Tag: ವೃದ್ಧರು

  • 80 ಮೇಲ್ಪಟ್ಟ ವೃದ್ಧರು, ಅಂಗವಿಕಲರು ಮನೆಯಲ್ಲಿದ್ದೇ ವೋಟು ಹಾಕಬಹುದು: ಚುನಾವಣಾ ಆಯೋಗ

    80 ಮೇಲ್ಪಟ್ಟ ವೃದ್ಧರು, ಅಂಗವಿಕಲರು ಮನೆಯಲ್ಲಿದ್ದೇ ವೋಟು ಹಾಕಬಹುದು: ಚುನಾವಣಾ ಆಯೋಗ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಹಿತದೃಷ್ಟಿಯಿಂದ ಚುನಾವಣಾ ಆಯೋಗ ಮಹತ್ವ ನಿರ್ಧಾರವೊಂದನ್ನು ಕೈಗೊಂಡಿದೆ. 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಅಂಗವಿಕಲರು ಮನೆಯಲ್ಲೇ ಇದ್ದು ಮತ ಚಲಾಯಿಸಬಹುದು ಎಂದು ಆಯೋಗ ತಿಳಿಸಿದೆ.

    ವೃದ್ಧರು, ಅಂಗವಿಕಲರು, ಕೊರೊನಾ ಸೋಂಕಿಗೆ ಒಳಗಾಗಿರುವವರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲೇ ಇದ್ದು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ವ್ಯವಸ್ಥೆಯನ್ನು ಅವರಿಗೆ ಮಾಡಿಕೊಡಲಾಗುವುದು ಎಂದು ಆಯೋಗ ಹೇಳಿದೆ. ಇದನ್ನೂ ಓದಿ: RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

    VOTE

    ಉತ್ತರ ಪ್ರದೇಶ ಚುನಾವಣೆ ಕುರಿತು ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಮಾತನಾಡಿ, ವಿಳಂಬ ಮಾಡದೇ ಕೋವಿಡ್‌ ನಿಯಮಗಳನ್ನು ಪಾಲಿಸಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶ ಹಾಲಿ ಸರ್ಕಾರದ ಅವಧಿ ಮೇ 14ಕ್ಕೆ ಮುಗಿಯಲಿದೆ. ಚುನಾವಣೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಯೋಗವು ಈಗಾಗಲೇ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಚುನಾವಣೆ ವೇಳೆ ಯಾವುದೇ ಭ್ರಷ್ಟ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫುಲ್ ಹ್ಯಾಪಿ ಮೂಡ್​ನಲ್ಲಿರುವ ವಿರುಷ್ಕಾ!

    ಆರೋಗ್ಯ ಕಾರ್ಯದರ್ಶಿ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ಚುನಾವಣೆ ದಿನಾಂಕ ಘೋಷಣೆಯಾದಾಗ ಪರಿಸ್ಥಿತಿ ನೋಡಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

  • ದಕ್ಷಿಣ ಕನ್ನಡದಲ್ಲಿ ಅಶಕ್ತರ ಮನೆಗೆ ತೆರಳಿ ಲಸಿಕೆ- ಜಿಲ್ಲಾಡಳಿತ ನಿರ್ಧಾರ

    ದಕ್ಷಿಣ ಕನ್ನಡದಲ್ಲಿ ಅಶಕ್ತರ ಮನೆಗೆ ತೆರಳಿ ಲಸಿಕೆ- ಜಿಲ್ಲಾಡಳಿತ ನಿರ್ಧಾರ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಚಿತ ಲಸಿಕಾ ಶಿಬಿರ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಅಶಕ್ತರಿಗೂ ಉಚಿತ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಅನಾರೋಗ್ಯಕ್ಕೀಡಾದವರಿಗೆ ಮತ್ತು ಅಶಕ್ತ ಹಿರಿಯ ನಾಗರಿಕರು ಸೇರಿದಂತೆ ಮನೆಯಿಂದ ಹೊರ ಬಂದು ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದಿರುವವರ ಮನೆ ಮನೆಗೆ ತೆರಳಿ ಲಸಿಕೆ ನೀಡಲು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಮಂಗಳೂರು ಹಾಗೂ ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ಆರೋಗ್ಯ ಕಾರ್ಯಕರ್ತರು ಮನೆಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ.

    ನೀವು ಮನೆಯಲ್ಲೇ ಲಸಿಕೆ ಪಡೆಯಲು ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ dk.nic.in ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯಾದ ಬಳಿಕ ದಿನ ನಿಗದಿಪಡಿಸಿ, ಮನೆ ಮನೆಗೆ ಬಂದು ಲಸಿಕೆ ನೀಡಲು ನಿರ್ಧರಿಸಲಾಗಿದೆ. ಮನೆ ಮನೆ ಲಸಿಕಾ ವಾಹನಕ್ಕೆ ಜೂ.19ರಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಯುನಿವರ್ಸಿಟಿ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಲಾಗುತ್ತಿದೆ.

  • ಈ ಸೈಕಲ್ ಸವಾರರು ಕೊರೊನಾ  ವಾರಿಯರ್‌ಗಳು- ಸಹಾಯಕ್ಕೆ ಮೆಚ್ಚುಗೆಯ ಸುರಿಮಳೆ

    ಈ ಸೈಕಲ್ ಸವಾರರು ಕೊರೊನಾ ವಾರಿಯರ್‌ಗಳು- ಸಹಾಯಕ್ಕೆ ಮೆಚ್ಚುಗೆಯ ಸುರಿಮಳೆ

    ಹೈದರಾಬಾದ್: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸಂಪನ್ಮೂಲಗಳ ಲಭ್ಯತೆ ವಿರಳವಾಗಿದೆ. ಮತ್ತು ಸೇವೆಗೆ ಸಂಪೂರ್ಣವಾಗಿ ಅಡ್ಡಿಯಾಗಿರುವ ಅಥವಾ ನಿರ್ಬಂಧಿಸಲ್ಪಟ್ಟಿರುವ ಸಮಯದಲ್ಲಿ, ಹೈದರಾಬಾದ್‍ನ ಬೈಸಿಕಲ್ ಮೇಯರ್ ತನ್ನ ಸೈಕಲ್ ಬಳಸಿ ವೃದ್ಧರ ಅಗತ್ಯತೆಗಳನ್ನು ನಗುವಿನೊಂದಿಗೆ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಅವರಿಗೆ ಹಲವು ಸ್ವಯಂಸೇವಕರು ಬೆಂಬಲ ನೀಡುತ್ತಿದ್ದಾರೆ.

    ಹೈದರಾಬಾದ್ ನಿವಾಸಿ ಸಂತನಾ ಸೆಲ್ವನ್ (41) ಅವರನ್ನು ನಗರದ ಬೈಸಿಕಲ್ ಮೇಯರ್ ಎಂದು ಅಂತಾರಾಷ್ಟ್ರೀಯ ಬೈಸಿಕಲ್ ಸಂಸ್ಥೆ BYCS ಏಪ್ರಿಲ್‍ನಲ್ಲಿ ಕರೆಯಲಾಯಿತು. ಜನದಟ್ಟಣೆಯ ಸ್ಥಳಗಳಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ನಗರಗಳಲ್ಲಿ ಬೈಸಿಕಲ್ ಬಳಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ. ಕೆಲವು ವಾರಗಳ ಹಿಂದೆ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಹೈದರಾಬಾದ್ ಸೇರಿದಂತೆ ಭಾರತದ ಬಹುತೇಕ ಭಾಗಗಳನ್ನು ಆವರಿಸಲಾರಂಭಿಸಿತು.

    ಕೊರೊನಾ ವೈರಸ್ ಸೋಂಕು ತಗುಲುವ ಅಥವಾ ತಮ್ಮಿಂದ ಬೇರೆಯವರಿಗೆ ಹರಡುವ ಭೀತಿಯಿಂದ ತಮ್ಮ ಮನೆಗಳಿಂದ ಹೊರಬರಲು ಸಾಧ್ಯವಾಗದ ವೃದ್ಧರಿಗೆ ಔಷಧಿಗಳಂತಹ ಅಗತ್ಯ ವಸ್ತುಗಳ ಸೇವೆ ಒದಗಿಸುವುದಾಗಿ ಸೆಲ್ವನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಅಷ್ಟೇ ಅಲ್ಲ, ಹೇಳಿದಂತೆ ನೆರವಾಗಲು ಸೆಲ್ವನ್ ಮತ್ತು ಅವರ ಸ್ವಯಂ ಸೇವಕರು ಹೆಜ್ಜೆ ಇಟ್ಟರು. ಸೆಲ್ವನ್ ಔಷಧಿಗಳನ್ನು ತಲುಪಿಸಲು ನೆರವು ಕೇಳಿದ್ದಕ್ಕೆ ಹಲವು ಸ್ವಯಂ ಸೇವಕರು ಈ  ಪೋಸ್ಟ್‌ಗೆ  ಪ್ರತಿಕ್ರಯಿಸಿದ್ದು, ತಾವೂ ಸೇವೆಗೆ ಮುಂದಾದರು.

    ವೃದ್ಧರಿಗೆ ಔಷಧಿಗಳನ್ನು ತಲುಪಿಸುವ ಒಂದು ಸಣ್ಣ ಉಪಕ್ರಮವಾಗಿ ಪ್ರಾರಂಭವಾದದ್ದು, ಈಗ ಸುಮಾರು 100 ಸ್ವಯಂಸೇವಕರ ಸಮೂಹವಾಗಿ ಬೆಳೆದಿದೆ. ಈ ತಂಡಕ್ಕೆ ರಿಲೀಫ್ ರೈಡರ್ಸ್ ಎಂದು ಹೆಸರಿಡಲಾಗಿದೆ. ಸ್ವಯಂಸೇವಕರು ಆರಂಭದಲ್ಲಿ ವಯಸ್ಸಾದವರಿಗೆ ಕೇವಲ ಔಷಧಿಗಳನ್ನು ತಲುಪಿಸುತ್ತಿದ್ದರೆ. ಆದರೆ ಈಗ ಆಮ್ಲಜನಕ ಸಿಲಿಂಡರ್‍ಗಳು ಮತ್ತು ಸಾಂದ್ರಕಗಳು, ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್‍ಗಳು, ಪ್ಲಾಸ್ಮಾ ದಾನಿಗಳು ಮತ್ತು ಕೋವಿಡ್ -19 ರೋಗಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಹುಡುಕಲು ಮತ್ತು ಈ ಸಂಪನ್ಮೂಲಗಳನ್ನು ಅಗತ್ಯವಿರುವವರಿಗೆ ಸಂಪರ್ಕಿಸಲು ವಿಸ್ತರಿಸಿದೆ. ಸೆಲ್ವನ್ ಮತ್ತು ಅವರ ಸ್ನೇಹಿತರು ಈಗ ತಮ್ಮ ಸೇವೆಗಳನ್ನು ಹೆಚ್ಚಿಸಲು ಮತ್ತು ಆಹಾರ ಹಾಗೂ ಇತರ ಅಗತ್ಯ ವಸ್ತುಗಳನ್ನು ತಲುಪಿಸಲು ಯೋಜಿಸುತ್ತಿದ್ದಾರೆ.

  • ಕೊರೊನಾ ಗೆದ್ದ 101 ವರ್ಷದ ಅಜ್ಜ- ಆಸ್ಪತ್ರೆ ಸಿಬ್ಬಂದಿಗೆ ಆಶ್ಚರ್ಯ

    ಕೊರೊನಾ ಗೆದ್ದ 101 ವರ್ಷದ ಅಜ್ಜ- ಆಸ್ಪತ್ರೆ ಸಿಬ್ಬಂದಿಗೆ ಆಶ್ಚರ್ಯ

    – ಡಿಸ್ಚಾರ್ಜ್ ಮುನ್ನಾದಿನ 101ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಜ್ಜ

    ಮುಂಬೈ: ಕೊರೊನಾದಿಂದಾಗಿ ವೃದ್ಧರು ಹೆಚ್ಚು ಸಾವನ್ನಪ್ಪಿದ್ದಾರೆ ಎಂಬ ಆತಂಕದ ನಡುವೆಯೇ 101 ವರ್ಷದ ವೃದ್ಧರೊಬ್ಬರು ಕೊರೊನಾ ಗೆದ್ದು ಬಂದಿರುವ ಅಪರೂಪದ ಪ್ರಕರಣ ನಡೆದಿದೆ.

    ಮುಂಬೈನ ಹಿಂದೂ ಹೃದಯ ಸಾರ್ಮಾಟ್ ಬಾಳಾಸಾಹೇಬ್ ಠಾಕ್ರೆ ಆಸ್ಪತ್ರೆಯಿಂದ ಅರ್ಜುನ್ ಗೋವಿಂದ್ ನರಿಂಗ್ರೆಕರ್ ಅವರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇನ್ನೂ ವಿಶೇಷವೆಂದರೆ ನರಿಂಗ್ರೆಕರ್ ಅವರು ಡಿಸ್ಚಾರ್ಜ್ ಆಗುವುದಕ್ಕೂ ಹಿಂದಿನ ದಿನವೇ ತಮ್ಮ 101ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಮೂಲಕ ಡಬಲ್ ಖುಷಿಯಲ್ಲಿ ಮುಳುಗಿದ್ದಾರೆ. ಈ ಮೂಲಕ ವ್ಯದ್ಯರಿಗೂ ಆಶ್ಚರ್ಯವನ್ನುಂಟು ಮಾಡಿದ್ದಾರೆ.

    ಇದೇ ಮೊದಲಲ್ಲ ಈ ಹಿಂದೆ ಸಹ ಹಲವು ವೃದ್ಧರು ಕೊರೊನಾ ಗೆದ್ದಿದ್ದು, ಜೂನ್ 12ರಂದು 93 ವರ್ಷದ ವ್ಯಕ್ತಿ ಕೊರೊನಾದಿಂದ ಗುಣಮುಖರಾಗಿ ಆಗ್ರಾದ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈ ಮೂಲಕ ವೃದ್ಧರು ಸಹ ಕೊರೊನಾದಿಂದ ಗುಣಮುಖರಾಗುವ ಮೂಲಕ ಭರವಸೆ ಮೂಡಿಸಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಇತ್ತೀಚೆಗೆ ರಾಜ್ಯದಲ್ಲಿ ಸಹ ಅಜ್ಜಿಯೊಬ್ಬರು ಕೊರೊನಾದಿಂದ ಗುಣಮುಖರಾಗಿದ್ದರು.

    ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇತರರಿಗಿಂತ ವೃದ್ಧರಿಗೆ ಹಾಗೂ ಈಗಾಗಲೇ ಇತರೆ ಖಾಯಿಲೆಗಳಿರುವವರಿಗೆ ಕೊರೊನಾ ಹೆಚ್ಚು ಕಾಡುತ್ತದೆ ಎಂದು ಹೇಳಿದೆ. ಅಲ್ಲದೆ ವೃದ್ಧರಲ್ಲಿ ಕೊರೊನಾ ವೈರಸ್ ಕಂಡು ಬಂದರೆ ಅವರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಪ್ರತ್ಯೇಕಮಾರ್ಗಸೂಚಿಗಳನ್ನು ಸಹ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿದೆ. ಇದೇ ರೀತಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದೆ. ಆದರೆ ಇದೀಗ ದೇಶದಲ್ಲಿ ಹೆಚ್ಚು ವೃದ್ಧರು ಕೊರೊನಾದಿಂದಾಗಿ ಗುಣಮುಖರಾಗುವ ಮೂಲಕ ಇತರರಲ್ಲಿ ಭರವಸೆ ಮೂಡಿಸಿದ್ದಾರೆ.

  • ವೃದ್ಧಾಪ್ಯದಲ್ಲೂ ಕೊರೊನಾ ಗೆದ್ದ ರಾಯಚೂರಿನ 12 ಜನ ಗಟ್ಟಿಗರು

    ವೃದ್ಧಾಪ್ಯದಲ್ಲೂ ಕೊರೊನಾ ಗೆದ್ದ ರಾಯಚೂರಿನ 12 ಜನ ಗಟ್ಟಿಗರು

    – ಆತ್ಮಸ್ಥೈರ್ಯದ ಮುಂದೆ ಶರಣಾದ ಕೊರೊನಾ ವೈರಸ್

    ರಾಯಚೂರು: ಅರವತ್ತು ವರ್ಷ ಮೇಲ್ಪಟ್ಟವರಿಗೆ ಕೊರೊನಾ ಸೋಂಕು ತಗುಲಿದರೆ ಪ್ರಾಣಾಪಾಯ ಹೆಚ್ಚು ಅನ್ನೋದನ್ನ ರಾಯಚೂರಿನ 12 ಜನ ವೃದ್ಧರು ಮೆಟ್ಟಿನಿಂತು ಮಹಾಮಾರಿ ವಿರುದ್ಧ ಗೆದ್ದು ಹೊರಬಂದಿದ್ದಾರೆ. 60 ರಿಂದ 73 ವರ್ಷದ ಮಧ್ಯದ 12 ಜನರು ಕೊರೊನಾ ಸೋಂಕಿನಿಂದ ಗೆದ್ದು ಬಂದು ಸಂಪೂರ್ಣ ಗುಣಮುಖರಾಗುವ ಮೂಲಕ ಸೋಂಕಿತರಲ್ಲಿನ ಭಯ ಹೋಗಲಾಡಿಸಲು ಮಾದರಿಯಾಗಿದ್ದಾರೆ.

    ಜಿಲ್ಲೆಯಲ್ಲಿ ಇದುವರೆಗೆ 631 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 442 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ ಒಟ್ಟು 7 ಜನ ಸೋಂಕಿತರ ಸಾವು ಜರುಗಿದ್ದು, ಅವರಲ್ಲಿ ಮೂವರು 60 ವರ್ಷ ಮೇಲ್ಪಟ್ಟವರಿದ್ದಾರೆ. ಮೃತಪಟ್ಟವರಲ್ಲಿ ಕೂಡಾ ಇನ್ನಿತರ ಆರೋಗ್ಯ ಸಮಸ್ಯೆಗಳು ಕಂಡು ಬಂದಿದ್ದು, ಆ ಕಾರಣಕ್ಕೆ ಕೊರೊನಾ ಸೋಂಕಿಗಿಂತ ಇನ್ನಿತರ ಆರೋಗ್ಯ ಸಮಸ್ಯೆಗಳು ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಜೊತೆಗೆ ಜಿಲ್ಲೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿಂದ ವೆಂಟಿಲೇಟರ್‍ನಲ್ಲಿರಿಸಬೇಕಾದ ಪ್ರಕರಣಗಳು ಕಡಿಮೆಯಿದೆ ಎನ್ನಲಾಗುತ್ತಿದೆ.

    ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ನಂತರದಲ್ಲಿ ಇದುವರೆಗೂ 60 ವರ್ಷ ಮೇಲ್ಪಟ್ಟ 12 ಜನರು ಗುಣಮುಖರಾಗಿ ಹೋಂ ಕ್ವಾರಂಟೈನ್‍ನಲ್ಲಿದ್ದು ಬಹುತೇಕರು ಆರೋಗ್ಯವಂತರಾಗಿದ್ದಾರೆ. ಒಂದಿಬ್ಬರನ್ನು ಹೊರತುಪಡಿಸಿ ಬಹುತೇಕರು 15 ದಿನದೊಳಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗಿರುವ 12 ಜನರಲ್ಲಿ 73, 70 ಮತ್ತು 63 ವಯೋಮಾನದ ತಲಾ ಒಬ್ಬರಿದ್ದು, 65 ವಯೋಮಾನದ 5 ಮತ್ತು 60 ವರ್ಷದ ನಾಲ್ವರಿದ್ದಾರೆ. ಇವರಲ್ಲಿ ರಾಯಚೂರು ಮತ್ತು ದೇವದುರ್ಗ ತಾಲೂಕಿನ ತಲಾ ಐವರು ಹಾಗೂ ಮಾನ್ವಿ ತಾಲೂಕಿನ ಇಬ್ಬರಿದ್ದಾರೆ.

    ಗುಣಮುಖರಾಗಿರುವ ವೃದ್ಧರು ಕೊರೊನಾಗೆ ಭಯಪಡುವ ಅಗತ್ಯವಿಲ್ಲ ಅಂತ ಧೈರ್ಯದ ಮಾತುಗಳನ್ನ ಹೇಳಿದ್ದಾರೆ. ನೆಗಡಿ, ಜ್ವರಕ್ಕೆ ಚಿಕಿತ್ಸೆ ಪಡೆಯಲು ಹೋದಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಆಸ್ಪತ್ರೆಯಲ್ಲಿ 10 ದಿನಗಳ ಕಾಲ ಇದ್ದೆ. ವೈದ್ಯರು ನೀಡಿದ ಚಿಕಿತ್ಸೆಯಿಂದ ಗುಣಮುಖನಾಗಿದ್ದು, ಆಸ್ಪತ್ರೆಯಲ್ಲಿ ನಿಯಮಿತವಾಗಿ ಉಪಹಾರ, ಊಟವನ್ನು ನೀಡಲಾಗುತ್ತಿದ್ದು, ಸೋಂಕಿಗೆ ಭಯಭೀತರಾಗುವುದನ್ನು ಬಿಟ್ಟರೆ ಅದರಿಂದ ಆದಷ್ಟು ಬೇಗ ಗುಣಮುಖರಾಗಬಹುದು ಅಂತ ಕೊರೊನಾ ಗೆದ್ದ ವೃದ್ಧರೊಬ್ಬರು ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.

  • ಊರಿಗೆ ಮರಳಲು ಆಗದೆ ಬಸ್ ನಿಲ್ದಾಣದಲ್ಲೇ ಕಾಲ ಕಳೆಯುತ್ತಿರೋ ವೃದ್ಧರು

    ಊರಿಗೆ ಮರಳಲು ಆಗದೆ ಬಸ್ ನಿಲ್ದಾಣದಲ್ಲೇ ಕಾಲ ಕಳೆಯುತ್ತಿರೋ ವೃದ್ಧರು

    ರಾಯಚೂರು: ಕಾಲು ಮುರಿತಕ್ಕೆ ಚಿಕಿತ್ಸೆಗಾಗಿ ಮಂತ್ರಾಲಯ ಬಳಿಯ ಕುಂಬಳಕ್ಕೆ ಹೋಗಿದ್ದ ವೃದ್ಧರು ವಾಪಸ್ ತಮ್ಮ ಊರು ಕಲಬುರಗಿಯ ಸೇಡಂಗೆ ಹೋಗಲಾಗದೇ ರಾಯಚೂರು ಬಸ್ ನಿಲ್ದಾಣದಲ್ಲೇ ಉಳಿದಿದ್ದಾರೆ. ಇದೀಗ ತಮ್ಮನ್ನು ತಮ್ಮ ಊರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಿಕೊಡಿ ಎಂದು ಅಂಗಲಾಚುತ್ತಿದ್ದಾರೆ.

    ಲಾಕ್‍ಡೌನ್ ಮುಂಚೆ ಆಂಧ್ರಪ್ರದೇಶದ ಕುಂಬಳದಲ್ಲಿ ನಾಟಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ವೇಳೆಯೇ ಇಡೀ ದೇಶ ಲಾಕ್‍ಡೌನ್ ಆಗಿದ್ದರಿಂದ ಆಂಧ್ರಪ್ರದೇಶದಲ್ಲೇ ಸಿಲುಕಿದ್ದರು. ಮಂತ್ರಾಲಯ ರೈಲ್ವೇ ಸ್ಟೇಷನ್ ನಲ್ಲೇ ಒಂದು ತಿಂಗಳ ಕಾಲ ಕಳೆದಿದ್ದಾರೆ. ಕಾಲು ನೋವು ಕಡಿಮೆಯಾಗುತ್ತಿದ್ದಂತೆ ಕರ್ನಾಟಕ ಗಡಿವರೆಗೂ ಸುಮಾರು 15 ಕಿ.ಮೀ ನಡೆದುಕೊಂಡೇ ಬಂದಿದ್ದಾರೆ. ಬಳಿಕ ರಾಯಚೂರು ಗಡಿ ಗಿಲ್ಲೆಸೂಗುರು ಕ್ಯಾಂಪ್ ಚೆಕ್ ಪೋಸ್ಟ್ ನಲ್ಲಿ ಅಲ್ಲಿನ ಸಿಬ್ಬಂದಿ ತಪಾಸಣೆ ಮಾಡಿ ರಾಯಚೂರಿಗೆ ಬಸ್ಸಿನಲ್ಲಿ ಕಳುಹಿಸಿಕೊಟ್ಟಿದ್ದಾರೆ.

    ಆದರೆ ರಾಯಚೂರಿನಿಂದ ಕಲಬುರಗಿಗೆ ಹೋಗಲು ಬಸ್ ವ್ಯವಸ್ಥೆಯಿಲ್ಲ. ಹೀಗಾಗಿ ರಾಯಚೂರಿನ ಬಸ್ ನಿಲ್ದಾಣ ಬಳಿಯೇ ಮೂರು ಜನ ವೃದ್ಧರು ಹಾಗೂ ಓರ್ವ ಬಾಲಕ ಉಳಿದುಕೊಂಡಿದ್ದಾರೆ. ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿ ಕಾಲಕಳೆಯುತ್ತಿದ್ದಾರೆ. ಜಿಲ್ಲಾಡಳಿತ ನಮ್ಮನ್ನು ಸೇಡಂಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ.

  • ವೃದ್ಧಾಶ್ರಮದಲ್ಲಿ ಭೇಟಿ- ಪ್ರೀತ್ಸಿ ಮದ್ವೆಯಾಗ್ತಿದ್ದಾರೆ ಅಜ್ಜ-ಅಜ್ಜಿ

    ವೃದ್ಧಾಶ್ರಮದಲ್ಲಿ ಭೇಟಿ- ಪ್ರೀತ್ಸಿ ಮದ್ವೆಯಾಗ್ತಿದ್ದಾರೆ ಅಜ್ಜ-ಅಜ್ಜಿ

    ತಿರುವನಂತಪುರಂ: ಪ್ರೀತಿ ಮಾಡುವುದಕ್ಕೆ ವಯಸ್ಸು ಬೇಕಿಲ್ಲ ಎಂದು ಹೇಳುತ್ತಾರೆ. ಹಾಗೆಯೇ ಕೇರಳದ ವೃದ್ಧರು ಇದನ್ನು ಸಾಬೀತು ಮಾಡಿದ್ದಾರೆ. ವೃದ್ಧಾಶ್ರಮದಲ್ಲಿ ಭೇಟಿಯಾದ ವೃದ್ಧರು ಈಗ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ.

    65 ವರ್ಷದ ಲಕ್ಷ್ಮಿ ಅಮ್ಮಾಲ್ ಹಾಗೂ 66 ವರ್ಷದ ಕೋಚಿಯಾನ್ ಸುಮಾರು 20 ವರ್ಷಗಳಿಂದ ಪರಿಚಯವಿದೆ. ಅಲ್ಲದೆ ಇಬ್ಬರು ಶೀಘ್ರದಲ್ಲೇ ಮದುವೆ ಕೂಡ ಆಗಲಿದ್ದಾರೆ. ವೃದ್ಧಾಶ್ರಮದ ಸಿಬ್ಬಂದಿಯೇ ಮದುವೆ ಮಾಡಿಸಲಿದ್ದಾರೆ.

    21 ವರ್ಷಗಳ ಹಿಂದೆ ಲಕ್ಷ್ಮಿ ಪತಿ ನಿಧನರಾಗಿದ್ದರು. ಕೋಚಿಯಾನ್, ಲಕ್ಷ್ಮಿ ಪತಿಯ ಜೊತೆ ಕೆಲಸ ಮಾಡುತ್ತಿದ್ದರು. ಅಲ್ಲದೆ ಯಾವಾಗಲೂ ಲಕ್ಷ್ಮಿ ಜೊತೆ ಇರುವುದಾಗಿ ಕೋಚಿಯಾನ್, ಅವರ ಪತಿಗೆ ಮೊದಲು ಮಾತು ನೀಡಿದ್ದರು. ಹಾಗೆಯೇ ಅವರು ಈಗ ಲಕ್ಷ್ಮಿ ಅವರ ಜೊತೆಯೇ ಇದ್ದಾರೆ.

    ಲವ್ ಆಗಿದ್ದು ಹೇಗೆ?
    ಇಬ್ಬರು ಮೊದಲು ವೃದ್ಧಾಶ್ರಮದಲ್ಲಿ ಭೇಟಿಯಾಗಿದ್ದರು. ಇವರಿಬ್ಬರ ಸ್ನೇಹ, ಪ್ರೀತಿಗೆ ತಿರುಗಿತು. ವಿಜಿ ಜಯಾಕುಮಾರ್ ಜೋಕಿ ಈ ವೃದ್ಧಾಶ್ರಮದ ಅಧೀಕ್ಷಕರಾಗಿದ್ದು, ಲಕ್ಷ್ಮಿ ಹಾಗೂ ಕೋಚಿಯಾನ್‍ಗೆ ಮದುವೆ ಮಾಡಿಸಲು ನಿರ್ಧರಿಸಿದ್ದಾರೆ. ಡಿಸೆಂಬರ್ 31ರಂದು ಇಬ್ಬರ ಮದುವೆ ನಡೆಯಲಿದೆ.

  • ಅನುಮತಿ ಪಡೆಯದೇ ಉಚಿತ ಕಣ್ಣಿನ ತಪಾಸಣೆ – ಹಾಸನದ ಆಸ್ಪತ್ರೆಯ ಬಾಗಿಲು ಬಂದ್

    ಅನುಮತಿ ಪಡೆಯದೇ ಉಚಿತ ಕಣ್ಣಿನ ತಪಾಸಣೆ – ಹಾಸನದ ಆಸ್ಪತ್ರೆಯ ಬಾಗಿಲು ಬಂದ್

    ಹಾಸನ: ಸರ್ಕಾರಿ ಯೋಜನೆಯ ಅನ್ವಯ ವೃದ್ಧರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ನಗರ ಖಾಸಗಿ ಆಸ್ಪತ್ರೆ ಅಮಾನುಷವಾಗಿ ನಡೆಸಿಕೊಂಡಿದೆ.

    ನಗರದ ಬಿಎಂ ರಸ್ತೆಯಲ್ಲಿ ಇರುವ ವರ್ಧಮಾನ್ ಜೈನ್ ಹೆಸರಿನ ಆಸ್ಪತ್ರೆ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯದ ನರ್ಸಿಂಗ್ ಹೋಂ ಈ ಅಚಾತುರ್ಯ ನಡೆಸಿ ಇದೀಗ ಸಿಕ್ಕಿಬಿದ್ದಿದೆ. ಹಾಸನ ತಾಲೂಕಿನ ಕಟ್ಟಾಯ ಹೋಬಳಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಯ ಕ್ಯಾಂಪ್ ನಡೆಸಿ ವಯೋವೃದ್ಧರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಕರೆ ತರಲಾಗಿತ್ತು. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿ ಯಾವುದೇ ಮಂಚ, ದಿಂಬು ಹೊದಿಕೆ ಇಲ್ಲದೆ ಅಮಾನುಷವಾಗಿ ನೋಡಿಕೊಳ್ಳಲಾಗಿದೆ.

    ಸಿಬ್ಬಂದಿ ನಡವಳಿಕೆಯಿಂದ ಅಸಮಧಾನಗೊಂಡ ರೋಗಿಯ ಕಡೆಯವರು ಮಾಧ್ಯಮಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಬಂದು ವಿಚಾರಿಸಿದಾಗ ನರ್ಸಿಂಗ್ ಹೋಂ ಸ್ಥಳೀಯ ಆಡಳಿತದ ಅನುಮತಿ ಪಡೆಯದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

    ಮಂಡ್ಯ ಜಿಲ್ಲೆಯ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಹಾಸನದಲ್ಲಿ ಕ್ಯಾಂಪ್‍ಗಳನ್ನು ನಡೆಸಿ ಈ ರೀತಿ ಯಾವುದೇ ಸೌಕರ್ಯ ಇಲ್ಲದೆ ವಯೋವೃದ್ಧರ ಶಸ್ತ್ರ ಚಿಕಿತ್ಸೆ ನಡೆಸುತಿದ್ದ ನರ್ಸಿಂಗ್ ಹೋಂಗೆ ಬಾಗಿಲು ಮುಚ್ಚಿಸಲಾಗಿದೆ. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಎಲ್ಲಾ ರೋಗಿಗಳನ್ನು ಸದ್ಯ ಅಂಬುಲೆನ್ಸ್ ಗಳ ಮೂಲಕ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ. ಅಲ್ಲದೆ ನರ್ಸಿಂಗ್ ಹೋಂ ಮಾಲೀಕರಿಗೆ ಆರೋಗ್ಯ ಇಲಾಖೆಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.

  • ಫುಟ್‍ಪಾತ್ ಮೇಲೆ ವಾಹನಗಳ ಹಾವಳಿ- ಬೀದಿಗಿಳಿದ ಹಿರಿಯ ನಾಗರಿಕರು

    ಫುಟ್‍ಪಾತ್ ಮೇಲೆ ವಾಹನಗಳ ಹಾವಳಿ- ಬೀದಿಗಿಳಿದ ಹಿರಿಯ ನಾಗರಿಕರು

    ಬೆಂಗಳೂರು: ನಗರದಲ್ಲಿ ಫುಟ್ ಪಾತ್ ಗಳ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಎಲ್ಲರೂ ನೋಡಿದ್ದೀವಿ. ಫುಟ್ ಪಾತ್ ಮೇಲೆ ನಡೆಯೋದಕ್ಕಿಂತ ರೋಡಲ್ಲೇ ನಡೆದು ಹೋಗಬಹುದೇನೋ ಅನ್ನುವ ಮಟ್ಟಿಗೆ ಫುಟ್ ಪಾತ್ ಅನ್ನು ದ್ವಿಚಕ್ರ ವಾಹನ ಸವಾರರು ಆಕ್ರಮಿಸಿಕೊಂಡಿರುತ್ತಾರೆ. ಆದರೆ ಇದನ್ನು ತಡೆಯಲು ವೃದ್ಧರಿಬ್ಬರು ಪಣ ತೊಟ್ಟಿದ್ದಾರೆ.

    ಹೌದು. ನಗರದ ಇಟ್ಟಮಡು ಜಂಕ್ಷನ್ ಬಳಿಯ ಅಕ್ಕಪಕ್ಕದ ಮನೆಯ ವೃದ್ಧರಾದ ಸುಬ್ರಮಣ್ಯಂ ಹಾಗೂ ಉಷಾ ಶ್ರೀಕಂಠನ್, ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಇಲ್ಲಿನ ಫುಟ್ ಪಾತ್ ಮೇಲೆ ವಾಹನ ಚಾಲನೆಯಿಂದಾಗಿ ವೃದ್ಧರು, ಮಕ್ಕಳು ಮತ್ತು ವಿದ್ಯಾರ್ಥಿಗಳು ಗಾಬರಿ ಒಳಗಾಗುತ್ತಿದ್ದರು. ಹೀಗಾಗಿ ಸವಾರರಿಗೆ ರೂಲ್ಸ್ ಬ್ರೇಕ್ ಮಾಡಿಬೇಡಿ ಎಂದು ಎಂದು ವೃದ್ಧರು ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

    ಇಬ್ಬರು ವೃದ್ಧರು ಕೈಯಲ್ಲಿ ಒಂದು ಬೋರ್ಡ್ ಹಿಡಿದು, ಫುಟ್ ಪಾತ್ ಮೇಲೆ ಬರೋ ಗಾಡಿ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಕೆಲವರು ಸರಿ  ಎಂದು ಹೋದರೆ ಇನ್ನೂ ಕೆಲವರು ಇವರನ್ನು ಛೇಡಿಸಿ ಹೋಗುತ್ತಾರೆ. ಅದರೂ ಸುಮಾರು ಮೂರು- ನಾಲ್ಕು ಗಂಟೆಗಳ ಕಾಲ ರಸ್ತೆ ಬದಿಯ ಫುಟ್ ಪಾತ್ ಮೇಲೆ ನಿಂತು ನಿಯಮ ಪಾಲನೆ ಮಾಡುವಂತೆ ಬೈಕ್ ಸವಾರರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

    ಜಾಗೃತಿ ಮೂಡಿಸಲು ಕಾರಣವೇನು?:
    ಒಂದು ದಿನ ಇವರು ತಮ್ಮ ನಾಯಿ ಜೊತೆಗೆ ಫುಟ್ ಪಾತ್ ಮೇಲೆ ವಾಕ್ ಮಾಡುವಾಗ ದ್ವಿಚಕ್ರ ವಾಹನ ಟಚ್ ಆಗಿದೆ. ಸ್ವಲ್ವದರಲ್ಲೇ ಒಂದು ಅನಾಹುತ ತಪ್ಪಿದೆ. ಇದನ್ನು ಇಲ್ಲಿಗೆ ಬಿಡಬಾರದು ಎಂದು ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾವೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತೀರ್ಮಾನಿಸಿ “ಟೂ ವೀಲರ್ಸ್ ಪ್ಲೀಸ್ ಯೂಸ್ ರೋಡ್ ನೋ ಫುಟ್ ಪಾತ್ “ಅನ್ನೊ ಬೋರ್ಡ್ ಹಿಡಿದುಕೊಂಡು ಗಂಟೆಗಳ ಕಾಲ ನಿಂತು ವಾಹನ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಈ ಒಂದು ಘಟನೆಯೇ ವೃದ್ಧರು ಈ ವಯಸ್ಸಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ.

    ಪರದೇಶಕ್ಕೆ ಹೋದಾಗ ನಮ್ಮವರೇ ನಿಯಮ ಪಾಲನೆ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲೇ ಈ ರೀತಿ ಮಾಡಿಲ್ಲ ಎಂದರೆ ಅದು ನಮ್ಮ ದೇಶಕ್ಕೆ ನಾವು ಮಾಡೋ ಅವಮಾನ. ಇನ್ನೂ ಕೆಲ ದಿನಗಳಲ್ಲೇ ನಮ್ಮ ಈ ಫುಟ್ ಪಾತ್ ಅನ್ನು ವೆಹಿಕಲ್ ಫ್ರೀ ಮಾಡುತ್ತೇವೆ ಎಂದು ವೃದ್ಧರು ಭರವಸೆ ನೀಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಕೈ ಜೋಡಿಸಿದರೆ ಪಾದಚಾರಿಗಳಿಗೆ ಒಳಿತು ಮಾಡಿದಂತಾಗುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.

  • ಆಸ್ತಿಗಾಗಿ ಅತ್ತೆಯನ್ನೇ ಮನೆಯಿಂದ ಹೊರದಬ್ಬಿದ ಸೊಸೆ – ಮಗನ ಹೆಂಡ್ತಿಯಿಂದಾಗಿ ಬೀದಿಗೆ ಬಿದ್ದ ವೃದ್ಧರು

    ಆಸ್ತಿಗಾಗಿ ಅತ್ತೆಯನ್ನೇ ಮನೆಯಿಂದ ಹೊರದಬ್ಬಿದ ಸೊಸೆ – ಮಗನ ಹೆಂಡ್ತಿಯಿಂದಾಗಿ ಬೀದಿಗೆ ಬಿದ್ದ ವೃದ್ಧರು

    ಬೆಂಗಳೂರು: ಆಸ್ತಿಗಾಗಿ ಅತ್ತೆ ಮಾವನನ್ನ ಸೊಸೆಯೇ ಮನೆಯಿಂದ ಹೊರದಬ್ಬಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಾಸರಘಟ್ಟ ಗ್ರಾಮದಲ್ಲಿ ನಡೆದಿದೆ.

    ಇಲ್ಲಿನ ನಿವಾಸಿಗಳಾದ ವೃದ್ದ ದಂಪತಿ ನಂಜಪ್ಪ ಮತ್ತು ಚಿಕ್ಕಮ್ಮ, ಆಸ್ತಿಗಾಗಿ ತನ್ನ ಎರಡನೇ ಮಗ ಸುರೇಶ್‍ಕುಮಾರ್ ಹೆಂಡತಿ ಮಂಗಳಾ ತಮ್ಮನ್ನು ಮನೆಯಿಂದ ಹೊರ ಹಾಕಿದ್ದಾಗಿ ಆರೋಪ ಮಾಡಿದ್ದಾರೆ. ವೃದ್ಧೆ ಚಿಕ್ಕಮ್ಮ ತನ್ನ ಕೈನಲ್ಲಿರುವ ಬೆರಳುಗಳನ್ನು ಕಳೆದುಕೊಂಡಿದ್ದು, ಕೈಲಾಗದ ಪರಿಸ್ಥಿತಿಯಲಿದ್ದಾರೆ. ವೃದ್ಧ ನಂಜಪ್ಪನ ಹೆಸರಿನಲ್ಲಿ 1 ಎಕರೆ 7 ಗುಂಟೆ ಜಮೀನಿದೆ. ಈ ಜಮೀನನ್ನು ಸೊಸೆ ಮಂಗಳ ಮಾರಾಟ ಮಾಡಲು ಇಂತಹ ಹೀನ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನಲಾಗಿದೆ. ಹೀಗಾಗಿ ಕಟ್ಟಿಕೊಂಡ ಗಂಡ ಹಾಗೂ ಅತ್ತೆ ಮಾವರನ್ನು ಸಹ ಮನೆಯಿಂದ ಹೊರಗೆ ಹಾಕಿದ್ದಲ್ಲದೆ ಥಳಿಸಿದ್ದಾಳೆ ಎಂದು ದಂಪತಿಗಳು ಬೀದಿ ಬದಿಯಲ್ಲಿ ಕಣ್ಣೀರಿಡುತ್ತಿದ್ದಾರೆ.

    ವೃದ್ಧ ದಂಪತಿ ಡಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ, ಪೊಲೀಸರು ವೃದ್ಧ ದಂಪತಿಯನ್ನೆ ಹೀಯಾಳಿಸಿ, ನಿಮ್ಮ ಸಮಸ್ಯೆಯನ್ನ ನಾವು ಬಗೆಹರಿಸಲು ಆಗುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ರಕ್ಷಣೆ ನೀಡಬೇಕಾದ ಪೊಲೀಸರೇ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಅಲ್ಲದೇ ಸೊಸೆ ಮಂಗಳಾ ಅತ್ತೆ ಮಾವ ಹಾಗೂ ಗಂಡನಿಗೆ ತನ್ನ ಸಹೋದರರಿಂದ ಕೊಲೆ ಮಾಡುವುದಾಗಿ ಧಮ್ಕಿ ಹಾಕಿಸುತ್ತಾರಂತೆ ಎಂದು ತಿಳಿಸಿದ್ದಾರೆ.

    ಸೊಸೆಯ ಈ ಕೃತ್ಯದಿಂದ ಬೀದಿ ಪಾಲಾಗಿರುವ ವೃದ್ಧೆ ಸದ್ಯ ಮತ್ತೊಬ್ಬ ಮಗನ ಆಶ್ರಯ ಪಡೆದಿದ್ದು, ಬೆಂಗಳೂರಿನ ಜೀವನಕ್ಕೆ ಹೊಂದಿಕೊಳ್ಳಲಾಗದ ಇವರು ತಮ್ಮ ಜೀವನಕ್ಕಾಗಿ ಕೃಷಿ ಮಾಡಲು ಅವಕಾಶ ಕೊಡಬೇಕು ಹಾಗೂ ವಾಸಿಸಲು ಮನೆಯಲ್ಲಿ ಜಾಗ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews