Tag: ವಿಶ್ವೇಶ್ವರ್ ಹೆಗಡೆ ಕಾಗೇರಿ

  • ಸದನದಲ್ಲಿ ಸದ್ದು ಮಾಡಿದ ರೈತ ಮಹಿಳೆ ವಿಷ ಕುಡಿದ ಪ್ರಕರಣ

    ಸದನದಲ್ಲಿ ಸದ್ದು ಮಾಡಿದ ರೈತ ಮಹಿಳೆ ವಿಷ ಕುಡಿದ ಪ್ರಕರಣ

    ಬೆಂಗಳೂರು: ಮುಂಡರಗಿ ತಾಲೂಕಿನಲ್ಲಿ ರೈತ ಮಹಿಳೆಯರು ವಿಷ ಕುಡಿದ ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಅರಣ್ಯ ಇಲಾಖೆಯ ಕಿರುಕುಳದಿಂದ ವಿಷ ಕುಡಿದ ಪ್ರಕರಣವನ್ನು ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಶಾಸಕ ಎಚ್‍ಕೆ ಪಾಟೀಲ್ ಪ್ರಸ್ತಾಪ ಮಾಡಿ ಗಂಭೀರತೆಯನ್ನು ವಿವರಿಸಿದರು.

    ಇದೇ ವೇಳೆ ಎಚ್.ಕೆ. ಪಾಟೀಲ್ ಬೆಂಬಲಕ್ಕೆ ಮಾಜಿ ಸಿಎಂ ಯಡಿಯೂರಪ್ಪ ನಿಂತರು. ಇದೊಂದು ಗಂಭೀರವಾದ ಪ್ರಕರಣ. ಎಚ್.ಕೆ. ಪಾಟೀಲ್ ಹೇಳಿರುವುದು ಸತ್ಯವಾಗಿದೆ. ಸಿಎಂ ಆದಷ್ಟು ಬೇಗ ಕ್ರಮವಹಿಸಿ ಸಮಸ್ಯೆ ಕೊನೆಗಾಣಿಸಬೇಕು. ಸಮಸ್ಯೆ ಮುಂದುವರಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದಿಲ್ಲ. ಅಗತ್ಯ ಬಿದ್ದರೆ ಸದನ ಸಮಿತಿ ರಚಿಸಿ ಎಂದು ಯಡಿಯೂರಪ್ಪ ಆಗ್ರಹಿಸಿದರು.

    ಇನ್ನೊಂದೆಡೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಧ್ವನಿಗೂಡಿಸಿ ಸಮಸ್ಯೆ ಪರಿಹಾರ ಮಾಡಲು ಸರ್ಕಾರ ಮುಂದಾಗಬೇಕು. ಅರಣ್ಯಾಧಿಕಾರಿಗಳ ಧೋರಣೆ ಸರಿಯಲ್ಲ. ಕೂಡಲೇ ಸಾಗುವಳಿ ಮಾಡಿದ ರೈತರ ಸಂಕಷ್ಟ ಪರಿಹಾರ ಮಾಡಲು ಆಗ್ರಹಿಸಿದರು.

    ಇದೇ ವೇಳೆ ಸ್ಪೀಕರ್ ಕಾಗೇರಿ ಸೇರಿದಂತೆ ಬಹುತೇಕ ಹಿರಿಯ ಸದಸ್ಯರಿಂದ ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ:  ನನ್ನ ದಾರಿ ತಪ್ಪಿಸಲು ಈಶ್ವರಪ್ಪ ಜಗಳ ಮಾಡುಬೇಕು ಅಂತಾ ಬರ್ತಾರೆ: ಸಿದ್ದರಾಮಯ್ಯ ಹಾಸ್ಯ ಚಟಾಕಿ

    ಇನ್ನು ಅರಣ್ಯ ಸಚಿವ ಉಮೇಶ್ ಕತ್ತಿಗೆ ಸದನದಲ್ಲಿ ಆಡಳಿತ ಪಕ್ಷದ ಶಾಸಕ ಕಳಕಪ್ಪ ಬಂಡಿ ಟಕ್ಕರ್ ಕೊಟ್ಟರು. ಅರಣ್ಯ ಇಲಾಖೆ ಬ್ರಿಟಿಷರ ಪಳೆಯುಳಿಕೆಯಾಗಿದೆ. ಅರಣ್ಯ ಸಚಿವರಿಗೆ ಇಲಾಖೆಯ ಬಗ್ಗೆ ಮಾಹಿತಿ ಇಲ್ಲ, ಅವರು ಬಯಲು ಸೀಮೆಯವರು ಅಂತಾ ಕಳಕಪ್ಪ ಬಂಡಿ ಕಿಡಿಕಾರಿದರು.

