Tag: ವಿಶ್ವಾಸ ಮತ

  • ಭಗವಂತ್ ಮಾನ್ ವಿಶೇಷ ಅಧಿವೇಶನದ ಬೇಡಿಕೆಯನ್ನು ತಿರಸ್ಕರಿಸಿದ ಪಂಜಾಬ್ ಗವರ್ನರ್

    ಭಗವಂತ್ ಮಾನ್ ವಿಶೇಷ ಅಧಿವೇಶನದ ಬೇಡಿಕೆಯನ್ನು ತಿರಸ್ಕರಿಸಿದ ಪಂಜಾಬ್ ಗವರ್ನರ್

    ಚಂಡೀಗಢ: ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು ತಮ್ಮ ಬಹುಮತವನ್ನು ಸಾಬೀತುಪಡಿಸಲು ವಿಶೇಷ ಅಧಿವೇಶನವನ್ನು (Special Session) ಕರೆದಿದ್ದರು. ಆದರೆ ಪಂಜಾಬ್‌ನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ (Banwarilal Purohit) ಅವರು ಇದಕ್ಕೆ ಅನುಮತಿಯನ್ನು ನಿರಾಕರಿಸಿದ್ದಾರೆ.

    ರಾಜ್ಯದಲ್ಲಿ ಬಿಜೆಪಿ (BJP) ತನ್ನ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ ಎಂದು ಎಎಪಿ (AAP) ಈ ಹಿಂದೆ ಆರೋಪಿಸಿತ್ತು. ಈ ಹಿನ್ನೆಲೆ ಸೋಮವಾರ ಭಗವಂತ್ ಮಾನ್ ಅವರು ಗುರುವಾರ ವಿಶ್ವಾಸಮತ ಯಾಚನೆ ಮಾಡುವುದಾಗಿ ಹೇಳಿದ್ದರು. ಆದರೆ ವಿಶ್ವಾಸಮತ ಸಾಬೀತುಪಡಿಸಲು ಕರೆದಿರುವ ಅಧಿವೇಶನ ನಿಯಮಾನುಸಾರವಾಗಿಲ್ಲ ಎಂದು ರಾಜಭವನ ವಿಶೇಷ ಅಧಿವೇಶನದ ಆದೇಶವನ್ನು ರದ್ದುಗೊಳಿಸಿದೆ. ಇದನ್ನೂ ಓದಿ: ʼPAY CMʼ ಪೋಸ್ಟರ್ ಅಂಟಿಸಿದ ಪ್ರಕರಣ ಸಿಸಿಬಿಗೆ ವರ್ಗಾವಣೆ

    ಪ್ರತಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಕಾಂಗ್ರೆಸ್ ನಾಯಕ ಸುಖಪಾಲ್ ಸಿಂಗ್ ಖೈರಾ ಹಾಗೂ ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮ ಅವರು ಕೇವಲ ವಿಶ್ವಾಸ ನಿರ್ಣಯ ಮಂಡಿಸಲು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲು ಯಾವುದೇ ಕಾನೂನು ಅವಕಾಶವಿಲ್ಲ ಎಂದು ವಾದಿಸಿದ್ದಾರೆ. ಈ ಹಿನ್ನೆಲೆ ರಾಜ್ಯಪಾಲರು ಈ ನಿರ್ಣಯವನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ – ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್

    ಈ ಬೆಳವಣಿಗೆಯ ಬಳಿಕ ಟ್ವೀಟ್ ಮಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಂಪುಟ ಕರೆದ ಅಧಿವೇಶನವನ್ನು ರಾಜ್ಯಪಾಲರು ಹೇಗೆ ನಿರಾಕರಿಸಲು ಸಾಧ್ಯ? ಪ್ರಜಾಪ್ರಭುತ್ವ ಕೊನೆಗೊಂಡಿದೆ ಎನ್ನಲು ಇದುವೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

    ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

    ಲಂಡನ್: ಬ್ರಿಟನ್ ಸಂಸತ್‍ನಲ್ಲಿ ಸೋಮವಾರ ಸಂಜೆ ನಡೆದ ಗೌಪ್ಯ ಮತದಾನದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ವಿಶ್ವಾಸ ಮತ ಗೆಲ್ಲುವ ಮೂಲಕ ತಮ್ಮ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.

    ಸಂಸತ್‍ನಲ್ಲಿ ನಡೆದ ರಹಸ್ಯ ಮತದಾನದಲ್ಲಿ ಬೋರಿಸ್ ಜಾನ್ಸನ್ ಅವರ ಪರ 211 ಮತಗಳು ಚಲಾವಣೆಯಾದರೆ, ವಿರುದ್ಧ 148 ಮತಗಳನ್ನು ಅವರದ್ದೇ ಪಕ್ಷದ (ಕನ್ಸರ್‌ವೇಟಿವ್) ಸಂಸದರು ಹಾಕಿದ್ದಾರೆ. ಇದನ್ನೂ ಓದಿ:  ಭ್ರಷ್ಟಾಚಾರ ಆರೋಪ – ಕಾಂಗ್ರೆಸ್ ನಾಯಕ ಸಾಧು ಸಿಂಗ್ ಧರಂಸೋತ್ ಬಂಧನ

    ಅವಿಶ್ವಾಸ ಮತದಾನ ಪ್ರಕ್ರಿಯೆಲ್ಲಿ ಬೋರಿಸ್ ಜಾನ್ಸನ್ ಅವರು ಗೆಲುವು ಸಾಧಿಸುವ ಮೂಲಕ ಒಂದು ವರ್ಷದ ಮಟ್ಟಿಗೆ ತಮ್ಮ ಪಟ್ಟವನ್ನು ಭದ್ರಪಡಿಸಿಕೊಂಡಿದ್ದು, ಹೀಗಿದ್ದರೂ ಪ್ರಧಾನಿ ಪಟ್ಟ ಉಳಿಸಲು ಇನ್ನೂ ತೂಗುಗತ್ತಿಯಲ್ಲಿ ನಡೆಯಬೇಕಾಗಬಹುದು, ಯಾವ ಕ್ಷಣದಲ್ಲಿ ಬೇಕಾದರೂ ತಮ್ಮ ವಿರುದ್ಧ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಕೋವಿಡ್ ಸಾಂಕ್ರಾಮಿಕ ಲಾಕ್‍ಡೌನ್ ಇದ್ದರೂ ಬೋರಿಸ್ ಜಾನ್ಸನ್ ಮಾತ್ರ ಡೌನಿಂಗ್ ಸ್ಟ್ರೀಟ್‍ನಲ್ಲಿ ಪಾರ್ಟಿ ಮಾಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಔತಣಕೂಟದಲ್ಲಿ ಮದ್ಯ ಸೇವಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರವಾಗಿ ಸ್ವಪಕ್ಷದ ಸದಸ್ಯರೇ ಬೋರಿಸ್ ಜಾನ್ಸನ್ ವಿರುದ್ಧ ವಿರೋಧ ವ್ಯಕ್ತಪಡಿಸಿ ರಾಜೀನಾಮೆಗೆ ಆಗ್ರಹಿಸಿದ್ದರು. ವಿವಾದದ ಕುರಿತು ತಾನು ಎರಡೆರಡು ಬಾರಿ ಕ್ಷಮೆಯಾಚಿಸಿದ್ದರೂ ವಿವಾದ ಕಾವು ಹಾಗೇ ಇತ್ತು. ಇದನ್ನೂ ಓದಿ:  ಕಾಂಗ್ರೆಸ್‍ನಲ್ಲಿ ನಲಪಾಡ್ ರೌಡಿಸಂ ಆರೋಪ – ಡಿಕೆಶಿಗೆ ದೂರು

    ಸದ್ಯ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಏರುತ್ತಿರುವ ಬೋರಿಸ್ ಜಾನ್ಸನ್, ಈ ಫಲಿತಾಂಶವನ್ನು ಗುಡ್ ನ್ಯೂಸ್ ಮತ್ತು ನಿರ್ಣಾಯಕ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಒಗ್ಗಟ್ಟಿನಿಂದ ಮುನ್ನಡೆಯಲು ಫಲಿತಾಂಶ ಅವಕಾಶ ಕಲ್ಪಿಸಿದೆ  ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  • ರಾಜಸ್ಥಾನ ಹೈಡ್ರಾಮಾಕ್ಕೆ ತೆರೆ – ವಿಶ್ವಾಸ ಮತ ಗೆದ್ದ ಗೆಹ್ಲೋಟ್

    ರಾಜಸ್ಥಾನ ಹೈಡ್ರಾಮಾಕ್ಕೆ ತೆರೆ – ವಿಶ್ವಾಸ ಮತ ಗೆದ್ದ ಗೆಹ್ಲೋಟ್

    ಜೈಪುರ: ರಾಜಸ್ಥಾನದಲ್ಲಿ ಬೀಳುವ ಹಂತ ತಲುಪಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಮರುಜೀವ ಸಿಕ್ಕಂತಾಗಿದ್ದು, ಇಂದು ನಡೆದ ವಿಶ್ವಾಸ ಮತದಲ್ಲಿ ಸಿಎಂ ಗೆಹ್ಲೋಟ್‌ ಜಯಗಳಿಸಿದ್ದು ಇನ್ನು 6 ತಿಂಗಳು ಯಾವುದೇ ಗೊಂದಲ ಇಲ್ಲದೇ ಸರ್ಕಾರ ಆಡಳಿತ ನಡೆಸಲಿದೆ.

    ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಡಾಯದ ಬಳಿಕ ಕಳೆದ ಕೆಲ ತಿಂಗಳಿಂದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅತಂತ್ರವಾಗಿತ್ತು. ಇಂದು ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರದ ಪರ 125 ಶಾಸಕರು ಬೆಂಬಲ ಸೂಚಿಸಿದರೆ ಬಿಜೆಪಿ ಪರ 75 ಶಾಸಕರು ಬೆಂಬಲ ಸೂಚಿಸಿದರು.

    ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಡಾಯದ ಬಳಿಕ ಬಿಜೆಪಿ ಆಪರೇಷನ್ ಕಮಲ ನೆಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇತ್ತೀಚೆಗೆ ಪೈಲಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಮೂಲಕ ಈ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದರು.

    ಬಂಡಾಯದ ಬಳಿಕ ಎರಡೂ ತಂಡಗಳ ಶಾಸಕರು ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖಾಮುಖಿಯಾಗಿದ್ದರು. ಸಭೆಯಲ್ಲಿ ವಿಶ್ವಾಸ ಮತಯಾಚನೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಇಂದು ಟ್ರಸ್ಟ್‌ ವೋಟ್‌ ನಡೆದಿದ್ದು, ರಾಜಸ್ಥಾನ ವಿಧಾನಸಭೆಯಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರ ವಿಶ್ವಾಸ ಮತದಲ್ಲಿ ಜಯಗಳಿಸಿದೆ.

    ಈ ಕುರಿತು ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪ್ರತಿಕ್ರಿಯಿಸಿದ್ದು, ಈ ಗೆಲುವಿನಿಂದಾಗಿ ಎಲ್ಲ ಊಹಾಪೋಹಗಳಿಗೆ ವಿರಾಮ ಬಿದ್ದಂತಾಗಿದೆ. ನಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಸಮಯಕ್ಕೆ ಸರಿಯಾಗಿ ಈ ಮಾರ್ಗಸೂಚಿಯಂತೆ ನಡೆದುಕೊಳ್ಳುತ್ತಾರೆಂಬ ಸಂಪೂರ್ಣ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

    ಇಂದು ನಡೆದ ಅಧಿವೇಶನದ ಚರ್ಚೆಯ ಸಮಯದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಬಿಜೆಪಿ ಸರ್ಕಾರ ಬೀಳಿಸುವ ಸಂಚು ರೂಪಿಸಿತ್ತು ಎಂದು ವಾಗ್ದಾಳಿ ನಡೆಸಿದರು. ಸಚಿನ್ ಪೈಲೆಟ್‌ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ. ಅಮಿತ್ ಶಾ ಪೈಲಟ್ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬಂದಿತ್ತು.

    ಈ ಸೋಲು ನಿಮಗೆ, ನಿಮ್ಮ ನಾಯಕರಿಗೆ ಆಘಾತವನ್ನುಂಟು ಮಾಡಿದೆ. ಈ ಪಿತೂರಿಯಲ್ಲಿ ಕೇಂದ್ರದ ಹಲವು ನಾಯಕರು ಸಹ ಭಾಗಿಯಾಗಿದ್ದರು. ನೀವು ಉಪಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತೀರಿ. ಆದರೆ ಈ ಪಿತೂರಿಯನ್ನು ಮಾಡಿದ್ದೇ ನೀವು, ನಿಮ್ಮ ಪಕ್ಷ ಹಾಗೂ ಬಿಜೆಪಿ ಹೈ ಕಮಾಂಡ್ ಎಂದು ಕಾಂಗ್ರೆಸ್ ಟೀಕಿಸಿದೆ.

    ವಿಶ್ವಾಸ ಮತಯಾಚನೆ ವೇಳೆ ಸಚಿನ್ ಪೈಲಟ್ ತಮ್ಮ ಭಾಷಣದುದ್ದಕ್ಕೂ ಒಗ್ಗಟ್ಟಿನ ಜಪ ಮಾಡಿದ್ದು, ಕಾಂಗ್ರೆಸ್‍ನಲ್ಲಿದ್ದ ಆಂತರಿಕ ಸಮಸ್ಯೆಗಳೆಲ್ಲವೂ ಬಗೆಹರಿದಿವೆ. ಆಡಳಿತ ಪಕ್ಷ ಒಗ್ಗಟ್ಟಾಗಿ ನಿಲ್ಲಲಿದೆ. ವಿರೋಧ ಪಕ್ಷ ಇದೆಲ್ಲವನ್ನು ಬಿಟ್ಟು ವಿಶ್ವಾಸ ಮತಯಾಚನೆ ಬಗ್ಗೆ ಗಮನಹರಿಸಲಿ ಎಂದು ಹೇಳಿದರು.

  • ಮಧ್ಯ ಪ್ರದೇಶ ಹೈಡ್ರಾಮಾ ಮುಂದುವರಿಕೆ – ಸಿಎಂ, ರಾಜ್ಯಪಾಲ, ಸ್ಪೀಕರ್‌ಗೆ ಸುಪ್ರೀಂ ನೋಟಿಸ್

    ಮಧ್ಯ ಪ್ರದೇಶ ಹೈಡ್ರಾಮಾ ಮುಂದುವರಿಕೆ – ಸಿಎಂ, ರಾಜ್ಯಪಾಲ, ಸ್ಪೀಕರ್‌ಗೆ ಸುಪ್ರೀಂ ನೋಟಿಸ್

    – ಬುಧವಾರ ಬೆಳಗ್ಗೆ ವಿಚಾರಣೆ ಮುಂದೂಡಿಕೆ

    ನವದೆಹಲಿ: ಮಧ್ಯಪ್ರದೇಶದಲ್ಲಿ ಹೈಡ್ರಾಮಾ ಮುಂದುವರಿದಿದ್ದು, ಸುಪ್ರೀಂ ಕೋರ್ಟ್ ಸಹ ವಿಶ್ವಾಸ ಮತಯಾಚನೆ ಕುರಿತ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಅಷ್ಟೇ ಅಲ್ಲದೆ ರಾಜ್ಯದ ಪ್ರಮುಖರಿಗೆ ನೋಟಿಸ್ ಜಾರಿ ಮಾಡಿದೆ.

    ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಲ್ಲಿಸಿರುವ ಅರ್ಜಿಯನ್ನು ಬುಧವಾರ ಬೆಳಗ್ಗೆ 10.30ಕ್ಕೆ ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ.

    ವಿಚಾರಣೆ ವೇಳೆ ವಿಶ್ವಾಸ ಮತಯಾಚನೆ ಅಗತ್ಯ ಎಂಬುದನ್ನು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟರು. ಇದರ ಜೊತೆಗೆ ಮಧ್ಯಪ್ರದೇಶದ ವಿಧಾನಸಭೆ ಸ್ಪೀಕರ್, ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ ಕಮಲ್‍ನಾಥ್ ಹಾಗೂ ರಾಜ್ಯಪಾಲ ಲಾಲ್‍ಜಿ ಟಂಡನ್ ಅವರಿಗೆ ನೋಟಿಸ್ ಜಾರಿ ಮಾಡಿದರು.

    ರಾಜ್ಯಪಾಲರು ಸೋಮವಾರವೇ ವಿಶ್ವಾಸ ಮತಯಾಚನೆಯಾಗಬೇಕೆಂದು ಸೂಚಿಸಿದ್ದರು. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಸ್ಪೀಕರ್ ಅಧಿವೇಶನವನ್ನು ಮಾರ್ಚ್ 26ರ ವರೆಗೆ ಮುಂದೂಡಿದರು. ಇದರ ಮಧ್ಯೆಯೇ ಬಿಜೆಪಿ ಸುಪ್ರಿಂ ಕೋರ್ಟ್ ಮೊರೆ ಹೋಗಿತ್ತು.

    ಸ್ಪೀಕರ್ ಈ ಕ್ರಮ ಕೈಗೊಳ್ಳುತ್ತಿದ್ದಂತೆ ರಾಜ್ಯಪಾಲರು ಮತ್ತೊಂದು ಪತ್ರ ಬರೆದು, ಮಂಗಳವಾರ ವಿಶ್ವಾಸ ಮತಯಾಚನೆಯಾಗಲೇಬೇಕು. ಇಲ್ಲವಾದಲ್ಲಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಕಮಲ್‍ನಾಥ್, ಎಲ್ಲ ಸಂಗತಿಗಳನ್ನು ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿಮ್ಮ ನಿರ್ದೇಶನವನ್ನು ವಿಧಾನಸಭೆ ಸ್ಪೀಕರ್‍ಗೆ ಕಳುಹಿಸಿದ್ದೇನೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಆರು ಸಚಿವರ ರಾಜೀನಾಮೆ ಅಂಗೀಕಾರ
    ಕಾಂಗ್ರೆಸ್ಸಿನ 22 ಶಾಸಕರ ರಾಜೀನಾಮೆ ಪೈಕಿ ಆರು ಬಂಡಾಯ ಮಂತ್ರಿಗಳ ರಾಜೀನಾಮೆಯನ್ನು ಮಧ್ಯಪ್ರದೇಶದ ವಿಧಾನಸಭಾ ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿ ಅವರು ಶನಿವಾರ ಅಂಗೀಕರಿಸಿದ್ದಾರೆ. ಗೋವಿಂದ್ ಸಿಂಗ್ ರಜಪೂತ್, ಮಹೇಂದ್ರ ಸಿಂಗ್ ಸಿಸೋಡಿಯಾ, ಪ್ರಭುರಾಮ್ ಚೌಧರಿ, ಪ್ರದುಮನ್ ತೋಮರ್, ತುಳಸಿರಾಮ್ ಸಿಲಾವತ್ ಹಾಗೂ ಇಮಾರ್ತಿ ದೇವಿ ಅವರನ್ನು ರಾಜ್ಯಪಾಲರು ಸಚಿವ ಸಂಪುಟದದಿಂದ ವಜಾ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷಕ್ಕೆ ಗುಡ್‍ಬೈ ಹೇಳಿದ್ದರು. ಅವರೊಂದಿಗೆ ಸಿಂಧಿಯಾ ಆಪ್ತರಾಗಿದ್ದ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ನಂತರ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿದ್ದರು. ಒಟ್ಟು 22 ಶಾಸಕರ ರಾಜೀನಾಮೆಯಿಂದ ಕಮಲನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. 230 ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಇಬ್ಬರು ಶಾಸಕರ ನಿಧನದಿಂದ ಸದ್ಯ 228 ಶಾಸಕರಿದ್ದಾರೆ. ಸದ್ಯ 22 ಮಂದಿ ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಸಿಎಂ ಕಮಲನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಈಗ ಸದನದಲ್ಲಿ 206 ಶಾಸಕರಿದ್ದು ಬಹುಮತ ಸಾಧಿಸಲು 104 ಶಾಸಕರ ಬೆಂಬಲ ಬೇಕಿದೆ. ಬಿಜೆಪಿ ಬಳಿ 107 ಶಾಸಕರಿದ್ದರೆ, ಕಾಂಗ್ರೆಸ್ ಬಳಿ 92 ಶಾಸಕರಿದ್ದಾರೆ.

    ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿತ್ತು. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

  • ಇಂದು ಸಹ ಸದನದಲ್ಲಿ ಬಿಜೆಪಿ ಶಾಸಕರು ಮೌನಕ್ಕೆ ಶರಣು

    ಇಂದು ಸಹ ಸದನದಲ್ಲಿ ಬಿಜೆಪಿ ಶಾಸಕರು ಮೌನಕ್ಕೆ ಶರಣು

    ಬೆಂಗಳೂರು: ಇಂದು ಸಹ ಸದನದಲ್ಲಿ ಬಿಜೆಪಿ ಶಾಸಕರು ಮೌನಕ್ಕೆ ಶರಣಾಗಲಿದ್ದಾರೆ.

    ಇಂದು ಚರ್ಚೆ ಮುಗಿಯುವವರೆಗೂ ಶಾಸಕರು ಸೈಲೆಂಟ್ ಆಗಿರಲು ಸೂಚನೆ ನೀಡಲಾಗಿದೆ. ಇಂದು ಸದನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತು ಮಾಧುಸ್ವಾಮಿ ಮಾತ್ರ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಬ್ಬರು ನಾಯಕರು ಹೊರತು ಪಡಿಸಿ ಇನ್ನೆಲ್ಲ ಶಾಸಕರು ಇಂದು ಸಹ ಮೌನಕ್ಕೆ ಶರಣಾಗಲಿದ್ದಾರೆ.

    ಬಿಜೆಪಿ ಪಾಳೆಯ ಅದೇ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಇಂದು ಸರ್ಕಾರ ಪತನವಾಗುತ್ತೆ ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಸೋಮವಾರವೇ ಸ್ಪೀಕರ್ ಸರ್ಕಾರದ ವಿರುದ್ಧ ಅಲ್ಲಲ್ಲಿ ಚಾಟಿ ಬೀಸಿ ವಿಶ್ವಾಸ ಮತಯಾಚನೆ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಇಂದು ಸ್ಪೀಕರ್ ತಾವು ನೀಡಿದ್ದ ಮಾತಿಗೆ ತಪ್ಪಲಾರರು ಎನ್ನುವ ಎನ್ನುವ ಭರವಸೆಯಲ್ಲಿ ಇದ್ದಾರೆ.

    ಸೋಮವಾರದ ರಾತ್ರಿ 11.30ರ ವೇಳೆಗೆ ಸ್ಪೀಕರ್, ಇಡೀ ರಾಜ್ಯದ ಜನರು ನಮ್ಮ ನಡವಳಿಕೆಗಳನ್ನು ನೋಡುತ್ತಿದ್ದಾರೆ. ಇನ್ನೂ ವಿಳಂಬ ಮಾಡುವುದು ಸರಿಯಲ್ಲ. ನಾನು ರಾತ್ರಿ 11 ಗಂಟೆಗೆಯವರೆಗೂ ಇಲ್ಲಿಯೇ ಕೂರುತ್ತೇನೆ. ಯಾರು ಬೇಕಾದರೂ ಚರ್ಚೆ ಮಾಡಿ. ಇವತ್ತೇ ವಿಶ್ವಾಸಮತದ ನಿರ್ಣಯದ ಪ್ರಕ್ರಿಯೆಯನ್ನು ಮುಗಿಸೋಣ ಎಂದು ಹೇಳಿದರು.

    ಸಿದ್ದರಾಮಯ್ಯನವರು ಎದ್ದು ನಿಂತು ಮಂಗಳವಾರ ಎಲ್ಲದ್ದಕ್ಕೂ ಅಂತ್ಯ ಹಾಡೋಣ ಎಂದಾಗ ಸ್ಪೀಕರ್ ಎಷ್ಟು ಗಂಟೆಯ ಒಳಗಡೆ ಮುಗಿಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿದ್ದರಾಮಯ್ಯ ರಾತ್ರಿ 8 ಗಂಟೆ ಎಂದಾಗ ಸ್ಪೀಕರ್ ಇಷ್ಟು ಸಮಯ ನೀಡುವುದಿಲ್ಲ. ಸಂಜೆ 4 ಗಂಟೆಗೆ ಚರ್ಚೆ ಮುಗಿಯಬೇಕು ನಂತರ ಸಿಎಂ ಮಾತನಾಡಿ 6 ಗಂಟೆಗೆ ಎಲ್ಲ ಪ್ರಕ್ರಿಯೆ ಮುಗಿಯಬೇಕು ಎಂದು ಹೇಳಿ ಕಲಾಪವನ್ನು ಮುಂದೂಡಿದ್ದರು.

  • ಇಡೀ ರಾತ್ರಿ ಸದನದಲ್ಲೇ ಸತ್ಯಾಗ್ರಹ ಮಾಡುತ್ತೇವೆ: ಬಿಎಸ್‍ವೈ

    ಇಡೀ ರಾತ್ರಿ ಸದನದಲ್ಲೇ ಸತ್ಯಾಗ್ರಹ ಮಾಡುತ್ತೇವೆ: ಬಿಎಸ್‍ವೈ

    ಬೆಂಗಳೂರು: ಇವತ್ತು ಸದನದಲ್ಲಿ ಅವರ ಶಾಸಕರೆಷ್ಟಿದ್ದರು? ನಮ್ಮ ಶಾಸಕರೆಷ್ಟಿದ್ದರು? ಸ್ಪೀಕರ್‌ಗೆ ಇದಕ್ಕಿಂತ ಪುರಾವೆ ಬೇಕಿತ್ತಾ? ಇವತ್ತಿನ ಕಾರ್ಯಕಲಾಪ ಮುಂದೂಡುವುದು ಮೈತ್ರಿ ನಾಯಕರ ಷಡ್ಯಂತ್ರವಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.

    ನಾವು ಇಡೀ ರಾತ್ರಿ ಸದನದಲ್ಲೇ ಸತ್ಯಾಗ್ರಹ ಮಾಡುತ್ತೇವೆ. ದೇಶ, ರಾಜ್ಯದ ಜನಕ್ಕೆ ತಿಳಿಯಲಿ. ಅದೆಷ್ಟು ಇವರು ಹೀಗೇ ಕಲಾಪ ನಡೆಸುತ್ತಾರೋ ನೋಡೋಣ. ವಿಶ್ವಾಸಮತಯಾಚನೆ ಮಾಡುತ್ತಾರೆಂದು ನಾವು ಸದನ ನಡೆಸಲು ಒಪ್ಪಿಗೆ ನೀಡಿದೆವು, ಆದರೆ ಅನಗತ್ಯವಾಗಿ ಕಾಲಹರಣ ಮಾಡಿದ್ದಾರೆ ಎಂದು ಮೈತ್ರಿ ಪಕ್ಷದ ನಾಯಕರ ವಿರುದ್ಧ ಗುಡುಗಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂದಿನ ಸದನವನ್ನು ಇಡೀ ದೇಶ ನೋಡಿದೆ, ಸದನದಲ್ಲಿ ಹೇಗೆ ನಡೆದುಕೊಂಡಿದ್ದಾರೆ ಎಂದು ಜನರಿಗೆ ತಿಳಿದಿದೆ. ಇಂದೇ ವಿಶ್ವಾಸ ಮತ ಯಾಚನೆ ಮಾಡುತ್ತಾರೆಂದು ಎಂದು ಹೇಳಿದ್ದಕ್ಕೆ ನಾವು ಒಪ್ಪಿಗೆ ನೀಡಿದ್ದೇವೆ. ವಿಶ್ವಾಸ ಮತ ಪ್ರಸ್ತಾವನೆ ಬಳಿಕ ಹದಿನೈದು ನಿಮಿಷದ ಬಳಿಕ ಅನಗತ್ಯ ವಿಚಾರ ಮಧ್ಯಕ್ಕೆ ತಂದರು. ಸ್ಪೀಕರ್ ಮಾತಿಗೆ ಬೆಲೆಕೊಟ್ಟು ವಿಶ್ವಾಸಮತಯಚನೆಗೆ ಅವಕಾಶ ಕೊಟ್ಟೆವು. ಹೀಗಾಗಿ ನಾವು ಹಠ ಮಾಡಲಿಲ್ಲ ಎಂದು ಬಿಎಸ್‍ವೈ ತಿಳಿಸಿದರು.

    ಮೈತ್ರಿ ಪಕ್ಷಗಳ ಬಳಿ ಕೇವಲ 98 ಸಂಖ್ಯೆ ಇದೆ, ನಮ್ಮ ಬಳಿ 105 ಶಾಸಕರಿದ್ದಾರೆ. ಇಷ್ಟಾದರೂ ಸಿಎಂ ರಾಜೀನಾಮೆ ನೀಡಲಿಲ್ಲ. ಇಂದು ವಿಶ್ವಾಸ ಮತ ಸಾಬೀತು ಪಡಿಸದೆ, ಪ್ರಜಾತಂತ್ರ ವ್ಯವಸ್ಥೆಯ ಅಣಕು ಮಾಡಿದ್ದಾರೆ. ಒಂದು ರೀತಿ ಸರ್ಕಾರವನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಸುಪ್ರೀಂಕೋರ್ಟ್ ಎಲ್ಲವನ್ನೂ ಗಮನಿಸುತ್ತಿದೆ ಎಂದು ಹರಿಹಾಯ್ದರು.

    ರಾಜ್ಯಪಾಲರ ಸೂಚನೆಗೂ ಕಿಮ್ಮತ್ತಿಲ್ಲ
    ನಮ್ಮ ಮನವಿಗೆ ರಾಜ್ಯಪಾಲರು ಸ್ಪಂದಿಸಿ, ಸ್ಪೀಕರ್‌ಗೆ  ಸೂಚನೆ ನೀಡಿದರು. ವಿಶ್ವಾಸಮತಯಾಚನೆ ಮುಗಿಸಬೇಕೆಂದು ರಾಜ್ಯಪಾಲರು ಸಂದೇಶ ಕಳುಹಿಸಿದ್ದರು. ಹೀಗಾಗಿ ರೂಲಿಂಗ್ ಕೊಡುವಂತೆ ಕೇಳಿದೆವು. ಆದರೆ ಸ್ಪೀಕರ್ ರೂಲಿಂಗ್ ಕೊಡಲಿಲ್ಲ. ರಾಜ್ಯಪಾಲರ ಮತನ್ನೂ ಕೇಳದೆ ಪ್ರಜಾಪ್ರಭುತ್ವವವನ್ನೇ ಬುಡಮೇಲು ಮಾಡಲಾಗುತ್ತಿದೆ. ಇವರಿಗೆಲ್ಲ ಏನಾಗಿದೆ. ಅಭಿವೃದ್ಧಿ ಕುಂಠಿತವಾಗಿ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ಚರ್ಚೆ ಮಾಡದೇ ರಾಜಿನಾಮೆ ನೀಡಬೇಕಿತ್ತು ಎಂದು ಯಡಿಯೂರಪ್ಪ ಕಿಡಿ ಕಾರಿದರು.

    ಸುಪ್ರೀಂಕೋರ್ಟ್ ಆದೇಶ ಸ್ಪಷ್ಟವಾಗಿದ್ದು, ಅರ್ಜಿದಾರ ಶಾಸಕರು ಸದನಕ್ಕೆ ಬರುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಆದೇಶಿಸಿದೆ. ಶಾಸಕರಿಗೆ ವಿಪ್ ನೀಡಲು ಬಿಜೆಪಿ ಅಕ್ಷೇಪ ಮಾಡಿಲ್ಲ. ವಿಪ್ ಜಾರಿ ಮಾಡಿದರೆ ಶಾಸಕರಿಲ್ಲದೇ ಬಹುಮತ ಕಳೆದುಕೊಳ್ಳುತ್ತೇವೆ ಎಂದು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಈ ವಿಷಯ ಸಿಎಂಗೆ ಗೊತ್ತಿರಲಿಲ್ಲವೇ ಎಂದು ಬಿಎಸ್‍ವೈ ಪ್ರಶ್ನಿಸಿದರು.

    ವರ್ಗಾವಣೆ ದಂಧೆ ಮೂಲಕ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ರಾತ್ರಿ ಹಗಲು ಸಾವಿರಾರು ಫೈಲ್‍ಗಳು ವಿಲೇವಾರಿಯಾಗುತ್ತಿವೆ. ಅಲ್ಪ ಮತಕ್ಕೆ ಕುಸಿದರೂ ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯಪಾಲರ ಸೂಚನೆ ಮೀರಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

  • ಸುಪ್ರೀಂ ತೀರ್ಪು ಸ್ವಾಗತಿಸಿ ಶಾಸಕರಲ್ಲಿ ಡಿಕೆಶಿ ಮನವಿ

    ಸುಪ್ರೀಂ ತೀರ್ಪು ಸ್ವಾಗತಿಸಿ ಶಾಸಕರಲ್ಲಿ ಡಿಕೆಶಿ ಮನವಿ

    ಬೆಂಗಳೂರು: ಅತೃಪ್ತ ಶಾಸಕರ ಪರ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದು, ಈ ತೀರ್ಪನ್ನು ಸಚಿವ ಡಿಕೆ ಶಿವಕುಮಾರ್ ಅವರು ಸ್ವಾಗತಿಸಿದ್ದಾರೆ. ಅಲ್ಲದೆ ಇದೇ ವೇಳೆ ಅತೃಪ್ತ ಶಾಸಕರಲ್ಲಿ ಸಚಿವರು ಮನವಿ ಕೂಡ ಮಾಡಿಕೊಂಡಿದ್ದಾರೆ.

    ತೀರ್ಪು ಹೊರ ಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಅದನ್ನು ನಾನು ಸಚಿವ ಅಲ್ಲ ಓರ್ವ ಶಾಸಕನಾಗಿ ಗೌರವಿಸುತ್ತೇನೆ. ನ್ಯಾಯಾಲಯ ಸ್ಪೀಕರ್ ಅಧಿಕಾರ ಏನು ಅನ್ನೋದನ್ನ ಎತ್ತಿ ಹಿಡಿದಿದೆ ಎಂದರು.

    ಶಾಸಕರು ಕಲಾಪಕ್ಕೆ ಹೋಗಬಹುದು ಬಿಡಬಹುದು. ಆದರೆ, ಪಕ್ಷದ ಕೈಯಲ್ಲಿ ವಿಪ್ ಇದೆಯಲ್ಲ. ಅನರ್ಹತೆಯೇ ಬೇರೆಯ ಕಾನೂನಾಗಿದ್ದು, ನಾನು ನನ್ನ ಶಾಸಕರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

    ಮನವಿಯೇನು?
    ಬೇರೆಯವರ ನಂಬಿ ಹೋಗಬೇಡಿ. ನಿಮ್ಮ ಮೇಲೆ ಮಂಗನ ಟೋಪಿ ಹಾಕುತ್ತಾರೆ. ಅನರ್ಹತೆ ಅನ್ನೋದು ಒಂದು ಇದೆ ಅಲ್ವಾ. ಅನರ್ಹ ಆದರೆ ನೀವು ಮತ್ತೆ ಮಂತ್ರಿ ಆಗಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮನ್ನು ಗೆಲ್ಲಿಸಿರುವ ಜನರ ಮುಖ, ನಿಮ್ಮ ಕುಟುಂಬದವರ ಮುಖ ನೋಡಿ ನೀವು ಅನರ್ಹತೆಯ ಅಸ್ತ್ರಕ್ಕೆ ಬಲಿಯಾಗಬೇಡಿ. ವಿಶ್ವಾಸ ಮತದ ಬಗ್ಗೆ ನಾಳೆ ಮಾತನಾಡೋಣ ಎಂದು ಶಾಸಕ ಮಿತ್ರರಲ್ಲಿ ಮನವಿ ಮಾಡುವ ಮೂಲಕ ಡಿಕೆಶಿ ಅವರು ಪರೋಕ್ಷವಾಗಿ ಅನಹರ್ತೆಯ ಭಯ ಹುಟ್ಟಿಸಿದ್ದಾರೆ.

    ತೀರ್ಪು ಏನು?
    ಗುರುವಾರ ವಿಶ್ವಾಸಮತಯಾಚನೆ ಮಾಡಬಹುದು. ರಾಜೀನಾಮೆ ನೀಡಿರುವ 15 ಶಾಸಕರು ಕಲಾಪಕ್ಕೆ ಭಾಗವಹಿಸುವುದು ಕಡ್ಡಾಯವಲ್ಲ. ಹಾಜರಾಗಬೇಕೋ ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅತೃಪ್ತ ಶಾಸಕರನ್ನು ಒತ್ತಾಯಪೂರ್ವಕವಾಗಿ ಕರೆತರುವ ಹಾಗಿಲ್ಲ ಎಂದು ಸುಪ್ರೀಂ ಮಧ್ಯಂತರ ಆದೇಶವನ್ನು ಪ್ರಕಟಿಸುವ ಮೂಲಕ ಅತೃಪ್ತರಿಗೆ ಬಿಗ್ ರಿಲೀಫ್ ನೀಡಿದೆ.

    ತನ್ನ ಆದೇಶಲ್ಲಿ ಶಾಸಕರ ಅನರ್ಹತೆಯ ಬಗ್ಗೆ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡದ ಕೋರ್ಟ್ ಶಾಸಕರ ರಾಜೀನಾಮೆಯನ್ನು ನಿಗದಿತ ಅವಧಿಯ ಒಳಗಡೆ ಇತ್ಯರ್ಥ ಮಾಡಬೇಕು ಎಂದು ಸ್ಪೀಕರ್ ಅವರಿಗೆ ಸೂಚಿಸಿದೆ. ಈ ಮೂಲಕ ರಮೇಶ್ ಕುಮಾರ್ ಅವರಿಗೆ ಕೋರ್ಟ್ ಪೂರ್ಣ ಅಧಿಕಾರವನ್ನು ನೀಡಿದ್ದು ಸ್ಪೀಕರ್ ರಾಜೀನಾಮೆ ಅಂಗೀಕಾರಿಸುತ್ತಾರೋ ಅಥವಾ ಅನರ್ಹತೆ ನಿರ್ಧಾರ ಪ್ರಕಟಿಸುತ್ತಾರೋ ಎನ್ನುವ ಕುತೂಹಲ ಹೆಚ್ಚಾಗಿದೆ.

    ರಾಜೀನಾಮೆ ಅಂಗೀಕರಿಸಿಲ್ಲ ಎಂದು ಸ್ಪೀಕರ್ ವಿರುದ್ಧ 15 ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಂಗಳವಾರ ಸುಮಾರು 212 ನಿಮಿಷ ನಡೆದಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ದೀಪಕ್ ಗುಪ್ತಾ ಹಾಗೂ ಅನಿರುದ್ಧ್ ಬೋಸ್ ಅವರಿದ್ದ ತ್ರಿಸದಸ್ಯ ಪೀಠದ ಎದುರು ಮುಕುಲ್ ರೊಹ್ಟಗಿ, ಅಭಿಷೇಕ್ ಸಿಂಘ್ವಿ, ರಾಜೀವ್ ಧವನ್ ನಡುವೆ ಅಕ್ಷರಶಃ ವಾಗ್ಯುದ್ಧವೇ ನಡೆದಿತ್ತು. ಸುಮಾರು 3 ಗಂಟೆ 45 ನಿಮಿಷಗಳ ವಾದ ವಿವಾದಗಳನ್ನು ಆಲಿಸಿದ ತ್ರಿಸದಸ್ಯ ಪೀಠ ತೀರ್ಪನ್ನು ಬುಧವಾರ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿತ್ತು.

  • ವಿಶ್ವಾಸಮತಕ್ಕೆ ಮುನ್ನವೇ ಕೈಚೆಲ್ಲಿ ಕುಳಿತ ಕಾಂಗ್ರೆಸ್ – ಇನ್ನೂ ಏನೋ ಒಂದು ಆಸೆಯಲ್ಲಿದೆ ಜೆಡಿಎಸ್

    ವಿಶ್ವಾಸಮತಕ್ಕೆ ಮುನ್ನವೇ ಕೈಚೆಲ್ಲಿ ಕುಳಿತ ಕಾಂಗ್ರೆಸ್ – ಇನ್ನೂ ಏನೋ ಒಂದು ಆಸೆಯಲ್ಲಿದೆ ಜೆಡಿಎಸ್

    ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರ ಮುಖ್ಯಮಂತ್ರಿಗಳು ವಿಶ್ವಾಸಮತಯಾಚಿಸಲಿದ್ದು, ಅದಕ್ಕೂ ಮುನ್ನವೇ ಕಾಂಗ್ರೆಸ್ ನಾಯಕರು ಕೈ ಚೆಲ್ಲಿ ಕುಳಿತಿದ್ದಾರೆ.

