Tag: ವಿಷ ಪ್ರಸಾದ

  • ಸುಳ್ವಾಡಿ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಜಾ

    ಸುಳ್ವಾಡಿ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಜಾ

    ಚಾಮರಾಜನಗರ: ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ ಅಮಾಯಕ ಭಕ್ತರ ಸಾವಿಗೆ ಕಾರಣನಾಗಿರುವ ಇಮ್ಮಡಿ ಮಹದೇವಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

    ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡ ಬಳಿಕ ಸುಪ್ರಿಂ ಕೋರ್ಟಿಗೆ ಇಮ್ಮಡಿ ಮಹದೇವಸ್ವಾಮಿ ದುವಾ ಅಸೋಸಿಯೆಟ್ ಮೂಲಕ ನವೆಂಬರ್ 5ರಂದು ಅರ್ಜಿ ಸಲ್ಲಿಸಲಾಗಿತ್ತು. ನವೆಂಬರ್ 21 ರಂದು ಅರ್ಜಿ ಸ್ವೀಕರಿಸಿದ್ದ ನ್ಯಾಯಾಧೀಶರಾದ ಅಜಯ್ ರಸ್ಟೋಗಿ, ಎನ್ ವಿ. ರಮಣ ಮತ್ತು ವಿ.ರಾಮಸುಬ್ರಮಣಿಯನ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಸುದೀರ್ಘ ವಿಚಾರಣೆ ನಡೆಸಿ, ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.

    ಡಿಸೆಂಬರ್ 14, 2018ರಂದು ಕಿಚ್‍ಗುತ್ ಮಾರಮ್ಮ ದೇಗುಲಕ್ಕೆ ಗೋಪುರ ಮತ್ತು ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈ ವೇಳೆ ಭಕ್ತರಿಗೆ ನೀಡಿದ ಪ್ರಸಾದಕ್ಕೆ ವಿಷ ಸೇರಿಸಲಾಗಿತ್ತು. ವಿಷ ಮಿಶ್ರಿತ ಆಹಾರ ಸೇವಿಸಿದ್ದ ಭಕ್ತರಲ್ಲಿ 17 ಜನರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಮಲೈ ಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಪ್ರಮುಖ ಆರೋಪಿಯಾಗಿ ಜೈಲು ಪಾಲಾಗಿದ್ದನು.

    ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಇಮ್ಮಡಿ ಮಹದೇವಸ್ವಾಮಿ ಜಾಮೀನಿಗಾಗಿ ಇನ್ನಿಲ್ಲದ ಹರಸಾಹಸ ಮಾಡಿದ್ದನು. ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿ ಪರ ವಕಾಲತ್ತು ವಹಿಸಲು ಸ್ಥಳೀಯವಾಗಿ ಯಾವುದೇ ವಕೀಲರು ಮುಂದೆ ಬಾರದ ಕಾರಣ, ಜಾಮೀನು ಅರ್ಜಿ ವಜಾಗೊಂಡು ರಾಜ್ಯ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ಇಮ್ಮಡಿ ಮಹದೇವಸ್ವಾಮಿ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ಮೂಲಕ ಹೊರ ಬಂದಲ್ಲಿ ಪ್ರಕರಣದ ಸಾಕ್ಷಿಗಳನ್ನ ನಾಶ ಪಡಿಸುವ ಸಂಭವವಿದೆ ಎಂದು ತೀರ್ಪು ನೀಡಿದ್ದ ಹೈಕೋರ್ಟ್ ಜಾಮೀನು ಅರ್ಜಿಯನ್ನ ವಜಾಗೊಳಿಸಿತ್ತು.

  • ಚಿಂತಾಮಣಿ ಗಂಗಮ್ಮ ವಿಷ ಪ್ರಸಾದ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಚಿಂತಾಮಣಿ ಗಂಗಮ್ಮ ವಿಷ ಪ್ರಸಾದ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    -ಅಂದು ಅಂಬಿಕಾ, ಇಂದು ಲಕ್ಷ್ಮಿ!

    ಚಿಕ್ಕಬಳ್ಳಾಪುರ: ಚಾಮರಾಜನಗರದ ಸುಳ್ವಾಡಿಯ ಮಾರಮ್ಮ ದೇವಿ ವಿಷ ಪ್ರಸಾದ ಮಾಸುವ ಮುನ್ನವೇ ಚಿಂತಾಮಣಿ ಗಂಗಮ್ಮ ಗುಡಿ ಪ್ರಸಾದ ದುರಂತ ನಡೆದು ಹೋಯಿತು. ಪ್ರಕರಣದ ಪೊಲೀಸರ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಪ್ರಸಾದ ತಯಾರಿಸಿ ಹಂಚಿದ ಲಕ್ಷ್ಮಿಯೇ ವಿಷಕನ್ಯೆ ಅನ್ನೋ ಅಘಾತಕಾರಿ ಅಂಶ ಬಲವಾಗುತ್ತಿದೆ. ತನ್ನ ಅನೈತಿಕ ಸಂಬಂಧ ಉಳಿಸಿಕೊಳ್ಳೊಕೆ ಪ್ರಿಯಕರನನ್ನ ಪಡೆದುಕೊಳ್ಳೋಕೆ ಲಕ್ಷ್ಮಿಯೇ ವಿಷಪ್ರಸಾದದ ಪ್ಲಾನ್ ರೂಪಿಸಿದ್ದಾಳಾ ಅನ್ನೋ ಅನುಮಾನ ವ್ಯಕ್ತವಾಗಿದೆ.

    ಸುಳ್ವಾಡಿ ವಿಷ ಪ್ರಸಾದವೇ ಸ್ಫೂರ್ತಿ ಎಂಬಂತೆ ಪ್ರಸಾದ ತಯಾರಿಸಿ ಹಂಚಿಸಿದ್ದ ಲಕ್ಷ್ಮಿ ವಿರುದ್ಧ ಅನೈತಿಕ ಸಂಬಂಧದ ಗಂಭೀರ ಆರೋಪ ಕೇಳಿ ಬಂದಿದೆ. ಚಿಂತಾಮಣಿ ಗಂಗಮ್ಮ ಗುಡಿ ಪ್ರಸಾದ ದುರಂತ ಪ್ರಕರಣದಲ್ಲಿ ಪ್ರಸಾದವೇ ವಿಷವಾಯ್ತಾ, ಇಲ್ಲ. ಪ್ರಸಾದದಲ್ಲೇ ಉದ್ದೇಶಪೂರ್ವಕವಾಗಿಯೇ ವಿಷ ಬೆರೆಸಲಾಯ್ತಾ..? ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತಿದೆ. ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಅನೈತಿಕ ಸಂಬಂಧದ ವಾಸನೆ ಮೂಗಿಗೆ ಬಡಿದಿದೆ.

