Tag: ವಿಶ್ವೇಶತೀರ್ಥ ಸ್ವಾಮೀಜಿ

  • ಪೇಜಾವರಶ್ರೀಗಳ 60ರ ದಶಕದ ಕ್ರಾಂತಿ ನೆನೆದ ಜನ

    ಪೇಜಾವರಶ್ರೀಗಳ 60ರ ದಶಕದ ಕ್ರಾಂತಿ ನೆನೆದ ಜನ

    ಉಡುಪಿ: ಅಸ್ಪೃಶ್ಯತೆ ನಿವಾರಣೆ ಉದ್ದೇಶ ಇಟ್ಟುಕೊಂಡು ಪೇಜಾವರಶ್ರೀಗಳು ದಲಿತ ಕೇರಿಗೆ ಪ್ರವೇಶ ಮಾಡಿದ್ದು, ಬ್ರಾಹ್ಮಣ ವಲಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. 1960ರ ಈ ಸಾಮಾಜಿಕ ಕ್ರಾಂತಿಯನ್ನು ನೆನೆದು ದಲಿತ ವಠಾರ ಹೆಮ್ಮೆ ವ್ಯಕ್ತಪಡಿಸಿದೆ.

    ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ 60ರ ದಶಕದಲ್ಲಿ ಮಾಡಿದ ಕ್ರಾಂತಿ ದೇಶದಲ್ಲೇ ಸಂಚಲನವನ್ನುಂಟು ಮಾಡಿತ್ತು. ಕೇರಿ ಪ್ರವೇಶ, ಪಾದಪೂಜೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ದಲಿತರಿಗೆ ಬ್ರಾಹ್ಮಣ ದೀಕ್ಷೆ ಕೂಡಾ ಶ್ರೀಗಳು ಮಾಡಿದ ಕ್ರಾಂತಿಗಳಲ್ಲೊಂದು. ವಿಶ್ವೇಶತೀರ್ಥ ಸ್ವಾಮೀಜಿ ಆರಾಧನೆಯನ್ನು ಕರಂಬಳ್ಳಿಯ ದಲಿತ ಬಡಾವಣೆಯಲ್ಲಿ ಆಚರಿಸಲಾಯ್ತು.

    ಪೇಜಾವರಶ್ರೀ ಭಾವಚಿತ್ರ ಇಟ್ಟು ಶ್ರೀಗಳ ಹೋರಾಟ, ದಲಿತ ಕೇರಿಗೆ ಹೋದ ನೆನಪುಗಳನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಲಾಯಿತು. ಸ್ಥಳೀಯರಾದ ಭುಜಂಗ ಮಾತನಾಡಿ, ಪೇಜಾವರ ಸ್ವಾಮೀಜಿ ಬ್ರಾಹ್ಮಣರಾಗಿದ್ದರೂ ನಮ್ಮ ವಠಾರಕ್ಕೆ ಬಂದಿದ್ದರು. ನಮ್ಮ ಪುಣ್ಯ ಎಂದು ಇದನ್ನು ಭಾವಿಸುತ್ತೇವೆ. ಇವತ್ತು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಶೀರ್ವಾದ ನಮ್ಮ ಜೊತೆ ಇದೆ ಎಂದು ಹೇಳಿದರು.

    ಕರಂಬಳ್ಳಿ ವ್ಯಾಪ್ತಿಯ ಹಿಂದುಳಿದ, ದಲಿತ, ಕೊರಗ, ಸಮುದಾಯದ ನೂರಾರು ಜನ ಶ್ರೀಗಳಿಗೆ ಪುಷ್ಪಾಂಜಲಿ ಅರ್ಪಣೆ ಮಾಡಿದರು. ಆರಾಧನೆ ಲೆಕ್ಕದ ವಿಶೇಷ ಭೋಜನ ಸ್ವೀಕರಿಸಿದರು. ಪೇಜಾವರಶ್ರೀ ಕಾರ್ಯಕ್ರಮ ಆಯೋಜನೆಯಾದ ಸಂದರ್ಭದಲ್ಲಿ ಈ ಭಾಗಕ್ಕೆ ಆಗಾಗ ಭೇಟಿ ನೀಡುತ್ತಿದ್ದರು ಎಂದು ಇಲ್ಲಿನ ಜನ ಸ್ಮರಿಸುತ್ತಾರೆ.

  • ವಯಸ್ಸು 90 ಆದ್ರೂ ದೇಶ ಸುತ್ತುತ್ತಿದ್ದದ್ದು ಯಾಕೆ?- ಕೊನೆಯ ಭಾಷಣದಲ್ಲಿ ಸತ್ಯ ಬಿಚ್ಚಿಟ್ಟಿದ್ದ ಪೇಜಾವರ ಶ್ರೀಗಳು

    ವಯಸ್ಸು 90 ಆದ್ರೂ ದೇಶ ಸುತ್ತುತ್ತಿದ್ದದ್ದು ಯಾಕೆ?- ಕೊನೆಯ ಭಾಷಣದಲ್ಲಿ ಸತ್ಯ ಬಿಚ್ಚಿಟ್ಟಿದ್ದ ಪೇಜಾವರ ಶ್ರೀಗಳು

    ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ಭಾನುವಾರ ಕೃಷ್ಣೈಕ್ಯರಾಗಿದ್ದಾರೆ. ಅನಾರೋಗ್ಯಕ್ಕೀಡಾಗುವುದಕ್ಕೂ ಮೊದಲು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಶ್ರೀಗಳು, ವಯಸ್ಸು 90 ಆದರೂ ದೇಶ ಸುತ್ತುತ್ತಿರೋದು ಯಾಕೆ ಎಂಬುದನ್ನು ತಮ್ಮ ಕೊನೆಯ ಭಾಷಣದಲ್ಲಿ ಬಿಚ್ಚಿಟ್ಟಿದ್ದರು.

    ಡಿಸೆಂಬರ್ 19 ರಂದು ಪೇಜಾವರಶ್ರೀ ಸಾಕಷ್ಟು ಓಡಾಟ ಮಾಡಿದ್ದರು. ಉಡುಪಿ ಪಾಜಕ ಆನಂದ ತೀರ್ಥ ಸಂಸ್ಥೆಯ ವಾರ್ಷಿಕೋತ್ಸವ ಪೇಜಾವರರ ಕೊನೆಯ ಸಭಾ ಕಾರ್ಯಕ್ರಮ. ಅಲ್ಲಿ ಮಾತನಾಡಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಭಾಷೆ, ಸಂಸ್ಕೃತಿ ಮತ್ತು ಜಾತ್ಯಾತೀತತೆ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: ಮುಸ್ಲಿಂ ಅಧಿಕಾರಿಯ ಭಕ್ತಿಯ ಹಠಕ್ಕೆ ಸೋತು ಪ್ರಾಣದೇವರ ಪ್ರತಿಷ್ಠಾಪನೆ ಮಾಡಿದ್ದ ಪೇಜಾವರ ಶ್ರೀ

    ಧಾರ್ಮಿಕ- ಲೌಕಿಕ ಶಿಕ್ಷಣದ ಅವಕಾಶ ಕೊಡುತ್ತೇವೆ. ಇದನ್ನು ಎಲ್ಲೆಡೆ ಸಾರಲು ವಯಸ್ಸು 90 ಆದರೂ ನಾನು ಇಡೀ ದೇಶ ಸುತ್ತುತ್ತಿದ್ದೇನೆ ಎಂದು ಪೇಜಾವರಶ್ರೀ ಕೊನೆಯ ಕಿವಿಮಾತು ಹೇಳಿದ್ದರು.

    ಅಲ್ಲದೆ ರಾಜ್ಯಭಾಷೆ ತಾಯಿ ಇದ್ದಂತೆ. ಕನ್ನಡವನ್ನು ಯಾವತ್ತಿಗೂ ಮರೆಯಬಾರದು. ಆದರೆ ನಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನ ಇಟ್ಟುಕೊಳ್ಳಲೇಬೇಕು. ಮಾತೃಭಾಷೆ ಕಲಿಯಿರಿ, ಜೊತೆಗೆ ಉಳಿದ ಭಾಷೆಗಳನ್ನೂ ಕಲಿಯಿರಿ ಮತ್ತು ಕಲಿಸಿರಿ ಎಂದು ಮಕ್ಕಳಿಗೆ, ಪೋಷಕರಿಗೆ ತಿಳಿಸಿದ್ದರು. ಇದನ್ನೂ ಓದಿ: ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವು

    ಕೃಷ್ಣನಿಗೆ ಯಶೋಧೆ ತಾಯಿ, ದೇವಕಿಯೂ ತಾಯಿ. ಹಾಗೆಯೇ ರಾಜ್ಯ ಭಾಷೆಯನ್ನೂ ಕಲಿಯಿರಿ, ಜೊತೆಗೆ ಆಂಗ್ಲ ಭಾಷೆಯನ್ನೂ ಕಲಿಯಿರಿ. ಮಕ್ಕಳಿಗೆ ಭಾಷೆಯ ಮೇಲೆ ಪ್ರೀತಿ ಬೆಳೆಸಿ ಎಂದಿದ್ದಾರೆ. ನಮ್ಮ ಸಂಸ್ಕೃತಿ, ಶಾಸ್ತ್ರ ಜೊತೆ ಲೌಕಿಕ ವಿದ್ಯಾಭ್ಯಾಸ ಮುಖ್ಯ. ಹಿಂದೂಗಳಿಗೆ ರಾಮಾಯಣ, ಮಹಾಭಾರತ ಕಲಿಸುತ್ತೇವೆ. ಮಕ್ಕಳಿಗೆ ತತ್ವಜ್ಞಾನ, ಸಂಸ್ಕೃತಿ ಅವಶ್ಯಕ. ಕ್ರಿಶ್ಚಿಯನ್, ಮುಸಲ್ಮಾನ ಮಕ್ಕಳಿಗೆ ಧಾರ್ಮಿಕ ಶಿಕ್ಷಣಕ್ಕೆ ಅವಕಾಶ ಕೊಡುತ್ತೇವೆ. ಎಲ್ಲಾ ವರ್ಗಕ್ಕೂ ಧಾರ್ಮಿಕ ಶಿಕ್ಷಣ ಕಲಿಸುತ್ತೇವೆ ಎಂದಿದ್ದರು.

    ಒಟ್ಟಿನಲ್ಲಿ ಪೋಷಕರಿಗೆ ಈ ಕಿವಿಮಾತು ಹೇಳಿದ್ದ ಪೇಜಾವರಶ್ರೀ ಇದೀಗ ಇಹಲೋಕ ತ್ಯಜಿಸಿ ಹರಿಪಾದ ಸೇರಿದ್ದು, ಭಕ್ತವೃಂದ ಕಣ್ಣೀರು ಹಾಕಿದೆ. ಇದನ್ನೂ ಓದಿ: ಲಾಸ್ಟ್ ಪ್ರೋಗ್ರಾಂನಲ್ಲಿ ಮಕ್ಕಳ ಜೊತೆ ಪೇಜಾವರ ಶ್ರೀಗಳು

  • ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜಕೀಯ ಪ್ರವೇಶಕ್ಕೆ ಬೆಂಬಲಿಸಿದ್ದ ಪೇಜಾವರ ಶ್ರೀಗಳು

    ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜಕೀಯ ಪ್ರವೇಶಕ್ಕೆ ಬೆಂಬಲಿಸಿದ್ದ ಪೇಜಾವರ ಶ್ರೀಗಳು

    – ಕಣ್ಣೀರಿಟ್ಟ ಮಾದಾರ ಚೆನ್ನಯ್ಯ ಸ್ವಾಮೀಜಿ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಮಠಗಳ ನೆಲೆವೀಡು. ಇದು ವಿವಿಧ ಸಮುದಾಯಗಳ ಗುರು ಪೀಠಗಳಿರುವ ತವರೂರು. ಇಲ್ಲಿ ಪ್ರಭಾವಿ ಮಠವೆನಿಸಿರೋ ಶ್ರೀ ಮಾದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳೊಂದಿಗೆ ಉಡುಪಿಯ ಕೃಷ್ಣ ಮಠದ ಪೇಜಾವರ ಶ್ರೀಗಳು ಅವಿನಾಭಾವ ಸಂಬಂಧ ಹೊಂದಿದ್ದರು. ಹೀಗಾಗಿ ಇಂದು ಅವರ ಅಗಲಿಕೆಯಿಂದಾಗಿ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ವೈಯುಕ್ತಿಕವಾಗಿ ಪೇಜಾವರ ಶ್ರೀಗಳು ತಮ್ಮ ಏಳಿಗೆಗಾಗಿ ಬೆಂಬಲಿಸಿದ ಕ್ಷಣ ನೆನೆದು ಮಾದಾರ ಚೆನ್ನಯ್ಯ ಸ್ವಾಮೀಜಿ ಕಣ್ಣೀರಿಟ್ಟಿದ್ದಾರೆ.

    ಸಮಾಜದಲ್ಲಿರುವ ಮೇಲು ಕೀಳು ಸರಿಪಡಿಸುವ ಬಗ್ಗೆ ಮೊದಲ ಬಾರಿಗೆ 2008ರಲ್ಲಿ ದೊಡ್ಡಮಟ್ಟದಲ್ಲಿ ದನಿ ಎತ್ತಿದ್ದ ಶ್ರೀಗಳು, ಸಮಾನತೆಯ ಚಳುವಳಿಗೂ ತಮ್ಮನ್ನು ಸಾಕ್ಷೀಕರಿಸಿದ್ದರು. ಅಲ್ಲದೇ ಮೈಸೂರಿನ ಸಾಮರಸ್ಯ ಯಾತ್ರೆಯಿಂದಾಗಿ ಪೇಜಾವರಶ್ರೀಗಳ ಜೊತೆ ನಮಗೆ ಬಾಂಧವ್ಯ ಮೂಡಿದ್ದೂ, ದಲಿತರನ್ನು ಅಪ್ಪಿಕೊಳ್ಳುವ ಚಳುವಳಿಗೆ ಟೀಕೆ ಎದುರಿಸಿದರೂ ಸಹ ಅವರು ಎದೆಗುಂದಲಿಲ್ಲ. ದಲಿತರನ್ನು ಓಲೈಸುವ ನಾಟಕೀಯ ಬೆಳವಣಿಗೆ ಎಂದು ವಿಚಾರವಾದಿಗಳಿಂದ ಆರೋಪ ಕೇಳಿಬಂದರು ಸಹ ಅವರ ನಡೆ ಕೈಬಿಡಲಿಲ್ಲ ಎಂದು ದಲಿತರೊಂದಿಗೆ ಸ್ವಾಮೀಜಿ ನಡೆದು ಬಂದ ದಾರಿಯನ್ನು ಮಾದಾರ ಚೆನ್ನಯ್ಯ ಸ್ವಾಮೀಜಿ ನೆನೆದರು.

    ಪೇಜಾವರ ಶ್ರೀಗಳಿಗೆ ಪುತ್ರನಂತೆ: ಪೇಜಾವರ ಸ್ವಾಮೀಜಿ ನಮ್ಮಿಂದ ಬೌದ್ಧಿಕವಾಗಿ ದೂರಾಗಿರಬಹುದು ಆದರೆ ಅವರ ತತ್ವ ಆದರ್ಶ ನಮ್ಮ ಜತೆ ಇರುತ್ತವೆ. ನಾನು ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳ ಪಾಲಿಗೆ ನಾನು ಪುತ್ರನಂತೆ ಕಾಣುತ್ತಿದ್ದೆ. ಪೇಜಾವರ ಶ್ರೀಗಳೊಂದಿಗೆ ನಮ್ಮ ಒಡನಾಟ ಕೇವಲ ಹತ್ತು ವರ್ಷದದಲ್ಲೇ ಅತಿ ಸಾಮಿಪ್ಯವಾಗಿಸಿತ್ತು. ಉಡುಪಿ ಮಠದ ಭಕ್ತರಂತೆ ನಾನು ಸಹ ನಷ್ಟ ಅನುಭವಿಸುತ್ತಿದ್ದೇನೆ ಎಂದರು.

    ಪೇಜಾವರ ಶ್ರೀಗಳು ನಿಸ್ವಾರ್ಥ ಭಾವದವರಾಗಿದ್ದೂ, ಸದಾ ಎಲ್ಲರಿಗೂ ಒಳಿತನ್ನೇ ಮಾಡುವ ಭಾವದವರಾಗಿದ್ದರು. ಹಾಗೆಯೇ ವೈಯಕ್ತಿಕವಾಗಿ ನನ್ನ ಏಳ್ಗೆಯನ್ನು ಸಹ ಪೇಜಾವರ ಶ್ರೀಗಳು ಬಯಸುತ್ತಿದ್ದರು. ಈ ಹಿಂದೆ ಮಾದರ ಚೆನ್ನಯ್ಯ ಸ್ವಾಮೀಜಿ ರಾಜಕೀಯ ಪ್ರವೇಶದ ಮಾಡುತ್ತಾರೆಂಬ ಸುಳ್ಳು ವದಂತಿ ಹರಡಿದ್ದಾಗ ನನ್ನೊಂದಿಗೆ ಮಾತನಾಡಿದ್ದರು. ಅಲ್ಲದೇ ಒಂದು ವೇಳೆ ನೀನು ರಾಜಕೀಯ ಪ್ರವೇಶಿಸುವ ಆಕಾಂಕ್ಷೆ ಇದ್ದರೆ ತಿಳಿಸು, ನಾನೇ ಮೇಲ್ಮಟ್ಟದಲ್ಲಿ ಮಾತಾನಾಡುತ್ತೇನೆ ಎಂದಿದ್ದರು. ಆಗ ನಾನು ರಾಜಕೀಯ ಪ್ರವೇಶದ ಬಗ್ಗೆ ನಿರಾಕರಿಸಿದಾಗ ಧಾರ್ಮಿಕವಾಗಿ ಮಠವನ್ನು ಮುನ್ನಡೆಸಲು ಸೂಚಿಸಿದ್ದರು. ಅಧಿಕೃತವಾಗಿ ಚಿತ್ರದುರ್ಗದಲ್ಲಿರುವ ನಮ್ಮ ಮಠಕ್ಕೆ ಭೇಟಿ ನೀಡುವ ಆಶಯ ವ್ಯಕ್ತಪಡಿಸಿದ್ದರು. ಆದರೆ ಅವರ ಕೊನೆ ಆಸೆ ಹಾಗೆಯೇ ಉಳಿಯಿತು ಎಂದು ಮಾದಾರ ಚೆನ್ನಯ್ಯ ಸ್ವಾಮೀಜಿ ಕಂಬನಿ ಮಿಡಿದಿದ್ದಾರೆ.

  • ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಪಾರ್ಥಿವ ಶರೀರ – ವಿದ್ಯಾಪೀಠದಲ್ಲಿ ಪಾಸ್ ಇದ್ದವರಿಗೆ ಮಾತ್ರ ಅನುಮತಿ

    ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಪಾರ್ಥಿವ ಶರೀರ – ವಿದ್ಯಾಪೀಠದಲ್ಲಿ ಪಾಸ್ ಇದ್ದವರಿಗೆ ಮಾತ್ರ ಅನುಮತಿ

    ಬೆಂಗಳೂರು: ಇಂದು ಬೆಳಗ್ಗೆ ಕೃಷ್ಣೈಕ್ಯರಾದ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳ ಪಾರ್ಥಿವ ಶರೀರವನ್ನು ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ದರ್ಶಕ್ಕೆ ಇಡಲಾಗಿದೆ.

    ಆದಿ ಉಡುಪಿಯಿಂದ ಪಾರ್ಥಿವ ಶರೀರವನ್ನು ಹೊತ್ತುಕೊಂಡು ಬಂದ ವಾಯು ಸೇನಾ ಪಡೆಯ ಹೆಲಿಕಾಪ್ಟರ್ ಮಧ್ಯಾಹ್ನ 3:35ಕ್ಕೆ ಎಚ್‍ಎಎಲ್ ತಲುಪಿತು. ಇಲ್ಲಿಂದ ಅಲಕೃಂತಗೊಂಡ ತೆರೆದ ವಾಹನದಲ್ಲಿ ಮೃತ ಶರೀರವನ್ನು ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನಕ್ಕೆ ತರಲಾಯಿತು.

    ಸಂಜೆ 5:30ರ ವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಮೆರವಣಿಗೆಯೊಂದಿಗೆ ವಿದ್ಯಾಪೀಠಕ್ಕೆ ತರಲಾಗುತ್ತದೆ. ರಾಘವೇಂದ್ರ, ಕೃಷ್ಣ, ಮದ್ವಚಾರ್ಯರ ಮೂರ್ತಿಗೆ ಪೂಜೆ ಮಾಡಿದ ಬಳಿಕ ಅಂತ್ಯ ಕ್ರಿಯೆ ನಡೆಯಲಿದೆ.

    ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿ, ಅವರ ಪೀಠ, ಶ್ರೀ ಕೃಷ್ಣನ ಪೂಜೆಗೆ ಉಪಯೋಗಿಸುತ್ತಿದ್ದ ಪೂಜಾ ಪರಿಕರ ಉಡುಪಿಯಿಂದ ಈಗಾಗಲೇ ಬೆಂಗಳೂರಿಗೆ ಬಂದಿದೆ.

    ವಿದ್ಯಾಪೀಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗ ಯಾರನ್ನೂ ಒಳಗಡೆ ಬಿಡುತ್ತಿಲ್ಲ. ಗೇಟ್ ಬಳಿಯೇ ಪೊಲೀಸರು ತಡೆಯುತ್ತಿದ್ದು ಪಾಸ್ ಹೊಂದಿರುವ ಭಕ್ತರನ್ನು ಮಾತ್ರ ಒಳಗಡೆ ಬಿಡುತ್ತಿದ್ದಾರೆ.

  • ಮನೆಯಲ್ಲಿ ಕೃಷ್ಣ ಪೂಜೆ ಮಾಡಿದ್ದರು- ಶ್ರೀಗಳನ್ನು ನೆನೆದು ರಾಮ್‍ದಾಸ್ ಕಣ್ಣೀರು

    ಮನೆಯಲ್ಲಿ ಕೃಷ್ಣ ಪೂಜೆ ಮಾಡಿದ್ದರು- ಶ್ರೀಗಳನ್ನು ನೆನೆದು ರಾಮ್‍ದಾಸ್ ಕಣ್ಣೀರು

    ಉಡುಪಿ: ನಮ್ಮ ಮನೆಯಲ್ಲಿ ಕೃಷ್ಣ ಪೂಜೆಯನ್ನು ಮಾಡಿದ್ದರು ಎಂದು ಹೇಳಿ ಪೇಜಾವರ ಶ್ರೀಗಳನ್ನು ನೆನಪಿಸಿಕೊಂಡು ಮಾಜಿ ಸಚಿವ ರಾಮ್ ದಾಸ್ ಕಣ್ಣೀರು ಹಾಕಿದರು.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೈಸೂರಿಗೆ ಭೇಟಿ ಕೊಟ್ಟಾಗ ಕಾರಾಗೃಹಕ್ಕೆ ಭೇಟಿ ಕೊಟ್ಟು ಅಲ್ಲಿ ಯೋಗ ಕೇಂದ್ರ ಹಾಗೂ ಡಿಜಿಟಲ್ ಲೈಬ್ರರಿಯನ್ನು ತೆರೆದಿದ್ದರು. ಕೈದಿಗಳ ಮನಸು ಪರಿವರ್ತನೆಗೆ ಸಾಕಷ್ಟು ಶ್ರಮ ಪಟ್ಟಿದ್ದರು ಎಂದು ಹೇಳುತ್ತಾ ಶ್ರೀಗಳ ಜೊತೆಗಿನ ಕ್ಷಣಗಳನ್ನು ಮೆಲುಕು ಹಾಕಿದರು.

    ಅವರು ಈ ಒಂದು ಯುಗದಲ್ಲಿ ಪ್ರವರ್ತಕರಾಗಿ ಎಲ್ಲ ರೀತಿಯ ಜ್ಞಾನವನ್ನು ಹೊಂದಿ ಸಮಾಜದ ಮಧ್ಯದಲ್ಲಿ ಯಾವುದೇ ಬೇಧ-ಭಾವವಿಲ್ಲದೆ ಕಟ್ಟಕಡೆಯ ವ್ಯಕ್ತಿಯಾಗಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ

    ಶ್ರೀಗಳ ಕೊನೆಯಾಸೆಯಂತೆ ಇಂದು ಬೆಳಗ್ಗೆ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ವೆಂಟಿಲೇಟರ್ ಸಹಿತ ಅಂಬುಲೆನ್ಸ್ ನಲ್ಲಿ ಪೇಜಾವರ ಮಠಕ್ಕೆ ಶಿಫ್ಟ್ ಮಾಡಲಾಯಿತು. ಸದ್ಯ ಮಠದ ಆಚರಣದಲ್ಲಿರುವ ಅಧೋಕ್ಷಜ ಮಠದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳು ಮಠಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಅವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಮಠಕ್ಕೆ ಬರಬೇಡಿ, ಅಜ್ಜರ ಕಾಡು ಮೈದಾನಕ್ಕೆ ಬನ್ನಿ ಎಂದು ಕಿರಿಯ ಶ್ರೀಗಳು ಭಕ್ತರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ.

    ಇತ್ತ ಅಜ್ಜರ ಕಾಡು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಈ ಮಧ್ಯೆ ಶ್ರೀಗಳು ಕೃಷ್ಣೈಕ್ಯರಾಗಿದ್ದು, ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

  • ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿಗಳು ಬೆಂಗ್ಳೂರಿಗೆ ಶಿಫ್ಟ್

    ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿಗಳು ಬೆಂಗ್ಳೂರಿಗೆ ಶಿಫ್ಟ್

    ಉಡುಪಿ: ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠದಲ್ಲಿ ಸದ್ಯ ವಿಶ್ವೇಶತೀರ್ಥ ಸ್ವಾಮೀಜಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪೂಜಾ ಸಾಮಾಗ್ರಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ.

    ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿ, ಅವರ ಪೀಠ, ಶ್ರೀ ಕೃಷ್ಣನ ಪೂಜೆಗೆ ಉಪಯೋಗಿಸುತ್ತಿದ್ದ ಪೂಜಾ ಪರಿಕರವನ್ನು ಸಿಬ್ಬಂದಿ ವಾಹನದೊಳಗೆ ತುಂಬಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ವಿದ್ಯಾಪೀಠಕ್ಕೆ ಈ ಸಾಮಾಗ್ರಿಗಳು ಶಿಫ್ಟ್ ಆಗಲಿವೆ. ಕಿರಿಯ ಸ್ವಾಮೀಜಿಗಳು ಕೂಡ ಸಂಜೆ ವಿದ್ಯಾ ಪೀಠಕ್ಕೆ ತೆರಳಲಿದ್ದಾರೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

    ಈಗಾಗಲೇ ಶ್ರೀಗಳ ಸುಮಾರು 30 ಮಂದಿ ಶಿಷ್ಯರು ಶಿಫ್ಟ್ ಆಗಿದ್ದಾರೆ. 6 ಟಿಟಿಯಲ್ಲಿ ಪೂಜಾ ಸಾಮಾಗ್ರಿ ಹಾಗೂ ಶಿಷ್ಯವೃಂದದವರು ತೆರಳಿದ್ದಾರೆ. ಕಿರಿಯ ಶ್ರೀಗಳ ಪೂಜಾ ಸಾಮಾಗ್ರಿಗಳನ್ನು ಕೂಡ ಶಿಫ್ಟ್ ಮಾಡಲಾಗಿದೆ. ಸಂಜೆಯ ವೇಳೆಯ ಪೂಜೆ ವಿದ್ಯಾಪೀಠದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಪೂಜಾ ಸಾಮಾಗ್ರಿಗಳನ್ನು ಶಿಫ್ಟ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

  • ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ- ಭಕ್ತರು ಕಣ್ಣೀರು

    ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ- ಭಕ್ತರು ಕಣ್ಣೀರು

    ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದ್ದು, ಸದ್ಯ ಅವರನ್ನು ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಇತ್ತ ಭಕ್ತರು ಮಠದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.

    ಪೇಜಾವರ ಶ್ರೀಗಳ ಕೊನೆಯ ಆಸೆಯಂತೆ ಅವರನ್ನು ಆಸ್ಪತ್ರೆಯಿಂದ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಸ್ಥಳಾಂತರಿಸಲಾಗಿದೆ. ವೆಂಟಿಲೇಟರ್ ಸಹಿತ ಆಸ್ಪತ್ರೆಯಿಂದ ಶ್ರೀಗಳನ್ನು ಕರೆದುಕೊಂಡು ಬಂದಿದ್ದು, ಸದ್ಯ ಮಠದೊಳಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಿಂದ 6 ವೈದ್ಯರ ತಂಡ ಆಗಮಿಸಿದೆ.

    ಶ್ರೀಗಳ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಮಠಕ್ಕೆ ಸಾವಿರಾರು ಭಕ್ತರು ದೌಡಾಯಿಸಿದ್ದು, ಪೂಜೆ ನಡೆಯುತ್ತಿದೆ. ಇನ್ನೊಂದೆಡೆ ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ ಎಂದು ಭಕ್ತರು ಹಾಗೂ ಪೂರ್ವಾಶ್ರಮದ ಸಂಬಂಧಿಗಳು ಕಣ್ಣೀರು ಹಾಕುತ್ತಿದ್ದಾರೆ.

    ಇಂದು ಬೆಳಗ್ಗೆಯಿಂದ ಭಕ್ತರಿಗೆ ಮಠಕ್ಕೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ. ಜೊತೆಗೆ ಪೇಜಾವರ ಮಠದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 700 ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಮಠದ ಸುತ್ತ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ. ಪೇಜಾವರ ಮಠದೊಳಗೆ ಭಕ್ತರ್ಯಾರು ಬರಬಾರದು, ಪೇಜಾವರ ಶ್ರೀ ಚಿಕಿತ್ಸೆಗೆ ತೊಂದರೆ ಮಾಡಬಾರದು ಎಂದು ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪೇಜಾವರ ಶ್ರೀ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಶ್ರೀಕೃಷ್ಣನಿಗೆ ಎಂದಿಗಿಂತ ಶೀಘ್ರವಾಗಿ ಪೂಜೆಯನ್ನು ಪಲಿಮಾರು ಸ್ವಾಮೀಜಿ ನೆರವೇರಿಸುತ್ತಿದ್ದಾರೆ. ಪೇಜಾವರ ಶ್ರೀಗಳ ಚೇತರಿಕೆಗಾಗಿ ವಿಶೇಷ ಪೂಜೆ, ಪಾರಾಯಣ ಮಾಡಲಾಗುತ್ತಿದೆ. ಇತ್ತ ಪೇಜಾವರ ಶ್ರೀಗಳನ್ನು ಮಠಕ್ಕೆ ಕರೆತರುವ ವಿಚಾರ ಗೊತ್ತಾಗುತ್ತಿದ್ದಂತೆ, ದೂರದೂರಿನಿಂದ ಕೃಷ್ಣಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಜೊತೆಗೆ ಕೃಷ್ಣನ ಸನ್ನಿಧಾನದಲ್ಲಿ ಭಕ್ತರಿಂದ ಪ್ರಾರ್ಥನೆ ಮಾಡಲಾಗುತ್ತಿದೆ.

  • ಅಯೋಧ್ಯೆಯಲ್ಲಿ ಮಸೀದಿಯಾದ್ರೆ ಭಾರತ ಮತ್ತೊಂದು ಮೆಕ್ಕಾ ಆಗುತ್ತೆ- ನಿಶ್ಚಲಾನಂದ ಸ್ವಾಮೀಜಿ

    ಅಯೋಧ್ಯೆಯಲ್ಲಿ ಮಸೀದಿಯಾದ್ರೆ ಭಾರತ ಮತ್ತೊಂದು ಮೆಕ್ಕಾ ಆಗುತ್ತೆ- ನಿಶ್ಚಲಾನಂದ ಸ್ವಾಮೀಜಿ

    ಉಡುಪಿ: ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನ ನಂತರ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಪುರಿ ಶಂಕರಾಚಾರ್ಯ ಪೀಠ ನಿಶ್ಚಲಾನಂದ ಸ್ವಾಮೀಜಿ ಮೊತ್ತ ಮೊದಲಬಾರಿಗೆ ಭೇಟಿಯಾಗಿ ಬಿಸಿ ಬಿಸಿ ಚರ್ಚೆ ನಡೆಸಿದ್ದಾರೆ. ಉಡುಪಿ ಪೇಜಾವರ ಮಠದಲ್ಲಿ ಇಬ್ಬರ ಯತಿಗಳ ಮುಖಾಮುಖಿ ಆಗಿದೆ.

    ಪುರಿ ಶ್ರೀ ನಿಶ್ಚಲಾನಂದ ಸ್ವಾಮೀಜಿ ಅಯೋಧ್ಯೆ ತೀರ್ಪಿನ ಬಗ್ಗೆ ಅಸಮಾಧಾನ ಹೊರ ಹಾಕಿದರು. ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಒಂದಿಂಚೂ ಭೂಮಿ ನೀಡಬಾರದು. ಅಯೋಧ್ಯೆಯನ್ನು ಮುಸಲ್ಮಾನರು ಮತ್ತೊಂದು ಮೆಕ್ಕಾ ಮಾಡಲು ತಯಾರಿ ನಡೆಸುತ್ತಾರೆ ನೋಡುತ್ತಿರಿ ಎಂದು ಪೇಜಾವರಶ್ರೀ ಮುಂದೆ ಕೋಪ ಹೊರಹಾಕಿದರು. ಸುಪ್ರೀಂಕೋರ್ಟ್ ಗಿಂತ ಪಾರ್ಲಿಮೆಂಟ್ ದೊಡ್ಡದು. ಪಾರ್ಲಿಮೆಂಟ್‍ನಲ್ಲಿ ಬಿಜೆಪಿಗೆ ಬಹುಮತ ಇದೆ. ಸುಪ್ರೀಂಕೋರ್ಟ್ ತೀರ್ಪನ್ನು ರದ್ದು ಮಾಡಲಿ ಎಂದರು. ಇದನ್ನೂ ಓದಿ:ಅಯೋಧ್ಯೆ ರಾಮನಿಗೆ ಸಿಗಲು ‘ಸ್ಕಂದ’ ಕಾರಣ

    ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣವಾಗದಂತೆ ಬಿಜೆಪಿ ಸರ್ಕಾರ ನೋಡಿಕೊಳ್ಳಲಿ ಎಂದು ಪುರಿ ಶ್ರೀಗಳು ತಾಕೀತು ಮಾಡಿದರು. ಧಾರ್ಮಿಕ ವಿಚಾರದಲ್ಲಿ ಸಂತರೇ ಸುಪ್ರೀಂ. ದೇಶದ ಸರ್ವೋಚ್ಚ ನ್ಯಾಯಾಲಯ ಯಾಕೆ ನಿರ್ಧಾರ ತೆಗೆದುಕೊಳ್ಳಬೇಕು? ಸೆಕ್ಯೂಲರ್ ಸಂವಿಧಾನವನ್ನು ನಾನು ಒಪ್ಪುವುದಿಲ್ಲ ಎಂದು ಗರಂ ಆಗಿ ನುಡಿದರು. ಇದನ್ನೂ ಓದಿ: ಅಯೋಧ್ಯೆ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ಸುನ್ನಿ ವಕ್ಫ್ ಬೋರ್ಡ್ ನಿರ್ಧಾರ

    ಭಾರತದಲ್ಲಿ ರಾಮನಿಗೆ ಅಧಿಕಾರ ಇಲ್ವಾ?
    ವಿಭಜಿತ ಭಾರತದಲ್ಲಿ ರಾಮ ಜನ್ಮಭೂಮಿಯ ಮೇಲಾದರೂ ನಮಗೆ ಪೂರ್ಣ ಅಧಿಕಾರ ಸಿಗಲಿ. ರಾಮ ಹುಟ್ಟಿದ ಭಾರತದಲ್ಲೇ ರಾಮಮಂದಿರಕ್ಕಾಗಿ ಇಷ್ಟು ವರ್ಷ ಕಾಯಬೇಕಾ? ನಮ್ಮ ಮಂದಿರಕ್ಕಾಗಿ ದೇಶದಲ್ಲಿ ಇಷ್ಟೊಂದು ಕ್ಲಿಷ್ಟಕರ ವಾತಾವರಣವೇ ಎಂದು ಅಸಮಾಧಾನ ವ್ಯಕ್ತ ಮಾಡಿದರು. ಇದು ಭಾರತವನ್ನು ಇನ್ನೊಂದು ಮೆಕ್ಕಾ ಮಾಡುವ ಷಡ್ಯಂತ್ರ. ನಮ್ಮ ಉದಾರತೆ ದೌರ್ಬಲ್ಯ ಆಗಬಾರದು ಎಂದು ಸಲಹೆ ನೀಡಿದರು.

    ಬಿಜೆಪಿಗೆ ಚಾಟಿ ಬೀಸಿದ ನಿಶ್ಚಲಾನಂದ ಶ್ರೀ:
    ಆಡಳಿತ ದುರಾಸೆ ಇಲ್ಲದ ಯಾವುದೇ ರಾಜಕೀಯ ಪಕ್ಷ ಈ ದೇಶದಲ್ಲಿ ಇಲ್ಲ ಎಂದು ಬಿಜೆಪಿಗೆ ಸರಿಯಾಗಿಯೇ ಚಾಟಿ ಬೀಸಿ, ಮಹಾರಾಷ್ಟ್ರ, ಗೋವಾ, ಜಮ್ಮು ಕಾಶ್ಮೀರದ ಲ್ಲಿ ಬಿಜೆಪಿಯ ಅಧಿಕಾರದ ಲಾಲಸೆಯ ಉದಾಹರಣೆ ನೀಡಿದರು. ಸಂತರು ಕೂಡ ರಾಜಕಾರಣಿಗಳನ್ನು ಅನುಸರಿಸುತ್ತರುವುದು ಶೋಚನೀಯ ಎಂದು ಮಠಾಧೀಶರ ರಾಜಕೀಯ ಆಸಕ್ತಿ ಬಗ್ಗೆ ಪ್ರಸ್ತಾಪಿಸಿ ವಿರೋಧಿಸಿದರು. ಅಯೋಧ್ಯೆಯಲ್ಲಿ ಒಂದಿಂಚು ಭೂಮಿ ಮುಸ್ಲಿಮರಿಗೆ ನೀಡುವುದಕ್ಕೆ ನನ್ನ ಸಹಮತ ಇಲ್ಲ ಎಂದರು.

    ಮುಸ್ಲಿಂ ನಾಯಕರಿಗೆ ರಾಷ್ಟ್ರದ ಉನ್ನತ ಹುದ್ದೆಗಳನ್ನು ನೀಡಿದ್ದೇವೆ. ರಾಷ್ಟ್ರಪತಿ, ಗೃಹ ಸಚಿವ, ಸುಪ್ರೀಂಕೋರ್ಟ್ ನ ನ್ಯಾಯಾಧೀಶ ಪಟ್ಟ ಸಿಕ್ಕಿದೆ. ಅಯೋಧ್ಯೆಯ ಭೂಮಿಯನ್ನೂ ಕೊಟ್ಟಿರುವುದು ಎಷ್ಟು ಸರಿ ಎಂದು ಪೇಜಾವರಶ್ರೀ ಗಳನ್ನು ಪ್ರಶ್ನೆ ಮಾಡಿದರು. ಮಸೀದಿ ಅಲ್ಲಿ ಆಗಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳು ಹೇಳುತ್ತವೆ. ನಿಮ್ಮಂತಹ ವೀರ ಸಂತರು ಹಿಂದೂ ಧರ್ಮ ದುರ್ಬಲವಾಗದಂತೆ ನೋಡಿಕೊಳ್ಳಬೇಕು ಎಂದು ಪುರಿ ನಿಶ್ಚಲಾನಂದ ಶ್ರೀ ಕೋರಿಕೆ ವ್ಯಕ್ತಪಡಿಸಿದರು. ಸಮಾಲೋಚನೆ ಉದ್ದಕ್ಕೂ ಪೇಜಾವರಶ್ರೀ ಸಮಾನತೆ, ಸಂವಿಧಾನ ಸಹಬಾಳ್ವೆ ಮತ್ತು ಏಕತೆಯ ಮಂತ್ರ ಜಪಿಸಿದರೂ ಪುರಿಶ್ರೀ ಅದಕ್ಕೆ ಧನಿಗೂಡಿಸದೆ ತಮ್ಮದೇ ವಾದ ಮಂಡಿಸಿ ತೆರಳಿದರು.

  • ಕೇಂದ್ರ ಸರ್ಕಾರ ಬಿದ್ದರೂ ಪರವಾಗಿಲ್ಲ, ಮಂದಿರ ಕಟ್ಟಿ: ಪೇಜಾವರಶ್ರೀ

    ಕೇಂದ್ರ ಸರ್ಕಾರ ಬಿದ್ದರೂ ಪರವಾಗಿಲ್ಲ, ಮಂದಿರ ಕಟ್ಟಿ: ಪೇಜಾವರಶ್ರೀ

    ಉಡುಪಿ: ಸರ್ಕಾರ ಬಿದ್ದರೂ ಪರವಾಗಿಲ್ಲ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.

    ಉಡುಪಿ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಶ್ರೀಗಳು, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಕಳೆದಿದೆ. ಇನ್ನೂ ರಾಮ ಮಂದಿರ ನಿರ್ಮಾಣ ಆಗಿಲ್ಲ. ನಾವು ಕಾದಿದ್ದೇವೆ, ಈಗ ಮಂದಿರ ನಿರ್ಮಾಣ ಮಾಡುವಂತೆ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ದೃಢ ನಿರ್ಧಾರವು ಕೇಂದ್ರ ಸರ್ಕಾರಕ್ಕೆ ಅನುಕೂಲ ಆಗಲಿದೆ. ನ್ಯಾಯಾಲಯವನ್ನು ಕಾಯುವುದಕ್ಕೆ ಸಾಧ್ಯವಿಲ್ಲ. ಮೋದಿ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ. ಇದರಿಂದಾಗಿ ಮಾಜಿ ಪ್ರಧಾನಿ ವಾಜಪೇಯಿ ಸರ್ಕಾರಕ್ಕಿಂತ ಹೆಚ್ಚು ಅನುಕೂಲ ಮೋದಿ ಅವರಿಗಿದೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಈಗ ವಿರೋಧ ಮಾಡಲಿಕ್ಕಿಲ್ಲ, ಚುನಾವಣೆ ಹತ್ತಿರ ಇರುವುದರಿಂದ ಯಾರೂ ವಿರೋಧ ಮಾಡಲ್ಲ. ವಿರೋಧ ಮಾಡುವ ಧೈರ್ಯ ಯಾರಿಗೂ ಇಲ್ಲ. ರಾಮ ಮಂದಿರ ಸಮಸ್ಯೆ ಬಗೆಹರಿಸಲು ಮೂರು ಮಾರ್ಗಗಳಿವೆ, ಸಂಯುಕ್ತ ಅಧಿವೇಶನದ ಮೂಲಕ ಸಮಸ್ಯೆ ಬಗೆಹರಿಸಬಹುದು. ಲೋಕಸಭೆ- ರಾಜ್ಯಸಭೆ ಅಧಿವೇಶನದಲ್ಲಿ ತೀರ್ಮಾನಿಸಬಹುದು. ಇಲ್ಲವೇ ಮಂದಿರ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಲಿ ಎಂದು ಸಲಹೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಾಜಕಾರಣಿಗಳಿಗೆ ಸೀಟು ಬಿಡಲು ಇಷ್ಟವಿರಲ್ಲ, ನಾವು ಸಂಪ್ರದಾಯಬದ್ಧವಾಗಿ ಅಧಿಕಾರದಿಂದ ದೂರವಾಗ್ತಿದ್ದೀವಿ- ಪೇಜಾವರಶ್ರೀ ಮನದ ಮಾತು

    ರಾಜಕಾರಣಿಗಳಿಗೆ ಸೀಟು ಬಿಡಲು ಇಷ್ಟವಿರಲ್ಲ, ನಾವು ಸಂಪ್ರದಾಯಬದ್ಧವಾಗಿ ಅಧಿಕಾರದಿಂದ ದೂರವಾಗ್ತಿದ್ದೀವಿ- ಪೇಜಾವರಶ್ರೀ ಮನದ ಮಾತು

    ಉಡುಪಿ: ಶ್ರೀಕೃಷ್ಣಮಠದ ಪೂಜಾಧಿಕಾರವನ್ನು ಪಲಿಮಾರು ಸ್ವಾಮೀಜಿಗಳಿಗೆ ಇಂದು ಪೇಜಾವರಶ್ರೀ ಬಿಟ್ಟುಕೊಡಲಿದ್ದಾರೆ. ಎರಡು ವರ್ಷದ ತಮ್ಮ ಪರ್ಯಾಯ ಅಧಿಕಾರಾವಧಿ ಬಗ್ಗೆ ಪಬ್ಲಿಕ್ ಟಿವಿ ಜತೆ ಮನಬಿಚ್ಚಿ ಮಾತನಾಡಿದ್ದಾರೆ.

    ತಮ್ಮ ಅಧಿಕಾರಾವಧಿ ಮುಗಿಯುವಾಗ ರಾಜಕಾರಣಿಗಳು ಮನಸ್ಸಿಲ್ಲದೆ ತಮ್ಮ ಸೀಟು ಬಿಟ್ಟುಕೊಡುತ್ತಾರೆ. ಆದ್ರೆ ನಾವು ಸಂಪ್ರದಾಯಕ್ಕೆ ಬದ್ಧರು. ಮೊದಲೇ ನಿಶ್ಚಿತವಾದ ಅಧಿಕಾರ ಇದು. ರಾಜಕಾರಣಿಗಳಿಗಾದ್ರೆ ಬೇಸರವಾಗ್ತದೆ. ನಾವು ಯಾವುದೇ ಬೇಸರವಿಲ್ಲದೆ ಪೂಜಾಧಿಕಾರ ಬಿಟ್ಟುಕೊಡುತ್ತಿದ್ದೇವೆ. ರಾಜಕಾರಣಿಗಳಿಗೆ ಅಧಿಕಾರ ಬಿಡುವಾಗ ದುಃಖವಾಗುತ್ತದೆ. ನಾವು ಖುಷಿಯಿಂದ ಪೀಠಾಧಿಕಾರ ಬಿಟ್ಟು ಕೊಡುತ್ತಿದ್ದೇವೆ ಅಂತ ಹೇಳಿದ್ರು.

    ಎರಡು ವರ್ಷದ ಪರ್ಯಾಯ ತೃಪ್ತಿಯಿದೆಯೇ?
    ನಮಗೆ ಮಹಾತ್ವಾಕಾಂಕ್ಷೆ ಬಹಳ ಇತ್ತು. ಅದರಲ್ಲಿ ಕೆಲವು ಮಹತ್ವದ ಕೆಲಸಗಳು ಆಗಿದೆ. ಕನಸು ಬಹಳ ಇತ್ತು. ಮಠಕ್ಕೆ ಜಮೀನು ಖರೀದಿಸುವ ಆಸೆ ಇತ್ತು. ಆದ್ರೆ ಸಂತೃಪ್ತಿಯಿಲ್ಲ, ತೃಪ್ತಿ ಇದೆ. ಮುಂದಿನ ಸ್ವಾಮೀಜಿಗಳು ನನ್ನೆಲ್ಲಾ ಉಳಿದ ಆಕಾಂಕ್ಷೆಗಳನ್ನು, ಅವರ ಕನಸುಗಳನ್ನು ಈಡೆರಿಸುತ್ತಾರೆ ಎಂಬ ನಂಬಿಕೆಯಿದೆ ಅಂದ್ರು.

    ವಿಚಾರಗಳು ವಿವಾದವಾಯ್ತು- ಪ್ರಚಾರವಾಯ್ತು:
    ನಮ್ಮ ಅಧಿಕಾರಾವಧಿಯಲ್ಲಿ ಕೆಲ ವಿಚಾರಗಳು ವಿವಾದವಾಗಿದೆ. ವಿವಾದವಾದಾಗಲೇ ವಿಚಾರಗಳು ಪ್ರಚಾರವಾಗಿ ಮಹತ್ವ ಪಡೆದುಕೊಳ್ಳುವುದು. ನಮ್ಮ ನಿಲುಮೆಗಳು ಇಂತಹ ಘಟನೆಗಳಾದಾಗ ಸಮಾಜಕ್ಕೆ ಅದು ಅರ್ಥವಾಗುತ್ತದೆ. ಸಮಾಜದ ಎಲ್ಲಾ ವರ್ಗದ ಮೇಲೆ ನಮಗೆ ಪ್ರೀತಿಯಿದೆ. ಯಾರ ಮೇಲೂ ದ್ವೇಷ ಇಲ್ಲ. ಸಂವಿಧಾನ ರಚನೆ ವಿಚಾರದಲ್ಲಿ ವಿರೋಧವಿಲ್ಲ. ಅಲ್ಪಸಂಖ್ಯಾತರು, ಬಹುಸಂಖ್ಯಾತರ ನಡುವೆ ದೇಶದಲ್ಲಿ ವ್ಯತ್ಯಾಸಗಳನ್ನು ಸರ್ಕಾರಗಳು ಮಾಡುತ್ತಿದೆ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗೆ ಸಾಕಷ್ಟು ಅನುದಾನ ಇದೆ. ದಲಿತರಿಗೆ ಸರಿಯಾಗಿ ಅನುದಾನ ಸಿಗ್ತಾಯಿಲ್ಲ. ದಲಿತರ ಶಿಕ್ಷಣಕ್ಕೆ ಸರ್ಕಾರಗಳು ಒತ್ತು ಕೊಡುತ್ತಿಲ್ಲ. ಇದನ್ನು ನಾನು ಹೇಳಲು ಹೊರಟಿದ್ದೇನೆ. ನನ್ನ ವಾದ ಇಲ್ಲಿಗೆ ನಿಲ್ಲಲ್ಲ. ಜಾತಿಯ ಆಧಾರದಲ್ಲಿ ಸರ್ಕಾರ ಪಕ್ಷಪಾತ ಮಾಡುವುದು ಸರಿಯಲ್ಲ ಅಂತ ಹೇಳಿದ್ರು. ಇದನ್ನೂ ಓದಿ: ದಾಖಲೆಯ ಪರ್ಯಾಯ ಮುಗಿಸುತ್ತಿರೋ ಪೇಜಾವರಶ್ರೀ- ಇಂದು ಕೃಷ್ಣನಿಗೆ ಕೊನೆಯ ಪೂಜೆ

    ಮೋದಿ ಕಿವಿ ಹಿಂಡಿದ ಪೇಜಾವರಶ್ರೀ:
    ರಾಮಮಂದಿರ ವಿಚಾರದಲ್ಲಿ ಪೇಜಾವರರು ಮೋದಿ ಕಿವಿ ಹಿಂಡಿದ್ದಾರೆ. ರಾಜಕಾರಣಿಗಳು ಎಡವಿದಾಗ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ರಾಮಮಂದಿರ ವಿಚಾರದಲ್ಲಿ ಕೋರ್ಟ್ ಹೊರಗೆ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬರಬೇಕು. ಲೋಕಸಭೆ, ರಾಜ್ಯಸಭೆಯಲ್ಲಿ ವಿಧೇಯಕ ತರಬೇಕು. ಸರ್ಕಾರದ ಅಧಿಕಾರದ ಪರಿಮಿತಿಯಲ್ಲಿ ವಿಶೇಷ ಪ್ರಯತ್ನ ಮಾಡಬೇಕು. ಕೇಂದ್ರ ಪ್ರಯತ್ನ ಮಾಡುತ್ತಿಲ್ಲ ಅಂತ ಜನ ಹೇಳುತ್ತಾರೆ. ಕೇಂದ್ರ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಒತ್ತಡ ತಂದು ಮಂದಿರ ನಿರ್ಮಾಣವಾಗಬೇಕು ಎಂದರು.

    ಪೇಜಾವರಶ್ರೀಗಳಿಗೆ ರಾಜಕೀಯ ಯಾಕೆ ಇಷ್ಟ?
    ರಾಜಕಾರಣಿಗಳು ಧರ್ಮದ ವಿಚಾರದಲ್ಲಿ ಯಾಕೆ ಮೂಗು ತೂರಿಸಬೇಕು? ಸ್ವಾಮೀಜಿಗಳು ಧರ್ಮದ ಕೆಲಸ ಮಾಡುತ್ತೇವೆ. ಅವರು ಧರ್ಮದ ವಿಚಾರದಲ್ಲಿ ಮೂಗು ತೂರಿಸಿದಾಗ ನಾವು ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತೇವೆ. ಧರ್ಮದ, ಮಠದ ಬಗ್ಗೆ ಮಾತನಾಡುವ ರಾಜಕಾರಣಿಗಳು ರಾಜಕೀಯದಲ್ಲಿ ತಪ್ಪು ಮಾಡಿದಾಗ ನಾವು ನಮ್ಮ ಅಭಿಪ್ರಾಯ ಹೇಳುತ್ತೇವೆ. ಪೀಠಾಧಿಪತಿಗಳು ಚುನಾವಣೆಗೆ ನಿಲ್ಲಲ್ಲ. ಹೀಗಾಗಿ ನಮಗೆ ಆಕಾಂಕ್ಷೆಗಳಿಲ್ಲ. ಆಳುವವರು ತಪ್ಪು ಮಾಡಿದಾಗ ನಾನು ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

    ವಯಸ್ಸಾಯ್ತು, ದೇಹದಲ್ಲಿ ಶಕ್ತಿಯಿಲ್ಲ:
    ನನಗೆ ವಯಸ್ಸಾಯ್ತು, ಅದು ನನ್ನ ಗಮನಕ್ಕೆ ಬರುತ್ತಿದೆ. ಓಡಾಡಲು ಶಕ್ತಿ ಸಾಲದು ಎಂದು ಪೇಜಾವರಶ್ರೀ ಹೇಳಿದರು. ದೇಹದಲ್ಲಿ ದೋಷವಿದೆ, ನಡೆದಾಡಲು ಆಗುವುದಿಲ್ಲ. ಕಾರಿನಲ್ಲಿ ಓಡಾಟ ಮಾಡಿ ನನ್ನ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆ ಮುಂದುವರೆಸುತ್ತೇನೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ರು.

    ಪೇಜಾವರ ಶ್ರೀಗಳು ಜನವರಿ 18ರಂದು ಪರ್ಯಾಯ ಪೀಠಾವರೋಹಣ ಮಾಡಲಿದ್ದಾರೆ. ಎರಡು ವರ್ಷಗಳ ಕಾಲ ಕಡೆಗೋಲು ಶ್ರೀಕೃಷ್ಣನ ಪೂಜೆ ಮಾಡಿದ್ದ ಪೇಜಾವರಶ್ರೀಗಳ ಪೂಜಾಧಿಕಾರ ಇಂದಿಗೆ ಮುಗಿದಿದ್ದು, ಐತಿಹಾಸಿಕ ಐದು ಪರ್ಯಾಯಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶ್ರೀಕೃಷ್ಣನ ಪೂಜಾಧಿಕಾರ ಪೇಜಾವರ ಮಠದಿಂದ ಪಲಿಮಾರು ಮಠಕ್ಕೆ ಹಸ್ತಾಂತರವಾಗಲಿದೆ.