Tag: ವೀಣಾ ಮಲಿಕ್

  • ಇಂಡೋ-ಪಾಕ್ ಮ್ಯಾಚ್ ಬಳಿಕ ಸಾನಿಯಾ, ವೀಣಾ ನಡುವೆ ಟ್ವೀಟ್ ವಾರ್

    ಇಂಡೋ-ಪಾಕ್ ಮ್ಯಾಚ್ ಬಳಿಕ ಸಾನಿಯಾ, ವೀಣಾ ನಡುವೆ ಟ್ವೀಟ್ ವಾರ್

    ನವದೆಹಲಿ: ಭಾನುವಾರ ನಡೆದ ಭಾರತ ವಿರುದ್ಧ ಪಾಕಿಸ್ತಾನ ವಿಶ್ವಕಪ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಇಡೀ ದೇಶವೇ ಸಂಭ್ರಮಿಸಿದೆ. ಇದರ ಬೆನ್ನಲ್ಲಿ ಟಿನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ನಟಿ ವೀಣಾ ಮಲಿಕ್ ನಡುವೆ ಟ್ವೀಟ್ ವಾರ್ ನಡೆದಿದೆ.

    ಹೌದು. ಭಾರತ- ಪಾಕ್ ನಡುವಿನ ವಿಶ್ವಕಪ್ ಪಂದ್ಯಕ್ಕೂ ಮೊದಲು ಪಾಕ್ ಆಟಗಾರರು ಪಾರ್ಟಿ ಮಾಡಿದ್ದರು ಎಂಬ ವಿಷಯ ಸದ್ಯ ಎಲ್ಲೆಡೆ ಸುದ್ದಿಯಾಗುತ್ತಿದೆ. ಇದೇ ವಿಷಯಕ್ಕೆ ನಟಿ ವೀಣಾ ಮಲಿಕ್ ಅವರು ಟ್ವೀಟ್ ಮೂಲಕ ಸಾನಿಯಾ ಮಿರ್ಜಾರ ಕಾಲೆಳೆದಿದ್ದು, ಇಬ್ಬರ ನಡುವೆ ಟ್ವೀಟ್ ವಾರ್ ಶುರುವಾಗಿ ಸದ್ಯ ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದ್ದಾರೆ.

    ತಮ್ಮ ಬಗ್ಗೆ ಅಥವಾ ತಮ್ಮ ಕುಟುಂಬದ ಬಗ್ಗೆ ಯಾರಾದರೂ ಟೀಕೆ ಮಾಡಿದರೆ ಸಾನಿಯಾ ತಿರುಗೇಟು ನೀಡದೆ ಸುಮ್ಮನಿರಲ್ಲ. ಹಾಗೆಯೇ ವೀಣಾ ಮಲಿಕ್ ಟ್ವೀಟ್‍ಗೆ ಸಾನಿಯಾ ತಿರುಗೇಟು ನೀಡಿದ್ದಾರೆ. ಮ್ಯಾಂಚೆಸ್ಟರ್ ನಲ್ಲಿ ನಡೆದ ಭಾರತದ ವಿರುದ್ಧ ನಡೆದ ಪಂದ್ಯಕ್ಕೂ ಮೊದಲು ಪಾಕಿಸ್ತಾನದ ಆಟಗಾರ ಮತ್ತು ಸಾನಿಯಾ ಪತಿ ಶೋಯೆಬ್ ಜೊತೆಗೆ ಸೇರಿ ಪಾರ್ಟಿ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪಾಕ್ ಆಟಗಾರರ ಜೊತೆ ಸಾನಿಯಾರನ್ನು ಕೂಡ ಟ್ರೋಲ್ ಮಾಡಲಾಗುತ್ತಿದೆ.

    ಟ್ವಿಟ್ಟರ್ ನಲ್ಲಿ ವ್ಯಕ್ತಿಯೋರ್ವ ಸಾನಿಯ, ಶೋಯೆಬ್ ಮತ್ತು ಇತರ ತಂಡದ ಸದಸ್ಯರು ಮ್ಯಾಂಚೆಸ್ಟರ್ ನ ಶೀಶ (ಹುಕ್ಕ) ಬಾರ್ ವೊಂದರಲ್ಲಿ ಕುಳಿತಿದ್ದ ವಿಡಿಯೋವನ್ನು ಹಾಕಿ, ಪಂದ್ಯಕ್ಕೂ 7 ಗಂಟೆ ಮೊದಲು ಬಾರ್ ನಲ್ಲಿ ಹುಕ್ಕವನ್ನು ಸೇವಿಸುತ್ತಿದ್ದರು ಎಂದು ಹಾಕಲಾಗಿತ್ತು. ಈ ವಿಡಿಯೋ ಬಗ್ಗೆ ಸಾನಿಯಾ ಪ್ರತಿಕ್ರಿಯಿಸಿ, ನಾವು ಅಲ್ಲಿ ಊಟಕ್ಕೆ ಹೋಗಿದ್ದೆವು. ನಮ್ಮ ಅನುಮತಿಯಿಲ್ಲದೆ ಹೇಗೆ ವಿಡಿಯೋ ಮಾಡಿದಿರಿ? ಮುರ್ಖರೇ ಮುಂದಿನ ಬಾರಿ ಒಳ್ಳೆಯ ವಿಷಯವನ್ನು ಹುಡುಕಿ ಟೀಕೆ ಮಾಡಿ ಎಂದು ತಿರುಗೇಟು ನೀಡಿದ್ದರು.

    ಈ ಟೀಕೆಗಳು, ಟ್ರೋಲ್‍ಗಳ ನಡುವೆ ಬಿಗ್‍ಬಾಸ್‍ನ ಸ್ಪರ್ಧಿಯಾಗಿದ್ದ, ವಿವಾದಾತ್ಮಕ ನಟಿ ವೀಣಾ ಮಲಿಕ್ ಕೂಡ ಸಾನಿಯಾರನ್ನು ಕೆಣಕಿದ್ದಾರೆ. ಸಾನಿಯರ ಈ ಟ್ವೀಟ್‍ಗೆ ವೀಣಾ ಮಲಿಕ್, ಸಾನಿಯ ನಿಜವಾಗಿಯೂ ನನಗೆ ಆ ಮಗುವಿನ ಬಗ್ಗೆ ಚಿಂತೆಯಾಗುತ್ತಿದೆ. ನೀವು ಮಗುವನ್ನು ಹುಕ್ಕ ಬಾರ್‍ಗೆ ಕರೆದುಕೊಂಡು ಹೋಗಿದ್ದೀರಾ ಅದು ಅಪಾಯಕಾರಿ ಅಲ್ಲವೇ? ಹಾಗೂ ನನಗೆ ತಿಳಿದಿರುವ ಪ್ರಕಾರ ಆ ಸ್ಥಳ ಜಂಕ್ ಫುಡ್‍ಗಳಿಗೆ ತುಂಬಾನೆ ಪ್ರಸಿದ್ಧ. ಅದು ಆಟಗಾರರಿಗೆ ಒಳ್ಳೆಯದಲ್ಲ. ನೀವು ಕ್ರೀಡಾಪಟು ಮತ್ತು ತಾಯಿ ಕೂಡ ಇದು ನಿಮಗೆ ಈ ಬಗ್ಗೆ ಚೆನ್ನಾಗಿಯೇ ಗೊತ್ತಿರುತ್ತದೆ ಅಲ್ಲವೇ ಎಂದು ಟ್ವೀಟ್ ಮಾಡಿದ್ದಾರೆ.

    ವೀಣಾರ ಟ್ವೀಟ್‍ನಿಂದ ಕೋಪಗೊಂಡ ಸಾನಿಯಾ, ವೀಣಾ ನಾನು ನನ್ನ ಮಗನನ್ನು ಕರೆದುಕೊಂಡು ಹೋಗಿರಲಿಲ್ಲ. ಅಲ್ಲದೇ ಇದು ನಿಮಗೆ ಮತ್ತು ಬೇರೆಯಾರಿಗೋ ಸಂಬಂಧಪಟ್ಟ ವಿಷಯವಲ್ಲ. ಯಾಕೆಂದರೆ ನಾನು ನನ್ನ ಮಗನನ್ನು ನೋಡಿಕೊಳ್ಳುವ ಹಾಗೆ ಯಾರು ನೋಡಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ನಾನು ಪಾಕಿಸ್ತಾನ ತಂಡದ ಆರೋಗ್ಯ ತಜ್ಞೆಯೂ ಅಲ್ಲ, ತಾಯಿಯೂ ಅಲ್ಲ ಮತ್ತು ಶಿಕ್ಷಕಿಯೂ ಅಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ. ಅಷ್ಟೇ ಅಲ್ಲದೇ ವ್ಯಂಗ್ಯವಾಗಿ ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದಿದ್ದಾರೆ.

    ಇದರ ಮಧ್ಯೆ ಸಾನಿಯಾ ಪತಿ ಶೋಯೆಬ್ ಕೂಡ ಬೇರೆ ಟ್ವೀಟ್ ಮಾಡಿ, ನಾನು ಪಾಕಿಸ್ತಾನ ತಂಡಕ್ಕೆ 20ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಮಾಡಿಯೂ ನನ್ನ ವೈಯಕ್ತಿಕ ಜೀವನದ ಬಗ್ಗೆ ಸ್ಪಷ್ಟನೆ ಕೊಡಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಹಾಗೂ ಆ ವಿಡಿಯೋ ಜೂನ್ 15ರದ್ದಲ್ಲ ಜೂನ್ 13ರದ್ದು ಎಂದು ಹೇಳಿದ್ದಾರೆ.

    ಹಾಗೆಯೇ ತಮ್ಮ ಪತ್ನಿ ಮತ್ತು ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಅವರನ್ನು ಗುರಿಯಾಗಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಕುಟುಂಬದ ವಿಷಯಕ್ಕೆ ಸಂಬಂಧಿಸಿದಂತೆ ಗೌರವವನ್ನು ಕಾಪಾಡಬೇಕು ಎಂದು ಎಲ್ಲಾ ಆಟಗಾರರ ಪರವಾಗಿ ನಾನು ಮಾಧ್ಯಮಗಳು ಮತ್ತು ಜನರನ್ನು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.

    ಜೂನ್ 16ರಂದು ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಭಾರತ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ 89 ರನ್‍ಗಳಿಂದ ಸೋಲು ಕಂಡಿತ್ತು. ಶೋಯೆಬ್ ಕೂಡ ಕೇವಲ 1 ನಿಮಿಷದಲ್ಲಿ ಔಟ್ ಆಗಿದ್ದರು. ಇದರಿಂದ ರೊಚ್ಚಿಗೆದ್ದ ಪಾಕ್ ಅಭಿಮಾನಿಗಳು ಆಟಗಾರರನ್ನು ಮನಬಂದಂತೆ ಟೀಕಿಸುತ್ತಿದ್ದಾರೆ.