Tag: ವೃತ

  • ನವರಾತ್ರಿ ವ್ರತ ಆಚರಣೆ ಹೇಗೆ? ಯಾವ ಆಹಾರ ಸೇವಿಸಬಹುದು?

    ನವರಾತ್ರಿ ವ್ರತ ಆಚರಣೆ ಹೇಗೆ? ಯಾವ ಆಹಾರ ಸೇವಿಸಬಹುದು?

    ವರಾತ್ರಿ ಎಂದರೆ ಒಂಬತ್ತು ರಾತ್ರಿಗಳು. ಈ ಅವಧಿಯಲ್ಲಿ ತಾಯಿ ದೇವಿ, ಶಕ್ತಿ ಅಥವಾ ದೇವಿಯ 9 ರೂಪಗಳನ್ನು ಭಾರತದಾದ್ಯಂತ ಪೂಜಿಸಲಾಗುತ್ತದೆ. ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ನವರಾತ್ರಿಯ ಸಮಯದಲ್ಲಿ ಅನೇಕ ಜನರು ಉಪವಾಸ ಮಾಡುತ್ತಾರೆ. ನಿಮ್ಮ ಆಧ್ಯಾತ್ಮಿಕ ಅಭ್ಯಾಸದಲ್ಲಿ ಪ್ರಗತಿ ಸಾಧಿಸಲು, ಮಾತೃ ದೇವತೆಯ ಶಕ್ತಿಯನ್ನು ಆವಾಹಿಸಲು ಅಥವಾ ನಿಮ್ಮ ದೇಹ, ಮನಸ್ಸನ್ನು ಶುದ್ಧೀಕರಿಸಲು ಇದು ಉತ್ತಮ ಸಮಯವಾಗಿದೆ.

    ನವರಾತ್ರಿ ಉಪವಾಸದ ನಿಯಮಗಳು ಸಮುದಾಯದಿಂದ ಸಮುದಾಯಕ್ಕೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ಸ್ವಲ್ಪ ಬದಲಾಗುತ್ತವೆ. ಇದೇ ರೀತಿಯ ಉಪವಾಸ ನಿಯಮಗಳು ಏಕಾದಶಿ, ಜನ್ಮಾಷ್ಟಮಿ ಮತ್ತು ಮಹಾಶಿವರಾತ್ರಿ ಸಮಯದ ಉಪವಾಸಕ್ಕೂ ಅನ್ವಯಿಸುತ್ತವೆ.

    ನವರಾತ್ರಿ ವೃತದಲ್ಲಿ ಈ ಆಹಾರ ಸೇವಿಸಿ:
    ಹಸಿರು ತರಕಾರಿಗಳು, ಸಬ್ಬಕ್ಕಿ, ಒಣ ಹಣ್ಣುಗಳು, ಗೋಧಿ ಹಿಟ್ಟು ಹೀಗೆ ಹಲವು ಪದಾರ್ಥಗಳನ್ನು ಬಳಸಿ ಮಾಡಿದ ಆಹಾರಗಳನ್ನು ಸೇವಿಸಬಹುದು. ಜೀರಿಗೆ, ಕರಿಮೆಣಸಿನ ಪುಡಿ, ಕಲ್ಲುಪ್ಪು, ಏಲಕ್ಕಿ, ಒಣ ದಾಳಿಂಬೆ ಬೀಜ, ಶುಂಠಿ, ಹಸಿರು ಮೆಣಸಿನಕಾಯಿ, ನಿಂಬೆ, ಅ ನ್, ಕೊತ್ತಂಬರಿ, ಪುದೀನಾ, ಕರಿಬೇವಿನ ಸೊಪ್ಪು, ಒಣ ಮಾವಿನಪುಡಿ, ಕಪ್ಪು ಉಪ್ಪು ಹೀಗೆ ಕೆಲ ಮಸಾಲೆ ಪದಾರ್ಥಗಳು ಹಾಗೂ ಗಿಡಮೂಲಿಕೆಗಳನ್ನು ವೃತದ ಸಮಯದ ಆಹಾರದಲ್ಲಿ ಸೇವಿಸಬಹುದು.

    ಆಲೂಗಡ್ಡೆ, ಕುಂಬಳಕಾಯಿ, ಸಿಹಿ ಗೆಣಸು, ಬಾಳೆ ಹಣ್ಣು, ಪಪ್ಪಾಯಿ, ಟೊಮೆಟೋ, ಪಾಲಕ್, ಸೊರೇಕಾಯಿ, ಸೌತೆಕಾಯಿ, ಕ್ಯಾರೆಟ್ ನವರಾತ್ರಿಯ ಸಮಯದಲ್ಲಿ ಸೇವಿಸಬಹುದಾದ ಉತ್ತಮ ತರಕಾರಿಗಳು. ಹಾಲಿನಿಂದ ತಯಾರಿಸಿದ ಆಹಾರಗಳು, ಸಕ್ಕರೆ, ಜೇನುತುಪ್ಪ, ಬೆಲ್ಲ, ಹುಣಸೆಹಣ್ಣು, ಕೋಕಮ್, ತೆಂಗಿನಕಾಯಿ, ಕಲ್ಲಂಗಡಿ ಬೀಜ, ಚಹಾವನ್ನು ವೃತದ ವೇಳೆ ಸೇವಿಸಬಹುದು.

    ವೃತದ ವೇಳೆ ಈ ಆಹಾರ ಬೇಡ:
    ನವರಾತ್ರಿಯ ಸಮಯದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇವನೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಿ. ಬೇಳೆ ಕಾಳು ಹಾಗೂ ದ್ವಿದಳ ಧಾನ್ಯಗಳನ್ನು ಬಳಸುವಂತಿಲ್ಲ. ಸಾಮಾನ್ಯ ಉಪ್ಪು, ಅರಿಶಿನ, ಹಿಂಗ್, ಸಾಸಿವೆ, ಮೆಂತ್ಯ ಬೀಜ, ಗರಂ ಮಸಾಲೆ ಹಾಗೂ ಕೊತ್ತಂಬರಿ ಪುಡಿಯಂತಹ ಪದಾರ್ಥಗಳನ್ನು ಅನುಮತಿಸಲಾಗುವುದಿಲ್ಲ. ಈ ಪವಿತ್ರ ದಿನಗಳಲ್ಲಿ ಮದ್ಯ, ಮಾಂಸಾಹಾರ, ಮೊಟ್ಟೆ, ಧೂಮಪಾನ ನಿಷೇಧ.

    ಉಪವಾಸ:
    ನವರಾತ್ರಿಯ ಸಮಯದಲ್ಲಿ ಅನೇಕ ಭಕ್ತರು ಎಲ್ಲಾ 9 ದಿನಗಳಲ್ಲಿ ಉಪವಾಸ ಮಾಡುತ್ತಾರೆ. ಆದರೆ ಅಷ್ಟೂ ದಿನ ಉಪವಾಸ ಮಾಡುವುದು ಪ್ರತಿಯೊಬ್ಬರಿಂದ ಸಾಧ್ಯವಿಲ್ಲ. ಇದರ ಬದಲು ಪ್ರತಿ ದಿನ ನಿಮ್ಮ ಕುಟುಂಬದ ಒಬ್ಬ ವ್ಯಕ್ತಿ ಮನೆಯಲ್ಲಿ ಉಪವಾಸ ಇರಲು ಪ್ರಯತ್ನಿಸಬಹುದು.

    ಕೆಲವರು ನವರಾತ್ರಿಯ ಮೊದಲ 2 ದಿನ ಹಾಗೂ ಕೊನೆಯ 2 ದಿನ ಉಪವಾಸ ಮಾಡುತ್ತಾರೆ. ಮೊದಲ 2 ದಿನಗಳಲ್ಲಿ ಉಪವಾಸ ಮಾಡಿದ ನಂತರ ಮತ್ತೆ ಆಹಾರ ಸೇವಿಸಿ ನಂತರ ಕೊನೆಯ 2 ದಿನ ಉಪವಾಸ ಮಾಡುತ್ತಾರೆ. ಕೆಲವರ ಪ್ರಕಾರ ನವರಾತ್ರಿಯ ಮೊದಲ ಹಾಗೂ ಕೊನೆಯ 2 ದಿನ ಉಪವಾಸ ಮಾಡುವುದಕ್ಕಿಂತಲೂ ಕೊನೆಯ 2 ದಿನ ಉಪವಾಸ ಮಾಡುವುದು ಉತ್ತಮ ಎಂಬ ನಂಬಿಕೆಯಿದೆ.

    ನವರಾತ್ರಿಯಂದು ಉಪವಾಸ ಹಿಡಿಯಲು ಯಾವುದೇ ಸ್ಥಿರ ನಿಯಮವಿಲ್ಲ. ಏಕೆಂದರೆ ಹಬ್ಬದ ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ನಿಮ್ಮ ದೇಹ, ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡು, ಆಲೋಚನೆಯನ್ನು ಸದಾ ದೇವಿಯ ಮೇಲೆ ಕೇಂದ್ರೀಕರಿಸಿಕೊಳ್ಳುವ ಮೂಲಕವೂ ದೇವಿಯನ್ನು ಒಲಿಸಿಕೊಳ್ಳಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ- ಆಚರಣೆ, ವ್ರತ ಹೇಗೆ ಮಾಡಬೇಕು?

    ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ- ಆಚರಣೆ, ವ್ರತ ಹೇಗೆ ಮಾಡಬೇಕು?

    ಶ್ರಾವಣವು ಹಬ್ಬಗಳ ಮಾಸವಾಗಿದೆ. ಮೊನ್ನೆಯಷ್ಟೇ ಮೊದಲ ಹಬ್ಬವಾಗಿ ನಾಗರಪಂಚಮಿಯನ್ನು ಅತ್ಯಂತ ಸಡಗರ- ಸಂಭ್ರಮದಿಂದ ಆಚರಿಸಿದ್ದೇವೆ. ಇದೀಗ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮಿ ಹಬ್ಬವನ್ನು ಕೂಡ ಸಂಭ್ರಮದಿಂದಲೇ ಬರಮಾಡಿಕೊಳ್ಳುತ್ತಿದ್ದೇವೆ. ವರಮಹಾಲಕ್ಷ್ಮಿ (Varamahalakshmi) ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ.

    ಪುರಾಣ ಏನು ಹೇಳುತ್ತೆ..?: ಚಾರುಮತಿ ಎಂಬ ಸ್ತ್ರೀ ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ, ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ.

    ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಕಥೆಯಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದಾರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಲಕ್ಷ್ಮಿ ಉದ್ಭವಿಸುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮಿಯ ಆರಾಧನೆಗಾಗಿ ಈ ಹಬ್ಬವಾಗಿದೆ. ಪ್ರತಿವರ್ಷವೂ ಲಕ್ಷ್ಮಿಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬದ ಎಫೆಕ್ಟ್ – ಹೂ, ಹಣ್ಣಿನ ದರ ಭಾರೀ ಏರಿಕೆ

    ವ್ರತ ಹೇಗೆ ಮಾಡಬೇಕು?: ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿದೆ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ. ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಲಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ.

    ಲಕ್ಷ್ಮಿಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವು ಹಾಗೂ ಬಿಲ್ವಪತ್ರೆ ಎಂದರೆ ಲಕ್ಷ್ಮಿಗೆ ತುಂಬಾ ಪ್ರೀತಿ. ಹೀಗಾಗಿ ವ್ರತ ಮಾಡುವವರು ಈ ಹೂವನ್ನು ತಪ್ಪದೆ ತಾಯಿಯ ಬಳಿಯಿಟ್ಟು ಪೂಜೆ ಮಾಡುತ್ತಾರೆ. ಲಕ್ಷ್ಮಿ ಮುಂದೆ ಹಣ, ಚಿನ್ನ, ಬಳೆ, ಹಣ್ಣು, ಸ್ವೀಟ್, ಅರಿಶಿಣ, ಕುಂಕುಮ, ಎಲ್ಲವನ್ನೂ ಇಡುತ್ತಾರೆ. ಬಿಲ್ವ ವೃಕ್ಷದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬುದು ನಂಬಿಕೆಯಾಗಿದೆ. ಹೀಗಾಗಿ ಬಿಲ್ವ ಪತ್ರೆಯಿಂದ ಪೂಜೆ ಮಾಡಿದರೆ ತಾಯಿ ಒಲಿಯುವಳೆಂಬ ಪ್ರತೀತಿಯೂ ಇದೆ. ವರಲಕ್ಷ್ಮಿ ಎಂದರೆ ವರಗಳನ್ನು ಕೊಡುವವಳು ಎಂದು ಕೂಡ ಹೇಳುತ್ತಾರೆ. ಸಾಮಾನ್ಯವಾಗಿ ಲಕ್ಷ್ಮಿ ಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಶ್ರೇಷ್ಠ. ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ ಇದೆ. ಹೀಗಾಗಿ ನಮ್ಮ ಪೂರ್ವಿಕರು ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮಿಯು ನೆಲೆಸುತ್ತಾಳೆ ಎಂಬ ನಂಬಿಕೆಯನ್ನು ಹೊಂದಿದ್ದರು.

    ಲಕ್ಷ್ಮಿಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ. ಆದ್ದರಿಂದ ವರಮಹಾಲಕ್ಷ್ಮಿ ಹಬ್ಬದ ದಿನದಂದು ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸುತ್ತಾರೆ. ವ್ರತದ ನೇಮದ ಪ್ರಕಾರ ಪೂಜೆಯ ಸಿದ್ಧತೆಗಳೆಲ್ಲ ಆದ ನಂತರ ಮೊದಲು ವಿಘ್ನನಿವಾರಕ ಗಣಪತಿಯನ್ನು ಪೂಜಿಸಿ ನಂತರ ಯಮುನಾ ಪೂಜೆ ಅಂದರೆ ಶ್ರೇಷ್ಠವಾದ ನದಿಯ ನೀರನ್ನು ತಂದು ಪೂಜೆ ಮಾಡುತ್ತಾರೆ. ಇದಾದ ಮೇಲೆ ವರಲಕ್ಷ್ಮಿ ವ್ರತವನ್ನು ಆರಂಭಿಸುತ್ತಾರೆ. ಮನೆಗೆ ಮುತ್ತೈದೆಯರನ್ನು ಕರೆದು ಅರಿಶಿಣ, ಕುಂಕುಮ, ಸಿಹಿ ಕೊಡುತ್ತಾರೆ. ಇದೇ ರೀತಿ ಮದುವೆಯಾದ ಹೆಣ್ಣು ಮಕ್ಕಳು ಮೊದಲನೇ ವರ್ಷದಿಂದ ಒಂಬತ್ತು ವರ್ಷದವರೆಗೆ ಶ್ರದ್ಧೆಯಿಂದ ವ್ರತವನ್ನಾಚರಿಸಿ ಒಂಬತ್ತನೇ ವರ್ಷ ವ್ರತವನ್ನು ಮುಗಿಸುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೃತ್ರ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಹೊಗಳಿಕೆ!

    ವೃತ್ರ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಹೊಗಳಿಕೆ!

    ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಅಗಾಧ ಯಶಸ್ಸಿನ ಬೆನ್ನಲ್ಲಿಯೇ ರಶ್ಮಿಕಾ ಮಂದಣ್ಣ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆಂಬ ಕೌತುಕ ಎಲ್ಲರನ್ನೂ ಕಾಡಲು ಶುರುವಿಟ್ಟಿತ್ತು. ಬಹು ದಿನಗಳ ನಂತರ ಅದಕ್ಕೆ ಉತ್ತರವೆಂಬಂತೆ ಚಾಲ್ತಿಗೆ ಬಂದಿದ್ದ ಚಿತ್ರ ವೃತ್ರ. ಈ ವಿಭಿನ್ನ ಶೀರ್ಷಿಕೆಯೇ ಒಂದಷ್ಟು ಸುದ್ದಿಗೆ ಗ್ರಾಸವಾಗಿತ್ತು. ಆ ನಂತರದ ಬೆಳವಣಿಗೆಗಳಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಸ್ಥಾನದಿಂದ ಎದ್ದು ಹೋದದ್ದರ ಹಿನ್ನೆಲೆಯಲ್ಲಿಯೂ ಸುದ್ದಿಯಾಗಿದ್ದ ಈ ಚಿತ್ರವೀಗ ಬಿಡುಗಡೆಯಾಗಿದೆ. ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಈಗ ಮೆಲ್ಲಗೆ ಟೇಕಾಫ್ ಆಗುತ್ತಿರೋ ಈ ಚಿತ್ರವನ್ನೀಗ ಕಿಚ್ಚ ಸುದೀಪ್ ಕೂಡ ಹೊಗಳಿ ಟ್ವೀಟ್ ಮಾಡಿದ್ದಾರೆ.

    ವೃತ್ರ ಚಿತ್ರದ ಬಗ್ಗೆ ಎಲ್ಲ ಕಡೆಗಳಿಂದಲೂ ಒಳ್ಳೆ ಮಾತುಗಳೇ ಕೇಳಿ ಬರುತ್ತಿದೆ. ಇಂತಹ ಒಳ್ಳೆಯ ಚಿತ್ರವನ್ನು ನೀವೆಲ್ಲರೂ ಪ್ರೋತ್ಸಾಹಿಸಿ. ಈ ಚಿತ್ರತಂಡಕ್ಕೆ ಶುಭ ಹಾರೈಕೆ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮೆಲ್ಲಗೆ ಟೇಕಾಫ್ ಆಗುತ್ತಿರೋ ವೃತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಯಾವುದೇ ಹೊಸ ಅಲೆಯ ಚಿತ್ರಗಳು ಬಂದಾಗಲೂ ಅದರತ್ತ ಗಮನ ಹರಿಸಿ ಪ್ರೋತ್ಸಾಹಿಸೋದು ಕಿಚ್ಚನ ವ್ಯಕ್ತಿತ್ವ. ಅದರಂತೆಯೇ ಅವರು ವೃತ್ರ ಚಿತ್ರವನ್ನೂ ಹೊಗಳಿ ಟ್ವೀಟ್ ಮಾಡೋ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಒಂದು ಪ್ರಕರಣದ ಸುತ್ತ ನಡೆಯೋ ರೋಚಕ ಕಥೆಯನ್ನೊಳಗೊಂಡಿರೋ ಚಿತ್ರ ವೃತ್ರ. ಶುರುವಿನಿಂದ ಕಡೆಯವರೆಗೂ ಬಿಗುವು ಕಳೆದುಕೊಳ್ಳದೇ ಮುಂದುವರಿಯೋ ಕಥೆಯ ಈ ಚಿತ್ರಕ್ಕೆ ನಿಧಾನಕ್ಕೆ ಪ್ರೇಕ್ಷಕರ ಕಡೆಯಿಂದಲೂ ಒಳ್ಳೆ ಮಾತುಗಳೇ ಕೇಳಿ ಬರುತ್ತಿವೆ. ಆರಂಭದಲ್ಲಿ ರಶ್ಮಿಕಾ ನಿರ್ವಹಿಸೋದಾಗಿ ಹೇಳಿದ್ದ ಪಾತ್ರವನ್ನು ನಿತ್ಯಶ್ರೀ ನಿಭಾಯಿಸಿದ್ದಾರೆ. ಅವರ ನಟನೆಯೂ ಸಹ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಇದೀಗ ಸುದೀಪ್ ಅವರೇ ಒಳ್ಳೆ ಮಾತುಗಳನ್ನಾಡುತ್ತಿರೋದರಿಂದ ವೃತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.