    ಆಗ ಸ್ಪೀಕರ್ ಮಧ್ಯಪ್ರವೇಶ ಮಾಡಿ ಇಲ್ಲ, ಅವರು ಖಾನಾಪುರ ಕಡೆ ಅರಣ್ಯ ನೋಡಿದ್ದಾರೆ ಎಂದರು. ಅಂತಿಮವಾಗಿ ಪ್ರಕರಣದ ಬಗ್ಗೆ ಸದನಕ್ಕೆ ಸಚಿವ ಮಾಧುಸ್ವಾಮಿ ಉತ್ತರ ಕೊಟ್ಟರು. ರೈತರಿಗೆ ಸಮಸ್ಯೆ ಆಗುತ್ತಿದೆ ನಿಜ. ಅರಣ್ಯ ಕಾಯ್ದೆಗೆ ತಿದ್ದುಪಡಿ ಕಾಯ್ದೆ ತರುವ ಕೆಲಸ ಮಾಡುತ್ತೇವೆ. ಅರಣ್ಯ ಇಲಾಖೆ ಕಟಾವು ಮಾಡಿರುವ ರೈತರ ಬೆಳೆಗೆ ಪರಿಹಾರ ಕೊಡುತ್ತೇವೆ. ಸರ್ಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದು ಸಚಿವ ಮಾಧುಸ್ವಾಮಿ ಭರವಸೆ ನೀಡಿದರು. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ

  • ಕರ್ನಾಟಕಲ್ಲಿ ಇತಿಹಾಸ ಸೃಷ್ಟಿಸಿದ ಸ್ಪೀಕರ್ ಕಾಗೇರಿ

    ಕರ್ನಾಟಕಲ್ಲಿ ಇತಿಹಾಸ ಸೃಷ್ಟಿಸಿದ ಸ್ಪೀಕರ್ ಕಾಗೇರಿ

    ಬೆಂಗಳೂರು: ಅಧಿಕೃತವಾಗಿ ಸಲಹೆಗಾರರನ್ನು ನೇಮಿಸಿಕೊಳ್ಳುವ ಮೂಲಕ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

    ಇದೇ ಮೊದಲ ಬಾರಿಗೆ ಸ್ಪೀಕರ್ ಕಾಗೇರಿ ಹೊಸ ಸಂಪ್ರದಾಯ ಹುಟ್ಟುಹಾಕಿದ್ದಾರೆ. ಈ ಮೂಲಕ ವಿಧಾನಸಭೆ ನಿವೃತ್ತ ಕಾರ್ಯದರ್ಶಿಯನ್ನು ಈಗ ವಿಧಾನಸಭೆ ಸ್ಪೀಕರ್ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಈ ಬೆಳವಣಿಗೆ ಭಾರೀ ಚರ್ಚೆಗೆ ಕಾರಣವಾಗಿದೆ.

    ಸ್ಪೀಕರ್ ಕಾಗೇರಿ ಅವರು ವಿಧಾನಸಭೆ ನಿವೃತ್ತ ಕಾರ್ಯದರ್ಶಿ ಓಂಪ್ರಕಾಶ್ ಅವರನ್ನು ಅಧಿಕೃತವಾಗಿ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ಈ ಹಿಂದೆ ಓಂ ಪ್ರಕಾಶ್ ಅವರನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತು ಎರಡಕ್ಕೂ ಮಹಾ ಕಾರ್ಯದರ್ಶಿ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಇದಕ್ಕೆ ಸಚಿವಾಲಯ ಸಿಬ್ಬಂದಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಈ ನಿರ್ಧಾರವನ್ನು ಸರ್ಕಾರದ ಕೈಬಿಟ್ಟಿತ್ತು. ಆದರೆ ಈಗ ಸ್ಪೀಕರ್ ಓಂ ಪ್ರಕಾಶ್ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವ ಬಗ್ಗೆ ಚರ್ಚೆ ನಡೆದಿದೆ.

    ಸ್ಪೀಕರ್ ಕಾಗೇರಿ ನಿರ್ಧಾರಕ್ಕೆ ವಿಧಾನಸಭೆ ಸಚಿವಾಲಯದಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ವಿಧಾನಸಭೆ ಸ್ಪೀಕರ್ ಸಲಹೆಗಾರರಿಗೆ ಮಣೆ ಹಾಕಿ, ಹಾಲಿ ಅಧಿಕಾರಿಗಳ ಕಡಗಣನೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಸ್ಪೀಕರ್ ಕಾಗೇರಿ 10 ದಿನಗಳ ಹಿಂದೆ ಸಲಹೆಗಾರರನ್ನ ನೇಮಕ ಮಾಡಿಕೊಂಡಿದ್ದಾರೆ. ಈ ನಿರ್ಧಾರಕ್ಕೆ ಆರ್‍ಎಸ್‍ಎಸ್ ಸೂಚನೆ ನೀಡಿದ್ಯಾ ಅಥವಾ ಸ್ಪೀಕರ್ ಕಾಗೇರಿ ಅವರ ವೈಯುಕ್ತಿಕ ನಿರ್ಧಾರವೋ ಎಂಬ ಪ್ರಶ್ನೆ ಶುರುವಾಗಿದೆ.

    ಕಾಗೇರಿ ಅವರು ನಿವೃತ್ತ ಕಾರ್ಯದರ್ಶಿಗಳನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವುದಕ್ಕೆ ವಿಧಾನಸಭೆ ಸಚಿವಾಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಇಂತಹ ನಿರ್ಧಾರದ ಮೂಲಕ ಅವರು ದುಂದುವೆಚ್ಚಕ್ಕೆ ಮುಂದಾದ್ರಾ? ಅವರಿಗೆ ಅನುಭವದ ಕೊರತೆ ಕಾಡುತ್ತಿದೆಯಾ? ಅಥವಾ ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಮೇಲಿನ ಅಪನಂಬಿಕೆಯೋ ಎಂಬ ಪ್ರಶ್ನೆ ಮೂಡಿವೆ.

  • ಕೇವಲ ಬುದ್ಧಿವಂತಿಕೆ ಪ್ರದರ್ಶನಕ್ಕೆ ಸ್ಪೀಕರ್ ಚೇರ್ ಇಲ್ಲ: ರಮೇಶ್ ಕುಮಾರ್‌ಗೆ ಕಾಗೇರಿ ಟಾಂಗ್

    ಕೇವಲ ಬುದ್ಧಿವಂತಿಕೆ ಪ್ರದರ್ಶನಕ್ಕೆ ಸ್ಪೀಕರ್ ಚೇರ್ ಇಲ್ಲ: ರಮೇಶ್ ಕುಮಾರ್‌ಗೆ ಕಾಗೇರಿ ಟಾಂಗ್

    – ಮಾಜಿ-ಹಾಲಿ ಸ್ಪೀಕರ್ ವಾಕ್ ಸಮರ
    – ರಮೇಶ್ ಕುಮಾರ್ ಏನ್ ಹೇಳುತ್ತಾರೋ ಅದೇ ಸರ್ವಶ್ರೇಷ್ಠ
    – ಸದನದಲ್ಲಿ ಕಿಡಿಕಾರಿದ ಈಶ್ವರಪ್ಪ

    ಬೆಂಗಳೂರು: ವಿಧಾನಸಭಾ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಹಾಲಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಧ್ಯೆ ವಾಕ್ ಸಮರವೇ ನಡೆಯಿತು.

    ನೆರೆ ಪರಿಹಾರ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುದೀರ್ಘ ಚರ್ಚೆ ನಡೆಸಿದರು. ಇದರಿಂದಾಗಿ ಸ್ಪೀಕರ್ ಕಾಗೇರಿ ಆಗಾಗ ಸಾಕು ಚರ್ಚೆ ನಿಲ್ಲಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪದ ಸಿದ್ದರಾಮಯ್ಯ ಅವರು ಮಾತು ಮುಂದುವರಿಸಿದರು.

    ಸಂತ್ರಸ್ತರ ನೋವನ್ನು ಅರ್ಥ ಮಾಡಿಕೊಳ್ಳುವ ತಾಯಿ ಹೃದಯದ ನಾಯಕರು ಬೇಕಾಗಿದ್ದಾರೆ. ಆದಷ್ಟು ಬೇಗ ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಮನೆ ನೀಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಆದರೆ ಸ್ಪೀಕರ್ ಕಾಗೇರಿ ಅವರು ಮತ್ತೆ ಸಾಕು ನಿಮ್ಮ ಮಾತು ನಿಲ್ಲಿಸಿ ಎಂದು ಸೂಚನೆ ನೀಡಿದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ, ನೀವು ಈ ರೀತಿ ಮಾತು ನಿಲ್ಲಿಸಿ ಎಂದು ಪದೇ ಪದೇ ಹೇಳುವುದು ಸರಿಯಲ್ಲ. ನಾನು ವಿಪಕ್ಷ ನಾಯಕ ಕೊನೆಗೆ ಬಂದಿದ್ದೇನೆ, ಮಾತನಾಡುತ್ತೇನೆ ಅಂತ ಗುಡುಗಿದರು.

    ಸರಿ, ಸರಿ ಎನ್ನುತ್ತಲೇ ಸ್ಪೀಕರ್, ನೀವು ಇಷ್ಟುದ್ದ ಮಾತನಾಡಬಾರದು ಎಂದು ಹೇಳಿದರು. ಸ್ಪೀಕರ್ ಕಾಗೇರಿ ಅವರನಡೆಯಿಂದ ಗರಂ ಆದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯನವರೇ ಸ್ಪೀಕರ್ ಅವರಿಂದ ಕುಳಿತುಕೊಳ್ಳುವಂತೆ ಆದೇಶ ಬಂದರೇ ಸಾಕು ಕುಳಿತುಬಿಡಿ. ಇದು ಸರಿಯಾದ ವಿಧಾನ ಎಂದು ಕುಟುಕಿದರು.

    ಸ್ಪೀಕರ್ ಚೇರ್‍ಗೆ ನಮ್ರತೆ ಇರುತ್ತದೆ. ನೀವು ಈ ರೀತಿ ಕುಳಿತುಕೊಳ್ಳಿ ಅಂತ ಪದೇ ಪದೇ ಹೇಳುವುದು ಸರಿಯಲ್ಲ ಎಂದು ರಮೇಶ್ ಕುಮಾರ್ ಧ್ವನಿ ಏರಿಸಿದರು. ಆಗ ಕಾಗೇರಿ, ಸ್ಪೀಕರ್ ಸ್ಥಾನದಿಂದ ಬಂದ ಸೂಚನೆಯನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಿರುಗೇಟು ನೀಡಿದರು. ವಾಕ್ ಸಮರ ಜೋರಾಗುತ್ತಿದ್ದಂತೆ, ನಾನು ಯಾವತ್ತೂ ಯಾವುದೇ ವಿರೋಧ ಪಕ್ಷದ ನಾಯಕರಿಗೂ ಮಾತು ಮುಗಿಸಿ ಎಂದು ಒತ್ತಾಯ ಮಾಡಿಲ್ಲ ಅಂತ ರಮೇಶ್ ಕುಮಾರ್ ಕುಟುಕಿದರು.

    ಹೌದ.. ಹೌದು.. ಇಲ್ಲಿ ಕುಳಿತವರು ಯಾವ ಸಂದರ್ಭದಲ್ಲಿ ವಿಪಕ್ಷ ನಾಯಕರನ್ನು ಎಷ್ಟು ಬಾರಿ ಹೇಳಿ ಕೂರಿಸಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ. ಕೇವಲ ಬುದ್ಧಿವಂತಿಕೆ ಪ್ರದರ್ಶನ ಮಾಡಲಿಕ್ಕೆ ಸ್ಪೀಕರ್ ಚೇರ್ ಇಲ್ಲ. ಇಲ್ಲಿ ಬಂದು ಯಾರು ಎಷ್ಟು ಬುದ್ಧಿವಂತಿಕೆ ತೋರಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ ಎಂದು ಕಾಗೇರಿ, ರಮೇಶ್ ಕುಮಾರ್ ಅವರಿಗೆ ಟಾಂಗ್ ಕೊಟ್ಟರು.

    ಈ ಬೆಳವಣಿಗೆಯಿಂದಾಗಿ ಸದನದಲ್ಲಿ ಗಲಾಟೆ ಆರಂಭವಾಯಿತು. ತಕ್ಷಣವೇ ಎದ್ದು ನಿಂತ ಸಚಿವ ಕೆ.ಎಸ್.ಈಶ್ವರಪ್ಪ, ರಮೇಶ್ ಕುಮಾರ್ ಏನು ಹೇಳುತ್ತಾರೋ ಅದೇ ಸರ್ವಶ್ರೇಷ್ಠ. ಅಧ್ಯಕ್ಷ ಸ್ಥಾನದಲ್ಲಿ ಕುಳಿತಾಗ ಒಂದು ಮಾತು, ಕೆಳಗೆ ಕುಳಿತಾಗ ಮತ್ತೊಂದು ಮಾತು ಎಂದು ಕಿಡಿಕಾರಿದರು. ಈ ಮಧ್ಯೆ ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯನವರೇ ನೀವು ಮಾತು ಮುಂದುವರಿಸಿ, ನನಗೆ ಸಮಯ ಮುಖ್ಯ ಎಂದು ಸೂಚನೆ ನೀಡಿದರು.

    ಅದು ವಿಪಕ್ಷ ಸ್ಥಾನವೇ ಹೊರತು ಸಿದ್ದರಾಮಯ್ಯ ಅಲ್ಲ. ಈ ರೀತಿ ಸಮಯ ಹಾಗೂ ಆಮೇಲೆ ಮಾತನಾಡಿ ಎನ್ನುವುದು ಸರಿಲ್ಲ ಎಂದು ರಮೇಶ್ ಕುಮಾರ್ ಮತ್ತೆ ಗುಡುಗಿದರು. ಇದರಿಂದ ಮತ್ತಷ್ಟು ಕೋಪಗೊಂಡ ಸ್ಪೀಕರ್, ರಮೇಶ್ ಕುಮಾರ್ ಅವರೇ ನೀವು ಅಲ್ಲಿ ಕುಳಿತು ಹೇಳಬೇಡಿ. ನಿಯಮಾವಳಿ ಪುಸ್ತಕ ನನ್ನ ಬಳಿಯೇ ಇದೆ. ಎಲ್ಲವನ್ನೂ ನಿಮಗೆ ಹೇಳಿದ್ದೇನೆ ಅಂತ ಯಾಕೆ ಹೆಗಲು ತಟ್ಟಿಕೊಳ್ಳುತ್ತೀರಿ ಎಂದು ತಿರುಗೇಟು ನೀಡಿದರು.

    ಸಿದ್ದರಾಮಯ್ಯನವರೇ ನೀವು ಮಾತನಾಡಿ. ನೀವು ಒಬ್ಬರೇ 5 ಗಂಟೆಗಳ ಕಾಲ ಮಾತನಾಡಿದರೆ ಉಳಿದವರಿಗೆ ಅವಕಾಶ ಸಿಗುತ್ತಾ? ಮಾತನಾಡಬೇಕು ಎನ್ನುವವರಿಗೆ ಏನು ಹೇಳಲಿ ಎಂದು ಸ್ಪೀಕರ್ ಅಸಮಾಧಾನ ಹೊರ ಹಾಕಿದರು.

  • ವಿಧಾನಸಭೆ ಅಧಿವೇಶನ- ಖಾಸಗಿ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ

    ವಿಧಾನಸಭೆ ಅಧಿವೇಶನ- ಖಾಸಗಿ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ

    – ಕಾಂಗ್ರೆಸ್ ಅವಧಿಯಲ್ಲಿ ವಿರೋಧಿಸಿದ್ದ ಬಿಜೆಪಿ
    – ಸ್ಪೀಕರ್ ಕಾಗೇರಿ ನಡೆಗೆ ಸಿಎಂ ಅಸಮಾಧಾನ

    ಬೆಂಗಳೂರು: ವಿಧಾನಸಭೆ ಅಧಿವೇಶನಕ್ಕೆ ಖಾಸಗಿ ದೃಶ್ಯ ಮಾಧ್ಯಮಗಳಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಬಂಧ ಹೇರಿದ್ದಾರೆ.

    ವಿಧಾನಸೌಧದಲ್ಲಿ ಗುರುವಾರದಿಂದ 3 ದಿನ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಖಾಸಗಿ ದೃಶ್ಯ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿ ಸ್ಪೀಕರ್ ಕಾಗೇರಿ ಆದೇಶ ಹೊರಡಿಸಿದ್ದಾರೆ. ಸ್ಪೀಕರ್ ಅವರ ಈ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಅಧಿವೇಶನ ನಡೆಸುತ್ತಿದೆ. ಬೆಳಗಾವಿಯಲ್ಲಿ ನಡೆಸಬೇಕಾದ ಅಧಿವೇಶನವನ್ನು ಪ್ರವಾಹದ ನೆಪವೊಡ್ಡಿ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗುತ್ತಿದ್ದ ಪ್ರತಿಪಕ್ಷಗಳಿಗೆ ಈಗ ಮತ್ತೊಂದು ಅಸ್ತ್ರ ಸಿಕ್ಕಿದೆ.

    ಜನಪ್ರತಿನಿಧಿಗಳ ಸೋಮಾರಿತನ ಬಯಲುಮಾಡುವುದೇ ತಪ್ಪಾ? ಕಲಾಪದ ವೇಳೆ ನಿದ್ರೆ ಮಾಡುವುದನ್ನು ತೋರಿಸುವುದೆ ತಪ್ಪಾ? ಸದನದಲ್ಲಿ ಬ್ಲೂ ಫಿಲ್ಮ್ ನೋಡಿದ್ದನ್ನು ಹಾಗೂ ಕಿತ್ತಾಡೋದನ್ನು ತೋರಿಸಿದ್ದೇ ತಪ್ಪಾ? ಮಾಧ್ಯಮಗಳ ಮೇಲ್ಯಾಕೆ ಸ್ಪೀಕರ್‌ಗೆ ಈ ಕೋಪ ಎನ್ನುವ ಪ್ರಶ್ನೆ ಎದ್ದಿದೆ.

    ಈ ಹಿಂದೆಯೂ ಕೂಡ ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ ವಿಧಾನಸೌಧ ಕಲಾಪದಲ್ಲಿ ದೃಶ್ಯ ಮಾಧ್ಯಮ ನಿರ್ಬಂಧಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ಅಂದು ಕೂಡ ವಿರೋಧ ಪಕ್ಷ ಹಾಗೂ ಮಾಧ್ಯಮಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿಂತನೆಯನ್ನು ಕೈಬಿಡಲಾಗಿತ್ತು. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಧಾನಸೌಧ ಕಲಾಪದಲ್ಲಿ ದೃಶ್ಯ ಮಾಧ್ಯಮ ನಿರ್ಬಂಧಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ಬಿಜೆಪಿ ನಾಯಕರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನಕ್ಕೆ ದೃಶ್ಯ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ.

    ನಮ್ಮವರಿಗೆ ನಾನು ಅಧಿಕಾರ ನಡೆಸುವುದು ಇಷ್ಟ ಇಲ್ಲವಾ? ನಮ್ಮವರೇ ನಮ್ಮ ಮೇಲೆ ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ಮಾಜಿ ಸಿಂ ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಮಾಧ್ಯಮ ನಿರ್ಬಂಧ ಪ್ರಸ್ತಾವನೆಯನ್ನು ಬಿಜೆಪಿ ವಿರೋಧಿಸಿತ್ತು. ಈಗ ಬಹಳಷ್ಟು ಸಮಸ್ಯೆಗಳು ಇವೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ನಮ್ಮ ಸವಾರಿ ಬೇಕೇ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗರಂ ಆಗಿದ್ದಾರೆ ಎನ್ನಲಾಗಿದೆ.

    ನಾವು ವಿರೋಧ ಪಕ್ಷಗಳ ಎದುರಿಸಬೇಕು, ಆ ಕಡೆ ಗಮನ ಕೊಡಬೇಕು. ಅದನ್ನು ಬಿಟ್ಟು ನಮ್ಮ ಸರ್ಕಾರದ ಅವಧಿಯಲ್ಲೇ ಬದಲಾವಣೆ ಹೆಸರಿನಲ್ಲಿ ನಿರ್ಬಂಧ ಸರಿಯಿಲ್ಲ ಎಂದು ಸಿಎಂ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪಕ್ಷದ ಕೆಲ ಹಿರಿಯ ನಾಯಕರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.