Tag: ವಿಷ್ಣುಪ್ರಿಯ

  • ವಿಷ್ಣುಪ್ರಿಯ ಟ್ರೈಲರ್‌ನಲ್ಲಿ ಕಂಡಿದ್ದು ನವಿರು ಪ್ರೇಮ ಮಾತ್ರವಲ್ಲ!

    ವಿಷ್ಣುಪ್ರಿಯ ಟ್ರೈಲರ್‌ನಲ್ಲಿ ಕಂಡಿದ್ದು ನವಿರು ಪ್ರೇಮ ಮಾತ್ರವಲ್ಲ!

    ಡ್ಡೆಹುಲಿ ಚಿತ್ರದ ಮೂಲಕ ಗಮನ ಸೆಳೆದಿದ್ದ ಶ್ರೇಯಸ್ ಮಂಜು (Shreyas Manju) ಇದೀಗ ವಿಷ್ಣುಪ್ರಿಯ ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಈಗಾಗಲೇ ಮಾಧುರ್ಯ ಬೆರೆತ ಹಾಡುಗಳ ಮೂಲಕ ಸದ್ದು ಮಾಡಿದ್ದ ಈ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಜಿ.ಟಿ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಈ ಟ್ರೈಲರ್ ಅನ್ನು ಬಿಡುಗಡೆಗೊಳಿಸಿ, ನಾಯಕ ನಟ ಶ್ರೇಯಸ್ ಮಂಜು ಸೇರಿದಂತೆ ಒಂದಿಡೀ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಮೂಲಕ ನಿರ್ಣಾಯಕ ಘಟ್ಟ ತಲುಪಿಕೊಂಡಿರುವ ವಿಷ್ಣುಪ್ರಿಯ (Vishnu Priya) ಚಿತ್ರ ಫೆಬ್ರವರಿ 21ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

    ಇದು ವಿ.ಕೆ ಪ್ರಕಾಶ್ ನಿರ್ದೇಶನದಲ್ಲಿ ರೂಪುಗೊಂಡಿರುವ ಚಿತ್ರ. ಶ್ರೇಯಸ್ ಮಂಜು ಈ ಹಿಂದೆ ಪಡ್ಡೆಹುಲಿ ಚಿತ್ರದಲ್ಲಿ ಮಾಸ್ ಲುಕ್ಕಿನಲ್ಲಿ ಮಿಂಚಿದ್ದವರು. ಈ ಕಾರಣದಿಂದಲೇ ಅಂಥಾದ್ದೇ ನಿರೀಕ್ಷೆಯಿಟ್ಟುಕೊಂಡಿದ್ದವರನ್ನು ನವಿರು ಪ್ರೇಮದ ಹಾಡುಗಳು ಎದುರುಗೊಂಡಿದ್ದವು. ಇದೀಗ ಬಿಡುಗಡೆಗೊಂಡಿರುವ ಟ್ರೈಲರಿನಲ್ಲಿಯೂ ಹಾಡಿನಲ್ಲಿ ಕಾಣಿಸಿಕೊಂಡಿದ್ದ ತಾಜಾತನವೇ ಹಬ್ಬಿಕೊಂಡಿದೆ. ಅದರ ನಡುವಲ್ಲಿಯೇ ಬೇರೆ ಬೇರೆ ದಿಕ್ಕಿನತ್ತ ಕುತೂಹಲದ ಕಣ್ಣಿಡುವಂಥಾ ಸೂಕ್ಷ್ಮಗಳೂ ಜಾಹೀರಾಗಿವೆ. ಅಂತೂ ಪಕ್ಕಾ ಮಾಸ್ ಸೇರಿದಂತೆ ಎಲ್ಲ ಅಂಶಗಳನ್ನು ಬೆರೆಸಿಯೇ ವಿಷ್ಣುಪ್ರಿಯಾ ಸಿನಿಮಾ ತಯಾರಾಗಿರೋದರ ಸ್ಪಷ್ಟ ಛಾಯೆ ಈ ಟ್ರೈಲರ್ ಮೂಲಕ ಗೋಚರಿಸಿದೆ. ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌- ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ

    ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಕೂಡಾ ಬೇರೆಯದ್ದೇ ಧಾಟಿಯ ಕಥನಗಳತ್ತ ಹೊರಳಿಕೊಂಡಿದೆ. ಇಂಥಾ ಭರಾಟೆಯಲ್ಲಿ ಪಕ್ಕಾ ಪ್ರೀತಿಯ ಸುತ್ತಲೇ ಕೇಂದ್ರಿತವಾದ ಕಥೆಗಾಗಿ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕಾದಿದ್ದರು. ಅಂಥವರನ್ನೆಲ್ಲ ಈ ಟ್ರೈಲರ್ ಅಕ್ಷರಶಃ ಥ್ರಿಲ್ ಆಗಿಸಿದೆ. ಹಾಗಂತ ಬರೀ ಪ್ರೇಮವೇ ಈ ಸಿನಿಮಾದ ಜೀವಾಳವಲ್ಲ, ಸಾಕಷ್ಟು ಟ್ವಿಸ್ಟುಗಳು, ಪ್ರೀತಿಯಾಚೆಗಿನ ಅಂಶಗಳಿದ್ದಾವೆಂಬ ವಿಚಾರವನ್ನು ಈ ಟ್ರೈಲರ್ ಸ್ವಷ್ಟವಾಗಿಯೇ ಪ್ರೇಕ್ಷಕರತ್ತ ರವಾನಿಸಿದೆ. ಈ ವರ್ಷದ ಮೊದಲ ಭಾಗದಲ್ಲಿಯೇ ಥರ ಥರದ ಕಂಟೆಂಟಿನ ಸಿನಿಮಾಗಳು ಸರತಿಯಲ್ಲಿ ನಿಂತಿವೆ. ಆ ಸಾಲಿನಲ್ಲಿರುವ, ವಾರದೊಪ್ಪತ್ತಿನಲ್ಲಿ ಬಿಡುಗಡೆಗೊಂಡಿರುವ ವಿಷ್ಣುಪ್ರಿಯ ಪ್ರೇಕ್ಷಕರಲ್ಲೀಗ ಬೇರೊಂದು ಮಟ್ಟದ ನಿರೀಕ್ಷೆ ಹುಟ್ಟುಹಾಕುವಲ್ಲಿ ಯಶ ಕಂಡಿದೆ.

    ಕೆ.ಮಂಜು ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ವಿ.ಕೆ ಪ್ರಕಾಶ್ ಒಂದೊಳ್ಳೆ ಕಥೆಯ ಮೂಲಕ ಈ ಚಿತ್ರವನ್ನು ರೂಪಿಸಿದ್ದಾರಂತೆ. ಅದೆಂಥಾ ಸಿನಿಮಾಗಳು ಬಂದರೂ ಪ್ರೇಮ ಕಥನಗಳತ್ತ ತುಡಿಯುವ ದೊಡ್ಡ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಕೇವಲ ಆ ಬಗೆಯ ಪ್ರೇಕ್ಷಕರನ್ನು ಮಾತ್ರವಲ್ಲದೆ ಎಲ್ಲ ವರ್ಗಗಳ ಸಿನಿಮಾ ಪ್ರೇಮಿಗಳನ್ನೂ ಸೆಳೆಯುವಂತೆ ವಿಷ್ಣುಪ್ರಿಯಾ ರೂಪುಗೊಂಡಿದೆಯಂತೆ. ಅದರ ನಿಖರ ಸೂಚನೆ ಈಗ ಬಿಡುಗಡೆಗೊಂಡಿರುವ ಟ್ರೈಲರ್‌ನಲ್ಲಿದೆ. ಇಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಶ್ರೇಯಸ್ ಅವರಿಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಅಚ್ಯುತ್ ರಾವ್, ಸುಚೇಂದ್ರ ಪ್ರಸಾದ್, ನಿಹಾಲ್ ರಾಜ್ ಮುಂತಾದವರ ತಾರಾಗಣವಿದೆ. ವಿನೋದ್ ಭಾರತಿ ಛಾಯಾಗ್ರಹಣ, ಗೋಪಿ ಸುಂದರ್ ಸಂಗೀತ ನಿರ್ದೇಶನ, ಸುರೇಶ್ ಅರಸ್ ಸಂಕಲನವಿರುವ ವಿಷ್ಣುಪ್ರಿಯ ಚಿತ್ರ ಫೆಬ್ರವರಿ 21ರಂದು ಬಿಡುಗಡೆಗೊಳ್ಳಲಿದೆ. ಇದನ್ನೂ ಓದಿ: ಉದ್ಯಮಿ ಜೊತೆ ಮದುವೆಯಾದ ‘ದಿ ಗೋಟ್’ ಚಿತ್ರದ ನಟಿ ಪಾರ್ವತಿ ನಾಯರ್

