Tag: ವಿ ಆರ್ ವಾಲಾ

  • ರಾಜ್ಯಪಾಲರನ್ನು ಭೇಟಿಯಾಗಿ ಕೋವಿಡ್ ಪರಿಸ್ಥಿತಿ ಬಗ್ಗೆ ವಿವರಿಸಿದ ಡಿಸಿಎಂ

    ರಾಜ್ಯಪಾಲರನ್ನು ಭೇಟಿಯಾಗಿ ಕೋವಿಡ್ ಪರಿಸ್ಥಿತಿ ಬಗ್ಗೆ ವಿವರಿಸಿದ ಡಿಸಿಎಂ

    ಬೆಂಗಳೂರು: ರಾಜ್ಯದ ಕೋವಿಡ್ ಪರಿಸ್ಥಿತಿ ಹಾಗೂ ನಿರ್ವಹಣೆ ಬಗ್ಗೆ ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರ ರಾಜ್ಯಪಾಲರನ್ನು ಭೇಟಿಯಾಗಿ ವಿವರಣೆ ನೀಡಿದರು.

    ಕೋವಿಡ್ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಹಾಗೂ ಇನ್ನೊಬ್ಬ ಉಪ ಮುಖ್ಯಮಂತ್ರಿ  ಗೋವಿಂದ ಕಾರಜೋಳ ಅವರೊಂದಿಗೆ 1:30ಕ್ಕೆ ರಾಜಭವನಕ್ಕೆ ತೆರಳಿದ  ಡಾ.ಅಶ್ವತ್ಥನಾರಾಯಣ, ಈವರೆಗೂ ಸೋಂಕು ತಡೆಗಟ್ಟಲು ಲಾಕ್‍ಡೌನ್, ಲಸಿಕೆ ಅಭಿಯಾನ, ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿ, ಸಿಬ್ಬಂದಿ ನೇಮಕ ಸೇರಿದಂತೆ ಸರಕಾರ ಕೈಗೊಂಡಿರುವ ಎಲ್ಲ ಕ್ರಮಗಳ ಬಗ್ಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಸಮಗ್ರ  ಮಾಹಿತಿ ನೀಡಿದರು.

    ಲಾಕ್‍ಡೌನ್ ನಂತರ ರಾಜ್ಯದಲ್ಲಿ ಸೋಂಕಿನ ಪಾಸಿಟಿವಿಟಿ ದರವೂ ಕಡಿಮೆಯಾಗಿ ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಇದರ ಜತೆಯಲ್ಲೇ 45 ವರ್ಷ ಮೀರಿದ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿಗೆ ಲಸಿಕೆ ನೀಡವ ಕೆಲಸ ನಡೆಯುತ್ತಿದೆ. ಇಡೀ ರಾಜ್ಯಾದ್ಯಂತ ಆಮ್ಲಜನಕ, ಔಷಧಿ, ರೆಮಿಡಿಸಿವಿರ್ ಕೊರತೆಯನ್ನು ನೀಗಿಸಲಾಗಿದೆ ಎಂದು ಡಿಸಿಎಂ ಅವರು ಅಂಕಿ- ಅಂಶಗಳ ಸಮೇತ ರಾಜ್ಯಪಾಲರಿಗೆ ವಿವರಣೆ ಸಲ್ಲಿಸಿದರು. ಇದನ್ನೂ ಓದಿ : ಮಕ್ಕಳಿಗೆ ಕೊರೊನಾ ಲಸಿಕೆ ಯಾವಾಗ? – ಕೇಂದ್ರದಿಂದ ಸಿಕ್ತು ಸ್ಪಷ್ಟನೆ

    ಬ್ಲ್ಯಾಕ್ ಫಂಗಸ್ ಬಗ್ಗೆಯೂ ರಾಜ್ಯಪಾಲರಿಗೆ ಮಾಹಿತಿ ನೀಡಿದ ಡಿಸಿಎಂ ಅವರು, ಈ ಕಾಯಿಲೆಗೆ ಸಂಬಂಧಿಸಿದ ಔಷಧಿಗಳ ಕೊರತೆ ನಿವಾರಣೆಗೆ ಎಲ್ಲ ಪ್ರಯತ್ನ ನಡೆದಿದೆ. ನಿರಂತರವಾಗಿ ಕೇಂದ್ರ ಸರಕಾರದ ಜತೆ ಸಂಪರ್ಕದಲ್ಲಿದ್ದು, ಇಡೀ ಸರಕಾರ ಒಂದು ತಂಡದ ರೂಪದಲ್ಲಿ ಕೆಲಸ ಮಾಡುತ್ತಿದೆ ಎಂದು ರಾಜ್ಯಪಾಲರಿಗೆ ತಿಳಿಸಿದರು.

  • ಜೀವನಕ್ಕಿಂತ ಜೀವ ಮುಖ್ಯ, ತಾಂತ್ರಿಕ ಸಮಿತಿ ಹೇಳಿದಂತೆ ಕೇಳಿ: ಸರ್ಕಾರಕ್ಕೆ ರಾಜ್ಯಪಾಲರ ಸೂಚನೆ

    ಜೀವನಕ್ಕಿಂತ ಜೀವ ಮುಖ್ಯ, ತಾಂತ್ರಿಕ ಸಮಿತಿ ಹೇಳಿದಂತೆ ಕೇಳಿ: ಸರ್ಕಾರಕ್ಕೆ ರಾಜ್ಯಪಾಲರ ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಹೇಳಿದ್ದಾರೆ.

    ಕೋವಿಡ್ ನಿಯಂತ್ರಣಕ್ಕೆ ಸರ್ವಪಕ್ಷಗಳ ಸದಸ್ಯರ ಜೊತೆ ನಡೆದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಸರ್ವಪಕ್ಷಗಳ ಸದಸ್ಯರ ಮಾತುಗಳನ್ನು ವಿವರವಾಗಿ ಆಲಿಸಿದರು. ಎಲ್ಲ ಸದಸ್ಯರ ಮಾತಿನ ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದರು.

    ಜನರು ವಲಸೆ ಹೋಗ್ತಾರೆ ಎಂದು ಯೋಚನೆ ಮಾಡಬೇಡಿ, ವಲಸೆ ಹೋದವರು ವಾಪಸ್ ಬಂದಿದ್ದಾರೆ. ಊಟ ಸಿಗಲ್ಲ ಅಂತಾ ಯೋಚನೆ ಮಾಡಬೇಡಿ. ಆರೋಗ್ಯ ಕರ್ನಾಟಕ ನಮಗೆ ಬೇಕು ಎಂದು ಹೇಳಿದ ರಾಜ್ಯಪಾಲರು, ಸಾರ್ವಜನಿಕರು ಚಿಂತೆ ಮಾಡಬೇಡಿ. ಜೀವನಕ್ಕಿಂತ ಜೀವ ಮುಖ್ಯವಾಗಿದೆ. ತಾಂತ್ರಿಕ ಸಮಿತಿ ನಿರ್ಣಯದಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.

    ರಾಜ್ಯ ಸರ್ಕಾರ ಸಾರ್ವಜನಿಕರ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸಿಎಂ ಯಡಿಯೂರಪ್ಪ ತಾಂತ್ರಿಕ ಸಮಿತಿ ಜೊತೆ ಚರ್ಚೆ ಮಾಡಿ, ಆದಷ್ಟು ಶೀಘ್ರ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಸೂಚಿಸಿದರು.

  • ಮಾಣಿಕ್ ಷಾ ಮೈದಾನದಲ್ಲಿ ಗಣತಂತ್ರದ ಸಂಭ್ರಮ

    ಮಾಣಿಕ್ ಷಾ ಮೈದಾನದಲ್ಲಿ ಗಣತಂತ್ರದ ಸಂಭ್ರಮ

    – ರಾಜ್ಯಪಾಲರಿಂದ ಧ್ವಜಾರೋಹಣ

    ಬೆಂಗಳೂರು: 71ನೇ ಗಣರಾಜ್ಯೋತ್ಸವದ ಅಂಗವಾಗಿ ಸಿಲಿಕಾನ್ ಸಿಟಿಯ ಮಾಣಿಕ್ ಷಾ ಮೈದಾನದಲ್ಲಿ ರಾಜ್ಯಪಾಲ ವಿ.ಆರ್ ವಾಲಾ ಅವರು ಧ್ವಜಾರೋಹಣ ಮಾಡಿದ್ದಾರೆ.

    ಮಾಣಿಕ್ ಷಾ ಪೆರೇಡ್ ಮೈದಾನಕ್ಕೆ ಆಗಮಿಸಿದ ರಾಜ್ಯಪಾಲ ವಿ.ಆರ್ ವಾಲಾ ಅವರನ್ನು ಸಿಎಂ ಬಿ.ಎಸ್.ಯಡಿಯೂಪ್ಪ ಅವರು ಸ್ವಾಗತ ಮಾಡಿದರು. ಬಳಿಕ ರಾಜ್ಯಪಾಲರು ತೆರೆದ ಜೀಪಿನಲ್ಲಿ ಮಾಣೆಕ್ ಷಾ ಮೈದಾದಲ್ಲಿ ಗೌರವರಕ್ಷಾ ವಂದನೆ ಸ್ವೀಕಾರ ಮಾಡಿದರು. ನಂತರ ಭಾರತೀಯ ವಾಯುಪಡೆಯಿಂದ ರಾಷ್ಟ್ರಧ್ವಜಕ್ಕೆ ಹೆಲಿಕಾಪ್ಟರ್ ನಿಂದ ಪುಷ್ಪಾರ್ಚನೆ ಮಾಡಿದ್ದು, ರಾಷ್ಟ್ರಗೀತೆ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ವೇಳೆ 44 ತುಕಡಿಗಳ 1750 ವಿದ್ಯಾರ್ಥಿಗಳಿಂದ ಕವಾಯತು ಮತ್ತು ಪಥ ಸಂಚಲನ. ಮೊದಲ ಬಾರಿಗೆ ಬಿಬಿಎಂಪಿ ಪೌರ ಕಾರ್ಮಿಕರಿಂದ ಸ್ವಚ್ಛ ಭಾರತ್ ಅಭಿಯಾನದ ಜಾಗೃತಿ ಕುರಿತು ಪಥ ಸಂಚಲನ ಮಾಡಲಾಗಿದೆ. ನಂತರ ರಾಜ್ಯಪಾಲರು ಭಾಷಣ ಆರಂಭ ಮಾಡಿ ರಾಜ್ಯದ ಜನತೆಗೆ ಸಂದೇಶ ನೀಡಿದ್ದಾರೆ. ರಾಜ್ಯಪಾಲ ವಿ.ಆರ್ ವಾಲಾ 10 ಪುಟಗಳ ಭಾಷಣದಲ್ಲಿ ರಾಜ್ಯ ಸರ್ಕಾರದ ಸಾಧನೆ, ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಬಿಚ್ಚಿಟ್ಟರು.

    ಕರ್ನಾಟಕವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪರಿಣಾಮಕಾರಿ ಕ್ರಮ ಅನುಷ್ಠಾನಗೊಳಿಸುತ್ತಿದೆ. ಅಪರಾಧ ತಡೆಯುವ ಹಾಗೂ ಅವುಗಳ ತನಿಖೆಯನ್ನು ತುರ್ತಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಕಾರ್ಯಪದ್ಧತಿ ಸುಸಜ್ಜಿತಗೊಳಿಸುತ್ತಿದೆ. ಉತ್ತಮ ಆಡಳಿತ ನಿರ್ವಹಣೆ ಸೂಚ್ಯಂಕದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ ಎಂದು ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.

    ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉತ್ತರ ಕರ್ನಾಟಕದ ನೆರೆ ಬಗ್ಗೆ ಪ್ರಸ್ತಾಸಿದ್ದು, ನೆರೆಯಿಂದ ಬೆಳೆ, ಸಾರ್ವಜನಿಕರ ಆಸ್ತಿ-ಪಾಸ್ತಿ ನಾಶ ಆಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ 7 ಲಕ್ಷ ಜನರನ್ನ ಸ್ಥಳಾಂತರ ಮಾಡಲಾಗಿದೆ. ಪ್ರತಿ ಕುಟುಂಬಕ್ಕೆ 10 ಸಾವಿರ ಪರಿಹಾರ ಕೊಡಲಾಗಿದೆ. ಮನೆ ನಿರ್ಮಾಣಕ್ಕೆ 5 ಲಕ್ಷ ಭಾಗಶಃ ಮನೆಗಳ ದುರಸ್ತಿಗೆ 50 ಸಾವಿರ ಮಂಜೂರು ಮಾಡಿದೆ. ಎನ್‍ಡಿಆರ್‍ಎಫ್ ಈ ನಿಯಮ ಮೀರಿ ರಾಜ್ಯ ಸರ್ಕಾರವೇ ಹೆಚ್ಚುವರಿ ಹಣ ನೀಡಿದೆ ಎಂದು ರಾಜ್ಯದ ಸಾಧನೆಯ ಬಗ್ಗೆ ತಿಳಿಸಿದರು.

    ಈ ಕಾರ್ಯಕ್ರಮ ವೀಕ್ಷಣೆಗೆ 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 2 ಸಾವಿರ ಮಕ್ಕಳಿಂದ ಶಾಲಾ ಮಕ್ಕಳಿಂದ 3 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಗರುಡ ಪಡೆಯಿಂದ ಆಂತರಿಕ ಭದ್ರತೆ ಕುರಿತು ಅಣಕು ಪ್ರದರ್ಶನ, ಆಕರ್ಷಕ ಬೈಕ್ ಸ್ಟಂಟ್ ಸಾಹಸ ಮತ್ತು ರಾಜ್ಯಪಾಲರಿಂದ ಸರ್ವೋತ್ತಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

    ಪೊಲೀಸ್ ಬಂದೋಬಸ್ತ್:
    ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಾಣಿಕ್ ಷಾ ಪರೇಡ್ ಗ್ರೌಂಡ್‍ನಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮಾಣಿಕ್ ಷಾ ಪರೇಡ್ ಗ್ರೌಂಡ್‍ನಲ್ಲಿ 10 ಕೆ.ಎಸ್.ಆರ್.ಪಿ ತುಕಡಿ, 01 ಕ್ಷಿಪ್ರ ಕಾರ್ಯಾಚರಣೆ ತಂಡ, ಗರುಡಾ ಪಡೆ, ಕಮಾಂಡ್ ಕಂಟ್ರೋಲ್ ವಾಹನ ನಿಯೋಜನೆ ಹಾಗೂ ಮೈದಾನದ ಸುತ್ತ 07 ಎ.ಎಸ್. ಚೆಕ್ ತಂಡಗಳ ನಿಯೋಜನೆ ಮಾಡಲಾಗಿದೆ.

  • ‘ಎ’ ಗ್ರೇಡ್ ಪಡೆಯದ ಕಾಲೇಜು, ವಿವಿಯನ್ನ ಮುಚ್ಚಿಬಿಡಿ ರಾಜ್ಯಪಾಲ ವಿ.ಆರ್.ವಾಲಾ ಸಲಹೆ

    ‘ಎ’ ಗ್ರೇಡ್ ಪಡೆಯದ ಕಾಲೇಜು, ವಿವಿಯನ್ನ ಮುಚ್ಚಿಬಿಡಿ ರಾಜ್ಯಪಾಲ ವಿ.ಆರ್.ವಾಲಾ ಸಲಹೆ

    ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕಾದರೆ ಗುಣಮಟ್ಟ ಶಿಕ್ಷಣ ಅತ್ಯವಶ್ಯಕವಾಗಿ ಇರಬೇಕು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಕೆಲಸ ಮಾಡಬೇಕು. ಇಲ್ಲದೆ ಇದ್ದರೆ ಅಂತಹ ಕಾಲೇಜು ವಿಶ್ವವಿದ್ಯಾಲಯಗಳು ಅವಶ್ಯಕತೆ ಇಲ್ಲ. ಅವುಗಳನ್ನು ಮುಚ್ಚಿ ಬಿಡಿ ಅಂತ ರಾಜ್ಯಪಾಲ ವಿ.ಆರ್.ವಾಲಾ ನ್ಯಾಕ್ ಸಂಸ್ಥೆಗೆ ಸಲಹೆ ನೀಡಿದ್ದಾರೆ.

    ರಾಜಭವನದಲ್ಲಿ ನಡೆದ ನ್ಯಾಕ್ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದ ವಿ.ಆರ್.ವಾಲಾ, ಬಿ ಮತ್ತು ಸಿ ಗ್ರೇಡ್ ಕಾಲೇಜುಗಳು, ವಿಶ್ವವಿದ್ಯಾಲಯಗಳಿಗೆ ಉತ್ತಮ ಶಿಕ್ಷಣ ನೀಡಲು ಅವಕಾಶ ಕೊಡಬೇಕು. ಪ್ರತಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಕೊಡಿಸೋದು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಕರ್ತವ್ಯ. ಅದನ್ನ ಮರೆಯೋ ಸಂಸ್ಥೆಗಳನ್ನ ಮುಚ್ಚೋದು ವಾಸಿ ಅಂದರು.

