Tag: ವಿಶ್ವ ಹಿಂದೂ ಪರಿಷತ್

  • ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ

    ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ

    ಮಡಿಕೇರಿ: ರಾಜ್ಯದಲ್ಲಿ ಹಿಜಬ್, ಆಜಾನ್ ಹಾಗೂ ದೇವಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ದಿನವೂ ಹಿಂದೂ ಮುಸ್ಲಿಮರ ನಡುವೆ ಧರ್ಮಯುದ್ಧ ನಡೆಯುತ್ತಿದೆ. ಆದರೂ ಯಾವುದೇ ಕೋಮುಗಲಭೆಗೆ ಅವಕಾಶ ನೀಡುವುದಿಲ್ಲ ಎಂದು ಸಬೂಬು ಹೇಳುತ್ತಿರುವ ಸರ್ಕಾರ ಇದೀಗ ಮತ್ತೊಂದು ವಿವಾದಕ್ಕೆ ದಾರಿಮಾಡಿಕೊಟ್ಟಂತಿದೆ.

    ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲೆಯಲ್ಲಿ ಬಜರಂಗದಳ ದಳದಿಂದ ನೂರಾರು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಇಂದಿನಿಂದ ಶಾಲೆ ಆರಂಭ – ಈ ವರ್ಷವೂ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ

    MDK

    ಇದರಿಂದ ಶಾಲೆಯ ಆವರಣದಲ್ಲಿ ಹಿಜಬ್‌ಗೆ ಅವಕಾಶ ಇಲ್ಲವೆಂದಿದ್ದ ಸರ್ಕಾರ ಇದೀಗ ಸಂಘ ಪರಿವಾರದಿಂದ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ನೀಡಿದ್ದು ಹೇಗೆ? ಎಂಬ ಅನುಮಾನ ಶುರುವಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. 

    ಕೊಡಗಿನ ಪೊನ್ನಂಪೇಟೆ ಸಾಯಿ ಶಂಕರ ಶಾಲೆಯಲ್ಲಿ ಕಳೆದ ವಾರ ಮುಕ್ತಾಯವಾದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ. ಶಾಲಾ ಆವರಣದಲ್ಲೇ ಸುಮಾರು 8 ದಿನಗಳ ಕಾಲ ಶೌರ್ಯ ಪ್ರಶಿಕ್ಷಣ ವರ್ಗದ ತರಬೇತಿ ನಡೆದಿದೆ. ಈ ತರಬೇತಿ ಶಿಬಿರ ನಡೆದ 8 ದಿನಗಳ ಅವಧಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಜಿಲ್ಲೆಯ ಕೆಲ ಮುಖಂಡರೂ ಪಾಲ್ಗೊಂಡಿದ್ದರು ಎಂದು ಮೂಲಗಳು ಖಚಿತ ಪಡಿಸಿವೆ. ಇದನ್ನೂ ಓದಿ: ಮೇನಲ್ಲೂ ಕೆಆರ್‌ಎಸ್‍ನಲ್ಲಿದೆ 100 ಅಡಿ ನೀರು – ಕೇರಳದಲ್ಲಿ ಭಾರೀ ಮಳೆ

    ರಾಜ್ಯದ ವಿವಿಧೆಡೆಯಿಂದ ಬಂದಿದ್ದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ತರಬೇತಿ ಪಡೆದುಕೊಂಡಿದ್ದಾರೆ. ಶಾಲಾ ಆವರಣದಲ್ಲಿ ಬಂದೂಕು ಹಿಡಿದು ತರಬೇತಿ ಪಡೆಯುತ್ತಿರುವುದು ಹಾಗೂ ಸಂಸ್ಥೆಯ ಸಭಾಂಗಣದಲ್ಲಿ ತ್ರಿಶೂಲ ಹಿಡಿದು ದೀಕ್ಷೆ ಪಡೆಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಈ ಕುರಿತು ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿರುವ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಪ್ರಮುಖರಿಗೆ ಟ್ಯಾಗ್ ಮಾಡಿ, ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

  • ಗೋವು ಕಳ್ಳರನ್ನು ಬಂಧಿಸಿ – ಶಿವಮೊಗ್ಗದ್ದಲ್ಲಿ ವಿಎಚ್‍ಪಿ, ಭಜರಂಗ ದಳ ಪ್ರತಿಭಟನೆ

    ಗೋವು ಕಳ್ಳರನ್ನು ಬಂಧಿಸಿ – ಶಿವಮೊಗ್ಗದ್ದಲ್ಲಿ ವಿಎಚ್‍ಪಿ, ಭಜರಂಗ ದಳ ಪ್ರತಿಭಟನೆ

    ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಗ್ರಾಮಾಂತರ ಹಾಗೂ ನಗರ ವ್ಯಾಪ್ತಿಯಲ್ಲಿ ನಿರಂತರ ಗೋವು ಕಳ್ಳತನ ನಡೆಯುತ್ತಿದೆ. ಗೋವುಗಳ ಕಳ್ಳ ಸಾಗಾಣಿಕೆ ತಡೆಯಬೇಕು ಮತ್ತು ಮಾರಿಕಾಂಬಾ ದೇವಸ್ಥಾನದ ಎದುರು ಮಲಗಿದ್ದ ಗೋವು ಕದ್ದೊಯ್ದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಮಾರಿಕಾಂಬಾ ದೇವಾಲಯದ ಎದುರು ಗೋವಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಹೊರಟ ಕಾರ್ಯಕರ್ತರು ಮಾರ್ಕೆಟ್ ರಸ್ತೆ ಮಾರ್ಗವಾಗಿ ಬಿ.ಹೆಚ್.ರಸ್ತೆಯ ಶಿವಪ್ಪ ನಾಯಕ ವೃತ್ತ ರಾಷ್ಟೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸುವ ಮೂಲಕ ಗೋವು ಕಳ್ಳರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್​ನಲ್ಲಿರುವ ಹೇಮ ಮಾಲಿನಿ, ಧರ್ಮೇಂದ್ರ

    ಸಾಗರ ತಾಲೂಕಿನ ಗ್ರಾಮಾಂತರ ಭಾಗ ಹಾಗೂ ನಗರ ಭಾಗದಲ್ಲಿ ನಡೆಯುತ್ತಿರುವ ಗೋಹತ್ಯೆ ಮತ್ತು ಗೋವು ಕಳ್ಳ ಸಾಗಾಣಿಕೆ ತಡೆಯುವಲ್ಲಿ ಪೆÇಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.

    ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ನಗರ ಸಭೆಯಲ್ಲಿ ಬಿಜೆಪಿ ಆಡಳಿತವಿದೆ. ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಹಿಂದೂಗಳನ್ನು ಬಳಸಿಕೊಂಡು, ಹಿಂದುತ್ವ, ಗೋಸಂರಕ್ಷಣೆ ಬಗ್ಗೆ ಮಾತನಾಡುವ ಶಾಸಕರು, ನಗರಸಭೆ ಆಡಳಿತ ಈಗ ಗೋವು ಕಳ್ಳ ಸಾಗಾಣಿಕೆ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳಲು ಹಿಂದೆ ಸರಿದಿರುವುದು ನಾಚಿಕೆಯ ಸಂಗತಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: KFC ತಿರಸ್ಕರಿಸಿ ಅಭಿಯಾನಕ್ಕೆ ತಮಿಳಿಗರ ಬೆಂಬಲ

  • ದೇವಸ್ಥಾನ ಕೆಡವಿರುವುದನ್ನು ವಿಶ್ವ ಹಿಂದೂ ಪರಿಷತ್ ವಿರೋಧಿಸಿ ಸರ್ಕಾರಕ್ಕೆ ಎಚ್ಚರಿಕೆ

    ದೇವಸ್ಥಾನ ಕೆಡವಿರುವುದನ್ನು ವಿಶ್ವ ಹಿಂದೂ ಪರಿಷತ್ ವಿರೋಧಿಸಿ ಸರ್ಕಾರಕ್ಕೆ ಎಚ್ಚರಿಕೆ

    ಬೆಂಗಳೂರು: ರಾಜ್ಯದಲ್ಲಿ ಹಿಂದೂ ದೇವಾಲಯಗಳನ್ನು ಕೆಡವುತ್ತಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿ, ಈ ರೀತಿಯ ಘಟನೆ ಮರುಕಳಿಸದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

    ಪತ್ರದಲ್ಲಿ ಏನಿದೆ?
    ಗೌರವಾನ್ವಿತ ಸುಪ್ರೀಂಕೋರ್ಟ್ 2009ರ ಸೆಪ್ಟೆಂಬರ್ 29ರಂದು ಹೊರಡಿಸಿರುವ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ ಇತ್ಯಾದಿಗಳನ್ನು ಸಕ್ರಮಗೊಳಿಸುವ, ಸ್ಥಳಾಂತರಿಸುವ, ಅನಿವಾರ್ಯವಿದ್ದಾಗ ಮಾತ್ರ ತೆರವುಗೊಳಿಸುವ ಆದೇಶವನ್ನು ವಿಶ್ವಹಿಂದು ಪರಿಷತ್ ಗೌರವಿಸುತ್ತದೆ. ಆದರೆ ಗೌರವಾನ್ವಿತ ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸುವಾಗ ರಾಜ್ಯ ಸರ್ಕಾರವು ಪ್ರತಿಯೊಂದು ಶ್ರದ್ಧಾಕೇಂದ್ರದ ಬಗ್ಗೆ ಪ್ರತ್ಯೇಕ ಪ್ರತ್ಯೇಕವಾಗಿ ವಿಮರ್ಶೆ ಮಾಡಿ(Case by Case Review) ಸಕ್ರಮ, ಸ್ಥಳಾಂತರ, ಅನಿವಾರ್ಯವಿದ್ದಾಗ ಮಾತ್ರ ತೆರವು ಮಾಡಲು ಕ್ರಮ ಜರುಗಿಸಬೇಕೆಂದಿದ್ದರೂ ಸಹ ಮೈಸೂರಿನ ಜಿಲ್ಲಾಡಳಿತವು ಮೇಲ್ಕಡ ಯಾವುದೇ ಕ್ರಮ ತೆಗೆದುಕೊಳ್ಳದೆ ಹಿಂದು ದೇವಸ್ಥಾನವನ್ನು ಮಾತ್ರ ಕೆಡವಿರುವುದು ಖಂಡನೀಯ. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

