Tag: ವಿ.ವೈ.ಘೋರ್ಪಡೆ

  • ಐಎಂಎ ಹಗರಣ: ಕಾಂಗ್ರೆಸ್‍ನ ಮೊದಲ ವಿಕೆಟ್ ಪಥನ

    ಐಎಂಎ ಹಗರಣ: ಕಾಂಗ್ರೆಸ್‍ನ ಮೊದಲ ವಿಕೆಟ್ ಪಥನ

    – ದೇಶಪಾಂಡೆ ಹೇಳಿಕೆ ಬೆನ್ನಲ್ಲೇ ಬೇಗ್ ಮೊಬೈಲ್ ಸ್ವೀಚ್ಛ್ ಆಫ್!
    – ರೆಬೆಲ್ ನಾಯಕರಿಗೆ ಬಿಸಿ ಮುಟ್ಟಿಸಿದ ರಾಜ್ಯ ‘ಕೈ’ ಪಡೆ

    ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಕಾಂಗ್ರೆಸ್‍ನಿಂದ ಅಮಾನತು ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಐಎಂಎ ಹಗರಣದಿಂದ ಪಕ್ಷಕ್ಕೆ ಉಂಟಾಗುವ ಮುಜುಗರವನ್ನು ತಪ್ಪಿಸುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಮಾತನು ನಿರ್ಧಾರ ಕೈಗೊಂಡಿತಾ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.

    ರೋಷನ್ ಬೇಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದಾಗಲೂ ಮಾಜಿ ಸಚಿವರ ವಿರುದ್ಧ ಯಾವುದೇ ಕ್ರಮ ಆಗಿರಲಿಲ್ಲ. ಕೆಪಿಸಿಸಿಯಿಂದ ಕ್ರಮಕ್ಕೆ ಒತ್ತಾಯಿಸಿದಾಗಲೂ, ರೋಷನ್ ಬೇಗ್ ಪಕ್ಷದ ಹಿರಿಯ ನಾಯಕ, ಸಿಟ್ಟಲ್ಲಿ ಮಾತನಾಡಿದ್ದಾರೆ. ಅವರನ್ನು ಕರೆಸಿ ಮಾತನಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು ಎನ್ನಲಾಗಿತ್ತು.

    ಐಎಂಎ ಹಗರಣದಲ್ಲಿ ರೋಷನ್ ಬೇಗ್ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬ ಮತ್ತೊಂದು ವರದಿಯನ್ನು ಕೆಪಿಸಿಸಿ ಭಾನುವಾರ ಸಂಜೆ ಕಳುಹಿಸಿತ್ತು. ಈ ವಿಷಯದ ಗಂಭೀರತೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಎಐಸಿಸಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಮುಂದೆ ತನಿಖೆ ನಡೆದು ಪಕ್ಷ ತಲೆ ತಗ್ಗಿಸುವಂತೆ ಆಗುವುದು ಬೇಡ. ಈಗಾಗಲೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ದೂರು ಎಐಸಿಸಿ ಮುಂದೆ ಇದೆ. ಅದೇ ಆಧಾರದ ಮೇಲೆ ಅಮಾನತು ಮಾಡುವುದು ಸೂಕ್ತ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದರು. ಎಲ್ಲ ಮೂಲಗಳಿಂದ ಮಾಹಿತಿ ಕಲೆ ಹಾಕಿದ ಹೈಕಮಾಂಡ್ ಅಮಾನತು ಮಾಡಲು ಆದೇಶ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರು ಆರೋಪಿ ಮನ್ಸೂರ್ ಖಾನ್ ಅವರನ್ನು ನನ್ನ ಬಳಿ ಕರೆದುಕೊಂಡು ಬಂದಿದ್ದರು. ಮನ್ಸೂರ್ ನಮ್ಮ ಕ್ಷೇತ್ರದವರು, ಇವರು ಶಾಲೆಗಳನ್ನು ನಡೆಸುತ್ತಿದ್ದಾರೆ. ಒಳ್ಳೆಯ ವ್ಯಕ್ತಿ ಎಂದು ಮನ್ಸೂರ್ ಅವರನ್ನು ರೋಷನ್ ಬೇಗ್ ತಮಗೆ ಪರಿಚಯಿಸಿದ್ದರು ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದರು.

    ಮನ್ಸೂರ್ ಅವರ ಸಂಸ್ಥೆಗೆ ಒಂದು ಸಣ್ಣ ಸಮಸ್ಯೆ ಇದೆ. ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿರುವ ಕಾರಣ ಯಾವುದೇ ವ್ಯವಹಾರ ಆಗುತ್ತಿಲ್ಲ. ಇದರಿಂದ ತೊಂದರೆಯಾಗಿದೆ ಎಂದು ರೋಷನ್ ಬೇಗ್ ಅವರು ನನ್ನ ಬಳಿ ನೆರವು ಕೋರಿದ್ದು ನಿಜ ಎಂದು ಸಚಿವರು ಒಪ್ಪಿಕೊಂಡಿದ್ದರು.

    ಸಚಿವ ಆರ್.ವಿ.ದೇಶಪಾಂಡೆ ಅವರ ಹೇಳಿಕೆ ಬೆನ್ನಲ್ಲೇ ರೋಷನ್ ಬೇಗ್ ಅವರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಕಾಂಗ್ರೆಸ್‍ನ ನಾಯಕರ ಸಂಪರ್ಕದಿಂದ ದೂರ ಉಳಿದಿದ್ದರು. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಕಾಂಗ್ರೆಸ್ ಪಕ್ಷ ಯಾರ ಪರವಾಗಿಯೂ ನಿಲ್ಲಲ್ಲ. ಐಎಂಎ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ. ವಂಚನೆಗೆ ಒಳಗಾಗದವರಿಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದ್ದರು.

    ಈ ಎಲ್ಲ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಐಎಂಎ ವಂಚನೆ ಪ್ರಕರಣದಿಂದ ಉಂಟಾಗುವ ಮುಜುಗುರವನ್ನು ತಪ್ಪಿಸಿಕೊಳ್ಳಲು ರೋಷನ್ ಬೇಗ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಕಾಂಗ್ರೆಸ್‍ನಿಂದ ರೋಷನ್ ಬೇಗ್ ಅಮಾನತು

    ಕಾಂಗ್ರೆಸ್‍ನಿಂದ ರೋಷನ್ ಬೇಗ್ ಅಮಾನತು

    ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಕಾಂಗ್ರೆಸ್‍ನಿಂದ ಅಮಾನತು ಮಾಡಿ ಕೆಪಿಸಿಸಿ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಆದೇಶ ಹೊರಡಿಸಿದ್ದಾರೆ.

    ಮಾಜಿ ಸಚಿವ ರೋಷನ್ ಬೇಗ್ ವಿರುದ್ಧ ಕೆಪಿಸಿಸಿ ನೀಡಿದ್ದ ದೂರನ್ನು ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್ ಸೂಕ್ತ ಕ್ರಮಕ್ಕೆ ಸಮ್ಮತಿಸಿದೆ. ತಕ್ಷಣವೇ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ವಿ.ವೈ.ಘೋರ್ಪಡೆ ತಿಳಿಸಿದ್ದಾರೆ.

    ರೋಷನ್ ಬೇಗ್ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರು. ಆದರೆ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ರೋಷನ್ ಬೇಗ್ ಅವರು ತಮ್ಮದೇ ಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದರು. ರಾಜ್ಯದಲ್ಲಿ ಪಕ್ಷ ದಯನೀಯವಾಗಿ ಸೋಲಲು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲು ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಬೇಕೆಂದು ಎಂದು ಕಿಡಿಕಾರಿದ್ದರು.

    ಲೋಕಸಭಾ ಚುನಾವಣೆಗೂ ಮುನ್ನ ನಾನೇ ಮುಂದಿನ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದರು. ಈಗ ಫಲಿತಾಂಶ ಬಂದ ಮೇಲೆ ಇದೆಲ್ಲ ಇಳಿಯಿತೆ ಸಿದ್ದರಾಮಯ್ಯ ಎಂದಿದ್ದ ರೋಷನ್ ಬೇಗ್, “ಇಳಿದು ಬಾ, ನೀ ಇಳಿದು ಬಾ” ಎಂದು ಸಿದ್ದರಾಮಯ್ಯ ಮಾದರಿಯನ್ನೇ ಅನುಕರಿಸಿ ನಟನೆಯ ಮೂಲಕ ವ್ಯಂಗ್ಯವಾಡಿದ್ದರು. ಅಷ್ಟೇ ಅಲ್ಲದೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧವೂ ಕಿಡಿಕಾರಿದ್ದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಮೂಲಕ ಕಾಂಗ್ರೆಸ್ ನಾಯಕರ ಕೆಂಗೆಣ್ಣಿಗೆ ಗುರಿಯಾಗಿದ್ದರು.

    ಐಎಂಎ ಹಗರಣದಲ್ಲಿ ರೋಷನ್ ಬೇಗ್ ಅವರ ಹೆಸರು ಕೇಳಿ ಬರುತ್ತಿದೆ. ಹೀಗಾಗಿ ಮುಜುಗುರಕ್ಕೆ ಈಡಾಗುವುದನ್ನು ತಪ್ಪಿಸಲು  ಮುಂಜಾಗ್ರತಾ ಕ್ರಮವಾಗಿ ಮಾಜಿ ಸಚಿವರ ವಿರುದ್ಧ ಎಐಸಿಸಿ ಕ್ರಮಕೈಗೊಂಡಿದೆ ಎಂದು ಮೂಲಗಳಿಂದ ಕೇಳಿಬಂದಿದೆ.