    ಗಂಗಮ್ಮನ ದೇಗುಲದಲ್ಲಿ ಅಮರವಾತಿ ಮೂಲಕ ಪ್ರಸಾದ ಹಂಚಿಸಿದ್ದ ಲಕ್ಷ್ಮಿಯೇ ವಿಷ ಕನ್ಯೆ ಎಂಬ ಅನುಮಾನ ದೃಢವಾಗ್ತಿದೆ. ಅಸಲಿಗೆ ಗಂಗಮ್ಮ ಗುಡಿ ಎದುರು ಮನೆಯ ಲಕ್ಷ್ಮಿಗೆ ಹಾಗೂ ದೇವಾಲಯದ ಪಕ್ಕದ ಮನೆಯ ಲೋಕೇಶ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತಂತೆ. ಆದ್ರೂ ಲೋಕೇಶ್ ಎರಡೂವರೆ ವರ್ಷದ ಹಿಂದೆ ಗೌರಿಯನ್ನ ಮದುವೆಯಾಗಿದ್ದ. ಮದುವೆ ನಂತರ ಲೋಕೇಶ್ ಲಕ್ಷ್ಮಿ ಸಂಬಂಧ ಗೌರಿಗೆ ಗೊತ್ತಾಗಿ ದೊಡ್ಡ ಜಗಳವೇ ನಡೆದಿತ್ತು. ಹೀಗಾಗಿ ಮೂರೂವರೆ ತಿಂಗಳ ಹಿಂದೆ ಲೋಕೇಶ್ ಮನೆ ಬಿಟ್ಟು ಚಿಂತಾಮಣಿಯಿಂದಲೇ ನಾಪತ್ತೆಯಾಗಿದ್ದಾನೆ. ಇದು ಲಕ್ಷ್ಮಿಗೆ ಅರಗಿಸಿಕೊಳ್ಳಲಾಗಿಲ್ಲ. ಲೋಕೇಶ್ ಪತ್ನಿಯಾದ ನನ್ನನ್ನು ಮುಗಿಸಿಬಿಟ್ರೇ ತನ್ನ ಅನೈತಿಕ ಸಂಬಂಧದ ಹಾದಿ ಸುಗಮವಾಗುತ್ತೆ ಅಂತ ಲಕ್ಷ್ಮಿ ಈ ಸಂಚು ರೂಪಿಸರಬಹುದು ಎಂದು ಗೌರಿ ಆರೋಪಿಸುತ್ತಾರೆ.

    ಗೌರಿ ಕೊಲೆಗೆ ಲಕ್ಷ್ಮಿ ಸ್ಕೆಚ್!
    ಈ ಗೌರಿ ಬೇರೆ ಯಾರು ಅಲ್ಲ, ವಿಷ ದುರಂತದಲ್ಲಿ ಸಾವನ್ನಪ್ಪಿದ ಸರಸ್ವತಮ್ಮನ ಪುತ್ರ್ರಿ. ಗೌರಿ ಮೇಲೆ ಹತ್ಯಾ ಪ್ರಯತ್ನ ನಡೆಯುತ್ತಿರೋದು ಎರಡನೇ ಬಾರಿ ಎಂಬ ಮಾಹಿತಿ ಲಭ್ಯವಾಗುತ್ತಿವೆ. ಈ ಬಾರಿ ಪ್ರಸಾದಕ್ಕೆ ಬಂಗಾರಕ್ಕೆ ಬಳಸಲಾಗುವ ಸೈನೆಡ್ ಬಳಸಿದ್ಲು ಅನ್ನೋ ಸ್ಫೋಟಕ ಅಂಶ ಬಯಲಾಗಿದೆ. ಈ ಹಿಂದೆಯೂ ಗೌರಿ ಹತ್ಯೆಗೆ ಲಕ್ಷ್ಮಿ ಪ್ರಸಾದದಲ್ಲಿ ವಿಷ ಬೆರೆಸಿದ್ಳು, ಇದು ಗೊತ್ತಿಲ್ಲದೇ ತಿಂದ ಗೌರಿ, ತೀವ್ರ ವಾಂತಿಯಿಂದ ಆಸ್ಪತ್ರೆ ಸೇರಿದ್ದರು. ಇದರಿಂದ ಗಂಗಮ್ಮನ ಗುಡಿಗೆ ಹೋಗಿದ್ರೂ ಪ್ರಸಾದ ತಿನ್ನದೇ, ತನ್ನ ತಾಯಿಗೆ ಅಂತ ಸ್ವಲ್ಪ ತಂದಿದ್ದರಂತೆ. ಇದನ್ನು ತಿಂದ ಸರಸ್ವತಮ್ಮ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ತಾಯಿಯನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

    ಇಷ್ಟೆಲ್ಲಾ ಅನೈತಿಕ ಸಂಬಂಧದ ಕಹಾನಿ ತಿಳಿದುಕೊಂಡಿರೋ ಪೊಲೀಸರು ಗೌರಿ ಹೇಳಿಕೆ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ. ಲಕ್ಷ್ಮಿ ಪತಿ ಮಂಜುನಾಥ್, ಲೋಕೇಶ್ ಸಂಬಂಧಿ ಚೊಕ್ಕಹಳ್ಳಿ ರವಿಯನ್ನ ವಶಕ್ಕೆ ಪಡೆದ ಪೊಲೀಸರು ನಾಪತ್ತೆಯಾಗಿರೊ ಲೋಕೇಶ್‍ಗಾಗಿ ಶೋಧ ಆರಂಭಿಸಿದ್ದಾರೆ. ಈ ನಡುವೆ ಗೌರಿ ತಂದೆ ಶಿವಪ್ಪ, ಪ್ರಸಾದದದಲ್ಲಿ ವಿಷ ಬೆರೆಸಿ ಇಬ್ಬರ ಸಾವಿಗೆ ಕಾರಣಲಾದ ಲಕ್ಷ್ಮಿಗೆ ತಕ್ಕ ಶಾಸ್ತಿ ಆಗಬೇಕು ಅಂತ ಆಗ್ರಹಿಸಿದ್ದಾರೆ.

    ಸದ್ಯ ಎಫ್ ಎಸ್ ಎಲ್ ರಿಪೋರ್ಟ್ ಸಹ ಪೊಲೀಸರ ಕೈ ಸೇರಿದೆ. ಪೊಲೀಸರ ವಶದಲ್ಲಿರೋ ವಿಷ ಕನ್ಯೆ ಸಹ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ ಎನ್ನಲಾಗ್ತಿದೆ. ಈ ವಿಚಾರವಾಗಿ ಚಿಕ್ಕಬಳ್ಳಾಪುರ ಎಸ್ಪಿ ಇಂದು ಮಹತ್ವದ ಸುದ್ದಿಗೋಷ್ಟಿ ನಡೆಸೋ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಂಗಮ್ಮಗುಡಿ ವಿಷ ಪ್ರಸಾದ ದುರಂತಕ್ಕೆ 2ನೇ ಬಲಿ – ಇಬ್ಬರು ಮಹಿಳೆಯರು ಅರೆಸ್ಟ್!

    ಗಂಗಮ್ಮಗುಡಿ ವಿಷ ಪ್ರಸಾದ ದುರಂತಕ್ಕೆ 2ನೇ ಬಲಿ – ಇಬ್ಬರು ಮಹಿಳೆಯರು ಅರೆಸ್ಟ್!

    – ಮಗಳ ಮನೆಗೆ ಬಂದಿದ್ದ ತಾಯಿ ಸರಸ್ವತಮ್ಮ ಸಾವು

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಗಂಗಮ್ಮ ಗುಡಿ ವಿಷ ಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರ ಬಲಿಯಾಗಿದೆ. ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರಸ್ವತಮ್ಮ ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ಎರಡಕ್ಕೇರಿದೆ. 56 ವರ್ಷದ ಸರಸ್ವತಮ್ಮ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿಯ ನಿವಾಸಿ. ಊರ ಹಬ್ಬಕ್ಕೆಂದು ಮಗಳು ಗೌರಿ ಮನೆಗೆ ಬಂದಿದ್ರು. ಆದರೆ ವಿಧಿಯ ಆಟವೇ ಬೇರೆ ಇದ್ದಿದರಿಂದ ಬಾರದ ಲೋಕಕ್ಕೆ ಸರಸ್ವತಮ್ಮ ಹೋಗಿದ್ದಾರೆ. ಇನ್ನೂ 11 ಮಂದಿ ಕೋಲಾರ-ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸುಳ್ವಾಡಿ ವಿಷ ದುರಂತದ ಬಳಿಕ ಎಲ್ಲವನ್ನು ಅನುಮಾನದಿಂದ ನೋಡಬೇಕಾಗಿ ಬಂದಿದೆ. ಗಂಗಮ್ಮನ ಪ್ರಸಾದಕ್ಕೆ ಯಾರಾದ್ರೂ ಉದ್ದೇಶಪೂರ್ವಕವಾಗಿ ವಿಷ ಬೆರೆಸಿ ಮಾರಣಹೋಮಕ್ಕೆ ಸ್ಕೆಚ್ ಹಾಕಿದ್ರಾ ಎಂಬ ಅನುಮಾನ ಕಾಡುತ್ತಿದೆ. ಇದೇ ಅನುಮಾನದ ಮೇಲೆ ಅಮರಾವತಿ, ಲಕ್ಷ್ಮಿ ಸೇರಿದಂತೆ ಹಲವರನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೃತ ಕವಿತಾ ಸಂಬಂಧಿ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ಕೂಡ ದಾಖಲಾಗಿದೆ. ನಾವು ವಿಷ ಬೆರೆಸಿಲ್ಲ ಎಂದು ಲಕ್ಷ್ಮಿ ಹಾಗೂ ಅಮರಾವತಿ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.

    ವೈದ್ಯರ ಹೇಳಿಕೆ ಪ್ರಕಾರ, ಗಂಗಮ್ಮನ ದೇವಸ್ಥಾನದಲ್ಲಿ ಭಕ್ತರು ಸೇವಿಸಿದ ಪ್ರಸಾದದಲ್ಲಿ ವಿಷ ಬೆರೆತಿರುವ ಸಾಧ್ಯತೆ ಇಲ್ಲ. ಬೆಳಗ್ಗೆ ಸಿದ್ಧಪಡಿಸಿದ್ದ ಪ್ರಸಾದವನ್ನ ಸಂಜೆ ವಿತರಿಸಲಾಗಿದೆ. ಪ್ರಸಾದ ರೆಡಿಯಾಗಿ ಹೆಚ್ಚು ಸಮಯ ಆಗಿದ್ದರಿಂದ ಅದು ವಿಷಾಹಾರವಾಗಿ ಪರಿವರ್ತನೆಗೊಂಡಿರಬಹುದು. ಅಥವಾ ಪ್ರಸಾದ ಸಿದ್ಧಪಡಿಸಿದ ವ್ಯಕ್ತಿಗೆ ಸ್ಟೈಫಲೋ ಕೋಕುಸ್ ಸೋಂಕು ತಗುಲಿರುವ ಸಾಧ್ಯತೆ ಇದೆ. ಸೋಂಕಿನ ಬ್ಯಾಕ್ಟೀರಿಯಾ ಪ್ರಸಾದದ ಜೊತೆ ಭಕ್ತರ ಉದರ ಸೇರಿ ವಿಷಾಹಾರವಾಗಿ ಬದಲಾಗಿರಬಹುದು.

