Tag: ವೆಂಕಟೇಶ್ ಅಯ್ಯರ್

  • IPL 2023: ಇಶಾನ್‌ ಕಿಶನ್‌ ಶೈನ್‌, ಅಯ್ಯರ್‌ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ

    IPL 2023: ಇಶಾನ್‌ ಕಿಶನ್‌ ಶೈನ್‌, ಅಯ್ಯರ್‌ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ

    ಮುಂಬೈ: ಇಶಾನ್‌ ಕಿಶನ್‌ (Ishan Kishan) ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav) ಭರ್ಜರಿ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್‌, ಕೋಲ್ಕತ್ತಾ ನೈಟ್‌ರೈಡರ್ಸ್‌ (KolkataKnight Riders) ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ.

    ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ (KKR) 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 185 ರನ್‌ ಗಳಿಸಿತು. 186 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ 17.4 ಓವರ್‌ಗಳಲ್ಲೇ 186 ರನ್‌ ಗಳಿಸಿ ಗೆದ್ದು ಬೀಗಿತು.

    ಬೃಹತ್‌ ಮೊತ್ತದ ಗುರಿ ಪಡೆದ ಮುಂಬೈ ಇಂಡಿಯನ್ಸ್‌ ತಂಡ ಸ್ಫೋಟಕ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ (Rohit Sharma) ಹಾಗೂ ಇಶಾನ್‌ ಕಿಶನ್‌ ಜೋಡಿ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿ ಕೆಕೆಆರ್‌ ಬೌಲರ್‌ಗಳನ್ನ ಚೆಂಡಾಡಿದರು. ಮೊದಲ ವಿಕೆಟ್‌ ಪತನಕ್ಕೆ ಈ ಜೋಡಿ 4.5 ಓವರ್‌ಗಳಲ್ಲಿ 65 ರನ್‌ ಸಿಡಿಸಿತ್ತು. ಈ ವೇಳೆ ರೋಹಿತ್‌ ಶರ್ಮಾ 13 ಎಸೆತಗಳಲ್ಲಿ 20 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೆ 25 ಎಸೆತಗಳಲ್ಲಿ ಸ್ಫೋಟಕ 58 ರನ್‌ (5 ಬೌಂಡರಿ, 5 ಸಿಕ್ಸರ್)‌ ಚಚ್ಚಿದ ಇಶಾನ್‌ ಕಿಶನ್‌ ಸಹ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು.

    ನಂತರ 3ನೇ ವಿಕೆಟ್‌ಗೆ ಜೊತೆಯಾದ ಮಿಸ್ಟರ್‌ 360 ಸೂರ್ಯಕುಮಾರ್‌ ಯಾದವ್‌ (Suryakumar Yadav), ತಿಲಕ್‌ ವರ್ಮಾ ಸಹ ಸ್ಫೋಟಕ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿಗೆ ನೆರವಾದರು. ಕಳೆದ ಮೂರು ಪಂದ್ಯಗಳಲ್ಲೂ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಸೂರ್ಯಕುಮಾರ್‌ ಯಾದವ್‌, ಈ ಪಂದ್ಯದಲ್ಲಿ ಉತ್ತಮ ಫಾರ್ಮ್‌ ಸಾಬೀತುಪಡಿಸಿದ್ರು. ಸೂರ್ಯ ಕೇವಲ 25 ಎಸೆತಗಳಲ್ಲಿ 43 ರನ್‌ (3 ಸಿಕ್ಸರ್‌, 4 ಬೌಂಡರಿ) ಗಳಿದರೆ, ತಿಲಕ್‌ ವರ್ಮಾ 30 ರನ್‌ (25 ಎಸೆತ, 1 ಸಿಕ್ಸರ್‌, 3 ಬೌಂಡರಿ) ಬಾರಿಸಿದರು. ಈ ನಡುವೆ ನೆಹಾಲ್ ವಧೇರಾ 6 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.

    ಕೊನೆಯಲ್ಲಿ ಟಿಮ್‌ ಡೇವಿಡ್‌ 13 ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿ ಸಹಿತ 24 ರನ್‌ ಚಚ್ಚಿದರೆ, ಕ್ಯಾಮರೂನ್‌ ಗ್ರೀನ್‌ 1 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಕೆಕೆಆರ್‌ ಪರ ಸುಯಶ್‌ ಸರ್ಮಾ 2 ವಿಕೆಟ್‌ ಕಿತ್ತರೆ, ಶಾರ್ದೂಲ್‌ ಠಾಕೂರ್‌, ವರುಣ್‌ ಚಕ್ರವರ್ತಿ ಹಾಗೂ ಲಾಕಿ ಫರ್ಗುಸನ್ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: 9 ಸಿಕ್ಸ್‌, 5 ಬೌಂಡರಿ – IPLನಲ್ಲಿ ವೇಗದ ಶತಕ ಸಿಡಿಸಿ ಮೆರೆದಾಡಿದ ವೆಂಕಟೇಶ್‌ ಅಯ್ಯರ್‌

    ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ಪರ ವೆಂಕಟೇಶ್ ಅಯ್ಯರ್ (Venkatesh Iyer) ಏಕಾಂಗಿ ಹೋರಾಟ ನಡೆಸಿದರು. ಆರಂಭಿಕರಾಗಿ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಜ್, ನಾರಾಯಣ್‌ ಜಗದೀಶನ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ವೆಂಕಟೇಶ್‌ ಅಯ್ಯರ್‌ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದರು. ಭದ್ರವಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಅಯ್ಯರ್‌ ಮುಂಬೈ ಬೌಲರ್‌ಗಳನ್ನ ಬೆಂಡೆತ್ತಿದರು. ಕೇವಲ 51 ಎಸೆತಗಳನ್ನು ಎದುರಿಸಿ ಸ್ಫೋಟಕ 104 ರನ್‌ (9 ಸಿಕ್ಸರ್‌, 6 ಬೌಂಡರಿ) ಸಿಡಿಸಿದರು. ವೆಂಕಟೇಶ್ ಐಯ್ಯರ್ ಸಿಡಿಸಿದ ಈ ಶತಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಕಳೆದ 15 ವರ್ಷಗಳಲ್ಲಿಯೇ ಮೊದಲ ಶತಕವಾಗಿದೆ. ಈ ಮೂಲಕ ಕೆಕೆಆರ್ ಫ್ರಾಂಚೈಸಿಯ ಸುದೀರ್ಘ ಕಾಲದ ಶತಕದ ಬರವನ್ನು ನೀಗಿಸಿದರು.

    ನಂತರ ಕಣಕ್ಕಿಳಿದರವರಲ್ಲಿ ಯಾರೊಬ್ಬರು ಉತ್ತಮ ಪ್ರದರ್ಶನ ತೋರದೇ ಇದ್ದರಿಂದ ಕೆಕೆಆರ್‌ ತಂಡ 185 ರನ್‌ಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕ ನಿತೀಶ್‌ ರಾಣಾ 5 ರನ್‌, ಶಾರ್ದೂಲ್‌ ಠಾಕೂರ್‌ 13 ರನ್‌, ರಿಂಕು ಸಿಂಗ್‌ 18 ರನ್‌ ಗಳಿಸಿದ್ರೆ, ಕೊನೆಯಲ್ಲಿ ಆ್ಯಂಡ್ರೆ ರಸ್ಸೆಲ್‌ 21 ರನ್‌ (11 ಎಸೆತ, 3 ಬೌಂಡರಿ, 1‌ ಸಿಕ್ಸರ್), ಸುನೀಲ್‌ ನರೇನ್‌ 2 ರನ್‌ ಗಳಿಸಿ ಅಜೇಯರಾಗುಳಿದರು.

    ಇನ್ನೂ ಸಂಘಟಿತ ಬೌಲಿಂಗ್‌ ದಾಳಿ ನಡೆಸಿದ ಮುಂಬೈ ಇಂಡಿಯನ್ಸ್‌ ಪರ ಹೃತಿಕ್‌ ಶೋಕೀನ್‌ 2 ವಿಕೆಟ್‌ ಪಡೆದರೆ, ಕ್ಯಾಮರೂನ್ ಗ್ರೀನ್, ದುವಾನ್‌ ಜಾನ್ಸೆನ್‌, ಪಿಯೂಷ್‌ ಚಾವ್ಲಾ ಹಾಗೂ ರಿಲೇ ಮೆರೆದಿಥ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಸಂಕ್ಷಿಪ್ತ ಸ್ಕೋರ್‌
    ಕೋಲ್ಕತ್ತಾ ನೈಟ್‌ರೈಡರ್ಸ್‌ – 20 ಓವರ್‌ – 185/6
    ಮುಂಬೈ ಇಂಡಿಯನ್ಸ್‌ – 17.4 ಓವರ್‌ – 186/5

  • 9 ಸಿಕ್ಸ್‌, 5 ಬೌಂಡರಿ – IPLನಲ್ಲಿ ವೇಗದ ಶತಕ ಸಿಡಿಸಿ ಮೆರೆದಾಡಿದ ವೆಂಕಟೇಶ್‌ ಅಯ್ಯರ್‌

    9 ಸಿಕ್ಸ್‌, 5 ಬೌಂಡರಿ – IPLನಲ್ಲಿ ವೇಗದ ಶತಕ ಸಿಡಿಸಿ ಮೆರೆದಾಡಿದ ವೆಂಕಟೇಶ್‌ ಅಯ್ಯರ್‌

    ಮುಂಬೈ: ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ತಂಡದ ಆಟಗಾರ ವೆಂಕಟೇಶ್‌ ಅಯ್ಯರ್‌ (Venkatesh Iyer) 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ವೇಗದ ಶತಕ ಸಿಡಿಸಿ ವಿಶೇಷ ಸಾಧನೆ ಮಾಡಿದ್ದಾರೆ.

    ಎರಡು ದಿನಗಳ ಹಿಂದೆ ಕೆಕೆಆರ್‌ ವಿರುದ್ಧ ನಡೆದ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಆಟಗಾರ ಹ್ಯಾರಿ ಬ್ರೂಕ್‌ 55 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿ ಸಾಧನೆ ಮಾಡಿದ್ದರು. ಇಂದು (ಏಪ್ರಿಲ್‌ 16) ವೆಂಕಟೇಶ್‌ ಅಯ್ಯರ್‌ 49 ಎಸೆತಗಳಲ್ಲೇ ಭರ್ಜರಿ 100 ರನ್‌ ಬಾರಿಸಿದರು. 9 ಸಿಕ್ಸರ್‌ ಹಾಗೂ 5 ಬೌಂಡರಿಗಳೂ ಇದರಲ್ಲಿ ಸೇರಿವೆ. ಒಟ್ಟಾರೆ ಈ ಪಂದ್ಯದಲ್ಲಿ ವೆಂಕಟೇಶ್‌ 51 ಎಸೆತಗಳಲ್ಲಿ 104 (6 ಬೌಂಡರಿ, 9 ಸಿಕ್ಸರ್‌) ಚಚ್ಚಿದರು. ಇದನ್ನೂ ಓದಿ: IPL 2023: ಡೆಲ್ಲಿಗೆ ಸತತ 5ನೇ ಸೋಲು – ತವರಿನಲ್ಲಿ RCBಗೆ 23 ರನ್‌ಗಳ ಭರ್ಜರಿ ಜಯ

    ಭಾನುವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 185 ರನ್‌ ಗಳಿಸಿತು. ಮೊದಲ 23 ಎಸೆತಗಳಲ್ಲಿ 50 ರನ್‌ ಗಳಿಸಿದ್ದ ವೆಂಕಟೇಶ್‌ ಅಯ್ಯರ್‌, ಕೊನೆಯಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದ ಮುಂದಿನ 26 ಎಸೆತಗಳಲ್ಲಿ 50 ರನ್‌ ಗಳಿಸಿ ಶತಕ ಪೂರೈಸಿದರು. ಇದನ್ನೂ ಓದಿ: ಐಪಿಎಲ್‌ನಲ್ಲಿ ಮೊದಲ ಶತಕ – ಕೋಲ್ಕತ್ತಾ ಬೌಲರ್‌ಗಳನ್ನು ಚೆಂಡಾಡಿದ ಬ್ರೂಕ್‌

    ರನ್‌ ಏರಿದ್ದು ಹೇಗೆ?
    50 ರನ್‌ 30 ಎಸೆತ
    100 ರನ್‌ 64 ಎಸೆತ
    150 ರನ್‌ 99 ಎಸೆತ
    185 ರನ್‌ 120 ಎಸೆತ

  • IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

    IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

    ಅಹಮದಾಬಾದ್‌: ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್‌ ಸಿಡಿಸಿದ 5 ಭರ್ಜರಿ ಸಿಕ್ಸರ್‌ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್‌, ಹಾಲಿ ಚಾಂಪಿಯನ್ಸ್‌ ಗುಜರಾತ್‌ ಜೈಂಟ್ಸ್‌ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಕೆಕೆಆರ್‌ ಗೆಲುವಿಗೆ ಕೊನೆಯ ಓವರ್‌ನಲ್ಲಿ 29 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಉಮೇಶ್‌ ಯಾದವ್‌ ಮೊದಲ ಎಸೆತದಲ್ಲಿ 1 ರನ್‌ ತೆಗೆದುಕೊಂಡರು. ನಂತರ ಕ್ರೀಸ್‌ಗೆ ಬಂದ ರಿಂಕು ಸಿಂಗ್‌ ಸತತ 5 ಎಸೆತಗಳನ್ನೂ ಭರ್ಜರಿ ಸಿಕ್ಸರ್‌ ಬಾರಿಸಿ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು. ಈ ಮೂಲಕ ಗೆಲುವಿನ ಹಾದಿಯಲ್ಲಿದ್ದ ಹಾಲಿ ಚಾಂಪಿಯನ್ಸ್‌ ಪಡೆಗೆ ಸೋಲುಣಿಸಿ ಕೆಕೆಆರ್‌ ತಂಡ ಸತತ 2ನೇ ಗೆಲುವು ದಾಖಲಿಸಿತು.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ತಂಡ ಸಾಯಿ ಸುದರ್ಶನ್ ಹಾಗೂ ವಿಜಯ್ ಶಂಕರ್ ಅಮೋಘ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 204 ರನ್‌ ಗಳಿಸಿತು. 205 ರನ್‌ ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿ ರೋಚಕ ಜಯ ಸಾಧಿಸಿತು. ಇದನ್ನೂ ಓದಿ: RCB ಅಭಿಮಾನಿಗಳೇ ಎಚ್ಚರ – ಬ್ಲ್ಯಾಕ್‌ನಲ್ಲಿ ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಮೋಸ ಹೋಗದಿರಿ

    ಚೇಸಿಂಗ್‌ ಆರಂಭಿಸಿದ ಕೆಕೆಆರ್‌ ಉತ್ತಮ ಶುಭಾರಂಭ ಪಡೆಯುವಲ್ಲಿ ವಿಫಲವಾಯಿತು. ಆದರೂ 3ನೇ ವಿಕೆಟ್‌ಗೆ ಜೊತೆಯಾದ ವೆಂಕಟೇಶ್‌ ಅಯ್ಯರ್‌, ನಾಯಕ ನಿತೀಶ್‌ ರಾಣ ಭರ್ಜರಿ ಬ್ಯಾಟಿಂಗ್‌ ನಡೆಸಿದರು. 3ನೇ ವಿಕೆಟ್‌ ಪತನಕ್ಕೆ ಈ ಜೋಡಿ 55 ಎಸೆತಗಳಲ್ಲಿ 100 ರನ್‌ ಕಲೆಹಾಕಿತ್ತು. ಇದರಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಅಷ್ಟರಲ್ಲೇ ನಿತೀಶ್‌ ರಾಣ 29 ಎಸೆತಗಳಲ್ಲಿ ಭರ್ಜರಿ 45 ರನ್‌ (4 ಬೌಂಡರಿ, 3 ಸಿಕ್ಸರ್‌) ಗಳಿಸಿ ಔಟಾದರು. ಇನ್ನೂ 207.50 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ ಏಕಾಂಗಿ ಹೋರಾಟ ನಡೆಸಿದ ವೆಂಕಟೇಶ್‌ ಅಯ್ಯರ್‌ 40 ಎಸೆತಗಳಲ್ಲಿ ಬರೋಬ್ಬರಿ 83 ರನ್‌ (5 ಸಿಕ್ಸರ್‌, 8 ಬೌಂಡರಿ) ಬಾರಿಸಿ ವಿಕೆಟ್‌ ಒಪ್ಪಿಸಿದರು.

    ಈ ಬೆನ್ನಲ್ಲೇ ಆಂಡ್ರೆ ರಸ್ಸೆಲ್‌, ಸುನೀಲ್‌ ನರೇನ್‌, ಶಾರ್ದೂಲ್‌ ಠಾಕೂರ್‌ ರಶೀದ್‌ ಖಾನ್‌ ಸ್ಪಿನ್‌ ದಾಳಿಗೆ ಮಕಾಡೆ ಮಲಗಿದರು. ಇದರಿಂದ ತಂಡ ಗೆಲುವಿನ ಭರವಸೆ ಕೈಚೆಲ್ಲಿತು. ಆದರೆ ಕ್ರೀಸ್‌ನಲ್ಲಿದ್ದ ರಿಂಕು ಸಿಂಗ್‌ ಕೊನೆಯ ಓವರ್‌ನಲ್ಲಿ ಭರ್ಜರಿ 5 ಸಿಕ್ಸರ್‌ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. 228.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರಿಂಕು ಸಿಂಗ್‌ 21 ಎಸೆತಗಳಲ್ಲಿ 48 ರನ್‌ (6 ಸಿಕ್ಸರ್‌, 1 ಬೌಂಡರಿ) ಬಾರಿಸಿದರೆ, ಉಮೇಶ್‌ ಯಾದವ್‌ 5 ರನ್‌ ಗಳಿಸಿ ಅಜೇಯರಾಗುಳಿದರು.

    ಗುಜರಾತ್‌ ಜೈಂಟ್ಸ್ ಪರ ರಶೀದ್‌ ಖಾನ್‌ 4 ಓವರ್‌ಗಳಲ್ಲಿ 37 ರನ್‌ ನೀಡಿ 3 ಪ್ರಮುಖ ವಿಕೆಟ್‌ ಕಿತ್ತರೆ, ಅಲ್ಝರಿ ಜೋಸೆಫ್‌ 2 ವಿಕೆಟ್‌ ಹಾಗೂ, ಮೊಹಮ್ಮದ್‌ ಶಮಿ, ಜಾಸ್‌ ಲಿಟಲ್‌ ತಲಾ ಒಂದು ವಿಕೆಟ್‌ ಕಬಳಿಸಿ ಮಿಂಚಿದರು. ಇದನ್ನೂ ಓದಿ: ಒಂದೇ ಕೈಯಲ್ಲಿ ಜಡೇಜಾ ಕ್ಯಾಚ್‌ – 10 ವರ್ಷದ ಹಿಂದೆ ʼಸರ್‌ ಜಡೇಜಾʼ ಎಂದಿದ್ದ ಧೋನಿ ಟ್ವೀಟ್‌ ವೈರಲ್‌

    ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ಪರ ಆರಂಭಿಕ ವೃದ್ಧಿಮಾನ್‌ ಸಹಾ 17 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್‌ಗಿಳಿದ ಸಾಯಿ ಸುದರ್ಶನ್‌ ಮತ್ತೊಮ್ಮೆ ಜವಾಬ್ದಾರಿಯುತ ಪ್ರದರ್ಶನ ನೀಡಿ ಗಮನಸೆಳೆದರು. ಸತತ 2ನೇ ಅರ್ಧ ಶತಕ ಸಿಡಿಸಿ ತಂಡ ಬೃಹತ್‌ ಮೊತ್ತ ಪೇರಿಸಲು ನೆರವಾದರು. ಸುದರ್ಶನ್‌ 38 ಎಸೆತಗಳಲ್ಲಿ 53 ರನ್‌ (2 ಸಿಕ್ಸರ್‌, 3 ಬೌಂಡರಿ) ಗಳಿಸಿ ಮಿಂಚಿದರು. ಸುದರ್ಶನ್‌ಗೆ ಉತ್ತಮ ಸಾಥ್ ನೀಡಿದ ಶುಭಮನ್‌ ಗಿಲ್ 39 ರನ್‌ (31 ಎಸೆತ, 5 ಬೌಂಡರಿ) ಗಳಿಸಿ ಔಟಾದರು. ಈ ಬೆನ್ನಲ್ಲೇ ಅಭಿನಮ್ ಮನೋಹರ್ 14 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು.

    ನಂತರ ಜೊತೆಯಾದ ವಿಜಯ್‌ ಶಂಕರ್‌ ಹಾಗೂ ಡೇವಿಡ್‌ ಮಿಲ್ಲರ್‌ ಜೋಡಿ ಭರ್ಜರಿ ರನ್‌ ಕಲೆಹಾಕಿತು. ಮುರಿಯದ 5ನೇ ವಿಕೆಟ್‌ಗೆ ಈ ಜೋಡಿ ಕೇವಲ 16 ಎಸೆತಗಳಲ್ಲಿ ಭರ್ಜರಿ 51 ರನ್‌ ಸಿಡಿಸಿತ್ತು. ಈ ವೇಳೆ ವಿಜಯ್‌ ಶಂಕರ್‌ 13 ಎಸೆತಗಳಲ್ಲಿ 46 ರನ್‌ ಚಚ್ಚಿದರೆ, ಮಿಲ್ಲರ್‌ 3 ಎಸೆತಗಳಲ್ಲಿ 2 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. 262 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ವಿಜಯ್‌ ಶಂಕರ್‌ 24 ಎಸೆತಗಳಲ್ಲಿ ಸ್ಫೋಟಕ 63 ರನ್‌ (4 ಬೌಂಡರಿ, 5 ಸಿಕ್ಸರ್)‌ ಚಚ್ಚಿ ತಂಡದ ಮೊತ್ತ 200ರ ಗಡಿ ದಾಟಿಸಿದರು.

    ಕೊಲ್ಕತ್ತಾ ನೈಟ್ ರೈಡರ್ಸ್ ಪರ ಸುನಿಲ್ ನರೇನ್‌ 3 ವಿಕೆಟ್ ಕಿತ್ತರೆ, ಸುಯಶ್ ಶರ್ಮಾ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • ಟೀಂ ಇಂಡಿಯಾಗೆ ಸಿಕ್ಕಾಯ್ತು 6ನೇ ಬೌಲರ್ – ಭರ್ಜರಿ ಪ್ರದರ್ಶನದ ಮೂಲಕ ಗಮನಸೆಳೆದ ಅಯ್ಯರ್

    ಟೀಂ ಇಂಡಿಯಾಗೆ ಸಿಕ್ಕಾಯ್ತು 6ನೇ ಬೌಲರ್ – ಭರ್ಜರಿ ಪ್ರದರ್ಶನದ ಮೂಲಕ ಗಮನಸೆಳೆದ ಅಯ್ಯರ್

    ಮುಂಬೈ: ಟೀಂ ಇಂಡಿಯಾಕ್ಕೆ ಕಾಡುತ್ತಿದ್ದ 6ನೇ ಬೌಲರ್ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಐಪಿಎಲ್‍ನಲ್ಲಿ ಮಿಂಚಿ ಟೀಂ ಇಂಡಿಯಾಗೆ ಲಗ್ಗೆ ಇಟ್ಟ ವೆಂಕಟೇಶ್ ಅಯ್ಯರ್ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಪ್ರದರ್ಶನದ ಮೂಲಕ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಸಾಧಿಸಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಪರ ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಉತ್ತಮ ಪ್ರದರ್ಶನದ ಮೂಲಕ ವೆಂಕಟೇಶ್ ಅಯ್ಯರ್ ಅಲ್‍ರೌಂಡರ್ ಆಗಿ ಕಮಾಲ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಗಾಯಳುವಾಗಿ ಹೊರಗುಳಿದ ಬಳಿಕ ಟೀಂ ಇಂಡಿಯಾದಲ್ಲಿ 6ನೇ ಬೌಲರ್ ಸಮಸ್ಯೆ ಕಾಡುತ್ತಿತ್ತು. ಇದೀಗ ಈ ಸಮಸ್ಯೆಗೆ ಪರಿಹಾರವೆಂಬಂತೆ ವೆಸ್ಟ್ ಇಂಡೀಸ್ ಸರಣಿಯಲ್ಲಿ ಅಯ್ಯರ್ ತಮ್ಮ ನೈಜ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ. ಇದನ್ನೂ ಓದಿ: ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್

    ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಉತ್ತಮ ಪ್ರದರ್ಶನದ ಮೂಲಕ ಆಯ್ಕೆಗಾರರ ಗಮನಸೆಳೆದ ಅಯ್ಯರ್‌ರನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಮಾತನಾಡಿರುವ ಅಯ್ಯರ್, ನಾನು ಟೀಂ ಇಂಡಿಯಾದಲ್ಲಿ ಆಲ್‍ರೌಂಡರ್ ಆಗಿ ಆಡುವುದರೊಂದಿಗೆ ತಂಡದ ಫಿನಿಶಿಂಗ್ ಆಟಗಾರನಾಗಿ ಕಾಣಿಸಿಕೊಳ್ಳಲು ಬಯಸಿದ್ದೇನೆ. ತಂಡಕ್ಕಾಗಿ 6ನೇ ಬೌಲರ್ ರೂಪದಲ್ಲಿ ಕೊಡುಗೆ ನೀಡಲು ನಾನು ಇಷ್ಟ ಪಡುತ್ತೇನೆ. ತಂಡಕ್ಕಾಗಿ ನನ್ನ ಎಲ್ಲಾ ಶ್ರಮ ವಹಿಸಿ ಆಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮೈದಾನದಲ್ಲಿ ಸಹ ಆಟಗಾರನಿಗೆ ಕಪಾಳಮೋಕ್ಷ ಮಾಡಿ ತಬ್ಬಿಕೊಂಡ ಹ್ಯಾರಿಸ್ ರೌಫ್ – ವೀಡಿಯೋ ವೈರಲ್

    ಅಯ್ಯರ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಬ್ಯಾಟಿಂಗ್‍ನಲ್ಲಿ ಕ್ರಮವಾಗಿ 24, 22 ಮತ್ತು 35 ರನ್ ಸಿಡಿಸಿದರೆ, ಬೌಲಿಂಗ್‍ನಲ್ಲಿ ಒಟ್ಟು 6 ಓವರ್ ಎಸೆದು 27 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದರು.

  • ಶತಕ ಸಿಡಿಸಿ ರಜನಿಕಾಂತ್ ಸ್ಟೈಲ್‍ನಲ್ಲಿ ಸಂಭ್ರಮಿಸಿದ ವೆಂಕಟೇಶ್ ಅಯ್ಯರ್

    ಶತಕ ಸಿಡಿಸಿ ರಜನಿಕಾಂತ್ ಸ್ಟೈಲ್‍ನಲ್ಲಿ ಸಂಭ್ರಮಿಸಿದ ವೆಂಕಟೇಶ್ ಅಯ್ಯರ್

    ಭೋಪಾಲ್: ವಿಜಯ್ ಹಜಾರೆ ಟೂರ್ನಿಯಲ್ಲಿ ಮಧ್ಯಪ್ರದೇಶದ ಆಟಗಾರ ವೆಂಕಟೇಶ್ ಅಯ್ಯರ್ ಭರ್ಜರಿ ಶತಕ ಸಿಡಿಸಿ ತಮಿಳಿನ ಖ್ಯಾತ ನಟರಾದ ರಜನಿಕಾಂತ್ ಸ್ಟೈಲ್‍ನಲ್ಲಿ ಸಂಭ್ರಮಿಸಿದ್ದಾರೆ.

    ಉತ್ತರ ಪ್ರದೇಶ ಮತ್ತು ಚಂಢೀಗಢ ನಡುವಿನ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ 151 ರನ್ (113 ಎಸೆತ, 8 ಬೌಂಡರಿ, 10 ಸಿಕ್ಸ್) ಬಾರಿಸಿ ಗೆಲುವಿನ ರೂವಾರಿಯಾದರು. ಅಯ್ಯರ್ ಶತಕ ಸಿಡಿಸುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್ ಕಡೆ ಕೈ ತೋರಿಸಿ ರಜನಿಕಾಂತ್ ಸ್ಟೈಲ್‍ನಲ್ಲಿ ಕೂಲಿಂಗ್ ಗ್ಲಾಸ್ ಹಾಕುವಂತೆ ಕೈ ಸನ್ನೆ ಮಾಡಿ ರಜನಿಕಾಂತ್‍ಗೆ ಹುಟ್ಟುಹಬ್ಬದ ಗಿಫ್ಟ್ ಎಂಬಂತೆ ಶತಕವನ್ನು ಅವರಿಗೆ ಸಮರ್ಪಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಬಿಡ್ಡನ ಅಡ್ಡಾದಲ್ಲಿ ಕಾಣಿಸಿಕೊಂಡ ವಾರ್ನರ್: ನೀನು ಚೆನ್ನಾಗಿದ್ದೀಯಾ ತಾನೇ ಎಂದು ಕಾಲೆಳೆದ ಕೊಹ್ಲಿ

    ಇಂದು ರಜನಿಕಾಂತ್ 71ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇವರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಅಯ್ಯರ್ ಶತಕ ಸಿಡಿಸಿದ ಬಳಿಕ ಅವರ ಆ್ಯಕ್ಷನ್ ಒಂದನ್ನು ಮೈದಾನದಲ್ಲಿ ಮಾಡುವ ಮೂಲಕ ಗಮನಸೆಳೆದರು. ಇದೀಗ ಶ್ರೇಯಸ್ ಅಯ್ಯರ್ ಈ ರೀತಿ ಸಂಭ್ರಮಿಸಿದ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಜೊತೆಗೆ ಮಹತ್ವದ ಜವಾಬ್ದಾರಿ ಹೊರಿಸಿದ ಬಿಸಿಸಿಐ

  • ಕನಸು ನನಸಾಗಿಸಿಕೊಂಡ ಅಯ್ಯರ್ – ಟೀಂ ಇಂಡಿಯಾಗೆ ನೂತನ ಆಲ್‍ರೌಂಡರ್ ಎಂಟ್ರಿ

    ಕನಸು ನನಸಾಗಿಸಿಕೊಂಡ ಅಯ್ಯರ್ – ಟೀಂ ಇಂಡಿಯಾಗೆ ನೂತನ ಆಲ್‍ರೌಂಡರ್ ಎಂಟ್ರಿ

    ಜೈಪುರ: ದೇಶಿ ಕ್ರಿಕೆಟ್‍ನಲ್ಲಿ ರನ್ ಮಳೆ ಸುರಿಸುತ್ತಿದ್ದ ಮಧ್ಯಪ್ರದೇಶ ಮೂಲದ ಆಲ್‍ರೌಂಡರ್ ವೆಂಕಟೇಶ್ ಅಯ್ಯರ್ ಭಾರತ ತಂಡಕ್ಕಾಗಿ ಆಡಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ನೂತನ ಆಲ್‌ರೌಂಡರ್‌ನ ಎಂಟ್ರಿಯಾಗಿದೆ.

    ದೇಶಿ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು ಕೂಡ ಅಷ್ಟು ಸದ್ದು ಮಾಡದಿದ್ದ ಅಯ್ಯರ್ ಎಲ್ಲರಿಗೂ ಪರಿಚಯವಾಗಿದ್ದು 14ನೇ ಆವೃತ್ತಿಯ ಐಪಿಎಲ್ ಮೂಲಕ. ದುಬೈನಲ್ಲಿ ನಡೆದ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಕೋಲ್ಕತ್ತಾ ಪರ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಶಕ್ತಿ ತುಂಬಿ ಫೈನಲ್‍ಗೆ ಹೋಗುವಂತೆ ಮಾಡಿದ ಕೀರ್ತಿಕೂಡ ವೆಂಕಟೇಶ್ ಅಯ್ಯರ್‍ ಗೆ ಸಲ್ಲುತ್ತದೆ. ಪಾಯಿಂಟ್ ಟೇಬಲ್‍ನಲ್ಲಿ 7ನೇ ಸ್ಥಾನದಲ್ಲಿದ್ದ ಕೋಲ್ಕತ್ತಾ ತಂಡ ಫೈನಲ್‍ಗೇರಲು ತಮ್ಮ ಆಲ್‍ರೌಂಡರ್ ಪ್ರದರ್ಶನದ ಮೂಲಕ ಅಯ್ಯರ್ ನೆರವಾಗಿದ್ದರು. ಕೋಲ್ಕತ್ತಾ ಪರ 10 ಪಂದ್ಯಗಳನ್ನು ಆಡಿದ ಅಯ್ಯರ್ 4 ಅರ್ಧಶತಕ ಸಹಿತ 370 ರನ್ ಮತ್ತು 3 ವಿಕೆಟ್ ಕಿತ್ತು ಆಲ್‍ರೌಂಡರ್ ಪ್ರದರ್ಶನ ನೀಡಿದ್ದರು. ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್ ಟಿ20 ಕಿಚ್ಚು ಹೆಚ್ಚಿಸಿದ ಚಹರ್, ಗುಪ್ಟಿಲ್ ದೃಷ್ಟಿಯುದ್ಧ

    ಐಪಿಎಲ್ ಪ್ರದರ್ಶನದ ಬಳಿಕ ನನಗೆ ಭಾರತ ತಂಡದ ಪರ ಆಡುವ ಕನಸಿದೆ. ಅದಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದಿದ್ದರು. ಆ ಬಳಿಕ ನ್ಯೂಜಿಲೆಂಡ್ ಸರಣಿಗೆ ಆಯ್ಕೆ ಮಾಡಿದಾಗ ನಾನು ಟೀಂ ಇಂಡಿಯಾ ಪರ ಆಡಲು ಉತ್ಸಾಹಕನಾಗಿದ್ದು, ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಸಿದ್ಧರಿರುವುದಾಗಿ ಸಂತೋಷ ವ್ಯಕ್ತಪಡಿಸಿದ್ದರು.

    ಐಪಿಎಲ್‍ನಲ್ಲಿ ಅಯ್ಯರ್ ಅಮೋಘ ಆಟ ನೋಡಿದ ಟೀಂ ಇಂಡಿಯಾ ಆಯ್ಕೆ ಸಮಿತಿ ನ್ಯೂಜಿಲೆಂಡ್ ಸರಣಿಗೆ ಆಯ್ಕೆ ಮಾಡಿದೆ. ಅದರಂತೆ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಮಧ್ಯಮ ವೇಗದ ಬೌಲಿಂಗ್ ಆಲ್‍ರೌಂಡರ್ ಒಬ್ಬರ ಉದಯವಾಗಿದೆ. ಟೀಂ ಇಂಡಿಯಾದ ಖಾಯಂ ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಫಿಟ್ನೇಸ್ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಜಾಗಕ್ಕೆ ಅಯ್ಯರ್ ಎಂಟ್ರಿಕೊಟ್ಟಿದ್ದಾರೆ. ಇದನ್ನೂ ಓದಿ: ಐಸಿಸಿಯ 3 ಟೂರ್ನಿಗೆ ಭಾರತ ಆತಿಥ್ಯ, ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ

    ಐಪಿಎಲ್‍ನಲ್ಲಿ ಕಮಾಲ್ ಮಾಡಿದ ಅಯ್ಯರ್ ಟೀಂ ಇಂಡಿಯಾದಲ್ಲಿ ಕೂಡ ಮಿಂಚುಹರಿಸಿದರೆ ಭಾರತತಂಡದಲ್ಲಿ ಖಾಯಂ ಸದಸ್ಯನಾಗಬಹುದು ಹಾಗಾಗಿ ಅಯ್ಯರ್ ಟೀಂ ಇಂಡಿಯಾದ ಭವಿಷ್ಯದ ಆಟಗಾರನಾಗಿದ್ದು ಸಿಕ್ಕ ಅವಕಾಶವನ್ನು ಯಾವರೀತಿ ಬಲಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ. ಇದನ್ನೂ ಓದಿ: ಸೂರ್ಯ ಸ್ಫೋಟಕ ಅರ್ಧಶತಕ – ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