Tag: ವೃದ್ಧಿಮಾನ್ ಸಹಾ

  • ವೃದ್ಧಿಮಾನ್ ಸಹಾಗೆ ಬೆದರಿಕೆ ಪ್ರಕರಣ – ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ

    ವೃದ್ಧಿಮಾನ್ ಸಹಾಗೆ ಬೆದರಿಕೆ ಪ್ರಕರಣ – ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ

    ಮುಂಬೈ: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧ ಹೇರಿದೆ.

    ಈ ಬಗ್ಗೆ ನೋಟಿಸ್ ಹೊರಡಿಸಿರುವ ಬಿಸಿಸಿಐ, ವೃದ್ಧಿಮಾನ್ ಸಹಾ ಆರೋಪದ ಬೆನ್ನಲ್ಲೇ ಬಿಸಿಸಿಐ ಈ ಬಗ್ಗೆ ತನಿಖೆ ನಡೆಸಿ ಪತ್ರಕರ್ತ ಬೋರಿಯಾ ಮಜುಂದಾರ್ ವಿರುದ್ಧ ಕ್ರಮ ಕೈಗೊಂಡಿದ್ದು, 2 ವರ್ಷ ಯಾವುದೇ ಕ್ರಿಕೆಟ್ ಪಂದ್ಯದ ಸುದ್ದಿಗೋಷ್ಠಿ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಮಜುಂದಾರ್‌ಗೆ ಪ್ರವೇಶವಿಲ್ಲ. 2 ವರ್ಷಗಳ ಕಾಲ ಟೀಂ ಇಂಡಿಯಾದ ಯಾವೊಬ್ಬ ಆಟಗಾರನೊಂದಿಗೂ ಸಂದರ್ಶನಕ್ಕೆ ಅವಕಾಶವಿಲ್ಲ. ಜೊತೆಗೆ 2 ವರ್ಷ ಬಿಸಿಸಿಐ ಮತ್ತು ಅದರ ಇತರ ಕ್ರಿಕೆಟ್ ಮಂಡಳಿ ಪ್ರವೇಶಕ್ಕೆ ನಿಷೇಧ ಹೇರುತ್ತಿದೆ ಎಂದು ನೋಟಿಸ್ ನೀಡಿದೆ. ಇದನ್ನೂ ಓದಿ: ಕೂಲ್ ಕ್ಯಾಪ್ಟನ್ ಮಾಹಿ ಮತ್ತೊಂದು ಮೈಲಿಗಲ್ಲಿಗೆ ಸಜ್ಜು

    ಏನಿದು ಪ್ರಕರಣ:
    ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾವನ್ನು ಆಯ್ಕೆ ಮಾಡುವಾಗ ವೃದ್ಧಿಮಾನ್ ಸಾಹ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯು ಕೈಬಿಟ್ಟಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಸಾಹಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದಾದ ಬಳಿಕ ಸಂದರ್ಶನ ಕೊಡಲು ನಿರಾಕರಿಸಿದಕ್ಕಾಗಿ ನನಗೆ ಬೋರಿಯಾ ಮಜುಂದಾರ್ ಬೆದರಿಕೆಯೊಡ್ಡಿದರು ಎಂದು ಸಹಾ ಆರೋಪಿಸಿದರು. ಮಜುಂದಾರ್ ಕಳುಹಿಸಿದ ಸಂದೇಶಗಳ ಸ್ಕ್ರೀನ್ ಶಾಟ್‍ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಹಾ ಹಂಚಿಕೊಂಡಿದ್ದರು. ಆ ಬಳಿಕ ಈ ಪ್ರಕರಣವನ್ನು ಬಿಸಿಸಿಐ ಗಂಭೀರವಾಗಿ ತೆಗೆದುಕೊಂಡು ತನಿಖೆಗೆ ಆದೇಶಿಸಿತು. ಬಿಸಿಸಿಐ ರಚಿಸಿದ್ದ ಮೂರು ಮಂದಿ ತನಿಖಾ ಸಮಿತಿಯ ಮುಂದೆ ವೃದ್ಧಿಮಾನ್ ಸಾಹ ಎಲ್ಲಾ ಅಗತ್ಯ ಮಾಹಿತಿಯನ್ನು ನೀಡಿದ್ದರು. ಇದನ್ನೂ ಓದಿ: ಮುಂದಿನ ಬಾರಿ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಆದರೆ…! – ಧೋನಿ ದ್ವಂದ್ವ ಹೇಳಿಕೆ

    ಇದೀಗ ಬಿಸಿಸಿಐ ತನಿಖಾ ಸಮಿತಿ ನೀಡಿದ ರಿಪೋರ್ಟ್‌ ಪ್ರಕಾರ ಮಜುಂದಾರ್ ವಿರುದ್ಧ ಕ್ರಮ ಕೈಗೊಂಡಿದೆ. ಬಿಸಿಸಿಐ ತೆಗೆದುಕೊಂಡಿರುವ ಕ್ರಮ ಇದೀಗ ತೀವ್ರ ಚರ್ಚೆಗೆ ನಾಂದಿಹಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ.

  • ವೃದ್ಧಿಮಾನ್‌ ಸಹಾ ಹೇಳಿಕೆಯಿಂದ ಬೇಸರವಾಗಿಲ್ಲ: ದ್ರಾವಿಡ್‌

    ವೃದ್ಧಿಮಾನ್‌ ಸಹಾ ಹೇಳಿಕೆಯಿಂದ ಬೇಸರವಾಗಿಲ್ಲ: ದ್ರಾವಿಡ್‌

    ನವದೆಹಲಿ: ವಿಕೆಟ್‌ಕೀಪರ್‌ ವೃದ್ಧಿಮಾನ್‌ ಸಹಾ ಅವರ ಹೇಳಿಕೆಯಿಂದ ಯಾವುದೇ ಬೇಸರವಾಗಿಲ್ಲ ಎಂದು ಭಾರತ ಕ್ರಿಕೆಟ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ತಿಳಿಸಿದ್ದಾರೆ.

    ನಿವೃತ್ತಿ ಬಗ್ಗೆ ಯೋಚಿಸಿ ಅಂತ ರಾಹುಲ್‌ ದ್ರಾವಿಡ್‌ ಅವರು ಸಲಹೆ ನೀಡಿದ್ದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವೃದ್ಧಿಮಾನ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್‌ ದ್ರಾವಿಡ್‌, ಅನುಭವಿ ಕೀಪರ್‌ ವೃದ್ಧಿಮಾನ್‌ ಸಹಾ ಅವರು ತಮ್ಮ ಭವಿಷ್ಯದ ಕುರಿತು ನಡೆಸಿದ ಅತ್ಯಂತ ರಹಸ್ಯ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ. ಅವರ ಹೇಳಿಕೆಯಿಂದ ನನಗೆ ನೋವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್

    ನನಗೆ ಯಾವುದೇ ನೋವಾಗಿಲ್ಲ. ವೃದ್ಧಿ ಮತ್ತು ಅವರ ಸಾಧನೆಗಳು, ಬಾರತೀಯ ಕ್ರಿಕೆಟ್‌ಗೆ ಅವರ ಕೊಡುಗೆ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಪ್ರಾಮಾಣಿಕ ಮತ್ತು ಸ್ಪಷ್ಟತೆಗೆ ಅರ್ಹರು ಎಂದು ನಾನು ಭಾವಿಸುತ್ತೇನೆ ಎಂದು ದ್ರಾವಿಡ್‌ ಮಾತನಾಡಿದ್ದಾರೆ.

    ಆಟಗಾರರೊಂದಿಗೆ ನಾನು ನಿರಂತರವಾಗಿ ಸಂಭಾಷಣೆ ನಡೆಸುತ್ತಿರುತ್ತೇನೆ. ಆಟಗಾರರ ಬಗ್ಗೆ ನಾನು ಹೇಳುವ ಎಲ್ಲವನ್ನೂ ಯಾವಾಗಲೂ ಅವರು ಒಪ್ಪುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಆಟಗಾರರೊಂದಿಗಿನ ಸಂಭಾಷಣೆಯು ಕೆಲವೊಮ್ಮೆ ಸರಿಯಲ್ಲ ಎನಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗಿ ರೋಹಿತ್‌ ಶರ್ಮಾ ನೇಮಕ

    ಆಟಗಾರರ ಜೊತೆ ಸಂಭಾಷಣೆಗಳನ್ನು ನಡೆಸದೇ, ಅವರ ಭವಿಷ್ಯದ ಬಗ್ಗೆ ತಿಳಿಸದೇ ಇರುವುದು ಸುಲಭ. ಆದರೆ ನಾನು ಹಾಗೆ ಮಾಡಲ್ಲ. ಸಂಭಾಷಣೆಯಿಂದ ಹಿಂದೆ ಸರಿಯುವುದಕ್ಕಿಂತ ಕಟುವಾದ ಸತ್ಯವನ್ನು ಹೇಳುವುದು ಉತ್ತಮ ಎಂದು ದ್ರಾವಿಡ್‌ ತಿಳಿಸಿದ್ದಾರೆ.

    ಶ್ರೀಲಂಕಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ತಮ್ಮನ್ನು ಆಯ್ಕೆ ಮಾಡದೇ ಇರುವ ಕುರಿತು ವೃದ್ಧಿಮಾನ್‌ ಸಹಾ ಅಸಮಾಧಾನ ವ್ಯಕ್ತಪಡಿಸಿದ್ದರು. ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು, ರಾಜೀನಾಮೆ ನೀಡುವ ಬಗ್ಗೆ ಯೋಚಿಸಿ ಎಂದಿದ್ದಾರೆಂದು ಸಹಾ ದೂರಿದ್ದರು.

  • ವಾರ್ನರ್, ಸಹಾ ಭರ್ಜರಿ ಆಟ – ಕೋಲ್ಕತ್ತಾ ಮನೆಗೆ ಹೈದರಾಬಾದ್ ಪ್ಲೇ ಆಫ್‍ಗೆ

    ವಾರ್ನರ್, ಸಹಾ ಭರ್ಜರಿ ಆಟ – ಕೋಲ್ಕತ್ತಾ ಮನೆಗೆ ಹೈದರಾಬಾದ್ ಪ್ಲೇ ಆಫ್‍ಗೆ

    – ಶುಕ್ರವಾರ ಕೊಹ್ಲಿ, ವಾರ್ನರ್ ಮುಖಾಮುಖಿ

    ಶಾರ್ಜಾ: ಇಂದು ನಡೆದ ಐಪಿಎಲ್-2020ಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.

    ಶಾರ್ಜಾ ಮೈದಾನದಲ್ಲಿ ನಡೆದ 56ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಶಹಬಾಜ್ ನದೀಮ್ ಮತ್ತು ಸಂದೀಪ್ ಶರ್ಮಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿ. ನಿಗದಿತ 20 ಓವರಿನಲ್ಲಿ ಕೇವಲ 149 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಅವರ ಮುರಿಯದ 151 ಜೊತೆಯಾಟದಿಂದ ಇನ್ನೂ 18 ಬಾಲ್ ಉಳಿಸಿಕೊಂಡು ಗುರಿಯನ್ನು ಬೆನ್ನಟ್ಟಿತು.

    ಕೊನೆಗೆ ಪ್ಲೇ ಆಫ್ ಆಯ್ಕೆ
    ಈ ಬಾರಿಯ ಐಪಿಎಲ್‍ನಲ್ಲಿ ಲೀಗ್ ಹಂತದ 52 ಪಂದ್ಯಗಳು ಮುಗಿದಿದ್ದರೂ ಪ್ಲೇ ಆಫ್‍ಗೆ ಆಯ್ಕೆಯಾಗುವ ತಂಡಗಳು ಫೈನಲ್ ಆಗಿರಲಿಲ್ಲ. ಇಂದು ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನಾಲ್ಕು ತಂಡಗಳು ಪ್ಲೇ ಆಫ್‍ಗೆ ಅಂತಿಮವಾಗಿ ಆಯ್ಕೆ ಆಗಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‍ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಪ್ರವೇಶಿಸಿವೆ.

    ಈ ಮೂಲಕ ಗುರುವಾರ ದುಬೈಯಲ್ಲಿ ನಡೆಯಲಿರುವ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಮೊದೆಲೆರಡು ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ನಂತರ ಶುಕ್ರವಾರ ಅಬುಧಾಬಿಯಲ್ಲಿ ನಡೆಯಲಿರುವ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‍ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ನಂತರ ಎರಡನೇ ಎಲಿಮಿನೇಟರ್ ಭಾನುವಾರ ನಡೆಯಲಿದೆ.

    ಮುಂಬೈ ನೀಡಿದ 150 ರನ್‍ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಆರಂಭದಿಂದಲೇ ಅಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಈ ಮೂಲಕ 31 ಬಾಲಿಗೆ ಅರ್ಧಶತಕ ಜೊತೆಯಾಟವಾಡಿದರು. ಪರಿಣಾಮ ಸನ್‍ರೈಸರ್ಸ್ ಹೈದರಾಬಾದ್ ತಂಡ ಪವರ್ ಪ್ಲೇ ಅಂತ್ಯದ ವೇಳಗೆ ಒಂದು ವಿಕೆಟ್ ಕಳೆದುಕೊಳ್ಳದೆ 56 ರನ್ ಪೇರಿಸಿತು.

    ಈ ನಡುವೆ 35 ಬಾಲ್‍ಗೆ ನಾಯಕ ಡೇವಿಡ್ ವಾರ್ನರ್ ಅರ್ಧಶತಕ ಭಾರಿಸಿ ಮಿಂಚಿದರು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ 48ನೇ ಅರ್ಧಶತಕ ಸಿಡಿಸಿದರು. ಇದರ ಜೊತೆಗೆ ಆರಂಭದಿಂದಲೂ ವಾರ್ನರ್ ಗೆ ಉತ್ತಮ ಸಾಥ್ ನೀಡಿದ ವೃದ್ಧಿಮಾನ್ ಸಹಾ 34 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಶತಕದ ಜೊತೆಯಾಟವಾಡಿ ಹೈದರಾಬಾದ್ ತಂಡವನ್ನು ಗೆಲುವಿನ ಸನಿಹಕ್ಕೆ ಕರೆದುಕೊಂಡು ಹೋದರು. ಸಹಾ ಮತ್ತು ವಾರ್ನರ್ ಮುರಿಯದ ಮೊದಲ ವಿಕೆಟಿಗೆ 151 ರನ್‍ಗಳ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸುವುದರ ಜೊತೆಗೆ ಪ್ಲೇ ಆಫ್‍ಗೆ ಕೆರೆದುಕೊಂಡು ಹೋದರು. ಡೇವಿಡ್ ವಾರ್ನರ್ 85 ರನ್(58 ಎಸೆತ, 10 ಬೌಂಡರಿ , 1 ಸಿಕ್ಸ್) ಸಹಾ 58 ರನ್(45 ಎಸೆತ, 7 ಬೌಂಡರಿ, 1 ಸಿಕ್ಸ್) ಹೊಡೆದರು.

  • ಸನ್‍ರೈಸರ್ಸ್ ಹೈದರಾಬಾದ್‍ಗೆ ಶುಭ ಸುದ್ದಿ-20 ಎಸೆತಗಳಲ್ಲೇ ಶತಕ ಸಿಡಿಸಿದ ವೃದ್ಧಿಮಾನ್ ಸಹಾ

    ಸನ್‍ರೈಸರ್ಸ್ ಹೈದರಾಬಾದ್‍ಗೆ ಶುಭ ಸುದ್ದಿ-20 ಎಸೆತಗಳಲ್ಲೇ ಶತಕ ಸಿಡಿಸಿದ ವೃದ್ಧಿಮಾನ್ ಸಹಾ

    ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ವೃದ್ಧಿಮಾನ್ ಸಹಾ ಭರ್ಜರಿ ಆಟ ಪ್ರದರ್ಶಿಸಿದ್ದಾರೆ. ಕೇವಲ 20 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

    ಕೋಲ್ಕತಾದಲ್ಲಿ ನಡೆಯುತ್ತಿರುವ ದೇಶಿಯ ಕ್ರಿಕೆಟ್ ಟೂರ್ನಿ ಜೆಸಿ ಮುಖರ್ಜಿ ಟಿ20 ಟ್ರೋಫಿಯಲ್ಲಿ ಮೋಹನ್ ಬಗಾನ್ ತಂಡದ ಪರ ಪ್ರತಿನಿಧಿಸುವ ಸಹಾ ಸಿಡಿಲಬ್ಬರದ ಶತಕ ದಾಖಲಿಸಿದ್ದಾರೆ. ಪಂದ್ಯದ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದ ಸಹಾ ಕೇವಲ 22 ಎಸೆತಗಳಲ್ಲಿ 14 ಸಿಕ್ಸರ್, 4 ಬೌಂಡರಿಗಳ ಸಹಾಯದಿಂದ ಶತಕ ಸಿಡಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಎದುರಾಳಿ ಬಿಎನ್‍ಆರ್ ರಿಕ್ರಿಯೇಷನ್ ತಂಡ 151 ರನ್ ಗುರಿ ನೀಡಿತ್ತು. ಸುಲಭ ಗುರಿಯನ್ನು ಬೆನ್ನತ್ತಿದ ಮೋಹನ್ ಬಗಾನ್ ತಂಡ ಸಹಾ ರ ಶತಕ (102 ರನ್)ದ ನೆರವಿನಿಂದ ಕೇವಲ ಏಳು ಓವರ್ ಗಳಲ್ಲಿ 154 ರನ್ ಗಳಿಸಿ ಜಯ ಪಡೆಯಿತು.

    ಪಂದ್ಯದ ಬಳಿಕ ಮಾತನಾಡಿದ ಸಹಾ, ಇನ್ನಿಂಗ್ಸ್ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಗಳನ್ನು ಸಿಡಿಸಲು ಪ್ರಯತ್ನಿಸಿದೆ. ಆದರೆ ಈ ಪಂದ್ಯದಲ್ಲಿ ದಾಖಲೆ ಬರೆಯುವ ಯೋಚನೆ ಇರಲಿಲ್ಲ. ಮುಂದಿನ ಐಪಿಎಲ್ ಟೂರ್ನಿಯನ್ನು ಮಾತ್ರ ಗಮನದಲ್ಲಿಟ್ಟು ವಿಭಿನ್ನ ಹೊಡೆತಗಳಿಗೆ ಕೈ ಹಾಕಿದೆ ಎಂದು ಸಹಾ ಹೇಳಿದ್ದಾರೆ.

    2018 ಐಪಿಎಲ್‍ಗಾಗಿ ನಡೆದ ಹರಾಜಿನಲ್ಲಿ ಸಹಾ ಅವರನ್ನು ಸನ್‍ರೈಸರ್ಸ್ ಹೈದರಾಬಾದ್ ಬರೋಬ್ಬರಿ ಐದು ಕೋಟಿ ರೂ.ಗಳನ್ನು ನೀಡಿ ಖರೀದಿಸಿದೆ. ಈ ಮುನ್ನ ಐಪಿಎಲ್ ಟೂರ್ನಿಗಳಲ್ಲಿ ಸಹಾ ಚೆನ್ನೈ, ಕೋಲ್ಕತ್ತಾ ಹಾಗೂ ಪಂಜಾಬ್ ತಂಡಗಳನ್ನು ಪ್ರತಿನಿಧಿಸಿದ್ದರು.

    2014 ರ ಐಪಿಎಲ್ ಫೈನಲ್‍ನಲ್ಲಿ ಶತಕ ಬಾರಿಸುವ ಮೂಳಕ ದಾಖಲೆ ನಿರ್ಮಿಸಿದ್ದರು. ಆದರೆ ದುರದೃಷ್ಟವಶಾತ್ ಈ ಪಂದ್ಯದಲ್ಲಿ ಕೋಲ್ಕತ್ತ ತಂಡ ಜಯಗಳಿಸಿ ಪ್ರಶಸ್ತಿ ಪಡೆದಿತ್ತು.

  • ವೃದ್ಧಿಮಾನ್ ಸಹಾ, ಸ್ಮಿತ್ ಬಾಲ್ ಆಟ ನೋಡಿ ಅಂಪೈರ್, ಆಟಗಾರರು ನಕ್ಕಿದ್ದೆ ನಕ್ಕಿದ್ದು! ವಿಡಿಯೋ

    ವೃದ್ಧಿಮಾನ್ ಸಹಾ, ಸ್ಮಿತ್ ಬಾಲ್ ಆಟ ನೋಡಿ ಅಂಪೈರ್, ಆಟಗಾರರು ನಕ್ಕಿದ್ದೆ ನಕ್ಕಿದ್ದು! ವಿಡಿಯೋ

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಕೆಟ್ ಉಳಿಸಿಕೊಂಡು ಮೇಲುಗೈ ಸಾಧಿಸಿದರೂ ಮೊದಲ ದಿನ ಕ್ರೀಡಾಂಗಣದಲ್ಲಿ ಒಂದು ಪ್ರಸಂಗದಿಂದಾಗಿ ಆಟಗಾರರು ಮತ್ತು ಅಂಪೈರ್ ಬಿದ್ದು ಬಿದ್ದು ನಕ್ಕಿದ್ದಾರೆ.

    ಆಗಿದ್ದು ಇಷ್ಟು 79.2 ನೇ ಓವರ್‍ನಲ್ಲಿ ಸ್ಟ್ರೈಕ್‍ನಲ್ಲಿ ನಾಯಕ ಸ್ಮಿತ್ 97 ರನ್ ಗಳಿಸಿ ಆಡುತ್ತಿದ್ದರು. ಜಡೇಜಾ ಎಸೆದ ಒಂದು ಎಸೆತ ಸ್ಮಿತ್ ಬ್ಯಾಟ್‍ನ ಬಳಿ ಬಂದು ಮೇಲಕ್ಕೆ ಚಿಮ್ಮಿತು. ಮೇಲಕ್ಕೆ ಚಿಮ್ಮಿದ ಕೂಡಲೇ ಮುಂದಕ್ಕೆ ಬಂದ ಕೀಪರ್ ವೃದ್ಧಿಮಾನ್ ಸಹಾ ಬಾಲನ್ನು ಎಲ್ಲಿದೆ ಎಂದು ನೋಡಿದ್ರು.

    ಇದನ್ನೂ ಓದಿ:ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್

    ಅಷ್ಟರಲ್ಲೇ ಸ್ಮಿತ್ ಎರಡು ಕಾಲಿನ ಮಧ್ಯದಲ್ಲಿ ಬಾಲ್ ಇರುವುದನ್ನು ನೋಡಿದ ಸಹಾ ಅದನ್ನು ಹಿಡಿಯಲು ಮುಂದಾದರು. ಸಹಾ ಹಿಡಿಯಲು ಮುಂದಾಗುತ್ತಿದ್ದಂತೆ ಸ್ಮಿತ್ ಬಾಲ್ ಸಿಗದಂತೆ ತಡೆಯಲು ನೆಲಕ್ಕೆ ಬಿದ್ದರು. ಸ್ಮಿತ್ ಬೀಳುವುದನ್ನು ನೋಡಿ ಸಹಾ ಬಾಲ್ ಹಿಡಿಯಲು ಅವರ ಮೇಲೆಯೇ ಬಿದ್ದರು. ಬಿದ್ದ ಬಳಿಕ ಬಾಲನ್ನು ಹಿಡಿದು ನಗುತ್ತಲೇ ಔಟ್ ಗೆ ಮನವಿ ಸಲ್ಲಿಸದರು.

    ಸ್ಮಿತ್ ಮತ್ತು ವೃದ್ಧಿಮಾನ್ ಸಹಾ ಅವರ ಈ ಆಟವನ್ನು ನೋಡಿದ ಇಂಗ್ಲೆಂಡಿನ ಅಂಪೈರ್ ಇಯಾನ್ ಗೌಲ್ಡ್ ಬಿದ್ದು ಬಿದ್ದು ನಕ್ಕರು. ಅಂಪೈರ್ ಜೊತೆಗೆ ಆಟಗಾರರು ನಗಾಡಿದರು.

    ಇದನ್ನೂ ಓದಿ: ಭರ್ಜರಿ ಶತಕ ಹೊಡೆದು ತಂಡವನ್ನು ಪಾರು ಮಾಡಿದ ಸ್ಮಿತ್



     

  • ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್

    ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್

    ಬೆಂಗಳೂರು: ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಳ್ಳುವ ಮೂಲಕ ಭಾರತ 5 ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಸ್ಪಿನ್ನರ್ ಆರ್ ಅಶ್ವಿನ್ 6 ವಿಕೆಟ್ ಪಡೆದರೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅತ್ಯುತ್ತಮವಾದ ಕ್ಯಾಚನ್ನು ಹಿಡಿಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ.

    28 ನೇ ಓವರ್ ಆರಂಭದಲ್ಲಿ ಆಸ್ಟ್ರೇಲಿಯಾ 101 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಮ್ಯಾಥ್ಯೂ ವೇಡ್ ಕ್ರೀಸ್‍ನಲ್ಲಿದ್ದರು. ಅಶ್ವಿನ್ ಎಸೆದ 5 ಎಸೆತ ಬ್ಯಾಟ್‍ಗೆ ಬಡಿದು ಪ್ಯಾಡ್‍ಗೆ ತಾಗಿ ಮೇಲಕ್ಕೆ ಹಾರಿತು. ಬಾಲ್ ಮೇಲಕ್ಕೆ ಚಿಮ್ಮಿದ ಕೂಡಲೇ ವೃದ್ಧಿಮಾನ್ ಸಹಾ ಡೈವ್ ಹೊಡೆದು ಯಾರೂ ನಿರೀಕ್ಷಿಸದ ಕ್ಯಾಚನ್ನು ಹಿಡಿದೇ ಬಿಟ್ಟಿದ್ದರು.

    ಈ ಸೂಪರ್ ಕ್ಯಾಚ್ ಪರಿಣಾಮ ಮ್ಯಾಥ್ಯೂ ವೇಡ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಕಡೆಗೆ ನಿರಾಸೆಯಿಂದ ಹೆಜ್ಜೆ ಹಾಕಿದರೆ, ಕೊಹ್ಲಿ ಪಡೆ ಸಹಾ ಮತ್ತು ಅಶ್ವಿನ್ ರನ್ನು ಅಭಿನಂದಿಸತೊಡಗಿತು.

    2010ರಲ್ಲಿ ನಾಗ್ಪುರದಲ್ಲಿ ದಕ್ಷಿಣ ಆಫ್ರಿಕಾದದ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ ಸಹಾ ಇದೂವರೆಗೆ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 43 ಕ್ಯಾಚ್, 8 ಮಂದಿಯನ್ನು ಸ್ಟಂಪ್ ಔಟ್ ಮಾಡಿದ್ದಾರೆ. ಬೆಂಗಳೂರು ಟೆಸ್ಟ್  ಎರಡು ಇನ್ನಿಂಗ್ಸ್ ಗಳಲ್ಲಿ ವೃದ್ಧಿಮಾನ್ ಸಹಾ 1 ಸ್ಟಂಪ್ ಮತ್ತು 4 ಕ್ಯಾಚ್ ಹಿಡಿದಿದ್ದಾರೆ.

    ಇದನ್ನೂ ಓದಿ: 11 ರನ್‍ಗಳಿಗೆ 6 ವಿಕೆಟ್ ಪತನ: ಭಾರತಕ್ಕೆ 75 ರನ್ ಗಳ ಜಯ