    ಪ್ರಸಾದ ತಯಾರಿಕೆ ವೇಳೆ ಕೆಟ್ಟು ಹೋದ ಕೊಬ್ಬರಿ, ಅವಧಿ ಮೀರಿದ ತುಪ್ಪ ಬಳಸಿದ್ದ ವಿಚಾರವನ್ನ ಲಕ್ಷ್ಮಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಇನ್ನು ದೇವಾಲಯದಲ್ಲಿ ನೂರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿತ್ತು.. ಆದರೆ ಮೂರು ಕುಟುಂಬಗಳ ಸದಸ್ಯರು ಮಾತ್ರ ಅಸ್ವಸ್ಥರಾಗಿದ್ದಾರೆ. ಇದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆ ಮುಂದುವರೆದಿದೆ. ಇದು ಸುಳ್ವಾಡಿ ವಿಷ ದುರಂತ ಆಗದಿದ್ರೆ ಅಷ್ಟೇ ಸಾಕು ಎಂದು ಜನರು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

    https://www.youtube.com/watch?v=5ev4AgezPd4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಂಗಮ್ಮದೇವಿ ವಿಷ ಪ್ರಸಾದ ಪ್ರಕರಣ: ಸಿಸಿಟಿವಿ ದೃಶ್ಯವಾಳಿ ಆಧರಿಸಿ ಚುರುಕುಗೊಂಡ ತನಿಖೆ

    ಗಂಗಮ್ಮದೇವಿ ವಿಷ ಪ್ರಸಾದ ಪ್ರಕರಣ: ಸಿಸಿಟಿವಿ ದೃಶ್ಯವಾಳಿ ಆಧರಿಸಿ ಚುರುಕುಗೊಂಡ ತನಿಖೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಗಂಗಮ್ಮ ಗುಡಿ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಒರ್ವ ಮಹಿಳೆಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ಎಸ್‍ಪಿ, ಪ್ರಕರಣದಲ್ಲಿ ಇದುವರೆಗೂ ಮಹಿಳೆಯೊಬ್ಬರು ಮೃತ ಪಟ್ಟಿದ್ದು, ಇಬ್ಬರು ಮಕ್ಕಳು ಸೇರಿದಂತೆ 11 ಜನ ಅಸ್ವಸ್ಥರಾಗಿದ್ದಾರೆ. ಸದ್ಯ ಕೋಲಾರದ ಆರ್.ಎಲ್ ಜಾಲಪ್ಪ ಖಾಸಗಿ ಆಸ್ಪತ್ರೆಯಲ್ಲಿ 6 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಪ್ರಸಾದ ನೀಡುತ್ತಿದ್ದ ಮಹಿಳೆ, ಪಕ್ಕದಲ್ಲಿ ಹೂ ಮಾರುತ್ತಿದ್ದ ಮಹಿಳೆಯರನ್ನ ವಿಚಾರಣೆ ನಡೆಸುತ್ತಿದ್ದೇವೆ. ದೇವಾಲಯದ ಅರ್ಚಕನನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ದೇವಾಲಯದ ಪಕ್ಕದಲ್ಲೇ ಹೂ ಮಾರಾಟ ಮಾಡುತ್ತಿದ್ದ ವೃದ್ಧೆಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ವೇಳೆ ವೃದ್ಧೆ ಅಮರಾವತಿ ಎಂಬ ಮಹಿಳೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ಮಹಿಳೆಯ ಹುಡುಕಾಟ ನಡೆಸಿದ್ದಾರೆ. ಆದರೆ ಪ್ರಕರಣ ಬೆಳಕಿಗೆ ಬರುತ್ತಿದಂತೆ ಮಹಿಳೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಮಹಿಳೆ ಕೆಲಸ ಮಾಡುತ್ತಿದ್ದ ಹೋಟೆಲ್ ಬಳಿ ಪತಿಗೆ ಹುಷಾರಿಲ್ಲ ಎಂದು ಹೇಳಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

    ಪ್ರಸಾದ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಗ್ಯವನ್ನು ಶಾಸಕ ಜೆಕೆ ಕೃಷ್ಣಾರೆಡ್ಡಿ ಭೇಟಿ ನೀಡಿ ವಿಚಾರಿಸಿದ್ದಾರೆ. ಈ ವೇಳೆ ಪಬ್ಲಿಕ್ ಟಿಗೆ ಮಾಹಿತಿ ನೀಡಿದ ಅವರು, ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಉಳಿದವರ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಅಸ್ವಸ್ಥರ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದು, ಯಾವುದೇ ತೊಂದರೆ ಇಲ್ಲ. ಒಂದೇ ಕುಟುಂಬವನ್ನು ಗುರಿಯಾಗಿಸಿ ಕೃತ್ಯ ನಡೆಸಿರುವ ಹಾಗೆ ಮೇಲ್ನೋಟಕ್ಕೆ ಕಾಣುತ್ತಿದೆ. ಆದ್ದರಿಂದ ಚಾಮರಾಜನಗರ ಪ್ರಕರಣಕ್ಕೆ ಇದು ಹೋಲಿಕೆ ಆಗುತ್ತಿಲ್ಲ. ವೈಯಕ್ತಿಕ ದ್ವೇಷದ ಮೇಲೆ ನಡೆದಿರುವ ಶಂಕೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

    https://www.youtube.com/watch?v=PRlm9tre_DY

    https://www.youtube.com/watch?v=5ev4AgezPd4

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ವಿಷ ಪ್ರಸಾದ ದುರಂತ ಬೆನ್ನಲ್ಲೇ ಮತ್ತೊಂದು ಘೋರ ಅವಘಡ

    ಸುಳ್ವಾಡಿ ವಿಷ ಪ್ರಸಾದ ದುರಂತ ಬೆನ್ನಲ್ಲೇ ಮತ್ತೊಂದು ಘೋರ ಅವಘಡ

    ಚಿಕ್ಕಬಳ್ಳಾಪುರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ವಿಷ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿದ ಘಟನೆ ಮಾಸುವ ಬೆನ್ನಲ್ಲೇ ಇದೀಗ ಇಂತದ್ದೇ ಘೋರ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ನರಸಿಂಹ ಪೇಟೆಯ ಗಂಗಮ್ಮ ಗುಡಿ ದೇವಸ್ಥಾನದಲ್ಲಿ ಶುಕ್ರವಾರ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯವಿತ್ತು. ಈ ವೇಳೆ ದೇವರ ಪ್ರಸಾದ ಸೇವಿಸಿ ಕವಿತಾ(28) ಸಾವನ್ನಪ್ಪಿ, ಒಂದೇ ಕುಟುಂಬದ 5 ಮಂದಿ ಅಸ್ವಸ್ಥರಾಗಿದ್ದಾರೆ. ಗಂಗಾಧರ, ರಾಜ, ರಾಧ ಹಾಗು ಮಕ್ಕಳಾದ ಗಾನವಿ, ಶರಣ ಅಸ್ವಸ್ಥರು.

