Tag: ವೀರ ಚಕ್ರ ಪ್ರಶಸ್ತಿ

  • ಪಾಕ್‌ ವಿಮಾನವನ್ನು ಉರುಳಿಸಿದ್ದ ಅಭಿನಂದನ್‍ಗೆ ವೀರ ಚಕ್ರ ಪ್ರದಾನ

    ಪಾಕ್‌ ವಿಮಾನವನ್ನು ಉರುಳಿಸಿದ್ದ ಅಭಿನಂದನ್‍ಗೆ ವೀರ ಚಕ್ರ ಪ್ರದಾನ

    ನವದೆಹಲಿ: 2019 ಫೆಬ್ರವರಿಯಲ್ಲಿ ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್ 16 ಅನ್ನು ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್, ಸದ್ಯ ಗ್ರೂಪ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿರುವ ವರ್ಧಮಾನ್ ಅಭಿನಂದನ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ವೀರ ಚಕ್ರ ಪದಕವನ್ನು ನೀಡಿ ಗೌರವಿಸಿದರು.

    ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಧಮಾನ್ ಅಭಿನಂದನ್ ಅವರ ಸಾಹಸ ಮತ್ತು ಸೇವೆಯನ್ನು ಗೌರವಿಸಲಾಯಿತು. ಪರಮವೀರ ಚಕ್ರದ ಬಳಿಕ ವೀರಚಕ್ರ ಮೂರನೇ ಅತ್ಯುನ್ನತ ಶೌರ್ಯ ಪದಕವಾಗಿದೆ. ಈ ಹಿನ್ನೆಲೆ ಅಭಿನಂದನ್ ಅವರಿಗೆ ರಾಮನಾಥ್ ಕೋವಿಂದ್ ಅವರು ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿಯಾಗಿದ್ದರು.

    ಅಭಿನಂದನ್ ಅವರು ಪಾಕಿಸ್ತಾನದ ಅತ್ಯಾಧುನಿಕ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ ಏಕೈಕ ಮಿಗ್-21 ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬೆಳವಣಿಗೆ ಬಳಿಕ ಭಾರತೀಯ ವಾಯುಪಡೆಯು ಯುದ್ಧ ವೀರ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಿತ್ತು. ಇದನ್ನೂ ಓದಿ:  ಲಿಂಗ ತಾರತಮ್ಯವಿಲ್ಲದೇ ಒಂದೇ ರೀತಿ ಸಮವಸ್ತ್ರ ನೀಡಿದ ಕೇರಳ ಶಾಲೆ

    ಭಾರತೀಯ ವಾಯುಪಡೆಯಲ್ಲಿರುವ ಮಿಗ್-21 ವಿಮಾನಗಳು 1960ರ ದಶಕದ ಮಾಡೆಲ್‍ಗಳು. ಈ ವಿಮಾನಗಳನ್ನು ಭಾರತ ಮೇಲ್ದರ್ಜೆಗೇರಿಸಿ ಇನ್ನೂ ಬಳಸುತ್ತಿದೆ. ಆದರೆ ಪಾಕಿಸ್ತಾನದ ಬತ್ತಳಿಕೆಯಲ್ಲಿರುವ ಎಫ್-16 ಅತ್ಯಾಧುನಿಕ ಸೌಲಭ್ಯ ಹೊಂದಿದ ವಿಮಾನವಾಗಿತ್ತು. ಅಂತಹ ವಿಮಾನವನ್ನೇ ಅಭಿನಂದನ್ ಅವರು ಹೊಡೆದುರುಳಿಸಿ ಸಾಹಸ ಮೇರೆದಿದ್ದರು.

    ಅಂದು ಏನಾಗಿತ್ತು?
    ಫೆ.14 ರಂದು ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪರಿಣಾಮ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತ ನೆಲವನ್ನು ಪ್ರವೇಶಿಸಿದ್ದ ಪಾಕ್ ಯುದ್ಧ ವಿಮಾನಗಳು ದಾಳಿ ನಡೆಸಲು ವಿಫಲವಾಗಿ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಎಫ್-16 ವಿಮಾನವನ್ನು ಹೊಡೆದು ಚೇಸ್ ಮಾಡುತ್ತಿದ್ದಾಗ ಮಿಗ್ ವಿಮಾನ ಪತನಗೊಂಡು ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ಧುಮುಕಿದ್ದರು. ಇದನ್ನೂ ಓದಿ:  ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಪತಿರಾಯ ಈಗ ಪೊಲೀಸರ ಅತಿಥಿ

    ಪಾಕ್ ಅಕ್ರಮಿತ ಪ್ರದೇಶದಲ್ಲಿ ಬಿದ್ದ ವೇಳೆ ಅಭಿನಂದನ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದರು. ಅದಕ್ಕೂ ಮುನ್ನವೇ ಸೇನೆಗೆ ಸಂಬಂಧಿಸಿದ್ದ ಮುಖ್ಯ ದಾಖಲೆಗಳು ಪಾಕಿಸ್ತಾನದ ಸೇನೆಗೆ ಸಿಗದಂತೆ ಮಾಡಿ ನಾಶ ಪಡಿಸಿದ್ದರು. ಅಲ್ಲದೇ ಕೆಲ ದಾಖಲೆಗಳನ್ನು ತಾವೇ ನುಂಗಿಹಾಕಿದ್ದರು. ಪಾಕಿಸ್ತಾನದಿಂದ ವಾಪಸ್ ಆದ ಬಳಿಕ ಮಾರ್ಚ್ 2 ರಂದು ಅಭಿನಂದನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆಗಿದ್ದರು. ಆ ಬಳಿಕ ದೆಹಲಿಯ ಸೇನೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು

  • ವಿಂಗ್‍ಕಮಾಂಡರ್ ಅಭಿನಂದನ್ ಹೆಸರು ‘ವೀರ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು

    ವಿಂಗ್‍ಕಮಾಂಡರ್ ಅಭಿನಂದನ್ ಹೆಸರು ‘ವೀರ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು

    ನವದೆಹಲಿ: ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಹೆಸರನ್ನು ಸೇನೆ ‘ವೀರ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು ಮಾಡಲು ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಯುದ್ಧದ ಸಮಯದಲ್ಲಿ ನೀಡುವ ಸೇನೆಯ 3ನೇ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಯುದ್ಧಕಾಲದಲ್ಲಿ ತೋರುವ ಅಪ್ರತಿಮ ಸಾಹಸಕ್ಕೆ ಯೋಧರಿಗೆ ಪರಮವೀರ ಚಕ್ರ, ಮಾಹಾವೀರ ಚಕ್ರ, ವೀರ ಚಕ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಬಾಲಕೋಟ್ ದಾಳಿಯಲ್ಲಿ ಕಾರ್ಯನಿರ್ವಹಿಸಿದ್ದ ಮಿಗ್ ಪೈಲಟ್ ಗಳಿಗೂ ಕೂಡ ‘ವಾಯು ಸೇನಾ ಪದಕ’ ನೀಡಲು ಸೇನೆ ನಿರ್ಧರಿಸಿದೆ ಎಂಬ ಮಾಹಿತಿ ಲಭಿಸಿದೆ.

    ಪಾಕಿಸ್ತಾನದ ಎಫ್ 16 ಯುದ್ಧ ವಿಮಾನಗಳು ಭಾರತ ಗಡಿ ಪ್ರವೇಶ ಮಾಡಿ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಅಭಿನಂದನ್ ಪಾಕ್ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿದ್ದರು. ಇದಕ್ಕೂ ಮುನ್ನ ಭಾರತ ಸೇನೆ ಪಾಕಿಸ್ತಾನ ಬಾಲಕೋಟ್ ಮೇಲೆ ದಾಳಿ ನಡೆಸಿ ಉಗ್ರರ ನೆಲಗಳನ್ನು ಧ್ವಂಸ ಮಾಡಿತ್ತು.

    ಅಭಿನಂದನ್ ವರ್ಗಾವಣೆ: ಇತ್ತ ಅಭಿನಂದನ್ ವರ್ಧಮಾನ್ ಅವರಿಗೆ ಭಾರತೀಯ ವಾಯು ಸೇನೆಯ ಶ್ರೀನಗರ ವಾಯುನೆಲೆಯಿಂದ ವರ್ಗಾವಣೆಯಾಗಿದ್ದು, ದೇಶದ ಮತ್ತೊಂದು ಪ್ರಮುಖ ವಾಯುನೆಲೆಯಾದ ಪಶ್ಚಿಮ ವಲಯಕ್ಕೆ ಅವರನ್ನು ನಿಯೋಜಿಸಲಾಗಿದೆ. ಇದು ಪಾಕಿಸ್ತಾನದ ಗಡಿಯಲ್ಲಿ ಪ್ರಮುಖ ವಾಯುನೆಲೆಯಾಗಿದೆ.

    ಜಮ್ಮು ಕಾಶ್ಮೀರದ ಶ್ರೀನಗರದ ವಾಯುನೆಲೆಯಲ್ಲಿ ಅವರ ಭದ್ರತೆಯ ಕುರಿತು ವ್ಯಕ್ತವಾದ ಆತಂಕದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಶೀಘ್ರದಲ್ಲೇ ಅಭಿನಂದನ್ ಅವರು ವಿಮಾನದ ಕಾಕ್‍ಪಿಟ್ ಏರಲು ಸಿದ್ಧರಾಗಿದ್ದು, ಈ ಕುರಿತ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.