  • ‘ವಿಷ್ಣುಪ್ರಿಯ’ ಹಾಡಿಗೆ ಫ್ಯಾನ್ಸ್ ಫಿದಾ: ರೊಮ್ಯಾಂಟಿಕ್ ಜೋಡಿಗೆ ಜೈ

    ‘ವಿಷ್ಣುಪ್ರಿಯ’ ಹಾಡಿಗೆ ಫ್ಯಾನ್ಸ್ ಫಿದಾ: ರೊಮ್ಯಾಂಟಿಕ್ ಜೋಡಿಗೆ ಜೈ

    ತೊಂಬತ್ತರ ದಶಕದ ಸಮ್ಮೋಹಕ ಪ್ರೇಮ ಕಥಾನಕ ಹೊಂದಿರುವ ಚಿತ್ರ `ವಿಷ್ಣುಪ್ರಿಯ’ (Vishnu Priya). ಈ ಹಿಂದೆ ಪಡ್ಡೆಹುಲಿಯಾಗಿ ಭರವಸೆ ಮೂಡಿಸಿದ್ದ ಶ್ರೇಯಸ್ ಮಂಜು (Shreyas K Manju) ವಿಷ್ಣುಪ್ರಿಯನಾಗಿ, ವಿಶಿಷ್ಟವಾದ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಈ ಚಿತ್ರದ ಚೆಂದದ ಹಾಡೊಂದು ವಾರಗಳ ಹಿಂದೆ ಬಿಡುಗಡೆಗೊಂಡಿತ್ತು. ಇದೀಗ ದಿನದಿಂದ ದಿನಕ್ಕೆ ಆ ಹಾಡು ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ. ಕೇಳಿದಾಕ್ಷಣವೇ ಪ್ರೇಮದೂರಿಗೆ ಕೈ ಹಿಡಿದು ಕರೆದೊಯ್ಯುವ ಛಾತಿ ಹೊಂದಿರುವ ಆ ಪ್ರೇಮಗೀತೆ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ, ಮೆಚ್ಚುಗೆ ಗಳಿಸುತ್ತಾ ಮುಂದುವರೆಯುತ್ತಿದೆ.

    ಚಿಗುರು ಸಮಯ ಹಿತವಾದ ಒಂದು ಮೌನ, ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಮೌನ… ಎಂಬ ಈ ಹಾಡು ಸಂಗೀತ, ಸಾಹಿತ್ಯ ಹಾಗೂ ದೃಶ್ಯ ಸೇರಿದಂತೆ ಎಲ್ಲ ಕೋನಗಳಲ್ಲಿಯೂ ಸಮ್ಮೋಹಕವಾಗಿದೆ. ಇದಕ್ಕೆ ಸಾಹಿತ್ಯ ಒದಗಿಸಿರುವವರು ವಿ ನಾಗೇಂದ್ರ ಪ್ರಸಾದ್. ಬಹುಶಃ ಈ ಮೂಲಕ ವರ್ಷಾರಂಭದಲ್ಲಿಯೇ ನವಿರು ಭಾವವೊಂದನ್ನು ನಾಗೇಂದ್ರ ಪ್ರಸಾದ್ ಕೇಳುಗರ ಬೊಗಸೆ ತುಂಬಿಸಿದ್ದಾರೆ. ನಜೀನ್ ಅರ್ಷಾದ್ ಕಂಠಸಿರಿಯಲ್ಲಿ ಈ ಹಾಡು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಈ ಮೂಲಕ ಕೇರಳದ ಪ್ರಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಕನ್ನಡದಲ್ಲಿಯೂ ಕಮಾಲ್ ಮಾಡಿದ್ದಾರೆ.

