Tag: ವಿಶ್

  • ತಾಯಿ, ಸೋದರನಿಗೆ ನನ್ನ ಮೇಲೆ ಪ್ರೀತಿ ಇಲ್ಲ – ವಿಶ್ ಮಾಡದ್ದಕ್ಕೆ ಹುಟ್ಟುಹಬ್ಬದ ದಿನವೇ ಸೂಸೈಡ್

    ತಾಯಿ, ಸೋದರನಿಗೆ ನನ್ನ ಮೇಲೆ ಪ್ರೀತಿ ಇಲ್ಲ – ವಿಶ್ ಮಾಡದ್ದಕ್ಕೆ ಹುಟ್ಟುಹಬ್ಬದ ದಿನವೇ ಸೂಸೈಡ್

    – ಬರ್ತ್ ಡೇಗೆ ಸರ್ಪ್ರೈಸ್ ಪ್ಲಾನ್ ಮಾಡಿದ್ದ ಅಮ್ಮ-ಅಣ್ಣ

    ಹೈದರಾಬಾದ್: ತಾಯಿ ಮತ್ತು ಸಹೋದರ ತನ್ನ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ತಿಳಿಸಿಲ್ಲ ಎಂದು ಯುವತಿಯೊಬ್ಬಳು ಬರ್ತ್ ಡೇ ದಿನವೇ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಮೌರ್ಯ ನೈನಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ತನ್ನ ಹುಟ್ಟುಹಬ್ಬಕ್ಕೆ ತಾಯಿ ಮತ್ತು ಸಹೋದರ ವಿಶ್ ಮಾಡಿಲ್ಲ ಎಂದು ಬೇಸರದಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೈನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ನೈನಾ ತಾಯಿ ಧನಲಕ್ಷ್ಮಿ ತಿಲಕ್‍ನಗರ ಮೂಲದವರಾಗಿದ್ದು, ಇವರ ಪತಿ ಸುಧೀರ್ ಸಿಂಗ್ 11 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅಂದಿನಿಂದ ಧನಲಕ್ಷ್ಮಿ ತನ್ನ ಮಗ ಮೌರ್ಯ ರಾಹುಲ್ ಮತ್ತು ಮಗಳು ಮೌರ್ಯ ನೈನಾ ಇಬ್ಬರನ್ನು ಪೋಷಿಸುತ್ತಾ ಜೀವನ ಸಾಗಿಸುತ್ತಿದ್ದರು. ರಾಹುಲ್ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದು, ತನಗೆ ಬರುವ ಸಂಬಳದೊಂದಿಗೆ ಕುಟುಂಬವನ್ನು ನೋಡಿಕೊಳ್ಳುತ್ತಿದ್ದ.

    ಮಂಗಳವಾರ ನೈನಾ ಜನ್ಮದಿನ. ಅಂದು ನೈನಾಗೆ ಸರ್ಪ್ರೈಸ್ ಕೊಡಬೇಕು ಎಂದು ತಾಯಿ ಮತ್ತು ಸಹೋದರ ಯೋಜಿಸಿದ್ದರು. ಬೆಳಗ್ಗೆ ಇಬ್ಬರು ನೈನಾಗೆ ಶುಭಾಶಯ ತಿಳಿಸಿದೆ ತಮ್ಮ ಕೆಲಸಕ್ಕೆ ಹೋದರು. ಇತ್ತ ನೈನಾ ಡೆತ್‍ನೋಡ್ ಬರೆದಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. “ತಾಯಿ ಮತ್ತು ಸಹೋದರನಿಗೆ ನನ್ನ ಮೇಲೆ ಪ್ರೀತಿ ಇಲ್ಲ. ಅವರು ನನ್ನ ಹುಟ್ಟುಹಬ್ಬಕ್ಕೆ ವಿಶ್ ಕೂಡ ಮಾಡಿಲ್ಲ” ಎಂದು ಬರೆದು ನೇಣಿಗೆ ಶರಣಾಗಿದ್ದಾಳೆ.

    ಕೆಲಸ ಮುಗಿಸಿ ಸಂಜೆ ಮನೆಗೆ ಬಂದ ತಾಯಿ ಮತ್ತು ಸಹೋದರ ನೇಣು ಬಿಗಿದ ಸ್ಥಿತಿಯಲ್ಲಿ ನೈನಾಳನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಹುಟ್ಟುಹಬ್ಬಕ್ಕಾಗಿ ತಾಯಿ ಮತ್ತು ಸಹೋದರ ಅದ್ಧೂರಿಯಾಗಿ ಡಿನ್ನರ್ ಆಯೋಜನೆ ಮಾಡಲು ಪ್ಲಾನ್ ಮಾಡಿದ್ದರು. ಆದರೆ ನೈನಾ ಆತುರದಿಂದ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಕುಟುಂಬದವರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಅಣ್ಣ ಮತ್ತೊಬ್ಬ ತಾಯಿ ಇದ್ದ ಹಾಗೆ – ದರ್ಶನ್ ವಿಶ್‌ಗೆ ಡಾಲಿ ಪ್ರತಿಕ್ರಿಯೆ

    ಅಣ್ಣ ಮತ್ತೊಬ್ಬ ತಾಯಿ ಇದ್ದ ಹಾಗೆ – ದರ್ಶನ್ ವಿಶ್‌ಗೆ ಡಾಲಿ ಪ್ರತಿಕ್ರಿಯೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡಾಲಿ ಎಂದೇ ಖ್ಯಾತಿಯಾಗಿರುವ ನಟ ಧನಂಜಯ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟಾರ್ ನಟರು, ನಿರ್ದೇಶಕರು ಸೋಶಿಯಲ್ ಮೀಡಿಯಾದ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

    ಕೊರೊನಾ ಕಾರಣದಿಂದ ಧನಂಜಯ್ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದು ಬೇಡ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಅದರಂತೆಯೇ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ನೆಚ್ಚಿನ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ.

    ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಧನಂಜಯ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಡಾಲಿ’ ಎಂದು ವಿಶ್ ಮಾಡಿದ್ದು, ಧನಂಜಯ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ದರ್ಶನ್ ಪ್ರೀತಿಯ ಶುಭಾಶಯಕ್ಕೆ ಧನಂಜಯ್ ‘ಅಣ್ಣ ಮತ್ತೊಬ್ಬ ತಾಯಿ ಇದ್ದ ಹಾಗೆ. ಧನ್ಯವಾದಗಳು ದರ್ಶನ್’ ಎಂದು ಹೇಳಿದ್ದಾರೆ.

    ದರ್ಶನ್ ಮತ್ತು ಧನಂಜಯ್ ಇಬ್ಬರು ‘ಯಜಮಾನ’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. “ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ. ಸವಾಲು, ಸಕ್ಸಸ್, ಸಂತೋಷ, ಯಾವಾಗಲು ನಿನ್ನ ಜೊತೆಗಿರಲಿ” ಎಂದು ಸತೀಶ್ ನೀನಾಸಂ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಸತೀಶ್ ನೀನಾಸಂ ಮತ್ತು ಧನಂಜಯ್ ಇಬ್ಬರು ಉತ್ತಮ ಗೆಳೆಯರಾಗಿದ್ದು, ಇಬ್ಬರು ಒಬ್ಬರಿಗೊಬ್ಬರು ತಬ್ಬಿಕೊಂಡು ನಗುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    “ನಗುತಾ ನಗುತಾ ಬಾಳು ನೀನು ನೂರು ವರುಷ” ಎಂದು ವಿಜಿ ವಿಶ್ ಮಾಡಿದ್ದಾರೆ. ‘ಸಲಗ’ ಸಿನಿಮಾ ತಂಡದ ಕಡೆಯಿಂದ ಧನಂಜಯ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದೆ. ‘ಸಲಗ’ ಸಿನಿಮಾದಲ್ಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

    ಹೊಂಬಾಳೆ ಫಿಲ್ಮ್ ಹುಟ್ಟುಹಬ್ಬದ ವಿಶೇಷವಾಗಿ ಬಹು ನಿರೀಕ್ಷೆಯ ‘ಯುವರತ್ನ’ ಸಿನಿಮಾದ ಲುಕ್ ರಿಲೀಸ್ ಮಾಡಲಾಗಿದೆ. ಚಿತ್ರದಲ್ಲಿ ಧನಂಜಯ್ ಆಂಟೋನಿ ಜೋಸೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟ ನಿರೂಪ್ ಭಂಡಾರಿ ಸೇರಿದಂತೆ ಅನೇಕರು ಧನಂಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಧನಂಜಯ್ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

  • ನೀವೊಬ್ಬ ಪರಿಪೂರ್ಣ ವ್ಯಕ್ತಿ- ಮೆಗಾಸ್ಟಾರ್‌ಗೆ ಶುಭ ಕೋರಿದ ಕಿಚ್ಚ, ಸುಮಲತಾ

    ನೀವೊಬ್ಬ ಪರಿಪೂರ್ಣ ವ್ಯಕ್ತಿ- ಮೆಗಾಸ್ಟಾರ್‌ಗೆ ಶುಭ ಕೋರಿದ ಕಿಚ್ಚ, ಸುಮಲತಾ

    ಬೆಂಗಳೂರು: ಇಂದು ಟಾಲಿವುಡ್‍ನ ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಮತ್ತು ಸುಮಲತಾ ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರಿದ್ದಾರೆ.

    ಹುಟ್ಟುಹಬ್ಬದ ವಿಶೇಷವಾಗಿ ಚಿರಂಜೀವಿ ಅವರ ಕಾಮನ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಟೀಸರ್ ಶೇರ್ ಮಾಡಿರುವ ಸುಮಲತಾ, “ಅದ್ಭುತ ಪ್ರದರ್ಶನಕಾರ, ಅದ್ಭುತ ಮೆಗಾ ಸ್ಟಾರ್ಡಮ್, ಸರಳ ವ್ಯಕ್ತಿತ್ವ, ಉತ್ತಮ ಕುಟುಂಬ ವ್ಯಕ್ತಿ, ಅದ್ಭುತ ಸ್ನೇಹಿತ ಮತ್ತು ಸಹೋದ್ಯೋಗಿ, ನೀವೊಬ್ಬ ಪರಿಪೂರ್ಣ ವ್ಯಕ್ತಿ” ಎಂದು ಚಿರಂಜೀವಿಯ ಬಗ್ಗೆ ಬರೆದುಕೊಂಡಿದ್ದಾರೆ.

