Tag: ವೀರ ಮದಕರಿ ನಾಯಕ

  • ‘ರಾಜ ವೀರಮದಕರಿ ನಾಯಕ’ ಚಿತ್ರ ನಿಲ್ಲಲು ಕಾರಣ ಯಾರು?: ದರ್ಶನ್ ಸ್ಫೋಟಕ ಹೇಳಿಕೆ

    ‘ರಾಜ ವೀರಮದಕರಿ ನಾಯಕ’ ಚಿತ್ರ ನಿಲ್ಲಲು ಕಾರಣ ಯಾರು?: ದರ್ಶನ್ ಸ್ಫೋಟಕ ಹೇಳಿಕೆ

    ಅಂದುಕೊಂಡಂತೆ ಆಗಿದ್ದರೆ ಕಾಟೇರ ಸಿನಿಮಾಗೂ ಮೊದಲು ‘ರಾಜ ವೀರಮದಕರಿ ನಾಯಕ’ (Veera Madakari Nayak) ಸಿನಿಮಾ ರೆಡಿ ಆಗಬೇಕಿತ್ತು. ಚಿತ್ರಕ್ಕೆ ಸರಳವಾಗಿ ಮುಹೂರ್ತ ಮಾಡಿ, ಹತ್ತು ದಿನಗಳ ಕಾಲ ಶೂಟಿಂಗ್ ಕೂಡ ಮಾಡಲಾಗಿತ್ತು. ದರ್ಶನ್ (Darshan) ಅವರಿಗಾಗಿಯೇ ರಾಜೇಂದ್ರ ಸಿಂಗ್ ಬಾಬು  (Rajendra Singh Babu)ಸ್ಕ್ರಿಪ್ಟ್ ಬರೆದು, ನಿರ್ದೇಶನಕ್ಕೆ ಮುಂದಾಗಿದ್ದರು. ರಾಕ್ ಲೈನ್ ವೆಂಕಟೇಶ್ (Rock Line Venkatesh) ಈ ಸಿನಿಮಾದ ನಿರ್ಮಾಪಕರು. ಆದರೆ, ದಿಢೀರ್ ಅಂತ ಸಿನಿಮಾ ನಿಂತಿತು. ಈ ಕುರಿತಂತೆ ದರ್ಶನ್ ಮಾತನಾಡಿದ್ದಾರೆ.

    ತಮ್ಮದೇ ಅಭಿಮಾನಿಗಳ ಸಂಘದ ಡಿ ಕಂಪೆನಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ದರ್ಶನ್, ವೀರ ಮದಕರಿ ನಾಯಕ ಸಿನಿಮಾ ನಿಲ್ಲಲ್ಲು ಕಾರಣ ಯಾರು? ಯಾಕೆ ಶೂಟಿಂಗ್ ಅನ್ನು ಸ್ಥಗಿತಗೊಳಿಸಲಾಯಿತು ಎನ್ನುವ ಕುರಿತು ಬಹಿರಂಗ ಪಡಿಸಿದ್ದಾರೆ. ಹತ್ತು ದಿನಗಳ ಕಾಲ ಶೂಟಿಂಗ್ ಮಾಡಲಾದ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ. ದರ್ಶನ್ ಆಡಿದ ಮಾತು ಅವರ ಪ್ರಮಾಣಿಕತೆಗೆ ಸಾಕ್ಷಿಯಾಗಿದೆ.

    ಸಿನಿಮಾ ಯಾಕೋ ಹಿಡಿತಕ್ಕೆ ಸಿಗಲಿಲ್ಲ. ಹತ್ತು ದಿನಗಳ ಕಾಲ ಶೂಟಿಂಗ್ ಕೂಡ ಆಗಿತ್ತು. ವೀರ ಮದಕರಿ ನಾಯಕ ಒಂದು ಜನಾಂಗದ ದೇವರು. ಅವರಿಗೆ ಅಪಚಾರ ಮಾಡಬಾರದು. ಹಾಗಾಗಿ ನಾನೇ ಸಿನಿಮಾ ನಿಲ್ಲಿಸುವಂತೆ ಹೇಳಿದೆ. ಹೇಗೇಗೋ ಸಿನಿಮಾ ಮಾಡಿ ಬೈಯಿಸಿಕೊಳ್ಳೋಕ್ಕಿಂತ ಹಿಡಿತಕ್ಕೆ ಸಿಕ್ಕಾಗ ಮಾಡೋಣ ಅಂತ ಹೇಳಿದೆ ಎಂದಿದ್ದಾರೆ ದರ್ಶನ್. ಈ ಮೂಲಕ ಸಿನಿಮಾ ನಿಲ್ಲಲು ನಾನೇ ಕಾರಣವೆಂದು ಒಪ್ಪಿಕೊಂಡಿದ್ದಾರೆ.

    ವೀರ ಮದಕರಿ ನಾಯಕ ಸಿನಿಮಾ ನಾನಾ ಕಾರಣಗಳಿಂದಾಗಿ ಸದ್ದು ಮಾಡಿತ್ತು. ನಾಲ್ಕು ವರ್ಷಗಳ ಹಿಂದೆ ಈ ಸುದ್ದಿ ಭಾರೀ ವಿವಾದಕ್ಕೂ ಕಾರಣವಾಗಿತ್ತು. ಈ ಸಿನಿಮಾವನ್ನು ಸುದೀಪ್ ಮಾಡಬೇಕು ಎಂದು ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಮಾತನಾಡಿದ್ದರು. ಆದರೆ, ದರ್ಶನ್ ಅವರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ, ಸಿನಿಮಾ ಆಗಲೇ ಇಲ್ಲ.

  • ದರ್ಶನ್ – ಪ್ರಕಾಶ್ ಪುನರ್ ಮಿಲನ!

    ದರ್ಶನ್ – ಪ್ರಕಾಶ್ ಪುನರ್ ಮಿಲನ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಕೊಂಚ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಇನ್ನೇನು ಗೌರಿ ಗಣೇಶ ಹಬ್ಬ ಮುಗಿಯುತ್ತಲೇ ಆ ಚಿತ್ರದ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ. ರಾಬರ್ಟ್ ಜೊತೆಗೇ ಮತ್ತೊಂದಷ್ಟು ಚಿತ್ರಗಳೂ ಕೂಡಾ ದರ್ಶನ್ ಅವರ ಲಿಸ್ಟಿನಲ್ಲಿ ಸಾಲುಗಟ್ಟಿ ನಿಂತಿವೆ. ಹಾಗಿದ್ದರೂ ಕೂಡಾ ದರ್ಶನ್ ಮತ್ತೊಂದು ಚಿತ್ರವನ್ನೀಗ ಒಪ್ಪಿಕೊಂಡಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ.

    ವರ್ಷಗಳ ಹಿಂದೆ ದರ್ಶನ್ ಅಭಿನಯ ತಾರಕ್ ಚಿತ್ರ ತೆರೆ ಕಂಡಿತ್ತು. ಆ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಮಿಲನ ಪ್ರಕಾಶ್. ಆ ಕಾಲಕ್ಕೆ ದರ್ಶನ್ ಪಕ್ಕಾ ಮಾಸ್ ಚಿತ್ರಗಳತ್ತಲೇ ಹೆಚ್ಚಾಗಿ ಒತ್ತು ನೀಡಿದ್ದರು. ಅಂಥಾ ಹೊತ್ತಿನಲ್ಲಿಯೇ ದರ್ಶನ್ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದ ಫ್ಯಾಮಿಲಿ ಸಬ್ಜೆಕ್ಟಿನ ಕಥೆಯೊಂದಿಗೆ ಪ್ರಕಾಶ್ ಮೋಡಿ ಮಾಡಿದ್ದರು. ಈ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಸೂಪರ್ ಹಿಟ್ ಆಗಿತ್ತು. ಅದರಲ್ಲಿನ ದರ್ಶನ್ ನಟನೆಯಂತೂ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿತ್ತು. ಹೀಗೆ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಕಾಶ್ ದರ್ಶನ್ ಅವರ ಮತ್ತೊಂದು ಚಿತ್ರ ನಿರ್ದೇಶನ ಮಾಡೋದು ಗ್ಯಾರೆಂಟಿ ಎನ್ನಲಾಗುತ್ತಿದೆ.

    ಇದಕ್ಕೆ ದರ್ಶನ್ ಕಡೆಯಿಂದಲೇ ಒಪ್ಪಿಗೆ ಸಿಕ್ಕಿದೆಯಂತೆ. ಪ್ರಕಾಶ್ ಕೂಡಾ ಸಮರ್ಥ ತಂಡದೊಂದಿಗೆ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ತಯಾರಾಗಿದ್ದಾರೆ. ಸದ್ಯದಲ್ಲಿಯೇ ಟೈಟಲ್ ಲಾಂಚ್ ಮಾಡಿ, ಈ ಚಿತ್ರವನ್ನು ಅಧಿಕೃತಗೊಳಿಸಿ ನಂತರ ಉಳಿದ ಕೆಲಸ ಮಾಡೋ ನಿರ್ಧಾರ ಅವರದ್ದು. ಹಾಗಂತ ಈ ಚಿತ್ರ ಈ ಕೂಡಲೇ ಶುರುವಾಗುತ್ತೆ ಅಂತೇನಲ್ಲ. ದರ್ಶನ್ ಈಗ ರಾಬರ್ಟ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾದ ನಂತರ ಒಡೆಯ ಮತ್ತು ವೀರ ಮದಕರಿ ನಾಯಕ ಚಿತ್ರಗಳು ಅವರಿಗಾಗಿ ಕಾದಿವೆ. ಇದಾದ ನಂತರ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರ ಶುರುವಾಗಲಿದೆಯಂತೆ.

  • ಒಂದೇ ಕತೆಯ ಸಿನಿಮಾದಲ್ಲಿ ದರ್ಶನ್, ಸುದೀಪ್- ಅಭಿಮಾನಿಗಳಿಗೆ ಪತ್ರ ಬರೆದ ಕಿಚ್ಚ

    ಒಂದೇ ಕತೆಯ ಸಿನಿಮಾದಲ್ಲಿ ದರ್ಶನ್, ಸುದೀಪ್- ಅಭಿಮಾನಿಗಳಿಗೆ ಪತ್ರ ಬರೆದ ಕಿಚ್ಚ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಒಂದೇ ಕತೆಯ ಸಿನಿಮಾ ಮಾಡುವ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

    ರಾಕ್‍ಲೈನ್ ವೆಂಕಟೇಶ್ ಅವರು ಈಗಾಗಲೇ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ದರ್ಶನ್ ಚಿತ್ರದ ನಾಯಕನಾಗಿ ನಟಿಸುವುದಾಗಿ ಹೇಳಿದ್ದರು. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಹೊಣೆ ಹೊತ್ತಿದ್ದರು. ಇದರ ಬೆನ್ನಲ್ಲೇ ಸುದೀಪ್ ಅವರು ಮದಕರಿ ನಾಯಕನ ಕಥೆ ಇರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    ಸುದೀಪ್ ಅಭಿನಯದ ಈ ಚಿತ್ರಕ್ಕೆ `ದುರ್ಗದ ಹುಲಿ’ ಅಥವಾ `ನಾಯಕ’ ಹೆಸರನ್ನು ಇಡಲು ಚರ್ಚೆ ನಡೆದಿದ್ದು, `ದುರ್ಗದ ಹುಲಿ’ ಟೈಟಲ್ ಅಂತಿಮಗೊಳ್ಳುವ ಸಾಧ್ಯತೆಯಿದೆ. ಕೆಲ ದಿನಗಳಿಂದ ಈ ಚಿತ್ರದ ಕೆಲಸ ಆರಂಭಗೊಂಡಿದ್ದು, ವಿಶೇಷವಾಗಿ ಸುದೀಪ್ ಅವರೇ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ಕಿಚ್ಚ ಸುದೀಪ್ ತಮ್ಮ ಗೂಗಲ್ ಪ್ಲಸ್‍ನಲ್ಲಿ ಅಭಿಪ್ರಾಯ ಬರೆದು ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ಇದನ್ನೂ ಓದಿ: ಒಂದೇ ಕತೆಯ ಸಿನಿಮಾದಲ್ಲಿ ದಚ್ಚು, ಕಿಚ್ಚ- ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದೇನು?

    ಪೋಸ್ಟ್ ನಲ್ಲಿ ಏನಿದೆ?
    ನಾನು ನನ್ನ ತಂಡ ಹಾಗೂ ಕೆಲವು ಲೇಖಕರ ಬಳಗವು ಈಗ್ಗೆ ಒಂದು ಒಂದೂವರೆ ವರ್ಷದಿಂದ `ವೀರ ಮದಕರಿ ನಾಯಕ` ಸಿನಿಮಾ ನಿರ್ಮಾಣದ ದಿಸೆಯಲ್ಲಿ ಕೆಲಸ ಮಾಡುತ್ತಿದೇವೆ. ಈಗಾಗಲೇ ಒಂದಷ್ಟು ಸಂಶೋಧನೆ ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ.

    ವೀರ ಮದಕರಿ ಸಿನಿಮಾ ಮಾಡುವ ನಮ್ಮ ಅಲೋಚನೆ ವರ್ಷಗಳ ಹಿಂದೆಯೇ ಹುಟ್ಟಿದಂತಹುದು. ಆದರೆ ಈ ದಿಸೆಯಲ್ಲಿ ಕೆಲಸ ಮಾಡಲು ಒಂದಷ್ಟು ಸಮಯ ಬೇಕಾಯಿತು. ಹೀಗಾಗಿ ಈ ಸಿನಿಮಾ ನಿರ್ದೇಶನ ಕೂಡ ಮಾಡುವ ಸ್ಫೂರ್ತಿ ಚಿಗುರೊಡೆಸಿತ್ತು.

    ಇತ್ತೀಚೆಗೆ ಇದೇ ಕಥೆಯ ಆಧಾರಿತ ಮತ್ತೊಂದು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ನನಗೆ ನಿಜಕ್ಕೂ ಆಶ್ಚರ್ಯ ಉಂಟು ಮಾಡಿತು. ಸಹಜವಾಗಿಯೇ ನನಗೆ ಇದರಲ್ಲಿ ಏನಿದೆ ಎಂಬ ಪ್ರಶ್ನೆ ಹುಟ್ಟು ಹಾಕಿತು. ಯಾರೇ ಆಗಲೀ ಇತಿಹಾಸದ ವಿಷಯಗಳ ಮೇಲೆ ಸಿನಿಮಾ ನಿರ್ಮಿಸಲು ಅರ್ಹರಿದ್ದಾರೆ.

    ಒಂದೇ ವಿಷಯ, ಒಬ್ಬನೇ ವ್ಯಕ್ತಿಯ ಮೇಲೆ ಈಗಾಗಲೇ ಒಂದಕ್ಕಿಂತ ಹೆಚ್ಚು ಸಿನಿಮಾಗಳು ತೆರೆ ಕಂಡ ಉದಾಹರಣೆಗಳಿವೆ. ನಾನೊಬ್ಬನೇ ಮದಕರಿ ನಾಯಕನ ಪಾತ್ರ ನಿರ್ವಹಿಸಬೇಕು ಎಂಬುದು ಎಷ್ಟು ಸರಿ? ಆತ ಕರ್ನಾಟಕದ ವೀರಪುತ್ರ. ಅವರ ಬಗ್ಗೆ ಸಿನಿಮಾ ಯಾರಾದರೂ ಮಾಡಬಹುದು.

    ರಾಕ್‍ಲೈನ್ ವೆಂಕಟೇಶ್ ಅವರ ಸಿನಿಮಾ ಆಸಕ್ತಿ ಅದ್ವಿತೀಯವಾದದ್ದು. ಇದನ್ನೊಂದು ಅತ್ಯುತ್ತಮ ಚಿತ್ರವಾಗಿ ತೆರೆಯ ಮೇಲೆ ತರುತ್ತಾರೆ ಎಂಬುದಕ್ಕೆ ಅನುಮಾನವೇ ಇಲ್ಲ. ರಾಜೇಂದ್ರ ಸಿಂಗ್ ಬಾಬು ಅವರ ಅನುಭವ ಕೂಡ ಇದರಲ್ಲಿ ಸಮ್ಮಿಲನವಾಗಿದೆ.

    ಆದರೆ ನಾನು ಮತ್ತು ನನ್ನ ತಂಡವು ಮಾಡ ಹೊರಟಿರುವ ಚಿತ್ರಕ್ಕೆ ಇದು ಅಡ್ಡಿಯಾಗುವುದಿಲ್ಲ. ಇದು ನಮ್ಮ ಕನಸೂ ಕೂಡ. ಇದು ಬರೀ ನನ್ನೊಬ್ಬನ ಕನಸಲ್ಲ. ಇಡೀ ತಂಡದ ಕನಸನ್ನು ನಾನು ಭಗ್ನಗೊಳಿಸಲು ಇಚ್ಛಿಸುವುದಿಲ್ಲ. ಇದರ ಬದಲಿಗೆ ಮಾಡಿ ಮಡಿಯುವುದೇ ಮೇಲು. ನಾನೂ ಒಬ್ಬ ಮದಕರಿ!

    ರಾಕ್‍ಲೈನ್ ಅವರ ತಂಡವನ್ನು ನಾನು ಇಂತಹ ಒಳ್ಳೆಯ ಕರ್ನಾಟಕದ ನೆಲದ ಕಥೆಯನ್ನು ಆಯ್ಕೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಅವರಿಗೆ ನನ್ನ ಶುಭಾಶಯಗಳು. ಅದೇ ರೀತಿಯಾಗಿ ನನ್ನ ನಿರ್ಣಯವನ್ನು ನೀವೆಲ್ಲರೂ ಸಮ್ಮತಿಸುತ್ತೀರೆಂದು ನಂಬಿರುವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv