Tag: ವಿ.ಜಿ ಸಿದ್ಧಾರ್ಥ್

  • ಡಿ.ಕೆ.ಶಿವಕುಮಾರ್ ಪುತ್ರಿಗೆ ಕೂಡಿಬಂದ ಕಂಕಣ ಭಾಗ್ಯ

    ಡಿ.ಕೆ.ಶಿವಕುಮಾರ್ ಪುತ್ರಿಗೆ ಕೂಡಿಬಂದ ಕಂಕಣ ಭಾಗ್ಯ

    -ರಾಜಕೀಯ ಗುರುವಿನ ಕುಟುಂಬದ ಜೊತೆ ಸಂಬಂಧ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಿರಿಯ ಪುತ್ರಿ ಐಶ್ವರ್ಯಾರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

    ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ಗುರು ಮಾಜಿ ಸಿಎಂ ಎಸ್.ಎಂ.ಕೃಷ್ಣ ಕುಟುಂಬದ ಜೊತೆಯೇ ಸಂಬಂಧ ಬೆಳಸಲಿದ್ದಾರೆ. ಎಸ್.ಎಂ.ಕೃಷ್ಣ ಅವರ ಮೊಮ್ಮಗ, ಉದ್ಯಮಿ ದಿವಂಗತ ಸಿದ್ದಾರ್ಥ್ ಹಿರಿಯ ಪುತ್ರ ಅಮರ್ಥ್ಯ ಸುಬ್ರಮಣ್ಯ ಹೆಗ್ಡೆ ಜೊತೆಗೆ ಡಿ.ಕೆ.ಶಿವಕುಮಾರ್ ಹಿರಿಯ ಪುತ್ರಿ ಐಶ್ವರ್ಯ ಮದುವೆ ಮಾತುಕತೆ ನಡೆದಿದೆ. ಕಳೆದ ಮೂರು ತಿಂಗಳಿನಿಂದ ಈ ಸಂಬಂಧ ಮಾತುಕತೆ ಹಂತ ಹಂತವಾಗಿ ನಡೆದಿತ್ತು. ಈಗ ಅಂತಿಮ ಮಾತುಕತೆ ನಡೆದಿದ್ದು ವಧು ವರರ ಮನೆಯವರು ಪರಸ್ಪರರ ಮನೆಗೆ ಹೋಗಿ ಬರುವ ಶಾಸ್ತ್ರವನ್ನ ಮುಗಿಸಿದ್ದಾರೆ.

    ಬಹುತೇಕ ಮಾತುಕತೆ ಮುಗಿದಿದ್ದು ಮುಂದಿನ ವರ್ಷ ಮದುವೆ ದಿನಾಂಕ ನಿಗದಿಯಾಗುವ ಸಾಧ್ಯತೆಗಳಿವೆ. ಶೀಘ್ರದಲ್ಲಿಯೇ ನಿಶ್ಚಿತಾರ್ಥ ಸಹ ನಡೆಯಲಿದೆ ಎಂದು ಹೇಳಲಾಗಿದೆ. ಸಿದ್ಧಾರ್ಥ ಹೆಗ್ಡೆ ಪುತ್ರ ಅಮರ್ಥ್ಯ ಸುಬ್ರಮಣ್ಯ ಹೆಗ್ಡೆ ಯುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ನಿಶ್ಚಿತಾರ್ಥ ದಿನಾಂಕ ಹಾಗೂ ಮದುವೆ ದಿನಾಂಕವಷ್ಟೆ ಅಧಿಕೃತವಾಗಬೇಕಿದೆ.

    ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಎಲ್ಲ ದೇವರ ಇಚ್ಛೆ. ಸಿದ್ಧಾರ್ಥ್ ಅವರು ಸಾವನ್ನಪ್ಪಿ ಇನ್ನು ಒಂದು ವರ್ಷ ಕಳೆದಿಲ್ಲ. ಸಿದ್ಧಾಥ್ ಅವರ ಒಂದು ವರ್ಷದ ಕಾರ್ಯಗಳು ನಡೆಯಬೇಕಿದೆ. ಎಲ್ಲ ಕಾರ್ಯಕ್ರಮಗಳು ಮುಗಿದ ಬಳಿಕ ಮದುವೆಯ ಕೆಲಸಗಳು ನಡೆಯಲಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

  • ಟ್ಯಾಕ್ಸ್ ಟೆರರಿಸಂ ದೇಶದ ಸಾಧನೆಯನ್ನು ಕುಗ್ಗಿಸುತ್ತಿದೆ: ಇನ್ಫೋಸಿಸ್ ಮಾಜಿ ನಿರ್ದೇಶಕ

    ಟ್ಯಾಕ್ಸ್ ಟೆರರಿಸಂ ದೇಶದ ಸಾಧನೆಯನ್ನು ಕುಗ್ಗಿಸುತ್ತಿದೆ: ಇನ್ಫೋಸಿಸ್ ಮಾಜಿ ನಿರ್ದೇಶಕ

    ನವದೆಹಲಿ: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಸಾವಿನ ಬೆನ್ನಲ್ಲೇ ಉದ್ಯಮಿಗಳು ಟ್ಯಾಕ್ಸ್ ಟೆರರಿಸಂ ಕುರಿತು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

    ಇದೀಗ ಉದ್ಯಮಿ ಹಾಗೂ ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಆಕ್ರೋಶ ವ್ಯಕ್ತಪಡಿಸಿದ್ದು, ಉದ್ಯಮಿಗಳು ಟ್ಯಾಕ್ಸ್ ಟೆರರಿಸಂನಿಂದ ಬೇಸತ್ತು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

    ಟ್ಯಾಕ್ಸ್ ಟೆರರಿಸಂ ಉದ್ಯಮಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ ಎಂಬ ಮಾತುಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ್ ಅವರ ಸಾವಿನ ನಂತರ ಕೇಳಿ ಬಂದಿತ್ತು. ಇದೀಗ ಮೋಹನ್ ದಾಸ್ ಪೈ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಸಹ ಈ ಕುರಿತು ಅಸಮಾಧಾನ ಹೊರ ಹಾಕಿದ್ದು, ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂರ್ದಶದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

    ತೆರಿಗೆ ಭಯೋತ್ಪಾದನೆಯು ದೇಶದಲ್ಲಿನ ವ್ಯಾಪಾರದ ಸರಳತೆಗೆ ಅಪಾಯವನ್ನು ತಂದೊಡ್ಡಿದೆ. ಇದನ್ನು ಕೊನೆಗೊಳಿಸಲು ಸರ್ಕಾರ ಭರವಸೆ ನೀಡಿದರೂ ಅನಗತ್ಯ ತೆರಿಗೆ ಕುರಿತು ದೂರುಗಳು ಇನ್ನೂ ವ್ಯಾಪಕವಾಗಿವೆ. ಇದು ದೇಶದ ಸಾಧನೆಯನ್ನು ಕುಗ್ಗಿಸುತ್ತದೆ ಎಂದು ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.

    ಈ ಕುರಿತು ಪೈ ಅವರು ತಮ್ಮ ಜೀವನದಲ್ಲಾದ ಘಟನೆ ಮೂಲಕ ವಿವರಿಸಿದ್ದು, ಕಿರಣ್ ಎಂಬ ಸರ್ಕಾರಿ ಅಧಿಕಾರಿ ಸಂದೇಶ ಕಳುಹಿಸಿದ್ದರು. ಇದಕ್ಕೆ ನಾನು ಉತ್ತರಿಸಿ, ಇದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದೆ. ಇದು ಅಧಿಕಾರಿಗಳಲ್ಲಿ ಯಾವ ರೀತಿಯ ಸಂಸ್ಕøತಿ ಬೆಳೆದಿದೆ ಎಂಬುದನ್ನು ತೋರಿಸುತ್ತದೆ. ಇದನ್ನು ಯಾರು ಯೋಚಿಸುತ್ತಾರೆ, ಅವರು ಹುಟ್ಟಿರುವುದೇ ನಮ್ಮನ್ನು ಆಳುವುದಕ್ಕಾಗಿ ಎಂಬ ಅಹಂನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಘಟನೆ ಕುರಿತು ಅಧಿಕಾರಿ ಮತ್ತೆ ಪ್ರತ್ಯುತ್ತರ ನೀಡಿದ್ದು, ಇನ್ಫೋಸಿಸ್‍ನ ಸಹೋದ್ಯೋಗಿಯನ್ನು ಕರೆದು ನನ್ನನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಬೆದರಿಕೆ ಹಾಕಿದ್ದರು ಎಂದು ಘಟನೆಯನ್ನು ವಿವರಿಸಿದ್ದಾರೆ. ಇಂತಹ ವರ್ತನೆಗಳನ್ನು ಖಂಡಿಸಬೇಕಿದೆ. ಈ ಮೂಲಕ ತೆರಿಗೆ ಭಯೋತ್ಪಾದನೆಯನ್ನು ತೊಲಗಿಸಬೇಕಿದೆ. ಆದರೆ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಕುರಿತು ಭರವಸೆ ನೀಡಿದ್ದರು. ಅಲ್ಲದೆ, ಇದು 2014ರ ಎನ್‍ಡಿಎ ಪ್ರಣಾಳಿಕೆಯಲ್ಲಿಯೂ ಇದೆ. ಕಳೆದ 5 ವರ್ಷಗಳಿಂದ ಇದು ದ್ವಿಗುಣಗೊಂಡಿದ್ದು, 6 ಲಕ್ಷ ಕೋಟಿ ರೂ. ಸಂಗ್ರಹವಾಗುತ್ತಿದೆ. ಹೀಗಾಗಿ ಟ್ಯಾಕ್ಸ್ ಟೆರರಿಸಂ ಕಡಿಮೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕಳೆದ ವರ್ಷದ ಬಜೆಟ್‍ನಲ್ಲಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಹಣಕಾಸು ಸಚಿವರನ್ನು ದೋಷಿಸಿದ್ದರು ಎಂದು ಪೈ ವಿವರಿಸಿದ್ದಾರೆ.

    ಈ ಟ್ಯಾಕ್ಸ್ ಟೆರರಿಸಂ ತೊಲಗಿಸಬೇಕಾದಲ್ಲಿ ಸರ್ಕಾರ ಹಾಗೂ ಕಂಪನಿಗಳ ಸಿಇಓಗಳ ನಡುವೆ ಆಗಾಗ ಸಭೆ ಅಥವಾ ಮಾತುಕತೆ ನಡೆಸಬೇಕು. ಆಗ ಉದ್ಯಮಿಗಳ ಸಮಸ್ಯೆಗಳನ್ನು ತಿಳಿಯಬಹುದು ಎಂದು ಹೇಳಿದ್ದಾರೆ.

    ಕೆಫೆ ಕಾಫಿ ಡೇ ಸಿದ್ಧಾರ್ಥ್ ಅವರು ಸಾವನ್ನಪ್ಪುವುದಕ್ಕೂ ಮುನ್ನ ತಮ್ಮ ಪತ್ರದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು. ನಮ್ಮ ಶೇರನ್ನು ಎರಡು ವಿವಿಧ ಹಂತಗಳಲ್ಲಿ ಸಲ್ಲಿಸಿ, ನಮ್ಮ ಕಾಫಿಯ ದಿನದ ಶೇರುಗಳ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಪರಿಷ್ಕೃತ ಆದಾಯ ತೆರಿಗೆಯನ್ನೂ ನಮ್ಮಿಂದ ಸಲ್ಲಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದರು. ಆದಾಯ ತೆರಿಗೆ ಇಲಾಖೆಯು ಈ ಆರೋಪಗಳನ್ನು ತಳ್ಳಿ ಹಾಕಿತ್ತು, ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳ ಪ್ರಕಾರ ಇಲಾಖೆ ಕಾರ್ಯನಿರ್ವಹಿಸಿದೆ ಎಂದು ಪ್ರತಿಕ್ರಿಯಿಸಿತ್ತು.

  • ಸಿದ್ಧಾರ್ಥ್ ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ

    ಸಿದ್ಧಾರ್ಥ್ ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ

    – ಸಿದ್ಧಾರ್ಥ್ ಅಭಿಮಾನಿಗಳಿಂದ ಅಭಿಯಾನ

    ಚಿಕ್ಕಮಗಳೂರು: ನಿಗೂಢವಾಗಿ ಸಾವನ್ನಪ್ಪಿರುವ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಮನೆಗೆ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಇಂದು ಭೇಟಿ ನೀಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟ್ ನಲ್ಲಿರುವ ಸಿದ್ದಾರ್ಥ್ ಮನೆಗೆ ಭೇಟಿ ನೀಡಿದ ಸ್ವಾಮೀಜಿಗಳು, ಸಿದ್ದಾರ್ಥ್ ತಾಯಿ ವಸಂತಿ ಹೆಗ್ಡೆ ಹಾಗೂ ಪತ್ನಿ ಮಾಳವಿಕಾ ಸೇರಿದಂತೆ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ.

    ಯುವಕರಿಂದ ಅಭಿಯಾನ:
    ಸಿದ್ಧಾರ್ಥ್ ಅವರು ಮೃತಪಟ್ಟ ಬಳಿಕ ಕಾಫಿ ಡೇ ಷೇರು ದಿನೇ, ದಿನೇ ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಯುವಕರು ಅಭಿಯಾನಯೊಂದಕ್ಕೆ ಚಾಲನೆ ನೀಡಿದ್ದಾರೆ.

    ಸಿದ್ದಾರ್ಥ್ ಅವರ ಅಭಿಮಾನಿ ಯುವಕರು `ಟೀಮ್ ನಮ್ಮುಡುಗ್ರು’ ತಂಡದಿಂದ ಷೇರು ಖರೀದಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗುತ್ತಿದೆ. ಸಿದ್ಧಾರ್ಥ್ ಅವರು ಕೆಫೆ ಕಾಫಿ ಡೇ ಸೇರಿದಂತೆ ಅವರ ಸಂಸ್ಥೆಗಳಲ್ಲಿ ಯುವಕರಿಗೆ ಹೆಚ್ಚಿನ ಅದ್ಯತೆ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಯುವಕರಿಗೆ ತರಬೇತಿ ನೀಡಲೆಂದೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

  • ಸಿದ್ಧಾರ್ಥ್ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್- ಆತ್ಮಹತ್ಯೆಯಲ್ಲ ಕೊಲೆಯೆಂದು ವ್ಯಾಪಕ ಚರ್ಚೆ

    ಸಿದ್ಧಾರ್ಥ್ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್- ಆತ್ಮಹತ್ಯೆಯಲ್ಲ ಕೊಲೆಯೆಂದು ವ್ಯಾಪಕ ಚರ್ಚೆ

    ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಅವರದ್ದು ಆತ್ಮಹತ್ಯೆ ಅಲ್ಲ ಕೊಲೆಯೆಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

    ಸಿದ್ಧಾಥ್ ಅವರು ತಮ್ಮ ಕಾರಿನಲ್ಲಿ ಜಪ್ಪಿನಮೊಗರಿನಲ್ಲಿರುವ ನೇತ್ರಾವತಿ ಸೇತುವೆ ಬಳಿ ಬರುತ್ತಿದ್ದಂತೆಯೇ ಹಲವು ಬೆಳವಣಿಗೆಗಳು ನಡೆದಿದೆ. ಈ ಎಲ್ಲಾ ಘಟನೆಗಳು ಅನುಮಾನ ಹುಟ್ಟುವಂತೆ ಮಾಡಿವೆ. ಈ ಅನುಮಾನಗಳು ಇದೀಗ ಸಿದ್ಧಾರ್ಥ್ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಮೂಡುವಂತೆ ಮಾಡಿದೆ.

    ಸಿದ್ಧಾರ್ಥ್ ಅವರ ಕಾರು ಸಂಜೆ 5.28ರ ಸುಮಾರಿಗೆ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲುವಿನಲ್ಲಿ ಪಾಸಾಗಿದೆ. ಆ ಬಳಿಕ ನೇತ್ರಾವತಿ ಸೇತುವೆ ಬಳಿ ಬಂದಾಗ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಸಿದ್ಧಾರ್ಥ್ ಯಾಕೆ ಹೇಳಿದರು. ಅಲ್ಲದೆ ಸೇತುವೆ ಪಕ್ಕ ಕಾರಿನಿಂದ ಇಳಿದ ಸಿದ್ಧಾರ್ಥ್, 7 ಗಂಟೆಗೆ ಬರುತ್ತೇನೆ. ಕೊಟ್ಟಾಯಂ ಏರ್ ಪೋರ್ಟಿಗೆ ಬಿಡಬೇಕು ಎಂದು ಚಾಲಕನಿಗೆ ಹೇಳಿದ್ದರಂತೆ. ಹೀಗಾಗಿ ನೇತ್ರಾವತಿ ಸೇತುವೆಯಿಂದ 1 ಕಿ.ಮೀ ದೂರದಲ್ಲಿರುವ ಜಪ್ಪಿನ ಮೊಗರಿನಲ್ಲಿ ಸಿದ್ಧಾರ್ಥ್ ಯಾಕೆ ಇಳಿದರು, ಒಂದು ವೇಳೆ ಅಲ್ಲಿ ಅವರನ್ನು ಯಾರಾದರೂ ಭೇಟಿಯಾಗಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ:ಕಾಣೆಯಾಗುವ ಕೊನೆ ಕ್ಷಣದ ಮಾಹಿತಿ ಬಿಚ್ಚಿಟ್ಟ ಸಿದ್ಧಾರ್ಥ್ ಡ್ರೈವರ್

    ಸಾವಿಗೂ ಮುನ್ನ ಸಿದ್ಧಾರ್ಥ್ ಅವರು ಸಾಲ ಪಡೆದಿದ್ದ ವ್ಯಕ್ತಿಗಳನ್ನ ಭೇಟಿಯಾಗಿದ್ದಾರೆಯೇ, ನೇತ್ರಾವತಿ ಸೇತುವೆ ಬಳಿ ಸಿದ್ಧಾರ್ಥ್ ಜೊತೆ ಕಾರಿನಲ್ಲಿ ರಹಸ್ಯ ಮಾತುಕತೆ ನಡೆದಿತ್ತೇ, ಹಣ ಪಡೆದಿದ್ದ ರಾಜಕಾರಣಿ ಮತ್ತು ಮುಂಬೈ ಫೈನಾನ್ಸ್ ದಲ್ಲಾಳಿಗಳಿಂದ ರಹಸ್ಯ ಭೇಟಿಯಾಗಿದೆಯೇ, ತನ್ನ ಕಾರಿನಿಂದ ಮಂಗಳೂರಿನ ಜಪ್ಪಿನಮೊಗರಿನಲ್ಲಿ ಇಳಿದಿದ್ದ ಸಿದ್ದಾರ್ಥ್ ಯಾರನ್ನಾದರೂ ಭೆಟಿಯಾಗಿದ್ದಾರೆಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಸಂಜೆ ಏಳು ಗಂಟೆಗೆ ನೇತ್ರಾವತಿ ಸೇತುವೆ ಪಕ್ಕ ತೆರಳಿದ್ದೆ ಎಂದು ಚಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಚಾಲಕ ಹೇಳಿಕೆಯಿಂದಲೇ ಅನುಮಾನ ಹುಟ್ಟಿಕೊಂಡಿದ್ದು, ಹಾಗಾದರೆ ಸಿದ್ಧಾರ್ಥ್ ಅವರು ಸುದೀರ್ಘ ಒಂದೂವರೆ ಗಂಟೆ ಆಗಂತುಕರ ಜೊತೆ ಮಾತುಕತೆ ನಡೆಸಿದ್ದಾರೆಯೇ ಅನ್ನೋ ಸಂಸಯ ಮೂಡಿದೆ. ಈ ವೇಳೆ, ಸಿದ್ಧಾರ್ಥ್ ತಮ್ಮ ವಿರೋಧಿಗಳ ಕಾರಿನಲ್ಲಿ ತೆರಳಿರುವ ಬಗ್ಗೆ ಶಂಕೆಯೂ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸಿದ್ಧಾರ್ಥ್ ಅವರನ್ನು ಕೊನೆಯ ಬಾರಿಗೆ ಭೇಟಿಯಾಗಿ ಮಾತುಕತೆ ನಡೆಸಿದವರು ಯಾರು ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆಯಾಗಿದ್ದು ಹೇಗೆ?

    ಮಂಗಳೂರು ತಲುಪುತ್ತಿದ್ದಂತೆಯೇ ಸಿದ್ಧಾರ್ಥ್ ಅವರು ತಮ್ಮ ಚಾಲಕನಲ್ಲಿ ಉಳ್ಳಾಲದ ಸೈಟ್ ನೋಡಲು ಹೋಗಬೇಕು ಎಂದು ಹೇಳಿದ್ದರು. ಕಾಫಿ ಸಾಮ್ರಾಟ, ಉಳ್ಳಾಲ ಮತ್ತು ನೇತ್ರಾವತಿ ಪಕ್ಕದಲ್ಲಿ ರೆಸಾರ್ಟ್ ನಿರ್ಮಿಸಲು ಮುಂದಾಗಿದ್ದರು. ಎರಡು ವರ್ಷಗಳಿಂದ ರೆಸಾರ್ಟ್ ಕನಸು ಈಡೇರದೇ ಉಳಿದಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಕೈಹಾಕಲು ಮುಂದಾಗಿದ್ದ ವಿ.ಜಿ ಸಿದ್ಧಾರ್ಥ್, ಕೋಸ್ಟಲ್ ಟೂರಿಸಂ ಅವರ ಪಾಲಿಗೆ ಮುಳ್ಳಾಗಿ ಹೋಯಿತೇ ಅನ್ನೋ ವ್ಯಾಪಕ ಚರ್ಚೆಯಾಗುತ್ತಿದೆ.

    https://www.youtube.com/watch?v=wZvAI8ub-RY

  • ಸಂಸತ್ತಿನಲ್ಲಿ ಸಿದ್ಧಾರ್ಥ್ ಸಾವು ಪ್ರಸ್ತಾಪ – ತನಿಖೆಗೆ ಮನೀಷ್ ತಿವಾರಿ ಆಗ್ರಹ

    ಸಂಸತ್ತಿನಲ್ಲಿ ಸಿದ್ಧಾರ್ಥ್ ಸಾವು ಪ್ರಸ್ತಾಪ – ತನಿಖೆಗೆ ಮನೀಷ್ ತಿವಾರಿ ಆಗ್ರಹ

    ನವದೆಹಲಿ: ಕರ್ನಾಟಕದ ಖ್ಯಾತ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಸಾವಿನ ವಿಚಾರವನ್ನು ಲೋಕಸಭೆಯಲ್ಲಿ ಇಂದು ಪ್ರಸ್ತಾಪಿಸಲಾಗಿದ್ದು, ಕಾಂಗ್ರೆಸ್ ಸದಸ್ಯ ಮನೀಷ್ ತಿವಾರಿ ಉದ್ಯಮಿಯ ಆತ್ಮಹತ್ಯೆ ಗೆ ಕಾರಣವಾದ ಸನ್ನಿವೇಶಗಳ ಕುರಿತು ಸಮಗ್ರ ತನಿಖೆಗೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

    ಸಂಸತ್ತಿನಲ್ಲಿ ಶೂನ್ಯ ವೇಳೆ ಈ ಬಗ್ಗೆ ತಿವಾರಿ ಅವರು ಪ್ರಸ್ತಾಪಿಸಿ ಸಿದ್ಧಾರ್ಥ್ ಅವರ ಸಾವಿಗೆ ಸಂತಾಪ ಸೂಚಿಸಿದರು. ಸಿದ್ಧಾರ್ಥ್ ಅವರ ಆತ್ಮಹತ್ಯೆಗೆ ತೆರಿಗೆ ಅಧಿಕಾರಿಗಳ ಕಿರುಕುಳ ಕೂಡ ಕಾರಣವಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಗಂಭೀರ ಹಾಗೂ ಸೂಕ್ಷ್ಮ ವಿಚಾರವಾಗಿದ್ದು, ಸೂಕ್ತ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ತಿವಾರಿ ಹೇಳಿದರು.

    ಆತ್ಮಹತ್ಯೆಗೂ ಎರಡು ದಿನ ಮೊದಲು ಸಿದ್ದಾರ್ಥ್ ಅವರು ಬರೆದಿಟ್ಟಿರುವ ಪತ್ರದ ವಿಷಯಗಳನ್ನು ಉಲ್ಲೇಖಿಸಲು ಸ್ಪೀಕರ್ ಓಂ ಬಿರ್ಲಾ ಅವರು ಅನುಮತಿ ನೀಡಲಿಲ್ಲ. ಹಾಗೆಯೇ ಪತ್ರದ ಸತ್ಯಾಂಶವನ್ನು ಪರಿಶೀಲಿಸುವವರೆಗೂ ಪತ್ರ ಮತ್ತು ಅದರಲ್ಲಿರುವ ವಿಷಯಗಳನ್ನು ಸಂಗ್ರಹಿಸುವುದು ಅಥವಾ ಉಲ್ಲೇಖಿಸುವುದು ಸೂಕ್ತವೇ? ಎಂದು ಪ್ರಶ್ನಿಸಿದರು.

    ಆತ್ಮಹತ್ಯೆಯ ಕುರಿತು ತನಿಖೆ ನಡೆಯುವುದು ಖಚಿತ ಆದರೆ ಆದಾಯ ತೆರಿಗೆ ಇಲಾಖೆ ಮತ್ತು ಅಧಿಕಾರಿಗಳ ಕಿರುಕುಳದ ಕುರಿತು ಕೇಳಿಬರುತ್ತಿರುವುದು ಗಂಭೀರವಾದ ವಿಚಾರವಾಗಿದೆ ಎಂದು ತಿವಾರಿ ತಿಳಿಸಿದರು.

    ಬಳಿಕ ಬಿಜೆಪಿ ಎಂಪಿ ನಿಶಿಕಾಂತ್ ದುಬೆ ಮಾತನಾಡಿ ದೇಶದಲ್ಲಿ ಏಕರೂಪದ ನಾಗರೀಕ ಸಂಹಿತೆ ಜಾರಿಗೆ ಬರಬೇಕು ಎಂದು ಹೇಳಿದರು. ನಂತರ ಬಿಜೆಪಿಯ ದಿಲೀಪ್ ಸೈಕಿಯಾ ಅವರು, ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ ಒತ್ತು ನೀಡಬೇಕು. ಈ ಬಗ್ಗೆ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಸ್ತಾಪಿಸಿದರು.

  • ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ನದಿಗೆ ಹಾರಿದ್ದ ಸಿದ್ಧಾರ್ಥ್ – ಪ್ಯಾಂಟ್ ಕಿಸೆಯಲ್ಲಿತ್ತು ಫೋನ್

    ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ನದಿಗೆ ಹಾರಿದ್ದ ಸಿದ್ಧಾರ್ಥ್ – ಪ್ಯಾಂಟ್ ಕಿಸೆಯಲ್ಲಿತ್ತು ಫೋನ್

    ಮಂಗಳೂರು: ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯಲ್ಲಿ ತನ್ನ ಫೋನಿನಲ್ಲಿ ಮಾತನಾಡಿಕೊಂಡು ಹೋದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಮತ್ತೆ ಹಿಂದಿರುಗಿ ಬರಲೇ ಇಲ್ಲ. ಇಂದು ಪತ್ತೆಯಾದ ಅವರ ಮೃತದೇಹದ ಪ್ಯಾಂಟಿನ ಕಿಸೆಯಲ್ಲಿ ಮೊಬೈಲ್ ಸಿಕ್ಕಿದೆ.

    ಸೋಮವಾರ ಕಾಣೆಯಾಗಿದ್ದ ಸಿದ್ಧಾರ್ಥ್ ಅವರು ಇಂದು ನೇತ್ರಾವತಿ ನದಿ ಸೇತುವೆಯ ಕೆಲ ದೂರದಲ್ಲಿರುವ ಹೊಯಿಗೆ ಬಜಾರ್ ಎಂಬಲ್ಲಿ ಮೀನುಗಾರರಿಗೆ ಶವವಾಗಿ ದೊರೆತಿದ್ದಾರೆ. ಇವರ ಮೃತದೇಹದ ಪ್ಯಾಂಟ್ ಕಿಸೆಯಲ್ಲಿ ನೋಕಿಯಾ ಕಂಪನಿಗೆ ಸೇರಿದ ಮೊಬೈಲ್ ಸಿಕ್ಕಿದ್ದು, ಆತ್ಮಹತ್ಯೆಗೂ ಮುನ್ನ ಅದೇ ಮೊಬೈಲ್ ನಲ್ಲಿ ಮಾತನಾಡಿದ್ದಾರೆ. ಆಪ್ತರ ಜೊತೆ ಕರೆ ಮಾಡಿದ ಬಳಿಕ ಫೋನ್ ಸ್ವಿಚ್ಛ್ ಆಫ್ ಮಾಡಿ ನದಿಗೆ ಜಿಗಿದಿರಬಹುದು ಎಂದು ಶಂಕಿಸಲಾಗುತ್ತಿದೆ.

    ಸದ್ಯ ಮೃತದೇಹದಲ್ಲಿನ ಗಾಯಗಳ ಬಗ್ಗೆ ಪೊಲೀಸರು ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಆತ್ಮಹತ್ಯೆ ಮಾಡಿ 36 ಗಂಟೆ ಕಳೆದರೂ ಮುಖದಲ್ಲಿ ರಕ್ತ ಸೋರಿಕೆ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಮಧ್ಯೆ ಸಿದ್ಧಾರ್ಥ್ ಅವರು ಧರಿಸಿದ್ದ ಕಪ್ಪು ಬಣ್ಣದ ಟೀ ಶರ್ಟ್ ಇನ್ನೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಮೊಬೈಲ್ ಲೊಕೇಷನ್:
    ಸಿದ್ಧಾರ್ಥ್ ಅವರು ಸೋಮವಾರ ಸಂಜೆ 6.30ರ ಸುಮಾರಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆಯಿಂದ ಸಿದ್ದಾರ್ಥ್ ಅವರ ಕಾರು ಚಾಲಕ ಬಸವರಾಜ್ ಅವರನ್ನು ವಿಚಾರಣೆಯನ್ನು ಪೊಲೀಸರು ನಡೆಸಿದ್ದರು. ಇತ್ತ ಸಿದ್ಧಾರ್ಥ್ ಮೊಬೈಲ್ ಲೊಕೇಷನ್ ಪರಿಶೀಲಿಸಿದಾಗ ಸೇತುವೆಯ ಮಧ್ಯಭಾಗದಲ್ಲಿ ಅವರ ಕೊನೆಯ ಮೊಬೈಲ್ ಲೊಕೇಷನ್ ಪತ್ತೆಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಬೆಳಗ್ಗೆ ತನಿಖೆ ನಡೆಸಲು ಆಗಮಿಸಿದ್ದ ಶ್ವಾನ ದಳದ ನಾಯಿ ಸಹ ಸೇತುವೆ ಮಧ್ಯಭಾಗದವರೆಗೆ ಬಂದಿತ್ತು. ಪೊಲೀಸ್ ವಿಚಾರಣೆ ವೇಳೆ ಡ್ರೈವರ್ ಬಸವರಾಜ್, ಸೋಮವಾರ ಸಂಜೆ ಹೊತ್ತಿನಲ್ಲಿ ಸೇತುವೆಯ ಬಳಿ ಕಾರನ್ನು ನಿಲ್ಲಿಸು ಎಂದು ಸಿದ್ಧಾರ್ಥ್ ಹೇಳಿದ್ದರು. ಕಾರಿನಿಂದ ಇಳಿದು ಸೇತುವೆಯ ಮೇಲೆ ಸಿದ್ದಾರ್ಥ್ ನಡೆದುಕೊಂಡು ಫೋನಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದರು. ಕೆಲ ನಿಮಿಷ ಕಳೆದರೂ ಅವರು ಬಾರದೇ ಇದ್ದಾಗ ಕರೆ ಮಾಡಿದ್ದೆ. ಈ ವೇಳೆ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿಸಿದ್ದರು.

  • ನಾನೂ ಪರೋಕ್ಷವಾಗಿ ಸಿದ್ಧಾರ್ಥ್ ಸಾಲಿಗೆ ಸೇರುತ್ತೇನೆ: ವಿಜಯ್ ಮಲ್ಯ

    ನಾನೂ ಪರೋಕ್ಷವಾಗಿ ಸಿದ್ಧಾರ್ಥ್ ಸಾಲಿಗೆ ಸೇರುತ್ತೇನೆ: ವಿಜಯ್ ಮಲ್ಯ

    – ಕಾಫಿ ಸಾಮ್ರಾಟ ನಾಪತ್ತೆಯಾಗಿದ್ದ ಕುರಿತು ಮಲ್ಯ ಟ್ವೀಟ್‍

    ನವದೆಹಲಿ: ನಾನೂ ಕೂಡ ಪರೋಕ್ಷವಾಗಿ ಸಿದ್ಧಾರ್ಥ್ ಅವರ ಸಾಲಿಗೆ ಸೇರುತ್ತೇನೆ. ನನ್ನ ಪರಿಸ್ಥಿತಿ ಕೂಡ ಅವರಂತೆ ಆಗಿದೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಟ್ವೀಟ್‍ನಲ್ಲಿ ಹೇಳಿಕೊಂಡಿದ್ದಾರೆ.

    ಭಾರತೀಯ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಸದ್ಯ ಮಲ್ಯ ಇಂಗ್ಲೆಂಡಿನಲ್ಲಿದ್ದಾರೆ. ಆದರೆ ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ ಸಿದ್ಧಾರ್ಥ್ ಅವರ ನಾಪತ್ತೆ ಸುದ್ದಿ ತಿಳಿದ ಕೂಡಲೇ ಟ್ವೀಟ್ ಮಾಡಿದ ಮಲ್ಯ, ತನಿಖಾ ಸಂಸ್ಥೆ ಹಾಗೂ ಬ್ಯಾಂಕುಗಳನ್ನು ದೂರಿದ್ದಾರೆ. ನಾನು ಕೂಡ ಪರೋಕ್ಷವಾಗಿ ಸಿದ್ಧಾರ್ಥ್ ಅವರ ಸಾಲಿಗೆ ಸೇರುತ್ತೇನೆ. ನನ್ನ ಪರಿಸ್ಥಿತಿ ಕೂಡ ಅವರಂತೆ ಆಗಿದೆ. ತನಿಖಾ ಸಂಸ್ಥೆ ಮತ್ತು ಬ್ಯಾಂಕುಗಳು ಎಂಥವರನ್ನಾದರೂ ಹತಾಶೆಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ವಿ.ಜಿ. ಸಿದ್ಧಾರ್ಥ ಒಳ್ಳೆಯ ಮನುಷ್ಯ ಹಾಗೂ ಅದ್ಭುತ ಉದ್ಯಮಿಯಾಗಿದ್ದರು. ಅವರು ಬರೆದಿರುವ ಪತ್ರವನ್ನು ನೋಡಿ ನನಗೆ ಆಘಾತವಾಗಿದೆ. ಸರ್ಕಾರಿ ಏಜೆನ್ಸಿಗಳು ಮತ್ತು ಬ್ಯಾಂಕುಗಳು ಎಂಥವರನ್ನಾದರೂ ಹತಾಶೆಗೆ ದೂಡಬಹುದು. ಸಾಲವನ್ನು ಪೂರ್ಣ ಮರುಪಾವತಿ ಮಾಡುತ್ತೇನೆ ಎಂದರೂ ಅವರು ನನಗೆ ಏನು ಮಾಡುತ್ತಿದ್ದಾರೆಂದು ನೋಡಿ. ಇದೊಂದು ಕೆಟ್ಟ ವರ್ತನೆಯಾಗಿದೆ ಎಂದು ಬರೆದು ಸರ್ಕಾರದ ತನಿಖಾ ಸಂಸ್ಥೆ, ಬ್ಯಾಂಕ್‍ಗಳ ವಿರುದ್ಧ ವಿಜಯ್ ಮಲ್ಯ ಕಿಡಿಕಾರಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ, ಪಾಶ್ಚಿಮಾತ್ಯ ದೇಶಗಳಲ್ಲಿ ಸರ್ಕಾರ ಹಾಗೂ ಬ್ಯಾಂಕುಗಳು ಸಾಲವನ್ನು ಮರುಪಾವತಿಸಲು ಸಾಲಗಾರರಿಗೆ ಸಹಾಯ ಮಾಡುತ್ತವೆ. ನನ್ನ ವಿಷಯದಲ್ಲಿ ಅವರು ನನ್ನ ಸಾಲವನ್ನು ಮರುಪಾವತಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ತಡೆಯುತ್ತಿದ್ದಾರೆ ಮತ್ತು ನನ್ನ ಆಸ್ತಿಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. ಮೇಲ್ನೋಟಕ್ಕೆ ಕಾಣುವ ಪ್ರಕರಣ ಮೇಲ್ಮನವಿಗಾಗಿ ಕಾಯುತ್ತಿದೆ ಎಂದು ಬರೆದಿದ್ದಾರೆ.

    ಸೋಮವಾರ ನಾಪತ್ತೆಯಾಗಿದ್ದ ಸಿದ್ಧಾರ್ಥ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ತಡರಾತ್ರಿಯವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ರಾತ್ರಿ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.

    ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಹೊಯಿಗೆ ಬಜಾರ್‍ನಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.

    https://www.youtube.com/watch?v=i3MTQLbm1KE