    ಇಬ್ಬರು ಮಕ್ಕಳು ಹಾಗೂ ರಾಜ ಅವರ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಅಸ್ವಸ್ಥರು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಡೆದಿದ್ದೇನು..?
    ರಾಜ ಎಂಬವರು ದೇವಸ್ಥಾನದಿಂದ ಸ್ವೀಟ್ ಪೊಂಗಲ್ ತಂದಿದ್ದರು. ಪ್ರಸಾದವನ್ನು ಸೇವಿಸಿದ ಬಳಿಕ ಎಲ್ಲರಿಗೂ ವಾಂತಿಯಾಗಿದ್ದರಿಂದ, ಕೂಡಲೇ ಎಲ್ಲರನ್ನೂ ಸ್ಥಳೀಯರು ಚಿಂತಾಮಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕವಿತಾ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಇನ್ನುಳಿದ ಅಸ್ವಸ್ಥರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆತರಲಾಗಿದೆ.

    ಪ್ರಸಾದ ಸೇವಿಸಿದ ಬಳಿಕವೇ ನಾವೆಲ್ಲರೂ ಅಸ್ವಸ್ಥರಾಗಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಆದ್ರೆ ದೇವಸ್ಥಾನದಲ್ಲಿ 100-150 ಜನ ಪ್ರಸಾದ ಸೇವಿಸಿದ್ದಾರೆ. ಹೀಗಾಗಿ ಒಂದೇ ಕುಟುಂಬಕ್ಕೆ ವಿಷ ಪ್ರಸಾದ ಸಿಕ್ಕಿತಾ ಅನ್ನೋ ಪ್ರಶ್ನೆ ಇದೀಗ ಮೂಡಿಬಂದಿದ್ದು, ವಿಚಾರಣೆ ಬಳಿಕವಷ್ಟೇ ಸತ್ಯಾಂಶ ಬೆಳಕಿಗೆ ಬರಬೇಕಿದೆ.

    ಘಟನೆ ಸಂಬಂಧ ಪೊಲೀಸರು ದೇವಸ್ಥಾನದ ಟ್ರಸ್ಟಿ ಮತ್ತು ಅರ್ಚಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶುಕ್ರವಾರ ಪೂಜಾ ಕೈಂಕರ್ಯದಲ್ಲಿ ಎಷ್ಟು ಜನ ಭಾಗಿಯಾಗಿದ್ದರು? ಪ್ರಸಾದ ತಯಾರಿಕೆ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಆರೋಪಿಗಳ ಪರ ಮಡಿಕೇರಿ ವಕೀಲ ವಕಾಲತ್ತು

    ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಆರೋಪಿಗಳ ಪರ ಮಡಿಕೇರಿ ವಕೀಲ ವಕಾಲತ್ತು

    – ಜಾಮೀನು, ಪ್ರಕರಣ ವಿಚಾರಣೆ ಜ.29ಕ್ಕೆ

    ಚಾಮರಾಜನಗರ: ಸುಳ್ವಾಡಿಯ ಮಾರಮ್ಮ ದೇವಿ ಪ್ರಸಾದಕ್ಕೆ ವಿಷಬೆರೆಸಿ 17 ಜನ ಅಮಾಯಕರನ್ನು ಬಲಿ ಪಡೆದ ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ವಕಾಲತ್ತು ವಹಿಸಲು ಮಡಿಕೇರಿ ಮೂಲದ ವಕೀಲರು ಮುಂದಾಗಿದ್ದಾರೆ.

    ಮಡಿಕೇರಿ ಮೂಲದ ವಕೀಲ ಅಪ್ಪಣ್ಣ, ತಮ್ಮ ಕಿರಿಯ ವಕೀಲರಾದ ಸುದೇಶ್ ಹಾಗೂ ಲೋಹಿತ್ ಎಂಬವರ ಮೂಲಕ ಇಂದು ಇಮ್ಮಡಿ ಮಹದೇವಸ್ವಾಮಿ ಪರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲಾ ನ್ಯಾಯಲಯದಲ್ಲಿ ಜನವರಿ 29ಕ್ಕೆ ನಡೆಯುವ ವಿಚಾರಣೆ ಮುನ್ನವೇ ಜಾಮೀನು ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರ ಮುಂದೆ ಇಂದು ಮಧ್ಯಾಹ್ನ ಅರ್ಜಿ ಬರುತ್ತಿದ್ದಂತೆ, ಅದಕ್ಕೆ ತಕರಾರು ಅರ್ಜಿ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ್ದಾರೆ. ಇದನ್ನು ಓದಿ: ವಿಷ ಪ್ರಸಾದ ಪ್ರಕರಣ- ದೇವಸ್ಥಾನದ ಆವರಣದಲ್ಲಿ ಭಕ್ತೆಯ ಗೋಳಾಟ

    ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಜನವರಿ 29ರಂದು ಪ್ರಕರಣದ ವಿಚಾರಣೆ ಜೊತೆಗೆ ಜಾಮೀನು ವಿಚಾರಣೆ ನಡೆಸಲಾಗುತ್ತದೆ ಎಂದು ನ್ಯಾಯಾಧೀಶರಾದ ಬಸವರಾಜು ತಿಳಿಸಿದ್ದಾರೆ. ಈ ಮಧ್ಯೆ ಆರೋಪಿಗಳ ಪರ ವಕಾಲತ್ತು ವಹಿಸಬಾರದೆಂಬ ತಮ್ಮ ನಿರ್ಣಯ ಬೆಂಬಲಿಸುವಂತೆ ಮಡಿಕೇರಿ ವಕೀಲರಿಗೆ ಮನವಿ ಸಲ್ಲಿಸಲು ಚಾಮರಾಜನಗರ ವಕೀಲರ ಸಂಘ ನಿರ್ಧರಿಸಿದೆ. ಇದನ್ನು ಓದಿ: ಅಂಬಿಕಾ ಮನೆ ಬಾಡಿಗೆಯಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಇಮ್ಮಡಿ ಮಹದೇವ ಸ್ವಾಮೀಜಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ವಿಷಪ್ರಸಾದ ದುರಂತಕ್ಕೆ ಇಂದಿಗೆ ಒಂದು ತಿಂಗಳು- ಇನ್ನೂ ಡಿಸ್ಚಾರ್ಜ್ ಆಗಿಲ್ಲ ಅಸ್ವಸ್ಥರು

    ಸುಳ್ವಾಡಿ ವಿಷಪ್ರಸಾದ ದುರಂತಕ್ಕೆ ಇಂದಿಗೆ ಒಂದು ತಿಂಗಳು- ಇನ್ನೂ ಡಿಸ್ಚಾರ್ಜ್ ಆಗಿಲ್ಲ ಅಸ್ವಸ್ಥರು

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವೆನೆ ಘಟನೆ ನಡೆದು ಇಂದಿಗೆ ಒಂದು ತಿಂಗಳಾಗಿದ್ದು, ಪ್ರಸಾದ ಸೇವಿಸಿದ ಭಕ್ತರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಡಿಸೆಂಬರ್ 14ರಂದು ಚಾಮರಾಜನಗರದ ಸುಳ್ವಾಡಿಯಲ್ಲಿ ಭಕ್ತರು ವಿಷ ಪ್ರಸಾದವನ್ನು ಸೇವಿಸಿದ್ದರು. ಈಗ ಈ ಘಟನೆ ನಡೆದು ಒಂದು ತಿಂಗಳಾದರೂ ಪ್ರಸಾದ ತಿಂದ ಅಸ್ವಸ್ಥರು ಆಸ್ಪತ್ರೆಯಿಂದ ಇನ್ನೂ ಡಿಸ್ಚಾರ್ಜ್ ಆಗಿಲ್ಲ. ನಾಲ್ವರು ಅಸ್ವಸ್ಥರು ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಾದ ಸೇವಿಸಿದ ನಾಲ್ಕು ಜನ ಅಸ್ವಸ್ಥರು ಮೈಸೂರಿನ ನಾಲ್ಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರಲ್ಲಿ ಓರ್ವ ಅಸ್ವಸ್ಥರಿಗೆ ವೆಂಟಿಲೇಟರ್ ನಲ್ಲೇ ಚಿಕಿತ್ಸೆ ನೀಡಿದರೆ, ಉಳಿದ ಮೂವರು ಜನರಿಗೆ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ವಿಷ ಪ್ರಸಾದದ ಘಟನೆಯಲ್ಲಿ ಒಟ್ಟು 140ಕ್ಕೂ ಹೆಚ್ಚು ಮಂದಿ ವಿಷ ಪ್ರಸಾದ ಸೇವನೆ ಮಾಡಿದ್ದರು. 140 ಮಂದಿಯಲ್ಲಿ 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಅಲ್ಲದೇ ಈ ವಿಷ ಪ್ರಸಾದ ಸೇವಿಸಿ 17 ಮಂದಿ ಘಟನೆಯಲ್ಲಿ ಮೃತರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಿಚ್‍ಗುತ್ ಮಾರಮ್ಮ ದೇವಿ ವಿಷ ಪ್ರಸಾದ ದುರಂತ – ಮಂಗಳವಾರ ಸುಳ್ವಾಡಿಗೆ ಸಿಎಂ ಭೇಟಿ

    ಕಿಚ್‍ಗುತ್ ಮಾರಮ್ಮ ದೇವಿ ವಿಷ ಪ್ರಸಾದ ದುರಂತ – ಮಂಗಳವಾರ ಸುಳ್ವಾಡಿಗೆ ಸಿಎಂ ಭೇಟಿ

    ಚಾಮರಾಜನಗರ: ಸುಳ್ವಾಡಿ ಕಿಚ್‍ಗುತ್ ಮಾರಮ್ಮ ದೇವಿ ವಿಷ ಪ್ರಸಾದ ಸೇವನೆಯಿಂದ ದುರಂತ ತಾಣವಾಗಿರುವ ಹನೂರಿನ ಸುಳ್ವಾಡಿಗೆ ನಾಳೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.

    ಇಂದು ಸಚಿವ ಸಾರಾ ಮಹೇಶ್ ಅವರು ಸುಳ್ವಾಡಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಇತ್ತ ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠ ಇದೀಗ ಬಿಕೋ ಎನ್ನುತ್ತಿದ್ದು, ಸಾಲೂರು ಮಠದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ 1ನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ವಿರುದ್ಧ ಸಿಡಿದೆದ್ದಿರುವ ಭಕ್ತರು, ಸಾಲೂರು ಮಠದಲ್ಲಿದ್ದ ಕಿರಿಯ ಸ್ವಾಮೀಜಿ ಫೋಟೋ ಹರಿದು ಆಕ್ರೋಶ ಹೊರಹಾಕಿದ್ದಾರೆ.

    ಇತ್ತ ಕೀಟನಾಶಕ ಸೇವಿಸಿ ಅಸ್ವಸ್ಥರಾದವರಿಗೆ 11ನೇ ದಿನವೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 33 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 8 ಮಂದಿಗೆ ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿದ್ದರೆ, 12 ಮಂದಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, 13 ಮಂದಿಗೆ ಸಾಮಾನ್ಯ ವಾರ್ಡ್ ನಲ್ಲಿ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊರಗೆ ಕಾವಿ..ಒಳಗೆ ಕಾಮಿ-ಸುಂದರಿಯರನ್ನೇ ಮಾತ್ರ ಮಠಕ್ಕೆ ಬಿಡು!

    ಹೊರಗೆ ಕಾವಿ..ಒಳಗೆ ಕಾಮಿ-ಸುಂದರಿಯರನ್ನೇ ಮಾತ್ರ ಮಠಕ್ಕೆ ಬಿಡು!

    ಚಾಮರಾಜನಗರ: ಜಿಲ್ಲೆಯ ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಎ1 ಆರೋಪಿಯಾಗಿರುವ ಇಮ್ಮಡಿ ಮಹದೇವ ಸ್ವಾಮೀಜಿ ಅಲಿಯಾಸ್ ಚಿಕ್ಕ ಬುದ್ದಿಯ ರಂಗಿನಾಟ ಬೆಳಕಿಗೆ ಬರುತ್ತಿವೆ. ಹೊರಗೆ ಕಾವಿ ಧರಿಸಿದ್ದ ಮಹದೇವ ಒಳಗಡೆ ಯಾರಿಗೂ ತಿಳಿಯದಂತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬ ಕಹಾನಿ ಹೊರ ಬಂದಿದೆ.

    ಮಹದೇವ ಸ್ವಾಮೀಜಿ ರಸಿಕರ ರಾಜನಾಗಿದ್ದು ಐವರು ಮಹಿಳೆಯರ ಸಹವಾಸ ಹೊಂದಿದ್ದನಂತೆ. ಸುಂದರಿಯರನ್ನು ಮಾತ್ರ ಮಠಕ್ಕೆ ಬಿಡು ಎಂದು ಮಹದೇವ ತನ್ನ ಆಪ್ತರಿಗೆ ಸೂಚನೆ ನೀಡಿದ್ದನಂತೆ. ವಾರಕ್ಕೆ ಎರಡ್ಮೂರು ಬಾರಿ ಮಠಕ್ಕೆ ಬಂದು ಹೋಗುತ್ತಿದ್ದ ಮಹಿಳೆಯರನ್ನೇ ಸ್ವಾಮೀಜಿ ಟಾರ್ಗೆಟ್ ಮಾಡುತ್ತಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಸಾಲೂರು ಮಠದ ಪಕ್ಕದ ಗ್ರಾಮದ ಮಂಜುಳಾ ಎಂಬ ಮಹಿಳೆ ವಾರಕ್ಕೆ ಎರಡು ಬಾರಿ ಮಠಕ್ಕೆ ಬಂದು ಹೋಗುತ್ತಿದ್ದಳಂತೆ. ಸರ್ಕಾರಿ ಶಾಲೆಯ ಟೀಚರ್ ಮಹದೇವಮ್ಮ ಭಾನುವಾರ ಮಿಸ್ ಮಾಡುತ್ತಿರಲಿಲ್ಲ. ಒಂದು ವೇಳೆ ಇವರಿಬ್ಬರು ಮಠಕ್ಕೆ ಬರದಿದ್ದರೆ ಮಹದೇವನೇ ಫೋನ್ ಮಾಡಿ ಕರೆಸುತ್ತಿದ್ದನಂತೆ. ಸರ್ಕಾರಿ ರಜೆ ಬಂದರೆ ಸಾಕು ಟೀಚರ್ ಮಿಸ್ ಮಾಡ್ದೆ ಮಠಕ್ಕೆ ಹಾಜರಾಗುತ್ತಿದ್ದಳು ಎಂದು ಹೇಳಲಾಗುತ್ತಿದೆ. ಮಹದೇವ ಸ್ವಾಮೀಜಿ ಪ್ರಕರಣದಲ್ಲಿ ಬಂಧಿತಳಾಗಿರುವ ಎ2 ಆರೋಪಿ ಅಂಬಿಕಾಳೊಂದಿಗೂ ಅಕ್ರಮ ಸಂಬಂಧ ಹೊಂದಿದ್ದ.

    ವಿಷ ಪ್ರಸಾದ ಪ್ರಕರಣದಲ್ಲಿ ಈವೆರೆಗೆ ಒಬ್ಬ ಬಾಲಕಿ, 5 ಜನ ಮಹಿಳೆಯರು ಸೇರಿದಂತೆ 15 ಜನ ಮೃತಪಟ್ಟಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಜನರು ಕರ್ನಾಟಕ ಮತ್ತು ತಮಿಳುನಾಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ದೊರಕುವಂತೆ ಆರೋಗ್ಯ ಇಲಾಖೆಯೊಂದಿಗೆ ಪೊಲೀಸ್ ಇಲಾಖೆಯು ನಿರಂತರವಾಗಿ ಕೆಲಸ ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವರೊಬ್ಬರ ಫೋನ್ ಕಾಲ್ ವಿಷ ಪ್ರಸಾದ ಪ್ರಕರಣದ ಸುಳಿವು ನೀಡಿತ್ತು!

    ಅವರೊಬ್ಬರ ಫೋನ್ ಕಾಲ್ ವಿಷ ಪ್ರಸಾದ ಪ್ರಕರಣದ ಸುಳಿವು ನೀಡಿತ್ತು!

    – ಕಾಲ್ ರೆಕಾರ್ಡ್ ನೀಡಿದ್ದ ಕೃಷಿ ಅಧಿಕಾರಿ
    – ಕೃಷಿ ಅಧಿಕಾರಿಯ ಜೊತೆ ರೇಗಾಡಿದ್ದ ಅಂಬಿಕಾ

    ಚಾಮರಾಜನಗರ: ಕೃಷಿ ಅಧಿಕಾರಿಯೊಬ್ಬರು ನೀಡಿದ ಫೋನ್ ಕಾಲ್ ಮಾಹಿತಿ ಸುಳ್ವಾಡಿ ಮಾರಮ್ಮ ದೇವಸ್ಥಾನದ ಪ್ರಕರಣವನ್ನು ಬಯಲು ಮಾಡಲು ಸಹಾಯವಾಗಿದೆ.

    ಕೃಷಿ ಅಧಿಕಾರಿ ಶಿವಣ್ಣ ಅವರು ಮೊಬೈಲ್ ಮೂಲಕ ಆರೋಪಿ ಅಂಬಿಕಾ ಜೊತೆಗೆ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದರು. ದುರಂತ ಪ್ರಕರಣದ ತನಿಖೆ ಆರಂಭಿಸುತ್ತಿದ್ದಂತೆ ಪೊಲೀಸರಿಗೆ ಕಾಲ್ ರೆಕಾರ್ಡ್ ನೀಡಿದ ಪರಿಣಾಮ ಎಲ್ಲ ಆರೋಪಿಗಳ ಬಂಧನ ಕೆಲಸ ಸುಲಭವಾಗಿದೆ.

    ಸಂದೇಹ ಬಂದಿದ್ದು ಹೇಗೆ?
    ಸುಳ್ವಾಡಿ ದೇವಾಲಯದ ಪ್ರಸಾದ ಸೇವಿಸಿದವರ ದೇಹದಲ್ಲಿ ಮನೋಕ್ರೋಟೋಫೋಸ್ ಅಂಶ ವೈದ್ಯಕೀಯ ವರದಿಯಲ್ಲಿ ಪತ್ತೆಯಾಗಿದ್ದನ್ನು ಕಂಡು ಶಿವಣ್ಣ ಅವರಿಗೆ ಸ್ವಲ್ಪ ಅನುಮಾನ ಬಂದಿದೆ. 10 ದಿನಗಳ ಹಿಂದೆ ಅಂಬಿಕಾ ನನ್ನ ಬಳಿ ಗಿಡಗಳಿಗೆ ರೋಗ ಬಂದಿದೆ ಎಂದು ಹೇಳಿ ಈ ಕೀಟನಾಶಕವನ್ನು ತೆಗೆದುಕೊಂಡು ಹೋಗಿದ್ದಳು. ಈ ರಾಸಾಯನಿಕ ಪ್ರಸಾದದಲ್ಲಿ ಸೇರಿದ್ದು ಹೇಗೆ ಎಂದು ಶಿವಣ್ಣ ತಲೆಕೆಡಿಸಿಕೊಂಡಿದ್ದಾರೆ.

    ಅನುಮಾನ ಬಂದ ಹಿನ್ನೆಲೆಯಲ್ಲಿ ನಾನು ಕೊಟ್ಟ ಔಷಧಿಯೇ ಈ ಅನಾಹುಕ್ಕೆ ಕಾರಣವಾಯಿತೇ ಎಂದು ಶಿವಣ್ಣ ಅವರು ಫೋನ್ ಮಾಡಿ ಅಂಬಿಕಾಳನ್ನು ಕೇಳಿದ್ದಾರೆ. ಈ ವೇಳೆ ಸತ್ಯ ಒಪ್ಪಿಕೊಳ್ಳದ ಅಂಬಿಕಾ ನೀವು ಕೊಟ್ಟ ಔಷಧಿಯನ್ನು ಗಿಡಕ್ಕೆ ಬಳಸಿದ್ದೇನೆ. ನಾವೇನೂ ವಿಷ ಹಾಕುವವರು ಅಂತಾ ತಿಳಿದುಕೊಂಡಿದ್ದಾರಾ ಎಂದು ಪ್ರಶ್ನಿ ಅಂಬಿಕಾ ರೇಗಾಡಿದ್ದಾಳೆ. ಪ್ರಕರಣದ ಕುರಿತು ಬಾಯಿ ಬಿಡಿಸಲು ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಶಿವಣ್ಣ ಆಕೆಯ ಜೊತೆಗೆ ಮಾತನಾಡಿದ್ದನ್ನು ಸಂಪೂರ್ಣವಾಗಿ ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ಇದನ್ನು ಪೊಲೀಸರಿಗೆ ನೀಡಿ ತನಿಖೆಗೆ ಸಹಾಯ ಮಾಡಿದ್ದಾರೆ.

    ಅಂಬಿಕಾಗೆ ವಿಷ ಪಡೆದಿದ್ದ ಹೇಗೆ?:
    ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶವನ್ನು ಇಮ್ಮಡಿ ಮಹದೇಸ್ವಾಮಿ ಹೊಂದಿದ್ದ. ಈ ನಿಟ್ಟಿನಲ್ಲಿ ತನ್ನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಅಂಬಿಕಾ ಸಹಾಯ ಕೂಡ ಪಡೆದಿದ್ದ. ಮಾರಮ್ಮ ದೇವಿ ಶಂಕುಸ್ಥಾಪನೆ ದಿನದಂದು ಪ್ರಸಾದಕ್ಕೆ ವಿಷ ಬೆರೆಸಲು ಪ್ಲಾನ್ ರೂಪಿಸಿದ್ದ ಅಂಬಿಕಾ, ಮನೆಯ ಗಿಡಗಳಿಗೆ ರೋಗ ಬಂದಿದೆ ಎಂದು ಕೃಷಿ ಅಧಿಕಾರಿ ಶಿವಣ್ಣ ಅವರ ಬಳಿ ಕ್ರಿಮಿನಾಶಕ ಕೊಡಿ ಎಂದು ಕೇಳಿದ್ದಳು. ಆಕೆಯ ಮಾತು ನಂಬಿದ್ದ ಅಧಿಕಾರಿ 500 ಮೀ ಲೀಟರ್ ನಂತೆ 2 ಬಾಟಲ್ ಮನೋಕ್ರೋಟೋಫೋಸ್ ಕೀಟನಾಶಕವನ್ನು ಕೊಟ್ಟಿದ್ದರು.

    ಅಂಬಿಕಾ ಖತರ್ನಾಕ್ ಪ್ಲಾನ್:
    ಪ್ರಸಾದ ಮುಗಿದಿದೆ ಎಂದು ಪತಿ ಮಾದೇಶ್ ಫೋನ್ ಮಾಡಿ ಹೇಳಿದ ಮೇಲೆ ಅಂಬಿಕಾ ದೇವಸ್ಥಾನಕ್ಕೆ ಹೋಗಿದ್ದಳು. ದೇವಸ್ಥಾನಕ್ಕೆ ಹೋದ ತಕ್ಷಣ ಕೆಲಸ ಸರಿಯಾಗಿ ಆಗಿದೆಯಾ ಅಂತ ಅಡುಗೆ ಮನೆ ಹೋಗಿ ಪರಿಶೀಲನೆ ಮಾಡಿದ್ದಳು. ತಾನು ಅಂದುಕೊಂಡಂತೆ ಕೆಲಸ ಮುಗಿದಿದೆ ಎನ್ನುವುದು ಖಚಿತ ಪಡೆಸಿಕೊಂಡು ದೇವರ ಬಳಿ ಹೋಗಿ ತೀರ್ಥವನ್ನು ಕೂಡ ಪಡೆದಿರಲಿಲ್ಲ. ಈ ವೇಳೆ ದೇವಾಲಯದಲ್ಲಿಯೇ ಅರ್ಚಕ ದೊಡ್ಡಯ್ಯನಿಗೆ ಎರಡು ಸಾವಿರ ರೂ. ನೀಡಿದ್ದಾಳೆ.

    https://www.youtube.com/watch?v=9QOHKI5h4z8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv