Tag: ವೃದ್ಧ ದಂಪತಿ

  • 3 ವರ್ಷಗಳಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಜೀವನ- ವೃದ್ಧ ದಂಪತಿ ಮನೆಗೆ ಬೆಳಕಾದ ಕಿಚ್ಚ

    3 ವರ್ಷಗಳಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಜೀವನ- ವೃದ್ಧ ದಂಪತಿ ಮನೆಗೆ ಬೆಳಕಾದ ಕಿಚ್ಚ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕಿಚ್ಚ ಸುದೀಪ್ ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ಕೆಲ ವರ್ಷಗಳಿಂದ ಬೆಳಕಿಲ್ಲದ ಮನೆಗೆ ಸುದೀಪ್ ಬೆಳಕಾಗುವ ಮೂಲಕ ಸಹಾಯದ ಹಸ್ತ ಚಾಚಿದ್ದಾರೆ. ಇದನ್ನೂ ಓದಿ: ನಾಲ್ಕು ಸರ್ಕಾರಿ ಶಾಲೆಗಳನ್ನ ದತ್ತು ಪಡೆದ ಕಿಚ್ಚ ಸುದೀಪ್

    ಸುದೀಪ್ ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಟ್ರಸ್ಟ್ ಕೂಡ ಕೆಲವು ತಿಂಗಳಿನಿಂದ ಸಮಾಜ ಸೇವೆಯಲ್ಲಿ ನಿರತವಾಗಿದೆ. ಇದೀಗ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ವೃದ್ಧ ದಂಪತಿಗೆ ಸಹಾಯ ಮಾಡಿದ್ದಾರೆ.

    ವೃದ್ಧ ದಂಪತಿ ಮೂರು ವರ್ಷಗಳ ಹಿಂದೆ ಮನೆ ಕಟ್ಟಿಸಿಕೊಂಡಿದ್ದರು. ಆದರೆ ಅದಕ್ಕೆ ವಿದ್ಯುತ್ ಸಂಪರ್ಕ ಮಾಡಿಕೊಳ್ಳಲಾಗದೆ ಅಂದಿನಿಂದ ಅಂದರೆ ಸುಮಾರು ಮೂರು ವರ್ಷದಿಂದ ಕತ್ತಲಲ್ಲಿಯೇ ಜೀವನ ಸಾಗಿಸುತ್ತಿದ್ದರು. ಈ ವಿಷಯ ಸುದೀಪ್ ಚಾರಿಟೇಬಲ್ ಟ್ರಸ್ಟ್ ಗಮನಕ್ಕೆ ಬಂದಿದೆ.

    ಟ್ರಸ್ಟ್ ನ ಯುವಕರು ತಕ್ಷಣ ವೃದ್ಧ ದಂಪತಿಯಾದ ರಾಧಮ್ಮ ಹಾಗೂ ನಾಗರಾಜು ಅವರ ಮನೆಗೆ ಭೇಟಿ ನೀಡಿದ್ದಾರೆ. ನಂತರ ಅವರ ಸಮಸ್ಯೆಯನ್ನು ಆಲಿಸಿ, ತಾವೇ ತಮ್ಮ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಹಾಕಿಸಿಕೊಟ್ಟಿದ್ದಾರೆ. ಅಲ್ಲದೇ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಅನುಮತಿಗಳನ್ನೂ ಸಹ ಅವರೇ ತೆಗೆದುಕೊಂಡಿದ್ದಾರೆ.

    ವೃದ್ಧ ದಂಪತಿ ತಮ್ಮ ವಿಕಲಾಂಗ ಮೊಮ್ಮಗನೊಂದಿಗೆ ವಾಸಿಸುತ್ತಿದ್ದಾರೆ. ಟ್ರಸ್ಟ್ ಮೂಲಕ ಸುದೀಪ್ ಸಹಾಯ ಮಾಡಿದ್ದಕ್ಕೆ ಕಿಚ್ಚನಿಗೆ ಮತ್ತು ಟ್ರಸ್ಟ್ ಯುವಕರಿಗೆ ವೃದ್ಧ ದಂಪತಿ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳು ವೃದ್ಧ ದಂಪತಿಗೆ ಸಹಾಯ ಮಾಡಿರುವ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಸುದೀಪ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಚಿಕಿತ್ಸೆಗೆ ಅಲೆದಾಡಿ ಮಧ್ಯರಾತ್ರಿ ಗಾಂಧಿ ಪ್ರತಿಮೆಯೆದುರು ಕೂತ ವೃದ್ಧ ದಂಪತಿ- ಸುಧಾಕರ್ ಸ್ಪಂದನೆ

    ಚಿಕಿತ್ಸೆಗೆ ಅಲೆದಾಡಿ ಮಧ್ಯರಾತ್ರಿ ಗಾಂಧಿ ಪ್ರತಿಮೆಯೆದುರು ಕೂತ ವೃದ್ಧ ದಂಪತಿ- ಸುಧಾಕರ್ ಸ್ಪಂದನೆ

