Tag: ವಿಶ್ವಾಸ್ ಗೌಡ

  • ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದವ್ರ ನೆರವಿಗೆ ನಿಂತ ಜಿಮ್ ಮಾಲೀಕ

    ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದವ್ರ ನೆರವಿಗೆ ನಿಂತ ಜಿಮ್ ಮಾಲೀಕ

    – ಸನ್ಮಾನಿಸಿದ ಶಾಲುಗಳನ್ನೇ ನಿರ್ಗತಿಕರಿಗೆ ದಾನ ಮಾಡಿದ್ರು

    ಬೆಂಗಳೂರು: ಲಾಕ್‍ಡೌನ್ ಜಾರಿಯಾದ ಬಳಿಕ ನಗರದಲ್ಲಿರುವ ಭಿಕ್ಷುಕರು ಮತ್ತು ವಲಸೆ ಕಾರ್ಮಿಕರು ಆಹಾರಕ್ಕಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂತ್ರಸ್ತರಿಗೆ ವಿಜಯನಗರದ ಐರನ್ ಟೆಂಪಲ್ ಜಿಮ್ ಮಾಲೀಕ ಒಡಿ ಇಂಡಿಯಾ ವಿಶ್ವಾಸ್‍ಗೌಡ ನೆರವಾಗಿದ್ದಾರೆ. ನಿತ್ಯ ನೂರಾರು ಜನ್ರಿಗೆ ಉಚಿತವಾಗಿ ಆಹಾರ ನೀರು ಪೂರೈಸುತ್ತಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ತಮ್ಮ ಊರುಗಳಿಗೂ ಹೋಗಲಾಗದೆ, ಇತ್ತ ನಗರದಲ್ಲಿಯೂ ಇರಲಾಗದೆ ಸಣ್ಣಪುಟ್ಟ ಶೆಡ್ ಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಹಾಗೂ ವಿವಿಧ ಸಮುದಾಯ ಭವನಗಳಲ್ಲಿರುವ ಕಾರ್ಮಿಕರಿಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

    ಪ್ರೊಫೆಷನಲ್ ಬಾಡಿಬಿಲ್ಡರ್ ಆಗಿರುವ ವಿಶ್ವಾಸ್‍ಗೌಡ ಲಾಕ್‍ಡೌನ್ ಜಾರಿಯಾದ ಬಳಿಕ ಆಹಾರವಿಲ್ಲದೆ ಪರದಾಡುತ್ತಿದ್ದ ಜನರಿಗೆ ನೆರವಾಗಲು ತಮ್ಮದೇ ಜಿಮ್‍ನಲ್ಲಿ ಕಸರತ್ತು ಮಾಡುತ್ತಿದ್ದ ಯುವಕರ ಗುಂಪು ಕಟ್ಟಿಕೊಂಡು ಈ ಅನ್ನ ದಾಸೋಹ ಕಾರ್ಯ ಆರಂಭಿಸಿದ್ದಾರೆ.

    ಕಳೆದ 20 ದಿನಗಳಿಂದ ಪ್ರತಿದಿನ ಆಹಾರ ಮತ್ತು ಬಡ ಕುಟುಂಬದವರಿಗೆ ರೇಷನ್ ಕಿಟ್ (ಅಕ್ಕಿ, ಬೇಳೆ, ಸಕ್ಕರೆ, ರವೆ, ಉಪ್ಪು, ಎಣ್ಣೆ ಈರುಳ್ಳಿ, ಸೋಪ್) ಗಳನ್ನು ಹಂಚುತ್ತಿದ್ದಾರೆ. ಜೊತೆಗೆ ನಿರ್ಗತಿಕರಿಗೆ ಹೊದ್ದು ಮಲಗಲು ತಮಗೆ ಸನ್ಮಾನಿಸಿದ ಶಾಲುಗಳನ್ನೇ ಕೊಟ್ಟು ಹೃದಯ ವೈಶಾಲ್ಯತೆ ಮೆರೆಯುತ್ತಿದ್ದಾರೆ.