    ಮತ್ತೆ ಮತ್ತೆ ಕೇಳಿಸಿಕೊಳ್ಳುವ ಗುಣ ಹೊಂದಿರುವ ಈ ಪ್ರೇಮ ಗೀತೆಯ ಪ್ರಭೆಯಲ್ಲಿ ವಿಷ್ಣುಪ್ರಿಯನ ಕ್ರೇಜ್ ಮತ್ತಷ್ಟು ಮಿರುಗುತ್ತಿದೆ. ಈ ವರ್ಷದ ಮೆಲೋಡಿಯಸ್ ಹಾಡೆಂದು ಗುರುತಿಸಿಕೊಳ್ಳುವ ಎಲ್ಲ ಗುಣಗಳೂ ಈ ಚಿಗುರು ಚಿಗುರು ಹಾಡಿಗಿದೆ. ಅಂದಹಾಗೆ, ಇದು ವಿ.ಕೆ ಪ್ರಕಾಶ್ ನಿರ್ದೇಶನದ ಚಿತ್ರ.

    ತೊಂಬತ್ತರ ದಶಕದಲ್ಲಿ ಘಟಿಸುವ ಈ ಕಥನದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ನಟಿಸಿದ್ದರೆ, ಒರು ಅಡಾರ್ ಲವ್ ಖ್ಯಾತಿಯ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಈ ಪ್ರೇಮಕಥೆ ಅದೆಷ್ಟು ತಾಜಾತನದಿಂದ ನಳನಳಿಸುತ್ತಿದೆ ಎಂಬುದರ ಸ್ಪಷ್ಟ ಸೂಚನೆಯೊಂದು ಈ ಹಾಡಿನ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ.

     

    ಗಂಡುಗಲಿ ಕೆ.ಮಂಜು ನಿರ್ಮಾಣದ ವಿಷ್ಣುಪ್ರಿಯ ಚಿತ್ರದಲ್ಲಿ ಸುಚೇಂದ್ರಪ್ರಸಾದ್, ಅಚ್ಯುತ್ ಕುಮಾರ್ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಪ್ರೇಮಕಥೆ ಮಾತ್ರವಲ್ಲ; ತೊಂಬತ್ತರ ದಶಕದಲ್ಲಿ ನಡೆದಿದ್ದ ನೈಜ ಕಥನವೂ ಹೌದು. ಈ ಹಿಂದೆ ಮೊದಲ ಚಿತ್ರ ಪಡ್ಡೆಹುಲಿಯಲ್ಲಿ ಮೈದುಂಬಿ ನಟಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದವರು ಶ್ರೇಯಸ್ ಮಂಜು. ಅವರ ಪಾತ್ರದ ಚಹರೆಗಳು ಈ ಹಾಡಿನ ಮೂಲಕ ಜಾಹೀರಾಗಿದೆ. ಈ ಹಾಡು ಕೇಳಿದವರು, ನೋಡಿದವರೆಲ್ಲ ವಿಷ್ಣುಪ್ರಿಯನನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

  • ಕಣ್ಸನ್ನೆ ಹುಡುಗಿಯ ‘ವಿಷ್ಣುಪ್ರಿಯ’ ಚಿತ್ರದ ಲವ್ ಸಾಂಗ್ ರಿಲೀಸ್

    ಕಣ್ಸನ್ನೆ ಹುಡುಗಿಯ ‘ವಿಷ್ಣುಪ್ರಿಯ’ ಚಿತ್ರದ ಲವ್ ಸಾಂಗ್ ರಿಲೀಸ್

    ವಿಷ್ಣುಪ್ರಿಯ (Vishnupriya)  1990ರ  ಕಾಲದಲ್ಲಿ ನಡೆದಂಥ ಮಾಸ್ ಲವ್ ಸ್ಟೋರಿ. ಕನ್ನಡದಲ್ಲಿ ಭರವಸೆಯ  ನಾಯಕನಾಗಿ ಗುರುತಿಸಿಕೊಂಡಿರುವ ಯುವನಟ ಶ್ರೇಯಸ್ ಮಂಜು ಈ ಚಿತ್ರದಲ್ಲಿ  ಲವರ್ ಬಾಯ್ ವಿಷ್ಣು ಆಗಿ  ಪ್ರೇಕ್ಷಕರೆದುರು ಬರಲು ಅಣಿಯಾಗಿದ್ದಾರೆ. ಅಲ್ಲದೆ ಪ್ರಿಯಾ ಪಾತ್ರದಲ್ಲಿ ಮಲಯಾಳಂನ ಪ್ರಿಯಾ ವಾರಿಯರ್ ನಟಿಸಿದ್ದಾರೆ. ತೊಂಭತ್ತರ ದಶಕದಲ್ಲಿ ನಡೆದಂಥ ಒಂದು ಇನ್ ಟೆನ್ಸ್ ಲವ್ ಸ್ಟೋರಿಯನ್ನು ಈ ಚಿತ್ರದ ಮೂಲಕ  ನಿರ್ದೇಶಕ ವಿ.ಕೆ. ಪ್ರಕಾಶ್  ಅವರು ನಿರೂಪಿಸಿದ್ದಾರೆ‌. ವಿಷ್ಣುಪ್ರಿಯ ಸಿನಿಮಾದ ಮೊದಲ ಪ್ರೇಮ ಗೀತೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಟ ಶರಣ್ ಹಾಗೂ ನಟಿ ರುಕ್ಮಿಣಿ ವಸಂತ್ ಸೇರಿ  ನಾಗೇಂದ್ರ ಪ್ರಸಾದ್ ರಚನೆಯ ಚಿಗುರು ಚಿಗುರು ಸಮಯ ಹಾಡನ್ನು ಲಾಂಚ್ ಮಾಡಿದರು. ನಿರ್ಮಾಪಕರಾದ ರಮೇಶ್ ರೆಡ್ಡಿ, ಚೇತನ್ ಕುಮಾರ್ , ಸೂರಪ್ಪಬಾಬು, ಅಲ್ಲದೆ ನಿರ್ದೇಶಕರಾದ ಗುರು ದೇಶಪಾಂಡೆ, ದಯಾಳ್ ಪದ್ಮನಾಬನ್, ಭರ್ಜರಿ ಚೇತನ್, ಸತ್ಯಪ್ರಕಾಶ್, ಮಹೇಶ್ ಕುಮಾರ್,  ನಟ ವಿಕ್ರಂ ರವಿಚಂದ್ರನ್ ಮುಂತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

    ನಟ ಶರಣ್ ಮಾತನಾಡುತ್ತ ಕೆಲವು ಹಾಡುಗಳು ಥಟ್ ಅಂತ ಮೆದುಳಿಗೇ ನಾಟುತ್ತವೆ. ಅಂಥಾ ಹಾಡನ್ನು ನಾನಿಲ್ಲಿ ನೋಡಿದೆ. ಇದೊಂದು ಫೀಲ್ ಗುಡ್ ಸಿನಿಮಾ. ನಿರ್ದೇಶಕರು ಪ್ರತಿ ಫ್ರೇಮ್ ನಲ್ಲೂ ಕಾಣಿಸ್ತಾರೆ. ಟೈಟಲ್ ನಲ್ಲೇ ವಿಷ್ಣು ಸರ್ ಇದ್ದಾರೆ. 2024ನ್ನು ಸ್ಟಾರ್ಟ್ ಮಾಡಲು ಅದ್ಭುತವಾದ ಸಾಂಗ್ ಸಿಕ್ಕಿದೆ ಎಂದರು.