    ಕೇವಲ ಹಿಂದೂ ಸಮಾಜಕ್ಕೆ ಸೇರಿರುವ ಪುರಾತನವಾದ ದೇವಸ್ಥಾನಗಳನ್ನು ಹೊತ್ತುಗೊತ್ತು ಇಲ್ಲದ ವೇಳೆಯಲ್ಲಿ ತೊಘಲಕ್ ನೀತಿಯಂತೆ ಅಕ್ರಮವಾಗಿ ತೆರವು ಗೊಳಿಸಿರುವುದನ್ನು ವಿಶ್ವಹಿಂದು ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಇದರಿಂದ ಇಡೀ ಹಿಂದು ಸಮಾಜದ ಭಾವನೆಗೆ ಅತೀವ ನೋವುಂಟಾಗಿರುತ್ತದೆ. ಕಳೆದ ಎರಡು ವರ್ಷದ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ನಿಟ್ಟಿನಲ್ಲಿ ಇದೇ ರೀತಿಯಾಗಿ ಹಲವಾರು ಹಿಂದೂ ದೇವಾಲಯಗಳನ್ನು ಮಾತ್ರ ಕೆಡವಿದ್ದು, ಮೈಸೂರಿನ ಹೃದಯ ಭಾಗದಲ್ಲಿರುವ ದೇವರಾಜ ಅರಸು ರಸ್ತೆಯಲ್ಲಿರುವ ಘೋರಿಯು ನಿಜವಾಗಿಯೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತಿದ್ದರೂ ಸಹ ಜಿಲ್ಲಾಡಳಿತವು ಅದನ್ನು ಭಾಗಶಃ ತೆರವು ಗೊಳಿಸಿ, ಮತ್ತೆ ಈಗ ಎರಡು ವರ್ಷಗಳ ನಂತರ ಅರ್ಧಕ್ಕೆ ನಿಲ್ಲಿಸಿದ್ದ ಆ ಕೆಲಸವನ್ನು ಪೂರ್ಣಗೊಳಿಸದೆ ಕೈಬಿಟ್ಟು ಕೇವಲ ಹಿಂದೂ ದೇವಾಲಯಗಳನ್ನು ತೆರವು ಗೊಳಿಸುವ ಮೂಲಕ ತಾರತಮ್ಯ ತೋರಿದ ಜಿಲ್ಲಾಡಳಿತದ ಕ್ರಮವು ಕೋಮು ಸೌಹಾರ್ದತೆಯನ್ನು ಕದಡುವ, ಕೋಮು ವಾದವನ್ನು ಸೃಷ್ಟಿಮಾಡಿರುತ್ತದೆ. ಇದನ್ನೂ ಓದಿ: ಮೈಸೂರಿನಲ್ಲಿ ದೇವಸ್ಥಾನ ತೆರವು ಕಾರ್ಯಚರಣೆಗೆ ಜಿಲ್ಲಾಡಳಿತ ಬ್ರೇಕ್

    ಜಿಲ್ಲಾಡಳಿತದ ಈ ದ್ವಂದ್ವ ನೀತಿಯನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ, ಜಿಲ್ಲಾಡಳಿತ ಸುಪ್ರೀಂಕೋರ್ಟ್‍ನ ಆದೇಶವನ್ನು ಸರಿಯಾಗಿ ಗ್ರಹಿಸದೆ ರಾತ್ರೋರಾತ್ರಿ ಹಲವಾರು ವರ್ಷಗಳ ಇತಿಹಾಸವಿರುವ ದೇವಸ್ಥಾನಗಳನ್ನು ಕೆಡವಿ ಹಿಂದು ಸಮಾಜಕ್ಕೆ ನೋವುಂಟುಮಾಡಿದೆ. ಮಾನ್ಯ ಸುಪ್ರೀಂ ಕೋರ್ಟ್ ಪ್ರತಿಯೊಂದು ಪ್ರಕರಣದಲ್ಲಿಯೂ ಪ್ರತ್ಯೇಕವಾಗಿ ಜಿಲ್ಲಾ ಸಮಿತಿ ದೇವಸ್ಥಾನದ ಮಂಡಳಿ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಆ ದೇವಸ್ಥಾನದ ಇತಿಹಾಸ, ದೇವಸ್ಥಾನ ಇರುವ ಸ್ಥಳದಲ್ಲಿ ಇತ್ತೀಚೆಗೆ ರಸ್ತೆ ನಿರ್ಮಾಣವಾಗಿರುವ ವಿಚಾರ ಪರಿಶೀಲಿಸಿ ನಂತರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದರೂ ಸಹ ಜಿಲ್ಲಾಡಳಿತ ಅವೈಜ್ಞಾನಿಕವಾಗಿ ದೇವಸ್ಥಾನಗಳನ್ನು ಕೆಡವಿರುವುದು ಖಂಡನೀಯ. ಇದನ್ನೂ ಓದಿ: ಮುನ್ಸೂಚನೆ ನೀಡದೆ ದೇವಸ್ಥಾನಗಳನ್ನು ಏಕಾಏಕಿ ತೆರವುಗೊಳಿಸುತ್ತಿರುವುದು ಖಂಡನೀಯ: ಎಸ್‍ಡಿಪಿಐ

    ವಿಶ್ವ ಹಿಂದೂ ಪರಿಷತ್ ಈ ಮೂಲಕ ಎಚ್ಚರಿಕೆ ಹಾಗೂ ಆಗ್ರಹ ಪಡಿಸುವುದೇನೆಂದರೆ ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿಯೊಂದು ದೇವಸ್ಥಾನಗಳಿಗೂ ಪ್ರತ್ಯೇಕ ನೋಟಿಸ್ ಜಾರಿ ಮಾಡಿ, ಉರ್ಜಿತಗೊಳಿಸಲು ಮತ್ತು ಸ್ಥಾಳಾಂತರಿಸಲು ಬೇಕಾಂದತಹ ಕ್ರಮ ಜರುಗಿಸಿ ದೇವಸ್ಥಾನಗಳನ್ನು ಉಳಿಸಿ ರಕ್ಷಣೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿ ಈ ಮೂಲಕ ಆಗ್ರಹಿಸುತ್ತೇವೆ.

  • ಒಂದೇ ದಿನ 210 ಮಂದಿಗೆ ಕೊರೊನಾ- ಬೆಳ್ತಂಗಡಿಯ ಕ್ರೈಸ್ತ ಆಶ್ರಮಕ್ಕೆ ವಿಎಚ್‍ಪಿ ನೆರವು

    ಒಂದೇ ದಿನ 210 ಮಂದಿಗೆ ಕೊರೊನಾ- ಬೆಳ್ತಂಗಡಿಯ ಕ್ರೈಸ್ತ ಆಶ್ರಮಕ್ಕೆ ವಿಎಚ್‍ಪಿ ನೆರವು

    ಮಂಗಳೂರು: ಒಂದೇ ದಿನ 210 ಮಂದಿಗೆ ಕೊರೊನಾ ಸೋಂಕು ತಗುಲುವ ಮೂಲಕ ಕೊರೊನಾ ಅಬ್ಬರದಿಂದ ನಲುಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನೆರಿಯಾ ಸಿಯೋನ್ ಆಶ್ರಮಕ್ಕೆ ನೆರಿಯ ವಿಶ್ವ ಹಿಂದೂ ಪರಿಷತ್ ಘಟಕ ನೆರವಾಗಿದೆ.

    ಸುಮಾರು 270 ಜನ ನಿರ್ಗತಿಕರು ಹಾಗೂ ವೃದ್ಧರಿರುವ ಈ ಆಶ್ರಮದಲ್ಲಿ ನಿನ್ನೆ ಬರೋಬ್ಬರಿ 210 ಮಂದಿಗೆಪಾಸಿಟಿವ್ ಆಗಿತ್ತು. ಹೀಗಾಗಿ ಇಂದು ವಿಎಚ್‍ಪಿ ಕಾರ್ಯಕರ್ತರು ಆಶ್ರಮವನ್ನು ಸಂಪೂರ್ಣ ಸ್ಯಾನಿಟೈಸೇಷನ್ ಮಾಡಿದ್ದಾರೆ. ಪಿಪಿಇ ಕಿಟ್ ಧರಿಸಿದ ಕಾರ್ಯಕರ್ತರು ತಮ್ಮ ಸ್ವಂತ ಖರ್ಚಿನಿಂದಲೇ ಆಶ್ರಮ, ಗೋಶಾಲೆಯನ್ನು ಸ್ಯಾನಿಟೈಸೇಷನ್ ಮಾಡಿದ್ದು, ಗೋವುಗಳ ಆಹಾರ ಆರೈಕೆಗೂ ವ್ಯವಸ್ಥೆ ಮಾಡಿದ್ದಾರೆ. ಇದನ್ನೂ ಓದಿ: ವಿಶೇಷ ಚೇತನ ಮಕ್ಕಳ ಶಾಲೆಯ ನೆರವಿಗೆ ನಿಂತ ನಟ ಸುದೀಪ್

    ಸಿಯೋನ್ ಆಶ್ರಮ ಸಹಜ ಸ್ಥಿತಿಗೆ ಬರುವವರೆಗೂ ಈ ಸೇವೆ ಮುಂದುವರಿಯಲಿದೆ ಎಂದು ವಿಎಚ್‍ಪಿ ನೆರಿಯ ಘಟಕದ ಉಪಾಧ್ಯಕ್ಷ ದೀಕ್ಷಿತ್ ನೆರಿಯ ಹೇಳಿದ್ದಾರೆ. ಕ್ರೈಸ್ತ ಸಮುದಾಯದ ಈ ಸಿಯೋನ್ ಆಶ್ರಮಕ್ಕೆ ವಿಎಚ್‍ಪಿ ನೆರವು ನೀಡಿರುವುದು ಇದೀಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

  • ರಾಮ ಮಂದಿರ ನಿರ್ಮಾಣಕ್ಕೆ ಈವರೆಗೆ 25,000 ಮಿಲಿಯನ್ ರೂ. ದೇಣಿಗೆ ಸಂಗ್ರಹ: ವಿಎಚ್‍ಪಿ

    ರಾಮ ಮಂದಿರ ನಿರ್ಮಾಣಕ್ಕೆ ಈವರೆಗೆ 25,000 ಮಿಲಿಯನ್ ರೂ. ದೇಣಿಗೆ ಸಂಗ್ರಹ: ವಿಎಚ್‍ಪಿ

    ನವದೆಹಲಿ: ಪ್ರಸ್ತುತ ಮನೆಗಳಿಗೆ ತೆರಳಿ ದೇಣಿಗೆ ಸಂಗ್ರಹಿಸುವ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಆದರೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವೆಬ್‍ಸೈಟ್ ನಲ್ಲಿ ಆನ್‍ಲೈನ್ ಮೂಲಕ ಇನ್ನೂ ಹಣ ನೀಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.

    ರಾಮ ಮಂದಿರ ನಿರ್ಮಾಣಕ್ಕೆ ಈ ವರೆಗೆ ಸಂಗ್ರಹವಾಗಿರುವ ಹಣ ಎಷ್ಟು ಎಂದು ಹಲವರು ಪ್ರಶ್ನೆ ಕೇಳುತ್ತಲೇ ಇದ್ದರು. ಇದಕ್ಕೆ ಇದೀಗ ಉತ್ತರ ಸಿಕ್ಕಿದ್ದು, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ದೇಣಿಗೆ ಸಂಗ್ರಹವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂದಿರದ ಮುಂದಿನ ಜಾಗವನ್ನು ಪಡೆಯುವ ಕುರಿತು ಮಾತುಕತೆ ನಡೆಯುತ್ತಿದ್ದು, ಇನ್ನೂ ನಿರ್ಧಾರವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಇನ್ನೂ ಕೇವಲ 3 ವರ್ಷದಲ್ಲಿ ಮಂದಿರ ನಿರ್ಮಾಣವಾಗಲಿದೆ. ಮಾರ್ಚ್ 4ರ ವರೆಗೆ ಬ್ಯಾಂಕ್ ರಿಸಿಪ್ಟ್ ಪ್ರಕಾರ 25,000 ಮಿಲಿಯನ್ ರೂ.(2,500 ಕೋಟಿ ರೂ.) ಹಣ ಸಂಗ್ರಹವಾಗಿದೆ. ಇತ್ತೀಚೆಗೆ ಟ್ರಸ್ಟ್ ಹೆಚ್ಚುವರಿ 7,285 ಚ.ಅಡಿಯಷ್ಟು ಭೂಮಿಯನ್ನು ಖರೀದಿಸಿದ್ದು, ಉದ್ದೇಶಿತ ಸಂಕೀರ್ಣದ ಪಕ್ಕದಲ್ಲಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಸುಪ್ರೀಂ ಕೋರ್ಟ್ ನೀಡಿದ 70 ಎಕರೆ ಪ್ರದೇಶದ ಪಕ್ಕದಲ್ಲೇ ಈ ಹೊಸ ಭೂಮಿ ಇದೆ ಎಂದು ಅವರು ತಿಳಿಸಿದರು.

    ವರದಿಗಳ ಪ್ರಕಾರ ಈ ಜಮೀನು ಸ್ಥಳೀಯ ನಿವಾಸಿಗಳಿಗೆ ಸೇರಿದ್ದು, ಅವರಿಗೆ ಟ್ರಸ್ಟ್‍ನಿಂದ 1 ಕೋಟಿ ರೂ.ನೀಡಲಾಗಿದೆ. ಉದ್ದೇಶಿತ ರಾಮ ಮಂದಿರದ 70 ಎಕರೆ ಜಾಗಕ್ಕಿಂತ ಹೆಚ್ಚುವರಿಯಾಗಿ ಜಮೀನು ಪಡೆದು 107 ಎಕರೆಗೆ ವಿಸ್ತರಿಸಲು ಟ್ರಸ್ಟ್ ಯೋಜನೆ ರೂಪಿಸಿದೆ. ಪ್ರಮುಖ ಮಂದಿರವೂ 5 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದ್ದು, ಉಳಿದ 100 ಎಕರಿಗೂ ಹೆಚ್ಚು ಜಾಗವನ್ನು ವಸ್ತುಸಂಗ್ರಹಾಲಯ, ಗ್ರಂಥಾಲಯ, ಯಾಗಶಾಲೆ ಹಾಗೂ ರಾಮನ ಜೀವನದ ವಿವಿಧ ಪ್ರಮುಖ ಘಟನೆಗಳ ಫೋಟೋ ಗ್ಯಾಲರಿ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಬಳಸಿಕೊಳ್ಳಲು ಚಿಂತಿಸಲಾಗಿದೆ.

  • ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಪೂರ್ಣ- ವಿಎಚ್‌ಪಿಯಿಂದ ಕೃತಜ್ಞತೆ

    ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಪೂರ್ಣ- ವಿಎಚ್‌ಪಿಯಿಂದ ಕೃತಜ್ಞತೆ

    ನವದೆಹಲಿ: ಕಳೆದ ಮಕರ ಸಂಕ್ರಾಂತಿ ದಿನದಂದು ಪ್ರಾರಂಭವಾದ 45 ದಿನಗಳ ಸುದೀರ್ಘ ರಾಷ್ಟ್ರವ್ಯಾಪಿ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ್ ಶನಿವಾರ ಮುಕ್ತಾಯಗೊಂಡಿದ್ದು ವಿಶ್ವ ಹಿಂದೂ ಪರಿಷತ್‌ ಕೃತಜ್ಞತೆ ತಿಳಿಸಿದೆ.

    ವಿಎಚ್‌ಪಿ ಕೇಂದ್ರ ಕಾರ್ಯಕಾರಿ ಅಧ್ಯಕ್ಷ ಮತ್ತು ಈ ಅಭಿಯಾನದ ರಾಷ್ಟ್ರೀಯ ಕನ್ವೀನರ್ ವಕೀಲ ಅಲೋಕ್ ಕುಮಾರ್ ಅವರು ಮಾತನಾಡಿ, ವಿಶ್ವದ ಈ ದೊಡ್ಡ ಅಭಿಯಾನದ ಮೂಲಕ 10 ಲಕ್ಷ ತಂಡಗಳ ಭಾಗವಾಗಿರುವ 40 ಲಕ್ಷ ಸಮರ್ಪಿತ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಶ್ರೀರಾಮನಿಗೆ ಮೀಸಲಾದ ಹಣವನ್ನು ಸ್ವೀಕರಿಸಲು ರಾಜ್ಯಗಳು, ನಗರಗಳು, ಪಟ್ಟಣಗಳು, ಜಿಲ್ಲೆಗಳು, ಹೋಬಳಿ ಮತ್ತು ಹಳ್ಳಿಗಳುನ್ನು ಮುಟ್ಟಿದ್ದಾರೆ. ಶ್ರೀರಾಮ ದೇವರ ಬಗ್ಗೆ ಕೊಡುಗೆದಾರರು ತೋರಿಸಿದ ಭಕ್ತಿ, ನಂಬಿಕೆ ಮತ್ತು ಸಮರ್ಪಣೆ ಉನ್ನತಿಗೇರಿಸುವ ಮತ್ತು ಆತ್ಮವನ್ನು ಕಲಕುವಂತಿತ್ತು ಎಂದಿದ್ದಾರೆ.

    ವಿಶ್ವ ಹಿಂದೂ ಪರಿಷತ್ ಹಿಂದೂ ಸಮಾಜದ ಉದಾರ ಕೊಡುಗೆ ಮತ್ತು ಸಹಭಾಗಿತ್ವಕ್ಕೆ ಕೃತಜ್ಞತೆ ಸಲ್ಲಿಸುತ್ತದೆ. ಈ ಅಭಿಯಾನಕ್ಕೆ ಲಕ್ಷಾಂತರ ಹಳ್ಳಿಗಳು, ಪಟ್ಟಣಗಳು ​​ಮತ್ತು ನಗರಗಳಿಂದ ಬಂದ ಕೋಟ್ಯಂತರ ಹಿಂದೂ ಕುಟುಂಬಗಳು ಪ್ರೀತಿ, ವಾತ್ಸಲ್ಯ ಮತ್ತು ಪ್ರೀತಿಯಿಂದ ಸಂಪರ್ಕ ಹೊಂದಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದರು.

    ಈ ಚಾಲನೆಯ ಸಮಯದಲ್ಲಿ, ಕಾರ್ಯಕರ್ತರು ಅನೇಕ ಭಾವನಾತ್ಮಕ ಕ್ಷಣಗಳು ಮತ್ತು ಸನ್ನಿವೇಶಗಳೊಂದಿಗೆ ಸಂಧಿಸುತ್ತಿದ್ದರು ಮತ್ತು ಅನೇಕ ಜನರು ತಮ್ಮ ಸಾಮರ್ಥ್ಯವನ್ನು ಮೀರಿ ಕೊಡುಗೆ ನೀಡುವುದನ್ನು ಅವರು ನೋಡಿದರು. ಅನೇಕ ಜನರು, ಸಂತೋಷ ಮತ್ತು ನಮ್ರತೆಯ ಕಣ್ಣೀರಿನೊಂದಿಗೆ, ತಮ್ಮ ಅರ್ಪಣೆಗಳನ್ನು ಶ್ರೀರಾಮರಿಗೆ ಅರ್ಪಿಸಿದರು. ಅನೇಕ ಸ್ಥಳಗಳಲ್ಲಿ, ನಿಧಿ ಸಮರ್ಪಣಾ ತಂಡಗಳನ್ನು ಸ್ವಾಗತಿಸಲಾಯಿತು ಮತ್ತು ಶ್ರೀರಾಮನ ರಾಯಭಾರಿಗಳಾಗಿ ಸ್ವೀಕರಿಸಲಾಯಿತು ಮತ್ತು ಅದಕ್ಕೆ ಅನುಗುಣವಾಗಿ ಗೌರವ ಮತ್ತು ಆರೈಕೆ ಮಾಡಲಾಯಿತು.

    ಭಾರತದ ಮೊದಲ ನಾಗರಿಕರಿಂದ – ಅಧ್ಯಕ್ಷರಿಂದ – ಪಾದಚಾರಿಗಳ ಮೇಲೆ ಮಲಗಿದ್ದವರಿಗೆ, ಅವರು ತಮ್ಮ ಧಾರ್ಮಿಕ ಆದಾಯದಿಂದ ಕೊಡುಗೆ ನೀಡಿದರು. ಭಗವಾನ್ ಶ್ರೀ ರಾಮನೊಂದಿಗೆ ತಮ್ಮನ್ನು ತಾವು ಸಂಪರ್ಕಿಸಿಕೊಂಡರು. ಅಯೋಧ್ಯೆಯಲ್ಲಿ  ತಲೆ ಎತ್ತಲಿರುವ ಶ್ರೀ ರಾಮನ ದೇವಾಲಯವು ರಾಷ್ಟ್ರ ಮಂದಿರವಾಗಿಯೂ ನಿಲ್ಲುತ್ತದೆ ಎಂಬುದು ಈಗ ನಿಸ್ಸಂದಿಗ್ಧ ಮತ್ತು ನಿಶ್ಚಿತವಾಗಿದೆ. ವಿಶ್ವದ ಈ ಅತಿದೊಡ್ಡ ಅಭಿಯಾನದ ದತ್ತಾಂಶಗಳು, ಅನುಭವಗಳು ಮತ್ತು ಸ್ಪೂರ್ತಿದಾಯಕ ಕಂತುಗಳು ಮತ್ತು ಉಪಾಖ್ಯಾನಗಳನ್ನು ಸಂಕಲಿಸಲಾಗುತ್ತಿದೆ. ಇದನ್ನು ವಿಎಚ್‌ಪಿ ಶೀಘ್ರದಲ್ಲೇ ದೇಶದ ಮುಂದೆ ಇಡಲು ಪ್ರಯತ್ನಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

  • ವಿಶ್ವ ಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆ ಅಲ್ಲ: ಪೇಜಾವರ ಶ್ರೀ

    ವಿಶ್ವ ಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆ ಅಲ್ಲ: ಪೇಜಾವರ ಶ್ರೀ

    ಉಡುಪಿ: ವಿಶ್ವ ಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆಯಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪೇಜಾವರ ಶ್ರೀ ತಿರುಗೇಟು ಕೊಟ್ಟಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ. ಟ್ರಸ್ಟ್ ನೋಂದಣಿಯಾಗಿರುವ ಸಂಸ್ಥೆ. ಟ್ರಸ್ಟ್ ನೊಂದಾವಣೆಗೆ ಅದರದ್ದೇ ಆದ ನೀತಿ ನಿಯಮಗಳಿವೆ. ದೇಣಿಗೆ ಸಂಗ್ರಹ ಮಾಡಲು ಅದರದ್ದೇ ಆದ ಕಾನೂನಿದೆ. ನಮಗೆ ಸಂವಿಧಾನವೇ ಅಧಿಕಾರ ಕೊಟ್ಟಿದೆ, ಪಾರರ್ದಶಕತೆ ಖಂಡಿತವಾಗಿ ಬೇಕೆ ಬೇಕು. ಸಂಶಯಗಳನ್ನು ಮುಂದಿಟ್ಟರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಮುಚ್ಚುಮರೆ ಮಾಡಲು ಯಾವುದೇ ವಿಷಯಗಳು ನಡೆಯುವುದಿಲ್ಲ. ಕಾನೂನಾತ್ಮಕವಾಗಿ ಅದಕ್ಕೆ ಬೇಕಾಗಿರುವಂತ ಪುರಾವೆಗಳನ್ನು ಕೊಡಲು ಸಾಧ್ಯವಿದೆ ಎಂದರು.