    ಪ್ರತಿ ಸಂಸ್ಥೆ ಎ ಗ್ರೇಡ್ ಮಾನ್ಯತೆಯನ್ನೆ ಹೊಂದಿರಬೇಕು. ಬಿ ಮತ್ತು ಸಿ ದರ್ಜೆಯ ಕಾಲೇಜು ವಿವಿಗಳಿಗೆ ಅವಕಾಶ ಕೊಡಿ. ಒಂದು ವೇಳೆ ಅವುಗಳು ಸುಧಾರಣೆ ಮಾಡದೇ ಇದ್ದರೆ ಅಂತಹ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನ ಕ್ಲೋಸ್ ಮಾಡಿ ಅಂತ ನ್ಯಾಕ್ ಸಂಸ್ಥೆಗೆ ಸಲಹೆ ನೀಡಿದರು.

    ನಮ್ಮ ದೇಶದಲ್ಲಿ ಯುವ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದ್ರೆ ಗುಣಮಟ್ಟ ಶಿಕ್ಷಣ ನಮ್ಮಲ್ಲಿ ಕಡಿಮೆ ಇದೆ. ಫ್ರಾನ್ಸ್, ಜಪಾನ್ ನಮಗಿಂತ ಚಿಕ್ಕ ರಾಷ್ಟ್ರ ಆದ್ರು ನಮ್ಮ ದೇಶಕ್ಕೆ ವಿಮಾನಗಳನ್ನ ಪೂರೈಕೆ ಮಾಡುತ್ತಿವೆ. ಇದಕ್ಕೆ ಕಾರಣ ಅಲ್ಲಿನ ಶಿಕ್ಷಣ. ಹೀಗಾಗಿ ಭಾರತದಲ್ಲೂ ಇದೇ ಮಾದರಿಯ ಗುಣಮಟ್ಟದ ಶಿಕ್ಷಣ ಅವಶ್ಯಕತೆ ಇದೆ ಅಂತ ತಿಳಿಸಿದರು

  • ದೋಸ್ತಿ ಸರ್ಕಾರಕ್ಕೆ ರಾಜ್ಯಪಾಲರ ಚಾಟಿ

    ದೋಸ್ತಿ ಸರ್ಕಾರಕ್ಕೆ ರಾಜ್ಯಪಾಲರ ಚಾಟಿ

    ಬೆಂಗಳೂರು: ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಂಡಿರುವ ಸರ್ಕಾರಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಚಾಟಿ ಬೀಸಿದ್ದಾರೆ.

    ಸಮ್ಮಿಶ್ರ ಸರ್ಕಾರ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಅಲ್ಪ ಮತಕ್ಕೆ ಕುಸಿದ ಪರಿಣಾಮ ಕ್ಯಾಬಿನೆಟ್ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಸೂಚನೆ ನೀಡಿದ್ದಾರೆ.

    ಸರ್ಕಾರ ಪತನದ ಮುನ್ಸೂಚನೆ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ಕಡತಗಳಿಗೆ ಸಹಿ ಮತ್ತು ಅಧಿಕಾರಿಗಳಿಗೆ ಭಡ್ತಿ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲರು ಈ ಆದೇಶವನ್ನು ಹೊರಡಿಸಿದ್ದಾರೆ.

    ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ ಸೋಮವಾರ ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದರು.

    ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಎಂದು ಅಧಿಕಾರಿಗಳಿಗೆ ಬಡ್ತಿ ನೀಡಿರುವ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.

    ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದಾರೆ. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದೆ.

    ಬಡ್ತಿ ಪಡೆದ ಅಧಿಕಾರಿಗಳ ವಿವರ ಹೀಗಿದೆ
    ಎಇ ಹುದ್ದೆಯಿಂದ ಎಇಇ ಹುದ್ದೆ-100
    ಜೆಇ ಹುದ್ದೆಯಿಂದ ಎಇಇ(2)-200
    ಎಇಇ ಹುದ್ದೆಯಿಂದ ಇಇ – 400
    ಇಇ ಹುದ್ದೆಯಿಂದ ಎಸ್‍ಇ-126

  • ಬಿಜೆಪಿಯಿಂದ ಗದ್ದಲ – ರಾಜ್ಯಪಾಲರ ಭಾಷಣ ಅರ್ಧಕ್ಕೆ ಮೊಟಕು

    ಬಿಜೆಪಿಯಿಂದ ಗದ್ದಲ – ರಾಜ್ಯಪಾಲರ ಭಾಷಣ ಅರ್ಧಕ್ಕೆ ಮೊಟಕು

    ಬೆಂಗಳೂರು: ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ನಿರೀಕ್ಷೆಯಂತೆ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದ್ದ ಪರಿಣಾಮ ರಾಜ್ಯಪಾಲರ ಭಾಷಣ ಅರ್ಧದಲ್ಲೇ ಮುಕ್ತಾಯಗೊಂಡಿದೆ.

    ರಾಜ್ಯಪಾಲ ವಿ.ಆರ್.ವಾಲಾ ಅವರು ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಭಾವಿಗೆ ಇಳಿದು ಸರ್ಕಾರಕ್ಕೆ ಸದಸ್ಯರ ಬೆಂಬಲ ಇಲ್ಲ ಎಂದು ಹೇಳಿ ಪ್ರತಿಭಟನೆಗೆ ಇಳಿದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ರಾಜ್ಯಪಾಲರು ಅರ್ಧದಲ್ಲೇ ಭಾಷಣವನ್ನು ಮೊಟಕುಗೊಳಿಸಿದರು.

    ಒಟ್ಟು 22 ಪುಟಗಳ ಭಾಷಣ ಸಿದ್ಧಗೊಂಡಿತ್ತು. ಬಿಜೆಪಿ ಪ್ರತಿಭಟನೆ ಹಿನ್ನಲೆ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿ ರಾಜ್ಯಪಾಲ ವಿ.ಆರ್.ವಾಲಾ ತೆರಳಿದರು.