    ನಂತರ ದಯಾಳ್ ಪದ್ಮನಾಭನ್ ಮಾತನಾಡಿ ಮಂಜು ಒಂದು ಸಿನಿಮಾ ಮಾಡುವಾಗ ತುಂಬಾ ಕ್ಲಿಯರ್ ಆಗಿರ್ತಾರೆ. ಅವರಿಲ್ಲಿ ಬರೀ  ಪ್ರೊಡ್ಯೂಸರ್ ಆಗಿ ಸಿನಿಮಾ ಮಾಡಿಲ್ಲ. ಒಬ್ಬ ತಂದೆಯಾಗಿ ಜವಾಬ್ದಾರಿ ಇದೆ ಎಂದರು. ಗುರು ದೇಶಪಾಂಡೆ ಮಾತನಾಡಿ ಶ್ರೇಯಸ್ ತುಂಬಾ ಹಾರ್ಡ್ ವರ್ಕ್ ಮಾಡೋ‌ಹುಡುಗ ಎಂದರು. ನಿರ್ಮಾಪಕ ಕೆ.ಮಂಜು ಮಾತನಾಡುತ್ತ  ಚಿತ್ರರಂಗ ನನಗೆ ಹಣ, ಗೌರವ ಎಲ್ಲವನ್ನೂ ಕೊಟ್ಟಿದೆ. ಒಬ್ಬ ರೈತ ಒಳ್ಳೆ ಬೆಳೆ ಬೆಳೆಯಬೇಕಾದರೆ ಮಳೆಯನ್ನ ನಂಬ್ತಾನೆ, ಆದೇರೀತಿ ನನ್ನ ಮಗನನ್ನು ಚಿತ್ರರಂಗದಲ್ಲಿ ಬೆಳೆಸಲು ನಿರ್ದೇಶಕರನ್ನು ನಂಬಿದ್ದೇನೆ. ಈಗಿನ ಕೆಲ ನಿರ್ದೇಶಕರಿಗೆ ಜವಾಬ್ದಾರಿ ಇಲ್ಲ. ನಿರ್ಮಾಪಕ ದುಡ್ಡನ್ನು ಎಲ್ಲಿಂದ ತಂದು ಹಾಕ್ತಾನೆ ಅಂತ ಅವರು ಅರ್ಥಮಾಡಿಕೊಳ್ಳಬೇಕು. ಚೆನ್ನಾಗಿ ಬರಬೇಕೆಂಬ ಕಾರಣದಿಂದ  ಸಿನಿಮಾ ಲೇಟಾಗಿದೆ. ಮುಂಚಿತವಾಗೇ ಯೂಥ್, ಪ್ರೇಮಿಗಳಿಗೆ ನಮ್ಮ ಸಿನಿಮಾನ  ತೋರಿಸುತ್ತೇನೆ. ಶಿವರಾತ್ರಿಗೆ ಅಥವಾ ಏಪ್ರಿಲ್ 5ಕ್ಕೆ ರಿಲೀಸ್ ಮಾಡಬೇಕೆನ್ನುವ ಪ್ಲಾನಿದೆ ಎಂದು ಹೇಳಿದರು.

    ಗಂಡುಗಲಿ ಕೆ. ಮಂಜು ಅವರ ಬಿಂದಿಯಾ ಪ್ರೊಡಕ್ಷನ್ಸ್ ನಿರ್ಮಾಣದ, ರಾಷ್ಟ್ರಪ್ರಶಸ್ತಿ ವಿಜೇತ ವಿ.ಕೆ. ಪ್ರಕಾಶ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಕೌಟುಂಬಿಕ ಮೌಲ್ಯಗಳ ಹಿನ್ನೆಲೆಯ ವಿಶಿಷ್ಠ ಪ್ರೇಮ ಕಥಾನಕವಿದೆ. ಮಲೆಯಾಳಂನ  ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆ ಈ ಚಿತ್ರದ ಹಾಡುಗಳಿಗಿದೆ.ವಿನೋದ್ ಭಾರತಿ ಅವರ ಛಾಯಾಗ್ರಹಣ, ವಿಕ್ರಂ ಮೋರ್, ಜಾಲಿ ಬಾಸ್ಟಿನ್, ವಿನೋದ್ ಅವರ ಸಾಹಸ ಸಂಯೊಜನೆ ಈ ಚಿತ್ರಕ್ಕಿದೆ.

     

    ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕ  ಶ್ರೇಯಸ್ ಮಂಜು ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್ , ನಿಹಾಲ್ ರಾಜ್ ಉಳಿದ ಪಾತ್ರವರ್ಗದಲ್ಲಿದ್ದಾರೆ.

  • ಜ.27ಕ್ಕೆ ‘ವಿಷ್ಣುಪ್ರಿಯ’ ಚಿತ್ರದ ಸಾಂಗ್ ರಿಲೀಸ್

    ಜ.27ಕ್ಕೆ ‘ವಿಷ್ಣುಪ್ರಿಯ’ ಚಿತ್ರದ ಸಾಂಗ್ ರಿಲೀಸ್

    ಡ್ಡೆಹುಲಿ ಚಿತ್ರದ  ಮೂಲಕ ಭರವಸೆಯ  ನಾಯಕನಾಗಿ ಗುರುತಿಸಿಕೊಂಡಿದ್ದ ಯುವನಟ ಶ್ರೇಯಸ್ ಮಂಜು (Shreyas Manju) ಇದೀಗ  ವಿಷ್ಣುಪ್ರಿಯನಾಗಿ (Vishnupriya)  ಪ್ರೇಕ್ಷಕರೆದುರು ಬರಲು ಅಣಿಯಾಗಿದ್ದಾರೆ. ತೊಂಬತ್ತರ ದಶಕದಲ್ಲಿ ನಡೆಯುವ  ರೆಟ್ರೋ ಪ್ರೇಮಕಥಾನಕ ಈ ಚಿತ್ರದಲ್ಲಿದ್ದು, ನಟ ಶ್ರೇಯಸ್ ಅವರ ಪಾಲಿಗೂ ಇದೊಂದು ಮಹತ್ವದ ಚಿತ್ರವಾಗಿದೆ.

    ಜ.27ರಂದು ವಿಷ್ಣುಪ್ರಿಯ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಲಿದೆ. ಅದೇ ದಿನ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಲಿದೆ.  ಮಲೆಯಾಳಂನ  ಗೋಪಿ ಸುಂದರ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಕುತೂಹಲ‌ ಮೂಡಿಸಿವೆ.

    ಗಂಡುಗಲಿ ಕೆ. ಮಂಜು ಅವರ  ನಿರ್ಮಾಣದ, ರಾಷ್ಟ್ರಪ್ರಶಸ್ತಿ ವಿಜೇತ ವಿ.ಕೆ. ಪ್ರಕಾಶ್ ಅವರ ನಿರ್ದೇಶನದ ಈ ಚಿತ್ರದಲ್ಲಿ ತೊಂಭತ್ತರ ದಶಕದ ಕೌಟುಂಬಿಕ ಮೌಲ್ಯಗಳ ಹಿನ್ನೆಲೆಯ ವಿಶಿಷ್ಠ ಪ್ರೇಮ ಕಥಾನಕವಿದೆ.

     

    ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಚಿತ್ರದಲ್ಲಿ  ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಶ್ರೇಯಸ್ ಮಂಜು ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್ ಉಳಿದ ಪಾತ್ರವರ್ಗದಲ್ಲಿದ್ದಾರೆ.

  • ಬಾಹುಬಲಿ ಶೂಟಿಂಗ್ ನಡೆದ ಕೇರಳದ ಕಾಡಲ್ಲಿ `ವಿಷ್ಣುಪ್ರಿಯ’ನ ಸಾಹಸ!

    ಬಾಹುಬಲಿ ಶೂಟಿಂಗ್ ನಡೆದ ಕೇರಳದ ಕಾಡಲ್ಲಿ `ವಿಷ್ಣುಪ್ರಿಯ’ನ ಸಾಹಸ!

    ಹಿಂದೆ ಪಡ್ಡೆಹುಲಿ ಚಿತ್ರದೊಂದಿಗೆ ಮಾಸ್ ಲುಕ್ಕಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ್ದವರು ಶ್ರೇಯಸ್. ಮೊದಲ ಚಿತ್ರದಲ್ಲಿಯೇ ಸ್ಟಾರ್ ಗಿರಿ  ದಕ್ಕಿಸಿಕೊಂಡಿದ್ದ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅವರ ಎರಡನೇ ಚಿತ್ರ ವಿಷ್ಣುಪ್ರಿಯ. ರಾಜ್ಯದ ನಾನಾ ಭಾಗಗಳಲ್ಲಿ ವೇಗವಾಗಿ ಚಿತ್ರೀಕರಣ ನಡೆಸಿಕೊಂಡಿದ್ದ ಚಿತ್ರತಂಡವೀಗ ಕೇರಳದ ಸುಂದರ ತಾಣಗಳಿಗೆ ಶಿಫ್ಟಾಗಿದೆ. ಕಳೆದ ಹತ್ತು ದಿನಗಳಿಂದ ವಿಷ್ಣುಪ್ರಿಯ ಚಿತ್ರದ ಹಾಡುಗಳು ಮತ್ತು ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬಾಹುಬಲಿಯಂಥಾ ಸಿನಿಮಾಗಳ ಚಿತ್ರೀಕರಣ ನಡೆದಿದ್ದ ಸ್ಥಳಗಳಲ್ಲಿಯೇ ಈ ಚಿತ್ರದ ಚಿತ್ರೀಕರಣವೂ ನಡೆಯುತ್ತಿರೋದು ನಿಜವಾದ ಆಕರ್ಷಣೆ.

    ಕೇರಳದ ಪ್ರಖ್ಯಾತ ಆದಿರಪಳ್ಳಿ ಜಲಪಾತದಲ್ಲಿ ಈ ಹಿಂದೆ ರಾಜಮೌಳಿ ನಿರ್ದೇಶನದ ಬಾಹುಬಲಿಯ ಚಿತ್ರೀಕರಣ ನಡೆದಿತ್ತು. ಇದೀಗ ಅದೇ ಸ್ಥಳದಲ್ಲಿ ವಿಷ್ಣುಪ್ರಿಯ ಚಿತ್ರದ ಹಾಡಿನ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ. ಇನ್ನುಳಿದಂತೆ ಪುಲಿಮುರುಗನ್ ಮತ್ತು ಮಹೇಶ್ ಬಾಬು ಚಿತ್ರಗಳ ಚಿತ್ರೀಕರಣ ನಡೆದಿದ್ದ ಮಹಾಘನಿ ಅರಣ್ಯ ಪ್ರದೇಶದಲ್ಲಿ ವಿಷ್ಣುಪ್ರಿಯನ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಇದು ಇಡೀ ಚಿತ್ರದ ಪ್ರಧಾನ ಅಂಶಗಳನ್ನು ಒಳಗೊಂಡಿರುವ ಸಾಹಸ ಸನ್ನಿವೇಶ. ಅದನ್ನು ವಿರಳ ಪ್ರದೇಶದಲ್ಲಿಯೇ ಚಿತ್ರೀಕರಿಸಿಕೊಳ್ಳಬೇಕೆಂದು ನಿರ್ದೇಶಕ ವಿ.ಕೆ. ಪ್ರಕಾಶ್ ಯೋಜನೆ ಹಾಕಿಕೊಂಡಿದ್ದರಂತೆ. ಅದರಂತೆಯೇ ಈಗ ಸಾಂಗವಾಗಿ ಚಿತ್ರೀಕರಣ ಮುಂದುವರೆಯುತ್ತಿದೆ.

    ಈ ಹಿಂದೆ ಪಡ್ಡೆಹುಲಿ ಚಿತ್ರದಲ್ಲಿಯೇ ಆಕ್ಷನ್ ಹೀರೋ ಆಗಿ ಮಿಂಚಿದ್ದವರು ಶ್ರೇಯಸ್. ಆ ಮೊದಲ ಚಿತ್ರಕ್ಕಾಗಿ ಅವರು ತಯಾರಿ ಮಾಡಿಕೊಂಡಿದ್ದ ರೀತಿ, ಅದರಲ್ಲಿ ಎನರ್ಜೆಟಿಕ್ ಆಗಿ ನಟಿಸಿದ್ದ ಅವರಿಗಿಲ್ಲಿ ಮತ್ತಷ್ಟು ಮಾಸ್ ಸನ್ನಿವೇಶಗಳಿರೋ ಪವರ್ ಫುಲ್ ಕಥೆಯೇ ಸಿಕ್ಕಿದೆ. ಇಲ್ಲಿ ಕಣ್ಣೇಟಿನ ಹುಡುಗಿ ಪ್ರಿಯಾ ವಾರಿಯರ್ ಶ್ರೇಯಸ್‍ಗೆ ಜೋಡಿಯಾಗಿ ನಟಿಸಿದ್ದಾರೆ. ಇನ್ನೊಂದು ದಿನದ ಚಿತ್ರೀಕರಣ ಸಮಾಪ್ತಿಯಾದರೆ ವಿಷ್ಣುಪ್ರಿಯಾ ಚಿತ್ರೀಕರಣ ಪೂರ್ಣಗೊಳ್ಳಲಿದೆ. ತಕ್ಕಣವೇ ಉಳಿಕೆ ಕೆಲಸ ಕಾರ್ಯಗಳೂ ಆರಂಭವಾಗಲಿವೆ. ಈ ತಿಂಗಳ ಅಂತ್ಯದೊಳಗೆ ಪೋಸ್ಟರ್ ಬಿಡುಗಡೆಗೊಳಿಸಿ ಜನವರಿ ಮೊದಲ ಭಾಗದಲ್ಲಿಯೇ ಆಡಿಯೋ ಮತ್ತು ಟೀಸರ್ ಲಾಂಚ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ.