Tag: ವಿ.ಕೆ ಸಿಂಗ್

  • ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್‌

    ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್‌

    ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಭಾರತದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್‌ ಆಗುತ್ತಿದ್ದಾರೆ.

    ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ವಿದ್ಯಾರ್ಥಿಯನ್ನು ಪೋಲೆಂಡ್‌ ದೇಶದಲ್ಲಿ ಕೇಂದ್ರ ಸಚಿವ ವಿ.ಕೆ.ಸಿಂಗ್‌ ಅವರು ಭೇಟಿಯಾಗಿದ್ದಾರೆ. ಅಲ್ಲದೇ ʼಆಪರೇಷನ್‌ ಗಂಗಾʼ ಕಾರ್ಯಾಚರಣೆಯಡಿ ವಿದ್ಯಾರ್ಥಿಯನ್ನು ಭಾರತಕ್ಕೆ ವಾಪಸ್‌ ಕರೆತರಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಯಿ ಬಿಡದಿದ್ದರೆ ನಾನು ಭಾರತಕ್ಕೆ ಬರುತ್ತಿರಲಿಲ್ಲ: ರಂಜಿತ್ ರೆಡ್ಡಿ

    ಸ್ಟ್ರೆಚರ್‌ನಲ್ಲಿದ್ದ 31 ವರ್ಷದ ವಿದ್ಯಾರ್ಥಿಯೊಂದಿಗೆ ಸಿಂಗ್‌ ಅವರು ರ್ಜೆಸ್ಜೋವ್‌ ವಿಮಾನ ನಿಲ್ದಾಣದಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಭರವಸೆ ನೀಡುತ್ತೇನೆ. ಆತ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗುವುದನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ. ಬಹುಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದು ಸಿಂಗ್‌ ತಿಳಿಸಿದ್ದಾರೆ.

    ವಿದ್ಯಾರ್ಥಿ ಹರ್ಜೋತ್‌ ಸಿಂಗ್‌ ಪ್ರಯಾಣಿಸುವ ವಿಮಾನ ರಾತ್ರಿ 7 ಗಂಟೆಗೆ ದೆಹಲಿ ತಲುಪಲಿದೆ. ಆತನೊಂದಿಗೆ 200 ಮಂದಿ ಭಾರತೀಯರು ಪೋಲೆಂಡ್‌ನಿಂದ ಪ್ರಯಾಣ ಬೆಳೆಸಲಿದ್ದಾರೆ. ಸದ್ಯ ವಿದ್ಯಾರ್ಥಿ ಉಕ್ರೇನ್‌ನಿಂದ ಪೋಲೆಂಡ್‌ಗೆ ಬಂದಿದ್ದಾರೆ. ಇದನ್ನೂ ಓದಿ:  ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು

    ಕೀವ್‌ನಲ್ಲಿ ಭಾರತದ ಹರ್ಜೋತ್‌ ಸಿಂಗ್‌ಗೆ ಗುಂಡೇಟು ಬಿದ್ದಿತ್ತು. ಈ ವೇಳೆ ಆತ ತನ್ನ ಪಾಸ್‌ಪೋರ್ಟ್‌ ಕೂಡ ಕಳೆದುಕೊಂಡಿದ್ದಾರೆ. ಹರ್ಜೋತ್‌ ನಾಳೆ ನಮ್ಮೊಂದಿಗೆ ಭಾರತವನ್ನು ತಲುಪುತ್ತಿದ್ದಾರೆ ಎಂದು ತಿಳಿಸಲು ಸಂತೋಷವಾಗಿದೆ ಎಂದು ಸಚಿವ ಟ್ವೀಟ್‌ ಮಾಡಿದ್ದಾರೆ.

  • ಪ್ಲೀಸ್, ಸೋದರನಿಗೆ ಬೆಡ್ ಕೊಡಿಸಿ: ಕೇಂದ್ರ ಸಚಿವ ವಿ.ಕೆ.ಸಿಂಗ್ ಮನವಿ

    ಪ್ಲೀಸ್, ಸೋದರನಿಗೆ ಬೆಡ್ ಕೊಡಿಸಿ: ಕೇಂದ್ರ ಸಚಿವ ವಿ.ಕೆ.ಸಿಂಗ್ ಮನವಿ

    ನವದೆಹಲಿ: ಕೊರೊನಾ ಸೋಂಕು ತಗುಲಿರುವ ನನ್ನ ಸೋದರಿಗೆ ಬೆಡ್ ಕೊಡಿಸಿ ಎಂದು ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ನನ್ನ ಸೋದರನಿಗೆ ಕೊರೊನಾ ಸೋಂಕು ತಗುಲಿದ್ದು, ಬೆಡ್ ಅವಶ್ಯಕತೆ ಇದೆ. ಸದ್ಯ ಗಾಜಿಯಾಬಾದ್ ನಲ್ಲಿ ಬೆಡ್ ವ್ಯವಸ್ಥೆ ಆಗುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ ಎಂದು ಟ್ವಿಟ್ಟರ್ ನಲ್ಲಿ ಗೋಗೆರೆದಿದ್ದಾರೆ. ಈ ಟ್ವೀಟ್ ಉತ್ತರ ಪ್ರದೇಶ ಸಿಎಂ ಸಲಹೆಗಾರ ಶಲಬ್ ಮನಿ ತ್ರಿಪಾಠಿ, ಉತ್ತರ ಪ್ರದೇಶ ಬಿಜೆಪಿಯ ಉಪ ಅಧ್ಯಕ್ಷ ಪಂಕಜ್ ಸಿಂಗ್ ಮತ್ತು ಗಾಜಿಯಾಬಾದ್ ಜಿಲ್ಲಾಧಿಕಾರಿಗಳ ಕಚೇರಿಯ ಖಾತೆಗಳಿಗೆ ಟ್ಯಾಗ್ ಮಾಡಲಾಗಿದೆ.

    https://twitter.com/Gen_VKSingh/status/1383674297017802753

    ದೇಶದಲ್ಲಿ ಕೊರೊನಾ ತನ್ನ ರೌದ್ರ ತಾಂಡವ ಮುಂದುವರಿಸಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಇಂದು ಸಹ ದೇಶದಲ್ಲಿ 2,61,500 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ 1,501 ಜನ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆರಂಭದಲ್ಲಿ ಹೆಚ್‍ಡಿಕೆಗೆ ಸಿಗದ ಬೆಡ್ -ಕೊನೆಗೆ ಸಾಗರ್ ಅಪೋಲೋ ಆಸ್ಪತ್ರೆಗೆ ಶಿಫ್ಟ್

  • ಗಲ್ವಾನ್ ಕಣಿವೆಯಲ್ಲಿ ಚೀನಾದ ಕನಿಷ್ಠ 40 ಯೋಧರು ಸಾವನ್ನಪ್ಪಿರ್ಬೋದು: ವಿ.ಕೆ ಸಿಂಗ್

    ಗಲ್ವಾನ್ ಕಣಿವೆಯಲ್ಲಿ ಚೀನಾದ ಕನಿಷ್ಠ 40 ಯೋಧರು ಸಾವನ್ನಪ್ಪಿರ್ಬೋದು: ವಿ.ಕೆ ಸಿಂಗ್

    ನವದೆಹಲಿ: ಪೂರ್ವ ಲಡಾಕ್‍ನ ಭಾರತ-ಚೀನಾ ಗಡಿಯ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಸೈನಿಕರ ಮಧ್ಯೆ ನಡೆದ ಸಂಘರ್ಷದಲ್ಲಿ ಚೀನಾದ ಕನಿಷ್ಠ 40 ಯೋಧರು ಸಾವನ್ನಪ್ಪಿರಬಹುದು ಎಂದು ಕೇಂದ್ರ ಸಚಿವ, ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಹೇಳಿದ್ದಾರೆ.

    ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರೆ ಚೀನಾ ಕಡೆ ಅದರ ಪ್ರಮಾಣ ದುಪ್ಪಟ್ಟಿರುವ ಸಾಧ್ಯತೆ ಇದೆ ಎಂದಿದ್ದಾರೆ.

    ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ತನ್ನ ದೇಶದ ಎಷ್ಟು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾ ಈವರೆಗೆ ಮಾಹಿತಿ ನೀಡಿಲ್ಲ. 1962ರ ಯುದ್ಧ ಸೇರಿದಂತೆ ಯಾವ ಸಂಘರ್ಷದಲ್ಲೂ ಸಾವು-ನೋವಿನ ಮಾಹಿತಿಯನ್ನು ಪ್ರಕಟಿಸಿದ ಉದಾಹರಣೆಯೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಭಾರತದ ಭೂ ಪ್ರದೇಶದೊಳಗೆ ಬಂದಿದ್ದ ಚೀನಾ ಸೈನಿಕರನ್ನು ಅವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ವಿ.ಕೆ ಸಿಂಗ್ ಹೇಳಿದ್ದು ಯಾವುದೇ ಪೂರಕ ದಾಖಲೆಗಳನ್ನು ಒದಗಿಸಿಲ್ಲ ಮತ್ತು ಈ ಸಂಬಂಧ ಪ್ರತಿಕ್ರಿಯೆ ನೀಡಲು ರಕ್ಷಣಾ ಸಚಿವರ ವಕ್ತಾರ ಭರತ್ ಭೂಷಣ್ ಬಾಬು ಕೂಡ ನಿರಾಕರಿಸಿದ್ದಾರೆ.

    ಚೀನಾದ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದರು ಎಂದು ಅಮೇರಿಕ ಗುಪ್ತಚರ ಇಲಾಖೆ ಹೇಳಿತ್ತು ಮತ್ತು ಚೀನಾದ ಕಡೆಯೂ ಸಾವು-ನೋವು ಸಂಭವಿಸಿವೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು.

  • ಆಕ್ಸಿಡೆಂಟ್ ಮಾಡಿದವ್ರೇ ಸಂತ್ರಸ್ತರಿಗೆ ಪರಿಹಾರ ಕೊಡ್ಬೇಕು

    ಆಕ್ಸಿಡೆಂಟ್ ಮಾಡಿದವ್ರೇ ಸಂತ್ರಸ್ತರಿಗೆ ಪರಿಹಾರ ಕೊಡ್ಬೇಕು

    – 2019ರ ಮೋಟಾರು ವಾಹನ ತಿದ್ದುಪಡಿ ವಿಧೇಯಕ
    – ವಿಧೇಯಕದಲ್ಲಿ ಏನಿದೆ?
    – ಯಾವ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ?

    ನವದೆಹಲಿ: ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ವಿರೋಧದ ಮಧ್ಯೆಯೇ ಮೋಟಾರು ವಾಹನ ತಿದ್ದುಪಡಿ ವಿಧೇಯಕ -2019ರಲ್ಲಿ, ಅಪಘಾತ ಎಸೆಗಿದವರೇ ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂಬ ನಿಯಮದ ಬಗ್ಗೆ ಲೋಕಸಭೆಯಲ್ಲಿ ಸೋಮವಾರದಂದು ಮಂಡಿಸಿದೆ.

    2019ರ ಮೋಟಾರು ವಾಹನ ತಿದ್ದುಪಡಿ ವಿಧೇಯಕದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ಭಾರಿ ದಂಡ ವಿಧಿಸಲಾಗುತ್ತೆ. ಹಾಗೆಯೇ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಿಗೆ ಹಾಗೂ ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡುವುದು, ಮಾನವೀಯ ದೃಷ್ಟಿಯಲ್ಲಿ ಗಾಯಾಳುಗಳ ಸಹಾಯಕ್ಕೆ ಬರುವ ಸಾರ್ವಜನಿಕರಿಗೆ ಪೊಲೀಸ್ ವಿಚಾರಣೆಯ ಕಿರಿಕಿರಿಯಿಂದ ವಿನಾಯಿತಿ ನೀಡುವುದು, ಹೀಗೆ ಹಲವು ಸುಧಾರಣಾ ಕ್ರಮಗಳ ಬಗ್ಗೆ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.

    ಈ ಹಿಂದಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 1988ರ ಮೋಟಾರು ವಾಹನ ಕಾಯ್ದೆಯನ್ನು ಪರಿಷ್ಕರಿಸುವ `ಮೋಟಾರು ವಾಹನ ತಿದ್ದುಪಡಿ ವಿಧೇಯಕ’ಕ್ಕೆ ಲೋಕಸಭೆ ಅನುಮೋದನೆ ದೊರಕಿತ್ತು. ಆದರೆ ರಾಜ್ಯಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿರಲಿಲ್ಲ. ಹೀಗಾಗಿ ಈ ಭಾರಿಯಾದರೂ ಈ ತಿದ್ದುಪಡಿ ಕಾರ್ಯರೂಪಕ್ಕೆ ಬರಲಿ ಎಂಬ ನಿಟ್ಟಿನಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಯ ಹಲವು ಶಿಫಾರಸುಗಳನ್ನು ಪರಿಗಣಿಸಿ ರಸ್ತೆ ಸಾರಿಗೆ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್ ಅವರು ವಿಧೇಯಕವನ್ನು ಮತ್ತೊಮ್ಮೆ ಲೋಕಸಭೆಯಲ್ಲಿ ಮಂಡಿಸಿದರು.

    ವಿಧೇಯಕದಲ್ಲಿ ಏನಿದೆ?
    ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೃತರಿಗೆ ವಾಹನ ಮಾಲೀಕರು/ವಿಮೆದಾರರಿಂದ ಗರಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು. ಒಂದು ವೇಳೆ ಗಂಭೀರವಾಗಿ ಗಾಯಗೊಂಡವರಿಗೆ ಅಪಘಾತ ಮಾಡಿದವರೇ 2.5 ಲಕ್ಷ ರೂ. ಕನಿಷ್ಠ ಆರ್ಥಿಕ ನೆರವನ್ನು ನೀಡಬೇಕು. ಹಾಗೆಯೇ ವಾಹನ ಪರವಾನಗಿ ನವೀಕರಣದ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ಏರಿಸಲಾಗಿದೆ. ಜೊತೆಗೆ ವಿಶೇಷ ಚೇತನರಿಗೆ ಲೈಸೆನ್ಸ್ ನೀಡಲು ಸಾರಿಗೆ ಇಲಾಖೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎನ್ನುವ ಬಗ್ಗೆ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

    ಯಾವ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ?
    ಚಾಲನಾ ಪರವಾನಗಿ (ಡಿಎಲ್) ಇಲ್ಲದೆ ವಾಹನ ಚಲಾಯಿಸುವವರಿಗೆ 5,000 ರೂ. ದಂಡ ವಿಧಿಸಲಾಗುವುದು. ಹಾಗೆಯೇ ರಸ್ತೆಯಲ್ಲಿ ಸಾಗುವಾಗ ಆಂಬ್ಯುಲೆನ್ಸ್‍ಗೆ ದಾರಿ ಬಿಡದ ವಾಹನ ಸವಾರರಿಗೆ 10,000 ರೂ. ದಂಡ ಹಾಕಲಾಗುತ್ತದೆ. ಅತಿ ವೇಗದ ಚಾಲನೆಗೆ 2,000 ರೂ. ದಂಡ, ಹೆಲ್ಮೆಟ್ ಹಾಕದೆ ದ್ವಿಚಕ್ರ ಚಲಾಯಿಸಿದರೆ 1,000 ರೂ. ದಂಡದ ಜೊತೆಗೆ 3 ತಿಂಗಳು ಡಿಎಲ್ ರದ್ದುಗೊಳಿಸಲಾಗುತ್ತದೆ. ಜೊತೆಗೆ ವಿಮೆ ಇಲ್ಲದೆ ವಾಹನ ಓಡಿಸಿದರೆ 2,000 ರೂ. ಹಾಗೂ ಕುಡಿದು ವಾಹನ ಚಲಾವಣೆ( ಡ್ರಿಂಕ್ ಆ್ಯಂಡ್ ಡ್ರೈವ್) ಮಾಡಿದರೆ 10,000 ರೂ. ದಂಡ ಕಟ್ಟಬೇಕು ಎಂದು ಮೋಟಾರು ವಾಹನ ತಿದ್ದುಪಡಿ ವಿಧೇಯಕ -2019ದಲ್ಲಿ ತಿಳಿಸಲಾಗಿದೆ.

    ಆದರೆ ಲೋಕಸಭೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ತೃಣಮೂಲ ಕಾಂಗ್ರೆಸ್ ಸದಸ್ಯ ಸೌಗತ್ ರಾಯ್ ಸೇರಿದಂತೆ ಹಲವರು ಈ ವಿಧೇಯಕದಲ್ಲಿರುವ ಕೆಲವು ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದರು.

    ಆಗ ವಿರೋಧಗಳಿಗೆ ಪ್ರತಿಕ್ರಿಯಿಸಿದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ಸರ್ಕಾರ ತಿದ್ದುಪಡಿ ವಿಧೇಯಕದ ಕರಡು ಸಿದ್ಧಪಡಿಸುವ ಮುಂಚೆಯೇ 18 ರಾಜ್ಯಗಳ ಸಾರಿಗೆ ಸಚಿವರ ಜೊತೆ ಚರ್ಚೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಅಲ್ಲದೆ ಈ ಬಿಲ್ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವುದಿಲ್ಲ. ಕಾಯ್ದೆಯನ್ನು ಜಾರಿಗೊಳಿಸುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಸ್ಪಷ್ಟನೆ ನೀಡಿದರು. ಅಷ್ಟೇ ಅಲ್ಲದೇ ವಿಧೇಯಕ ಜಾರಿಗೆ ತರಲು ಸರ್ಕಾರಕ್ಕೆ ಸಹಕರಿಸಿ ಎಂದು ಪ್ರತಿಪಕ್ಷಗಳ ನಾಯಕರಲ್ಲಿ ಮನವಿ ಮಾಡಿಕೊಂಡರು.

    ಬಳಿಕ ಮಾತನಾಡಿ, ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಸುಮಾರು 1.5 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. 5 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಳ್ಳುತ್ತಾರೆ. ಹಾಗೆಯೇ ದೇಶದಲ್ಲಿ ಶೇ. 30ರಷ್ಟು ಡ್ರೈವಿಂಗ್ ಲೈಸನ್ಸ್ ಬೋಗಸ್ ಆಗಿದೆ ಎಂದು ಹೇಳಿದರು.

    ಅಲ್ಲದೆ ಕಳೆದ 5 ವರ್ಷಗಳಲ್ಲಿ ಈ ತಿದ್ದುಪಡಿಯನ್ನು ಜಾರಿಗೆ ತರಲು ನಮ್ಮ ಸರ್ಕಾರ ವಿಫಲವಾಗಿದೆ. ಆದರೆ ಕಳೆದ 5 ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ ಶೇ.15ರಷ್ಟು ಅಪಘಾತಗಳು ಕಡಿಮೆಯಾಗಿದೆ ಎಂದು ತಿಳಿಸಿದರು.

  • ಕೊಂದ ಸೊಳ್ಳೆಗಳನ್ನು ಎಣಿಸುತ್ತಾ ಕೂರಬೇಕೇ: ಪ್ರತಿಪಕ್ಷಗಳಿಗೆ ವಿ.ಕೆ ಸಿಂಗ್ ಟಾಂಗ್

    ಕೊಂದ ಸೊಳ್ಳೆಗಳನ್ನು ಎಣಿಸುತ್ತಾ ಕೂರಬೇಕೇ: ಪ್ರತಿಪಕ್ಷಗಳಿಗೆ ವಿ.ಕೆ ಸಿಂಗ್ ಟಾಂಗ್

    ನವದೆಹಲಿ: ಸುಮ್ಮನೆ ಕಾಟಕೊಡುವ ಸೊಳ್ಳೆಗಳನ್ನು ಹಿಟ್ ಸ್ಪ್ರೇನಿಂದ ಸಾಯಿಸಿದ ಬಳಿಕ ಅದನ್ನು ಏಣಿಸುತ್ತಾ ಕೂರಬೇಕೇ ಎಂದು ಟ್ವೀಟ್ ಮಾಡುವ ಮೂಲಕ ಏರ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸಿದ ಪ್ರತಿಪಕ್ಷಗಳಿಗೆ ರಕ್ಷಣಾ ಖಾತೆ ರಾಜ್ಯ ಸಚಿವ ವಿ.ಕೆ ಸಿಂಗ್ ಟಾಂಗ್ ಕೊಟ್ಟಿದ್ದಾರೆ.

    ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ಪಾಕ್‍ನ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು. ಈ ಏರ್ ಸ್ಟ್ರೈಕ್‍ನಲ್ಲಿ ಸುಮಾರು 250 ಮಂದಿ ಉಗ್ರರು ಮೃತಪಟ್ಟಿದ್ದಾರೆ ಎಂದು ವಿ.ಕೆ ಸಿಂಗ್ ಹೇಳಿದ್ದರು.

    ಆದರೆ ಪ್ರತಿಪಕ್ಷಗಳು ಮಾತ್ರ ಇದನ್ನು ನಂಬದೆ ಉಗ್ರರು ಸಾವನ್ನಪ್ಪಿದ್ದಕ್ಕೆ ಸಾಕ್ಷಿ ಕೊಡಿ. ಎಷ್ಟು ಮಂದಿ ಉಗ್ರರು ಮೃತಪಟ್ಟಿದ್ದಾರೆ ಅಂತ ನಿಖರ ಮಾಹಿತಿ ನೀಡಿ ಅಂತ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ಅಲ್ಲದೆ ಏರ್ ಸ್ಟ್ರೈಕ್ ಮುಂದಿಟ್ಟುಕೊಂದು ಮೋದಿ ಸರ್ಕಾರ ರಾಜಕೀಯ ಮಾಡುತ್ತಿದೆ ಅಂತ ಪ್ರತಿಪಕ್ಷಗಳು ಆರೋಪಗಳನ್ನು ಕೂಡ ಮಾಡುತ್ತಿವೆ. ಇದನ್ನೂ ಓದಿ:ಏರ್ ಸ್ಟ್ರೈಕ್‍ನಲ್ಲಿ ಸುಮಾರು 250 ಉಗ್ರರು ಬಲಿ: ಕೇಂದ್ರ ಸಚಿವ ವಿಕೆ ಸಿಂಗ್

    ಈ ಆರೋಪಗಳಿಗೆ ವಿಕೆ ಸಿಂಗ್, ಸೊಳ್ಳೆಗಳನ್ನು ಕೊಂದಾಗ ನಾವು ಅದನ್ನು ಲೆಕ್ಕ ಹಾಕಲ್ಲ ಎನ್ನುವ ಮೂಲಕ ಉಗ್ರರನ್ನು ಸೊಳ್ಳೆಗೆ ಹೋಲಿಸಿದ್ದಾರೆ. ಹಿಟ್ ಬಳಸಿ ಸೊಳ್ಳೆಯನ್ನು ಕೊಲ್ಲುವ ಹಾಗೆ ವಾಯುಪಡೆ ಏರ್ ಸ್ಟ್ರೈಕ್ ಮಾಡಿ ಉಗ್ರರನ್ನು ಮಟ್ಟಹಾಕಿದೆ ಎಂದು ಹೇಳಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಬೆಳಗ್ಗೆ 3.30ರ ಹೊತ್ತಿಗೆ ತುಂಬಾ ಸೊಳ್ಳೆಗಳು ಇತ್ತು. ಅದಕ್ಕೆ ನಾನು ಹಿಟ್ ಬಳಸಿ ಅವುಗಳನ್ನು ಕೊಂದೆ. ಈಗ ನಾನು ಎಷ್ಟು ಸೊಳ್ಳೆಗಳು ಸತ್ತಿವೆ ಅಂತ ಲೆಕ್ಕ ಹಾಕುತ್ತಾ ಕೂರಬೇಕಾ? ಅಥವಾ ನೆಮ್ಮದಿಯಿಂದ ನಿದ್ರೆ ಮಾಡಬೇಕಾ? ಅಂತ ಬರೆದು ಟ್ವೀಟ್ ಮಾಡುವ ಮೂಲಕ ತಮ್ಮದೇ ಶೈಲಿಯಲ್ಲಿ ವಿರೋಧ ಪಕ್ಷಗಳಿಗೆ ಉತ್ತರ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರರಿಂದ ಹತ್ಯೆಗೊಳಗಾದ 38 ಭಾರತೀಯರ ಶವಗಳು ಹಸ್ತಾಂತರ

    ಉಗ್ರರಿಂದ ಹತ್ಯೆಗೊಳಗಾದ 38 ಭಾರತೀಯರ ಶವಗಳು ಹಸ್ತಾಂತರ

    ನವದೆಹಲಿ: ಯುದ್ಧಪೀಡಿತ ಇರಾಕ್‍ನ ಮೊಸೆಲ್‍ನಲ್ಲಿ ಐಎಸ್ ಉಗ್ರರಿಂದ ಹತ್ಯೆಗೊಳಗಾಗಿದ್ದ 38 ಭಾರತೀಯರ ಶವಗಳನ್ನು ತರಲು ಕೇಂದ್ರ ಸಚಿವ ವಿಕೆ ಸಿಂಗ್ ಇರಾಕ್‍ಗೆ ತೆರಳಿದ್ದಾರೆ. ಡಿಎನ್‍ಎ ಆಧಾರದಲ್ಲಿ ಶವ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು ಭಾರತಕ್ಕೆ ಇಂದು ತಡರಾತ್ರಿ ಪಾರ್ಥಿವ ಶರೀರಗಳು ಆಗಮಿಸುವ ಸಾಧ್ಯತೆ ಇದೆ.

    ಮೃತದೇಹಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಇರಾಕ್ ಗೆ ತೆರಳಿದ್ದಾರೆ. ಈ ಸಂಬಂಧ ಮೇಲ್ವಿಚಾರಣೆ ವಿ.ಕೆ.ಸಿಂಗ್ ನೇತೃತ್ವದಲ್ಲಿ ನಡೆಯಲಿದೆ. ಭಾರತಕ್ಕೆ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು ಅಂತಾ ಹೇಳಲಾಗಿದೆ. ಇತ್ತೀಚೆಗೆ ಕುಟುಂಬಸ್ಥರನ್ನು ಭೇಟಿಯಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೃತದೇಹಗಳನ್ನು ಒಂದು ವಾರದಲ್ಲಿ ತರಲಾಗುವುದು ಅಂತಾ ಭರವಸೆಯನ್ನು ನೀಡಿದ್ದರು. ಇದನ್ನೂ ಓದಿ: ಇರಾಕ್‍ನಲ್ಲಿ ಐಸಿಸ್‍ನಿಂದ ಹತ್ಯೆಯಾಗಿದ್ದ 39 ಭಾರತೀಯರ ಮೃತ ದೇಹ ಪತ್ತೆ ಮಾಡಿದ್ದು ಹೇಗೆ? 

    ಕಳೆದ ವರ್ಷ ಜುಲೈನಲ್ಲಿ ಸದನಕ್ಕೆ ಮಾಹಿತಿ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಅಪಹರಣಕ್ಕೆ ಒಳಗಾಗಿರುವ 39 ಮಂದಿಯ ಖಚಿತ ಮಾಹಿತಿ ದೊರೆಯದ ಹೊರತು ಅವರು ಮೃತ ಪಟ್ಟಿದ್ದಾರೆ ಎಂದು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಮಾರ್ಚ್ ನಲ್ಲಿ ಖಚಿತ ಮಾಹಿತಿಯ ಮೇಲೆ 39 ಮಂದಿಯ ಹತ್ಯೆಯಾಗಿರುವುದನ್ನು ದೃಢಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಟ್ವೀಟನ್ನು ರಿಟ್ವೀಟ್ ಮಾಡಿದ್ರು ಸುಷ್ಮಾ ಸ್ವರಾಜ್!

    ಹತ್ಯೆಯಾದ ಭಾರತೀಯ ಮೃತದೇಹದ ಅವಶೇಷಗಳನ್ನು ಭಾರತಕ್ಕೆ ತರಲಾಗುವುದು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಇರಾಕ್ ಗೆ ತೆರಳಿ ಅಲ್ಲಿಂದ ಮೃತರ ಅವಶೇಷಗಳನ್ನು ಅಮೃತಸರ, ಪಾಟ್ನಾ ಹಾಗೂ ಕೋಲ್ಕತ್ತಾಗಳಿಗೆ ತರಲಿದ್ದಾರೆ ಎಂದು ಮಾಹಿತಿ ನೀಡಿದರು.

     

  • ಕಾಂಗ್ರೆಸ್ ಟ್ವೀಟನ್ನು ರಿಟ್ವೀಟ್ ಮಾಡಿದ್ರು ಸುಷ್ಮಾ ಸ್ವರಾಜ್!

    ಕಾಂಗ್ರೆಸ್ ಟ್ವೀಟನ್ನು ರಿಟ್ವೀಟ್ ಮಾಡಿದ್ರು ಸುಷ್ಮಾ ಸ್ವರಾಜ್!

    ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತನ್ನನ್ನು ಗುರಿಯಾಗಿಸಿ ಕಾಂಗ್ರೆಸ್ ಕ್ರಿಯೆಟ್ ಮಾಡಿದ್ದ ಟ್ವಿಟ್ಟರ್ ಪೋಲನ್ನು ರಿಟ್ವೀಟ್ ಮಾಡಿದ್ದಾರೆ.

    ಇರಾಕ್ ನಲ್ಲಿ ಐಸಿಸ್ ಉಗ್ರರ ದಾಳಿಗೆ ಮೃತಪಟ್ಟ 39 ಭಾರತೀಯರ ಸಾವಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೊಣೆಗಾರರು ಎಂದು ಕಾಂಗ್ರೆಸ್ ಆರೋಪಿಸಿ ಪೋಲ್ ರಚಿಸಿತ್ತು. 39 ಜನರ ಸಾವಿಗೆ ಕಾರಣರಾದ ಸುಷ್ಮಾ ಸ್ವರಾಜ್ ತಮ್ಮ ಅಧಿಕಾರದಲ್ಲಿ ವಿಫಲವಾಗಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ಕಾಂಗ್ರೆಸ್ ಕೇಳಿತ್ತು.

    ಮಾರ್ಚ್ 26ರಂದು ಮುಕ್ತಾಯಗೊಂಡ ಈ ಪೋಲ್ ನಲ್ಲಿ 33,879 ಮಂದಿ ವೋಟ್ ಮಾಡಿದ್ದು, 76% ಮಂದಿ ಇಲ್ಲ ಎಂದು ಉತ್ತರಿಸಿದರೆ ಇನ್ನುಳಿದ 24% ಮಂದಿ ಹೌದು ಎಂದು ಉತ್ತರಿಸಿದ್ದರು. ಈ ಪೋಲಿನಲ್ಲಿ ತನ್ನ ಪರವಾಗಿ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಟ್ವೀಟ್ ನ್ನು ರಿಟ್ವೀಟ್ ಮಾಡಿದ್ದಾರೆ.

    ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಕೇಳಿದ ಪ್ರಶ್ನೆಗೆ ಜನ ಸಾಮಾನ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾವಿನ ಮನೆಯಲ್ಲೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

    2014 ರಲ್ಲಿ ಇರಾಕ್ ನಿಂದ ಐಸಿಸ್ ಅಪಹರಣ ಮಾಡಿದ್ದ 39 ಮಂದಿ ಭಾರತೀಯರನ್ನು ಐಸಿಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವೆ ಮಾರ್ಚ್ 20ರಂದು ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ತಿಳಿಸಿದ್ದರು. ಮೊಸುಲ್ ನಿಂದ ಅಪಹರಣ ಮಾಡಿದವರ ಹತ್ಯೆ ಕುರಿತು ಖಚಿತ ಮಾಹಿತಿ ಪಡಿಸಿಕೊಳ್ಳಲು ಆಳವಾದ ರೇಡಾರ್ ಬಳಕೆ ಮಾಡಲಾಗಿದೆ. 39 ಮೃತದೇಹಗಳಲ್ಲಿ 38 ಮಂದಿಯ ಡಿಎನ್‍ಎ ಸ್ಯಾಪಲ್ ಮ್ಯಾಚ್ ಆಗಿದೆ. 39ನೇ ಮೃತ ದೇಹದ ಡಿಎನ್‍ಎ ಶೇ. 70 ರಷ್ಟು ಮ್ಯಾಚ್ ಆಗಿದೆ ಎಂದು ತಿಳಿಸಿದ್ದರು.

    ಕಳೆದ ವರ್ಷ ಜುಲೈನಲ್ಲಿ ಸದನಕ್ಕೆ ಮಾಹಿತಿ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಅಪಹರಣಕ್ಕೆ ಒಳಗಾಗಿರುವ 39 ಮಂದಿಯ ಖಚಿತ ಮಾಹಿತಿ ದೊರೆಯದ ಹೊರತು ಅವರು ಮೃತ ಪಟ್ಟಿದ್ದಾರೆ ಎಂದು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಇಂದು ಖಚಿತ ಮಾಹಿತಿಯ ಮೇಲೆ 39 ಮಂದಿಯ ಹತ್ಯೆಯಾಗಿರುವುದನ್ನು ದೃಢಪಡಿಸಿದರು. ಇದನ್ನೂ ಓದಿ: ಇರಾಕ್‍ನಲ್ಲಿ ಐಸಿಸ್‍ನಿಂದ ಹತ್ಯೆಯಾಗಿದ್ದ 39 ಭಾರತೀಯರ ಮೃತ ದೇಹ ಪತ್ತೆ ಮಾಡಿದ್ದು ಹೇಗೆ? 

    ಹತ್ಯೆಯಾದ ಭಾರತೀಯ ಮೃತದೇಹದ ಅವಶೇಷಗಳನ್ನು ಭಾರತಕ್ಕೆ ತರಲಾಗುವುದು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಇರಾಕ್ ಗೆ ತೆರಳಿ ಅಲ್ಲಿಂದ ಮೃತರ ಅವಶೇಷಗಳನ್ನು ಅಮೃತಸರ, ಪಾಟ್ನಾ ಹಾಗೂ ಕೋಲ್ಕತ್ತಾಗಳಿಗೆ ತರಲಿದ್ದಾರೆ ಎಂದು ಮಾಹಿತಿ ನೀಡಿದರು.