    ಅಲ್ಲದೇ “ನೀವು ಸದಾ ಆರೋಗ್ಯದಿಂದ ಹಾಗೂ ಸಂತೋಷದಿಂದ ಇರಲಿ ಎಂದು ಬಯಸುತ್ತೇನೆ” ಎಂದು  ಚಿರಂಜೀವಿ ಅವರಿಗೆ ಶುಭ ಕೋರಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಸಹ ವಿಶ್ ಮಾಡಿದ್ದಾರೆ.

    ಮೆಗಾಸ್ಟಾರ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಹಂಚಿಕೊಂಡಿರುವ ಸುದೀಪ್, “ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಸುದೀಪ್ ವಿಶ್ ಮಾಡಿದ್ದಾರೆ.

    ನಟ ಸುದೀಪ್ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಚಿರಂಜೀವಿ ಅವರ ಜೊತೆ ಅಭಿನಯಿಸಿದ್ದರು. ಸದ್ಯಕ್ಕೆ ಚಿರಂಜೀವಿ ‘ಆಚಾರ್ಯ’ ಸಿನಿಮಾ ಮಾಡುತ್ತಿದ್ದಾರೆ. ಕೊರಟಲಾ ಶಿವ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಕಾಜಲ್ ಅಗರ್‍ವಾಲ್ ಮತ್ತು ರಾಮ್ ಚರಣ್ ಸಹ ನಟಿಸುತ್ತಿದ್ದಾರೆ.

  • ಯಾವ ಜನ್ಮದ ಪುಣ್ಯವೋ ಏನೋ ಈ ದೇವತೆ ನನಗೆ ತಾಯಿಯಾದ್ರು: ಅನಿರುದ್ಧ್

    ಯಾವ ಜನ್ಮದ ಪುಣ್ಯವೋ ಏನೋ ಈ ದೇವತೆ ನನಗೆ ತಾಯಿಯಾದ್ರು: ಅನಿರುದ್ಧ್

    ಬೆಂಗಳೂರು: ಇಂದು ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ಭಾರತಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟ ಅನಿರುದ್ಧ್ ಸೋಶಿಯಲ್ ಮೀಡಿಯಾದಲ್ಲಿ ಭಾರತಿ ಅವರಿಗೆ ಶುಭಾಶಯ ಕೋರಿದ್ದಾರೆ.

    ನಟ ಅನಿರುದ್ಧ್ ಫೇಸ್‍ಬುಕ್‍ನಲ್ಲಿ ಭಾರತಿ ಅಮ್ಮನವರ ಬಗ್ಗೆ ಬರೆದುಕೊಳ್ಳುವ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. “ಸದಾ ನನ್ನ ಜೀವನದ ದೇವತೆ ಎನ್ನುತ್ತಿದ್ದರು ಅಪ್ಪಾವ್ರು. ಯಾವ ಜನ್ಮದ ಪುಣ್ಯವೋ ಏನೋ ಆ ದೇವತೆ ನನಗೆ ತಾಯಿಯಾದರು. ಅಂದಿನಿಂದ ಇಂದಿನವರೆಗೂ ಅದೇ ಪ್ರೀತಿ, ಮಮತೆ, ವಾತ್ಸಲ್ಯ, ಮತ್ತೇನು ಹೇಳಲಿ ನಿಮ್ಮ ಬಗ್ಗೆ” ಎಂದು ಅಮ್ಮನ ಬಗ್ಗೆ ಪ್ರೀತಿಯಿಂದ ಬರೆದುಕೊಂಡಿದ್ದಾರೆ.

    ಅಷ್ಟೇ ಅಲ್ಲದೇ, “ನನ್ನ ಪ್ರತಿ ಪ್ರಾರ್ಥನೆಯಲ್ಲಿಯೂ ನೀವು ಸದಾ ಸಂತೋಷವಾಗಿರಲೆಂಬ ಕೋರಿಕೆ ಇದ್ದೇ ಇರುತ್ತದೆ. ನನ್ನ ಮುಂದಿನ ಜನ್ಮದಲ್ಲಿಯೂ ಈ ತಾಯಿಯ ಪ್ರೀತಿ ನನಗೆ ಸಿಗುವಂತಾಗಲಿ ಎಂದಷ್ಟೇ ಕೇಳಿಕೊಳ್ಳಬಲ್ಲೆ. ಹುಟ್ಟುಹಬ್ಬದ ಶುಭಾಶಯಗಳು ಅಮ್ಮ” ಎಂದು ಪ್ರೀತಿಯಿಂದ ಭಾರತಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

    ಅನಿರುದ್ಧ್ ಅವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ನಂತರ ಅಭಿಮಾನಿಗಳು ಕೂಡ ಕಮೆಂಟ್ ಮಾಡುವ ಮೂಲಕ ಭಾರತಿ ಅವರಿಗೆ ಶುಭ ಕೋರುತ್ತಿದ್ದಾರೆ. ನಟ ಅನಿರುದ್ಧ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಈ ಸೀರಿಯಲ್‍ನಲ್ಲಿ ಅನಿರುದ್ಧ್ ಆರ್ಯ ವರ್ಧನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

     

    ಭಾರತಿ ವಿಷ್ಣುವರ್ಧನ್ ಅವರು 1960ರಲ್ಲಿ ಕನ್ನಡ ಬೆಳ್ಳಿತೆರೆಗೆ ಕಾಲಿಟ್ಟಿದ್ದು, 80ರ ದಶಕದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರು ಮನಗೆದ್ದಿದ್ದಾರೆ. ಡಾ.ರಾಜ್‍ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಅನಂತ್‍ನಾಗ್ ಸೇರಿದಂತೆ ಅನೇಕ ಮೇರು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸುಮಾರು 100ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ಭಾರತಿ ವಿಷ್ಣುವರ್ಧನ್ ಅಭಿನಯಿಸಿದ್ದಾರೆ.

  • ಎಂಟೆದೆಯ ಬಂಟನಿಗೆ ಹುಟ್ಟುಹಬ್ಬದ ಶುಭಾಶಯಗಳು: ಸಿದ್ದುಗೆ ದುನಿಯಾ ವಿಜಿ ವಿಶ್

    ಎಂಟೆದೆಯ ಬಂಟನಿಗೆ ಹುಟ್ಟುಹಬ್ಬದ ಶುಭಾಶಯಗಳು: ಸಿದ್ದುಗೆ ದುನಿಯಾ ವಿಜಿ ವಿಶ್

    ಬೆಂಗಳೂರು: ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನಟ ದುನಿಯಾ ವಿಜಯ್ ಅವರು ಶುಭಕೋರಿದ್ದಾರೆ.

    ಇಂದು ಕರ್ನಾಟಕದ ಹಿರಿಯ ರಾಜಕಾರಣಿ ಮತ್ತು ವಿಪಕ್ಷದ ನಾಯಕ ಸಿದ್ದರಾಮಯ್ಯವರು 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಹಲವಾರ ರಾಜಕೀಯ ಗಣ್ಯರು ಮತ್ತು ನಟರು ಶುಭಕೋರಿದ್ದಾರೆ. ಅಂತಯೇ ನಟ ದುನಿಯಾ ವಿಜಯ್ ಅವರು ಕೂಡ, ಎಂಟೆದೆಯ ಬಂಟನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ. ಜೊತೆಗೆ ತಾವು ಕೈ ಮುಗಿಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿರುವ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ. ನೆಚ್ಚಿನ ನಾಯಕ ಹುಟ್ಟುಹಬ್ಬಕ್ಕೆ ಅವರ ಅಪಾರವಾದ ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ.

    ಹಿರಿಯ ರಾಜಕಾರಣಿಗಳು, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಆತ್ಮೀಯರೂ ಆಗಿರುವ ಶ್ರೀ ಸಿದ್ದರಾಮಯ್ಯನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಹಾರೈಸಿದ್ದಾರೆ. ಜೊತೆಗೆ ಕಂದಾಯ ಮಂತ್ರಿ ಆರ್ ಅಶೋಕ್ ಕೂಡ ಸಿದ್ದರಾಮಯ್ಯ ಅವರಿಗೆ ವಿಶ್ ಮಾಡಿದ್ದು, ಮಾಜಿ ಮುಖ್ಯಮಂತ್ರಿಗಳು, ಹಿರಿಯ ರಾಜಕಾರಣಿ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ತಮಗೆ ದೇವರು ಇನ್ನೂ ಉತ್ತಮ ಆರೋಗ್ಯ ನೀಡಿ ಜನ ಸೇವೆ ಮಾಡುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಕೇಳಿಕೊಂಡಿದ್ದಾರೆ.

    ಸದ್ಯ ಕೊರೊನಾ ಸೋಂಕಿಗೆ ತುತ್ತಾಗಿರುವ ಸಿದ್ದರಾಮಯ್ಯ ಅವರು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಸೋಂಕಿನಿಂದ ಸಿದ್ದರಾಮಯ್ಯ ಅವರು ಗುಣಮುಖರಾಗಿದ್ದು, ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ. ಸಿದ್ದರಾಮಯ್ಯ ಅವರು ಕೋವಿಡ್ 19 ನಿಂದ ಈಗ ಪೂರ್ಣ ಗುಣಮುಖರಾಗಿದ್ದಾರೆ. ಎರಡನೇ ಬಾರಿ ನಡೆಸಿದ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಆಸ್ಪತ್ರೆಗೆ ದಾಖಲಾದ ಮೊದಲ ಎರಡು ದಿನ ಮಾತ್ರ ಜ್ವರ ಕಾಣಿಸಿಕೊಂಡಿಸಿತ್ತು. ಉಳಿದಂತೆ ಸೋಂಕಿನ ಲಕ್ಷಣ ಇರಲಿಲ್ಲ. ಸಿದ್ದರಾಮಯ್ಯ ಅವರು ನಾಳೆ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  • ನಾನು ಅದೃಷ್ಟವಂತೆ- ಪ್ರಿಯತಮನಿಗೆ ಮಿಲನಾ ಶುಭಾಶಯ

    ನಾನು ಅದೃಷ್ಟವಂತೆ- ಪ್ರಿಯತಮನಿಗೆ ಮಿಲನಾ ಶುಭಾಶಯ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಡಾರ್ಲಿಂಗ್ ಕೃಷ್ಣ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಮಿಲನಾ ನಾಗರಾಜ್ ತಮ್ಮ ಪ್ರಿಯತಮನಿಗೆ ಶುಭಾಶಯ ತಿಳಿಸಿದ್ದಾರೆ.

    ನಟ ಕೃಷ್ಣ ಇಂದು 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅವರ ಪ್ರೇಯಸಿ ಮಿಲನಾ ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯವನ್ನು ಕೋರಿದ್ದಾರೆ. ಮಿಲನಾ ಅವರು ಇನ್‍ಸ್ಟಾಗ್ರಾಂನಲ್ಲಿ ತಮ್ಮ ಪ್ರಿಯಕರ ಕೃಷ್ಣನ ಜೊತೆ ಸ್ಕೂಟರ್ ಮೇಲೆ ಕುಳಿತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

    ಅಲ್ಲದೇ “ನೀವು ಪ್ರೀತಿಸುವಷ್ಟು ಬೇರೆ ಯಾರೂ ನನ್ನನ್ನೂ ಪ್ರೀತಿಸಲು ಸಾಧ್ಯವಿಲ್ಲ. ಹೀಗಾಗಿ ನೀವು ಉತ್ತಮ. ನಿಮ್ಮನ್ನು ಪಡೆದ ನಾನು ಅದೃಷ್ಟವಂತೆ. ನನ್ನ ಪ್ರಿಯತಮ ಡಾರ್ಲಿಂಗ್ ಕೃಷ್ಣನಿಗೆ ಜನ್ಮದಿನದ ಶುಭಾಶಯಗಳು” ಎಂದು ಪ್ರೀತಿಯಿಂದ ತಮ್ಮ ಭಾವಿ ಪತಿಗೆ ವಿಶ್ ಮಾಡಿದ್ದಾರೆ. ಮಿಲನಾ ವಿಶ್ ಮಾಡಿದ ತಕ್ಷಣ ಅಭಿಮಾನಿಗಳು ಕೂಡ ಕಮೆಂಟ್ ಮಾಡುವ ಮೂಲಕ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.

    ಈ ಹಿಂದೆ ನಟಿ ಮಿಲನಾ ಹುಟ್ಟುಹಬ್ಬಕ್ಕೂ ಕೃಷ್ಣ ಪ್ರೀತಿಯಿಂದ ವಿಶ್ ಮಾಡಿದ್ದರು. “ನಿನ್ನ ಪ್ರೀತಿ ಪರಿಶುದ್ಧವಾಗಿದೆ. ನಿನ್ನ ಹೃದಯ ಪರಿಶುದ್ಧ. ನಿನ್ನ ನಗು ಕೂಡ ಪರಿಶುದ್ಧವಾಗಿದೆ. ನಿನ್ನನ್ನು ನನ್ನ ಬಾಳ ಸಂಗಾತಿಯಾಗಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ. ನೀನು ನಿಜವಾದ ಸಂತೋಷ ಅಂದರೆ ಏನು ಎಂಬುದನ್ನು ನನಗೆ ತೋರಿಸಿದ್ದೀಯಾ. ಇದರಿಂದ ನನಗೆ ನಿಧಿಮಾ ಪಾತ್ರ ಬರೆಯಲು ಪ್ರೇರಣೆ ನೀಡಿತು. ಹುಟ್ಟುಹಬ್ಬದ ಶುಭಾಶಯಗಳು ಮಿಲನಾ ನಾಗರಾಜ್, ಐ ಲವ್ ಯೂ ಬೇಬೂ.” ಎಂದು ಪ್ರೀತಿಯಿಂದ ವಿಶ್ ಮಾಡಿದ್ದರು.

    https://www.instagram.com/p/CBT4kD6HJFd/?igshid=128ibi5sqrb69

    ‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿ ಆದಿ ಮತ್ತು ನಿಧಿ ಪಾತ್ರದಿಂದ ಕೃಷ್ಣ ಮತ್ತು ಮಿಲನಾ ನಾಗರಾಜ್ ಮನೆ ಮಾತಾಗಿದ್ದಾರೆ. ಅಲ್ಲದೇ ಈ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಈ ಜೋಡಿ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದರು. ಸದ್ಯಕ್ಕೆ ಕೃಷ್ಣ ಮತ್ತು ಮಿಲನಾ ನಾಗರಾಜ್ ‘ಲವ್ ಮಾಕ್‍ಟೇಲ್-2’ ಸಿನಿಮಾ ಸ್ಕ್ರಿಪ್ಟ್ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

  • ಅಭಿಮಾನಿಗಾಗಿ ಪಿಯಾನೋ ನುಡಿಸಿದ ಕಿಚ್ಚ ಸುದೀಪ್

    ಅಭಿಮಾನಿಗಾಗಿ ಪಿಯಾನೋ ನುಡಿಸಿದ ಕಿಚ್ಚ ಸುದೀಪ್

    ಬೆಂಗಳೂರು: ನಟ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಆಪ್ತ ನಟ, ನಟಿಯರು, ತಂತ್ರಜ್ಞರ ಜನ್ಮದಿನದ ಸಂದರ್ಭದಲ್ಲಿ ವಿಶೇಷವಾಗಿ ಶುಭಾಶಯ ಕೋರುತ್ತಾರೆ. ಇದೀಗ ತಮ್ಮ ಆಪ್ತ ಸಹಾಯಕರೊಬ್ಬರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರುವ ಮೂಲಕ ಸುದೀಪ್ ಗಮನ ಸೆಳೆದಿದ್ದಾರೆ.

    ನಟ ಸುದೀಪ್ ತಮ್ಮ ಆಪ್ತ ಸಹಾಯಕ ಮಹದೇವ್ ಅವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. ಮಹದೇವ್ ಹುಟ್ಟುಹಬ್ಬ ಮೇ 31ರಂದು ಇತ್ತು. ಅಂದು ಸುದೀಪ್ ಪಿಯಾನೋ ನುಡಿಸುವ ಮೂಲಕ ಮಹದೇವ್‍ಗೆ ಬರ್ತ್ ಡೇ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋವನ್ನು ಸುದೀಪ್ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮೊದಲಿಗೆ ವಿಡಿಯೋದಲ್ಲಿ ಸುದೀಪ್, ಈಗ ನಾನು ಏನೋ ಪ್ಲೇ ಮಾಡುತ್ತಿದ್ದೀನಿ. ನನಗೆ ಬೇಕಾಗಿರುವ, ನನ್ನೊಟ್ಟಿಗಿರುವ ಮಹದೇವ್ ಹುಟ್ಟುಹಬ್ಬ. ನಮ್ಮ ಮಹದೇವ್‍ಗೋಸ್ಕರ ಇದು ಎಂದು ಸುದೀಪ್, ಕೀಬೋರ್ಡ್ ನಲ್ಲಿ ‘ಹ್ಯಾಪಿ ಬರ್ತ್ ಡೇ ಟೂ ಯೂ’ ಟ್ಯೂನ್ ನುಡಿಸಿದ್ದಾರೆ.

    ಈ ವಿಡಿಯೋದಲ್ಲಿ ಸುದೀಪ್ ಪಕ್ಕದಲ್ಲಿಯೇ ಮಹದೇವ್ ನಿಂತಿರುವುದನ್ನು ಕಾಣಬಹುದಾಗಿದೆ. ಕೀ ಬೋರ್ಡ್ ನುಡಿಸಿದ ಬಳಿಕ ಸುದೀಪ್, ‘ಹ್ಯಾಪಿ ಬರ್ತ್ ಡೇ ಮಹದೇವ್’ ಎಂದು ಅವರನ್ನು ಶುಭಾಶಯ ಕೋರಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಇತ್ತೀಚೆಗಷ್ಟೆ ನಟ ಸುದೀಪ್ ತಮ್ಮ ಮಗಳ ಹುಟ್ಟುಹಬ್ಬದಂದು “ನಿನ್ನೆ ಮೊನ್ನೆ ಇದ್ದ ಹಾಗಿದೆ. ಹೇಗಪ್ಪಾ ನಂಬೋದು ನನ್ನ ಮಗಳಿಗೀಗ ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು, ಕೂಡಿಟ್ಟಿರುವೆ ನಾ ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ ಕನಸು ನೀನು. ನಿನ್ನಿಂದಲೇ ಕಲಿಯುವ ಕೂಸು ನಾನು. ಆಸೆ ಬುರುಕ ಅಪ್ಪ ನಾನು, ಮತ್ತೆ ಮಗುವಾಗು ನೀನು” ಎಂದು ಬರೆದು ಮಗಳ ಸವಿನೆನಪಿನ ಫೋಟೋಗಳನ್ನು ಹಂಚಿಕೊಂಡಿದ್ದರು.

  • ಪ್ರೀತಿಯ ಹೃದಯವಂತನ ಸ್ಮರಣೆ- ಅಂಬಿಗೆ ಸುಮಲತಾ ಶುಭಾಶಯ

    ಪ್ರೀತಿಯ ಹೃದಯವಂತನ ಸ್ಮರಣೆ- ಅಂಬಿಗೆ ಸುಮಲತಾ ಶುಭಾಶಯ

    – ನಿಮ್ಮೊಂದಿಗೆ ಕೆಲವು ಹೆಜ್ಜೆ ಹಾಕಿರೋದಕ್ಕೆ ಹೆಮ್ಮೆ
    – ನಿಮ್ಮ ಸ್ಮರಣೆಯೇ ಅಮರ ಪ್ರೀತಿ

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್‍ನಲ್ಲಿ ರೆಬೆಲ್ ಸ್ಟಾರ್ ಎಂದೇ ಖ್ಯಾತಿಗಳಿಸಿದ್ದ ‘ಮಂಡ್ಯದ ಗಂಡು’, ‘ಕಲಿಯುಗದ ಕರ್ಣ’ ಅಂಬರೀಶ್ ಅವರ ಜನ್ಮದಿನೋತ್ಸವ. ಈ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ ಅಂಬರೀಶ್ ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯ ಕೋರುತ್ತಿದ್ದಾರೆ.

    ಇಂದು ಅಂಬರೀಶ್ ಅವರ 68ನೇ ಜನ್ಮದಿನವಾಗಿದ್ದು, ಈ ಹಿಂದೆ ಅವರ ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಅಂಬಿ ನಿಧನದ ನಂತರ ಅಭಿಮಾನಿಗಳು ಅವರ ಸಮಾಧಿ ಸ್ಥಳಕ್ಕೆ ತೆರಳಿ ಜನ್ಮದಿನವನ್ನು ಆಚರಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಲಾಕ್‍ಡೌನ್ ಕಾರಣದಿಂದ ಅದು ಸಾಧ್ಯವಾಗಿಲ್ಲ.

    ಸುಮಲತಾ ಅವರು ಟ್ವೀಟ್ ಮಾಡುವ ಮೂಲಕ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. “ಅಂಬರೀಶ್ ಅವರು ಇಂದು 68ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ವಿಧಿ ಅವರನ್ನು ನಮ್ಮಿಂದ ಶಾಶ್ವತವಾಗಿ ದೂರ ಮಾಡಿದೆ. ಅವರ ಹೃದಯ ಬ್ರಹ್ಮಾಂಡದಷ್ಟೇ ತುಂಬಾ ವಿಶಾಲವಾಗಿತ್ತು. ಜೀವನದಲ್ಲಿ ಅವರೊಂದಿಗೆ ನಾನು ಕೆಲವು ಹೆಜ್ಜೆಯನ್ನು ಹಾಕಿದ್ದಕ್ಕೆ ನನಗೆ ಹೆಮ್ಮೆ ಇದೆ” ಎಂದು ಪ್ರೀತಿಯಿಂದ ಅಂಬರೀಶ್ ಬಗ್ಗೆ ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ ಮೂರು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, “ನಿಮ್ಮ ನೆನಪೇ ನಿತ್ಯ ಜ್ಯೋತಿ, ನಿಮ್ಮ ಸ್ಮರಣೆಯೇ ಅಮರ ಪ್ರೀತಿ” ಎಂದು ಬರೆದುಕೊಂಡಿದ್ದಾರೆ.

    ಇನ್ನೂ ರೆಬೆಲ್‍ಸ್ಟಾರ್ ಅಂಬರೀಷ್ ಅವರ ಜನ್ಮ ಜಯಂತಿಯ ಪ್ರಯುಕ್ತ ಯಂಗ್ ಅಭಿಷೇಕ್ ಅಂಬರೀಷ್ ಅಭಿನಯದ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ. ಇಂದು ಬೆಳಗ್ಗೆ 9.45ಕ್ಕೆ ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನೆಲ್‍ನಲ್ಲಿ ದುನಿಯಾ ಸೂರಿ ನಿರ್ದೇಶನದ, ಸುಧೀರ್ ಕೆ.ಎಂ ನಿರ್ಮಾಣದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಅಧಿಕೃತ ಫಸ್ಟ್ ಲುಕ್ ವಿಡಿಯೋ ರಿಲೀಸ್ ಆಗುತ್ತಿದೆ.

  • ನಿಜವಾದ ಸಂತೋಷ ಅಂದ್ರೆ ಏನೆಂದು ತೋರಿಸಿದೆ – ಭಾವಿ ಪತ್ನಿಗೆ ಕೃಷ್ಣ ವಿಶ್

    ನಿಜವಾದ ಸಂತೋಷ ಅಂದ್ರೆ ಏನೆಂದು ತೋರಿಸಿದೆ – ಭಾವಿ ಪತ್ನಿಗೆ ಕೃಷ್ಣ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮಿಲನಾ ನಾಗರಾಜ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ನಟ ಡಾರ್ಲಿಂಗ್ ಕೃಷ್ಣ ತಮ್ಮ ಗೆಳತಿಗೆ ಸೋಶಿಯಲ್ ಮೀಡಿಯಾದ ಮೂಲಕ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಮಿಲನಾ ನಾಗರಾಜ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತ ಕೃಷ್ಣ ಕೂಡ ತಮ್ಮ ಪ್ರೇಯಸಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕವೇ ಕೃಷ್ಣ ವಿಶ್ ಮಾಡಿದ್ದಾರೆ.

    ಕೃಷ್ಣ ಇನ್‍ಸ್ಟಾಗ್ರಾಂನಲ್ಲಿ ಒಂದು ಫೋಟೋ ಶೇರ್ ಮಾಡಿದ್ದಾರೆ. ಅದಕ್ಕೆ, “ನಿನ್ನ ಪ್ರೀತಿ ಪರಿಶುದ್ಧವಾಗಿದೆ. ನಿನ್ನ ಹೃದಯ ಪರಿಶುದ್ಧ. ನಿನ್ನ ನಗು ಕೂಡ ಪರಿಶುದ್ಧವಾಗಿದೆ. ನಿನ್ನನ್ನು ನನ್ನ ಬಾಳ ಸಂಗಾತಿಯಾಗಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ” ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

    ಅಲ್ಲದೇ, “ನೀನು ನಿಜವಾದ ಸಂತೋಷ ಅಂದರೆ ಏನು ಎಂಬುದನ್ನು ನನಗೆ ತೋರಿಸಿದ್ದೀಯಾ. ಇದರಿಂದ ನನಗೆ ನಿಧಿಮಾ ಪಾತ್ರ ಬರೆಯಲು ಪ್ರೇರಣೆ ನೀಡಿತು. ಹುಟ್ಟುಹಬ್ಬದ ಶುಭಾಶಯಗಳು ಮಿಲನಾ ನಾಗರಾಜ್, ಐ ಲವ್ ಯೂ ಬೇಬೂ.” ಎಂದು ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಕೃಷ್ಣ ಶುಭ ಕೂರಿದ ತಕ್ಷಣ ಅಭಿಮಾನಿಗಳು ಕೂಡ ಕಮೆಂಟ್ ಮಾಡುವ ಮೂಲಕ ಮಿಲನಾಗೆ ಹುಟ್ಟುಹಬ್ಬದ  ಶುಭಾಶಯ ತಿಳಿಸುತ್ತಿದ್ದಾರೆ.

    https://www.instagram.com/p/B_X-TJ4Aa52/?igshid=1r0tdx7e79jx4

    ‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿ ಆದಿ ಮತ್ತು ನಿಧಿ ಪಾತ್ರದಿಂದ ಕೃಷ್ಣ ಮತ್ತು ಮಿಲನಾ ನಾಗರಾಜ್ ಮನೆ ಮಾತಾಗಿದ್ದಾರೆ. ಇತ್ತೀಚೆಗೆ ಲಾಕ್‍ಡೌನ್ ಕಾರಣದಿಂದ ಇಬ್ಬರೂ ಅನೇಕ ದಿನಗಳಿಂದ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಮಿಲನಾ ‘ಮಿಸ್ಸಿಂಗ್ ಮೈ ಲವ್’ ಎಂದು ಡಾರ್ಲಿಂಗ್ ಕೃಷ್ಣ ಜೊತೆಗಿನ ಫೋಟೋ ಹಾಕಿಕೊಂಡು ತಮ್ಮ ಬೇಸರ ವ್ಯಕ್ತಪಡಿಸಿದ್ದರು.

    ‘ಲವ್ ಮಾಕ್‍ಟೇಲ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಈ ಜೋಡಿ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದರು. ಸಿನಿಮಾ ಚಟುವಟಿಕೆಗಳಲ್ಲಿ ಜೊತೆಯಾಗಿಯೇ ಪಾಲ್ಗೊಳ್ಳುತ್ತಿದ್ದ ಇಬ್ಬರ ಮಧ್ಯೆ ಉತ್ತಮ ಒಡನಾಟವಿತ್ತು. ಇವರಿಬ್ಬರು ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ ಮೊದಲು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿಯೂ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿ ಜರ್ನಿಯೇ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳಲು ಕಾರಣವಾಗಿದೆ.

  • ‘ನಿನಗೆ ಉಜ್ವಲ ಭವಿಷ್ಯವಿರಲಿ’ – ಮರಣ ಪ್ರಮಾಣ ಪತ್ರದಲ್ಲಿ ವಿಶ್ ಮಾಡಿದ ಊರಿನ ಮುಖ್ಯಸ್ಥ

    ‘ನಿನಗೆ ಉಜ್ವಲ ಭವಿಷ್ಯವಿರಲಿ’ – ಮರಣ ಪ್ರಮಾಣ ಪತ್ರದಲ್ಲಿ ವಿಶ್ ಮಾಡಿದ ಊರಿನ ಮುಖ್ಯಸ್ಥ

    ಲಕ್ನೋ: ಮರಣ ಪ್ರಮಾಣ ಪತ್ರದಲ್ಲಿ ನಿನಗೆ ಉಜ್ವಲ ಭವಿಷ್ಯವಿರಲಿ ಎಂದು ಊರಿನ ಮುಖ್ಯಸ್ಥನೋರ್ವ ಬರೆದಿರುವ ಡೆತ್ ಸರ್ಟಿಫಿಕೇಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಿರ್ವರಿಯಾ ಎಂಬ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ವೃದ್ಧ ಲಕ್ಷ್ಮಿ ಶಂಕರ್ ಕಳೆದ ತಿಂಗಳ ಜನವರಿ 22 ರಂದು ದೀರ್ಘಕಾಲದ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದರು. ಇವರ ಡೆತ್ ಸರ್ಟಿಫಿಕೇಟ್ ನೀಡಿದ ಗ್ರಾಮದ ಮುಖ್ಯಸ್ಥ ನಿನಗೆ ಉಜ್ವಲ ಭವಿಷ್ಯವಿರಲಿ ಎಂದು ಬರೆದ್ದಾನೆ.

    ಲಕ್ಷ್ಮಿ ಶಂಕರ್ ಸಾವಿನ ನಂತರ ಅವರ ಮಗ ಯಾವುದೋ ಅರ್ಥಿಕ ವಹಿವಾಟಿಗೆ ಬೇಕೆಂದು ಮರಣ ಪ್ರಮಾಣ ಪತ್ರ ಪಡೆಯಲು ಗ್ರಾಮದ ಮುಖ್ಯಸ್ಥ ಬಾಬುಲಾಲ್ ಬಳಿ ಹೋಗಿದ್ದಾರೆ. ಈ ವೇಳೆ ಮರಣ ಪ್ರಮಾಣ ಪತ್ರವನ್ನು ಬರೆದುಕೊಟ್ಟಿರುವ ಬಾಬುಲಾಲ್, ಕೊನೆಯುಲ್ಲಿ ನಾನು ಸಾವನ್ನಪ್ಪಿದ ವ್ಯಕ್ತಿಗೆ ಉಜ್ವಲ ಭವಿಷ್ಯವಿರಲಿ ಎಂದು ಬಯಸುತ್ತೇನೆ ಎಂದು ಹಿಂದಿಯಲ್ಲಿ ಬರೆದುಕೊಟ್ಟಿದ್ದಾನೆ.

    ಬಾಬುಲಾಲ್ ಬರೆದುಕೊಟ್ಟಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರವನ್ನು ತಿಳಿದ ಬಾಬುಲಾಲ್ ಮತ್ತೆ ಲಕ್ಷ್ಮಿ ಶಂಕರ್ ಪುತ್ರನನ್ನು ವಾಪಸ್ ಕರೆಸಿ ಕ್ಷೆಮೆ ಕೇಳಿ ಹೊಸ ಮರಣ ಪ್ರಮಾಣ ಪತ್ರವನ್ನು ಬರೆದು ಕೊಟ್ಟುಕಳುಹಿಸಿದ್ದಾನೆ.