Tag: ವೃದ್ಧ ದಂಪತಿ

  • ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!

    ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!

    ಮಂಗಳೂರು: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಸುಬ್ರಹ್ಮಣ್ಯ ಭಟ್ (84) ಹಾಗೂ ಶಾರದಾ (76) ಎಂದು ಗುರುತಿಸಲಾಗಿದೆ. ಈ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಾದಕರಿಯ ಎಂಬಲ್ಲಿ ನಡೆದಿದೆ.

    ವೃದ್ಧರು ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣವೇನು ಎಂದು ತಿಳಿದುಬಂದಿಲ್ಲ. ಆದರೆ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಹೊಸ ಬಟ್ಟೆಯನ್ನು ಧರಿಸಿದ್ದಾರೆ. ದಂಪತಿ ಈ ರೀತಿ ಹೊಸ ಬಟ್ಟೆ ಧರಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರವಾಹದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ- ಪಾತ್ರೆಯಲ್ಲಿ ಕುಳಿತು ಮಂಟಪಕ್ಕೆ ತೆರಳಿದ್ರು!

  • ಡಬಲ್ ಮರ್ಡರ್‌ಗೆ ಬೆಚ್ಚಿಬಿತ್ತು ಮೆಟ್ರೋ ಸಿಟಿ – ಲಕ್ಷ್ಮಿ ಹಬ್ಬದ ದಿನವೇ ಹೆಣವಾದ್ರು ವೃದ್ಧ ದಂಪತಿ

    ಡಬಲ್ ಮರ್ಡರ್‌ಗೆ ಬೆಚ್ಚಿಬಿತ್ತು ಮೆಟ್ರೋ ಸಿಟಿ – ಲಕ್ಷ್ಮಿ ಹಬ್ಬದ ದಿನವೇ ಹೆಣವಾದ್ರು ವೃದ್ಧ ದಂಪತಿ

    – ಆರೋಪಿಗಳ ಪತ್ತೆಗೆ 4 ತಂಡ ರಚನೆ

    ಬೆಂಗಳೂರು: ಎಲ್ಲರೂ ಇಂದು ವರ ಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿದ್ರು. ಪೂಜೆಗೆ ಅಂತ ಅಕ್ಕಪಕ್ಕದ ಮನೆಯವ್ರನ್ನ ಕರೆದುಕೊಂಡು ಹೆಣ್ಮಕ್ಕಳು ಓಡಾಡ್ತಿದ್ರು. ಈ ವೇಳೆ ಓರ್ವ ಜೋರಾಗಿ ಕಿರುಚುಕೊಂಡು ನಡು ರಸ್ತೆಗೆ ಓಡೋಡಿ ಬಂದಿದ್ದ. ಅಷ್ಟರಲ್ಲೇ ಮನೆಯಲ್ಲಿದ್ದ ಜನ ಎಲ್ಲಾ ಜಮಾಯಿಸಿದ್ರು. ಪೊಲೀಸರಿಗೆ ವಿಚಾರ ತಿಳಿದು ಸ್ಪಾಟ್‍ಗೆ ಬಂದಿದ್ರು. ಹಬ್ಬದ ಮೂಡ್‍ನಲ್ಲಿದ್ದ ಜನರಿಗೆ ಡಬಲ್ ಮರ್ಡರ್ ಪದ ಕಿವಿಗಪ್ಪಳಿಸಿತ್ತು.

    ಹೌದು. ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಕಾಶಿ ನಗರದಲ್ಲಿ ವೃದ್ಧ ದಂಪತಿಯ ಕೊಲೆ ನಡೆದಿದೆ. ಮೃತರನ್ನು ಪ್ರೇಮಲತಾ(61) ಶಾಂತರಾಜ್ ( 65) ಎಂದು ಗುರುತಿಸಲಾಗಿದೆ. ಶಾಂತ ರಾಜ್ ಬಿಎಂಟಿಸಿಯಲ್ಲಿ ಮೆಕಾನಿಕ್ ಆಗಿ ಸೇವೆ ಮಾಡಿದ್ದು ನಿವೃತ್ತಿ ಹೊಂದಿದ್ರು. ಇವರಿಗೆ ಎರಡು ಬಾಡಿಗೆ ಮನೆಯಿದ್ದು, ಬಂದ ಹಣದಲ್ಲಿ ದಂಪತಿ ಜೀವನ ನಡೆಸುತ್ತಿದ್ದರು. ದಂಪತಿಗೆ ಮಕ್ಕಳಿಲ್ಲವಾದ್ರು ಅನ್ಯೋನ್ಯವಾಗಿದ್ರು. ಹೀಗಿರುವಾಗ ಇಂದು ಮಧ್ಯಾಹ್ನ ದಂಪತಿ ಮನೆಗೆ ಬಂದ ಪರಿಚಿತ ಹಂತಕರು ಜೊತೆಯಲ್ಲೇ ಕಾಫಿ ಕುಡಿದು ಹರಟೆ ಹೊಡೆದಿದ್ದಾರೆ. ವೃದ್ಧೆ ಪ್ರೇಮಲತಾ ಕುತ್ತಿಗೆಗೆ ಕೇಬಲ್ ಬಿಗಿದು ಹತ್ಯೆ ಮಾಡಿದ್ದು, ಶಾಂತರಾಜುಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. 2 ಪ್ರತ್ಯೇಕ ರೂಮಿನಲ್ಲಿ ಮೃತದೇಹಗಳು ಪತ್ತೆಯಾಗಿದೆ. ಕೃತ್ಯದ ವೇಳೆ ತಪ್ಪಿಸಿಕೊಳ್ಳಲು ವೃದ್ಧ ದಂಪತಿ ಯತ್ನಿಸಿದ್ದು, ದಿಂಬಿನಿಂದ ಮುಖ ಮುಚ್ಚಿ ಕೊಲೆಗೈಯಲಾಗಿದೆ. ಇದನ್ನೂ ಓದಿ: ಕಾಬೂಲ್‍ನಲ್ಲಿ ಕನ್ನಡಿಗರು ಸೇರಿ 450 ಭಾರತೀಯರ ಒದ್ದಾಟ – ಯಾವುದೇ ಕ್ಷಣದಲ್ಲಿ ಏರ್‌ಲಿಫ್ಟ್ ಸಾಧ್ಯತೆ

    ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಮಿಷನರ್ ಕಮಲ್ ಪಂಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಮನೆಯಲ್ಲಿ ಪರಿಶೀಲಿಸಿದ ಬಳಿಕ ಮಾತನಾಡಿದ ಕಮಿಷನರ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಾಲ್ಕು ತಂಡ ರಚನೆ ಮಾಡಿ ತನಿಖೆ ನಡೆಸಲು ಸೂಚಿಸಿದ್ದೇನೆ. ಮನೆಯಲ್ಲಿ ಅಲ್ಮೆರಾ ಓಪನ್ ಆಗಿದೆ. ಇವರು ಅಷ್ಟೂ ಏನೂ ಶ್ರೀಮಂತರಲ್ಲ. ಮನೆಯೊಳಗಿನ ದೃಶ್ಯ ನೋಡಿದ್ರೆ ಯಾರೋ ಗೊತ್ತಿರುವವರೇ ಮಾಡಿದ್ದಾರೆ. ಎಫ್ ಎಸ್ ಎಲ್ ಮತ್ತು ಡಾಗ್ ಸ್ಕ್ವಾಡ್ ನಿಂದ ಎವಿಡೆನ್ಸ್ ಕಲೆಕ್ಟ್ ಮಾಡಲಾಗುತ್ತಿದೆ. ಇಬ್ಬರೇ ಮನೆಯಲ್ಲಿದ್ರು, ಅವರ ರಿಲೇಟಿವ್ಸ್ ಬಳಿಯೂ ಮಾಹಿತಿ ಕಲೆ ಹಾಕ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನ ಬಂಧನ ಮಾಡ್ತೀವಿ ಅಂತ ಹೇಳಿದ್ರು.

    ಸದ್ಯ ಕೆಎಸ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..ಜೊತೆಗೆ ಮೃತ ವೃದ್ದ ದಂಪತಿಯ ಸಂಬಂದಿಕರನ್ನ ಸಂಪರ್ಕಿಸಿದ್ದು,ಮರಣೋತ್ತರ ಪರೀಕ್ಷೆ ಬಳಿಕ ಹಸ್ತಾಂತರ ಮಾಡಲಿದ್ದಾರೆ. ಅದೇನೇ ಇರಲಿ ಹಾಡುಹಗಲೇ ಹಬ್ಬದ ದಿನ ಜನಸಂದಣಿ ಇರೋ ಸ್ಥಳದಲ್ಲೇ ಜೋಡಿ ಕೊಲೆ ಆಗಿರೋದು ಸ್ಥಳೀಯರಿಗೆ ಭಯವನ್ನುಂಟು ಮಾಡಿದೆ.

  • ದೇವಸ್ಥಾನ, ಮನೆಯಲ್ಲಿ ಕಳ್ಳರ ಕೈಚಳಕ -ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪಾರಾರಿ

    ದೇವಸ್ಥಾನ, ಮನೆಯಲ್ಲಿ ಕಳ್ಳರ ಕೈಚಳಕ -ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪಾರಾರಿ

    ಮಂಡ್ಯ/ಮೈಸೂರು/ಕೊಪ್ಪಳ: ದಿನೆ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಡ್ಯ, ಮೈಸೂರು ಹಾಗೂ ಕೊಪ್ಪಳದಲ್ಲಿ ಪ್ರತ್ಯೇಕ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಮನೆಯ ಬೀಗ ಒಡೆದು ಮನೆಯಲ್ಲಿದ್ದ ಸುಮಾರು 100 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಕೆ.ಎಸ್.ನಗರ ಬಡಾವಣೆಯಲ್ಲಿ ಜರುಗಿದೆ. ಕೊಪ್ಪ ಶುಗರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕುಮಾರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಕುಮಾರ್ ಹಾಗೂ ಅವರು ಕುಟುಂಬ ಸದಸ್ಯರು ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಮೈಸೂರಿನ ಹುಣಸೂರಿನಲ್ಲಿ ವೃದ್ಧ ದಂಪತಿಯ ಹಲ್ಲೆ ನಡೆಸಿ ನಗದು ಹಾಗೂ ಆಭರಣ ದೋಚಿದ್ದ ಘಟನೆ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರು ಪೊಲೀಸರು 6 ಮಂದಿ ಆರೋಪಿಯನ್ನು ಬಂಧಿಸಿದ್ದಾರೆ. ಪಿರಿಯಾಪಟ್ಟಣದ ಮೋಸಿನ್, ಹುಣಸೂರಿನ ಇಮ್ರಾನ್, ಮಿರ್ಜಾ ತಸ್ವೀರ್ ಬೇಗ್, ಕುಶಾಲನಗರದ ಅಫ್ರಿನ್, ಮಡಿಕೇರಿ ತಾಲೂಕು ಮೇಕೇರಿ ಗ್ರಾಮದ ಅಶಿಕ್ ಹುಸೇನ್ ಮತ್ತು ಮಡಿಕೇರಿ ಪಟ್ಟಣದ ಮಹಮ್ಮದ್ ಅಜರುದ್ದೀನ್ ಬಂಧಿತರು.

    ಜುಲೈ 26 ರಂದು ಸಂಜೆ ಹುಣಸೂರು ಪಟ್ಟಣ ನಿವಾಸಿ ಗಜಾಲಾ ತರಾನಮ್ ಮತ್ತು ಅವರ ಕುಟುಂಬದವರು ಮನೆಯಲ್ಲಿದ್ದಾಗ, ದುಷ್ಕರ್ಮಿಗಳು ಕಾಲಿಂಗ್ ಬೆಲ್ ಮಾಡಿದ್ದಾರೆ. ಬಾಗಿಲು ತೆರೆದ ತಕ್ಷಣ ಮನೆಯೊಳಗೆ ನುಗ್ಗಿದ್ದ ಅಪರಿಚಿತರು 36 ಲಕ್ಷ ನಗದು ಮತ್ತು 500 ಗ್ರಾಂ ತೂಕದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಆರೋಪಿಗಳು 20 ರಿಂದ 35 ವರ್ಷ ಒಳಗಿನವರಾಗಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನೂ ಕೆಲವರು ಕೃತ್ಯದಲ್ಲಿ ಭಾಗಿಯಾಗಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಎಸ್ಪಿ ಆರ್.ಚೇತನ್ ತಿಳಿಸಿದ್ದಾರೆ.

    ಆರೋಪಿಗಳಲ್ಲಿ ಮಿರ್ಜಾ ತನ್ವೀರ್ ಬೇಗ್ ಎಂಬವನು ಹುಣಸೂರಿನಲ್ಲಿ ನಡೆದ ವಿದ್ಯಾರ್ಥಿಗಳ ಜೋಡಿ ಕೊಲೆ ಪ್ರಕರಣ ಮತ್ತು ತ್ಯಾಗರಾಜ ಪಿಳ್ಳೆ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಅಫ್ರಿನ್ ಎಂಬಾತ ಕುಶಾಲನಗರದ ಪ್ರವೀಣ್ ಪೂಜಾರಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

    ಕೊಪ್ಪಳ ನಗರದಲ್ಲಿರುವ ಹೇಮರಡ್ಡಿ ಮಲ್ಲಮ್ಮ ದೇವಾಲಯದ ಹುಂಡಿ, ದೇವರ ಮೂರ್ತಿ ಹಾಗೂ ಅಲ್ಲಿಯ ಆಭರಣಗಳನ್ನೂ ಸಹ ಬಿಡದೇ ಕಳ್ಳರು ದೋಚಿರುವ ಘಟನೆ ನಡೆದಿದೆ. ಕಳ್ಳತನದ ಮೊದಲು ಆರೋಪಿಗಳು ದೇವಸ್ಥಾನದಲ್ಲಿದ್ದ ಸಿಸಿ ಕ್ಯಾಮೆರಾದ ಕನೆಕ್ಷನ್ ಡಿಸ್ ಕನೆಕ್ಟ್ ಮಾಡಿರುವ ಬಗ್ಗೆ ಪರಿಶೀಲನೆ ವೇಳೆ ಕೊಪ್ಪಳ ನಗರ ಠಾಣೆಯ ಪೊಲೀಸರಿಗೆ ತಿಳಿದುಬಂದಿದೆ. ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಸಣ್ಣ ಬೆಟ್ಟದ ಮೇಲಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನವು ಸುಂದರ ಹಾಗೂ ಪ್ರಶಾಂತವಾಗಿದೆ. ಈ ದೇವಸ್ಥಾನವು ಬೆಟ್ಟದಲ್ಲಿದ್ದು, ಬೆಟ್ಟದ ಕೆಳಗೆ ಮನೆಗಳಿವೆ. ಸಂಜೆ ವೇಳೆ ಇಲ್ಲಿ ಜನರ ಸಂಚಾರ ಕಡಿಮೆ, ಇಂತಹ ದೇವಸ್ಥಾನದಲ್ಲಿ ಮಧ್ಯರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

    ಮೊದಲಿಗೆ ದೇವಸ್ಥಾನಕ್ಕೆ ಅಳವಡಿಸಿದ್ದ ಸಿಸಿಟಿವಿ ವೈಯರನ್ನು ಡಿಸ್‍ ಕನೆಕ್ಟ್ ಮಾಡಿದ ಕಳ್ಳರು ಬಾಗಿಲು ಮುರಿದು ಒಳನುಗ್ಗಿದ್ದಾರೆ. ಬಳಿಕ ಅರ್ಧ ಕೆಜಿ ತೂಕದ ದೇವರ ವಿಗ್ರಹ, ದೇವರಿಗೆ ಹಾಕಿದ್ದ 15 ತೊಲ ಬಂಗಾರದ ಆಭರಣವನ್ನು ಕದ್ದಿದ್ದಾರೆ. ಇದೇ ವೇಳೆ ದೇವರ ಹುಂಡಿಯಲ್ಲಿದ್ದ ಸುಮಾರು 50 ಸಾವಿರ ರೂಪಾಯಿಯನ್ನು ಕದ್ದಿದ್ದಾರೆ. ದೇವರ ಹುಂಡಿಯನ್ನು ದೇವಸ್ಥಾನದಿಂದ ಹೊರ ತಂದು ಹುಂಡಿ ಒಡೆದು ಚಿಲ್ಲರೆ ಹಣ ಅಲ್ಲಿಯೇ ಬಿಟ್ಟು ನೋಟುಗಳನ್ನು ತೆಗೆದುಕೊಂಡಿದ್ದಾರೆ. ಈ ಘಟನೆಯ ನಂತರ ಕೊಪ್ಪಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಶ್ವಾನ ದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:ಜಿಲ್ಲಾವಾರು ಪರಿಗಣಿಸಿ ಹೈಕಮಾಂಡ್ ಅವಕಾಶ ಕೊಟ್ರೆ ಕೆಲಸ ಮಾಡ್ತೀನಿ: ನಿರಂಜನ್ ಕುಮಾರ್

  • ವ್ಯಾಪಾರಕ್ಕೆಂದು ಬಂದ ವೃದ್ಧರು ಬಸ್ ಇಲ್ಲದೆ ಪರದಾಟ

    ವ್ಯಾಪಾರಕ್ಕೆಂದು ಬಂದ ವೃದ್ಧರು ಬಸ್ ಇಲ್ಲದೆ ಪರದಾಟ

    ಗದಗ: ಸಾರಿಗೆ ನೌಕರರ ಮುಷ್ಕರದ ಬಿಸಿ ವೃದ್ಧ ವ್ಯಾಪಾರಸ್ಥ ದಂಪತಿಗೂ ತಟ್ಟಿದೆ. ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ವ್ಯಾಪಾರಕ್ಕೆಂದು ಬಂದ ವೃದ್ಧ ದಂಪತಿ ವಾಹನ ಸಿಗದೆ ಪರದಾಡುತ್ತಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ವೃದ್ಧರು ಮರಳಿ ತಮ್ಮೂರಿಗೆ ಹೋಗಲಾಗದೇ 2 ದಿನಗಳಿಂದ ಪರದಾಡುತ್ತಿರುವ ಸ್ಥಿತಿ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸೋಮವಾರದಂದು ಕಸಬಾರಿಗೆ, ಸಣ್ಣಪುಟ್ಟ ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರಕ್ಕೆಂದು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಬಂದಿದ್ದರು. ನಿನ್ನೆಯೇ ಇಳಕಲ್ ಗೆ ಹೋಗಬೇಕಿತ್ತು. ಆದರೆ 2 ದಿನಗಳಿಂದ ಬಸ್ ಇಲ್ಲದಕ್ಕೆ ಇಳಕಲ್ ಹೋಗಲಾಗದೇ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.

    ಖಾಸಗಿ ವಾಹನಗಳ ದುಪ್ಪಟ್ಟು ಹಣಕ್ಕೆ ಬೇಸತ್ತಿದ್ದಾರೆ. ಗದಗದಿಂದ ಗಜೇಂದ್ರಗಡಕ್ಕೆ 300 ರೂಪಾಯಿ ಹಣ ಕೇಳುತ್ತಿದ್ದಾರೆ. ಗಜೇಂದ್ರಗಡದಿಂದ ಮುಂದೆ ಇಳಕಲ್ ಗೆ ಹೋಗಬೇಕು. ಅಲ್ಲಿ ಎಷ್ಟು ಹಣ ಕೇಳುತ್ತಾರೋ ಗೊತ್ತಿಲ್ಲ. ಹೀಗಾದರೆ ಏನು ಮಾಡೋದು ಎಂದು ಸರ್ಕಾರ ಹಾಗೂ ಸಾರಿಗೆ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಲಾಕ್‍ಡೌನ್, ಬೆಲೆ ಏರಿಕೆ ಮಧ್ಯೆ ದುಡಿದ ಹಣ ಖಾಸಗಿ ವಾಹನಕ್ಕೆ ಕೊಡುವ ಸ್ಥಿತಿ ಬಂತಲ್ಲಾ ಅಂತ ಗೋಳಾಡಿದರು.

  • ವೃದ್ಧ ಹೆತ್ತವರನ್ನ ಕತ್ತುಹಿಸುಕಿ ಕೊಂದು, ಬೆಂಕಿ ಹಚ್ಚಿ ಆಕಸ್ಮಿಕವೆಂದು ಕಥೆ ಕಟ್ಟಿದ ಪುತ್ರರು!

    ವೃದ್ಧ ಹೆತ್ತವರನ್ನ ಕತ್ತುಹಿಸುಕಿ ಕೊಂದು, ಬೆಂಕಿ ಹಚ್ಚಿ ಆಕಸ್ಮಿಕವೆಂದು ಕಥೆ ಕಟ್ಟಿದ ಪುತ್ರರು!

    ಲಕ್ನೋ: ವೃದ್ಧ ದಂಪತಿಯ ನಿಗೂಢ ಸಾವಿನ ತನಿಖೆಯ ವೇಳೆ ಪೊಲೀಸರೇ ಬೆಚ್ಚಿ ಬೀಳುವಂತೆ ಸ್ಟೋರಿಯೊಂದು ಬೆಳಕಿಗೆ ಬಂದಿದೆ.

    ಹೌದು. ಉತ್ತರಪ್ರದೇಶದ ಬರೇಲಿಯಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಈ ಸಾವಿನ ಜಾಡು ಹಿಡಿದ ಪೊಲೀಸರಿಗೆ ದಂಪತಿಯ ಇಬ್ಬರು ಪುತ್ರರೇ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.

    ಮೃತ ದುರ್ದೈವಿ ವೃದ್ಧ ದಂಪತಿಯನ್ನು ರಾಜೇಂದ್ರ(61) ಹಾಗೂ ರಾಜ್ವತಿ(57) ಎಂದು ಗುರುತಿಸಲಾಗಿದೆ. ದಂಪತಿ ಬುಡಾನ್ ನಲ್ಲಿರುವ ತಮ್ಮ ನಿವಾಸದಲ್ಲಿ ವಾಸವಿದ್ದರು. ಆದರೆ ಡಿಸೆಂಬರ್ 15ರಂದು ಸಾವನ್ನಪ್ಪಿದ್ದರು. ಈ ದಂಪತಿಗೆ ನಾಲ್ವರು ಪುತ್ರರಿದ್ದು, ನಾಲ್ಕು ಮಂದಿ ಕೂಡ ಹೆತ್ತವರಿಂದ ದೂರವಾಗಿದ್ದಾರೆ.

    ವೃದ್ಧ ದಂಪತಿಯ ಸಾವಿನ ತನಿಖೆ ನಡೆಸಿದಾಗ ಪೊಲೀಸರಿಗೆ 20ರ ಆಸು-ಪಾಸಿನ ಪುತ್ರರಿಬ್ಬರು ತಂದೆ-ತಾಯಿಯನ್ನು ಕೋಣೆಯಲ್ಲಿ ಕತ್ತುಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಬೆಂಕಿ ಹಚ್ಚಿದ್ದಾರೆ. ಆದರೆ ಪೊಲೀಸರ ಮುಂದೆ ಮಾತ್ರ ತಮ್ಮ ಪೋಷಕರು ಮಲಗಿದ್ದಾಗ ಅವರ ಹೊದಿಕೆಗೆ ಬೆಂಕಿ ಬಿದ್ದ ಪರಿಣಾಮ ಅವರು ಸಜೀವ ದಹನವಾಗಿದ್ದಾರೆ ಎಂದು ಕಥೆ ಕಟ್ಟಿದ್ದಾರೆ. ಆದರೆ ಶವಗಳ ಮರಣೋತ್ತರ ಪರೀಕ್ಷೆಯ ವೇಳೆ ಕತ್ತು ಹಿಸುಕಿ ಕೊಲೆಗೈದು ಬಳಿಕ ಮೃತದೇಹಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ಬಂದಿದೆ.

    ಈ ಸಂಬಂಧ ಎಸ್‍ಎಸ್‍ಪಿ ಸಂಕಲ್ಪ್ ಶರ್ಮಾ ಮಾತನಾಡಿ, ದಂಪತಿಗೆ 4 ಮಂದಿ ಗಂಡು ಮಕ್ಕಳಿದ್ದಾರೆ. ಆಸ್ತಿಗಾಗಿ ಇಬ್ಬರು ಮಕ್ಕಳು ದಂಪತಿಯನ್ನು ಕೊಲೆ ಮಾಡಿದ್ದಾರೆ. ಸದ್ಯ ಈ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿರುವುದಾಗಿ ತಿಳಿಸಿದ್ದಾರೆ. ದಂಪತಿಯ ಇಬ್ಬರು ಗಂಡು ಮಕ್ಕಳು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತಿಬ್ಬರು ಬುಡಾನ್ ನಲ್ಲಿ ವಾಸವಿದ್ದಾರೆ. ಕುಟುಂಬ ಮನೆ ಹಾಗೂ 10 ಎಕರೆ ಕೃಷಿ ಭೂಮಿ ಹೊಂದಿದೆ.

  • ನೇಣು ಬಿಗಿದು ಆತ್ಮಹತ್ಯೆ ಮಾಡ್ಕೊಂಡ ವೃದ್ಧ ದಂಪತಿ!

    ನೇಣು ಬಿಗಿದು ಆತ್ಮಹತ್ಯೆ ಮಾಡ್ಕೊಂಡ ವೃದ್ಧ ದಂಪತಿ!

    – ಸಾವಿನ ಬಗ್ಗೆ ಸಂಬಂಧಿಕರು ಹೇಳೋದೇನು?
    – ದಂಪತಿ ಆತ್ಮಹತ್ಯೆಗೆ ಕಾರಣವೇನು?

    ತಿರುವನಂತಪುರಂ: ಪುಲ್ಪಲ್ಲಿಯ ಮುಲ್ಲಂಕೊಲ್ಲಿಯ ಮನೆಯಲ್ಲಿ ವೃದ್ಧ ದಂಪತಿಯ ಶವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮೃತರನ್ನು ಕರುಣಾಕರನ್ ಹಾಗೂ ಅವರ ಪತ್ನಿ ಸುಮತಿ ಎಂದು ಗುರುತಿಸಲಾಗಿದೆ. ಈ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ವೃದ್ಧ ದಂಪತಿ ತಮ್ಮ ಅವಿವಾಹಿತ ಮಗಳೊಂದಿಗೆ ವಾಸವಾಗಿದ್ದರು. ಮಗಳಿಗೆ ಅನಾರೋಗ್ಯವಿತ್ತು ಎಂದು ಸಂಬಂಧಿಕರು ಹೇಳುತ್ತಿದ್ದಾರೆ. ಹೀಗಾಗಿ ಖನ್ನತೆಗೊಳಗಾಗಿ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಪೊಲೀಸರು ಶಂಕಿಸಿದ್ದಾರೆ.

    ವೃದ್ಧ ದಂಪತಿಯ ಸಾವಿನಲ್ಲಿ ಯಾವುದೇ ಅನುಮಾನಗಳು ಇಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ತೀವ್ರ ಸಂಕಷ್ಟಗೊಳಗಾಗಿ ಕಣ್ಣೀರಿಟ್ಟ ವೃದ್ಧ ದಂಪತಿಗೆ ಬೆನ್ನೆಲುಬಾದ ನೆಟ್ಟಿಗರು!

    ತೀವ್ರ ಸಂಕಷ್ಟಗೊಳಗಾಗಿ ಕಣ್ಣೀರಿಟ್ಟ ವೃದ್ಧ ದಂಪತಿಗೆ ಬೆನ್ನೆಲುಬಾದ ನೆಟ್ಟಿಗರು!

    – ಟ್ವಿಟ್ಟರ್ ಟ್ರೆಂಡಿಂಗ್‍ನಲ್ಲಿದೆ ‘ಬಾಬಾ ಕಾ ಡಾಬಾ’
    – ವೃದ್ಧ ದಂಪತಿಯ ಕಣ್ಣೀರಿಗೆ ಕರಗಿದ ಮಂದಿ

    ನವದೆಹಲಿ: ಕೊರೊನಾ ಮಹಾಮಾರಿಯಿಂದಾಗಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿರುವುದು ತಿಳಿದೇ ಇದೆ. 80 ವರ್ಷದ ದಂಪತಿ ಸಹ ಇದೇ ಪರಿಸ್ಥಿತಿ ಎದುರಿಸುತ್ತಿದ್ದು, ತೀವ್ರ ಸಂಕಷ್ಟದಲ್ಲಿದ್ದಾರೆ. ನೆಟ್ಟಿಗರು ಇವರ ಸಹಾಯಕ್ಕೆ ನಿಂತಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದೆ.

    ಹಿರಿಯ ಜೀವಗಳು ದೆಹಲಿಯ ಮಾಳ್ವಿಯಾ ನಗರದಲ್ಲಿ ‘ಬಾಬಾ ಕಾ ಡಾಬಾ’ ಹೆಸರಿನ ಹೋಟೆಲ್ ನಡೆಸುತ್ತಿದ್ದಾರೆ. ಆದರೆ ಲಾಕ್‍ಡೌನ್ ಬಳಿಕ ಅವರಿಗೆ ಸರಿಯಾಗಿ ವ್ಯಾಪಾರವಾಗುತ್ತಿಲ್ಲ. ಇದನ್ನು ಮನಗಂಡ ನೆಟ್ಟಿಗರು ಇಲ್ಲಿನ ಸುತ್ತಲಿನವರು ದಯವಿಟ್ಟು ಇವರ ಹೋಟೆಲ್‍ನಲ್ಲಿ ಊಟ ಮಾಡಿ ಅವರಿಗೂ ಬದುಕಲು ಅವಕಾಶ ಮಾಡಿಕೊಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದೆ.

    ಇತ್ತೀಚೆಗೆ ಅವರ ಹೋಟೆಲ್‍ಗೆ ಊಟಕ್ಕೆ ಬರುವವರ ಸಂಖ್ಯೆ ತೀರಾ ವಿರಳವಾಗಿದ್ದು, ಹೀಗಾಗಿ ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ. ಇದನ್ನು ಕಂಡ ಸ್ಥಳೀಯರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ದಯವಿಟ್ಟು ಸ್ಥಳೀಯ ವ್ಯಾಪಾರಿಗಳನ್ನು ಉಳಿಸಿ ಎಂದು ವಸುಂಧರ ತಂಖಾ ಶರ್ಮಾ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನಂತರ ನನ್ನ ಹೃದವೇ ಒಡೆದಂತಾಯಿತು. ದೆಹಲಿಯ ಜನ ಅವಕಾಶ ಸಿಕ್ಕರೆ ದಯವಿಟ್ಟು ಅವರ ಬಾಬಾ ಕಾ ಡಾಬಾಗೆ ಹೋಗಿ ಊಟ ಮಾಡಿ ಎಂದು ಮನವಿ ಮಾಡಿದ್ದಾರೆ.

    ಈ ವಿಡಿಯೋವನ್ನು ಮೊದಲು ಸ್ವಾದ್ ಅಫೀಶೀಯಲ್ ಎಂಬ ಫೇಸ್ಬುಕ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. 80 ವರ್ಷದ ವೃದ್ಧ ದಂಪತಿ ಮಟರ್ ಪನೀರ್ ಸೇರಿದಂತೆ ವಿವಿಧ ಖಾದ್ಯಗಳನ್ನು ತಮ್ಮ ಡಾಬಾದಲ್ಲಿ ಮಾರಾಟ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ದಂಪತಿ ಅಳುತ್ತಿರುವುದನ್ನು ಕಾಣಬಹುದಾಗಿದ್ದು, ಅವರಿಗೆ ಗೊತ್ತಾಗದಂತೆ ವಿಡಿಯೋ ಮಾಡಲಾಗಿದೆ. 1988 ರಿಂದಲೂ ಈ ದಂಪತಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಅವರಿಗೆ ತಮ್ಮ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ವಿಡಿಯೋ ಮಾಡುತ್ತಲೇ, ಆಹಾರ ಪದಾರ್ಥ ಚೆನ್ನಾಗಿರುತ್ತದೆ ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೆ ವಿಳಾಸವನ್ನು ಹೇಳಿದ್ದಾರೆ.

    ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಸಖತ್ ವೈರಲ್ ಆಗಿದ್ದು, ಬಾಲಿವುಡ್ ನಟ, ನಟಿಯರು ಸಹ ವಿಡಿಯೋ ಶೇರ್ ಮಾಡಿದ್ದಾರೆ. ಇವರ ಹೋಟೆಲ್‍ನಲ್ಲಿ ಊಟ ಮಾಡುವುದರಿಂದ ನೀವು ಕೇವಲ ಆ ವೃದ್ಧ ದಂಪತಿಯನ್ನು ಉಳಿಸಿದಂತೆ ಆಗುವುದಿಲ್ಲ. ಸ್ಥಳೀಯ ವ್ಯಾಪಾರವನ್ನು ಉಳಿಸಿದಂತಾಗುತ್ತದೆ ಎಂದು ಹಲವು ಬೇಡಿಕೊಂಡಿದ್ದಾರೆ.

    ಬಾಲಿವುಡ್ ನಟರಾದ ರಣದೀಪ್ ಹೂಡಾ, ರವೀನಾ ಟಂಡನ್ ಹಾಗೂ ಸುನೀಲ್ ಶೆಟ್ಟಿ ಅವರು ವಿಟಿಯೋ ಟ್ವೀಟ್ ಮಾಡಿದ್ದಾರೆ. ಈ ಕುರಿತು ಸುದ್ದಿ ಹರಿದಾಡುತ್ತಿದ್ದಂತೆ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ಸಂತಸದ ವಿಚಾರವನ್ನು ಹಂಚಿಕೊಂಡಿದ್ದು, ದಂಪತಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಎಪಿ ಶಾಸಕ ಸೋಮನಾಥ್ ಭಾರ್ತಿ ಆಗಮಿಸಿದ್ದಾರೆ. ಅಲ್ಲದೆ ಹೆಚ್ಚು ಜನ ಊಟಕ್ಕೆ ಆಗಮಿಸುತ್ತಿದ್ದಾರೆ. ಇದೀಗ ಅವರ ಮೊಗದಲ್ಲಿ ಸಂತಸ ಮೂಡಿದೆ ಎಂದು ತಿಳಿಸಿದ್ದಾರೆ.

  • ಮಳೆಗೆ ಗೋಡೆ ಕುಸಿತ – ವೃದ್ಧೆ ಸಾವು, ವೃದ್ಧನಿಗೆ ಗಂಭೀರ ಗಾಯ

    ಮಳೆಗೆ ಗೋಡೆ ಕುಸಿತ – ವೃದ್ಧೆ ಸಾವು, ವೃದ್ಧನಿಗೆ ಗಂಭೀರ ಗಾಯ

    – ಕುರಿ ಶೆಡ್‍ನಲ್ಲಿ ವಾಸವಿದ್ದ ವೃದ್ಧ ದಂಪತಿ

    ಚಿಕ್ಕಬಳ್ಳಾಪುರ: ಧಾರಾಕಾರ ಮಳೆಗೆ ಕುರಿ ಶೆಡ್‍ನ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ್ದು, ವೃದ್ಧ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಜೂಲಪಾಳ್ಯದಲ್ಲಿ ನಡೆದಿದೆ.

    ಗ್ರಾಮದ ಸಾಲಮ್ಮ (56) ಮೃತ ವೃದ್ಧೆ ಹಾಗೂ ಸಾಲಮ್ಮ ಪತಿ 70 ವರ್ಷದ ನರಸಿಂಹಯ್ಯ ಗಾಯಗೊಂಡವರು. ಅಂದಹಾಗೆ ಮನೆಯಿಲ್ಲದ ಬಡ ದಂಪತಿಯಾದ ಸಾಲಮ್ಮ-ನರಸಿಂಹಯ್ಯ ಕುರಿಗಳನ್ನು ಸಾಕುತ್ತಿದ್ದ ಶೆಡ್‍ನಲ್ಲಿ ವಾಸ ಮಾಡುತ್ತಿದ್ದರು.

    ಸಾಕಷ್ಟು ಹಳೆಯದಾದ ಕಲ್ಲಿನ ಮೇಲ್ಚಾವಣಿಯ ಕುರಿ ಶೆಡ್‍ಗೆ ಇಟ್ಟಿಗೆ ಗೋಡೆಯಿದ್ದು, ಸಾಕಷ್ಟು ಹಳೆಯದಾದ ಗೋಡೆ ಮಳೆಯಿಂದ ಕುಸಿತಗೊಂಡಿದೆ. ಪರಿಣಾಮ ದಂಪತಿ ಇಬ್ಬರು ಗಂಭೀರವಾಗಿ ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಜ್ಜಿ ಸಾಲಮ್ಮ ತೀರಿಕೊಂಡಿದ್ದು, ತಾತ ನರಸಿಂಹಯ್ಯ ಬೆನ್ನು ಮೂಳೆ ಹಾಗೂ ಕಾಲು ಮುರಿತವಾಗಿ ಹಾಸಿಗೆ ಹಿಡಿದಿದ್ದಾರೆ. ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಹಾಸನದಲ್ಲಿ ಗುಂಡಿನ ಸದ್ದು- ಜೋಡಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

    ಹಾಸನದಲ್ಲಿ ಗುಂಡಿನ ಸದ್ದು- ಜೋಡಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

    – ಆರೋಪಿ ಮೊಣಕಾಲಿಗೆ ಗುಂಡು ಹಾರಿಸಿ ಬಂಧನ

    ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಆಲಗೊಂಡನಹಳ್ಳಿಯಲ್ಲಿ ಇಂದು ಗುಂಡಿನ ಶಬ್ದ ಕೇಳಿಸಿದ್ದು, ವೃದ್ಧ ದಂಪತಿಯನ್ನು ಹತ್ಯೆ ಮಾಡಿದ್ದ ಆರೋಪಿ ಮೇಲೆ ಫೈರಿಂಗ್ ಮಾಡುವ ಮೂಲಕ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಪ್ರಸಾದ್ ಅಲಿಯಾಸ್ ಗುಂಡನ ಎಡಗಾಲಿನ ಮಂಡಿ ಭಾಗಕ್ಕೆ ಗುಂಡೇಟು ಹೊಡೆಯಲಾಗಿದೆ. ಆಲಗೊಂಡನಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿ ಮುರುಳಿಧರ್ (71), ಉಮಾದೇವಿ (67) ಅವರನ್ನು ಎರಡು ದಿನಗಳ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸದಂತೆ ಈಗ ಇಬ್ಬರನ್ನು ಬಂಧಿಸಲಾಗಿದೆ.

    ಕೋಳಿ ಫಾರಂನಲ್ಲಿ ಆರೋಪಿಗಳು ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಜೊತೆಗೆ ಶರಣಾಗುವಂತೆ ಮನವಿ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸರು ಬಂಧಿಸಲು ಮುಂದಾದಾಗ ಆರೋಪಿಗಳು ಇನ್‍ಸ್ಪೆಕ್ಟರ್ ವಿನಯ್ ಅವರಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಆಗ ರಕ್ಷಣೆಗಾಗಿ ವಿನಯ್ ಜೊತೆ ಇದ್ದ ಮತ್ತೊಬ್ಬ ಇನ್‍ಸ್ಪೆಕ್ಟರ್ ಸಿದ್ದರಾಮೇಶ್ವರ್ ಅವರು ಫೈರಿಂಗ್ ಮಾಡಿದ್ದಾರೆ.

    ವಿನಯ್ ಅವರ ಎಡಗೈಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಕ್‍ಡೌನ್ ಸಮಯದಲ್ಲಿ ಊರಿಗೆ ಬಂದಿದ್ದ ಆರೋಪಿಗಳು ದುಡ್ಡಿಗಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. 80 ಎಕರೆ ಜಮೀನು ಹೊಂದಿದ್ದ ಮುರುಳಿಧರ್ ಅವರಿಗೆ ಮಕ್ಕಳಿರಲಿಲ್ಲ. ಅವರು ಆ ಜಮೀನನ್ನು ಮಾರಿ ಮನೆಯಲ್ಲಿ ದುಡ್ಡು ಇಟ್ಟಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಆರೋಪಿಗಳು ದರೋಡೆಗೆ ಯತ್ನಿಸಿದ್ದರು. ಈ ವೇಳೆ ವೃದ್ಧ ದಂಪತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

    ಈ ವಿಚಾರವಾಗಿ ಮಾತನಾಡಿದ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್, ಎರಡು ದಿನಗಳ ಹಿಂದೆ ಜೋಡಿ ಕೊಲೆಯಾಗಿತ್ತು. ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ನಮ್ಮ ಪೊಲೀಸರು ತೆರಳಿದ್ದರು. ಸ್ಥಳಕ್ಕೆ ತೆರಳಿದ ವೇಳೆ ಆರೋಪಿಗೆ ಶರಣಾಗುವಂತೆ ಪೊಲೀಸರು ಹೇಳಿದ್ದಾರೆ. ಆದರೆ ಆರೋಪಿ ಶರಣಾಗದೇ ಪೊಲೀಸರ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ನಮ್ಮ ಪೊಲೀಸರು ಫೈರಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಆರೋಪಿ ಮತ್ತು ಸಿಪಿಐ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಆರೋಗ್ಯದಲ್ಲೂ ಚೇತರಿಕೆ ಕಂಡು ಬಂದಿದೆ. ಸರಣಿ ಕೊಲೆಯಾಗುತ್ತಿರುವ ಚನ್ನರಾಯಪಟ್ಟಣ ಸೇರಿ ಎಲ್ಲೆಡೆ ಗಂಭೀರ ಕ್ರಮ ಕೈಗೊಂಡು ನಿಗಾ ವಹಿಸಿದ್ದೇವೆ. ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ. ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

  • ಚನ್ನರಾಯಪಟ್ಟಣದಲ್ಲಿ ಜೋಡಿ ಕೊಲೆ – 80 ಎಕ್ರೆ ಜಮೀನು ಹೊಂದಿದ್ದ ದಂಪತಿಯ ಬರ್ಬರ ಹತ್ಯೆ

    ಚನ್ನರಾಯಪಟ್ಟಣದಲ್ಲಿ ಜೋಡಿ ಕೊಲೆ – 80 ಎಕ್ರೆ ಜಮೀನು ಹೊಂದಿದ್ದ ದಂಪತಿಯ ಬರ್ಬರ ಹತ್ಯೆ

    – ಸರಣಿ ಕೊಲೆಗಳಿಂದ ಬೆಚ್ಚಿಬಿದ್ದ ಜನ

    ಹಾಸನ: ಚನ್ನರಾಯಪಟ್ಟಣ ತಾಲೂಕಿನಲ್ಲಿ ಸರಣಿ ಕೊಲೆಗಳು ಮುಂದುವರಿದಿದ್ದು, ಇಂದು ಮತ್ತೆ ವೃದ್ಧ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಆಲಗೊಂಡನಹಳ್ಳಿಯಲ್ಲಿ ನಡೆದಿದೆ.

    ಮುರುಳಿಧರ್ (71), ಉಮಾದೇವಿ (67) ಕೊಲೆಯಾದ ವೃದ್ಧ ದಂಪತಿ. ದಿಂಬಿನಿಂದ ಉಸಿರುಗಟ್ಟಿಸಿ ಇಬ್ಬರನ್ನು ಕೊಲೆ ಮಾಡಲಾಗಿದೆ. ಮನೆಯನ್ನು ದರೋಡೆ ಮಾಡಲು ಬಂದು, ದಂಪತಿಯನ್ನು ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 9 ಮರ್ಡರ್ ಆಗಿವೆ.

    ಮುರುಳಿಧರ್ ಅವರ ತಂದೆ ಕೃಷ್ಣಮೂರ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಹೀಗಾಗಿ ಸರ್ಕಾರ ಅವರಿಗೆ 80 ಎಕರೆ ಜಮೀನು ನೀಡಿತ್ತು. ಮುರುಳಿಧರ್ ದಂಪತಿಗೆ ಮಕ್ಕಳು ಇರಲಿಲ್ಲ. ಜೊತೆಗೆ ಮುರುಳಿಧರ್ ಬಿ.ಎಸ್ಸಿ ಅರ್ಗಿಕಲ್ಚರ್ ವ್ಯಾಸಂಗ ಮಾಡಿದ್ದರು. ಕೃಷಿಯಲ್ಲಿ ಆಸಕ್ತಿ ಹೊಂದಿದ್ದರಿಂದ ಗ್ರಾಮದ ಹೊರಗಿರುವ 80 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಅಲ್ಲೇ ದಂಪತಿ ವಾಸವಿದ್ದರು.

    ಆದರೆ ಇತ್ತೀಚೆಗೆ ಅವರು ತಮ್ಮ ಜಮೀನನ್ನು ಮಾರಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಅವರು ಮನೆಯಲ್ಲಿ ಜಮೀನು ಮಾರಿರುವ ದುಡ್ಡನ್ನು ಇಟ್ಟಿಕೊಂಡಿದ್ದಾರೆ ಎಂದು ಯಾರೋ ಕಿಡಿಗೇಡಿಗಳು ಮನೆಗೆ ನುಗ್ಗಿದ್ದಾರೆ. ಹಣಕ್ಕಾಗಿ ದಂಪತಿಯನ್ನು ಕೊಲೆ ಮಾಡಿ ಮನೆ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನೂ ಕೊಲೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನು ಓದಿ: ಚನ್ನರಾಯಪಟ್ಟಣದಲ್ಲಿ ಮತ್ತೊಂದು ಕೊಲೆ – ಕಳೆದ ಒಂದೂವರೆ ತಿಂಗ್ಳಲ್ಲಿ ಜಿಲ್ಲೆಯಲ್ಲಿ 9 ಮರ್ಡರ್

    ಚನ್ನರಾಯಪಟ್ಟಣ ತಾಲೂಕಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ಸುಮಾರು 6 ಕೊಲೆಗಳು ಆಗಿವೆ. ಜೊತೆಗೆ ಓರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಪೊಲೀಸ್, ಕಾನೂನು ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈಗ ಘಟನಾ ಸ್ಥಳಕ್ಕೆ ಎಸ್.ಪಿ. ಶ್ರೀನಿವಾಸಗೌಡ ಭೇಟಿ ಪರಿಶೀಲನೆ ಮಾಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.