    ಯಾವುದೇ ಸಂಶಯಗಳನ್ನು ಇಟ್ಟು ಆರೋಪ ಮಾಡುವುದು ಸೂಕ್ತವಲ್ಲ. ರಾಮ ಜನ್ಮಭೂಮಿ ಟ್ರಸ್ಟ್ ನಂತೆ ಅಧಿಕೃತವಾಗಿರುವ ವಿಶ್ವ ಪರಿಷತ್ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡುತ್ತಿದೆ. ವಿಶ್ವ ಹಿಂದೂ ಪರಿಷತ್‍ನ ಕಾರ್ಯರ್ತರಿಗೆ ದೇಣಿಗೆ ಸಂಗ್ರಹದ ಜವಾಬ್ದಾರಿ ನೀಡಲಾಗಿದೆ. ವಿಹಿಂಪನ ಮುಖ್ಯಸ್ಥ ಆಯಾ ಊರಿನಲ್ಲಿ ಸಂಗ್ರಹ ನಿರತರಾಗಿದ್ದಾರೆ. ಹಿರಿಯ, ಮುಂದಾಳುಗಳ ನೇತೃತ್ವದಲ್ಲಿ ಕಾರ್ಯಕರ್ತರು ನಿಧಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ವಿಹಿಂಪ ಪುಂಡು ಪೋಕರಿಗಳ ಸಂಸ್ಥೆಯಲ್ಲ, ಇದು ಅಧಿಕೃತ ಸಂಸ್ಥೆ. ಹಾಗಾಗಿ ಇಂತಹ ಮಾತು ಬಳಸುವುದು ಯುಕ್ತವಲ್ಲ. ಸಂಶಯಕ್ಕೆ ಪರಿಹಾರ ಇದೆ. ಸಂಶಯ ಇದೆ ಎಂದು ಅರೋಪ ಮಾಡಿದರೆ, ಆರೋಪದಲ್ಲಿಯೇ ಮುಗಿಯುತ್ತದೆ. ಆರೋಪಕ್ಕೆ ಪ್ರತ್ಯಾರೋಪ ಸಿಗುತ್ತದೆ, ಪ್ರಶ್ನೆಗೆ ಉತ್ತರ ಸಿಗುವುದಿಲ್ಲ, ಪ್ರಶ್ನೆ ಮಾಡಿದರೆ ಉತ್ತರ ಕೊಡಬಹುದು ಎಂದು ಉಡುಪಿಯಲ್ಲಿ ಪೇಜಾವರ ಶ್ರೀ ಖಡಕ್ ಪ್ರತಿಕ್ರಿಯೆ ನೀಡಿದರು.

     

  • ‘ಮಾಯಾ’ ಜಾಲ ಭೇದಿಸಿದ ಪೊಲೀಸ್ ಇಲಾಖೆ ಕೆಲಸ ಶ್ಲಾಘನೀಯ: ವಿಶ್ವ ಹಿಂದೂ ಪರಿಷತ್

    ‘ಮಾಯಾ’ ಜಾಲ ಭೇದಿಸಿದ ಪೊಲೀಸ್ ಇಲಾಖೆ ಕೆಲಸ ಶ್ಲಾಘನೀಯ: ವಿಶ್ವ ಹಿಂದೂ ಪರಿಷತ್

    ಮಂಗಳೂರು: ನಗರದ ನ್ಯೂ ಚಿತ್ರ ಬಳಿ ಕಳೆದ ತಿಂಗಳು ಕರ್ತವ್ಯ ನಿರತ ಪೊಲೀಸ್ ಮುಖ್ಯ ಪೇದೆ ಗಣೇಶ್ ಕಾಮತ್ ಅವರ ಮೇಲೆ ಕೊಲೆ ಮಾಡಲು ಯತ್ನಿಸಿದ ಪ್ರಕರಣವನ್ನು ಭೇದಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಅಭಿನಂದನೆ ಸಲ್ಲಿಸಿದ್ದಾರೆ.

    ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಪೊಲೀಸ್ ಸಹಾಯಕ ಆಯುಕ್ತರಾದ ಹರಿರಾಂ ಶಂಕರ್ ಹಾಗೂ ವಿನಯ್ ಗಾಂವ್ಕರ್ ಮತ್ತು ಪೊಲೀಸ್ ಇಲಾಖೆಯ ಕೆಲಸವನ್ನು ವಿಶ್ವ ಹಿಂದು ಪರಿಷದ್ ಶ್ಲಾಘಿಸುತ್ತದೆ ಮತ್ತು ಅಭಿನಂದನೆ ಸಲ್ಲಿಸುತ್ತದೆ.

    ಈ ಪ್ರಕರಣಕ್ಕೆ ಸಂಬಂದಿಸಿದಂತೆ ಬಂಧನಕ್ಕೆ ಒಳಪಟ್ಟವರು ಪಿಎಫ್‍ಐ ಮತ್ತು ಎಸ್‍ಡಿಪಿಐ ಕಾರ್ಯಕರ್ತರು. ಹಾಗಾಗಿ ಈ ಕೃತ್ಯದಲ್ಲಿ ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಯ ಕೈವಾಡವಿರುವುದು ಸಂಶಯ ವ್ಯಕ್ತವಾಗುತ್ತದೆ. ಪೊಲೀಸ್ ಇಲಾಖೆ ತಕ್ಷಣ ಎರಡೂ ಸಂಘಟನೆಯ ಮುಖಂಡರನ್ನು ತನಿಖೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿಶ್ವ ಹಿಂದು ಪರಿಷದ್ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದು ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಶರಣ್‌ ಪಂಪ್‌ವೆಲ್‌ ವಿರುದ್ಧ ಅಪಪ್ರಚಾರ – ಕ್ರಮಕ್ಕೆ ವಿಎಚ್‌ಪಿ ಮನವಿ

    ಶರಣ್‌ ಪಂಪ್‌ವೆಲ್‌ ವಿರುದ್ಧ ಅಪಪ್ರಚಾರ – ಕ್ರಮಕ್ಕೆ ವಿಎಚ್‌ಪಿ ಮನವಿ

    ಮಂಗಳೂರು: ವಿಶ್ವ ಹಿಂದೂ ಪರಿಷತ್‌ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಾಧಾರ ಅಪಪ್ರಚಾರ ಮಾಡುತ್ತಿದ್ದಾರೆ. ಈ ರೀತಿ ಸುಳ್ಳು ಆರೋಪ ಮಾಡುವವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಮಂಗಳೂರು ಘಟಕ ವತಿಯಿಂದ ಸಹಾಯಕ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

    ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದ ಮೂಲಕ ಅನಗತ್ಯ ವಿಷಯಗಳನ್ನು ಸೇರಿಸಿ  ಶರಣ್ ಪಂಪವೆಲ್ ಮೇಲೆ ನಿರಾಧಾರ ಸುಳ್ಳು ಆರೋಪಗಳ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುವ ವಿಷಯ ಬಹಳ ಖೇದಕರ. ಇದರ ಹಿಂದಿರುವ ಕಿಡಿಕೇಡಿಗಳನ್ನು ಪತ್ತೆ ಹಚ್ಚಿ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ವಿಷಯ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಎಂದು ಮನವಿ ಮಾಡಿದ್ದಾರೆ.

    ವಿಭಾಗ ಭಜರಂಗದಳ ಸಂಚಾಲಕ್ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷರಾದ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷ ಮನೋಹರ್ ಸುವರ್ಣ, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಜಿಲ್ಲಾ ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪವೆಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

    ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

    ನವದೆಹಲಿ: ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಬೇಕೆಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಲಹೆಗೆ ವಿಶ್ವ ಹಿಂದೂ ಪರಿಷತ್ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಶಿವ ಸೇನೆ ಸುಖಾಸುಮ್ಮನೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತಿರುಗೇಟು ನೀಡಿದೆ.

    ವಿಶ್ವ ಹಿಂದೂ ಪರಿಷತ್‍ನ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಉದ್ಧವ್ ಠಾಕ್ರೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ಮಾಡುವಂತೆ ಸಲಹೆ ನೀಡಿದ್ದಾರೆ. ಇದು ಅವರ ವಿತಂಡ ವಾದವನ್ನು ತೋರಿಸುತ್ತದೆ. ಬಾಳಾ ಸಾಹೇಬ್ ಠಾಕ್ರೆಯವರ ಪಕ್ಷದವರು ಈ ರೀತಿಯಾಗಿ ಹೇಳಿಕೆ ನೀಡಿದ್ದಕ್ಕೆ ನಾವು ಬೇಸರ ವ್ಯಕ್ತಪಡಿಸುತ್ತೇವೆ ಎಂದು ಹರಿಹಾಯ್ದಿದ್ದಾರೆ.

    ಭೂಮಿ ಪೂಜೆ ಅದೊಂದು ಶುಭ ಆಚರಣೆಯಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಲು ಸಾಧ್ಯವಿಲ್ಲ. ಯಾವುದೇ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕಾದಲ್ಲಿ ಮಾತೃಭೂಮಿಗೆ ಪೂಜೆ ಸಲ್ಲಿಸಬೇಕು. ಭೂಮಿ ಅಗಿಯಲು ಹಾಗೂ ಕಟ್ಟಡ ನಿರ್ಮಾಣ ಮಾಡಲು ಅವಳ ಅನುಮತಿ ಪಡೆಯಬೇಕು. ಈ ಮೂಲಕ ನಮ್ಮ ಮುಂದಿನ ಯೋಜನೆಗೆ ಅವಳ ಆಶೀರ್ವಾದ ಪಡೆಯಬೇಕಿದೆ ಎಂದು ತಿಳಿಸಿದರು.

    ಕೊರೊನಾ ವೈರಸ್ ಹಿನ್ನೆಲೆ ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಬೇಕು ಎಂದು ಉದ್ಧವ್ ಠಾಕ್ರೆ ಸಾಮ್ನಾ ಪತ್ರಿಕೆಯಲ್ಲಿನ ಸಂದರ್ಶನದಲ್ಲಿ ಹೇಳಿದ್ದರು.

    ಈ ಕುರಿತು ವಿಶ್ವ ಹಿಂದೂ ಪರಿಷತ್ ನಾಯಕರು ಪ್ರತಿಕ್ರಿಯಿಸಿ, ಕೊರೊನಾ ವೈರಸ್ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅಲ್ಲದೆ ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಕೇವಲ 200 ಜನ ಭಾಗವಹಿಸುತ್ತಾರೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಈಗಗಲೇ ವಿಶ್ವ ಹಿಂದೂ ಪರಿಷತ್ ಹೇಳಿದೆ ಎಂದು ಉದ್ಧವ್ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದೆ.

    ಇತ್ತೀಚೆಗೆ ಸಾಮ್ನಾದಲ್ಲಿ ಬಿತ್ತರವಾದ ಉದ್ಧವ್ ಠಾಕ್ರೆ ಅವರ ಸಂದರ್ಶನದಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದ್ದು, ಭೂಮಿ ಪೂಜೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಬಹುದು. ಇದು ಸಂತಸದ ಕ್ಷಣವಾಗಿದೆ. ಹೀಗಾಗಿ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ನಾವು ಕೊರೊನಾ ಸೋಂಕು ಹೆಚ್ಚು ಹರಡಲು ಅವಕಾಶ ಮಾಡಿಕೊಡಬೇಕೆ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.

    ಇದು ಸಾಮಾನ್ಯ ಮಂದಿರ ನಿರ್ಮಾಣದ ವಿಚಾರವಲ್ಲ, ಕೊರೊನಾ ಮಹಾಮಾರಿ ವಿರುದ್ಧ ಇಂದು ನಾವು ಹೋರಾಡುತ್ತಿದ್ದೇವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಹ ನಿಷೇಧ ಹೇರಲಾಗಿದೆ. ಭೂಮಿ ಪೂಜೆ ಕಾರ್ಯಕ್ರಮಕ್ಕೆ ನಾನು ಅಯೋಧ್ಯೆಗೆ ಹೋಗಬಲ್ಲೆ. ಆದರೆ ಲಕ್ಷಾಂತರ ರಾಮನ ಭಕ್ತರ ಕಥೆ ಏನು, ಅವರನ್ನು ನೀವು ತಡೆಯಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿಯೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಮಾಡಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

    ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಸದಸ್ಯರ ಮಾಹಿತಿಯಂತೆ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗವಹಿಸಬಹುದು ಎಂದು ಹೇಳಲಾಗಿದೆ.