Tag: ವೀರೇಶ್ ಕುರಹಟ್ಟಿ

  • ಉರಿ ಸೆಕ್ಟರ್‌ನಲ್ಲಿ ಉಗ್ರರ ದಾಳಿಗೆ ಮಡಿದ ವೀರ ಯೋಧನ ಅಂತ್ಯಕ್ರಿಯೆ

    ಉರಿ ಸೆಕ್ಟರ್‌ನಲ್ಲಿ ಉಗ್ರರ ದಾಳಿಗೆ ಮಡಿದ ವೀರ ಯೋಧನ ಅಂತ್ಯಕ್ರಿಯೆ

    – ವೀರಯೋಧ ವಿರೇಶ್ ಅಮರ್ ರಹೆ: ಮೊಳಗಿದ ಘೋಷಣೆ
    – ಮಗನನ್ನು ನೆನೆದು ಕಣ್ಣೀರಿಟ್ಟ ತಾಯಿ

    ಗದಗ: ಜಮ್ಮು-ಕಾಶ್ಮಿರದ ಉರಿನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದ ಯೋಧ ವೀರೇಶ್ ಕುರಹಟ್ಟಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ರೋಣ ತಾಲೂಕಿನ ಕರುಮುಡಿ ಗ್ರಾಮದಲ್ಲಿ ನೆರವೇರಿತು.

    ಕರುಮುಡಿ ಗ್ರಾಮದ ಯೋಧ ವೀರೇಶ್ ಕುರಹಟ್ಟಿ (50) ಅವರು ಕಳೆದ 30 ವರ್ಷಗಳಿಂದ ಭಾರತೀಯ ಸೇನೆಯ 18ನೇ ಮರಾಠ ಬಟಾಲಿಯನ್‍ನಲ್ಲಿ ಸೇವೆಸಲ್ಲಿಸುತ್ತಿದ್ದರು. ಇತ್ತೀಚೆಗೆ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಡಿಸೆಂಬರ್ 25ರಂದು ಶ್ರೀನಗರದ ರಾಮಾಪೂರ ಹಾಗೂ ಉರಿ ಸೆಕ್ಟರ್‍ನಲ್ಲಿ ಭಾರತೀಯ ಸೈನಿಕರು ಹಾಗೂ ಪಾಕಿಸ್ತಾನದ ನುಸುಳುಕೊರ ಉಗ್ರರ ಮಧ್ಯೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಗುಂಡು ತಗುಲಿ ಯೋಧ ವೀರೇಶ್ ವೀರಮರಣ ಹೊಂದಿದ್ದಾರೆ.

    ವೀರೇಶ್ ಅವರು ಕಳೆದ ದೀಪಾವಳಿ ಹಬ್ಬಕ್ಕೆ ಊರಿಗೆ ಬಂದು ಕುಟುಂಬದವರೊಂದಿಗೆ ಖುಷಿ ಖುಷಿಯಾಗಿ ಬೆಳಕಿನ ಹಬ್ಬ ಆಚರಿಸಿಹೊಗಿದ್ದರು. ಈಗ ಅವರ ಮನೆ ಬೆಳಕು ನಂದಿಹೋಗಿದ್ದು, ಕುಟುಂಬಕ್ಕೆ ಕತ್ತಲು ಆವರಿಸಿದಂತಾಗಿದೆ. ಸೇನೆಯಲ್ಲಿ ಸುಬೆದಾರ್ ಆಗಿ ಕೆಲಸ ಮಾಡುತ್ತಿದ್ದ ವೀರೇಶ್ ಕುರಹಟ್ಟಿ ನಿವೃತ್ತಿಯಾಗಲು ಕೇವಲ ಮೂರು ತಿಂಗಳು ಮಾತ್ರ ಬಾಕಿ ಇತ್ತು. ನಿವೃತ್ತಿಯಾಗಿ ಊರಿಗೆ ಬರುವ ಮುನ್ನ ಶವವಾಗಿ ತಾಯಿನಾಡಿಗೆ ತೆರಳುತ್ತಿರುವುದು ನಿಜಕ್ಕೂ ದುಃಖದ ಸಂಗತಿ. ವೀರೇಶ್ ಅವರ ಅಗಲಿಕೆಯಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    ಬಡತನ ಕುಟುಂಬವಾದ್ದರಿಂದ ಹೊಟ್ಟೆಬಟ್ಟೆ ಕಟ್ಟಿ ನೌಕರಿ ಮಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಕನಸು, ಛಲ, ಯೊಧ ವೀರೇಶ್ ಅವದ್ದಾಗಿತ್ತು. ವೀರೇಶ್ ಅವರು ಹುತಾತ್ಮರಾಗುವ ಒಂದು ವಾರದ ಮೊದಲು ತಾಯಿ ಕಾಶಮ್ಮ ಅವರಿಗೆ ಫೋನ್ ಮಾಡಿದ್ದರು. ಆದರೆ ಮನೆಯ ಬಳಿಯ ನಾಯಿ ಕೂಗುವ ಶಬ್ಧಕ್ಕೆ ಮಗನ ಧ್ವನಿ ತಾಯಿಗೆ ಕೇಳಿಸಲಿಲ್ಲ. ಅಮ್ಮಾ ಮತ್ತೊಮ್ಮೆ ಫೋನ್ ಮಾಡುತತೇನೆ ಚೆನ್ನಾಗಿರು ಅಂತ ವೀರೇಶ್ ಫೋನ್ ಕಟ್ ಮಾಡಿದ್ದರು. ಅಂದಿನ ಆ ಧ್ವನಿ ತಾಯಿಯ ಕಿವಿನಲ್ಲಿ ಇಂದಿಗೂ ಗುಣಗುಡುತ್ತಿದೆ ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.

    ದೇಶ ಸೇವೆ ಸಾಕು ಬಾ ಮಗ ಅಂತ ತಾಯಿ ಹೇಳಿದಾಗಲೆಲ್ಲಾ, ಆಯಿತು ಅಮ್ಮ ಬೇಗ ಬರುತ್ತೇನೆ ಎಂದು ವಿರೇಶ್ ಹೇಳುತ್ತಿದ್ದರು. ಈಗ ಶವವಾಗಿ ಮನೆಗೆ ಬಂದಿದ್ದಾರೆ. ಮನೆಯ ಒಡೆಯನೇ ಹೋದಮೇಲೆ ನಮಗ್ಯಾರು ಗತಿ ಎಂದು ವೀರೇಶ್ ಅವರ ಕುಟುಂಬ ಕಣ್ಣೀರಿಡುತ್ತಿದೆ. ಪತ್ನಿ ಲಲಿತಾ ಅವರು ಕೂಡ ಎರಡು ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ರೋಧಿಸುತ್ತಿದ್ದಾರೆ. ದೇಶಕ್ಕೆ ಅರ್ಪಣೆಯಾದ ಎನ್ನುವ ಗಟ್ಟಿ ಮನಸ್ಸಿನ ಮಾತು ಮನೆಯವರಿಂದ ಕೇಳಿ ಬರುತ್ತಿದ್ದರೂ, ಒಡಲಾಳದಲ್ಲಿ ಹೇಳಲಾಗದಷ್ಟು ನೋವು ತುಂಬಿದೆ.

    ವೀರಯೋಧ ವೀರೇಶ್ ಅವರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬರುತ್ತಿದ್ದಂತೆ, ಗ್ರಾಮದ ಯುವಕರು ನೂರಾರು ಬೈಕ್‍ಗಳ ಮೂಲಕ ಬೈಕ್ ರ್ಯಾಲಿ ನಡೆಸಿದರು. ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿದರು. ಅಮರ್ ರಹೆ.. ಅಮರ್ ರಹೆ.. ವೀರಯೋಧ ವಿರೇಶ್ ಅಮರ್ ರಹೆ… ಭಾರತ ಮಾತಾಕಿ ಜೈ ಎಂಬ ಘೋಷಣೆ ಕೂಗುತ್ತ ಊರ ತುಂಬೆಲ್ಲಾ ಪಾರ್ಥಿವ ಶರೀರ ಮೆರವಣಿಗೆ ಮಾಡಿದರು. ಯೋಧ ವೀರೇಶ್ ಅವರು ಹುತಾತ್ಮರಾದ ಸುದ್ದಿಯಿಂದ ಕರಮುಡಿ ಗ್ರಾಮದ ಊರಿಗೆ ಊರೆ ದುಃಖ ಮಡುಗಟ್ಟಿದೆ.

    ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿಪಾಟೀಲ್ ಅವರು ಯೋಧ ವೀರೇಶ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಕ್ಕಳ ಶಿಕ್ಷಣಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ ಘೊಷಣೆ ಮಾಡಿದ್ದಾರೆ. ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಆದಷ್ಟು ಬೇಗ ಕುಟುಂಬಕ್ಕೆ ತಲುಪಿಸುವ ಭರವಸೆ ನೀಡಿದರು. ಜೊತೆಗೆ ಗ್ರಾಮದಲ್ಲಿ ವೀರೇಶ್ ಅವರ ಸ್ಮಾರಕ ನಿರ್ಮಿಸುವುದಾಗಿ ಭರವಸೆ ನೀಡಿದರು.

    ಯೋಧ ವೀರೇಶ್ ಅವರ ಅಂತ್ಯಸಂಸ್ಕಾರ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನೆರವೇರಿತು. ಹಿಂದೂ ಪಂಚಮಸಾಲಿ ಲಿಂಗಾಯತ ಧರ್ಮದ ವಿಧಿವಿಧಾನ ಹಾಗೂ ಸರ್ಕಾರಿ ಸಕಲ ಗೌರವಗೊಂದಿಗೆ ಅಂತ್ಯಕ್ರಿಯೆ ನಡೆಯಿತು. ಸೈನಿಕರು ಮೂರು ಸುತ್ತಿನ ಗುಂಡು ಹಾರಿಸಿ ಗೌರವ ಅರ್ಪಿಸಿದರು. ಅಂತ್ಯಕ್ರಿಯೆಯಲ್ಲಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್, ಸಚಿವ ಸಿ.ಸಿ ಪಾಟೀಲ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಾಜಿ ಶಾಸಕರುಗಳಾದ ಬಿ.ಆರ್ ಯಾವಗಲ್, ಜಿ.ಎಸ್.ಪಾಟೀಲ್ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿ ಗೌರವ ವಂದನೆ ಸಲ್ಲಿಸಿದರು.