    ಈ ಸರ್ಕಾರಕ್ಕೆ ಶಾಸಕರ ಬೆಂಬಲ ಇಲ್ಲ. ಹೇಗೆ ಬಜೆಟ್ ಮಂಡನೆ ಮಾಡುತ್ತಾರೆ ನೋಡೋಣ ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ಹೇಳಿದರೆ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದ್ದು ವಿಧಾನಸಭೆಗೆ ಕಪ್ಪು ಚುಕ್ಕೆ ಎಂದು ಜೆಡಿಎಸ್ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 70ನೇ ಗಣರಾಜ್ಯೋತ್ಸವ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

    70ನೇ ಗಣರಾಜ್ಯೋತ್ಸವ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

    ಬೆಂಗಳೂರು: 70ನೇ ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ಧ್ವಜಾರೋಹಣ ನೆರವೇರಿಸಿದ್ರು. ಬಳಿಕ ರಾಷ್ಟ್ರಗೀತೆ, ರೈತಗೀತೆಗಳ ಗಾಯನ ನಡೆಯಿತು. ತದನಂತರ ರಾಜ್ಯಪಾಲರು ತೆರೆದ ವಾಹನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಕವಾಯತು ವೀಕ್ಷಣೆ ಮಾಡಿದ್ರು.

    ಬಳಿಕ ಹಿಂದಿಯಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲರು, ಕರ್ನಾಟಕ ಪ್ರಗತಿಯ ಮಾರ್ಗದಲ್ಲಿ ಇರಲಿದೆ. ಕೊಡಗು, ಮಲೆನಾಡು ಭಾಗದಲ್ಲಿ ಪ್ರಕೃತಿ ವಿಕೋಪವಾಗಿತ್ತು. ಕೊಡಗಿನ ಪ್ರವಾಹದ ವೇಳೆ ಕೇಂದ್ರ, ರಾಜ್ಯಗಳ ಸಂಸ್ಥೆಗಳಿಂದ ತುರ್ತು ಕಾರ್ಯಾಚರಣೆ ನಡೆದಿದೆ. ಕೊಡಗಿನಲ್ಲಿ ಹಾನಿಗೊಳಗಾದವರಿಗೆ ಸ್ಪಂದಿಸಲಾಗಿದೆ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ನಿಯಮಾನುಸಾರ 3,800 ರೂ. ನೀಡಲಾಗಿದೆ ಎಂದು ಹೇಳಿದ್ರು.

    ಬಡವರ ಬಂಧು ಯೋಜನೆಯ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಕೊಡಲಾಗಿದೆ. ಸಹಕಾರಿ ಬ್ಯಾಂಕ್ ಗಳು, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಯೋಜನೆ ಜಾರಿ ಮಾಡಲಾಗಿದೆ. 20 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಮುಖ್ಯಮಂತ್ರಿಗಳ ಮನೆ ನಿರ್ಮಾಣ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಅಂದ್ರು.

    ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. 9 ಡಿಸಿಪಿ, 19 ಎಸಿಪಿ ಸೇರಿ 1200 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. ಸುಗಮ ಸಂಚಾರಕ್ಕೆ 3 ಡಿಸಿಪಿಗಳ ನಿಯೋಜನೆ, ಸಾರ್ವಜನಿಕರಿಗೆ ಮೊಬೈಲ್ , ಕ್ಯಾಮರಾ, ಕೈಚೀಲ ನಿಷೇಧ, ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

    ಹೊರ ರಾಜ್ಯದಿಂದಲೂ ಸಾಕಷ್ಟು ಜನ ಆಗಮಿಸಿದ್ದು, ಹೀಗಾಗಿ ಪೇರೆಡ್ ಅನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರ ಪಾಸ್‍ಗಳನ್ನು ಚೆಕ್ ಮಾಡಿ ಪೊಲೀಸರು ಒಳಗಡೆ ಬಿಟ್ಟಿದ್ದಾರೆ.

    ಒಟ್ಟಿನಲ್ಲಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಸೇನೆಯ ವಿವಿಧ ವಿಭಾಗಗಳು, ಸ್ಕೌಟ್ಸ್ ಅಂಡ್ ಗೈಡ್ಸ್ , ಎನ್ ಸಿಸಿ, ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ನಂತರ ವಿವಿಧ ಶಾಲೆಗ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿಯಾಗಿ ಮಾತನಾಡೋದು ಕಲಿಯಬೇಕು – ಮೋದಿ ವಿರುದ್ಧ ಎಸ್.ಆರ್ ಹಿರೇಮಠ್ ಕಿಡಿ

    ಪ್ರಧಾನಿಯಾಗಿ ಮಾತನಾಡೋದು ಕಲಿಯಬೇಕು – ಮೋದಿ ವಿರುದ್ಧ ಎಸ್.ಆರ್ ಹಿರೇಮಠ್ ಕಿಡಿ

    ಧಾರವಾಡ: ಒಮ್ಮೆ ಪ್ರಧಾನಿಯಾದ ಬಳಿಕ ಅವರು ತಮ್ಮ ಪಕ್ಷ ಬಿಟ್ಟು ದೇಶದ ಪ್ರಧಾನಿಯಾಗಿ ಜವಾಬ್ದಾರಿತನದಿಂದ ಮಾತಾಡುವುದು ಕಲಿಯಬೇಕು. ಬೇಜವಾಬ್ದಾರಿಯಿಂದ ಮಾತನಾಡಿ ಆ ಸ್ಥಾನಕ್ಕೆ ಅವಮಾನ ತರುವ ಕೆಲಸ ಮಾಡಿದ್ದಾರೆ ಅಂತ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಏನೇ ಮಾಡಿದ್ರೂ, ಹೆಂಗೇ ಆದ್ರೂ ನಾವು ಗೆಲ್ತೇವೆ ಅನ್ನೋ ಅಹಂಕಾರವಿತ್ತು. ಆದ್ರೆ ಇದು ಕರ್ನಾಟಕದಲ್ಲಿ ಫಲಿಸಲಿಲ್ಲ. ಇದು ಒಂದು ಉತ್ಕೃಷ್ಟ ಬೆಳವಣಿಗೆಯಾಗಿದೆ. ಎಷ್ಟೋ ಸಲ ಆಗುವ ಅನಾಹುತವನ್ನು ನಿಲ್ಲಿಸುವುದು ಕೂಡ ಒಂದು ಮಹತ್ವದ ಸಾಧನೆ. ಬಿಜೆಪಿಯವರನ್ನು 104ಕ್ಕೆ ಇಳಿಸಿದ್ದಾರೆ ಅಂತ ಹೇಳಿದ್ರು.

    ಜಾಣಮರಿ ಅಮಿತ್ ಶಾ ಅವರ ಹಿನ್ನೆಲೆ ನಿಮಗೆ ಗೊತ್ತಿದೆ. ಗುಜರಾತ್ ನ್ಲಿ ಯಾವ ರೀತಿಯ ಬ್ಯಾಗ್ರೌಂಡ್ ಇತ್ತು. ಆ ವ್ಯಕ್ತಿ ಇಂದು ನಮ್ಮ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಹಾಗೂ ಇಂದು ಕಾರ್ಯಾಂಗ ಗಂಭೀರ ಸ್ಥಿತಿಯಲ್ಲಿರಲು ಅವರ ಕೈವಾಡವಿದೆ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರ ಮೇಲೆಯೂ ಪ್ರಭಾವ ಬೀರಿದ್ದಾರೆ ಅಂತ ಲೋಯಾ ಕೊಲೆ ಪ್ರಕರಣದ ಕುರಿತು ಮಾತನಾಡಿದ್ರು.

    ಪ್ರಜಾಪ್ರಭುತ್ವದೊಳಗೆ ಯಾವುದೇ ಸ್ಥಾನ ಇರದಂತಹ ವ್ಯಕ್ತಿಗೆ ಕೊಡಬಾರದಂತದ್ದನ್ನು ಸುಪ್ರೀಂ ಕೋರ್ಟ್ ಕೊಟ್ಟಿದೆ. ಹೀಗೆ ಎಲ್ಲವನ್ನು ಬಳಸಿಕೊಂಡು ಶಾ ಗೋವಾ, ಮಣಿಪುರ, ಮೇಘಾಲಯದಲ್ಲಿ ಹೋದರೊ ಅದು ನಮ್ಮ ಪ್ರಜಾಪ್ರಭುತ್ವಕ್ಕೆ ಗಂಭೀರವಾದ ಗಂಡಾಂತರ. ಹೀಗಾಗಿ ಇವರಿಬ್ಬರೂ ವ್ಯಕ್ತಿಗಳನ್ನು ಕರ್ನಾಟಕದಲ್ಲಿ ಸೋಲಿಸಿರುವುದು ಅತೀ ಮಹತ್ವದ ಬೆಳವಣಿಗೆ ಅಂತ ಅವರು ಅಭಿಪ್ರಾಯಿಸಿದ್ರು.

    ಹೊಸ ಸರ್ಕಾರ ರಚನೆಯಾಗಲಿದೆ. ಹಿಂದಿನ ಸರ್ಕಾರ ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಂಡಿತ್ತು. ರಾಜ್ಯಪಾಲ ವಿ ಆರ್ ವಾಲಾ ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ. ಬಿಜೆಪಿಗೆ 15 ದಿನ ಸಮಯಕೊಟ್ಟಿದ್ದು ಪ್ರಜಾಪ್ರಭುತ್ವಕ್ಕೆ ಗಂಡಾಂತರ ತರುವ ಕೆಲಸವಾಗಿದೆ. ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಇಲ್ಲಾಂದ್ರೆ ರಾಷ್ಟ್ರಪತಿ ಅವರನ್ನು ವಜಾ ಮಾಡಲಿ ಅಂತ ಆಗ್ರಹಿಸಿದ್ರು.

    ಸಿದ್ಧರಾಮಯ್ಯ ಸರ್ಕಾರದ 16 ಜನ ಮಂತ್ರಿಗಳು ನೆಲ ಕಚ್ಚಿದ್ದಾರೆ. ಇದರಲ್ಲಿ ಸೋತಿರುವ ಭ್ರಷ್ಟ ಮಂದಿಯನ್ನು ನಾವು ತುಂಬು ಹೃದಯದಿಂದ ಸ್ವಾಗತಿಸಬೇಕು. ವಿನಯ ಕುಲಕರ್ಣಿ, ಈತ ಮಂತ್ರಿ ಅಲ್ಲ ಶಾಸಕನಾಗಿ ಸಾರ್ವಜನಿಕ ಜೀನವದಲ್ಲಿರಲು ಅಯೋಗ್ಯ. ಸಂತೋಷ್ ಲಾಡ್ ಕೂಡ ಮನೆಗೆ ಹೋಗಿದ್ದಾರೆ ಅಂದ್ರು.

  • ಹಂಗಾಮಿ ಸ್ಪೀಕರ್ ಪರೀಕ್ಷೆಯಲ್ಲಿ ಬಿಜೆಪಿ ಪಾಸ್: ಕೈ ಅರ್ಜಿ ವಜಾ

    ಹಂಗಾಮಿ ಸ್ಪೀಕರ್ ಪರೀಕ್ಷೆಯಲ್ಲಿ ಬಿಜೆಪಿ ಪಾಸ್: ಕೈ ಅರ್ಜಿ ವಜಾ

    ನವದೆಹಲಿ: ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಅವರನ್ನು ನೇಮಿಸಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

    ಬೋಪಯ್ಯ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತ್ವರಿತ ವಿಚಾರಣೆ ಇಂದು ನ್ಯಾಯಮೂರ್ತಿ ಎ.ಕೆ.ಸಿಕ್ರಿ ನ್ಯಾ. ಅಶೋಕ್ ಭೂಷಣ್ ಹಾಗೂ ನ್ಯಾ.ಎಸ್.ಎ ಬೊಬ್ಡೆ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

    ಹಂಗಾಮಿ ಸ್ಪೀಕರ್ ಬೋಪಯ್ಯ ಅವರ ಟ್ರ್ಯಾಕ್ ರೆಕಾರ್ಡ್ ಸರಿಯಲ್ಲ ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ವಾದಿಸಿದರೆ ಈ ಹಿಂದೆಯೂ ಕಿರಿಯ ಶಾಸಕರನ್ನು ಸ್ಪೀಕರ್ ಮಾಡಿದ ಉದಾಹರಣೆಗಳಿವೆಯಲ್ಲ ಎಂದು ನ್ಯಾ.ಬೊಬ್ಡೆ ಪ್ರಶ್ನಿಸಿದರು.

    ಇದರ ಜೊತೆಯಲ್ಲಿ ಹಿರಿಯ ಶಾಸಕರು ಎಂದರೆ ವಯಸ್ಸಿನಲ್ಲಲ್ಲ, ಚುನಾಯಿತ ಅವಧಿಯಲ್ಲಿ ಎಂದು ನ್ಯಾ.ಬೊಬ್ಡೆ ಅಭಿಪ್ರಾಯಪಟ್ಟರು. ಬೋಪಯ್ಯಗೂ, ಬೇರೆ ಪ್ರಕರಣಕ್ಕೂ ವ್ಯತ್ಯಾಸವಿದೆ ಎಂದು ಲೋಕಸಭೆಯ ಎಲ್ಲಾ ಹಂಗಾಮಿ ಸ್ಪೀಕರ್ ಗಳ ಪಟ್ಟಿಯನ್ನು ಕಪಿಲ್ ಸಿಬಲ್ ಓದಿದರು. ಲೋಕಸಭೆಯಲ್ಲಿ ವಿಖೆ ಪಾಟೀಲ್ ಹಿರಿಯ ಸದಸ್ಯರಾಗಿರಲಿಲ್ಲ, ರಾಜಸ್ಥಾನದ ಸಂಸದರೊಬ್ಬರು ವಿಖೆ ಪಾಟೀಲ್‍ಗಿಂತ ಹಿರಿಯರಿದ್ದರು ಎಂದು ನ್ಯಾ.ಬೊಬ್ಡೆ ಹೇಳಿದಾಗ ವಿಖೆ ಪಾಟೀಲ್‍ಗೆ ಬೋಪಯ್ಯ ರೀತಿಯ ಇತಿಹಾಸವಿಲ್ಲ ಎಂದು ಕಪಿಲ್ ಸಿಬಲ್ ವಾದಿಸಿದರು.

    ಈ ವೇಳೆ ಸುಪ್ರೀಂ ಕೋರ್ಟ್ ವಿಶ್ವಾಸ ಮತಯಾಚನೆ ವಿಡಿಯೋದಲ್ಲಿ ಸಂಪೂರ್ಣ ಚಿತ್ರೀಕರಣಗೊಳ್ಳುತ್ತದೆ. ಅಷ್ಟೇ ಅಲ್ಲದೇ ರಾಜ್ಯಪಾಲರ ನಿರ್ಧಾರದಲ್ಲಿ ನಾವು ಭಾಗಿಯುವುದಿಲ್ಲ ಎಂದು ಹೇಳಿ ಕಾಂಗ್ರಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಸುಪ್ರೀಂ ಕೋರ್ಟ್ ಕಲಾಪ ಆರಂಭಗೊಂಡ ಬಳಿಕ ವಿಧಾನಸಭೆಯ ಕಲಾಪ ಆರಂಭಗೊಂಡಿತ್ತು.

    ಹಂಗಾಮಿ ಸ್ಪೀಕರ್ ಬೋಪಯ್ಯ ನೇಮಕ ವಿವಾದವೇಕೆ?
    * ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವುದು ವಾಡಿಕೆ
    * ಬೋಪಯ್ಯಗಿಂತ ಆರ್.ವಿ. ದೇಶಪಾಂಡೆ, ಉಮೇಶ್ ಕತ್ತಿ ಹಿರಿಯರು
    * ಬೋಪಯ್ಯ 4 ಬಾರಿ ಎಂಎಲ್‍ಎಯಾದ್ರೆ, ಇವರಿಬ್ಬರು 8 ಬಾರಿ ಎಂಎಲ್‍ಎಗಳು
    * ಜಮೀರ್ ಅಹ್ಮದ್, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯ್ಕ್ ಅನರ್ಹ ಭೀತಿ
    * 2010ರಲ್ಲಿ ಪಕ್ಷಾಂತರ ಕಾಯ್ದೆಯಡಿ ಅನರ್ಹ ಮಾಡಿದ್ದ ಬೋಪಯ್ಯ

    ಇನ್ನು, ಹಂಗಾಮಿ ಸ್ಪೀಕರ್ ಕಾರ್ಯವ್ಯಾಪ್ತಿ ಈ ರೀತಿ ಇರಲಿದೆ
    * ಶಾಸಕರನ್ನು ಅನರ್ಹ ಮಾಡುವ ಅಧಿಕಾರ ಇರುವುದಿಲ್ಲ
    * ನೂತನ ಸಚಿವರಿಗೆ ಪ್ರಮಾಣವಚನ ಬೋಧನೆ ಮಾಡಬಹುದಷ್ಟೇ
    * ವಿಶ್ವಾಸಮತ ಯಾಚನೆ ಪ್ರಕ್ರಿಯೆಗಷ್ಟೇ ಹಂಗಾಮಿ ಸ್ಪೀಕರ್ ಸೀಮಿತ
    * ಶಾಸಕರನ್ನು ಅನರ್ಹ ಮಾಡುವ ಅಧಿಕಾರ ಇರುವುದಿಲ್ಲ

  • ರಾಜ್ಯದ ಕಾನೂನು ಸುವ್ಯವಸ್ಥೆಗೆ ನಿನ್ನೆ ಮೋದಿ ತೆಗಳಿಕೆ, ಇಂದು ರಾಜ್ಯಪಾಲರ ಹೊಗಳಿಕೆ

    ರಾಜ್ಯದ ಕಾನೂನು ಸುವ್ಯವಸ್ಥೆಗೆ ನಿನ್ನೆ ಮೋದಿ ತೆಗಳಿಕೆ, ಇಂದು ರಾಜ್ಯಪಾಲರ ಹೊಗಳಿಕೆ

    ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಫುಲ್ ಮಾರ್ಕ್ಸ್
    – ಭ್ರಷ್ಟಾಚಾರ, ಮಹದಾಯಿ ವಿಚಾರವೂ ಪ್ರಸ್ತಾಪ

    ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಭಾಷಣದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ನಿನ್ನೆಯಷ್ಟೇ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ, ಮರ್ಡರ್ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದ್ದರೆ, ರಾಜ್ಯಪಾಲರ ಭಾಷಣದಲ್ಲಿ ಕಾನೂನು ಸುವ್ಯವಸ್ಥೆಗೆ ಫುಲ್ ಶಹಬ್ಬಾಸ್‍ಗಿರಿ ಸಿಕ್ಕಿದೆ.

    ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಿ.ಆರ್.ವಾಲಾ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪರಿಣಾಮಕಾರಿ ಕ್ರಮ ಕೈಗೊಂಡಿದೆ. ಕೋಮು ಸೌಹಾರ್ದ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಿದೆ. ಕೋಮು ಹಿಂಸಾ ಘಟನೆಗಳ ಬಗ್ಗೆ ದೃಢವಾದ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

    ನಿನ್ನೆ ಪ್ರಧಾನಿ ಮೋದಿ ಭಾಷಣದ ವೇಳೆ ಮೌನ ವಹಿಸಿದ್ದ ಮಹದಾಯಿ ವಿಚಾರ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಾಯಿತು. ಮಹದಾಯಿ ಜಲಾನಯನ ಪ್ರದೇಶದ ಜನರ ಹಕ್ಕಿನ ಪಾಲನ್ನು ದೊರಕಿಸಿಕೊಡಲು ಎಲ್ಲ ರೀತಿ ಪ್ರಯತ್ನ ಮಾಡುತ್ತೇವೆ ಎಂದು ರಾಜ್ಯಪಾಲರು ಹೇಳಿದರು. ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳ ನ್ಯಾಯಯುತ ನೀರಿನ ಬೇಡಿಕೆ ಈಡೇರಿಸಲು ಬದ್ಧ. ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಸರ್ಕಾರದ ಬದ್ಧತೆ ಮುಂದುವರಿಯುತ್ತದೆ ಎಂದು ಹೇಳಿದರು.

    ರಾಜ್ಯಪಾಲರ ಭಾಷಣದಲ್ಲಿ ಭ್ರಷ್ಟಾಚಾರದ ಬಗ್ಗೆಯೂ ಪ್ರಸ್ತಾಪವಾಯಿತು. ಸಾರ್ವಜನಿಕ ಸೇವೆಗಳಲ್ಲಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆದಿದೆ. ಇದಕ್ಕಾಗಿಯೇ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ಆರಂಭಿಸಿದೆ. ಎಸಿಬಿ ಆರಂಭವಾದ ದಿನದಿಂದ ಇದುವರೆಗೆ 278 ಟ್ರ್ಯಾಪ್ ಪ್ರಕರಣ, 65 ದಾಳಿ, 61 ಇತರೆ ಪ್ರಕರಣ ಸೇರಿ ಒಟ್ಟು 404 ಪ್ರಕರಣ ದಾಖಲಾಗಿದೆ. ಎಸಿಬಿ ಆರಂಭದ ದಿನದಿಂದ ಸರ್ಕಾರವು ಸ್ವೀಕರಿಸಿದ 106 ಪ್ರಕರಣಗಳಲ್ಲಿ 72 ಪ್ರಕರಣಗಳಿಗೆ ಅಭಿಯೋಜನಾ ಮಂಜೂರಾತಿ ಆದೇಶ ಹೊರಡಿಸಿದ್ದೇವೆ ಅಂದ್ರು.

    ಬಿಜೆಪಿ ಆಕ್ಷೇಪ: ಇದೇ ವೇಳೆ ರಾಜ್ಯಪಲಾರ ಭಾಷಣಕ್ಕೆ ಪ್ರತಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯಪಾಲರ ಭಾಷಣ ಸುಳ್ಳು, ರಾಜ್ಯಪಾಲರನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ರಾಜ್ಯ ಸರ್ಕಾರ ವಸ್ತು ಸ್ಥಿತಿ ಮರೆ ಮಾಚಿ ಸುಳ್ಳು ಅಂಕಿ ಅಂಶಗಳನ್ನು ಕೊಟ್ಟಿದೆ. ರಾಜ್ಯಪಾಲರ ಮುಖಾಂತರ ಕ್ರೈಂ ಮಾಡಿಸಿದೆ. ರಾಜ್ಯದಲ್ಲಿ ಕೊಲೆಗಳು ನಡೆಯುತ್ತಿದೆ. ರಾಜ್ಯದಲ್ಲಿರೋದು ಮರ್ಡರ್ ಸರ್ಕಾರ ಎಂದು ನಿನ್ನೆ ಬಿಜೆಪಿ ಸಮಾವೇಶದಲ್ಲಿ ಮೋದಿ ಹೇಳಿದ ಮಾತನ್ನೇ ಶೆಟ್ಟರ್ ಕೂಡಾ ಹೇಳಿದ್ದಾರೆ.