Tag: ವೀಕ್ಷಕರು

  • ಗ್ರೌಂಡ್‌ ಹೊರಗೂ ದಾಖಲೆ ಬರೆದ ನಾಕೌಟ್‌ ಕದನ – ಆರ್‌ಸಿಬಿಗೆ ಮುಂದಿರುವ ಕಠಿಣ ಸವಾಲುಗಳೇನು?

    ಗ್ರೌಂಡ್‌ ಹೊರಗೂ ದಾಖಲೆ ಬರೆದ ನಾಕೌಟ್‌ ಕದನ – ಆರ್‌ಸಿಬಿಗೆ ಮುಂದಿರುವ ಕಠಿಣ ಸವಾಲುಗಳೇನು?

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (RCB vs CSK) ನಡುವಿನ ಟಾಟಾ ಐಪಿಎಲ್ 2024ರ ನಾಕೌಟ್‌ ಪಂದ್ಯವು ಜಿಯೋಸಿನಿಮಾದಲ್ಲಿ‌ ಏಕಕಾಲಕ್ಕೆ 50 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಮೈದಾನದ ಹೊರಗೂ ದಾಖಲೆ ಬರೆದಿದೆ.

    ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯವು ರಣರೋಚಕವಾಗಿತ್ತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆರ್‌ಸಿಬಿ 218 ರನ್‌ ಗಳಿಸಿ ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ಗೆ (IPL Playoffs) ಲಗ್ಗೆಯಿಡಲು ಅಗತ್ಯವಿದ್ದ ಗುರಿ 201 ರನ್‌ ಮಾತ್ರವಾಗಿತ್ತು. ಕೊನೇ ಕ್ಷಣದವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ಗಳಿಂದ ಸೋತರೆ, 10 ರನ್‌ಗಳ ಅಂತರದಲ್ಲಿ ಪ್ಲೇ ಆಫ್‌ ತಲುಪುವ ಅವಕಾಶವನ್ನು ಕೈಚೆಲ್ಲಿತು. ಆದ್ರೆ ಉಭಯ ತಂಡಗಳ ಈ ರಣರೋಚಕ ಕದನ ಗ್ರೌಂಡ್‌ ಹೊರಗೂ ದಾಖಲೆ ಬರೆದಿರುವುದೇ ವಿಶೇಷ.

    ವೀಕ್ಷಣೆಯಲ್ಲೂ ದಾಖಲೆ:
    ಪ್ರಸಕ್ತ ವರ್ಷದ ಎಲ್ಲ ಪಂದ್ಯಗಳಲ್ಲೂ ದಾಖಲೆ ವೀಕ್ಷಕರನ್ನು ಕಂಡಿರುವ ಆರ್‌ಸಿಬಿ‌, ಶನಿವಾರ ನಡೆದ ನಾಕೌಟ್‌ ಕದನದಲ್ಲಿ ಬರೋಬ್ಬರಿ 50 ಕೋಟಿ ನೋಡುಗರನ್ನ (JioCinema Viewers) ಕಂಡಿದ್ದು, ದಾಖಲೆ ವೀಕ್ಷಕರನ್ನು ಕಂಡ ಪಂದ್ಯ ಎನಿಸಿಕೊಂಡಿದೆ.

    ಯಾರ ವಿರುದ್ಧ – ಯಾವ ಪಂದ್ಯದಲ್ಲಿ ಎಷ್ಟು ಮಂದಿ ವೀಕ್ಷಣೆ?
    ಆರ್‌ಸಿಬಿ vs ಸಿಎಸ್‌ಕೆ – 50 ಕೋಟಿ
    ಆರ್‌ಸಿಬಿ vs ಸಿಎಸ್‌ಕೆ – 38 ಕೋಟಿ
    ಎಸ್‌ಆರ್‌ಹೆಚ್‌ vs ಎಂಐ – 28 ಕೋಟಿ
    ಸಿಎಸ್‌ಕೆ vs ಎಂಐ – 26 ಕೋಟಿ
    ಆರ್‌ಸಿಬಿ vs ಕೆಕೆಆರ್‌ – 25 ಕೋಟಿ
    ಸಿಎಸ್‌ಕೆ vs ಜಿಟಿ – 25 ಕೋಟಿ
    ಆರ್‌ಸಿಬಿ vs ಪಿಬಿಕೆಎಸ್‌ – 24 ಕೋಟಿ
    ಸಿಎಸ್‌ಕೆ vs ಡಿಸಿ – 24 ಕೋಟಿ
    ಆರ್‌ಸಿಬಿ vs ಎಸ್‌ಆರ್‌ಹೆಚ್‌ – 24 ಕೋಟಿ
    ಆರ್‌ಸಿಬಿ vs ಎಂಐ – 23 ಕೋಟಿ
    ಆರ್‌ಸಿಬಿ vs ಆರ್‌ಆರ್‌ – 23 ಕೋಟಿ

    ಆರ್‌ಸಿಬಿಗೆ ಮುಂದಿದೆ ಕಠಿಣ ಸವಾಲು?
    ಸತತ 6 ಪಂದ್ಯಗಳನ್ನು ಗೆದ್ದು ಬೀಗಿರುವ ಆರ್‌ಸಿಬಿ ಮುಂದೆ ಬಲಿಷ್ಠ ತಂಡಗಳನ್ನು ಎದುರಿಸಬೇಕಾಗಿದೆ. ಈಗಾಗಲೇ ಕೋಲ್ಕತ್ತಾ ನೈಟ್‌ರೈಡರ್ಸ್‌ ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ತೀವ್ರ ಪೈಪೋಟಿ ನಡೆಯುತ್ತಿದೆ. ಮೊದಲ ಕ್ವಾಲಿಫೈಯರ್ (Qualifier) ಪಂದ್ಯದಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ಕಾದಾಟ ನಡೆಸಲಿವೆ. ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದ್ದು, ಸೋತ ತಂಡ ಎಲಿಮಿನೇಟರ್‌ -2 (Eliminator) ಹಂತದಲ್ಲಿ ಕಣಕ್ಕಿಳಿಯಲಿದೆ. ಆದ್ರೆ ಆರ್‌ಸಿಬಿ 4ನೇ ಸ್ಥಾನದಲ್ಲಿರುವುದರಿಂದ 3ನೇ ಸ್ಥಾನ ಪಡೆದ ತಂಡದೊಂದಿಗೆ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಸೆಣಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಎಲಿಮಿನೇಟರ್‌ 2ರಲ್ಲಿ, ಕ್ವಾಲಿಫೈಯರ್-1ರಲ್ಲಿ ಸೋತ ತಂಡದೊಂದಿಗೆ ಕಾದಾಟ ನಡೆಸಬೇಕಾಗುತ್ತದೆ. ಈ ಎರಡರಲ್ಲಿ ಯಾವುದೇ ಪಂದ್ಯದಲ್ಲಿ ಸೋತರೂ ಆರ್‌ಸಿಬಿ ಗಂಟುಮೂಟೆ ಕಟ್ಟಬೇಕಾಗುತ್ತದೆ. ಇಲ್ಲವಾದ್ರೆ ಈ ಎರಡು ಹಂತಗಳನ್ನು ದಾಟಿದ ನಂತರ ಫೈನಲ್‌ ಪ್ರವೇಶಿಸುವ ಅವಕಾಶ ಪಡೆಯಲಿದೆ.

    ಪ್ಲೇ ಆಫ್‌ ಪಂದ್ಯಗಳು ನಡೆಯುವುದು ಎಲ್ಲಿ?
    ಮೇ 21 ನಡೆಯುವ ಮೊದಲ ಕ್ವಾಲಿಫೈಯರ್ ಮತ್ತು ಮೇ 22ರಂದು ನಡೆಯುವ ಮೊದಲ ಎಲಿಮಿನೇಟರ್‌ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೇ 24ರಂದು ನಡೆಯುವ ಕ್ವಾಲಿಫೈಯರ್-2 ಹಾಗೂ ಮೇ 26ರಂದು ನಡೆಯುವ ಫೈನಲ್‌ ಪಂದ್ಯಗಳು ಚೆನ್ನೈನ ಎಂ.ಎ ಚಿದಂಬರಂ (ಚೆಪಾಕ್‌) ಕ್ರೀಡಾಂಗಣದಲ್ಲಿ ನಡೆಯಲಿದೆ.

  • ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಐಪಿಎಲ್

    ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಐಪಿಎಲ್

    ನವದೆಹಲಿ: ಸೆಪ್ಟೆಂಬರ್ 19ರಿಂದ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತನ್ನ ಆರಂಭಿಕ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದೆ.

    ಕಳೆದ ಮಾರ್ಚ್ ತಿಂಗಳಿನಲ್ಲೇ ನಡೆಯಬೇಕಿದ್ದ ಐಪಿಎಲ್, ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿತ್ತು. ಈ ನಡುವೆ ಐಪಿಎಲ್ ಅನ್ನು ಈ ಬಾರೀ ರದ್ದು ಮಾಡಲಾಗುತ್ತದೆ ಎಂಬ ಮಾತು ಕೂಡ ಕೇಳಿಬಂದಿತ್ತು. ಆದರೆ ಬಿಸಿಸಿಐ ಈ ಬಾರಿಯ ಐಪಿಎಲ್ ಅನ್ನು ನಡೆಸಲೇಬೇಕು ಎಂದು ಪಣತೊಟ್ಟು ಯುಎಇಯಲ್ಲಿ ಟೂರ್ನಿಯನ್ನು ಯಶಸ್ವಿಯಾಗಿ ಆರಂಭ ಮಾಡಿತ್ತು. ಅದರ ಪ್ರತಿಫಲ ಎಂಬಂತೆ ಐಪಿಎಲ್ ತನ್ನ ಆರಂಭಿಕ ಪಂದ್ಯದಲ್ಲೇ ಬಹು ದೊಡ್ಡ ದಾಖಲೆ ಬರೆದಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜೇ ಶಾ ಅವರು, ಡ್ರೀಮ್ 11 ಐಪಿಎಲ್ ಮೊದಲ ಪಂದ್ಯದಲ್ಲೇ ದಾಖಲೆ ಬರೆದಿದೆ. ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಪ್ರಕಾರ, ಐಪಿಎಲ್ ಆರಂಭಿಕ ಪಂದ್ಯವನ್ನು ಸುಮಾರು 20 ಕೋಟಿ ಜನರು ಆನ್‍ಲೈನ್ ಮತ್ತು ಟಿವಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಇಲ್ಲಿಯವರೆಗೂ ಯಾವುದೇ ಕ್ರೀಡಾ ಟೂರ್ನಿಯ ಮೊದಲ ಪಂದ್ಯವನ್ನು ಇಷ್ಟೊಂದು ಜನರು ವೀಕ್ಷಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಟ್ವೀಟ್ ಮಾಡಿದ್ದು, ಧನ್ಯವಾದಗಳು ಇಂಡಿಯಾ ಇದು ಡ್ರೀಮ್ 11 ಐಪಿಎಲ್‍ನಲ್ಲಿ ಡ್ರೀಮ್ ಆರಂಭವಾಗಿದೆ. ಇಡೀ ಐಪಿಎಲ್ ಇತಿಹಾಸದಲ್ಲೇ ಟಿವಿ ಮತ್ತು ಡಿಜಿಟೆಲ್ ಮಾಧ್ಯಮದಲ್ಲಿ ಅತೀ ಹೆಚ್ಚು ಜನರು ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಮುಂಬೈ ಮತ್ತು ಚೆನ್ನೈ ನಡುವಿನ ಮೊದಲ ಪಂದ್ಯವನ್ನು 200 ದಶಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದೆ.

    ಐಪಿಎಲ್ ಆರಂಭಿಕ ಪಂದ್ಯದಲ್ಲಿ ಐಪಿಎಲ್‍ನ ಜನಪ್ರಿಯ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಕೊರೊನಾ ಸಮಯದಲ್ಲಿ ಯಾವುದೇ ಮನರಂಜನೆ ಇಲ್ಲದೇ ಬೇಸತ್ತಿದ್ದ ಜನರು, ಆರಂಭಿಕ ಪಂದ್ಯವನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಐಪಿಎಲ್ ಹೊಸ ದಾಖಲೆ ಬರೆಯಲು ದಾರಿ ಮಾಡಿಕೊಟ್ಟಿದ್ದಾರೆ.

    ಸೆಪ್ಟಂಬರ್ 19ರಂದು ಅಬುಧಾಬಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ಜಯಭೇರಿ ಭಾರಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಮುಂಬೈ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತ್ತು. ಅದರಂತೆ ನಿಗದಿತ 20 ಓವರ್ ಗಳಲ್ಲಿ ಮುಂಬೈ ಕೇವಲ 162 ರನ್ ಗಳಿಸಿತ್ತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಚೆನ್ನೈ ಅಂಬಾಟಿ ರಾಯುಡು ಮತ್ತು ಫಾಫ್ ಡು ಪ್ಲೆಸಿಸ್ ಅವರ ಅಮೋಘ ಅರ್ಧ ಶತಕದಿಂದ 5 ವಿಕೆಟ್ ಅಂತರದಿಂದ ಗೆಲುವು ಸಾಧಿಸಿತ್ತು.

  • ಉಡುಪಿಯಲ್ಲಿ ಕಂಕಣ ಸೂರ್ಯಗ್ರಹಣ ಕಂಡು ಜನರಲ್ಲಿ ಹರ್ಷ- 93.2 ಗ್ರಹಣ ದಾಖಲು

    ಉಡುಪಿಯಲ್ಲಿ ಕಂಕಣ ಸೂರ್ಯಗ್ರಹಣ ಕಂಡು ಜನರಲ್ಲಿ ಹರ್ಷ- 93.2 ಗ್ರಹಣ ದಾಖಲು

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಶೇ. 93.2ರಷ್ಟು ಸೂರ್ಯ ಗ್ರಹಣ ಗೋಚರವಾಗಿದೆ. ರಾಜ್ಯದ ಅತೀ ಹೆಚ್ವು ಗ್ರಹಣಗೋಚರ ಸ್ಥಳಗಳಲ್ಲಿ ಉಡುಪಿಯೂ ಒಂದಾಗಿದೆ.

    ಜಿಲ್ಲೆಯಲ್ಲಿ 9.24 ನಿಮಿಷಕ್ಕೆ ಗ್ರಹಣ ಪೀಕ್ ಲೆವೆಲ್ ತಲುಪಿತ್ತು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಅಮೆಚೂರ್ ಆಸ್ಡ್ರೋನಾಮರ್ಸ್ ಕ್ಲಬ್ ಆಯೋಜಿಸಿದ್ದ ಗ್ರಹಣ ವೀಕ್ಷಣೆ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾದರು. ಮಕ್ಕಳು, ಮಹಿಳೆಯರು, ಯುವಕ ಯುವತಿಯರು ಅತೀ ಹೆಚ್ಚು ಸಂಖ್ಯೆಯಲ್ಲಿ ಗ್ರಹಣ ವೀಕ್ಷಣೆ ಮಾಡಿದರು.

    ಗ್ರಹಣ ತನ್ನ ಅಂತಿಮ ಘಟ್ಟ ತಲುಪಿದಾಗ ಜನರು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಬಂದ ಎಲ್ಲರಿಗೂ ಗ್ರಹಣವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಪಬ್ಲಿಕ್ ಹೀರೋ ಎಪಿ ಭಟ್ ಮಾಡಿದ್ದರು. ಗ್ರಹಣ ಕಂಕಣದತ್ತ ಬರುತ್ತಿದ್ದ ಸಂದರ್ಭ ಮಾತನಾಡಿದ ಅವರು, ಉಡುಪಿಯಲ್ಲಿ ಬೆಳಗ್ಗೆಯೇ ಕತ್ತಲಾಗುತ್ತಿದೆ. ಇದೊಂದು ಖಗೋಳ ಕೌತುಕ ಎಂದರು. 64 ವರ್ಷದ ಬಳಿಕ ಬರುವ ಈ ವಿದ್ಯಮಾನ ಮಿಸ್ ಮಾಡಿಕೊಳ್ಳಬಾರದು ಎಂದು ರಾಜ್ಯದ ಲಕ್ಷ ಜನ ಗ್ರಹಣ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಿರುವುದಾಗಿ ಹೇಳಿದರು.

    ಗ್ರಹಣ ವೀಕ್ಷಿಸಿದ ಧಾತ್ರಿ ಮತ್ತು ನಿಧಿ ಮಾತನಾಡಿ, ಗ್ರಹಣ ಅಂದಾಗ ಕುತೂಹಲವಿತ್ತು, ಭಯ ಆಗಿಲ್ಲ. ಪಿಪಿಸಿಯಲ್ಲಿ ಗ್ರಹಣ ವೀಕ್ಷಣೆ ವ್ಯವಸ್ಥೆ ಬಹಳ ಚೆನ್ನಾಗಿದೆ. ನಾವು ವಿಜ್ಞಾನ ನಂಬುವವರು. ಜ್ಯೋತಿಷಿಗಳು ಹೇಳುವುದನ್ನು ನಂಬಲ್ಲ ಅಂತ ಹೇಳಿದರು. ಇಡೀ ಪ್ರಕ್ರಿಯೆಯ ಫೋಟೋ ತೆಗೆದುಕೊಂಡಿದ್ದೇವೆ. ಇದೊಂದು ಮರೆಯಲಾಗದ ದಿನ ಅಂತ ಸಂತೋಷ ಹಂಚಿಕೊಂಡರು.