅನಂತ್ ಕುಮಾರ್, ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ಸ್ನೇಹಿತರು ನಮ್ಮನ್ನು ಅಗಲಿರುವುದು ದುಃಖಕರ ಸಂಗತಿ ಎಂದು ಇಬ್ಬರು ಅಗಲಿದ ನಾಯಕರನ್ನು ವೆಂಕಯ್ಯ ನಾಯ್ಡು ಇದೇ ವೇಳೆ ನೆನಪು ಮಾಡಿಕೊಂಡರು.

    ಬಳಿಕ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್, ವೆಂಕಯ್ಯನಾಯ್ಡು ಅವರು ಅನಂತ್ ಕುಮಾರ್ ಅವರ ಒಡನಾಡಿಗಳು. ಬಹುಕಾಲದಿಂದ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದವರು. ಸಂಪುಟದ ಸಹೋದ್ಯೋಗಿಗಳಾಗಿ ಕೆಲಸ ಮಾಡಿದವರು. ಅದಮ್ಯ ಚೇತನದ ಕಾರ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಶೂನ್ಯ ತ್ಯಾಜ್ಯ, ಹಸಿರು ಅಡುಗೆಮನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಕಾರ್ಯ ಇದಾಗಿದೆ. ಇಂತಹ ಸತ್ಕಾರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕು. ವೆಂಕಯ್ಯನಾಯ್ಡು ಆಗಮನ ನಮಗೆ ಖುಷಿ ತಂದಿದೆ ಎಂದರು.

  • ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಚಂದ್ರಬಾಬುಗೆ ಜಗನ್ ಪ್ರಶ್ನೆ

    ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಚಂದ್ರಬಾಬುಗೆ ಜಗನ್ ಪ್ರಶ್ನೆ

    ವಿಜಯವಾಡ: ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವನ್ನಾಗಿ ಪರಿವರ್ತಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

    ಎಲ್ಲ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಗಳನ್ನಾಗಿ ಪರಿವರ್ತಿಸುವ ಕುರಿತು ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಚಿಂತನೆ ನಡೆಸಿದ್ದಾರೆ. ಆದರೆ ಇದಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ, ರಾಜಕಾರಣಿ ಪವನ್ ಕಲ್ಯಾಣ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ವೇಳೆ ಇದಕ್ಕೆ ತಿರುಗೇಟು ನೀಡಿರುವ ಸಿಎಂ ಜಗನ್, ನಿಮ್ಮ ಮಕ್ಕಳು ಎಲ್ಲಿ ಕಲಿಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರೇ ನಿಮ್ಮ ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ? ನಾಳೆ ನಿಮ್ಮ ಮೊಮ್ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡುತ್ತಾನೆ ಎಂದು ಪ್ರಶ್ನಿಸಿದ್ದಾರೆ.

    ಮಾತ್ರವಲ್ಲದೆ ಸರ್, ವೆಂಕಯ್ಯ ನಾಯ್ಡು ಅವರೇ ನಿಮ್ಮ ಮಗ ಮತ್ತು ಮೊಮ್ಮಕ್ಕಳು ಯಾವ ಮಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಕೇಳಿದ್ದಾರೆ. ಅಲ್ಲದೆ ಪವನ್ ಕಲ್ಯಾಣ್ ಅವರಿಗೂ ಇದೇ ರೀತಿಯ ಪ್ರಶ್ನೆ ಕೇಳಿದ್ದು, ನಿಮಗೆ ಮೂವರು ಪತ್ನಿಯರು, ನಾಲ್ಕೈದು ಮಕ್ಕಳಿದ್ದಾರೆ. ಅವರು ಓದುತ್ತಿರುವ ಶಾಲೆಗಳಲ್ಲಿ ಬೋಧನಾ ಮಾಧ್ಯಮ ಯಾವುದು ಎಂದು ಕೇಳಿದ್ದಾರೆ.

    ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಹಲವು ನಾಯಕರು ವಿರೋಧಿಸುತ್ತಿದ್ದಾರೆ. ಆ ಎಲ್ಲ ನಾಯಕರು ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂದು ಎದೆ ಮೇಲೆ ಕೈ ಇಟ್ಟುಕೊಂಡು ಹೇಳಲಿ ಎಂದು ಸವಾಲು ಎಸೆದಿದ್ದಾರೆ.

    ಇಂದು ನಾವು ಪ್ರಪಂಚದೊಂದಿಗೆ ಸ್ಪರ್ಧಿಸಬೇಕಿದೆ. ಇಂಗ್ಲಿಷ್ ಇಲ್ಲದೆ ಸ್ಪರ್ಧಿಸಲು ಸಾಧ್ಯವಿಲ್ಲ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ನಾನು ಈ ಪ್ರಯತ್ನಕ್ಕೆ ಮುಂದಾಗಿದ್ದೇನೆ. ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು. ನಮ್ಮ ಎಲ್ಲ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿರಬೇಕು ಎಂದು ಪ್ರತಿಪಾದಿಸಿದರು.

    1ರಿಂದ 6ನೇ ತರಗತಿಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ(2020-21) ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಮಾಧ್ಯಮವಾಗಲಿದೆ ಎಂದು ರೆಡ್ಡಿ ಇದೇ ವೇಳೆ ಘೋಷಿಸಿದರು. ಇದಾದ ಒಂದರಿಂದ ನಾಲ್ಕು ವರ್ಷಗಳಲ್ಲಿ 10ನೇ ತರಗತಿ ವರೆಗೆ ಇಂಗ್ಲಿಷ್ ಮಾಧ್ಯಮವನ್ನಾಗಿ ಮಾಡಲಾಗುವುದು. ಎಲ್ಲ ಶಾಲೆಗಳಲ್ಲಿ ತೆಲುಗು ಅಥವಾ ಉರ್ದು ಕಡ್ಡಾಯ ವಿಷಯವಾಗಲಿದೆ ಎಂದರು.

  • ಶುಲ್ಕ ಹೆಚ್ಚಳ ವಿರೋಧಿಸಿ ಜೆಎನ್‍ಯುನಲ್ಲಿ ಪ್ರತಿಭಟನೆ – ಎಷ್ಟಿದ್ದ ಶುಲ್ಕ ಎಷ್ಟು ಹೆಚ್ಚಳವಾಗಿದೆ?

    ಶುಲ್ಕ ಹೆಚ್ಚಳ ವಿರೋಧಿಸಿ ಜೆಎನ್‍ಯುನಲ್ಲಿ ಪ್ರತಿಭಟನೆ – ಎಷ್ಟಿದ್ದ ಶುಲ್ಕ ಎಷ್ಟು ಹೆಚ್ಚಳವಾಗಿದೆ?

    – ತಾರಕಕ್ಕೇರಿದ ವಿದ್ಯಾರ್ಥಿಗಳ ಪ್ರತಿಭಟನೆ
    – ವೆಂಕಯ್ಯ ನಾಯ್ಡು ಇರುವಾಗಲೇ ಪ್ರತಿಭಟನೆ

    ನವದೆಹಲಿ: ಜವಹಾರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮತ್ತೆ ಹೈಡ್ರಾಮಾ ನಡೆದಿದ್ದು, ಶುಲ್ಕ ಹೆಚ್ಚಳ ಖಂಡಿಸಿ, ನೂರಾರು ವಿದ್ಯಾರ್ಥಿಗಳು ವಿವಿ ಹೊರ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಜೆಎನ್‍ಯು ಹೊರಗಡೆ ಜಮಾಯಿಸಿ, ಹಾಸ್ಟೆಲ್ ಕೈಪಿಡಿ ಹಿಂಪಡೆಯಬೇಕು ಹಾಗೂ ಶುಲ್ಕವನ್ನು ಹೆಚ್ಚಳ ಮಾಡಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಒಂದು ವಾರದಿಂದ ಪ್ರತಿಭಟನೆ ನಡೆಯುತ್ತಿದ್ದು, ಭಾರೀ ಪೊಲೀಸ್ ಹಾಗೂ ಸಿಆರ್‍ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 3ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಸಮಯದಲ್ಲೇ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

    ಕ್ಯಾಂಪಸ್ ಮುಂದೆ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಕೆಲವು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿನಿಲಯದ ಶುಲ್ಕದ ಕೈಪಿಡಿಯ ಸಮಸ್ಯೆಗಳನ್ನು ಪರಿಹರಿಸಲು ಉಪಕುಲಪತಿಯವರನ್ನು ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 3ನೇ ಘಟಿಕೋತ್ಸವವನ್ನುದ್ದೇಶಿಸಿ ಭಾಷಣ ಮಾಡುತ್ತಿರುವುದರಿಂದ ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ.

    ವಿಶ್ವವಿದ್ಯಾಲಯ ‘ವಿದ್ಯಾರ್ಥಿ ವಿರೋಧಿ ನೀತಿ’ಯನ್ನು ಅನುಸರಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಾಸ್ಟೆಲ್ ಕೈಪಿಡಿಯನ್ನು ಹಿಂಪಡೆಯುವಂತೆ ವಿದ್ಯಾರ್ಥಿ ಸಂಘವು ವಿಶ್ವವಿದ್ಯಾಲಯವನ್ನು ಒತ್ತಾಯಿಸಿದೆ. ಶುಲ್ಕ ಇಳಿಕೆ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದ್ದು, ಹಾಸ್ಟೆಲ್ ಕೈಪಿಡಿಯಲ್ಲಿ ಉಲ್ಲೇಖಿಸಿರುವ ‘ಡ್ರೆಸ್ ಕೋಡ್’ನ್ನು ಸಹ ವಿದ್ಯಾರ್ಥಿ ಸಂಘ ವಿರೋಧಿಸಿದೆ.

    ಶುಲ್ಕ ಎಷ್ಟು ಹೆಚ್ಚಳವಾಗಿದೆ?
    ವಿಶ್ವವಿದ್ಯಾಲಯದ ಹಾಸ್ಟೆಲ್‍ಗೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಹೆಚ್ಚಿಸಲಾಗಿತ್ತು. ಪ್ರತಿ ತಿಂಗಳು ಡಬಲ್ ಸೀಟರ್‍ಗೆ 10 ರೂ.ನಿಂದ 300 ರೂ.ಗೆ ಹಾಗೂ ಸಿಂಗಲ್ ಸೀಟರ್‍ಗೆ 20 ರೂ.ನಿಂದ 600 ರೂ.ಗೆ ಶುಲ್ಕವನ್ನು ಹೆಚ್ಚಿಸಲಾಗಿತ್ತು. ಮೆಸ್ ಸೆಕ್ಯೂರಿಟಿ ಡಿಪಾಸಿಟ್ ಎಂದು ಪಡೆಯುತ್ತಿದ್ದ ಅಡ್ವಾನ್ಸ್ ಹಣವನ್ನು 5,500 ರೂ.ನಿಂದ 12 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಮುಂಗಡವಾಗಿ ಪಡೆದ ಈ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

  • ಮೋದಿ-ಅಮಿತ್ ಶಾ ಕೃಷ್ಣಾರ್ಜುನ್ ಇದ್ದಂತೆ: ರಜನಿಕಾಂತ್

    ಮೋದಿ-ಅಮಿತ್ ಶಾ ಕೃಷ್ಣಾರ್ಜುನ್ ಇದ್ದಂತೆ: ರಜನಿಕಾಂತ್

    ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕೃಷ್ಣ-ಅರ್ಜುನ ಇದ್ದಂತೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೊಗಳಿದ್ದಾರೆ.

    ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಎರಡು ವರ್ಷಗಳ ಆಡಳಿತಾವಧಿಯ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಭಾನುವಾರ ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಜನಿಕಾಂತ್ ಅವರು, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಹಾಗೂ 35 (ಎ) ವಿಧಿಗಳನ್ನು ರದ್ದು ಮಾಡಿದ ಕೇಂದ್ರ ಎನ್‍ಡಿಎ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ‘ಮಿಷನ್ ಕಾಶ್ಮೀರ ಕಾರ್ಯಾಚರಣೆಗಾಗಿ ಗೃಹ ಸಚಿವ ಅಮಿತ್ ಶಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನೀವು ಅದನ್ನು ನಡೆಸಿದ ರೀತಿ, ವಿಶೇಷವಾಗಿ ನೀವು ಸಂಸತ್ತಿನಲ್ಲಿ ಮಾಡಿದ ಭಾಷಣ ಅದ್ಭುತವಾಗಿತ್ತು. ನನಗೆ ಕೃಷ್ಣ-ಅರ್ಜುನ ಯಾರು ಅಂತ ಗೊತ್ತಿಲ್ಲ. ಮೋದಿ ಮತ್ತು ಅಮಿತ್ ಶಾ ಅವರಿಬ್ಬರು ಗೊತ್ತು. ಅಮಿತ್ ಶಾ ಜಿ ಮತ್ತು ನರೇಂದ್ರ ಮೋದಿ ಜಿ ಕೃಷ್ಣ-ಅರ್ಜುನರ ಜೋಡಿಯಂತೆ ಎಂದು ರಜನಿಕಾಂತ್ ಹೇಳಿದ್ದಾರೆ.

    ಇದೇ ವೇಳೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಹೊಗಳಿದ ರಜನಿಕಾಂತ್, ನಾಯ್ಡು ಅವರು ಜನರ ಕಲ್ಯಾಣದಲ್ಲಿ ಆಸಕ್ತಿ ಹೊಂದಿರುವ ಸಂಪೂರ್ಣ ಆಧ್ಯಾತ್ಮಿಕ ವ್ಯಕ್ತಿ ಎಂದು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್ಸೆಲ್ವಂ ಇದ್ದರು.