    – ಪಬ್ಲಿಕ್ ಟಿವಿ ನೆರವಿನಿಂದ ವೃದ್ಧ ದಂಪತಿ ಆಸ್ಪತ್ರೆಗೆ ಶಿಫ್ಟ್

    ಬೆಂಗಳೂರು: ಆಸ್ಪತ್ರೆಗಳನ್ನು ಸುತ್ತಿದರೂ ಮಧ್ಯರಾತ್ರಿಯಲ್ಲಿ ಬೆಡ್ ಇಲ್ಲದೆ ವೃದ್ಧ ದಂಪತಿ ಮತ್ತು ಮಗಳು ಪರಾಡುತ್ತಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ತಕ್ಷಣ ಎಚ್ಚೆತ್ತ ಸಚಿವ ಸುಧಾಕರ್ ವೃದ್ಧ ದಂಪತಿಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದಾರೆ.

    ವೃದ್ಧ ದಂಪತಿ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಆದರೆ ಯಾವುದೇ ಆಸ್ಪತ್ರೆ ಬೆಡ್ ಇಲ್ಲ ಯಾರೂ ಅಡ್ಮಿಟ್ ಮಾಡಿಕೊಳ್ಳಲಿಲ್ಲ. ಕೊನೆಗೆ ಆಸ್ಪತ್ರೆ ಸಿಗದೆ ಅಲೆದಿದ್ದ ವೃದ್ಧ ದಂಪತಿ ಮತ್ತು ಮಗಳು ಮಧ್ಯರಾತ್ರಿ ಕಬ್ಬನ್ ಪಾರ್ಕ್ ಗಾಂಧಿ ಪ್ರತಿಮೆ ಎದುರು ಕುಳಿತಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿತ್ತು.

    ಆಸ್ಪತ್ರೆಗೆ ದಾಖಲಿಸದೆ ನಾವು ಮಲಗಲ್ಲ ಅಂತ ಮಗಳು ಸ್ಪಷ್ಟಪಡಿಸಿದ್ದರು. ಪಬ್ಲಿಕ್ ಟಿವಿ ವರದಿ ಬೆನ್ನೆಲ್ಲೇ ಸಚಿವ ಡಾ.ಸುಧಾಕರ್ ಸ್ಪಂದನೆ ನೀಡಿದ್ದಾರೆ. ಕೊನೆಗೆ ಸಚಿವ ಸಧಾಕರ್ ವೃದ್ಧ ದಂಪತಿಗೆ ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಬಗ್ಗೆ ಸುಧಾಕರ್ ಟ್ವೀಟ್ ಮಾಡಿದ್ದು, “ಕಬ್ಬನ್ ಪಾರ್ಕ್ ಬಳಿ ಕಗ್ಗತ್ತಿಲಿನಲ್ಲಿ ವ್ಯಥೆ ಪಡುತ್ತಿದ್ದ ದಂಪತಿಗಳ ಪುತ್ರಿಯೊಂದಿಗೆ ಮಾತನಾಡಿದ್ದೇನೆ. ಅವರನ್ನು ಈ ಕೂಡಲೇ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಯೊಬ್ಬರಿಗೆ ಸೂಚಿಸಿದ್ದೇನೆ. ಅವರು ಕ್ಷೇಮವಾಗಿ ಆಸ್ಪತ್ರೆ ಸೇರುವವರೆಗೂ ನಾನು ಮಲಗುವುದಿಲ್ಲ. ಇದನ್ನು ನನ್ನ ಗಮನಕ್ಕೆ ತಂದ ಪಬ್ಲಿಕ್ ಟಿವಿಗೆ ಧನ್ಯವಾದಗಳು” ಎಂದು ಮೊದಲಿಗೆ ಹೇಳಿದ್ದರು.

    ನಂತರ ಮತ್ತೊಂದು ಟ್ವೀಟ್ ಮಾಡಿ, “ವೃದ್ಧ ದಂಪತಿಯನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಬ್ಲಿಕ್ ಟಿವಿಗೆ ಹಾಗೂ ಅಧಿಕಾರಿ ಮಿತ್ರರಿಗೆ ಕೃತಜ್ಞತೆ ಸಲ್ಲಿಸುತ್ತೀನಿ” ಎಂದಿದ್ದಾರೆ.

  • ಕೊರೊನಾ ಎಫೆಕ್ಟ್: ಬೀದಿಗೆ ಬಿತ್ತು ಬಸ್ ನಿಲ್ದಾಣ ಶುಚಿಗೊಳಿಸ್ತಿದ್ದ ವೃದ್ಧ ದಂಪತಿ ಬದುಕು

    ಕೊರೊನಾ ಎಫೆಕ್ಟ್: ಬೀದಿಗೆ ಬಿತ್ತು ಬಸ್ ನಿಲ್ದಾಣ ಶುಚಿಗೊಳಿಸ್ತಿದ್ದ ವೃದ್ಧ ದಂಪತಿ ಬದುಕು

    ಮಡಿಕೇರಿ: ಇದ್ದಕ್ಕಿದ್ದಂತೆ ಬಂದ ಕೊರೊನಾ ಮಹಾಮಾರಿ ಬಸ್ ನಿಲ್ದಾಣವನ್ನು ಸ್ವಚ್ಚತೆ ಮಾಡುತ್ತಿದ್ದ ಕುಟುಂಬದ ಕೂಲಿಯನ್ನೇ ಕಿತ್ತುಕೊಂಡಿತು. ಬದುಕಿಡೀ ಬಸ್ ನಿಲ್ದಾಣವನ್ನೇ ಸ್ವಚ್ಛತೆ ಮಾಡಿದ್ದ ಈ ವೃದ್ಧ ಕುಟುಂಬಕ್ಕೆ ನಿಲ್ಲೋದಕ್ಕೆ ಸೂರು ಇಲ್ಲದೆ ಬೀದಿಗೆ ಬಿದ್ದಿದೆ.

    ಹೌದು. ಮಡಿಕೇರಿಯ ಬಸ್ ನಿಲ್ದಾಣದಲ್ಲಿ ಹತ್ತಾರು ವರ್ಷಗಳಿಂದ ಸ್ವಚ್ಚತಾ ಕಾರ್ಮಿಕರಾಗಿ ಈ ವೃದ್ಧ ದಂಪತಿ ದುಡಿಯುತ್ತಿದ್ದರು. ಆದರೆ ಕೊರೊನಾ ಮಹಾಮಾರಿ ಲಾಕ್‍ಡೌನ್ ಮೂಲಕ ಈ ಸ್ವಚ್ಛತಾ ಕಾರ್ಮಿಕರ ಕೆಲಸವನ್ನೂ ಕಿತ್ತುಕೊಂಡಿದೆ.

    ಇದೀಗ ಅತ್ತ ಕೂಲಿಯೂ ಇಲ್ಲದೆ, ಇತ್ತ ಸೂರು ಇಲ್ಲದೆ ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿ ಬದುಕು ದೂಡುತ್ತಿತ್ತು. ಬಸ್ಸಿನಿಂದ ಒಮ್ಮೆ ಬಿದ್ದು ಸೊಂಟ ಮುರಿದುಕೊಂಡಿದ್ದ ವೃದ್ಧೆ ಜಯಮ್ಮನಿಗೆ ಸದ್ಯ ತೆವಳುವುದಕ್ಕೂ ಆಗುವುದಿಲ್ಲ. ಹೀಗಾಗಿ ಗುಡಿಸಲು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ಕಣ್ಣು ಕಾಣದ ಪತಿ ಚಿಕ್ಕ, ತನ್ನ ಪತ್ನಿಯ ಸ್ಥಿತಿ ನೋಡಿ ಕಣ್ಣೀರುಡುತ್ತಿದ್ದಾರೆ.

    ದಿಕ್ಕು ದೆಸೆಯಿಲ್ಲದ ಈ ವೃದ್ಧ ದಂಪತಿ ಕನಿಷ್ಠ ಊಟಕ್ಕೂ ಗತಿ ಇಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ಮಕ್ಕಳ ಆಶ್ರಯದಲ್ಲಿ ಇರಬೇಕಾದ ಈ ಜೀವಗಳು ಇದುವರೆಗೆ ಬಸ್ ನಿಲ್ದಾಣದಲ್ಲಿ ಕೆಲಸ ಮಾಡುತ್ತಾ, ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿ ಹೇಗೋ ಕಾಲ ಕಳೆಯುತ್ತಿದ್ದವು. ಆದರೆ ಜಾಗದ ಮಾಲೀಕ ಆ ಗುಡಿಸಲುಗಳನ್ನು ಕಿತ್ತು ಇಡೀ ನಿವೇಶನವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಹೀಗಾಗಿ ವೃದ್ಧ ಕುಟುಂಬ ಬೀದಿಗೆ ಬಿದ್ದಿದೆ.

    ಈ ಸ್ಥಿತಿಯನ್ನು ಕೆಲವು ತಿಂಗಳಿಂದ ಗಮನಿಸುತ್ತಿದ್ದ ಬಾರ್ ಮಾಲೀಕ ಪ್ರತೀ ದಿನ ಇವರಿಗೆ ಊಟ ತಿಂಡಿ ಪೂರೈಸುತ್ತಿದ್ದರು. ಆದರೆ ಇದೀಗ ಖಾಸಗಿ ಜಾಗದ ಮಾಲೀಕ ಈ ಗುಡಿಸಲುಗಳನ್ನು ಕೀಳಿಸಿ ಜಾಗವನ್ನು ಸ್ವಚ್ಛಗೊಳಿಸಲು ಮುಂದಾಗಿರುವುದರಿಂದ ವೃದ್ಧ ದಂಪತಿ ಪಾಲಿಗೆ ನಿಲ್ಲುವುದಕ್ಕೂ ಸೂರು ಇಲ್ಲದಂತಾಗಿದೆ. ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಗುಡಿಸಲು ಬಿಟ್ಟು ಎಲ್ಲಿಗೆ ಹೋಗೋದೆಂದು ದಂಪತಿ ಕಣ್ಣೀರು ಸುರಿಸುತ್ತಿದ್ದಾರೆ.

    ಈ ಸ್ಥಿತಿಯನ್ನು ಕಂಡರೆ ಎಂಥವರಿಗೂ ಕರುಳು ಹಿಂಡುತ್ತದೆ. ಹೀಗಾಗಿ ಇದೂವರೆಗೆ ಊಟ ತಿಂಡಿ ಪೂರೈಸುತ್ತಿದ್ದ ಬಾರ್ ಮಾಲೀಕ, ಯಾರಾದರೂ ಸಹಾಯ ಮಾಡಿ ಪ್ಲೀಸ್. ಇವರನ್ನು ಕನಿಷ್ಠ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸೋಣ ಎಂದು ಸಹಾಯ ಹಸ್ತ ಚಾಚಿದ್ದಾರೆ.

  • ವೃದ್ಧ ತಂದೆ-ತಾಯಿಯನ್ನು ಉಸಿರುಗಟ್ಟಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಮಗ ಅರೆಸ್ಟ್

    ವೃದ್ಧ ತಂದೆ-ತಾಯಿಯನ್ನು ಉಸಿರುಗಟ್ಟಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಮಗ ಅರೆಸ್ಟ್

    ಬೆಂಗಳೂರು: ತಂದೆ-ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಶ್ರೀರಂಗಪಟ್ಟಣದ ಬಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಈತ ತನ್ನ ಪೋಷಕರನ್ನು ಕೊಲೆ ಮಾಡಿದ ಬಳಿಕ ಸೇತುವೆ ಮೇಲಿಂದ ಹಾರಿದ್ದ. ತಂದೆ-ತಾಯಿಗೆ ಪಿಂಡ ಬಿಟ್ಟು ತಲೆ ಬೋಳಿಸಿಕೊಂಡು ಬಳಿಕ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದನು. ಆದರೆ ಈ ವೇಳೆ ಆತನ ಪ್ರಾಣ ಹೊಗದೆ ಎರಡು ಕಾಲು ಮುರಿದಿತ್ತು. ಹೀಗಾಗಿ ತನ್ನ ಸಂಬಂಧಿಕರಿಗೆ ಫೋನ್ ಮಾಡಿದ್ದು, ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ನಡೆದಿದ್ದೇನು?:
    ಆರೋಪಿ ಸಂತೋಷ್ ಬುಧವಾರ ತನ್ನ ಹೆತ್ತವರಾದ ನರಸಿಂಹ ರಾಜು(70) ಹಾಗೂ ಸರಸ್ವತಿ (64) ಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದನು. ಈ ಘಟನೆ ಕಾಮಾಕ್ಷಿಪಾಳ್ಯದ ರಂಗನಾಥ ಪುರದಲ್ಲಿ ನಡೆದಿತ್ತು. ಹೆತ್ತವರನ್ನು ಕೊಲೆ ಮಾಡಿದ ಬಳಿಕ ಸಂತೋಷ್ ನಾಪತ್ತೆಯಾಗಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ಮಗನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು.

    ದಂಪತಿ ಮೂಲತಃ ಮೈಸೂರಿನವರಾಗಿದ್ದು, ಮಗ ಹಾಗೂ ಸೊಸೆ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮನೆ ಕೆಲಸದವರು ಬುಧವಾರ ಬೆಳಗ್ಗೆ ಬಂದಾಗ ರಾಜು ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಪಕ್ಕದ ಕೋಣೆಯಲ್ಲಿ ಸರಸ್ವತಿ ಮೃತದೇಹ ಬಿದ್ದಿತ್ತು. ಇದನ್ನು ಕಂಡು ಗಾಬರಿಗೊಂಡ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೊಲೆಯ ಹಿಂದಿನ ರಹಸ್ಯ ಭೇದಿಸಲು ಮುಂದಾಗಿದ್ದಾರೆ.

    ಇತ್ತ ನೆರೆಹೊರೆಯವರು, ತಿಂಗಳ ಹಿಂದೆಯಷ್ಟೇ ಮಗ ತನ್ನ ವೃದ್ಧ ಪೋಷಕರ ಜೊತೆ ಜಗಳವಾಡಿದ್ದನು. ಅಲ್ಲದೆ ಅವರ ಮೇಲೆ ಹಲ್ಲೆಗೂ ಮುಂದಾಗಿದ್ದನು. ಈ ಹಿನ್ನೆಲೆಯಲ್ಲಿ ಆತನೇ ಕೊಲೆ ಮಾಡಿರಬಹುದೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮದುವೆ ದಲ್ಲಾಳಿಯಾಗಿ ಮೃತ ರಾಜು ಕೆಲಸ ಮಾಡುತ್ತಿದ್ದರೆ, ಸರಸ್ವತಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಕೆಲಸ ಬಿಟ್ಟಿದ್ದರು. ಇತ್ತ ಆರೋಪಿ ಸಂತೋಷ್ ಪತ್ನಿ ಗರ್ಭಿಣಿಯಾಗಿದ್ದು, ತವರಲ್ಲಿ ಹೋಗಿ ನೆಲೆಸಿದ್ದಳು.

