Tag: ವಿಶ್ವ ಚಾಂಪಿಯನ್

  • 2016ರ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಟೋರಿ ಬೋವಿ ಅನುಮಾನಾಸ್ಪದ ಸಾವು

    2016ರ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಟೋರಿ ಬೋವಿ ಅನುಮಾನಾಸ್ಪದ ಸಾವು

    ವಾಷಿಂಗ್ಟನ್‌: ಒಲಿಂಪಿಕ್ಸ್‌ ಕ್ರೀಡೆಯಲ್ಲಿ (2016 Olympic) ಮೂರು ಪದಕಗಳು ಹಾಗೂ ಎರಡು ಬಾರಿ ವಿಶ್ವಚಾಂಪಿಯನ್‌ ಶಿಪ್‌ ಪ್ರಶಸ್ತಿಗಳನ್ನು ಗೆದ್ದಿದ್ದ ಟೋರಿ ಬೋವಿ (32) (Tori Bowie) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

    ಹಲವು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ತೆರಳಿದ್ದ ಬೋವಿ ಫ್ಲೋರಿಡಾದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತನಿಖೆ ನಡೆಸಲು ಹಿಂದೇಟು ಹಾಕಿದೆ ಎಂಬ ಆರೋಪಗಳು ಕೇಳಿಬಂದಿದೆ.

    ಐಒಸಿ ಅಧ್ಯಕ್ಷ ಥಾಮಸ್ ಬಾಚ್ ತಮ್ಮ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. ಟೋರಿ ಬೋವಿ ಹಠಾತ್‌ ನಿಧನವು ಆಘಾತ ತಂದಿದೆ. ಅವರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡ ಮುಂಬೈ – 6 ವಿಕೆಟ್‌ಗಳ ಭರ್ಜರಿ ಜಯ

    ಟೋರಿ 2016ರ ಒಲಿಂಪಿಕ್ಸ್‌ನಲ್ಲಿ ಮೂರು ಪದಗಳನ್ನು ಬಾಚಿಕೊಂಡಿದ್ದರು. 4*100 ಮೀಟರ್‌ ರಿಲೇನಲ್ಲಿ ಚಿನ್ನದ ಪದಕ (Gold Medallist), 100 ಮೀಟರ್‌ ರಿಲೇನಲ್ಲಿ (Relay) ಬೆಳ್ಳಿ ಹಾಗೂ 200 ಮೀಟರ್‌ ಓಟದಲ್ಲಿ ಕಂಚಿನ ಪದಕಗಳನ್ನ ಗೆದ್ದಿದ್ದರು. 2017ರ ವಿಶ್ವಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್‌ ಓಟ ಮತ್ತು 4*100 ಮೀಟರ್‌ ರಿಲೇನಲ್ಲಿ ಚಿನ್ನದ ಪದಕ, 2019ರಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ನಲ್ಲಿ ಲಾಂಗ್‌ ಜಂಪ್‌ನಲ್ಲಿ 4ನೇ ಸ್ಥಾನ ಪಡೆದು ಮಿಂಚಿದ್ದರು. ಕೊನೆಯದ್ದಾಗಿ 2022ರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: IPL 2023: ಜಯದ ನಿರೀಕ್ಷೆಯಲ್ಲಿದ್ದ ಚೆನ್ನೈಗೆ ಭಾರೀ ನಿರಾಸೆ – ಮಳೆಗೆ ಪಂದ್ಯ ರದ್ದು

  • 37 ವರ್ಷದ ಹಳೆಯ ಕಾರನ್ನು ರಾಷ್ಟ್ರೀಯ ಆಸ್ತಿಯೆಂದು ಘೋಷಿಸಿದ ರವಿಶಾಸ್ತ್ರಿ

    37 ವರ್ಷದ ಹಳೆಯ ಕಾರನ್ನು ರಾಷ್ಟ್ರೀಯ ಆಸ್ತಿಯೆಂದು ಘೋಷಿಸಿದ ರವಿಶಾಸ್ತ್ರಿ

    ಮುಂಬೈ: 1985ರ ವಿಶ್ವಚಾಂಪಿಯನ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನವಾಗಿ ಸಿಕ್ಕ ಆಡಿ 100 ಸೆಡನ್ ಕಾರನ್ನು ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ ಮರಳಿ ಪಡೆದಿದ್ದಾರೆ.

    ಆಡಿ 100 ಕಾರು ಹಾಳಾಗಿದ್ದರಿಂದ ಅದನ್ನು ರಿಪೇರಿಗಾಗಿ ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ನಿರ್ವಹಿಸುತ್ತಿರುವ ಸೂಪರ್ ಕಾರ್ ಕ್ಲಬ್ ಗ್ಯಾರೇಜ್ (SCCG)ಗೆ ಬಿಡಲಾಗಿತ್ತು. ಆ ಕಾರಿನ ಕೆಲ ಬಿಡಿ ಭಾಗಗಳು ಸಂಗ್ರಹಿಸಲು ಕಷ್ಟಸಾಧ್ಯವಾಗಿದ್ದರಿಂದ ರಿಪೇರಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ ಬಿಡದೇ ತನ್ನ ಪ್ರಯತ್ನ ಮುಂದುವರಿಸಿದ ಎಸ್‌ಸಿಸಿ ಗ್ಯಾರೆಜ್ ಸತತ 8 ತಿಂಗಳ ಪ್ರಯತ್ನದಿಂದಾಗಿ ಕಾರನ್ನು ದುರಸ್ತಿ ಮಾಡಿ ರವಿಶಾಸ್ತ್ರೀ ಅವರಿಗೆ ಹಸ್ತಾಂತರಿಸಿದೆ.

    car

    ಈ ಸಂತಸವನ್ನು ಹಂಚಿಕೊಂಡಿರುವ ರವಿಶಾಸ್ತ್ರೀ ಅವರು, ಇದು 37 ವರ್ಷಗಳ ಹಿಂದೆ ನಾನು ಪಡೆದ ಕಾರಿನಂತೆಯೇ ಕಾಣುತ್ತದೆ. ಯಾವುದರಲ್ಲೂ ಬದಲಾವಣೆಯಾಗಿಲ್ಲ. ಅವರು ರಿಪೇರಿ ಮಾಡಿರುವ ರೀತಿ ನಂಬಲಾಗುತ್ತಿಲ್ಲ. ಕಾರಿನ ಕೀಲಿ ನನ್ನ ಕೈ ಸೇರುತ್ತಿದ್ದಂತೆ 37 ವರ್ಷಗಳ ಹಿಂದಿನ ನೆನಪುಗಳು ಮತ್ತೆ ಮರುಕಳಿಸಿದವು ಎಂದು ಹೇಳಿದ್ದಾರೆ.

    ಆ ಸಂದರ್ಭದಲ್ಲಿ ಚಾಲನಾ ಪರವಾನಗಿ ಇಲ್ಲದೆಯೇ ಕಾರು ಚಲಾಯಿಸಿದ್ದೆ. ಟೂರ್ನಿಯ ಪಂದ್ಯವೊಂದರಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾಗ ಮೈದಾನದ ಮಿಡ್ ವಿಕೆಟ್ ಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಆಗಾಗ ಕಣ್ಣು ಹಾಯಿಸುತ್ತಿದ್ದೆ. ಏಕೆಂದರೆ ಕಾರನ್ನು ಗೆಲ್ಲಲು ನಾನು ಮುಂಚೂಣಿಯಲ್ಲಿರುವ ಆಟಗಾರನೆಂಬುದು ತಿಳಿದಿತ್ತು. ಕಾರನ್ನು ಹಡಗಿನಲ್ಲಿ ಭಾರತಕ್ಕೆ ತಂದಾಗ 10 ಸಾವಿರಕ್ಕೂ ಹೆಚ್ಚು ಜನ ಜಮಾಯಿಸಿದ್ದರು ಎಂದು ಶಾಸ್ತ್ರೀ ನೆನಪನ್ನು ಹಂಚಿಕೊಂಡಿದ್ದಾರೆ.

    ರಾಜೀವ್ ಗಾಂಧಿ ಅವರು ಭಾರತದ ಪ್ರಧಾನಿಯಾಗಿದ್ದಾಗ ನಾನು ಈ ಬಗ್ಗೆ ಮಾತನಾಡಿದ್ದೆ. ಅವರು ಈ ಕಾರನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಎಲ್ಲ ತೆರಿಗೆ ಮನ್ನಾ ಮಾಡಿದ್ದರು. ಇಲ್ಲದಿದ್ದರೆ ಹೆಚ್ಚಿನ ತೆರಿಗೆಯಿಂದ ತರಲಾಗುತ್ತಿರಲಿಲ್ಲ ಎಂದು ಹೇಳಿಕೊಂಡರು.

    ಹಿನ್ನೆಲೆ ಏನು?: 1985ರ ವಿಶ್ವಚಾಂಪಿಯನ್ ಶಿಪ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನಕ್ಕೆ ರವಿಶಾಸ್ತ್ರೀ ಅವರಿಗೆ ಆಡಿ 100 ಸೆಡನ್ ಕಾರನ್ನು ಬಹುಮಾನವಾಗಿ ನೀಡಲಾಗಿತ್ತು. 32 ವರ್ಷಗಳ ಹಿಂದೆ ಆಸ್ಪ್ರೇಲಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ ಶಿಪ್ ಟೆಸ್ಟ್ ಸರಣಿಯ 5 ಪಂದ್ಯಗಳಲ್ಲಿ ರವಿಶಾಸ್ತ್ರಿ ಒಟ್ಟು 182 ರನ್ ಮತ್ತು 8 ವಿಕೆಟ್ ಪಡೆದಿದ್ದರು. ಈ ಸಾಧನೆಗಾಗಿ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪ್ರಶಸ್ತಿಗೆ ಭಾಜನರಾಗಿದ್ದ ಶಾಸ್ತ್ರೀ ಅವರಿಗೆ ಆಡಿ 100 ಸೆಡನ್ ಕಾರನ್ನು ಬಹುಮಾನವಾಗಿ ನೀಡಲಾಗಿತ್ತು.

  • ಬ್ಯಾಡ್ಮಿಂಟನ್ – ಶಿರಸಿಯ ಪ್ರೇರಣಾ ವಿಶ್ವ ಚಾಂಪಿಯನ್

    ಬ್ಯಾಡ್ಮಿಂಟನ್ – ಶಿರಸಿಯ ಪ್ರೇರಣಾ ವಿಶ್ವ ಚಾಂಪಿಯನ್

    ಕಾರವಾರ: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 19 ವಯೋಮಿತಿ ಒಳಗಿನವರ ಇಂಟರ್‌ನ್ಯಾಷನಲ್ ಸ್ಕೂಲ್ ಫೆಡರೇಶನ್ ಗೇಮ್ಸ್‌ನ ಬ್ಯಾಂಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಶಿರಸಿಯ ಪ್ರೇರಣಾ ಶೇಟ್ ಚಿನ್ನದ ಪದಕ ಗೆದ್ದಿದ್ದಾರೆ.

    ಇಂದು ನಡೆದ ಫೈನಲ್ ಪಂದ್ಯದಲ್ಲಿ ತೈಪೆ ದ್ವೀಪ ರಾಷ್ಟ್ರದ ಸೈಯುನ್ ಶಾನ್ ವಿರುದ್ಧ 13-21, 21-12, 21-16 ಅಂತರದಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೆ ಏರಿದರು.

    ಈಕೆ ಶಿರಸಿಯ ನಂದಕುಮಾರ್ ಅವರ ಪುತ್ರಿಯಾಗಿದ್ದು ಲಯನ್ಸ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಈಗಾಗಲೆ ಹಲವು ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿಯೂ ಚಾಂಪಿಯನ್ ಆಗಿ ಗಮನಸೆಳೆದಿದ್ದಾಳೆ.

  • ಟೆಸ್ಟ್ ಚಾಂಪಿಯನ್ ಆದ ಬೆನ್ನಲ್ಲೇ ನ್ಯೂಜಿಲೆಂಡ್ ತಂಡದಿಂದ ಹೊಸ ನಿರ್ಧಾರ..?

    ಟೆಸ್ಟ್ ಚಾಂಪಿಯನ್ ಆದ ಬೆನ್ನಲ್ಲೇ ನ್ಯೂಜಿಲೆಂಡ್ ತಂಡದಿಂದ ಹೊಸ ನಿರ್ಧಾರ..?

    ಸೌಂಥಾಂಪ್ಟನ್: ಭಾರತ ತಂಡದ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಜಯಿಸಿದ ಬೆನ್ನಲ್ಲೇ ನ್ಯೂಜಿಲೆಂಡ್ ತಂಡದ ಆಟಗಾರರು ಹೊಸ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಈ ನಿರ್ಧಾರದಿಂದ ಬಿಸಿಸಿಐ ಸಂತೋಷಗೊಂಡಿದೆ.

    ಭಾರತದಲ್ಲಿ ಕೊರೊನಾದಿಂದಾಗಿ ಮುಂದೂಡಲ್ಪಟ್ಟ 14ನೇ ಆವೃತ್ತಿಯ ಐಪಿಎಲ್‍ನ ಮುಂದಿನ ಪಂದ್ಯಗಳು ದುಬೈನಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಡೆಯಲಿದೆ. ಈ ಪಂದ್ಯಗಳಲ್ಲಿ ಮೊದಲು ನ್ಯೂಜಿಲೆಂಡ್ ಆಟಗಾರರು ಭಾಗವಹಿಸುವುದು ಅನುಮಾನವಾಗಿತ್ತು. ಆದರೆ ಇದೀಗ ನ್ಯೂಜಿಲೆಂಡ್ ಆಟಗಾರರು ಮುಂದಿನ ಭಾಗದ ಐಪಿಎಲ್ ಪಂದ್ಯಾಟಗಳಿಗೆ ಲಭ್ಯವಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಈ ನಿರ್ಧಾರದಿಂದಾಗಿ ಸಹಜವಾಗಿಯೆ ಬಿಸಿಸಿಐ ಸಂತೋಷಗೊಂಡಿದೆ. ಇದನ್ನೂ ಓದಿ: ಕೊನೆಗೂ ಕನಸು ನನಸು: ಐಸಿಸಿ ಟೆಸ್ಟ್ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್

    ದುಬೈನಲ್ಲಿ ನಡೆಯಲಿರುವ 2ನೇ ಭಾಗದ ಐಪಿಎಲ್‍ಗೆ ವಿದೇಶಿ ಆಟಗಾರರು ಆಡುವ ಬಗ್ಗೆ ಹಲವು ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಈಗಾಗಲೇ ಬಿಸಿಸಿಐ ಐಪಿಎಲ್‍ಗಾಗಿ ಬರದ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ವಿದೇಶಿ ಅಟಗಾರರ ಪೈಕಿ ಆಸ್ಟ್ರೇಲಿಯಾ, ಇಂಗ್ಲೆಂಡ್‍ನ ಆಟಗಾರರು ರಾಷ್ಟ್ರೀಯ ತಂಡದೊಂದಿಗೆ ಕ್ರಿಕೆಟ್ ಸರಣಿ ಆಡುತ್ತಿರುವುದರಿಂದ ಐಪಿಎಲ್‍ನಲ್ಲಿ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: ಯುಎಇಯಲ್ಲಿ ಐಪಿಎಲ್ – ಟಾಪ್ ಬಾಸ್‍ಗೆ ಸಿಕ್ತು ಇಸಿಬಿ ಪೂರ್ಣ ಬೆಂಬಲ

    ಆದರೆ ಇದೀಗ ನ್ಯೂಜಿಲೆಂಡ್ ಆಟಗಾರರು ಐಪಿಎಲ್‍ನಲ್ಲಿ ಕಾಣಿಸಿಕೊಂಡರೆ ಸ್ವಲ್ಪ ಮಟ್ಟಿಗೆ ಐಪಿಎಲ್‍ನ ಮೆರುಗು ಹೆಚ್ಚಲಿದೆ. ಕೀವಿಸ್ ಆಟಗಾರರಾದ ಕೇನ್ ವಿಲಿಯಮ್ಸನ್, ಕೈಲ್ ಜೇಮಿಸನ್, ಟ್ರೆಂಟ್ ಬೌಲ್ಟ್,ಜೇಮ್ಸ್ ನೀಶಾಮ್, ಮಿಚೆಲ್ ಸ್ಯಾಂಟ್ನರ್, ಲೂಕಿ ಫಗ್ರ್ಯುಸನ್ ಸೇರಿದಂತೆ ಕೆಲ ಆಟಗಾರರು ಐಪಿಎಲ್‍ನಲ್ಲಿ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ.

  • ವಿಶ್ವ ರ‍್ಯಾಂಕಿಂಗ್‌ನಲ್ಲಿ ಬಜರಂಗ್ ಪೂನಿಯಾಗೆ ಅಗ್ರ ಸ್ಥಾನ

    ವಿಶ್ವ ರ‍್ಯಾಂಕಿಂಗ್‌ನಲ್ಲಿ ಬಜರಂಗ್ ಪೂನಿಯಾಗೆ ಅಗ್ರ ಸ್ಥಾನ

    -ವಿಶ್ವ ಚಾಂಪಿಯನ್ ಆಗಿಯೇ ನಂಬರ್-1 ಆಗ್ಬೇಕು ಅಂದ್ರು ಬಜರಂಗ್

    ನವದೆಹಲಿ: ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಅವರು ವಿಶ್ವ ಕುಸ್ತಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಠಿಸಿದ್ದಾರೆ. ಯುನೈಟೆಡ್ ವಲ್ರ್ಡ್ ವ್ರೆಸ್ಲಿಂಗ್ ಶನಿವಾರ ಬಿಡುಗಡೆ ಮಾಡಿದ ಪಟ್ಟಿಯ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಅವರು ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

    ಈ ಸಾಧನೆ ಮಾಡಿದ ಭಾರತದ ಏಕೈಕ ಕುಸ್ತಿಪಟು ಎಂಬ ಹೆಗ್ಗಳಿಕೆಯನ್ನು 24 ವರ್ಷದ ಬಜರಂಗ್ ಪಡೆದುಕೊಂಡಿದ್ದಾರೆ. ಈ ವರ್ಷದಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ, ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ ಬೆಳ್ಳಿ ಪದಕ ಸೇರಿದಂತೆ ವಿವಿಧ ಟೂರ್ನಿಗಳ ಮೂಲಕ ಒಟ್ಟು ಐದು ಪದಕಗಳನ್ನು ಬಜರಂಗ್ ತಮ್ಮದಾಗಿಸಿಕೊಂಡಿದ್ದರು.

    ಐದು ಚಿನ್ನದ ಪದಕ ಪಡೆಯುವ ಮೂಲಕ 65 ಕೆ.ಜಿ. ವಿಭಾಗದ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಒಟ್ಟು 96 ಪಾಯಿಂಟ್‍ಗಳನ್ನು ಬಜರಂಗ್ ಗಳಿಸಿ, ಅಗ್ರಸ್ಥಾನ ಪಡೆದಿದ್ದಾರೆ. ಉಳಿದಂತೆ 66 ಪಾಯಿಂಟ್‍ಗಳು ಗಳಿಸಿರುವ ಕ್ಯೂಬಾದ ಅಲೆಕ್ಸಾಂಡ್ರೊ ಹೆನ್ರಿಕ್ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ.

    ಪ್ರತಿಯೊಬ್ಬ ಕ್ರೀಡಾಪಟು ನಂಬರ್ ಒನ್ ಆಗಬೇಕು ಎನ್ನುವ ಗುರಿ ಹೊಂದಿರುತ್ತಾರೆ. ಆದರೆ ನಾನು ವಿಶ್ವ ಚಾಂಪಿಯನ್ ಗಳಿಸುವ ಮೂಲಕ ನಂಬರ್ 1 ಆಗಬೇಕು ಎನ್ನುವ ಕನಸು ಕಟ್ಟಿಕೊಂಡಿರುವೆ. ಹೀಗಾಗಿ ಮುಂದಿನ ವರ್ಷದ ಪಂದ್ಯಕ್ಕೆ ಸಿದ್ಧತೆ ನಡೆಸಿರುವೆ ಎಂದು ಬಜರಂಗ್ ಹೇಳಿದ್ದಾರೆ.

    ಬುಡಾಪೆಸ್ಟ್‍ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‍ಷಿಪ್‍ನ ಸೆಮಿಫೈನಲ್‍ನಲ್ಲಿ ಅಲೆಕ್ಸಾಂಡ್ರೊ ಹೆನ್ರಿಕ್ ವಿರುದ್ಧ ಬಜರಂಗ್ ಜಯಗಳಿಸಿದ್ದರು. ಆದರೆ ಫೈನಲ್‍ನಲ್ಲಿ ವಿಶ್ವ ಚಾಂಪಿಯನ್, ಜಪಾನ್‍ನ ಟಕುಟೊ ಒಟೊಗುರೊ ನಾಲ್ಕನೇ ಸ್ಥಾನದಲ್ಲಿದ್ದಾರೆ. ರಷ್ಯಾದ ಅಖ್ಮೆದ್ ಜಕಯೇವ್ 62 ಪಾಯಿಂಟ್‍ಗಳನ್ನು ಗಳಿಸಿ ಮೂರನೇ ಸ್ಥಾನ ಹಾಗೂ ಈ ಬಾರಿಯ ವಿಶ್ವ ಚಾಂಪಿಯನ್, ಜಪಾನ್‍ನ ಟಕುಟೊ ಒಟೊಗುರೊ 56 ಪಾಯಿಂಟ್‍ಗಳನ್ನು ಸಾಧಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews