Tag: ವೀಲಿಂಗ್

  • ವೀಲಿಂಗ್‌ ಮಾಡಿದ  ಬೈಕ್‌ ಸುಟ್ಟು ಹಾಕಿ, 45 ಲಕ್ಷ ಸಬ್‌ಸ್ಕ್ರೈಬ್‌ ಇರೋ ಯೂಟ್ಯೂಬ್‌ ಚಾನೆಲನ್ನು ಕಿತ್ತಾಕಿ: ಹೈಕೋರ್ಟ್‌ ಚಾಟಿ

    ವೀಲಿಂಗ್‌ ಮಾಡಿದ ಬೈಕ್‌ ಸುಟ್ಟು ಹಾಕಿ, 45 ಲಕ್ಷ ಸಬ್‌ಸ್ಕ್ರೈಬ್‌ ಇರೋ ಯೂಟ್ಯೂಬ್‌ ಚಾನೆಲನ್ನು ಕಿತ್ತಾಕಿ: ಹೈಕೋರ್ಟ್‌ ಚಾಟಿ

    ಚೆನ್ನೈ: ರಸ್ತೆಗಳಲ್ಲಿ ಬೈಕ್‌ನಲ್ಲಿ ವೀಲಿಂಗ್‌ ಮಾಡುವವರ ಬೈಕ್‌ಗಳನ್ನು (Bike) ಸುಟ್ಟು ಹಾಕಬೇಕು ಎಂದು ಮದ್ರಾಸ್ ಹೈಕೋರ್ಟ್ (Madras High Court) ಖಾರವಾಗಿ ಅಭಿಪ್ರಾಯಪಟ್ಟಿದೆ.

    ವೀಲಿಂಗ್ ಮಾಡಿ ಬಂಧಿತನಾಗಿರುವ ವ್ಯಕ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಜಾ ಮಾಡಿದ ಕೋರ್ಟ್‌ ಬಂಧಿತ ವ್ಯಕ್ತಿಯ ಚಾನೆಲನ್ನು ಯೂಟ್ಯೂಬ್‌ನಿಂದಲೇ ತೆಗೆದು ಹಾಕಬೇಕು ಎಂದು ಚಾಟಿ ಬೀಸಿದೆ.

    ಬೈಕಿಂಗ್‌ ವಿಡಿಯೋಗಳಿಗೆ ಹೆಸರುವಾಸಿಯಾಗಿರುವ ಯೂಟ್ಯೂಬರ್ ಟಿಟಿಎಫ್ ವಾಸನ್ (TTF Vasan) ಚೆನ್ನೈ-ವೆಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ (Bike Wheeling) ಮಾಡುತ್ತಾ ಚಿತ್ರೀಕರಣ ಮಾಡುವಾಗ ಬಿದ್ದು ಗಾಯಗೊಂಡಿದ್ದರು. ಅಪಾಯಕಾರಿ ಚಾಲನೆಯಡಿ ಪ್ರಕರಣ ದಾಖಲಿಸಿದ ಪೊಲೀಸರು ವಾಸನ್ ಅವರನ್ನು ಬಂಧಿಸಿದ್ದರು. ಬಳಿಕ ವಾಸನ್ ಜಾಮೀನು ಅರ್ಜಿ ಸಲ್ಲಿಸಿದ್ದರು.

    ವಿಚಾರಣೆ ಸಂದರ್ಭದಲ್ಲಿ ವಾಸನ್‌ 20 ಲಕ್ಷ ರೂ. ಮೌಲ್ಯದ ಬೈಕನ್ನು ಹೊಂದಿದ್ದಾರೆ. ಅಪಾಯಕಾರಿ ಸ್ಟಂಟ್‌ ಮಾಡುವ ವೇಳೆ 3 ಲಕ್ಷ ರೂ. ಮೌಲ್ಯದ ಜಾಕೆಟ್‌ ಧರಿಸಿದ್ದರಿಂದ ಅವರು ಪಾರಾಗಿದ್ದಾರೆ. ಅವರ Twin Throttlers ಚಾನೆಲನ್ನು 45 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಈ ವಿಡಿಯೋದಿಂದ ಯುವಕರು ಪ್ರಭಾವಿತರಾಗಿ ಮಿತಿಮೀರಿದ ವೇಗದಲ್ಲಿ ಸಂಚರಿಸಿ ಅಪಘಾತಕ್ಕೆ ಕಾರಣರಾಗುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೆ ಜಾಮೀನು ಮಂಜೂರು ಮಾಡಬೇಡಿ ಎಂದು ಪೊಲೀಸರು ಪರ ವಕೀಲರು ಮನವಿ ಮಾಡಿದರು.  ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ – ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಶಾಕ್‌

    ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಸಿವಿ ಕಾರ್ತಿಕೇಯನ್‌ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿ ವಾಸನ್‌ಗೆ ಇದೊಂದು ಪಾಠವಾಗಬೇಕು. ಕಸ್ಟಡಿಯಲ್ಲಿ ಇರಲಿ ಎಂದು ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲದೇ ವಾಸನ್‌ ಸ್ಟಂಟ್‌ ಮಾಡಿದ ಬೈಕನ್ನು ಸುಟ್ಟು ಹಾಕಬೇಕು. ಯೂಟ್ಯೂಬ್‌ ಚಾನೆಲನ್ನು ಡಿಲೀಟ್‌ ಮಾಡಬೇಕು ಎಂದು ಖಾರವಾಗಿ ಹೇಳಿದರು. ಈ ಸಂದರ್ಭದಲ್ಲಿ ವಾಸನ್ ಅವರ ಕೋರಿಕೆಯಂತೆ ವೈದ್ಯಕೀಯ ಸಹಾಯವನ್ನು ಒದಗಿಸುವಂತೆ ನ್ಯಾಯಾಲಯವು ಆದೇಶಿಸಿತು. ಕೋರ್ಟ್‌ ಈ ಹಿಂದೆ ಎರಡು ಬಾರಿ ವಾಸನ್‌ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

    ಟಿಟಿಎಫ್ ವಾಸನ್ ಅವರು ತಮ್ಮ ಟ್ವಿನ್ ಥ್ರಾಟ್ಲರ್‌ ಚಾನೆಲ್‌ನಲ್ಲಿ ಬೈಕಿಂಗ್ ವೀಡಿಯೊಗಳಿಗೆ ಪ್ರಸಿದ್ಧರಾಗಿದ್ದಾರೆ. ಶೀಘ್ರದಲ್ಲೇ ಅವರು ಕಾಲಿವುಡ್‌ಗೆ ಎಂಟ್ರಿಯಾಗಬೇಕಿತ್ತು. ಸೆಲ್ ಆಮ್ ನಿರ್ದೇಶನದ ‘ಮಂಜಲ್ ವೀರನ್’ ಚಿತ್ರದ ಮೂಲಕ ಪಾದಾರ್ಪಣೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಕಳೆದ ತಿಂಗಳು ವಾಸನ್ ಅವರು ತಮ್ಮ ಐಷಾರಾಮಿ ಬೈಕ್‌ನಲ್ಲಿ ವ್ಹೀಲಿಂಗ್ ಮಾಡಲು ಪ್ರಯತ್ನಿಸಿದಾಗ ರಸ್ತೆ ಅಪಘಾತಕ್ಕೀಡಾಗಿದ್ದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಷ್ಟ್ರೀಯ ಹೆದ್ದಾರಿಯ ನಡು ರಸ್ತೆಯಲ್ಲಿ ಬೈಕ್ ವ್ಹೀಲಿಂಗ್, 5 ಬೈಕ್ ಸೀಜ್

    ರಾಷ್ಟ್ರೀಯ ಹೆದ್ದಾರಿಯ ನಡು ರಸ್ತೆಯಲ್ಲಿ ಬೈಕ್ ವ್ಹೀಲಿಂಗ್, 5 ಬೈಕ್ ಸೀಜ್

    ಚಿಕ್ಕಮಗಳೂರು: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದ 5 ಬೈಕ್‍ಗಳನ್ನು ಸಖರಾಯಪಟ್ಟಣ ಪೊಲೀಸರು ಸೀಜ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

    ನಗರದಲ್ಲಿ ಮಧ್ಯಾಹ್ನ 12 ಗಂಟೆಗೆ 5 ಬೈಕ್‍ಗಳಲ್ಲಿ 10 ಯುವಕರು ನಡುರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದಾರೆ. ಆ ಬೈಕ್‍ಗಳು ಚಿಕ್ಕಮಗಳೂರು ನಗರ ದಾಟಿ ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣಾ ವ್ಯಾಪ್ತಿಗೆ ಹೋಗುವಷ್ಟರಲ್ಲಿ ಸಖರಾಯಪಟ್ಟಣ ಪೊಲೀಸರು ಬೈಕ್‍ಗಳನ್ನು ಸೀಜ್ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಏರಿ, ಎಐಟಿ ವೃತ್ತ ಹಾಗೂ ಜಿಪಂ ರಸ್ತೆಯಲ್ಲಿ ಯುವಕರು ರೇಸ್‍ನಲ್ಲಿ ವ್ಹೀಲಿಂಗ್ ಮಾಡಿದ್ದರು. ಬೈಕ್‍ಗಳನ್ನು ವೇಗ ಹಾಗೂ ಅಬ್ಬರ ಕಂಡ ಇತರೆ ವಾಹನಗಳ ಸವಾರರು ಆತಂಕದಿಂದ ತಮ್ಮ ವಾಹನಗಳನ್ನು ರಸ್ತೆ ಬದಿಗೆ ನಿಲ್ಲಿಸಿಕೊಂಡು ಅವರು ಹೋದ ಮೇಲೆ ಹೋಗಿದ್ದಾರೆ.

    ಯುವಕರ ಈ ಬೈಕ್ ವ್ಹೀಲಿಂಗ್ ದೃಶ್ಯವನ್ನು ಸ್ಥಳೀಯ ವಾಹನ ಸವಾರರು ರೆಕಾರ್ಡ್ ಮಾಡಿದ್ದರು. ಮಧ್ಯಾಹ್ನ ರಸ್ತೆ ಮಧ್ಯೆಯೇ ಈ ರೀತಿ ಬೈಕ್ ವ್ಹೀಲಿಂಗ್ ಮಾಡುವುದನ್ನು ಕಂಡು ಸಾರ್ವಜನಿಕರು ಇವರಿಗೆ ಯಾರ ಭಯವೂ ಇಲ್ಲ. ಹೇಳೋರು-ಕೇಳೋರು ಯಾರಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ: ಹೆದ್ದಾರಿಯಲ್ಲಿ ಗಜಪಡೆ ಹಾವಳಿ – ಕಾರಿನ ಮೇಲೆ ದಾಳಿ, ಚಾಲಕ ಜಸ್ಟ್ ಮಿಸ್

    ಯುವಕರು ಇಂತಹ ಮೋಜು-ಮಸ್ತಿನ ಹುಚ್ಚಾಟದಿಂದ ಯಾರಿಗಾದರೂ ಡಿಕ್ಕಿ ಹೊಡೆದರೆ ಏನಾಗಬಹುದು ಎಂದು ಗಾಬರಿಯಾಗಿದ್ದರು. ಬೇರೆಯವರಿಗೆ ತೊಂದರೆಯಾಗುವುದರ ಜೊತೆ ವ್ಹೀಲಿಂಗ್ ಮಾಡುವಾಗ ಬೈಕಿನಲ್ಲಿ ಬಿದ್ದರೆ ಅವರಿಗೂ ಕೈಕಾಲು ಮುರಿದು ಹೋದರೆ ಹೇಗೆ ಎಂದು ಜನರೇ ಆತಂಕಕ್ಕೀಡಾಗಿದ್ದರು. ಆದರೆ ಕೂಡಲೇ ಪೊಲೀಸರು ಅವರನ್ನು ಬಂಧಿಸಿ ಗಾಡಿಗಳನ್ನು ಸೀಜ್ ಮಾಡಿದ್ದರಿಂದ ಸ್ಥಳೀಯರು ಪೊಲೀಸ್ ಇಲಾಖೆ ಭೇಷ್ ಎಂದಿದ್ದಾರೆ. ಇದನ್ನೂ ಓದಿ: ಬೈಕ್‍ಗೆ ಲಾರಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು, ಒಬ್ಬನಿಗೆ ಗಂಭೀರ ಗಾಯ

    Live Tv

  • ಯುವಕರಿಗೆ ಸಂಚಾರಿ ಅರಿವು ಮೂಡಿಸಲು ಮಾಸ್ಟರ್ ಪ್ಲಾನ್ – ಬೈಕ್ ಸೈಲೆನ್ಸರ್ ನಾಶಪಡಿಸಿದ ಪೊಲೀಸರು

    ಯುವಕರಿಗೆ ಸಂಚಾರಿ ಅರಿವು ಮೂಡಿಸಲು ಮಾಸ್ಟರ್ ಪ್ಲಾನ್ – ಬೈಕ್ ಸೈಲೆನ್ಸರ್ ನಾಶಪಡಿಸಿದ ಪೊಲೀಸರು

    ಕೋಲಾರ: ನಗರದಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದ ನೂರಾರು ಬೈಕ್‌ಗಳ ಸೈಲೆನ್ಸರ್‌ಗಳನ್ನು ನಾಶ ಮಾಡುವ ಮೂಲಕ ಪೊಲೀಸರು ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲಾ ರಕ್ಷಣಾಧಿಕಾರಿ ಡಿ ದೇವರಾಜ್ ನೇತೃತ್ವದಲ್ಲಿ ಪೊಲೀಸರ ತಂಡ ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜು ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬೈಕ್ ಸೈಲೆನ್ಸರ್‌ಗಳನ್ನು ನಾಶ ಮಾಡಿದರು. ಭಾರೀ ಕರ್ಕಶ ಸದ್ದು ಹಾಗೂ ವ್ಹೀಲಿಂಗ್ ಮಾಡುತ್ತಿದ್ದ ಬೈಕ್‌ಗಳ ಸೈಲೆನ್ಸರ್‌ಗಳ ಮೇಲೆ ರೋಡ್ ರೋಲರ್ಸ್ ಹರಿಸಿ ನಾಶಪಡಿಸಲಾಯಿತು. ಇದನ್ನೂ ಓದಿ: ಸಮಾನತೆಯ ಸಂದೇಶದೊಂದಿಗೆ ವಿದ್ಯಾರ್ಥಿನಿಯರಿಂದ ಬೈಕ್ ರ‍್ಯಾಲಿ

    ಕಳೆದ ಒಂದೂವರೆ ತಿಂಗಳನಿಂದ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 85 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದರು. ವ್ಹೀಲಿಂಗ್ ಮಾಡುವವರಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದ್ದು, ಕೋಲಾರ ಗ್ರಾಮಾಂತರ ಪೊಲೀಸರು ವಿಶೇಷ ರೈಡ್ ಮಾಡಿದ್ದರು. ಅದರಂತೆ ಸುಮಾರು 1.85 ಲಕ್ಷ ರೂ. ದಂಡ ಹಾಕಿ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದರು.

    ಯುವಕರು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ವ್ಹೀಲಿಂಗ್ ಮಾಡಿದವರ ಬೈಕ್ ಸೀಜ್ ಮಾಡಿ ಐಪಿಸಿ ಸೆಕ್ಷನ್ ಪ್ರಕಾರ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು. ಮುಂದೆ ಅಂತಹ ಸೈಲೆನ್ಸರ್‌ಗಳ ಮಾರಾಟ ಮಾಡುವವರ ಮೇಲೂ ನಿಗಾ ಇಟ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ: ಡೀಮ್ಡ್ ಅಧ್ಯಕ್ಷ

    ಟ್ರಾಫಿಕ್ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಬಾಡಿ ಕ್ಯಾಮೆರಾ ಅಳವಡಿಸಲಾಗಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರ ಮೇಲೆ ನಿಗಾ ಇಡಲಾಗುವುದು. ಹೀಗಾಗಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕೆಂದು ಕೋಲಾರ ಎಸ್ಪಿ ದೇವರಾಜ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ಬೈಕ್‌ ಮೇಲೆ ಒಂದೇ ಕಾಲಿನಲ್ಲಿ ನಿಂತು ಯುವಕರ ಹುಚ್ಚಾಟ

    ಬೈಕ್‌ ಮೇಲೆ ಒಂದೇ ಕಾಲಿನಲ್ಲಿ ನಿಂತು ಯುವಕರ ಹುಚ್ಚಾಟ

    ಕೋಲಾರ: ಎಷ್ಟೇ ಅಪಘಾತಗಳು ಸಂಭವಿಸಿ ಪ್ರಾಣಾಹಾನಿಯಾದರೂ ಯುವಕರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ಬೈಕ್ ವ್ಹೀಲಿಂಗ್ ಹುಚ್ಚಾಟ ನಿಂತಿಲ್ಲ. ಕೋಲಾರ ಜಿಲ್ಲೆಯಲ್ಲಿ ಸಹ ವ್ಹೀಲಿಂಗ್ ಗುಂಪುಗಳ ಕಿರಿಕಿರಿ ಮಿತಿಮೀರಿದೆ.

    ಬೆಂಗಳೂರು – ತಿರುಪತಿ ರಾಷ್ಟ್ರೀಯ ಹೆದ್ದಾರಿಯ ನರಸಾಪುರ ಕೈಗಾರಿಕಾ ವಲಯದ ಬಳಿ ಯುವಕರ ಗುಂಪು ಈ ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿ ಕಿರಿ ಮಾಡುತ್ತಿರುವ ಬಗ್ಗೆ ದೂರು ಬಂದಿದೆ.

    ಬೈಕ್ ಮೇಲೆ ಒಂದು ಕಾಲಿನಲ್ಲಿ‌ ನಿಂತು ಒಂದೇ ಚಕ್ರದಲ್ಲಿ ಚಲಿಸುವ ಬೈಕ್ ಸವಾರನ ವೀಲಿಂಗ್‌ ದೃಶ್ಯಾವಳಿ ಮೊಬೈಲಿನಲ್ಲಿ ಸೆರೆಯಾಗಿದೆ. ಇದರಿಂದ ಇತರೆ ಅಕ್ಕಪಕ್ಕದ ವಾಹನ ಚಾಲಕರು ಆತಂಕದಲ್ಲಿಯೇ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಜಿಲ್ಲೆಯ ಪೊಲೀಸರು ಈ ಬೈಕ್ ವ್ಹೀಲಿಂಗ್ ಪುಂಡರನ್ನು ಎಚ್ಚರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ರ‍್ಯಾಶ್ ಡ್ರೈವಿಂಗ್ ಮಾಡಿದ್ರೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ

    ರ‍್ಯಾಶ್ ಡ್ರೈವಿಂಗ್ ಮಾಡಿದ್ರೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ

    ಬೆಂಗಳೂರು: 4 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ. ಇಲ್ಲದಿದ್ರೆ ದಂಡದ ಜೊತೆ ಡಿಎಲ್ ಸಸ್ಪೆಂಡ್ ಮಾಡುವ ಆದೇಶ ಹೊರಡಿಸಿದ್ದ ಸಾರಿಗೆ ಇಲಾಖೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ರ‍್ಯಾಶ್ ಡ್ರೈವಿಂಗ್ ಮಾಡುವವರಿಗೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ ವಿಧಿಸುವ ಸಂಬಂಧ ಆದೇಶ ಹೊರಡಿಸಿದೆ.

    ವೀಲಿಂಗ್, ಸೈಲೆನ್ಸರ್ ಅಲ್ಟ್ರೇಷನ್, ಅಡ್ಡಾದಿಡ್ಡಿ ಚಾಲನೆ, ಅಪಾಯಕಾರಿ ಚಾಲನೆ ಮಾಡಿದರೆ ಅಪರಾಧ ದಂಡ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್ 107ರ ಆಡಿ ಕೇಸ್ ದಾಖಲಿಸಲಾಗುತ್ತಿದೆ. ಮೊದಲ ಬಾರಿ ನಿಯಮ ಉಲ್ಲಂಘನೆ ಮಾಡಿದರೆ 50 ಸಾವಿರದಿಂದ 2 ಲಕ್ಷ ಮೊತ್ತದ ಬಾಂಡ್ ಬರೆದು ಕೊಡಬೇಕಾಗುತ್ತದೆ. ಆರು ತಿಂಗಳ ಒಳಗೆ ಮತ್ತೆ ನಿಯಮ ಉಲ್ಲಂಘಿಸಿದರೆ ಈ ಮೊತ್ತ ಭರಿಸಬೇಕು. ಜೊತೆಗೆ ಜೈಲು ಸೇರಬೇಕಾಗುತ್ತದೆ. ಇದನ್ನೂ ಓದಿ: ಬೆಂಗಳೂರಲ್ಲಿ ದಂಡ ದಂಡ – ಪೊಲೀಸ್ , ಮಾರ್ಷಲ್ ಆಯ್ತು ಈಗ ಆರ್‌ಟಿಒ ಸರದಿ

    ಸಿಆರ್‌ಪಿಸಿ 107ರ ಆಡಿ ಕೇಸ್ ದಾಖಲು ಮಾಡಿದರೆ ಪಾಸ್ ಪೋರ್ಟ್ ಕ್ಲಿಯರ್ ಆಗುವುದಿಲ್ಲ. ವಿದ್ಯಾಭ್ಯಾಸ, ವಿದೇಶಿ ಪ್ರಯಾಣಕ್ಕೆ ಕುತ್ತು ಬರಲಿದೆ. ಕಳೆದು ಒಂದು ವಾರದಲ್ಲಿ 14 ಮಂದಿ ವಾಹನ ಸವಾರರ ಮೇಲೆ ಸಿಆರ್‌ಪಿಸಿ 107ರ ಅಡಿ ಕೇಸ್ ದಾಖಲಾಗಿದೆ.

  • ಯುವಕನ ವೀಲಿಂಗ್ ಹುಚ್ಚಾಟಕ್ಕೆ ಡ್ರ್ಯಾಗರ್ ಹಿಡಿದು ಸಾಥ್ ಕೊಟ್ಟ ಯುವತಿ

    ಯುವಕನ ವೀಲಿಂಗ್ ಹುಚ್ಚಾಟಕ್ಕೆ ಡ್ರ್ಯಾಗರ್ ಹಿಡಿದು ಸಾಥ್ ಕೊಟ್ಟ ಯುವತಿ

    ಬೆಂಗಳೂರು: ಕತ್ತಲಾದ ಮೇಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡ ಪೋಕರಿಗಳ ವರ್ತನೆ ನೋಡಿದರೆ ಸಾಮಾನ್ಯ ಜನರಿಗೆ ಭಯವಾಗುತ್ತದೆ. ಆದರೆ ಇಲ್ಲೊಬ್ಬ ಯುವಕ ಯುವತಿಯ ವರ್ತನೆ ನೋಡಿ ನೆಟ್ಟಗರು ಶಾಕ್ ಆಗಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲಿಂಗ್ ಮಾಡುವುದು ಅಪರಾಧವಾದರೂ ಯುವಕರು ಶೋಕಿಗಾಗಿ ವೀಲಿಂಗ್ ಮಾಡುತ್ತಿರುತ್ತಾರೆ. ಆದರೆ ಯುವಕ ವೀಲಿಂಗ್ ಮಾಡುವಾಗ ಬೈಕ್ ಹಿಂಬದಿ ಕುಳಿತಿದ್ದ ಯುವತಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ಭಯ ಹುಟ್ಟಿಸುವಂತೆ ಪೋಸ್ ನೀಡಿದ್ದಾಳೆ. ಯುವತಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.facebook.com/100011448424143/videos/1379779235747011/?extid=IDHNaMLZjbwg9lQE

    ಬೈಕ್ ಹಿಂಬದಿಯಲ್ಲಿ ಡ್ರ್ಯಾಗರ್ ಹಿಡಿದು ಯುವತಿ ಪೋಸ್ ಕೊಟ್ಟ ವಿಡಿಯೋ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಬೈಕ್ ವೀಲಿಂಗ್‍ನಲ್ಲಿ ತೊಡಗಿರುವ ಯುವಕನ ವರ್ತನೆ ಕೂಡ ಭಯಾನಕವಾಗಿದೆ. ವಿಡಿಯೋದಲ್ಲಿ ಮಾಸ್ಕ್ ಧರಿಸಿ ಕುಳಿತಿರುವ ಯುವತಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ಬಿಂದಾಸ್ ಆಗಿ ಪೋಸ್ ನೀಡಿದ್ದಾಳೆ.

    ಕೂಡಲೇ ಸಂಬಂಧ ಪಟ್ಟ ಪೊಲೀಸರು ಬೈಕ್ ಅನ್ನು ಪತ್ತೆಹಚ್ಚಿ ಆ ಯುವಕ ಹಾಗೂ ಯುವತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇತ್ತ ರಾತ್ರಿ ವೇಳೆ ನಡೆಯುವ ಈ ಭಯಾನಕ ಬೈಕ್ ರೈಡ್‍ಗೆ ಕಡಿವಾಣವನ್ನು ಪೊಲೀಸರು ಹಾಕಬೇಕಿದೆ.

  • ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡ್ತಿದ್ದವರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು – 27 ಮಂದಿ ಅರೆಸ್ಟ್

    ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡ್ತಿದ್ದವರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು – 27 ಮಂದಿ ಅರೆಸ್ಟ್

    ಬೆಂಗಳೂರು: ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡಿಕೊಂಡು ಜನರಿಗೆ ತೊಂದರೆ ಕೊಟ್ಟು, ಹಾವಳಿ ಇಡುತ್ತಿದ್ದವರಿಗೆ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

    ವೀಲಿಂಗ್ ಮಾಡಿಕೊಂಡು ತೊಂದರೆ ಕೊಡುತ್ತಿದ್ದ ಒಟ್ಟು 27 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ವೀರೇಶ್ ಆರ್, ಕುಶಾಲ್ ಆರ್, ದೀಕ್ಷಿತ್ ಆಚಾರ್ಯ, ಶಶಾಂಕ್ ಡಿ, ಸಾಗರ್ ಎಲ್ ದೀಪು, ಅಭಿಷೇಕ್ ಎಚ್.ಆರ್, ನರೇಂದ್ರ ಎನ್, ವಿಜಯ್ ಕುಮಾರ್ ಎನ್.ಎಸ್, ಸಂಜಯ್ ಸೇರಿದಂತೆ 27 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ವೀಲಿಂಗ್ ಮಾಡಲು ಬಳಸುತ್ತಿದ್ದ ಒಟ್ಟು 27 ಬೈಕ್‍ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಸೋಂಪುರ ಟೋಲ್ ಕಡೆಯಿಂದ ಹೊಸಕೆರೆಹಳ್ಳಿ ರಿಂಗ್ ರೋಡ್ ಕಡೆ ದಿನನಿತ್ಯ ವೀಲಿಂಗ್ ಮಾಡಿ ಬಂಧಿತರು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಆರೋಪಿಗಳ ವೀಲಿಂಗ್ ಹಾವಳಿಯಿಂದ ಬೇಸತ್ತ ಜನರು ಪೊಲೀಸರಿಗೆ ದೂರು ನೀಡಿದ್ದರು. ಸಾರ್ವಜನಿಕ ದೂರನ್ನ ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಮಾಡಿ ವೀಲಿಂಗ್ ಹಾವಳಿಕೊರರನ್ನ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ 189 ಐಎಂವಿ ಕಾಯ್ದೆಯಡಿಯಲ್ಲಿ ಬನಶಂಕರಿ ಬ್ಯಾಟರಾಯನಪುರ, ಬಸವನಗುಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

  • ‘ವೀಲಿಂಗ್ ಮಾಡೋದಕ್ಕೆ ಡಿಸ್ಟರ್ಬ್ ಮಾಡ್ತೀಯಾ’ – KSRTC ಬಸ್ ಹತ್ತಿ ಚಾಲಕನಿಗೆ ವಿದ್ಯಾರ್ಥಿ ಅವಾಜ್

    ‘ವೀಲಿಂಗ್ ಮಾಡೋದಕ್ಕೆ ಡಿಸ್ಟರ್ಬ್ ಮಾಡ್ತೀಯಾ’ – KSRTC ಬಸ್ ಹತ್ತಿ ಚಾಲಕನಿಗೆ ವಿದ್ಯಾರ್ಥಿ ಅವಾಜ್

    ಬೆಂಗಳೂರು: ವೀಲಿಂಗ್ ಮಾಡೋದಕ್ಕೆ ಡಿಸ್ಟರ್ಬ್ ಮಾಡ್ತೀಯಾ ಎಂದು ಕೆಎಸ್ಆರ್‌ಟಿಸಿ ಬಸ್ ಅಡ್ಡಗಟ್ಟಿ ವಿದ್ಯಾರ್ಥಿಯೋರ್ವ ಚಾಲಕನಿಗೆ ಅವಾಜ್ ಹಾಕಿ, ಚಾಲಕನ ಸೀಟಿನ ಮೇಲೆ ಹತ್ತಿ ಹಲ್ಲೆಗೆ ಮುಂದಾದ ಘಟನೆ ಕನಕಪುರದಲ್ಲಿ ನಡೆದಿದೆ.

    ವೀಲಿಂಗ್ ಮಾಡಿ ಕೀಟಲೆ ಕೊಡ್ತಿದ್ದ ವಿದ್ಯಾರ್ಥಿಯ ಬೈಕ್ ಅನ್ನು ಕೆಎಸ್ಆರ್‌ಟಿಸಿ ಬಸ್ ಓವರ್ ಟೇಕ್ ಮಾಡಿ ಮುಂದಕ್ಕೆ ಸಾಗಿತ್ತು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿ ಬಸ್ ಅಡ್ಡಗಟ್ಟಿ, ಬಸ್ ಹತ್ತಿ ಚಾಲಕನ ಜೊತೆಗೆ ಜಗಳ ಮಾಡಿದ್ದಲ್ಲದೆ ಆತನ ಮೇಲೆ ಹಲ್ಲೆ ನಡೆಸೋದಕ್ಕೆ ಮುಂದಾಗಿದ್ದಾನೆ.

    ಈ ವೇಳೆ ಬಾ ಪೊಲೀಸರ ಬಳಿ ಮಾತನಾಡು ನೀನು ಎಂದು ಚಾಲಕ ಬಸ್ ಚಲಾಯಿಸಿದ್ದು, ಚಾಲಕನ ಸೀಟ್ ಬಳಿಯ ಕಿಟಕಿ ತೆಗೆದು ವಿದ್ಯಾರ್ಥಿ ಬಸ್‍ನಿಂದ ಜಿಗಿದಿದ್ದಾನೆ. ಬಳಿಕ ಬಸ್ಸಿನ ಫೋಟೋ, ವಿಡಿಯೋ ತೆಗೆದುಕೊಂಡು ಬಸ್ ಗಾಜು ಒಡೆಯಲು ಮುಂದಾಗಿದ್ದಾನೆ. ವಿದ್ಯಾರ್ಥಿಯ ರಂಪಾಟಕ್ಕೆ ರಸ್ತೆಯ ಮಧ್ಯೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದ್ದು, ಪ್ರಯಾಣಿಕರು ಹಾಗೂ ಇತರೆ ವಾಹನ ಸವಾರರು ವಿದ್ಯಾರ್ಥಿಯನ್ನು ಎಷ್ಟೇ ಸಮಾಧಾನ ಮಾಡಿದರೂ ಆತ ಮಾತ್ರ ಯಾರ ಮಾತನ್ನು ಕೇಳದೆ ಗಲಾಟೆ ಮಾಡಿದ್ದಾನೆ.

    ಕೇವಲ ಬಸ್ ಚಾಲಕನಿಗೆ ಮಾತ್ರವಲ್ಲದೆ ಸಿಕ್ಕ ಸಿಕ್ಕವರಿಗೆ ಅವಾಜ್ ಹಾಕಿ ಹೊಡೆಯೋದಕ್ಕೆ ಮುಂದಾಗಿದ್ದಾನೆ. ಕಿರಿಕ್ ವಿದ್ಯಾರ್ಥಿ ರಂಪಾಟ ನೋಡಲು ಆಗದೇ ಕೊನೆಗೆ ಬೇರೆ ದಾರಿ ಕಾಣದ ಬಸ್ ಚಾಲಕ ಪೊಲೀಸರಿಗೆ ಈತನ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆ. ಈ ದೃಶ್ಯವನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.

  • ಯುವಕರ ವೀಲಿಂಗ್‍ಗೆ ಸಹೋದರರಿಬ್ಬರ ದುರ್ಮರಣ

    ಯುವಕರ ವೀಲಿಂಗ್‍ಗೆ ಸಹೋದರರಿಬ್ಬರ ದುರ್ಮರಣ

    ಕೋಲಾರ: ಬೈಕ್ ವೀಲಿಂಗ್ ಮಾಡಿಕೊಂಡು ಬಂದ ಯುವಕರ ಬೈಕ್ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ದಿಂಬ ಗೇಟ್ ಬಳಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಬಂಗಾರಪೇಟೆ ತಾಲೂಕು ಮರಗಲ್ ಮೂಲದ ಅಣ್ಣ- ತಮ್ಮಂದಿರಾದ ನೂರ್ ಖಾನ್(60) ಮತ್ತು ಜಮೀಲ್‍ಖಾನ್(58) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

    ಯುವಕರು ವೀಲಿಂಗ್ ಮಾಡಿಕೊಂಡು ಬಂದು ಅಣ್ಣ-ತಮ್ಮ ಇದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಇಬ್ಬರು ಸಹೋದರರು ಮೃತಪಟ್ಟಿದ್ದಾರೆ. ಮೃತರ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.

    ವೀಲಿಂಗ್ ಮಾಡಿಕೊಂಡು ಬಂದ ಯುವಕರಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೀಲಿಂಗ್ ಮಾಡ್ತಿದ್ದ ನಾಲ್ವರು ಯುವಕರಿಗೆ ಗ್ರಾಮಸ್ಥರಿಂದ ಗೂಸಾ

    ವೀಲಿಂಗ್ ಮಾಡ್ತಿದ್ದ ನಾಲ್ವರು ಯುವಕರಿಗೆ ಗ್ರಾಮಸ್ಥರಿಂದ ಗೂಸಾ

    ಬೆಂಗಳೂರು: ವೀಲಿಂಗ್ ಮಾಡುತ್ತಿದ್ದ ನಾಲ್ವರಿಗೆ ಗ್ರಾಮಸ್ಥರು ಗೂಸಾ ಕೊಟ್ಟ ಘಟನೆ ಕೆಂಗೇರಿಯ ಹೆಮ್ಮಿಗೆಪುರ ಗ್ರಾಮದಲ್ಲಿ ನಡೆದಿದೆ.

    ಕೆಎ 01 ಜೆಡಿ 4109 ಹಾಗೂ ಕೆಎ 05 ಕೆಪಿ 4474 ನಂಬರಿನ ಸ್ಕೂಟಿಗಳಲ್ಲಿ ಯುವಕರು ಇಂದು ಮಧ್ಯಾಹ್ನ ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದರು. ಇದನ್ನು ನೋಡಿದ ಹೆಮ್ಮಿಗೆಪುರದ ಗ್ರಾಮಸ್ಥರು ಯುವಕರನ್ನು ತಡೆದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಮ್ಮೆ ವೀಲಿಂಗ್ ಮಾಡದಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ಗ್ರಾಮಸ್ಥರಿಂದ ಗೂಸಾ ತಿಂದ ಯುವಕರ ಹೆಸರು ತಿಳಿದು ಬಂದಿಲ್ಲ. ಗ್ರಾಮಸ್ಥರು ಯುವಕರನ್ನು ಥಳಿಸಿದ್ದು ಅಷ್ಟೇ ಅಲ್ಲದೆ ಸ್ಕೂಟಿಗಳಿಗೆ ಕಲ್ಲು, ಕೋಲಿನಿಂದ ಹೊಡೆದು ಜಖಂಗೊಳಿಸಿದ್ದಾರೆ.

    ಇತ್ತೀಚೆಗಷ್ಟೇ ಹೆಮ್ಮಿಗೆಪುರ ಗ್ರಾಮದ ಸಿದ್ದಪ್ಪ ಎಂಬವರಿಗೆ ಸ್ಕೂಟಿ ಮೂಲಕ ವೀಲಿಂಗ್ ಮಾಡುತ್ತಿದ್ದ ಯುವಕರ ಗುದ್ದಿದ್ದರು. ಪರಿಣಾಮ ಸಿದ್ದಪ್ಪ ಅವರ ಕಾಲು ಮುರಿದಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ವೀಲಿಂಗ್ ಮಾಡುವ ಯುವಕರಿಗೆ ಪಾಠ ಕಲಿಸಲು ಕಾಯುತ್ತಿದ್ದರು. ಭಾನುವಾರ ಮಧ್ಯಾಹ್ನ ಕೈಗೆ ಸಿಕ್ಕ ನಾಲ್ಕು ಜನ ಯುವಕರಿ ಹಿಗ್ಗಾಮುಗ್ಗಾ ಥಳಿಸಿ ಬುದ್ಧಿ ಕಲಿಸಿದ್ದಾರೆ.