  • ಬೆಂಗ್ಳೂರಿನಲ್ಲಿ ವೃದ್ಧ ದಂಪತಿ ಕೊಲೆ- ಮಗನಿಂದಲೇ ಹತ್ಯೆ ಶಂಕೆ

    ಬೆಂಗ್ಳೂರಿನಲ್ಲಿ ವೃದ್ಧ ದಂಪತಿ ಕೊಲೆ- ಮಗನಿಂದಲೇ ಹತ್ಯೆ ಶಂಕೆ

    ಬೆಂಗಳೂರು: ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಾಮಾಕ್ಷಿಪಾಳ್ಯದ ಕಾವೇರಿನಗರದಲ್ಲಿ ನಡೆದಿದೆ.

    ಮೂಲತಃ ಮೈಸೂರಿನವರಾದ ನರಸಿಂಹ ರಾಜು (70), ಪತ್ನಿ ಸರಸ್ವತಿ (64) ಹತ್ಯೆಯಾದವರು. ಈ ದಂಪತಿ ಕಳೆದೊಂದು ವರ್ಷದಿಂದ ಕಾವೇರಿನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೆ ಬುಧವಾರ ಬೆಳಗ್ಗೆ ಮನೆ ಕೆಲಸದ ಮಹಿಳೆ ಮನೆಗೆ ಬಂದು ನೋಡಿದಾಗ ದಂಪತಿ ಮೃತಪಟ್ಟಿದ್ದರು.

    ನರಸಿಂಹ ರಾಜು ದಲ್ಲಾಳಿಯಾಗಿದ್ದರೆ, ಪತ್ನಿ ಸರಸ್ವತಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಆದರೆ ಕೆಲವು ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಘಟನೆಯ ಬಳಿಕ ದಂಪತಿಯ ಪುತ್ರ ಸಂತೋಷ್ ನಾಪತ್ತೆಯಾಗಿದ್ದು, ಆತನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ವೃದ್ಧ ದಂಪತಿಯ ಮನೆ ಕೆಲಸದ ಮಹಿಳೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

  • ಅನಾರೋಗ್ಯಕ್ಕೀಡಾದ್ರೂ ಮಕ್ಕಳು ನಿರ್ಲಕ್ಷ್ಯ- ವೃದ್ಧ ದಂಪತಿ ಆತ್ಮಹತ್ಯೆ

    ಅನಾರೋಗ್ಯಕ್ಕೀಡಾದ್ರೂ ಮಕ್ಕಳು ನಿರ್ಲಕ್ಷ್ಯ- ವೃದ್ಧ ದಂಪತಿ ಆತ್ಮಹತ್ಯೆ

    ಚಿಕ್ಕಮಗಳೂರು: ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡವರನ್ನು ಗೋಪಾಲಕೃಷ್ಣ (74) ಹಾಗೂ ರತ್ನ (73) ಎಂದು ಗುರುತಿಸಲಾಗಿದೆ. ಮಕ್ಕಳ ವರ್ತನೆಗೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

    ಲಾಕ್ ಡಾನ್ ಹಿನ್ನೆಲೆ ದಂಪತಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು, ಹಿರಿ ಜೀವಗಳ ಸಂಕಷ್ಟಕ್ಕೆ ಮಕ್ಕಳು ಸ್ಪಂದಿಸಲಿಲ್ಲ. ಅಲ್ಲದೆ ಅನಾರೋಗ್ಯಕ್ಕೆ ತುತ್ತಾದರೂ ತನ್ನ ಮಕ್ಕಳು ಯೋಗಕ್ಷೇಮ ವಿಚಾರಿಸುತ್ತಿಲ್ಲ ಎಂದು ಮನನೊಂದು ವೃದ್ಧ ದಂಪತಿ ಆತ್ಮಹತ್ಯೆಯ ಮೊರೆ ಹೋಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸ್ಥಳಕ್ಕೆ ಚಿಕ್ಕಮಗಳೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕೂಲಿ ಕಿತ್ತುಕೊಂಡ ಕೊರೊನಾ – ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿರುವ ವೃದ್ಧ ದಂಪತಿ

    ಕೂಲಿ ಕಿತ್ತುಕೊಂಡ ಕೊರೊನಾ – ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿರುವ ವೃದ್ಧ ದಂಪತಿ

    ಮಡಿಕೇರಿ: ಇಡೀ ವಿಶ್ವವನ್ನೇ ಆವರಿಸಿರುವ ಕೊರೊನಾ ಮಹಾಮಾರಿ ಸೋಂಕಿತರನ್ನು ಬಲಿ ಪಡೆಯುತ್ತಿರುವುದರ ಜೊತೆಗೆ ಬಡವರ ಜೀವನವನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.

    ಕೊಡಗು ಜಿಲ್ಲೆಯ ಕುಶಾಲನಗರದ ಕರಿಯಪ್ಪ ಬಡಾವಣೆ ವೃದ್ಧ ದಂಪತಿ ಕೊರೊನಾ ಲಾಕ್‍ಡೌನ್‍ನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ವಿಲನ್ಸ್ ಮತ್ತು ಜಯಲಕ್ಷ್ಮಿ ದಂಪತಿ ಕನಿಷ್ಠ ಊಟಕ್ಕೂ ಗತಿ ಇಲ್ಲದೆ ಕಣ್ಣೀರು ಇಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಅಪಘಾತದಲ್ಲಿ ವಿಲನ್ಸ್ ಅವರ ಕಾಲು ಮುರಿದುಹೋಗಿತ್ತು. ಬಳಿಕ ಅಕ್ಕಪಕ್ಕದ ಮನೆಯವರಿಂದ 40 ಸಾವಿರ ರೂ. ಸಾಲ ಪಡೆದು ಸುಳ್ಯದಲ್ಲಿ ಅವರಿಗೆ ಶಸ್ತ್ರಚಿಕಿತ್ಸೆಗೆ ಮಾಡಿಸಲಾಗಿತ್ತು. ಬಳಿಕ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿತ್ತು. ಆದರೆ ಲಾಕ್‍ಡೌನ್‍ನಿಂದ ಹಣಕಾಸಿನ ಸಮಸ್ಯೆ ಎದುರಾಗಿ ಅವರು ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವೇ ಆಗಿಲ್ಲ.

    ಕೂಲಿ ಮಾಡಿ ಬದುಕುತ್ತಿದ್ದ ವಿಲನ್ಸ್ ಅವರಿಗೆ ಕಾಲು ಮುರಿದ ಮೇಲೆ ಅವರ ಪತ್ನಿ ಜಯಲಕ್ಷ್ಮಿ ಹೋಟೆಲ್‍ನಲ್ಲಿ ಕೆಲಸ ಮಾಡಿ ಪತಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದ ಹೋಟೆಲ್‍ಗಳೆಲ್ಲಾ ಬಂದ್ ಆಗಿವೆ. ಹೀಗಾಗಿ ಕೊರೊನಾ ಈ ವೃದ್ಧ ದಂಪತಿಯ ಕೂಲಿಯನ್ನೂ ಕಿತ್ತುಕೊಂಡಿದೆ.

    ಬಾಡಿಗೆ ಮನೆಯಲ್ಲಿ ಬದುಕು ನಡೆಸುತ್ತಿರುವ ಇವರಿಗೆ ಸದ್ಯ ಪಡಿತರ ಅಂಗಡಿಯಿಂದ ವಿತರಣೆ ಮಾಡಿರುವ ಅಕ್ಕಿ, ಗೋಧಿ ಬಿಟ್ಟರೆ ಬೇರೆನೂ ಇಲ್ಲ. ಚಿಕಿತ್ಸೆಯ ಮಾತಿರಲಿ ಕನಿಷ್ಠ ಊಟಕ್ಕೂ ವ್ಯವಸ್ಥೆ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದ್ದು, ಪ್ರತಿದಿನ ವೃದ್ಧ ದಂಪತಿ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ.

  • ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    – ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ರೂ ಗುಣಮುಖ

    ಕೇರಳ: ಮಹಾಮಾರಿ ಕೊರೊನಾ ಎಂದರೆ ಸಾಕು ಜನರು ಭಯಭೀತರಾಗುತ್ತಾರೆ. ಅದರಲ್ಲೂ ಈ ವೈರಸ್ 60 ವರ್ಷ ಮೇಲ್ಪಟ್ಟವರಿಗೆ ಬಂದರೆ ಗುಣಮುಖರಾಗುವುದು ಕಷ್ಟ ಎಂಬ ಆತಂಕವಿದೆ. ಇದೇ ವೇಳೆ ಕೇರಳದಿಂದ ಶುಭ ಸುದ್ದಿ ಸಿಕ್ಕಿದ್ದು, ವೃದ್ಧ ದಂಪತಿ ಮಹಾಮಾರಿ ಕೋವಿಡ್-19 ವೈರಸ್‍ನಿಂದ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಥಾಮಸ್ (93) ಮತ್ತು ಅವರ ಪತ್ನಿ ಮರಿಯಮ್ಮ (88) ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ದಂಪತಿ ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದೀಗ ಈ ದಂಪತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕೇರಳದ ಕೊಟ್ಟಾಯಂನಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ.

    ಥಾಮಸ್ ಕೋವಿಡ್-19 ವೈರಸ್‍ನಿಂದ ಪಾರಾದ ಭಾರತದ ಅತ್ಯಂತ ವೃದ್ಧರಾಗಿದ್ದಾರೆ. ಇತ್ತೀಚಿಗೆ ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಹೀಗಾಗಿ ಥಾಮಸ್ ಅವರನ್ನು ಪತ್ನಿಯೊಂದಿಗೆ ಡಿಸ್ಚಾರ್ಜ್ ಮಾಡಲಾಗಿದೆ.

    ಸೋಂಕು ಬಂದಿದ್ದು ಹೇಗೆ?
    ವೃದ್ಧ ದಂಪತಿಯನ್ನು ಮಾರ್ಚ್ 9 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಥಾಮಸ್ ಮತ್ತು ಮರಿಯಮ್ಮ ವೃದ್ಧ ದಂಪತಿ ಪತ್ತನಂತಿಟ್ಟ ಜಿಲ್ಲೆಯ ರಾಣಿ ಗ್ರಾಮದ ನಿವಾಸಿಯಾಗಿದ್ದು, ಮಾರ್ಚ್‍ನಲ್ಲಿ ಇಟಲಿಯಿಂದ ವೃದ್ಧ ದಂಪತಿಯ ಮಗ, ಸೊಸೆ ಮತ್ತು ಮೊಮ್ಮಗ ಹಿಂದಿರುಗಿದ್ದರು. ಇವರ ಜೊತೆ ಸಂಪರ್ಕ ಹೊಂದಿದ್ದ ವೃದ್ಧ ದಂಪತಿಗೆ ಕೊರೊನಾ ಬಂದಿತ್ತು. ಅವರ ಮಗ, ಸೊಸೆ ಮತ್ತು ಮೊಮ್ಮಗನಿಗೂ ಕೊರೊನಾ ಪಾಸಿಟಿವ್ ಬಂದಿತ್ತು.

    ದಂಪತಿ ಎರಡು ವಾರಗಳವರೆಗೆ ಕಟ್ಟುನಿಟ್ಟಿನಿಂದ ಹೋಂ ಕ್ಯಾರೆಂಟೈನ್‍ನಲ್ಲಿ ಉಳಿದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಬ್ಬರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ದಂಪತಿ ಈಗಾಗಲೇ ಮಧುಮೇಹ, ರಕ್ತದೊತ್ತಡ, ಹೃದಯ ಕಾಯಿಲೆ ಮತ್ತು ವಯಸ್ಸಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಹೀಗಾಗಿ ಮೊದಲ ಹಂತದ ಚಿಕಿತ್ಸೆಯಲ್ಲಿ ದಂಪತಿಯ ಸ್ಥಿತಿ ಗಂಭೀರವಾಗಿತ್ತು.

    ಅಷ್ಟೇ ಅಲ್ಲದೇ ಚಿಕಿತ್ಸೆಯ ಸಮಯದಲ್ಲಿ ಥಾಮಸ್‍ಗೆ ಹೃದಯಾಘಾತವಾಗಿತ್ತು. ಅಲ್ಲದೇ ರಕ್ತದೊತ್ತಡದಿಂದ ವೈದ್ಯರು ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ಥಾಮಸ್ ಮತ್ತು ಮರಿಯಮ್ಮ ಇಬ್ಬರಿಗೂ ಮೂತ್ರದ ಸೋಂಕು ಕೂಡ ಕಂಡುಬಂದಿತ್ತು. ಆದರೂ ಇಷ್ಟೆಲ್ಲಾ ಕಷ್ಟದಿಂದಲೂ ವೃದ್ಧ ದಂಪತಿ ಧೈರ್ಯದಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.

    ಸ್ಥಳಿಯವಾಗಿ ವೃದ್ಧದಂಪತಿ ಎಲ್ಲ ಆಹಾರವನ್ನು ಇಷ್ಟ ಪಡುತ್ತಾರೆ. ಥಾಮಸ್ ಅವರಿಗೆ ಫಿಶ್ ಫ್ರೈ ಅಂದರೆ ತುಂಬಾ ಇಷ್ಟ. ಹೀಗಾಗಿ ನಾವು ತಿನ್ನಲು ಫಿಶ್  ಫ್ರೈ ಕೊಡುತ್ತಿದ್ದೆವು. ಅಲ್ಲದೇ ಅಕ್ಕಿ ಗಂಜಿ, ಮರಗೆಣಸು ಮತ್ತು ಹಲಸಿನ ಹಣ್ಣನ್ನು ಆಹಾರವಾಗಿ ತಿನ್ನಲು ಕೊಡುತ್ತಿದ್ದೆವು ಎಂದು ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರು ಹೇಳಿದ್ದಾರೆ.

    ಇದೀಗ ವೃದ್ಧ ದಂಪತಿಯನ್ನು ಉಳಿಸಲು ಶ್ರಮಿಸಿದ ವೈದ್ಯರು, ನರ್ಸ್ ಗಳು ಮತ್ತು ಇತರ ಸಿಬ್ಬಂದಿಗೆ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಾಜಾ ಧನ್ಯವಾದ ತಿಳಿಸಿದ್ದಾರೆ. ಸರ್ಕಾರದ ಪ್ರಕಾರ, ಏಳು ವೈದ್ಯರ ತಂಡವು ಚಿಕಿತ್ಸೆ ನೀಡಿದ್ದು, ಇವರಿಗೆ 25 ಮಂದಿ ನರ್ಸ್ ಸೇರಿದಂತೆ 40 ವೈದ್ಯಕೀಯ ಸಿಬ್ಬಂದಿ ಸಹಕಾರ ನೀಡಿದ್ದರು ಎಂದು ತಿಳಿದುಬಂದಿದೆ.

  • ಕೊರೊನಾ ವಿರುದ್ಧ ಹೋರಾಡಿ ಗೆದ್ದ ದೇಶದ 93-88 ವರ್ಷದ ವೃದ್ಧ ದಂಪತಿ

    ಕೊರೊನಾ ವಿರುದ್ಧ ಹೋರಾಡಿ ಗೆದ್ದ ದೇಶದ 93-88 ವರ್ಷದ ವೃದ್ಧ ದಂಪತಿ

    ತಿರುವನಂತಪುರಂ: ವಿಶ್ವಾದಂತ್ಯ ಕೊರೊನಾ ವೈರಸ್‍ಗೆ ಬಲಿಯಾದವರಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಾಗಿದೆ. ಆದರೆ ಪವಾಡ ರೀತಿ ಕೇರಳದ ವೃದ್ಧ ದಂಪತಿ ಕೊರೊನಾ ವಿರುದ್ಧ ಹೋರಾಡಿ ಸಾವು ಗೆದ್ದಿದ್ದಾರೆ.

    ಕೊರೊನಾ ಪಾಸಿಟಿವ್ ಆಗಿದ್ದ ಕೇರಳದ ಕೊಟ್ಟಾಯಂ ದಂಪತಿ, 93 ವರ್ಷದ ಥಾಮಸ್ ಮತ್ತು 88 ವರ್ಷದ ಥ್ರೆಸ್ಯಮ್ಮ ಅವರು ಗುಣಮುಖರಾಗಿದ್ದಾರೆ. ಹೀಗಾಗಿ ಅವರನ್ನು ಶುಕ್ರವಾರ ವೈದ್ಯಕೀಯ ಕಾಲೇಜು ಕೊಟ್ಟಾಯಂನಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ಇಟಲಿಯಿಂದ ಮರಳಿದ್ದ ತಮ್ಮ ಮಗ ಮತ್ತು ಕುಟುಂಬದ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದ ನಂತರ ದಂಪತಿ ಸೋಂಕಿಗೆ ಒಳಗಾಗಿದ್ದರು. ದಂಪತಿ ಒಂದೆರಡು ದಿನಗಳ ಹಿಂದೆಯೇ ಗುಣಮುಖರಾಗಿದ್ದರು. ಆದಾಗ್ಯೂ ಆಸ್ಪತ್ರೆಯ ಅಧಿಕಾರಿಗಳು ಕೆಲವು ಪರೀಕ್ಷೆಗಳಿಗೆ ಉಳಿಸಿಕೊಂಡಿದ್ದರು. ಶುಕ್ರವಾರ ಸಭೆ ನಡೆಸಿದ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ದಂಪತಿಯನ್ನು ಡಿಸ್ಚಾರ್ಜ್ ಮಾಡುವ ನಿರ್ಧಾರ ಕೈಗೊಂಡಿತು.

    ವೃದ್ಧ ದಂಪತಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ತಿಳಿಸಿ ಆಂಬುಲೆನ್ಸ್ ಮೂಲಕ ಮತ್ತ ಮನೆ ತೆರಳಿದರು. ಇದಕ್ಕೂ ಮುನ್ನ ದಂಪತಿಯೊಂದಿಗೆ ವೃದ್ಯರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ವ್ಯಕ್ತಪಡಿಸಿದರು.

  • ಕೊರೊನಾ ಶಂಕೆ – ಬ್ರೆಜಿಲ್‍ನಿಂದ ಬಂದ ವೃದ್ಧ ದಂಪತಿ ಆಸ್ಪತ್ರೆಗೆ ಶಿಫ್ಟ್

    ಕೊರೊನಾ ಶಂಕೆ – ಬ್ರೆಜಿಲ್‍ನಿಂದ ಬಂದ ವೃದ್ಧ ದಂಪತಿ ಆಸ್ಪತ್ರೆಗೆ ಶಿಫ್ಟ್

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆ ಹಿನ್ನೆಲೆ ಬೆಂಗಳೂರಿನ ಜಯನಗರದ ವೃದ್ಧ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಿದ್ದ ವೃದ್ಧ ದಂಪತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ಹಿನ್ನೆಲೆ ಸ್ಥಳೀಯರಿಂದ ಮಾಹಿತಿ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ವೃದ್ಧ ದಂಪತಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ದಂಪತಿ ವಾಸವಿದ್ದ ಮನೆಗೆ ಕೆಮಿಕಲ್ ಸ್ಪ್ರೇ ಸಿಂಪಡನೆ ಮಾಡಿಸಲಾಗಿದೆ. ಮನೆಗೆ ಸೋಡಿಯಂ ಹೈಪೋಕ್ಲೋರೈಡ್ ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಿತ ಕೆಮಿಕಲ್ ಸ್ಪ್ರೇ ಮಾಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

    ಬ್ರೆಜಿಲ್ ದೇಶದಿಂದ ಮಾರ್ಚ್ 13ರಂದು ಬೆಂಗಳೂರಿಗೆ ವೃದ್ಧ ದಂಪತಿ ವಾಪಸ್ಸಾಗಿದ್ದರು. ಬಳಿಕ ಜಯನಗರ ಠಾಣಾ ವ್ಯಾಪ್ತಿಯ ತಮ್ಮ ಮನೆಯೊಂದರಲ್ಲಿ ವಾಸವಿದ್ದರು. ಸದ್ಯ ದಂಪತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.