    ಮುಂಬೈಗೆ ಹೋಗಿರೋ ಅತೃಪ್ತರನ್ನು ಮನವೊಲಿಸಿ ಕರೆತರೋದು ಸಾಧ್ಯವಿಲ್ಲ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಹೋಗಿರೋರು ಬರಲ್ಲ. ಇದ್ದವರು ಹೋಗಬೇಡ್ರಪ್ಪಾ ಎಂದು ರೆಸಾರ್ಟ್ ನಲ್ಲಿರೋ ಕಾಂಗ್ರೆಸ್ ಶಾಸಕರಿಗೆ ಹಿರಿಯ ನಾಯಕರು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಾಂಗ್ರೆಸ್ ನಾಯಕರು ಮತ್ತು ಶಾಸಕರಿಗೆ ಈ ಸರ್ಕಾರ ಉಳಿಯೋದು ಕಷ್ಟ ಅನ್ನೋದು ಈಗಾಗಲೇ ಗೊತ್ತಾಗಿದೆ. ಆದರೆ ಜೆಡಿಎಸ್ ನಾಯಕರು ಮಾತ್ರ ಕೊನೆ ಕ್ಷಣದ ಮ್ಯಾಜಿಕ್ ನಿರೀಕ್ಷೆಯಲ್ಲಿದ್ದಾರೆ. ಅತೃಪ್ತರು ವಾಪಸ್ ಬರ್ತಾರೆ, ಸರ್ಕಾರ ಉಳಿಯುತ್ತದೆ ಅನ್ನೋ ನಂಬಿಕೆಯಲ್ಲಿದ್ದಾರೆ. ಇತ್ತ ನಿನ್ನೆ ರಾತ್ರಿ ಜೆಡಿಎಸ್ ಶಾಸಕರು ತಂಗಿರೋ ದೇವನಹಳ್ಳಿಯ ಖಾಸಗಿ ರೆಸಾರ್ಟ್ ಗೆ ಸಿಎಂ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.

    ಕಳೆದ 8 ದಿನಗಳಿಂದ ಜೆಡಿಎಸ್ ಶಾಸಕರು ಇದೇ ರೆಸಾರ್ಟ್ ನಲ್ಲಿ ತಂಗಿದ್ದು, ಸಿಎಂ ಐದು ಬಾರಿ ಭೇಟಿ ನೀಡಿದ್ದಾರೆ. ಈ ನಡುವೆ ಮತ್ತಷ್ಟು ಶಾಸಕರು ಕೈಕೊಡುವ ಭೀತಿಯಲ್ಲಿರುವ ದೋಸ್ತಿಗಳು, ತಮ್ಮ ತಮ್ಮ ಶಾಸಕರು ಇರುವ ರೆಸಾರ್ಟ್ ಗಳಿಗೆ ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಸ್ವತಃ ಗೃಹ ಸಚಿವ ಎಂ ಬಿ ಪಾಟೀಲ್, ರೆಸಾರ್ಟ್ ಗಳಿಗೆ ಭೇಟಿ ನೀಡಿ ಪೊಲೀಸ್ ಭದ್ರತೆ ಪರಿಶೀಲಿಸಿದ್ದಾರೆ ಎನ್ನಲಾಗಿದೆ.

    ರಾಜ್ಯದ ಮೈತ್ರಿ ಸರ್ಕಾರದ ಅಳಿವು, ಉಳಿವಿನ ಪ್ರಶೆಯಾಗಿರೋ ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಸಂಬಂಧಿತ ತೀರ್ಪನ್ನು ಇಂದು ಸುಪ್ರೀಂಕೋರ್ಟ್ ನೀಡಲಿದೆ. ಮಂಗಳವಾರ ಸುದೀರ್ಘ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ.

  • ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಸಿಎಂ – ಇತ್ತ ಶಾಸಕರೊಂದಿಗೆ ಬಿಎಸ್‍ವೈ ಚರ್ಚೆ

    ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಸಿಎಂ – ಇತ್ತ ಶಾಸಕರೊಂದಿಗೆ ಬಿಎಸ್‍ವೈ ಚರ್ಚೆ

    ಬೆಂಗಳೂರು: ಇಂದಿನ ವಿಧಾನಸಭಾ ಕಲಾಪದಲ್ಲಿ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಬೆನ್ನಲ್ಲೇ ಬಿ.ಎಸ್. ಯಡಿಯೂರಪ್ಪ ತಮ್ಮ ಶಾಸಕರೊಂದಿಗೆ ಚರ್ಚೆ ಮಾಡುತ್ತಿದ್ದಾರೆ.

    ಸದನದಲ್ಲಿ ಸಿಎಂ ಅವರು ನಾನು ಅಧಿಕಾರದಲ್ಲಿ ಶಾಶ್ವತವಾಗಿ ಕುಳಿತುಕೊಳ್ಳಲು ಬಂದಿಲ್ಲ. ಹಲವು ಶಾಸಕರ ಕೆಲ ನಿರ್ಣಯಗಳಿಂದ ಗೊಂದಲದ ವಾತಾವರಣ ನಿರ್ಮಾಣ ಆಗಿದೆ. ಆದ್ದರಿಂದ ನಾನು ವಿಶ್ವಾಸ ಮತ ಮಂಡನೆ ಮಾಡಲು ತೀರ್ಮಾನಿಸಿದ್ದೇನೆ. ಇದನ್ನು ಸದನದ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ. ನಾನು ಎಲ್ಲದಕ್ಕೂ ತಯಾರಾಗಿ ಬಂದಿದ್ದು, ಸದನದ ಮುಖಾಂತರ ಒಂದು ಉತ್ತಮ ನಿರ್ಧಾರ ಮಾಡುವ ಅವಕಾಶ ಕೋರುತ್ತಿದ್ದೇನೆ ಎಂದರು. ಇದೇ ಸದನದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರು ಸಿಎಂ ಮಾತನ್ನು ಕೇಳಿದ್ದ ತಕ್ಷಣ ಕಲಾಪದ ಮಧ್ಯೆ ತಮ್ಮ ಕೊಠಡಿಗೆ ಎದ್ದು ಹೋಗಿದ್ದಾರೆ.

    ಕೊಠಡಿಯಲ್ಲಿ ಯಡಿಯೂರಪ್ಪ ಕೆಲ ಬಿಜೆಪಿ ಶಾಸಕರೊಂದಿಗೆ ಚರ್ಚೆ ಮಾಡಿದ್ದಾರೆ. ವಿಶ್ವಾಸ ಮತಕ್ಕೆ ಕೋರಿದ ಹಿನ್ನೆಲೆಯಲ್ಲಿ 14 ದಿನಗಳ ಒಳಗಡೆ ಸ್ಪೀಕರ್ ಯಾವ ದಿನ ಬೇಕಾದರೂ ಅನುಮತಿ ನೀಡಬಹುದು.

    ಸಿಎಂ ವಿಶ್ವಾಸಮತಯಾಚನೆಗೆ ಸಮಯ ಕೇಳುತ್ತಾರೆ ಎಂದು ಬಿಜೆಪಿಯವರು ಊಹಿಸಿರಲಿಲ್ಲ. ಸಿಎಂ ಅವರ ನಿರ್ಧಾರ ಬಿಜೆಪಿ ಅಚ್ಚರಿ ಮೂಡಿಸಿದ್ದು, ಸರ್ಕಾರ ರಕ್ಷಣೆಗೆ ದೋಸ್ತಿ ನಾಯಕರು ಏನು ಪ್ಲಾನ್ ಮಾಡಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಬಿಎಸ್‍ವೈ ಸಿಎಂ ಅವರು ಪ್ಲಾನ್ ಏನು, ನಮ್ಮ ಮುಂದಿನ ನಡೆ ಏನು? ಎಂಬುದರ ಬಗ್ಗೆ ಶಾಸಕರೊಂದಿಗೆ ಚರ್ಚೆ ಮಾಡುತ್ತಿದ್ದಾರೆ.

    ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿ ಮಂಗಳವಾರದವರೆಗೂ ಯಥಾಸ್ಥಿತಿಯಲ್ಲಿ ಇರಬೇಕು ಎಂದು ಆದೇಶ ನೀಡಿದೆ. ಈ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಂತಿಲ್ಲ, ಜೊತೆಗೆ ಅವರನ್ನು ಅನರ್ಹ ಮಾಡುವಂತಿಲ್ಲ ಎಂದು ಆದೇಶಿಸಿದೆ. ಕೋರ್ಟಿನ ಇಂದಿನ ಆದೇಶದಿಂದ ದೋಸ್ತಿ ಸರ್ಕಾರ ತಾತ್ಕಾಲಿಕವಾಗಿ ಸೇಫ್ ಆಗಿದೆ. ಇತ್ತ ಅನರ್ಹ ಭೀತಿಯಲ್ಲಿದ್ದ ಅತೃಪ್ತರು ಕೂಡ ರಿಲೀಫ್ ಆಗಿದ್ದಾರೆ.

  • ವಿಶ್ವಾಸ ಮತಯಾಚನೆಗೆ ನಾನು ಸಿದ್ಧ : ಸಿಎಂ

    ವಿಶ್ವಾಸ ಮತಯಾಚನೆಗೆ ನಾನು ಸಿದ್ಧ : ಸಿಎಂ

    ಬೆಂಗಳೂರು: ರಾಜ್ಯ ರಾಜಕೀಯ ಗೊಂದಲದ ಕಾರಣದಿಂದ ವಿಶ್ವಾಸ ಮತಯಾಚನೆ ನನಗೆ ಅನಿವಾರ್ಯ ಎನಿಸಿದೆ. ನನ್ನ ಅಭಿಪ್ರಾಯ ಹಿನ್ನೆಲೆಯಲ್ಲಿ ವಿಶ್ವಾಸ ಮತಯಾಚನೆ ಮಾಡಲು ನಿರ್ಧರಿಸಿದ್ದೇನೆ ಸಿಎಂ ಕುಮಾರಸ್ವಾಮಿ ಅವರು ಸದನದಲ್ಲಿ ಹೇಳಿದ್ದಾರೆ.

    ಸದನದಲ್ಲಿ ಮಾತನಾಡಿದ ಸಿಎಂ ಅವರು, ನಾನು ಅಧಿಕಾರದಲ್ಲಿ ಶಾಶ್ವತವಾಗಿ ಕುಳಿತುಕೊಳ್ಳಲು ಬಂದಿಲ್ಲ. ಹಲವು ಶಾಸಕರ ಕೆಲ ನಿರ್ಣಯಗಳಿಂದ ಗೊಂದಲದ ವಾತಾವರಣ ನಿರ್ಮಾಣ ಆಗಿದೆ. ಆದ್ದರಿಂದ ನಾನು ವಿಶ್ವಾಸ ಮತಯಾಚನೆ ಮಾಡಲು ತೀರ್ಮಾನಿಸಿದ್ದೇನೆ. ಇದನ್ನು ಸದನದ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ. ನಾನು ಎಲ್ಲದಕ್ಕೂ ತಯಾರಾಗಿ ಬಂದಿದ್ದು, ಸದನದ ಮುಖಾಂತರ ಒಂದು ಉತ್ತಮ ನಿರ್ಧಾರ ಮಾಡುವ ಅವಕಾಶ ಕೋರುತ್ತಿದ್ದೇನೆ ಎಂದರು.

    ಗಣ್ಯರ ನಿಧನಕ್ಕೆ ಸಂತಾಪ ಸೂಚಿಸುವ ಮುನ್ನ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಕುರಿತು ತಿಳಿಸಿದರು. ವಿಶ್ವಾಸ ಮತಯಾಚನೆಗೆ ಸ್ಪೀಕರ್ ಅವರು ಸಮಯ ನಿಗದಿ ಮಾಡಲಿದ್ದು, ಸಿಎಂ ಮನವಿ ಬಳಿಕ 14 ದಿನಗಳ ವರೆಗೂ ವಿಶ್ವಾಸ ಮತಯಾಚನೆಗೆ ಸಮಯ ನಿಗದಿ ಮಾಡುವ ಅವಕಾಶ ಇದೆ. ಮಂಗಳವಾರ ಅತೃಪ್ತ ಶಾಸಕ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಇರುವುದರಿಂದ ಸಿಎಂರ ನಡೆ ಕುತೂಹಲ ಮೂಡಿಸಿದೆ.

    ಇತ್ತ ಸಿಎಂ ಅವರ ನಿರ್ಧಾರ ಬಿಜೆಪಿ ನಾಯಕರಿಗೆ ಅಚ್ಚರಿ ಮೂಡಿಸಿದ್ದು ಸರ್ಕಾರ ರಕ್ಷಣೆಗೆ ದೋಸ್ತಿ ನಾಯಕರು ಏನು ಪ್ಲಾನ್ ಮಾಡಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಸದ್ಯ ಮಂಗಳವಾರದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯ ಸೂಚನೆ ನೀಡಿರುವುದಿರಿಂದ ಮಂಗಳವಾರದ ಬಳಿಕ ಏನೆಲ್ಲಾ ಬೆಳೆವಣಿಗೆಗಳು ನಡೆಯಲಿದೆ ಎಂಬುದು ಕುತೂಹಲ ಮೂಡಿದೆ. ಸಿಎಂ ನಿರ್ಧಾರದ ಬೆನ್ನಲ್ಲೇ ಸದನದಿಂದ ತಮ್ಮ ಕೊಠಡಿಗೆ ತೆರಳಿದ ಬಿಎಸ್‍ವೈ ಅವರು ಕೆಲ ಶಾಸಕರೊಂದಿಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು.