Tag: ವೀರಪ್ಪನ್

  • ಡಾ.ರಾಜ್ ಅಪಹರಣ ಪ್ರಕರಣಕ್ಕೆ 25 ವರ್ಷ – 2000 ಇಸವಿಯಲ್ಲಿ ಅಪಹರಿಸಿದ್ದ ವೀರಪ್ಪನ್

    ಡಾ.ರಾಜ್ ಅಪಹರಣ ಪ್ರಕರಣಕ್ಕೆ 25 ವರ್ಷ – 2000 ಇಸವಿಯಲ್ಲಿ ಅಪಹರಿಸಿದ್ದ ವೀರಪ್ಪನ್

    ಡಾ.ರಾಜ್ ಅಪಹರಣ ಪ್ರಕರಣಕ್ಕೆ 25 ವರ್ಷ – 2000 ಇಸವಿಯಲ್ಲಿ ಅಪಹರಿಸಿದ್ದ ವೀರಪ್ಪನ್
    – ಅಪಹರಣದ ಬಳಿಕವೂ ಇಷ್ಟದೂರಿನಲ್ಲಿ ವಾಸ್ತವ್ಯ ಹೂಡದ ರಾಜಣ್ಣ

    ಚಾಮರಾಜನಗರ: ನರಹಂತಕ, ಕಾಡುಗಳ್ಳ ವೀರಪ್ಪನ್ (Veerappan) ವರನಟ ಡಾ.ರಾಜ್‌ಕುಮಾರ್ ಅವರನ್ನ ಗಾಜನೂರಿನ ತೋಟದ ಮನೆಯಿಂದ ಅಪಹರಿಸಿದ (Kidnap) ಪ್ರಕರಣಕ್ಕೆ ಇಂದಿಗೆ 25 ವರ್ಷ. ಆ ಕಹಿ ಘಟನೆಯ ಬಗ್ಗೆ ಡಾ. ರಾಜ್ ಕುಟುಂಬಸ್ಥರು ಮಾತಾನಾಡಿದ್ದಾರೆ.

    ಕನ್ನಡಿಗರಿಗೆ, ಡಾ. ರಾಜ್ ಕುಮಾರ್ (Dr Rajkumar) ಅಭಿಮಾನಿಗಳಿಗೆ ಜುಲೈ 30, 2000ನೇ ಇಸವಿ ಅಂದ್ರೆ ಮರೆಯಲಾಗದ ದಿನ. ಕನ್ನಡಿಗರ ಆರಾಧ್ಯ ದೈವ ಎಂದೆನಿಸಿದ್ದ ಅಣ್ಣಾವ್ರ ಕುಟುಂಬವನ್ನೇ ತಲ್ಲಣಗೊಳಿಸಿದ ಈ ಅಪಹರಣ ಘಟನೆ ಕರಾಳ ನೆನಪಾಗಿ ಉಳಿದಿದೆ. ಡಾ.ರಾಜ್‌ಕುಮಾರ್ ಅವರಿಗೆ ಗಾಜನೂರನ್ನು ಕಂಡರೆ ಅನನ್ಯ ಪ್ರೀತಿ. ಅಲ್ಲಿರುವ ಜಮೀನಿನಲ್ಲಿ ಕೊರೆಸಿರುವ ಕೊಳವೆಬಾವಿಯಲ್ಲಿ ನೀರು ಬಂತೆಂಬ ಸುದ್ದಿ ತಿಳಿದು ಪಾರ್ವತಮ್ಮ ಅವರೊಡನೆ ಗಾಜನೂರಿಗೆ ಬಂದಿದ್ದರು. ಆದ್ರೆ ರಾತ್ರಿವೇಳೆ ಕಾಡುಗಳ್ಳ ವೀರಪ್ಪನ್ ವರನಟ ರಾಜ್ ಕುಮಾರ್ ಅವರನ್ನೇ ಅಪಹರಿಸಿದ್ದ. ಸತ್ಯ ಮಂಗಲ ಕಾಡಿನಲ್ಲಿ (Sathyamangalam Forest) ಒತ್ತೆಯಾಳಾಗಿರಿಸಿಕೊಂಡು 108 ದಿನಗಳ ನಂತರ ಬಿಡುಗಡೆಗೊಳಿಸಿದ್ದ.

    ಅಂದು ರಾತ್ರಿ ಬಂದೂಕುಗಳೊಂದಿಗೆ ಬಂದಿದ್ದ ವೀರಪ್ಪನ್ ಹಾಗೂ ಸಹಚರರು, ಮನೆಯನ್ನು ಕೂಡ ಸುತ್ತುವರಿದಿದ್ದರು. ಪಾರ್ವತಮ್ಮರಿಗೆ ಕ್ಯಾಸೆಟ್ ಕೊಟ್ಟು ಸರ್ಕಾರಕ್ಕೆ ತಲುಪಿಸಲು ಹೇಳಿದ್ದ. ಮನೆಯವರಿಗೆ, ಮಕ್ಕಳಿಗೆ ತೊಂದರೆ ಕೊಡಬೇಡ ನಾನೇ ನಿನ್ನ ಜೊತೆಗೆ ಬರ್ತೀನಿ ಅಂತಾ ಹೇಳಿ ಡಾ.ರಾಜ್‌ಕುಮಾರ್ ವೀರಪ್ಪನ್ ಜೊತೆಗೆ ಹೋಗಿದ್ರು. ಅವರ ಅಳಿಯ ಎಸ್.ಎ ಗೋವಿಂದರಾಜ್, ಸಹ ನಿರ್ದೇಶಕ ನಾಗಪ್ಪ ಮಾರಡಗಿ, ಸಂಬಂಧಿ ನಾಗೇಶ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್‌ ಧನಕರ್‌ ರಾಜೀನಾಮೆ – ಆಯ್ಕೆ ಪ್ರಕ್ರಿಯೆ ಹೇಗೆ? ಅರ್ಹತೆಗಳೇನು?

    ಇನ್ನೂ ಅಪಹರಣದಿಂದ ಬಿಡುಗಡೆ ಆಗಿ ಬಂದ ಬಳಿಕ ಮೂರು ಬಾರಿಯಷ್ಟೇ ಅಣ್ಣಾವ್ರು ಗಾಜನೂರಿಗೆ ಭೇಟಿ ಕೊಟ್ಟಿದ್ದರು. ಆದ್ರೆ ಒಂದು ಬಾರಿಯೂ ಕೂಡ ರಾತ್ರಿ ತಂಗುವ ಧೈರ್ಯ ಮಾಡಲಿಲ್ಲ. ಅಪ್ಪು ಸಿನಿಮಾದ 100 ದಿನದ ಸಂಭ್ರಮಾಚರಣೆಗೆ ಬರಬೇಕಾದ ಡಾ.ರಾಜ್ ಕುಮಾರ್, ಹನೂರಿನ ನಾಗಪ್ಪ ಅಪಹರಣದ ಸುದ್ದಿ ತಿಳಿದು ವಾಪಾಸ್ ಹೋಗಿದ್ದರು. ಇನ್ನೂ ಅಪಹರಣದ ವಿಚಾರ ಮತ್ತೇ ಮತ್ತೇ ಕಾಡುವ ಹಿನ್ನಲೆ, ಅಪಹರಣವಾಗಿದ್ದ ಮನೆಯನ್ನು ಕೆಡವಲಾಯಿತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದನ್ನೂ ಓದಿ: Hassan | ಹೋಟೆಲ್‌ನಲ್ಲಿ ಊಟ ಮಾಡಿ ಕೈತೊಳೆಯುವಾಗ ಪ್ರಾಣಬಿಟ್ಟ ಯುವಕ

    ಒಟ್ಟಿನಲ್ಲಿ ಅಭಿಮಾನಿಗಳ ಆರಾಧ್ಯ ದೈವ, ಕಲಾ ರಸಿಕ ಡಾ.ರಾಜ್ ಕುಮಾರ್ ಅವರನ್ನ ವೀರಪ್ಪನ್ ಅಪಹರಣ ಮಾಡಿದ್ದ ವಿಚಾರ ಕರುನಾಡಿಗೆ ಗೊತ್ತಾಗಿದ್ದು ಜುಲೈ 31 ರಂದು ಬೆಳಗ್ಗೆ. ಈ ವಿಚಾರ ಕಾಡ್ಗಿಚ್ಚಿನಂತೆ ಎಲ್ಲಾ ಕಡೆಯೂ ಹಬ್ಬಿತ್ತು. ಇದನ್ನೂ ಓದಿ: ರಷ್ಯಾದ ಕರಾವಳಿಯಲ್ಲಿ 8.7 ತೀವ್ರತೆಯ ಭಾರೀ ಭೂಕಂಪ – ಅಮೆರಿಕ, ಜಪಾನ್‌ಗೆ ಸುನಾಮಿ ಎಚ್ಚರಿಕೆ

  • ರಾಜ್‌ಕುಮಾರ್ ಕಿಡ್ನಾಪ್ ವೇಳೆ ಸ್ಯಾಟ್‌ಲೈಟ್ ಫೋನ್‌ನಿಂದ ವೀರಪ್ಪನ್ ಜೊತೆ ಮಾತನಾಡಿದ್ದ ಎಸ್‌ಎಂಕೆ

    ರಾಜ್‌ಕುಮಾರ್ ಕಿಡ್ನಾಪ್ ವೇಳೆ ಸ್ಯಾಟ್‌ಲೈಟ್ ಫೋನ್‌ನಿಂದ ವೀರಪ್ಪನ್ ಜೊತೆ ಮಾತನಾಡಿದ್ದ ಎಸ್‌ಎಂಕೆ

    ಚಾಮರಾಜನಗರ: ಮೇರುನಟ ಡಾ.ರಾಜ್‌ಕುಮಾರ್ (Rajkumar) ಅವರು ಕಾಡುಗಳ್ಳ ವೀರಪ್ಪನ್‌ನಿಂದ ಅಪಹರಣವಾದಾಗ ಎಸ್‌ಎಂ ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ರಾಜ್‌ಕುಮಾರ್ ಬಿಡುಗಡೆಗೊಳಿಸಲು ಸ್ಯಾಟ್‌ಲೈಟ್ ಫೋನ್ ಮೂಲಕ ವೀರಪ್ಪನ್ ಜೊತೆ ಎಸ್‌ಎಂಕೆ (SM Krishna) ಮಾತನಾಡಿದ್ದರು.

    ರಾಜ್‌ಕುಮಾರ್ ಅಪಹರಣ ಪ್ರಕರಣ ಎಸ್‌ಎಂ ಕೃಷ್ಣ ಅವರಿಗೆ ತಮ್ಮ ಅಧಿಕಾರವಧಿಯಲ್ಲಿ 108 ದಿನಗಳ ಕಾಲ ಹೈರಾಣು ಮಾಡಿತ್ತು. ಜೊತೆಗೆ ಇದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಆದರೂ ಎಸ್‌ಎಂ ಕೃಷ್ಣ ಅವರು ಧೃತಿಗೆಡದೆ ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಕಾಡುಗಳ್ಳ ವೀರಪ್ಪನ್ ಜೊತೆ ಸ್ಯಾಟ್‌ಲೈಟ್ ಫೋನ್ ಮೂಲಕ ಮಾತನಾಡಿ ಮನವೊಲಿಸಿ, ಆತನ ಕಪಿಮುಷ್ಟಿಯಿಂದ ರಾಜ್‌ಕುಮಾರ್ ಅವರನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದರು.ಇದನ್ನೂ ಓದಿ: ಎಸ್‌ಎಂ ಕೃಷ್ಣ ವಿಧಿವಶ – ಬುಧವಾರ ರಾಮನಗರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

    ಹೌದು, 2000ರ ಜು.30 ರಂದು ರಾತ್ರಿ ಸುಮಾರು 9 ಗಂಟೆ ವೇಳೆಗೆ ಚಾಮರಾಜನಗರ ಜಿಲ್ಲೆ ಗಡಿಭಾಗದ ತಮಿಳುನಾಡಿನ ದೊಡ್ಡ ಗಾಜನೂರಿನಿಂದ ಮೇರುನಟ ಡಾ.ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದನು. ಈ ವೇಳೆ ಪಾರ್ವತಮ್ಮ ಅವರು ರಾಜ್‌ಕುಮಾರ್ ಜೊತೆಗಿದ್ದರು. ಅಪಹರಣ ಮಾಡುವಾಗ ಆಡಿಯೋ ಕ್ಯಾಸೆಟ್‌ವೊಂದನ್ನು ಕೊಟ್ಟು, ಅದನ್ನು ಎಸ್‌ಎಂ ಕೃಷ್ಣ ಅವರಿಗೆ ತಲುಪಿಸುವಂತೆ ಹೇಳಿದ್ದನು.

    ಅಂದು ರಾತ್ರಿಯೇ ಪಾರ್ವತಮ್ಮ ಚಾಮರಾಜನಗರಕ್ಕೆ ಬಂದು ಎಸ್.ಎಂ.ಕೃಷ್ಣ ಅವರಿಗೆ ದೂರವಾಣಿ ಕರೆ ಮಾಡಿ ಅಪಹರಣದ ಸುದ್ದಿ ತಿಳಿಸಿದ್ದರು. ಜೊತೆಗೆ ಆ ದಿನ ಮಧ್ಯರಾತ್ರಿ ಬೆಂಗಳೂರಿಗೆ ತೆರಳಿ ಎಸ್‌ಎಂಕೆಗೆ ಆಡಿಯೋ ಕ್ಯಾಸೆಟ್‌ನ್ನು ಕೂಡ ನೀಡಿದ್ದರು. ಕ್ಯಾಸೆಟ್‌ನಲ್ಲಿ ತಮಿಳುನಾಡಿಗೆ ಇಂತಿಷ್ಟೇ ಕಾವೇರಿ ನೀರು ಬಿಡುಗಡೆ ಮಾಡಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ವೀರಪ್ಪನ್ ಒತ್ತಾಯಿಸಿದ್ದನು.

    ಕಾವೇರಿ ವಿವಾದ, ಭೀಕರ ಬರಗಾಲದಂತಹ ಸಮಸ್ಯೆ ಎದುರಿಸುತ್ತಿದ್ದ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರಕ್ಕೆ ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ ಬರಸಿಡಿಲಿನಂತೆ ಎರಗಿತ್ತು. ಒಂದೆಡೆ ಇಡೀ ರಾಜ್ಯ ಹೊತ್ತಿ ಉರಿಯತೊಡಗಿತ್ತು. ಇನ್ನೊಂದೆಡೆ ವೀರಪ್ಪನ್ ಬೇಡಿಕೆಗಳನ್ನು ಈಡೇರಿಸಿ ರಾಜ್‌ಕುಮಾರ್ ಅವರನ್ನು ಜೀವಂತವಾಗಿ ಕರೆತರುವ ಸವಾಲು ಎಸ್‌ಎಂ ಕೃಷ್ಣ ಅವರಿಗೆ ಎದುರಾಗಿತ್ತು.

    ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿದ ಎಸ್‌ಎಂ ಕೃಷ್ಣ ರಾಜ್‌ಕುಮಾರ್ ಬಿಡುಗಡೆಗೆ ಹಲವು ರೀತಿಯಲ್ಲಿ ಪ್ರಯತ್ನಿಸಿದರು. ವೀರಪ್ಪನ್ ಬಳಿಗೆ ಸಂಧಾನಕಾರರನ್ನು ಕಳುಹಿಸಿದ ಎಸ್‌ಎಂ ಕೃಷ್ಣ ವೀರಪ್ಪನ್ ಜೊತೆ ಸ್ಯಾಟ್‌ಲೈಟ್ ಫೋನ್‌ನಲ್ಲಿ ಮಾತನಾಡಿ ವೀರಪ್ಪನ್ ಕಪಿಮುಷ್ಟಿಯಿಂದ ಡಾ.ರಾಜ್‌ಕುಮಾರ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆಗ ಇಡೀ ಕರ್ನಾಟಕ ನಿಟ್ಟುಸಿರು ಬಿಟ್ಟಿತ್ತು.ಇದನ್ನೂ ಓದಿ: ಭಾಗ-1 | ಶಾಸಕನಿಂದ ಮುಖ್ಯಮಂತ್ರಿವರೆಗೆ…. ಎಸ್‌ಎಂಕೆ ರಾಜಕೀಯ ಜೀವನದ ಏಳುಬೀಳು!

  • ಕಾಡುಗಳ್ಳ ವೀರಪ್ಪನ್ ಕೊಂದಿದ್ದ ಪೊಲೀಸ್ ಅಧಿಕಾರಿ ನಿವೃತ್ತಿ ಹಿಂದಿನ ದಿನವೇ ಸಸ್ಪೆಂಡ್

    ಕಾಡುಗಳ್ಳ ವೀರಪ್ಪನ್ ಕೊಂದಿದ್ದ ಪೊಲೀಸ್ ಅಧಿಕಾರಿ ನಿವೃತ್ತಿ ಹಿಂದಿನ ದಿನವೇ ಸಸ್ಪೆಂಡ್

    ಚೆನ್ನೈ: ಕಾಡುಗಳ್ಳ ವೀರಪ್ಪನ್‌ನನ್ನು (Veerappan) ಹೊಡೆದುರುಳಿಸಿದ ವಿಶೇಷ ಕಾರ್ಯಪಡೆಯ ಭಾಗವಾಗಿದ್ದ ತಮಿಳುನಾಡು (Tamil Nadu) ಪೊಲೀಸ್ ಹೆಚ್ಚುವರಿ ಅಧೀಕ್ಷಕ ಎಸ್ ವೆಲ್ಲಾದುರೈ (S Velladurai) ಅವರ ನಿವೃತ್ತಿಗೆ ಒಂದು ದಿನ ಮೊದಲು ಅಮಾನತು ಹೈಡ್ರಾಮಾ ನಡೆದಿದೆ.

    ಎನ್‌ಕೌಂಟರ್ ಸ್ಪೆಷಲಿಸ್ಟ್ (Encounter Specialist) ಎಂದೇ ಖ್ಯಾತರಾಗಿದ್ದ ವೆಲ್ಲಾದುರೈ ಅವರನ್ನು ತಮಿಳುನಾಡು ಗೃಹ ಇಲಾಖೆ ಗುರುವಾರ ಅಮಾನತುಗೊಳಿಸಿತು. ಮೂಲಗಳ ಪ್ರಕಾರ, 2013ರಲ್ಲಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ‘ಕೊಕ್ಕಿ’ ಕುಮಾರ್ ಅಲಿಯಾಸ್ ರಾಮು ಎಂಬಾತನ ಲಾಕಪ್ ಡೆತ್ ಪ್ರಕರಣದಲ್ಲಿ ವೆಲ್ಲಾದುರೈ ಭಾಗಿಯಾಗಿದ್ದರು ಎಂದು ಆರೋಪಿಸಿ ಅಮಾನತುಗೊಳಿಸಲಾಗಿತ್ತು. ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಮೈತ್ರಿಯಿಂದ 10 ಸ್ಥಾನ ಗೆಲುವು: ಬಿಜೆಪಿ ವಿಶ್ವಾಸ

    ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಶುಕ್ರವಾರದ ನಂತರದ ಆದೇಶದಲ್ಲಿ ಇಲಾಖೆ ಕೆಲವು ಷರತ್ತುಗಳಿಗೆ ಒಳಪಟ್ಟು ನಿವೃತ್ತಿಗೆ (ಅಮಾನತು ಹಿಂಪಡೆದು) ಅವಕಾಶ ನೀಡಿದೆ. ಅಲ್ಲದೇ ವೆಲ್ಲಾದುರೈ ಅವರ ನಿವೃತ್ತಿ ಫಂಡ್‌ನಲ್ಲಿ 5 ಲಕ್ಷ ರೂ. ಕಡಿತಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ – ಮುಂಗಾರು ಆರಂಭದಲ್ಲೇ ಹಲವೆಡೆ ಅಬ್ಬರಿಸಿದ ವರುಣ

    ಅಕ್ಟೋಬರ್ 27, 2012 ರಂದು ಮರುತುಪಾಂಡಿಯಾರ್ ಜಯಂತಿಯ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಟಿ.ಅಲ್ವಿನ್ ಸುಧನ್ ಅವರನ್ನು ಕೊಂದ ಪ್ರಕರಣದಲ್ಲಿ ‘ಕೊಕ್ಕಿ’ ಕುಮಾರ್ ಆರೋಪಿಯಾಗಿದ್ದ. ಪ್ರಕರಣದಲ್ಲಿ ‘ಕೊಕ್ಕಿ’ ಕುಮಾರ್ ಸೇರಿದಂತೆ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಸಿಬಿ-ಸಿಐಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಬಿಡುವಂತೆ ಶಿಫಾರಸು ಮಾಡಿತ್ತು. ಇದನ್ನೂ ಓದಿ: ಭವ್ಯ ನರಸಿಂಹಮೂರ್ತಿ ಈಗ ಭಾರತೀಯ ಸೇನೆಯ ಆಫೀಸರ್

    2021ರಲ್ಲಿ ಡಿಎಂಕೆ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಕಾಂಚೀಪುರಂ ಜಿಲ್ಲೆಯ ಕೈಗಾರಿಕಾ ಘಟಕಗಳು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿದ ಸಮಾಜವಿರೋಧಿಗಳ ಮೇಲೆ ನಿಗಾ ವಹಿಸಲು ಮತ್ತು ನಿಯಂತ್ರಿಸಲು ತಮಿಳುನಾಡು ಸರ್ಕಾರವು ವೆಲ್ಲಾದುರೈ ಅವರನ್ನು ರಾಜ್ಯ ಪೊಲೀಸ್ ವಿಶೇಷ ವಿಭಾಗದ ವಿಶೇಷ ಅಧಿಕಾರಿಯಾಗಿ ನೇಮಿಸಿತ್ತು. ಇದನ್ನೂ ಓದಿ: ವಾಲ್ಮೀಕಿ ನಿಗಮದಿಂದ 17 ಖಾತೆಗಳಿಗೆ ನಗದು ವರ್ಗಾವಣೆ – ಬಿಜೆಪಿಯಿಂದ ದಾಖಲೆ ಬಿಡುಗಡೆ

  • ಪಾಲಾರ್ ಬಾಂಬ್ ಸ್ಫೋಟ ಕೇಸ್‌ ಆರೋಪಿ, ಕಾಡುಗಳ್ಳ ವೀರಪ್ಪನ್ ಸಹಚರ ಅನಾರೋಗ್ಯದಿಂದ ನಿಧನ

    ಪಾಲಾರ್ ಬಾಂಬ್ ಸ್ಫೋಟ ಕೇಸ್‌ ಆರೋಪಿ, ಕಾಡುಗಳ್ಳ ವೀರಪ್ಪನ್ ಸಹಚರ ಅನಾರೋಗ್ಯದಿಂದ ನಿಧನ

    ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ (Veerappan) ಸಹಚರ, ಪಾಲಾರ್ ಬಾಂಬ್ ಸ್ಪೋಟದ (Palar Bomb Blast)  ಪ್ರಮುಖ ಅಪರಾಧಿ ಜ್ಞಾನಪ್ರಕಾಶ್ (Gnana Prakash) ನಿಧನ ಹೊಂದಿದ್ದಾರೆ.

    ಜಾಮೀನಿನ ಮೇಲೆ ಮೈಸೂರು ಜೈಲಿನಿಂದ ಬಿಡುಗಡೆಯಾಗಿದ್ದರು. 2022ರ ಡಿಸೆಂಬರ್ 20 ರಂದು ಮೈಸೂರು ಜೈಲಿನಿಂದ ಬಿಡುಗಡೆ ಆಗಿದ್ದರು. ಇದನ್ನೂ ಓದಿ: KSRTC ಟ್ರೇಡ್‍ಮಾರ್ಕ್ ಉಳಿಸಿಕೊಂಡ ಕರ್ನಾಟಕ- ಕಾನೂನು ಸಮರ ಸೋತ ಕೇರಳ

    1993ರ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್, ಮೀಸೆಕಾರ ಮಾದಯ್ಯ ಜೊತೆಗೆ ಜ್ಞಾನಪ್ರಕಾಶ್ ಭಾಗಿಯಾಗಿದ್ದರು ಎಂದು ಮೈಸೂರಿನ ಟಾಡಾ ನ್ಯಾಯಾಲಯ 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. 2014ರಲ್ಲಿ ಸುಪ್ರಿಂ ಕೋರ್ಟ್, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ತೀರ್ಪು ನೀಡಿತ್ತು.

    ಬೆಳಗಾವಿಯ ಹಿಂಡಲಗಾ ಹಾಗೂ ಮೈಸೂರು ಕಾರಾಗೃಹದಲ್ಲಿ 29 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಜ್ಞಾನಪ್ರಕಾಶ್‌ಗೆ ಮೂರು ವರ್ಷಗಳ ಹಿಂದೆ ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಮಾನವೀಯತೆ ಆಧಾರದ ಮೇಲೆ ಸುಪ್ರೀಂ ಕೋರ್ಟ್ 2022ರ ನ.26ರಂದು ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಮೈಸೂರು ಏರ್ಪೋರ್ಟ್‌ಗೆ ಟಿಪ್ಪು ಹೆಸರಿಡಲು ಚಿಂತನೆ – ಟಿಪ್ಪು ಹೆಸರು ಶೌಚಾಲಯಕ್ಕೆ ಇಡಲಿ ಎಂದ ಯತ್ನಾಳ್

    ಮೈಸೂರಿನ ಕಾರಾಗೃಹದಿಂದ 2022ರ ಡಿ.20ರಂದು ಬಿಡುಗಡೆಯಾಗಿದ್ದ ಅವರು ಸಂದನಪಾಳ್ಯದಲ್ಲಿ ವಾಸವಿದ್ದರು. ಅನಾರೋಗ್ಯದಿಂದ ಚೇತರಿಸಿಕೊಳ್ಳದ ಜ್ಞಾನಪ್ರಕಾಶ್, ಶುಕ್ರವಾರ (ಇಂದು) ರಾತ್ರಿ 8 ಗಂಟೆ ಸುಮಾರಿಗೆ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಂದನಪಾಳ್ಯದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

  • ‘ಕೈ’ ಅಭ್ಯರ್ಥಿಗೆ ಮತ ಹಾಕುವಂತೆ ಬಂದೂಕು ಹಿಡಿದು ಬೆದರಿಸಿದ್ದ ವೀರಪ್ಪನ್!

    ‘ಕೈ’ ಅಭ್ಯರ್ಥಿಗೆ ಮತ ಹಾಕುವಂತೆ ಬಂದೂಕು ಹಿಡಿದು ಬೆದರಿಸಿದ್ದ ವೀರಪ್ಪನ್!

    ಮೈಸೂರು: ಒಂದು ಕಾಲಕ್ಕೆ ಚುನಾವಣೆ ಬಂತೆಂದರೆ ಚಾಮರಾಜನಗರ (Chamarajanagar) ಜಿಲ್ಲೆಯ ಗಡಿ ಭಾಗದಲ್ಲಿ ಕಾಡುಗಳ್ಳ, ನರಹಂತಕ ವೀರಪ್ಪನ್ (Veerappan) ಆತಂಕ ತಂದೊಡ್ಡುತ್ತಿದ್ದ. ಇದರಿಂದ ಆತನ ಕಾರ್ಯಕ್ಷೇತ್ರದಲ್ಲಿ ಮತಗಟ್ಟೆಗಳಿಗೆ, ರಾಜಕೀಯ ಪಕ್ಷಗಳ ಮುಖಂಡರಿಗೆ ಭದ್ರತೆ ಒದಗಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗುತ್ತಿತ್ತು.

    ರಾಜಕಾರಣಿಗಳು ಅಪಹರಣ ಭಯದಿಂದ ಪ್ರಚಾರಕ್ಕೆ ಹೋಗಲು, ನೌಕರರು ಚುನಾವಣಾ ಕರ್ತವ್ಯಕ್ಕೆ ಹೋಗಲು ಹಿಂಜರಿಯುತ್ತಿದ್ದರು. ಆದರೆ 2008 ವಿಧಾನಸಭಾ ಚುನಾವಣೆಯಿಂದ  (Assembly Election) ಇದು ತಪ್ಪಿದೆ. ಲೋಕಸಭೆ ಚುನಾವಣೆಗೂ ಈತನ ಭಯವಿಲ್ಲ.

    ಕರ್ನಾಟಕ, ತಮಿಳುನಾಡು ಮತ್ತು ಕೇರಳ ಗಡಿ ಭಾಗದಲ್ಲಿ ವ್ಯಾಪಿಸಿಕೊಂಡಿರುವ ದಟ್ಟಡವಿಯನ್ನು ತನ್ನ ಕಾರ್ಯಕ್ಷೇತ್ರ ಮಾಡಿಕೊಂಡಿದ್ದ ವೀರಪ್ಪನ್ ಮೊದಲು ಶ್ರೀಗಂಧ ಕಳ್ಳ ಸಾಗಾಣಿಕೆ ಮಾಡುತ್ತಿದ್ದ. ಶ್ರೀಗಂಧ ಮುಗಿದ ನಂತರ ದಂತಕ್ಕಾಗಿ ಆನೆಗಳನ್ನು ಹತ್ಯೆ ಮಾಡತೊಡಗಿದ. ಆನೆಗಳು ಕಡಿಮೆಯಾದ ನಂತರ ಕರಿಕಲ್ಲು ಮಾಲೀಕರಿಂದ ಸುಲಿಗೆ ಮಾಡುತ್ತಿದ್ದ. ವಿಶೇಷ ಪಡೆಯ ಕಾರ್ಯಾಚರಣೆಯಿಂದ ತನ್ನೆಲ್ಲಾ ಕುಕೃತ್ಯಗಳಿಗೂ ತಡೆಯುಂಟಾದಾಗ ಅಧಿಕಾರಿಗಳು, ಗಣ್ಯ ನಾಗರಿಕರನ್ನು ಅಪಹರಿಸಿ, ಹಣ ವಸೂಲಿ ಮಾಡತೊಡಗಿದ.

    ಮೊದಮೊದಲು ಗಣಿ ಮಾಲೀಕರ ಕಡೆಯವರನ್ನು ಅಪಹರಿಸಿ ಹಣ ವಸೂಲಿ ಮಾಡಿದ್ದ ವೀರಪ್ಪನ್ ಕೊನೆಗೆ ಡಾ. ರಾಜ್‌ಕುಮಾರ್ ಮತ್ತು ಮಾಜಿ ಸಚಿವ ಹೆಚ್. ನಾಗಪ್ಪ ಅವರನ್ನೇ ಅಪಹರಿಸಿದ್ದ. ಇಂತಹ ವೀರಪ್ಪನ್ 2004ರ ಅಕ್ಟೋಬರ್ 18 ರಂದು ತಮಿಳುನಾಡು ವಿಶೇಷ ಪಡೆಯ ಪೊಲೀಸರಿಗೆ ಬಲಿಯಾದ.

    ಬಲಿಯಾದ ವೀರಪ್ಪನ್‌ಗೆ ಬಹಳ ವರ್ಷಗಳಿಂದ ರಾಜಕೀಯ ಪಕ್ಷದ ನಂಟಿತ್ತು. ಆದರೆ ಅದು ಬಹಿರಂಗವಾಗಿದ್ದು 1989ರ ಚುನಾವಣೆಯಲ್ಲಿ. ಆ ಚುನಾವಣೆಯಲ್ಲಿ ಆತ ಕಾಂಗ್ರೆಸ್ ಅಭ್ಯರ್ಥಿ ಜಿ. ರಾಜೂಗೌಡರಿಗೆ ಮತ ಹಾಕುವಂತೆ ಬಂದೂಕು ಹಿಡಿದು ಮತದಾರರಿಗೆ ಬೆದರಿಕೆ ಹಾಕಿದ್ದ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ವಿಷಯ ರಾಜ್ಯ ವಿಧಾನಮಂಡಲದಲ್ಲೂ ಪ್ರಸ್ತಾಪವಾಗಿ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ಇದನ್ನೂ ಓದಿ: ರಾಜಕೀಯ ಅನುಭವವಿಲ್ಲದೆ ಸತತ ಎರಡು ಬಾರಿ MLA- ಪಕ್ಷ ಬದಲಿಸಿಯೂ ಗೆದ್ದಿದ್ದ ಡಾ.ಶಿವರಾಜ್ ಪಾಟೀಲ್‍ಗೆ ಈ ಬಾರಿ ಟಫ್

    ಇದೇ ವೀರಪ್ಪನ್ ರಾಜೂಗೌಡರ ಬದ್ಧವೈರಿ ಮಾಜಿ ಸಚಿವ ಹೆಚ್. ನಾಗಪ್ಪ ಅವರನ್ನು ಅಪಹರಿಸಿದ್ದ. ನಾಗಪ್ಪ ಅವರು ವೀರಪ್ಪನ್ ವಶದಲ್ಲಿದ್ದಾಗಲೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆದರೆ ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರು 108 ದಿನಗಳ ವನವಾಸದ ನಂತರ ಸುರಕ್ಷಿತವಾಗಿ ಬಿಡುಗಡೆಯಾಗಿ ಬಂದಿದ್ದರು.

    ಸರಿಸುಮಾರು ಎರಡೂವರೆ ದಶಕಗಳ ಕಾಲ ಪೊಲೀಸರು ಮತ್ತು ಅರಣ್ಯ ಇಲಾಖೆಯವರನ್ನು ಕಾಡಿದ ವೀರಪ್ಪನ್ 111 ನಾಗರಿಕರು, 33 ಪೊಲೀಸರು, 5 ಅರಣ್ಯ ಸಿಬ್ಬಂದಿ ಮತ್ತು ಒಬ್ಬ ಬಿಎಸ್‌ಎಫ್ ಯೋಧನನ್ನು ಹತ್ಯೆ ಮಾಡಿದ್ದ. ಆತನ ವಿರುದ್ಧ 182 ಪ್ರಕರಣಗಳು ದಾಖಲಾಗಿದ್ದು, 135 ಮಂದಿ ಸಹಚರರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್‍ನ ಹೊಸ ಮುಖಗಳ ಪ್ರಯೋಗ ಶಾಲೆಯಾಗುತ್ತಾ ರಾಜ್ಯದ ಏಕೈಕ ಮೀಸಲು ಕ್ಷೇತ್ರ ಸುಳ್ಯ?

    ವೀರಪ್ಪನ್ ಹಾವಳಿಯಿಂದ ಮುಕ್ತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಈಗ ಅರಣ್ಯ ಇಲಾಖೆ ಪ್ರವಾಸೋದ್ಯಮಕ್ಕೆ ಅದ್ಯತೆ ನೀಡಿದೆ. ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಕೆ. ಗುಡಿ, ಭರಚುಕ್ಕಿ ಜಲಪಾತ, ಬಂಡೀಪುರಗಳಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ.

  • ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ವೀರಪ್ಪನ್ ಮಗಳು ಪಾದಾರ್ಪಣೆ

    ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ವೀರಪ್ಪನ್ ಮಗಳು ಪಾದಾರ್ಪಣೆ

    ಮಿಳುನಾಡಿನ (Tamilnadu) ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿರುವ ವೀರಪ್ಪನ್‌ (Veerappan) ಮಗಳು ವಿಜಯಲಕ್ಷ್ಮೀ (Vijaylakshmi) ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, `ಮಾವೀರನ್ ಪಿಳ್ಳೈʼ (Maaveeran Pillai) ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಇದೀಗ ಚಿತ್ರದ ಹಾಡುಗಳು ರಿಲೀಸ್‌ ಆಗಿದೆ.

    ಚೆನ್ನೈನಲ್ಲಿ ನಡೆದ ಆಡಿಯೋ ರಿಲೀಸ್ ಸಮಾರಂಭದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ, ಆಲ್ ಪೀಪಲ್ಸ್ ಪೊಲಿಟಿಕಲ್ ಪಾರ್ಟಿ ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್ ಸುರೇಶ್, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.ಆರ್. ರಾಜ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ರಾಜ, ಪ್ರತಿ ಸಂಸಾರದಲ್ಲೂ ಕುಡಿತದಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಕುಡಿತದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ರಮ್ಯಾ ಈ ಗುಣ ನನಗೆ ಇಷ್ಟ, ಸಹನಟಿಗೆ ಪತ್ರ ಬರೆದ ಪೂಜಾ ಗಾಂಧಿ

    ವೀರಪ್ಪನ್ ಪುತ್ರಿ ವಿಜಯಲಕ್ಷ್ಮೀಗೆ ಬಾಲ್ಯದಿಂದಲೂ ನಟಿಸುವ (Acting) ಆಸಕ್ತಿ ಇತ್ತಂತೆ. ಮೊದಲಿನಿಂದಲೂ ನಟಿಸುವ ತುಡಿತ ಇತ್ತು. ಈಗ ಅವಕಾಶ ಸಿಕ್ಕಿದೆ. ಕುಡಿತದಿಂದಾಗಿ ಪ್ರತೀ ಮನೆಯಲ್ಲೂ ಸಾಕಷ್ಟು ಮಹಿಳೆಯರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಂಥ ಮಹಿಳೆಯರ ಕುರಿತು ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ ಎಂದು ಹೇಳಿದರು.

    ಒಂದು ಚಿತ್ರದಲ್ಲಿ ಯಾರು ನಟಿಸಿದ್ದಾರೆ ಅಥವಾ ಚಿತ್ರವನ್ನು ಯಾರು ನಿರ್ದೇಶಿಸಿದ್ದಾರೆ ಎಂಬುದು ಮುಖ್ಯವಲ್ಲ, ಚಿತ್ರದ ಕಥಾವಸ್ತು ಮುಖ್ಯ ಎಂದ ನಿರ್ದೇಶಕ ಪೇರರಸು, ವೀರಪ್ಪನ್ ಮಗಳು ಇದೀಗ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರರಂಗ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ನಾವು ಸಹ ವಿಜಯಲಕ್ಷ್ಮೀ ಅವರನ್ನು ಬಹಳ ಪ್ರೀತಿಯಿಂದ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ ಎಂದು ವಿಜಯಲಕ್ಷ್ಮೀ ಅವರಿಗೆ ಚಿತ್ರರಂಗಕ್ಕೆ ಸ್ವಾಗತ ಎಂದಿದ್ದಾರೆ.

    ಇಂದು ದೊಡ್ಡವರಷ್ಟೇ ಅಲ್ಲ, ಸಣ್ಣ ಮಕ್ಕಳು ಸಹ ಕುಡಿಯುವ ವೀಡಿಯೋಗಳು ಬಿಡುಗಡೆಯಾಗಿ ಎಲ್ಲರಿಗೂ ಆಘಾತ ತಂದಿದೆ. ಈ ಚಿತ್ರದಲ್ಲಿ `ಸಾರಾಯಂ ಅಭಯಂ’ ಎಂಬ ಹಾಡಿದ್ದು, ಕುಡಿತದ ವಿರುದ್ಧದ ಅಭಿಯಾನದಲ್ಲಿ ಬಳಸಿಕೊಳ್ಳಬಹುದು. ಜನ ಮತ ಚಲಾಯಿಸುತ್ತಾರೋ, ಇಲ್ಲವೋ ಎಂಬ ಭಯದಿಂದ ಯಾವ ರಾಜಕಾರಿಣಿಯೂ ಕುಡಿತವನ್ನು ನಿಷೇಧಿಸುವ ಬಗ್ಗೆ ಮಾತಾಡುವುದಿಲ್ಲ. ಅವರ ಭಾಷಣಗಳಲ್ಲಿ, ಮಾತುಗಳಲ್ಲಿ ಕುಡಿತ ಕುರಿತು ಪ್ರಸ್ತಾಪವೇ ಇರುವುದಿಲ್ಲ. ಕುಡಿತದಿಂದ ಪ್ರತೀ ದಿನ ನೂರಾರು ಜನ ಸಾಯುತ್ತಿದ್ದಾರೆ. ಆನ್‌ಲೈನ್ ರಮ್ಮಿಯನ್ನು ನಿಷೇಧಿಸಬೇಕು ಎನ್ನುವವರು ಕುಡಿತವನ್ನು ನಿಷೇಧಿಸಬೇಕು ಎಂದು ಆಗ್ರಹಿಸುವುದಿಲ್ಲ. ಜನಸಾಮಾನ್ಯರಿಗೆ ಸಮಸ್ಯೆ ಆಗಿರುವ ಸಾರಾಯಿಯನ್ನು ಮೊದಲು ನಿಷೇಧಿಸಿ ಎಂದು ನಿರ್ದೇಶಕರು ಮಾತನಾಡಿದ್ದಾರೆ. ಇನ್ನೂ ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ. ಪ್ರೇಮ್ ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಜೂಲಿಯನ್ ಸಂಕಲನಕಾರರಾಗಿ ದುಡಿದಿದ್ದಾರೆ.

  • ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ನಿರ್ದೇಶಕರ ದಿನದಂದು ಖ್ಯಾತ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಕನ್ನಡದ ಹೆಸರಾಂತ ನಿರ್ದೇಶಕ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರನ್ನು ವೀರಪ್ಪನ್ ಗೆ ಹೋಲಿಸಿದ್ದಾರೆ ಆರ್.ಜಿ.ವಿ. ಈ ಟ್ವಿಟ್ ಭಾರತೀಯ ಸಿನಿಮಾ ರಂಗದಲ್ಲೇ ಸಂಚಲನ ಮೂಡಿಸಿದೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಕೆಜಿಎಫ್ ಸಿನಿಮಾ ಕಾರಣದಿಂದಾಗಿ ಪ್ರಶಾಂತ್ ನೀಲ್ ಅವರನ್ನು ಭಾರತೀಯ ಸಿನಿಮಾ ರಂಗವೇ ಹೊಗಳುತ್ತಿರುವಾಗ, ರಾಮ್ ಗೋಪಾಲ್ ವರ್ಮಾ ಬೇರೆ ರೀತಿಯಲ್ಲೇ ಪ್ರಶಾಂತ್ ನೀಲ್ ಅವರಿಗೆ ಬೆನ್ನು ತಟ್ಟಿದ್ದಾರೆ. “ಪ್ರಶಾಂತ್ ನೀಲ್ ಅವರಿಂದಾಗಿ ಭಾರತೀಯ ಸಿನಿಮಾ ರಂಗಕ್ಕೆ ನೂರಾರು ಕೋಟಿ ನಷ್ಟವಾಗಿದೆ’ ಎಂದು ಹಿಂದಿ ಸಿನಿಮಾ ರಂಗವನ್ನು ಕಾಲೆಳೆದಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

    ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲ ನಿರ್ದೇಶಕರ ತಲೆ ಕೆಡಿಸಿದ್ದಕ್ಕಾಗಿ ಪ್ರಶಾಂತ್ ನೀಲ್ ಅವರಿಗೆ ಅನ್ ಹ್ಯಾಪಿ ಡೈರೆಕ್ಟರ್ಸ್ ಡೇ ಎಂದು ವರ್ಮಾ ಟ್ವಿಟ್ ಮಾಡಿದ್ದಾರೆ. ಮುಂದುವರೆದು ಅವರು ನೀವು ಭಾರತೀಯ ಸಿನಿಮಾ ರಂಗದ ವೀರಪ್ಪನ್ ಎಂದು ಕಾಲೆಳೆದಿದ್ದಾರೆ. ಕ್ವಿಂಟಲ್ ಗಟ್ಟಲೆ ಪ್ರಶಾಂತ್ ನೀಲ್ ಅವರು ಹಣ ಮಾಡಿದ್ದಾರೆ. ಇದರಿಂದಾಗಿ ಬೇರೆ ಸಿನಿಮಾಗಳ ನಿರ್ಮಾಪಕರು ಟನ್ ಗಟ್ಟಲೆ ಹಣವನ್ನು ನಷ್ಟ ಮಾಡಿಕೊಳ್ಳಲಿದ್ದಾರೆ. ನಿಮ್ಮಂತೆಯೇ ಅವರೂ ಈಗ ಹಣ ಖರ್ಚು ಮಾಡಬೇಕಾಗಬಹುದು ಎಂದಿದ್ದಾರೆ ವರ್ಮಾ. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಪ್ರಶಾಂತ್ ನೀಲ್ ಕುರಿತಾಗಿ ವರ್ಮಾ ಸರಣಿಯಾಗಿ ಟ್ವಿಟ್ ಮಾಡಿದ್ದು, ಪ್ರಶಾಂತ್ ನೀಲ್ ಅಭಿಮಾನಿಗಳು ವರ್ಮಾ ಟ್ವಿಟ್ ಗೆ ಖುಷ್ ಆಗಿದ್ದಾರೆ. ಕನ್ನಡದ ಹೆಮ್ಮೆಯ ನಿರ್ದೇಶಕ ಎಂದು ಪ್ರಶಾಂತ್ ನೀಲ್ ಅವರನ್ನು ಹಾಡಿಹೊಗಳಿದ್ದಾರೆ. ಅಧಿಕೃತವಾಗಿ ಕೆಜಿಎಫ್ 2 ಸಿನಿಮಾ ಸಾವಿರಾರು ಕೋಟಿ ಕಲೆಕ್ಷನ್ ಮಾಡಿದ್ದು, ಇನ್ನೂ ಶರವೇಗದಲ್ಲೇ ಬಾಕ್ಸ್ ಆಫೀಸಿನಲ್ಲಿ ಮುನ್ನುಗ್ಗುತ್ತಿದೆ.

  • ವರನಟ ಡಾ.ರಾಜ್ ಗಾಜನೂರಿನ ಮನೆಯಲ್ಲಿ ನೆಲೆಸುವ ಆಸೆ ಕನಸಾಗಿ ಉಳಿದು ಹೋಯ್ತು

    ವರನಟ ಡಾ.ರಾಜ್ ಗಾಜನೂರಿನ ಮನೆಯಲ್ಲಿ ನೆಲೆಸುವ ಆಸೆ ಕನಸಾಗಿ ಉಳಿದು ಹೋಯ್ತು

    ರುನಾಡ ಕಣ್ಮಣಿ, ಕನ್ನಡದ ಮುತ್ತುರಾಜ್, ದಾದಾ ಸಾಹೇಬ್ ಫಾಲ್ಕೆ ವಿಜೇತ, ಕನ್ನಡದ ಮೇರುನಟ ಬಿರುದಾಂಕಿತ ಡಾ.ರಾಜ್ ಕಟ್ಟಿಸಿದ ಮನೆಯಲ್ಲಿ ಚಿತ್ರರಂಗದಿಂದ ನಿವೃತಿಯಾದ ಬಳಿಕ ಆ ಮನೆಯಲ್ಲಿ ವಾಸಿಸಬೇಕೆಂಬ ಮಹಾದಾಸೆ ಹೊಂದಿದ್ರು. ಆದ್ರೆ ಅವರ ಆಸೆ ಈಡೇರಲಿಲ್ಲ. ಮನೆಯೇನು ನಿರ್ಮಾಣವಾಯ್ತು ಅಲ್ಲಿ ವಾಸ ಮಾಡೋ ಭಾಗ್ಯ ಮಾತ್ರ ಆ ಮೇರುನಟನಿಗೆ ಸಿಗಲೇ ಇಲ್ಲ. ಆ ಮನೆಗೆ ಭೇಟಿ ಕೊಡುವ ವೇಳೆಗೂ ಮುನ್ನ ಕಾಡುಗಳ್ಳ ವೀರಪ್ಪನ್ ರಾಜ್ ಅವರನ್ನು ಕಿಡ್ನಾಪ್ ಮಾಡಿದರು. ನಂತರ ಗಾಜನೂರಿಗೆ ಅವರು ಬಂದು ವಾಸ ಮಾಡಲೂ ಸಾಧ್ಯವಾಗಿಲ್ಲ.

    ಹೌದು, ಇಂದು ಕನ್ನಡದ ಮೇರುನಟ, ವರನಟ ಖ್ಯಾತಿಯ ಡಾ.ರಾಜ್‍ಕುಮಾರ್ ಅವರ 93 ನೇ ಹುಟ್ಟುಹಬ್ಬ. ಕನ್ನಡ ಚಿತ್ರರಂಗಕ್ಕೆ ರಾಜ್ ಅವರ ಕೊಡುಗೆ ಅನನ್ಯ. ಡಾ.ರಾಜ್‍ಕುಮಾರ್ ಹೊರತು ಪಡಿಸಿ ಸ್ಯಾಂಡಲ್‍ವುಡ್ ಕಲ್ಪನೆಯೂ ಅಸಾಧ್ಯ. ಮೇರು ನಟ ಗಡಿಜಿಲ್ಲೆ ಚಾಮರಾಜನಗರದ ಸುಪುತ್ರ ರಣಧೀರ ಕಂಠೀರವ, ಅಭಿಮಾನಿಗಳ ಆರಾಧ್ಯ ದೈವ ಡಾ.ರಾಜ್ ತಮ್ಮ ಕಡೆಯ ದಿನಗಳನ್ನು ಹುಟ್ಟೂರು ಗಾಜನೂರಿನಲ್ಲಿ ಕಳೆಯಬೇಕೆಂಬ ಮಹಾದಾಸೆ ಹೊಂದಿದ್ದರು. ಇದನ್ನೂ ಓದಿ: ಹುಟ್ಟುಹಬ್ಬದಂದು ಅಣ್ಣಾವ್ರ ನೆನೆದ RCB

    ಈ ವಿಚಾರವನ್ನು ಕುಟುಂಬಸ್ಥರ ಬಳಿ ಹಲವು ಬಾರಿ ಕೂಡ ಹೇಳಿಕೊಂಡಿದ್ದರು. ಅವರ ಆಸೆ ಈಡೇರಿಸುವ ನಿಟ್ಟಿನಲ್ಲಿ ಕೂಡ ಚಾಮರಾಜನಗರದ ಗಡಿ ತಾಳವಾಡಿಯ ಗಾಜನೂರಿನಲ್ಲಿ ಒಂದು ಮನೆ ಕೂಡ ನಿರ್ಮಾಣ ಮಾಡಲಾಯ್ತು. ಆದ್ರೆ ಅವರು ಆ ಮನೆಯಲ್ಲಿ ವಾಸ ಮಾಡುವ ಕನಸು ಅವರ ಆಗಲಿಕೆಯಿಂದ ಕಮರಿ ಹೋಯ್ತು. ಇದೀಗ ಆ ಮನೆಯಲ್ಲಿ ಡಾ.ರಾಜ್ ಸಹೋದರಿ ನಾಗಮ್ಮ ಹಾಗೂ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಅಲ್ಲದೇ ಕಾಡುಗಳ್ಳ ವೀರಪ್ಪನ್ ಅಭಿಮಾನಿಗಳ ಆರಾಧ್ಯ ದೈವರನ್ನು ಅಪಹರಿಸಿದ್ದು ಗಾಜನೂರಿನಲ್ಲಿ. ಆ ಹಿನ್ನೆಲೆ ಮತ್ತೆ ಗಾಜನೂರಿನಲ್ಲಿ ಬಂದು ವಾಸಿಸಲು ಸಾಧ್ಯವಾಗಲೇ ಇಲ್ಲ.

    ಪ್ರೀತಿಯ ತಂಗಿ ನಾಗಮ್ಮ ಅಂದ್ರೆ ರಾಜ್‍ಕುಮಾರ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಸದಾ ಶೂಟಿಂಗ್‍ನಲ್ಲಿ ಬ್ಯುಸಿಯಿರುತ್ತಿದ್ದ ರಾಜ್‍ಕುಮಾರ್ ಹಾಗೂ ಅವರ ಮಡದಿ ಪಾರ್ವತಮ್ಮ ರಾಜ್‍ಕುಮಾರ್. ಈ ವೇಳೆ ರಾಜ್ ಅವರ ಕುಟುಂಬದ ಮುದ್ದು ಮಕ್ಕಳಾದ ಶಿವಣ್ಣ, ರಾಘಣ್ಣ, ಪುನೀತ್ ಅವರನ್ನು ಲಾಲನೆ, ಪೋಷಣೆ ಮಾಡಿದ್ದೆ ನಾಗಮ್ಮ. ಇದೀಗ ನಾಗಮ್ಮ ಕೂಡ ಅಣ್ಣನಿಗೆ ಬರ್ತ್ ಡೇ ವಿಶ್ ಮಾಡಿದ್ದು, ಪ್ರೀತಿಯ ಅಣ್ಣನನ್ನು ನೆನೆದು ಕಣ್ಣೀರಾಕಿದ್ದಾರೆ. ಅಲ್ಲದೆ ಅಣ್ಣನ ಆಸೆಯ ಮನೆಯಲ್ಲಿ ತಾವು ವಾಸಿಸುತ್ತಿರುವ ಬಗ್ಗೆ ಕುಟುಂಬದವರು ನೆನೆದುಕೊಳ್ತಿದ್ದಾರೆ.

    ಹೊಸ ಮನೆಯಷ್ಟೇ ಹಳೆಯ ಮನೆಯಲ್ಲೂ ಕೂಡ ಅಣ್ಣಾವ್ರ ಬಾಲ್ಯದ ನೆನಪು ಬಹಳಷ್ಟಿದೆ. ಅವರು ಹುಟ್ಟಿ ಬೆಳೆದಿದ್ದು ಹಳೆಯ ಮನೆಯಲ್ಲಿ. ನಾಟಕಗಳಿಗೆ ಹೋದ ನಂತರ ಇಲ್ಲಿಗೆ ಬರೋದು ಕಡಿಮೆಯಾಯ್ತು. ಸಿನಿಮಾ ನಟನೆಗೆ ಹೋದ ಮೇಲೆ ರಾಜ್ ಅವರು ಚೆನೈನಲ್ಲಿ ವಾಸ ಮಾಡ್ತಿದ್ರು. ಹಳೆಯ ಮನೆಯನ್ನು ದೇವರ ಮನೆ ಅನ್ನೋ ರೀತಿ ನೋಡುತ್ತಿದ್ದರು. ಈ ಹಿನ್ನೆಲೆ ಹಳೆಯ ಮನೆಯನ್ನು ಕೂಡ ರಾಜ್ ಕುಟುಂಬ ಉಳಿಸಿಕೊಂಡಿದೆ. ಇದನ್ನೂ ಓದಿ: ಯಾಕಣ್ಣ ನನ್ನೊಬ್ಬಳನ್ನೇ ಬಿಟ್ಟು ಹೋದೆ: ರಾಜ್‌ ನೆನೆದು ತಂಗಿ ಕಣ್ಣೀರು

    ರಾಜ್ ಭೌತಿಕವಾಗಿ ಇಹಾ ಲೋಕ ತ್ಯಜಿಸಿದರೂ ಕೂಡ ಅಭಿಮಾನಿಗಳ ನೆಚ್ಚಿನ ಅಣ್ಣಾವ್ರು ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಸಾಕಷ್ಟು ಆಸೆ,ನಿರೀಕ್ಷೆ ಇಟ್ಟು ಕಟ್ಟಿಸಿದ ಮನೆಯಲ್ಲಿ ರಾಜ್ ವಾಸ ಮಾಡಲಿಲ್ಲ ಅನ್ನೋ ಕೊರಗು ಮಾತ್ರ ಅಭಿಮಾನಿಗಳು ಹಾಗೂ ಕುಟುಂಬಸ್ಥರಲ್ಲಿ ಮನೆ ಮಾಡಿದೆ.

  • ಚಾಮರಾಜನಗರಕ್ಕೆ ವೀರಪ್ಪನ್ ಕಾರ್ಯಕ್ಷೇತ್ರದಿಂದ ನುಸುಳಿ ಬರ್ತಿರೋ ತಮಿಳರು

    ಚಾಮರಾಜನಗರಕ್ಕೆ ವೀರಪ್ಪನ್ ಕಾರ್ಯಕ್ಷೇತ್ರದಿಂದ ನುಸುಳಿ ಬರ್ತಿರೋ ತಮಿಳರು

    ಚಾಮರಾಜನಗರ: ಕೊರೊನಾ ಪ್ರಕರಣಗಳ ಹೈ ರಿಸ್ಕ್ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಪ್ರವೇಶ ನಿಷೇಧ ಹೇರಿರುವುದರಿಂದ ತಮಿಳರು ಗಡಿಭಾಗದಲ್ಲಿ ಕಾಡಿನ ಅಡ್ಡದಾರಿಗಳ ಮೂಲಕ ನುಸುಳುತ್ತಿದ್ದಾರೆ.

    ಕಾಡುಗಳ್ಳ ವೀರಪ್ಪನ್ ಕಾರ್ಯಕ್ಷೇತ್ರವಾದ ಮಹದೇಶ್ವರಬೆಟ್ಟ ಅರಣ್ಯದಲ್ಲಿ ಪಾಲಾರ್ ಹಳ್ಳ ದಾಟಿ ಬರತೊಡಗಿದ್ದಾರೆ. ಹಾಗೆಯೇ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ನಿವಾಸಿಗಳು ಸಹ ಕಾಡುದಾರಿಗಳ ಮೂಲಕ ತಮಿಳುನಾಡಿಗೆ ಹೋಗಿ ಬರುತ್ತಿದ್ದಾರೆ. ಪಾಲಾರ್ ನದಿಯ ಪಕ್ಕದಲ್ಲೇ ಚೆಕ್‍ಪೋಸ್ಟ್ ಇದ್ದರೂ ಪೊಲೀಸರ ಕಣ್ಣು ತಪ್ಪಿಸಿ ಓಡಾಟ ನಡೆಸಲಾಗುತ್ತಿದೆ. ವ್ಯಾಪಾರ, ವಹಿವಾಟು, ಆಸ್ಪತ್ರೆ ಮೊದಲಾದ ಕೆಲಸಗಳಿಗೆ ಕಾಡುದಾರಿಗಳ ಮೂಲಕ ನುಸುಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಅಕ್ರಮ ನುಸುವಳಿಕೆ ತಡೆಗಟ್ಟಲು ನಿರಂತರವಾಗಿ ಗಸ್ತು ನಡೆಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಅಡ್ಡದಾರಿಗಳ ಮೂಲಕ ಬರುವುದನ್ನು ತಡೆಗಟ್ಟಲು ಪೊಲೀಸ್, ಕಂದಾಯ ಹಾಗೂ ಅರಣ್ಯ ಇಲಾಖೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಯಾರೇ ಹೊಸಬರು ಬಂದರೂ ತಕ್ಷಣ ಮಾಹಿತಿ ನೀಡುವಂತೆ ಗ್ರಾಮ ಕಾರ್ಯಪಡೆಗಳಿಗೂ ಸೂಚಿಸಲಾಗಿದ್ದು, ಅಂತರಾಜ್ಯಗಳಿಂದ ಬರುವವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

    ಇದೇ ವಿಷಯಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ತಮಿಳುನಾಡಿನಿಂದ ಬರಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಕೆಲವರು ಕಾಡುದಾರಿಗಳ ಮೂಲಕ ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಹೀಗೆ ಅನುಮತಿ ಇಲ್ಲದೆ ಅಡ್ಡದಾರಿಗಳ ಮೂಲಕ ಬಂದಿರುವವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

  • ವೀರಪ್ಪನ್ ದಾಳಿಗೆ ತುತ್ತಾಗಿದ್ದ ರಾಮಾಪುರ ಪೊಲೀಸರಿಗೆ ಸ್ಮಾರಕ: ಸುರೇಶ್ ಕುಮಾರ್

    ವೀರಪ್ಪನ್ ದಾಳಿಗೆ ತುತ್ತಾಗಿದ್ದ ರಾಮಾಪುರ ಪೊಲೀಸರಿಗೆ ಸ್ಮಾರಕ: ಸುರೇಶ್ ಕುಮಾರ್

    ಚಾಮರಾಜನಗರ: ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪಚ್ಚೆದೊಡ್ಡಿ ಶಾಲಾ ವಾಸ್ತವ್ಯದ ಬಳಿಕ ಇಂದು ರಾಮಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.

    1992 ಮೇ 21ರ ಮಧ್ಯರಾತ್ರಿ ಕಾಡುಗಳ್ಳ ವೀರಪ್ಪನ್ ಮತ್ತು ಸಹಚರರು ರಾಮಾಪುರ ಠಾಣೆಗೆ ದಾಳಿ ಮಾಡಿ ಐವರು ಪೊಲೀಸರನ್ನು ಬಲಿ ಪಡೆದು ಅಟ್ಟಹಾಸ ಮೆರೆದಿದ್ದರು. ಆತನ ದಾಳಿಯ ಕುರುಹುಗಳು, ಬುಲೆಟ್‍ಗಳು ಬಿದ್ದ ಗುರುತುಗಳನ್ನು ಸಚಿವರು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

    ಇದೇ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿ ಇಳಂಗೋವನ್, ಗೋವಿಂದರಾಜು, ಸಿದ್ಧರಾಜು, ರಾಚಪ್ಪ, ಪ್ರೇಮ್ ಕುಮಾರ್ ಅವರಿಗೆ ಗೌರವ ಸಮರ್ಪಿಸಿದರು. ನಂತರ ಮಾತನಾಡಿದ ಸಚಿವರು ಗೋಪಿನಾಥಂನಲ್ಲಿರುವ ಅರಣ್ಯಾಧಿಕಾರಿ ಶ್ರೀನಿವಾಸನ್ ಅವರ ಸ್ಮಾರಕದ ರೀತಿ ರಾಮಾಪುರ ಠಾಣೆಯಲ್ಲಿ ವೀರಪ್ಪನ್ ದಾಳಿಗೆ ಬಲಿಯಾದ ಪೊಲೀಸರಿಗೆ ಸ್ಮಾರಕ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

    ಸ್ಮಾರಕ ನಿರ್ಮಿಸುವ ಮೂಲಕ ವೀರಪ್ಪನ್ ಕ್ರೌರ್ಯದ ವಿರುದ್ಧ ಹೋರಾಡಿ ಪ್ರಾಣ ತೆತ್ತ ಪೊಲೀಸರ ಬಲಿದಾನವನ್ನು ನೆನಪಿಸಿಕೊಳ್ಳುವ ಕೆಲಸವಾಗಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಾಮಾಪುರ ಪೊಲೀಸ್ ಠಾಣೆ ಬಳಿಕ ಸಚಿವರು ರಾಮಾಪುರದ ಶತಮಾನದ ಸರ್ಕಾರಿ ಶಾಲೆಗೂ ಭೇಟಿ ನೀಡಿದರು.