Tag: ವಿಶ್ವವಿದ್ಯಾಲಯ

  • ಪಿಎಚ್‍ಡಿ ಸಂಶೋಧನಾ ವಿದ್ಯಾರ್ಥಿ ಈಗ ಹಿಜ್ಬುಲ್ ಉಗ್ರ!

    ಪಿಎಚ್‍ಡಿ ಸಂಶೋಧನಾ ವಿದ್ಯಾರ್ಥಿ ಈಗ ಹಿಜ್ಬುಲ್ ಉಗ್ರ!

    ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ಆಘಾತಕಾರಿ ವಿಚಾರ ಈಗ ಬೆಳಕಿಗೆ ಬಂದಿದೆ.

    ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ಜಮ್ಮು ಮತ್ತು ಕಾಶ್ಮೀರ ಮೂಲಕ ಮನ್ನನ್ ವಾನಿ ಎಂಬಾತ ಉಗ್ರ ಘಟನೆ ಸೇರ್ಪಡೆಯಾಗಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಈ ಕುರಿತು ಫೋಟೋವೊಂದು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿತ್ತು. ಫೋಟೋ ಪ್ರಕರಟವಾದ ಬಳಿಕ ವಿವಿ ಆತನನ್ನು ಈಗ ಕಿತ್ತುಹಾಕಿದೆ.

    ಕಾಶ್ಮೀರದಲ್ಲಿ ಉಪನ್ಯಾಸಕರಾಗಿರುವ ಬಶೀರ್ ಅಹ್ಮದ್ ವಾನಿಯವರ ಪುತ್ರ ಮನ್ನನ್ ವಾನಿ ಜನವರಿ 5 ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆಂಬ ಸಂದೇಶವೊಂದು ಫೋಟೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಕೆಲ ದಿನಗಳಿಂದ ಮನ್ನನ್ ವಾನಿ ಸಹ ಕೆಲ ದಿನಗಳಿಂದ ಕಣ್ಮರೆಯಾಗಿದ್ದು ಈ ಹಿನ್ನಲೆಯಲ್ಲಿ ಉತ್ತರಪ್ರದೇಶ ಪೊಲೀಸರು ಆತನ ರೂಮಿನ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ.

    ಸಾಂಧರ್ಬಿಕ ಚಿತ್ರ

    ಸಾಮಾಜಿಕ ಜಾಲತಾಣದಲ್ಲಿರುವ ಫೋಟೋದಲ್ಲಿ ಮನ್ನನ್ ವಾನಿ ಕೈಯಲ್ಲಿ ಎಕೆ.47 ಹಿಡಿದುಕೊಂಡಿದ್ದಾನೆ. ಇದರ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿನ ಮನ್ನನ್ ವಾನಿ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಕೊಠಡಿಯನ್ನು ಸೀಲ್ ಮಾಡಿದ್ದಾರೆ.

    ವಿಶ್ವವಿದ್ಯಾಲಯದ ಅಧಿಕಾರಿ ಎಂ ಮೊಹ್ಸಿನ್ ಖಾನ್ ಅವರು, ಮೆನ್ನನ್ ವಿವಿಯ 1985ರ ಶಿಸ್ತುಪಾಲನ ನಿಯಮಗಳನ್ನು ಉಲ್ಲಂಘನೆ ಮಾಡಿದ ಸಂದರ್ಭದಲ್ಲಿ ವಿವಿ ಉಪಕುಲಪತಿಗಳಿಗೆ ದೂರು ನೀಡಿದ್ದರು. ಇದರ ಅನ್ವಯ ಕುಲಪತಿಗಳು ಮೆನ್ನನ್ ಮೇಲೆ ತನಿಖೆ ನಡೆಸಲು ಆದೇಶ ನೀಡಿದ್ದರು.

    ಮೆನ್ನನ್ ವಾನಿ 2012-13 ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ಎಂಎಸ್ಸಿ ಪದವಿಗೆ ಪ್ರವೇಶ ಪಡೆದಿದ್ದು ನಂತರ 2014 ರಲ್ಲಿ ಭೂವಿಜ್ಞಾನ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಆಯ್ಕೆ ಆಗಿದ್ದ.

    ವಿವಿ ಅಧಿಕಾರಿ ಓಮರ್ ಪೀರ್ಜಾದಾ ತಿಳಿಸಿರುವಂತೆ ಮೆನ್ನನ್ ಜನವರಿ 2 ರಿಂದ ಕಾಣೆಯಾಗಿದ್ದಾನೆ. ಅಲ್ಲದೇ ವಿವಿ ಹಾಸ್ಟೆಲ್ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ ಆತ ನಾಪತ್ತೆ ಆಗುವ 5 ದಿನಗಳ ಮುನ್ನ ಹಾಸ್ಟೆಲ್ ನಲ್ಲಿ ಊಟ ಮಾಡುವುದನ್ನು ಬಿಟ್ಟಿದ್ದ. ಆದರೆ ಹಾಸ್ಟೆಲ್ ನಲ್ಲಿ ಆತನ ರೂಮ್ ನಲ್ಲಿದ್ದ ವಿದ್ಯಾರ್ಥಿ ಆತನ ಕುರಿತು ಯಾವುದೇ ದೂರು ನೀಡಿಲ್ಲ. ಹಾಸ್ಟೆಲ್ 237 ಕೊಠಡಿಯಲ್ಲಿ ಮೆನ್ನನ್ ವಾಸಿಸುತ್ತಿದ್ದ, ಆತನ ರೂಮ್ ಮೇಲೆ ದಾಳಿ ನಡೆಸಿದ ಕುರಿತ ಪ್ರಕ್ರಿಯೆಯನ್ನು ವಿಡಿಯೋ ಮಾಡಲಾಗಿದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

    ಸೇನೆಯ ವಿರುದ್ಧ ಪೋಸ್ಟ್: ಈ ಹಿಂದೆ ಮನ್ನನ್ ವಾನಿ ಶ್ರೀನಗರದ ತನ್ನ ಮನೆಗೆ ಮರಳುತ್ತಿದ್ದಾಗ ಸೇನಾ ಪಡೆಗಳು ಕಿರುಕುಳ ನೀಡಿದ್ದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ. ಕಾರಿನಲ್ಲಿ ತೆರಳುವ ವೇಳೆ ಸೇನಾ ಅಧಿಕಾರಿಗಳು ತನ್ನ ಗುರುತು ಸಾಬೀತು ಪಡೆಸುವಂತೆ ಕೇಳಿದ್ದರೂ, ಅಲ್ಲದೇ ನೀನು ಏಕೆ ಉದ್ದ ಕೂದಲು ಬಿಟ್ಟಿದ್ದೀಯ, ಗಡ್ಡವನ್ನು ಏಕೆ ಕತ್ತರಿಸಿಲ್ಲ ಎಂದು ನನ್ನ ಶೂ, ಬಟ್ಟೆಯ ಬಗ್ಗೆ ಪ್ರಶ್ನಿಸಿ ನನ್ನನ್ನು ಉಗ್ರರ ರೀತಿ ನಡೆಸಿಕೊಂಡರು ಎಂಬುದಾಗಿ ಬರೆದುಕೊಂಡಿದ್ದ.

    ಪೋಲಿಸ್ ಎಸ್‍ಪಿ ಅತುಲ್ ಶ್ರೀವಾಸ್ತವ ತಿಳಿಸುವಂತೆ, ಮೆನನ್ ಸಹಪಾಠಿ ಸಹ ಜಮ್ಮು ಕಾಶ್ಮೀರದ ಮೂಲದನಾಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಮನೆಗೆ ಹೋಗಿದ್ದ ಆತ ಇದುವರೆಗೆ ಹಿಂದಿರುಗಿಲ್ಲ ಎಂದು ತಿಳಿಸಿದ್ದಾರೆ.

    ವಿಶ್ವವಿದ್ಯಾಲಯವು ಪ್ರಕರಣದ ಸಮಗ್ರ ತನಿಖೆ ನಡೆಸಲು ಸಂಪೂರ್ಣ ಸಹಕಾರ ನೀಡಲಿದ್ದು, ಹಾಸ್ಟೆಲ್‍ಗಳ ಮೇಲೆ ವಿವಿ ಸಂಪೂರ್ಣ ನಿಯಂತ್ರಣ ಹೊಂದಿದೆ. ಹಲವು ಬಾರಿ ಮಧ್ಯ ರಾತ್ರಿ ವಿವಿ ಅಧಿಕಾರಿಗಳು ಹಾಸ್ಟೆಲ್ ಮೇಲೆ ದಾಳಿ ನಡೆಸಿ ವಿದ್ಯಾರ್ಥಿಗಳು ಆಕ್ರಮ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿತ್ತು ಎಂದು ವಿವಿ ಶಿಸ್ತುಪಾಲನ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಮೆನ್ನನ್ ಇದುವರೆಗೂ ಉಗ್ರಸಂಘಟನೆಗೆ ಸೇರ್ಪಡೆಗೊಂಡಿದ್ದಾನಾ ಅಥವಾ ಇಲ್ಲವಾ ಎಂಬುವುದು ಖಚಿತವಾಗಿಲ್ಲ. ಪ್ರಸ್ತುತ ನಾಪತ್ತೆ ಆಗಿರುವ ಮೆನ್ನನ್ ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಾಂಧರ್ಬಿಕ ಚಿತ್ರ
  • ಲಾಂಗ್, ಮಚ್ಚು, ಕ್ರಿಕೆಟ್ ಬ್ಯಾಟ್, ಕಬ್ಬಿಣದ ರಾಡ್ ಹಿಡಿದು ಅಲಯನ್ಸ್ ವಿವಿಗೆ ನುಗ್ಗಿದ ಗೂಂಡಾಗಳು

    ಲಾಂಗ್, ಮಚ್ಚು, ಕ್ರಿಕೆಟ್ ಬ್ಯಾಟ್, ಕಬ್ಬಿಣದ ರಾಡ್ ಹಿಡಿದು ಅಲಯನ್ಸ್ ವಿವಿಗೆ ನುಗ್ಗಿದ ಗೂಂಡಾಗಳು

    ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅಲಯನ್ಸ್ ವಿವಿ ಒಡೆತನಕ್ಕಾಗಿ ಸಹೋದರರ ನಡುವೆ ನಡೆಯುತ್ತಿರುವ ಕಿತ್ತಾಟ ಇದೀಗ ತಾರಕಕ್ಕೇರಿದ್ದು ಸೋಮವಾರ ಕಾಲೇಜು ಆವರಣ ಅಕ್ಷರಶಃ ಸಹ ರಣಾಂಗಣವಾಗಿ ಮಾರ್ಪಾಟಿತ್ತು.

    2 ದಿನಗಳ ಹಿಂದೆ ಸುಧೀರ್ ಅಂಗುರ್ ರೌಡಿ ಪಡೆಯೊಂದಿಗೆ ಕಾಲೇಜಿನೊಳಗೆ ನುಗ್ಗಿ ಮಧುಕರ್ ಅಂಗೂರ್ ನೇಮಿಸಿದ್ದ ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನ ಬಂದಂತೆ ಥಳಿಸಿ ಹೊರ ಹಾಕಿದ್ದರು. ಇಂದು ಮಧುಕರ್ ಬೆಂಬಲಿಗರು ವಿವಿ ಆವರಣಕ್ಕೆ ನುಗ್ಗಿ ರೌಡಿಗಳಂತೆ ಬಡಿದಾಡಿಕೊಂಡಿದ್ದಾರೆ.

    ಲಾಂಗ್, ಮಚ್ಚು ಮತ್ತು ದೊಣ್ಣೆಗಳು ರಾರಾಜಿಸಿ ಪರಸ್ಪರ ಆವರಣದೊಳಗೆ ಓಡಾಡಿಸಿಕೊಂಡು ಬಡಿದಾಡಿಕೊಂಡಿದ್ದಾರೆ. ಇಡೀ ವಾತಾವರಣ ಮಾರುಕಟ್ಟೆಯಂತೆಯಾಗಿತ್ತು. ಒಟ್ಟಿನಲ್ಲಿ ಇಂದು ಸಂಜೆ ಅಲಯನ್ಸ್ ವಿವಿ ಆವರಣ ರಣಾಂಗಣವಾಗಿ ಮಾರ್ಪಟ್ಟು ಇಡೀ ವಿದ್ಯಾರ್ಥಿಗಳ ಬದುಕನ್ನು ಡೋಲಾಯಮಾನವಾಗಿಸಿದೆ.

    ಇಂದು ಸಂಜೆ ಕಾಲೇಜಿನಲ್ಲಿ ನಡೆದ ಗಲಾಟೆಯನ್ನು ನೋಡಿ ಡೀನ್ ಮಾರ್ಕೀಂಡೇಯಾ ಈ ದಾಂಧಲೆಗೆ ಸುಧೀರ್ ಅಂಗೂರ್ ಕಾರಣವೆಂದು ದೂರಿದ್ದಾರೆ.

    ವಿವಿ ಆಡಳಿತ ಮಂಡಳಿಯವರು ಆರು ತಿಂಗಳಿಗೊಮ್ಮೆ ಕಿತ್ತಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ವಿವಿ ಆಡಳಿತ ಮಂಡಳಿಯ ಸೋದರ ಸೋದರಿಯರಾದ ಮಧುಕರ್ ಅಂಗೂರ್ ಹಾಗೂ ಶೈಲಜಾ ಚಬ್ಬಿ ಅವರು ಅಧಿಕಾರ ದಾಹದಿಂದ ಕಳೆದ ಎರಡು ವರ್ಷಗಳಿಂದ ಆರು ತಿಂಗಳಿಗೊಮ್ಮೆ ಕಿತ್ತಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ದಾರಿ ಅತಂತ್ರವಾದಂತಾಗಿದೆ.

    ಕಳೆದ ಆರು ತಿಂಗಳಿಂದ ಅಲಯನ್ಸ್ ವಿವಿ ಕುಲಪತಿಯಾಗಿ ಮಧುಕರ್ ಅಂಗೂರ್ ಜವಾಬ್ದಾರಿ ತೆಗೆದುಕೊಂಡ ಮೇಲೆ ಪ್ರಶಾಂತವಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಮಧುಕರ್ ಸಹೋದರಿ ಶೈಲಜಾ ಚಬ್ಬಿ ಹಾಗೂ ಸುಧೀರ್ ಅಂಗೂರ್ ಅಕ್ರಮವಾಗಿ ವಿವಿ ಅವರಣಕ್ಕೆ ಬೌನ್ಸರ್ ಗಳನ್ನು ಕಳುಹಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಇಷ್ಟೆಲ್ಲ ನಡೆಯುತ್ತಿದ್ದರೂ ಇದನ್ನೆಲ್ಲ ಕಣ್ಣಾರೆ ಕಂಡರೂ ಇದನ್ನು ತಡೆಯಬೇಕಾದ ಆನೇಕಲ್ ಪೊಲೀಸರು ಕಂಡು ಕಾಣದಂತೆ ಸುಮ್ಮನೆ ಕೈಕಟ್ಟಿ ಕುಳಿತಿದ್ದಾರೆ. ಕಾಲೇಜಿನ ಕಿತ್ತಾಟದ ಬಗ್ಗೆ ತಾಲೂಕಿನವರಾದ ಗೃಹ ಸಚಿವರಿಗೂ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದ್ದಾರೆ.

    ವಿದ್ಯಾರ್ಥಿಗಳಿಂದ ಪ್ರತಿಭಟನೆ: ಅಲಯನ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ ಗುಂಡಾಗಿರಿಯನ್ನು ಖಂಡಿಸಿ ಇವತ್ತು ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಅವರಿಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಸುಧೀರ್ ಅಂಗೂರ್ ಹಾಗೂ ಗೂಂಡಾಗಳು ಕಾಲೇಜಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲದೇ ಆಡಳಿತ ಮಂಡಳಿ ಬದಲಾವಣೆಯಾಗಿದ್ದು ಹೊಸದಾಗಿ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಮಧುಕರ್ ಜಿ ಅಂಗೂರ್ ಅವರನ್ನು ಹೊರಹಾಕಿ ಆಸ್ತಿ ಹೊಡೆಯಲು ಪ್ಲಾನ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಬ್ಬನ್ ಪಾರ್ಕ್ ನಲ್ಲಿ ಸೇರಿದ್ದ ವಿದ್ಯಾರ್ಥಿಗಳು ಹಾಗು ಸಿಬ್ಬಂದಿ ವರ್ಗ ಕಾನೂನು ಕ್ರಮಕ್ಕಾಗಿ ಒತ್ತಾಯಿಸಿದ್ದರು. ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿದ್ದ ಎಲ್ಲರನ್ನು ಹೊರಗೆ ಕಳುಹಿಸಿದರು.

  • ಮದ್ಯಪಾನ ಮಾಡದ ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿಯ ರ‍್ಯಾಂಕ್‌ ಚಿನ್ನದ ಪದಕ!

    ಮದ್ಯಪಾನ ಮಾಡದ ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿಯ ರ‍್ಯಾಂಕ್‌ ಚಿನ್ನದ ಪದಕ!

    ಪುಣೆ: ಸಸ್ಯಹಾರಿ ಆಗಿರುವ, ಮದ್ಯಪಾನ ಮಾಡದ ವಿದ್ಯಾರ್ಥಿಗೆ ಮಾತ್ರ ರ‍್ಯಾಂಕ್‌ ನೀಡುವುದಾಗಿ ಪುಣೆ ವಿಶ್ವವಿದ್ಯಾಲಯ ನಿಯಮ ರೂಪಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

    ಹೌದು, ಪುಣೆಯ ಸಾವಿತ್ರಿಭಾಯಿ ಪುಲೆ ವಿಶ್ವವಿದ್ಯಾಲಯ ಚಿನ್ನದ ಪದಕ ನೀಡುವ ವಿದ್ಯಾರ್ಥಿ ಹೇಗಿರಬೇಕು ಎನ್ನುವುದಕ್ಕೆ ಕೆಲ ನಿಯಮಗಳನ್ನು ರೂಪಿಸಿ ಸುತ್ತೋಲೆ ಹೊರಡಿಸಿದೆ.

    ಸುತ್ತೋಲೆಯಲ್ಲಿ ಮಹರ್ಷಿ ಕೀರ್ತಂಕರ್ ಶೀರಲ್ ಮಾಮ ಚಿನ್ನದ ಪದಕ ಪಡೆಯುವ ವಿದ್ಯಾರ್ಥಿ ಹೇಗಿರಬೇಕು ಎನ್ನುವುದಕ್ಕೆ 10 ನಿಯಮಗಳನ್ನು ಪ್ರಕಟಿಸಿದ್ದು ಈ ನಿಯಮಗಳಲ್ಲಿ ವಿದ್ಯಾರ್ಥಿ ಸಸ್ಯಹಾರಿ ಆಗಿರಬೇಕು ಮತ್ತು ಮದ್ಯಪಾನ ಮಾಡಿರಬಾರದು ಎಂದು ತಿಳಿಸಲಾಗಿದೆ.

    ಸುತ್ತೋಲೆಯಲ್ಲಿ ಏನಿದೆ?
    ಸಸ್ಯಹಾರಿ ಮತ್ತು ಮದ್ಯ ಸೇವನೆ ಅಲ್ಲದೇ ಈ ಪದಕವನ್ನು ಪಡೆಯುವ ವಿದ್ಯಾರ್ಥಿ ರಕ್ತದಾನ ಶಿಬಿರ, ಶ್ರಮದಾನ, ಪರಿಸರ ರಕ್ಷಣೆ, ಮಲಿನ್ಯ ನಿಯಂತ್ರಣ ಕೆಲಸ, ಸಾಹಿತ್ಯ, ಶುಚಿತ್ವ, ಏಡ್ಸ್ ಜಾಗೃತಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರಬೇಕು ಎನ್ನುವ ಅಂಶ ಸುತ್ತೋಲೆಯಲ್ಲಿದೆ.

    ಯಾಕೆ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಕೇಳಿದ್ದಕ್ಕೆ ವಿವಿ, ಈ ಚಿನ್ನದ ಪದಕವನ್ನು ಟ್ರಸ್ಟ್ ಒಂದು ಪ್ರಯೋಜನೆ ಮಾಡಿದ್ದು, ಟ್ರಸ್ಟ್ ಈ ಪದಕವನ್ನು ಪಡೆಯುವ ವಿದ್ಯಾರ್ಥಿ ಈ ಎಲ್ಲ ಅರ್ಹತೆಯನ್ನು ಹೊಂದಿರಬೇಕು ಎಂದು ಷರತ್ತು ವಿಧಿಸಿತ್ತು. ಹೀಗಾಗಿ ನಾವು ಈ ನಿಯಮವನ್ನು ಸುತ್ತೋಲೆಯಲ್ಲಿ ಸೇರಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿತ್ತು.

    ಪುಣೆ ವಿವಿಯ ಈ ವಿಶೇಷ ನಿಯಮಕ್ಕೆ ಶಿವಸೇನೆ ಮತ್ತು ಎನ್‍ಸಿಪಿ ಆಕ್ಷೇಪ ವ್ಯಕ್ತಪಡಿಸಿತ್ತು. ವಿವಾದವಾಗುತ್ತಿದ್ದಂತೆ ವಿಶ್ವವಿದ್ಯಾಲಯ ಈಗ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.

    ವಿವಿಯ ರಿಜಿಸ್ಟ್ರರ್ ಅರವಿಂದ್ ಶಾಲಿಗ್ರಮ್ ಪ್ರತಿಕ್ರಿಯಿಸಿ, 2006ರಲ್ಲಿ ಮೊದಲ ಬಾರಿಗೆ ಈ ರೀತಿಯ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಈಗ ಪ್ರತಿ ವರ್ಷ ಹೊರಡಿಸಲಾಗುತ್ತಿದೆ. ಯೋಗಿ ಮಹರ್ಷಿ ಶೀಲರ್‍ಮಾಮ ಟ್ರಸ್ಟ್ ವತಿಯಿಂದ ಚಿನ್ನದ ಪದಕ ನೀಡಲಾಗುತ್ತಿದೆ. ಅವರು ಸೂಚಿಸಿದ ಷರತ್ತುಗಳನ್ನು ವಿಧಿಸಿ ವಿವಿ ಪ್ರತಿವರ್ಷ ಈ ಸುತ್ತೋಲೆಯನ್ನು ಹೊರಡಿಸಲಾಗುತ್ತಿದೆ ಹೊರತು ವಿವಿಯ ಪಾತ್ರ ಇದರಲ್ಲಿ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈಗ ಮಾಧ್ಯಮಗಳಿಗೆ ಸಿಕ್ಕಿರುವ ಸುತ್ತೋಲೆ ಇದೇ ಅಕ್ಟೋಬರ್ 31 ರಂದು ಹೊರಡಿಸಲಾಗಿದೆ.

    ಎನ್‍ಸಿಪಿ ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಿ, ಪುಣೆ ವಿವಿ ನಿರ್ಧಾರ ನಿಜಕ್ಕೂ ಶಾಕಿಂಗ್. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳದೇ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.

     

  • ಇನ್ಮುಂದೆ ಬ್ರಿಟಿಷ್ ಗೌನ್ ಕ್ಯಾನ್ಸಲ್- ಹೊಸ ಡ್ರೆಸ್ ಸ್ಟೈಲ್‍ನಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವ

    ಇನ್ಮುಂದೆ ಬ್ರಿಟಿಷ್ ಗೌನ್ ಕ್ಯಾನ್ಸಲ್- ಹೊಸ ಡ್ರೆಸ್ ಸ್ಟೈಲ್‍ನಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವ

    ನವದೆಹಲಿ: ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸುವಾಗ ಇಂದಿಗೂ ಬ್ರಿಟಿಷ್ ಗೌನ್ ಹಾಕಲಾಗುತ್ತಿದೆ. ಹೀಗಾಗಿ ಗೌನ್ ಬದಲಾಗಿ ಸ್ವದೇಶಿ ನಿರ್ಮಿತ ಕುರ್ತಾ ಬಳಸಬೇಕು ಅಂತ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ.

    ಕುರ್ತಾ ಡಿಸೈನ್ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದು, ವಿದ್ಯಾರ್ಥಿಗಳಿಂದ ಡಿಸೈನ್ ಬಂದ ಮೇಲೆ ಉನ್ನತವಾದ ಕುರ್ತಾವನ್ನು ಅಂತಿಮವಾಗಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ.

    ಕಳೆದ ತಿಂಗಳಷ್ಟೇ ದೆಹಲಿಯಲ್ಲಿ ನಡೆದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸಭೆಯಲ್ಲಿ ಗೌನ್ ಸಂಸ್ಕೃತಿಯು ಬ್ರಿಟಿಷ್ ವಸಾಹತು ಶಾಹಿಯ ಪ್ರತಿರೂಪವಾಗಿದೆ ಎನ್ನುವ ಒಮ್ಮತ ಅಭಿಪ್ರಾಯ ಮೂಡಿಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲು ಮುಂದಾಗಿತ್ತು. ಅಲ್ಲದೇ ಶೀಘ್ರದಲ್ಲಿಯೇ ದೇಶದ ಎಲ್ಲಾ ವಿಶ್ವ ವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿಯ ಉಡುಪು ಧರಿಸಬೇಕು ಎನ್ನುವುದರ ಬಗ್ಗೆ ಸೂಚನೆಯನ್ನು ನೀಡಲಾಗುವುದು ಎಂದು ತಿಳಿಸಿತ್ತು.

    ದೇಶದಲ್ಲಿ 800 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಇದ್ದು, 40 ಸಾವಿರಕ್ಕೂ ಹೆಚ್ಚು ಶಿಕ್ಷಣದ ಸಂಸ್ಥೆಗಳಲ್ಲಿ 3ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕುರ್ತಾ ಬಳಸುವ ಮೂಲಕ ಮೇಕ್ ಇನ್ ಇಂಡಿಯಾಗೆ ಒತ್ತು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ ಎಂದು ತಿಳಿದುಬಂದಿದೆ.

    ಕಳೆದ ವರ್ಷ ಮುಂಬೈಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಘಟಿಕೋತ್ಸವದ ವೇಳೆ ವಿದ್ಯಾರ್ಥಿಗಳು ಖಾದಿ ವಸ್ತ್ರಗಳನ್ನು ಧರಿಸಿ ಬಂದಿದ್ದರು.

  • 1600 ವಿದ್ಯಾರ್ಥಿಗಳ ಉತ್ತರ ಪತ್ರಿಕೆ ನಾಪತ್ತೆ- ವಿದ್ಯಾರ್ಥಿಗಳಿಗೆ ಬೋನಸ್ ಅಂಕ

    1600 ವಿದ್ಯಾರ್ಥಿಗಳ ಉತ್ತರ ಪತ್ರಿಕೆ ನಾಪತ್ತೆ- ವಿದ್ಯಾರ್ಥಿಗಳಿಗೆ ಬೋನಸ್ ಅಂಕ

    ಮುಂಬೈ: ಪರೀಕ್ಷೆ ಬರೆದಿದ್ದ 1600 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆಯಾಗಿರುವ ಘಟನೆ ಮುಂಬೈ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ಇಷ್ಟು ವಿದ್ಯಾರ್ಥಿಗಳಿಗೂ ಬೋನಸ್ ಅಂಕಗಳನ್ನು ನೀಡಲು ವಿಶ್ವವಿದ್ಯಾಲಯ ತೀರ್ಮಾನ ತೆಗೆದುಕೊಂಡಿದೆ.

    ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದಿಂದ ಉತ್ತರ ಪತ್ರಿಕೆಗಳು ನಾಪತ್ತೆಯಾಗಿದ್ದು, ಈ ಕುರಿತು ತೀರ್ಮಾನವನ್ನು ಕೈಗೊಳ್ಳಲು ವಿಶ್ವವಿದ್ಯಾಲಯದ ಅಧಿಕಾರಿಗಳು ಗುರುವಾರ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಾಯದಂತೆ ಎಲ್ಲ ವಿದ್ಯಾರ್ಥಿಗಳಿಗೂ ಇತರೆ ವಿಷಯಗಳಲ್ಲಿ ತೆಗೆದುಕೊಳ್ಳಲಾಗಿರುವ ಅಂಕಗಳಿಗೆ ಆಧಾರವಾಗಿ ಬೋನಸ್ ಅಂಕಗಳನ್ನು ನೀಡುವ ತೀರ್ಮಾನವನ್ನು ಅಡಳಿತ ಮಂಡಳಿ ಕೈಗೊಂಡಿದೆ.

    ಪರೀಕ್ಷೆಯ ಉತ್ತರ ಪತ್ರಿಕೆಗಳು ಕಳೆದು ಹೋಗಲು ಹೊಸ ಮೌಲ್ಯಮಾಪನ ತಂತ್ರಜ್ಞಾನವನ್ನು(ಆನ್‍ಸ್ಕ್ರೀನ್ ಮಾರ್ಕೆಟಿಂಗ್ ಸಿಸ್ಟಮ್-ಓಎಸ್‍ಎಂ) ಅಳವಡಿಸಿಕೊಂಡಿರುವುದೇ ಕಾರಣವಾಗಿದೆ. ಈಗಾಗಲೇ ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಮೆರಿಟ್ಟ್ರಾಕ್ನೊ ಕಂಪೆನಿ(ಐಟಿ)ಯೊಂದಿಗೆ ಒಂದು ವರ್ಷದ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದನ್ನು ಹಾಗೆಯೇ ಮುಂದುವರೆಸಲಾಗುತ್ತದೆ ಎಂದು ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದು ಹೋಗಿರುವ ಉತ್ತರ ಪತ್ರಿಕೆಗಳನ್ನು ಹುಡುಕಲು ಸಾಧ್ಯವಾಗಿಲ್ಲ. ಅದರಿಂದ ವಿದ್ಯಾರ್ಥಿಗಳ ಫಲಿತಾಂಶವನ್ನು ಘೋಷಣೆ ಮಾಡಲು ಈ ಕ್ರಮವನ್ನು ಕೈಗೊಳ್ಳುತ್ತಿದೆ. ಹೊಸ ತಂತ್ರಜ್ಞಾನದ ಅಳವಡಿಕೆಯ ಸಂದರ್ಭದಲ್ಲಿ ಮಾಹಿತಿಯ ಕೊರತೆಯಿಂದ ಈ ತಪ್ಪು ನಡೆದಿದೆ. ಅದರಿಂದ ವಿಶ್ವವಿದ್ಯಾಲಯವು ಮುಂದಿನ 5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ತೀರ್ಮಾನಕೈಗೊಂಡಿದೆ. ಮುಂದಿನ ಬಾರಿ ಸಾಫ್ಟ್ ವೇರ್‍ನಲ್ಲಿ ಬದಲಾವಣೆಗಳನ್ನು ಮಾಡಿ ಅಳವಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಟೀ ಚೆಲ್ಲಿದ್ದಕ್ಕೆ ಚೂರಿಯಿಂದ ಇರಿದು ಕೊಂದೇ ಬಿಟ್ಟ!

    ಟೀ ಚೆಲ್ಲಿದ್ದಕ್ಕೆ ಚೂರಿಯಿಂದ ಇರಿದು ಕೊಂದೇ ಬಿಟ್ಟ!

    ಪುಣೆ: ಅಚಾನಕ್ಕಾಗಿ ವ್ಯಕ್ತಿ ಮೇಲೆ ಟೀ ಬಿದ್ದಿದ್ದಕ್ಕೆ 19 ವರ್ಷದ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆಯೊಂದು ಪುಣೆ ವಿಶ್ವವಿದ್ಯಾಲಯದ ಸಮೀಪ ನಡೆದಿದೆ.

    ಮೃತ ದುರ್ದೈವಿ ಯುವಕನನ್ನು ಅಕ್ತರ್ ಖಾನ್ ಎಂಬುವುದಾಗಿ ಗುರುತಿಸಲಾಗಿದೆ. ಘಟನೆಯಿಂದ ಅಕ್ತರ್ ಗೆಳೆಯ 21 ವರ್ಷದ ಕರೀಂ ಸೈಯದ್ ಎಂಬಾತನ ಕೈ ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಇನ್ನು ಘಟನೆ ಸಂಬಂಧಿಸಿದಂತೆ ಮತ್ತೋರ್ವ ಗೆಳೆಯ ಅಮ್ಜಿತ್ ನಡಾಫ್ ದೂರು ದಾಖಲಿಸಿದ್ದು, ಚತುಶ್ರ್ರಿಂಗಿ ಪೊಲೀಸರು ಐಪಿಸಿ ಸೆಕ್ಷನ್ 302(ಕೊಲೆ) ಹಾಗೂ 307(ಕೊಲೆಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    `ಮನೆಗೆ ವಾಪಾಸ್ಸಾಗೋ ಮೊದಲು ನಾವು ಮೂವರು ಗೆಳೆಯರು ಟೀ ಕುಡಿಯಲೆಂದು ಹೋಗಿದ್ದೆವು. ಅಂತೆಯೇ ಟೀ ಸ್ಟಾಲ್ ನಲ್ಲಿ ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಆಟೋ-ರಿಕ್ಷಾದಿಂದಿಳಿದ ವ್ಯಕ್ತಿ ನೇರವಾಗಿ ಅದೇ ಟೀ ಸ್ಟಾಲ್ ಗೆ ಬಂದ್ರು. ಇದೇ ವೇಳೆ ಗೆಳೆಯ ಅಕ್ತರ್ ಕೈಲಿದ್ದ ಗ್ಲಾಸ್ ನಿಂದ ಅಚಾನಕ್ ಆಗಿ ಟೀ ಚೆಲ್ಲಿತ್ತು. ಇದು ಆ ವ್ಯಕ್ತಿಯ ಬಟ್ಟೆಯ ಮೇಲೆ ಬಿತ್ತು. ಇದರಿಂದ ಕೋಪಗೊಂಡ ಆತ ಬೈಯಲು ಶುರು ಮಾಡಿದ. ಆದ್ರೆ ಅಕ್ತರ್ ಕ್ಷಮಿಸುವಂತೆ ಪರಿಪರಿಯಾಗಿ ಬೇಡಿಕೊಂಡರೂ ಸುಮ್ಮನಾಗದ ವ್ಯಕ್ತಿ ಹರಿತವಾದ ಚೂರಿಯಿಂದ ಅಕ್ತರ್ ಗೆ ಇರಿದಿದ್ದಾನೆ. ಈ ವೇಳೆ ನಾನು ಅಲ್ಲಿಂದ ಓಡಿ ಪಾರಾಗಿದ್ದು, ಅಕ್ತರ್ ಹಾಗೂ ಗೆಳೆಯ ಕರೀಂಗೆ ಗಂಭೀರ ಗಾಯಗಳಾಗಿದೆ’ ಅಂತ ನಡಾಫ್ ಘಟನೆಯ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾನೆ.

    ಮೃತ ಯುವಕ ನಿರುದ್ಯೋಗಿಯಾಗಿದ್ದು, ಘಟನೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುವುದು. ಅಲ್ಲದೇ ಆರೋಪಿಯನ್ನು ಕೂಡ ಈ ಮೂಲಕ ಶೀಘ್ರವೇ ಪತ್ತೆ ಹಚ್ಚಲಾಗುವುದು ಅಂತ ಚತುಶ್ರ್ರಿಂಗಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ದನ್ಯಾನಂದ್ ಧೋಮ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ವಿವಿ ಘಟಿಕೋತ್ಸವ ವೇಳೆ ಧರಿಸುವ ಗೌನ್ ಸಂಸ್ಕೃತಿಗೆ ಕೇಂದ್ರದಿಂದ ಬ್ರೇಕ್

    ವಿವಿ ಘಟಿಕೋತ್ಸವ ವೇಳೆ ಧರಿಸುವ ಗೌನ್ ಸಂಸ್ಕೃತಿಗೆ ಕೇಂದ್ರದಿಂದ ಬ್ರೇಕ್

    ನವದೆಹಲಿ: ವಿಶ್ವವಿದ್ಯಾಲಯಗಳ ಘಟಿಕೋತ್ಸವ ಕಾರ್ಯಕ್ರಮಗಳಲ್ಲಿ ಧರಿಸುವ ಗೌನ್ ಪಾಶ್ಚಿಮಾತ್ಯ ಸಂಸ್ಕೃತಿಗೆ ಪ್ರತಿ ರೂಪವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಈ ಸಂಸ್ಕೃತಿಗೆ ಬ್ರೇಕ್ ಹಾಕಲು ಮುಂದಾಗಿದೆ.

    ದೆಹಲಿಯಲ್ಲಿ ನಡೆದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸಭೆಯಲ್ಲಿ ಗೌನ್ ಸಂಸ್ಕೃತಿಯು ಬ್ರಿಟಿಷ್ ವಸಾಹತು ಶಾಹಿಯ ಪ್ರತಿರೂಪವಾಗಿದೆ ಎನ್ನುವ ಒಮ್ಮತ ಅಭಿಪ್ರಾಯ ಮೂಡಿಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲು ಮುಂದಾಗಿದೆ.

    ಸಚಿವಾಲಯವು ಶೀಘ್ರದಲ್ಲಿಯೇ ದೇಶದ ಎಲ್ಲಾ ವಿಶ್ವ ವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿಯ ಉಡುಪು ಧರಿಸಬೇಕು ಎನ್ನುವುದರ ಬಗ್ಗೆ ಸೂಚನೆಯನ್ನು ನೀಡಲಾಗುವುದು ಎಂದು ತಿಳಿಸಿದೆ. ಅಲ್ಲದೆ ಈ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಸ್ತುತ ಭಾರತದ ಎಲ್ಲಾ ವಿಶ್ವವಿದ್ಯಾಲಯಗಳು ಘಟಿಕೋತ್ಸವದ ವೇಳೆ ಯಾವ ರೀತಿಯ ಉಡುಪು ಧರಿಸಬೇಕು ಎನ್ನುವುದರ ಬಗ್ಗೆ ತಮ್ಮದೇ ಅದ ನಿಯಮಗಳನ್ನು ಹೊಂದಿವೆ.

    ಕಳೆದ ವರ್ಷ ಮುಂಬೈಯ ಇಂಡಿಯನ್ ಇನ್‍ಸ್ಟುಟ್ಯೂಟ್ ಆಫ್ ಟೆಕ್ನಾಲಜಿಯ ಘಟಿಕೋತ್ಸವದ ವೇಳೆ ವಿದ್ಯಾರ್ಥಿಗಳು ಖಾದಿ ವಸ್ತ್ರಗಳನ್ನು ಧರಿಸಿ ಬಂದಿದ್ದರು. ಈ ವರ್ಷ ಕಾನ್ಪುರ ಐಐಟಿ ವಿದ್ಯಾರ್ಥಿಗಳು ಕುರ್ತಾ, ಪೈಜಮಾ, ಚೂಡಿದಾರ್ ಧರಿಸಿ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.

  • ವಿದ್ಯಾರ್ಥಿಗಳೇ ಗಮನಿಸಿ, ಇನ್ನು ಮುಂದೆ ಕಾಲೇಜು, ವಿವಿಗಳಲ್ಲಿ ನಗದು ರೂಪದಲ್ಲಿ ಶುಲ್ಕ ನೀಡುವಂತಿಲ್ಲ

    ವಿದ್ಯಾರ್ಥಿಗಳೇ ಗಮನಿಸಿ, ಇನ್ನು ಮುಂದೆ ಕಾಲೇಜು, ವಿವಿಗಳಲ್ಲಿ ನಗದು ರೂಪದಲ್ಲಿ ಶುಲ್ಕ ನೀಡುವಂತಿಲ್ಲ

    ನವದೆಹಲಿ: ಶೈಕ್ಷಣಿಕ ವಲಯವನ್ನು ಸ್ವಚ್ಛಗೊಳಿಸುವ ಸಲುವ ಕೇಂದ್ರ ಸರ್ಕಾರ ಈಗ ಮತ್ತೊಂದು ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಕ್ಯಾಶ್‍ಲೆಸ್ ಆಗಲಿದೆ.

    ಪ್ರಸಕ್ತ ಶೈಕ್ಷಣಿಕ ವರ್ಷದಿಂದ ದೇಶದ ಎಲ್ಲ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ನಗದು ರೂಪದಲ್ಲಿ ಶುಲ್ಕವನ್ನು ಪಡೆಯದಂತೆ ನಿರ್ದೇಶನ ನೀಡುವಂತೆ ಕೇಂದ್ರಿಯ ಧನಸಹಾಯ ಆಯೋಗ(ಯುಜಿಸಿ)ಗೆ ಮಾನವ ಸಂಪನ್ಮೂಲ ಸಚಿವಾಲಯ ಸೂಚಿಸಿದೆ.

    ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಮಾರಾಟಗಾರನ ಪಾವತಿಯ ವೇತನವನ್ನೂ ಡಿಜಿಟಲ್ ರೂಪದಲ್ಲಿ ಪಾವತಿಸಬೇಕು ಎಂದು ತಿಳಿಸಿದೆ.

    ಹಾಸ್ಟೆಲ್ ನಲ್ಲಿ ಸಿಗುವ ಎಲ್ಲ ಸೇವೆಗಳಿಗೆ ಡಿಜಿಟಲ್ ಮೂಲಕ ಹಣವನ್ನು ಪಾವತಿಮಾಡಬೇಕು, ಇದಕ್ಕಾಗಿ ಭೀಮ್ ಅಪ್ಲಿಕೇಶನ್ ಬಳಸಬೇಕು. ಅಷ್ಟೇ ಅಲ್ಲದೇ ಕ್ಯಾಂಪಸ್ ಬಳಿ ಇರುವ ವ್ಯಾಪಾರಿ ಸಂಸ್ಥೆಗಳು ಡಿಜಿಟಲ್ ರೂಪದಲ್ಲಿ ವ್ಯವಹಾರ ನಡೆಸಬೇಕು ಎಂದು ಹೇಳಿದೆ.

    ಈ ವಿಚಾರದ ಬಗ್ಗೆ ವಿವಿಗಳಿಗೆ ಇನ್ನು ಯಾವ ಕಡೆಗಳಲ್ಲಿ ಡಿಜಿಟಲ್ ವ್ಯವಹಾರ ನಡೆಸಬಹುದು ಎನ್ನುವುದರ ಬಗ್ಗೆ ಸಲಹೆ ನೀಡಿ ಎಂದು ಯುಜಿಸಿ ತಿಳಿಸಿದೆ. ಇದರ ಜೊತೆ ಇದು ಹೇಗೆ ಜಾರಿಯಾಗಿದೆ ಎನ್ನುವುದನ್ನು ಯುಜಿಸಿಗೆ ತಿಳಿಸಲು ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಸೂಚಿಸಿದೆ.

    ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

  • ಬೆಂಗಳೂರಿನ ಐಐಎಸ್‍ಸಿ ದೇಶದಲ್ಲೇ ನಂ.1 ವಿವಿ: ಪಟ್ಟಿಯಲ್ಲಿ ಕರ್ನಾಟಕದ ಯಾವ ವಿವಿಗೆ ಯಾವ ಸ್ಥಾನ?

    ಬೆಂಗಳೂರಿನ ಐಐಎಸ್‍ಸಿ ದೇಶದಲ್ಲೇ ನಂ.1 ವಿವಿ: ಪಟ್ಟಿಯಲ್ಲಿ ಕರ್ನಾಟಕದ ಯಾವ ವಿವಿಗೆ ಯಾವ ಸ್ಥಾನ?

    ನವದೆಹಲಿ: ದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್) ಎರಡನೇ ಬಾರಿ ಮೊದಲ ಶ್ರೇಯಾಂಕವನ್ನು ಪಡೆದುಕೊಂಡಿದೆ.

    ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಶಾಸ್ತ್ರೀ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಟಾಪ್ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

    ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಚೆನ್ನೈ ನಲ್ಲಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ಮೂರನೇ ಸ್ಥಾನ ಪಡೆದುಕೊಂಡಿವೆ.

    ಬೆಂಗಳೂರಿನಲ್ಲಿರುವ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆಗೆ 11ನೇ ಸ್ಥಾನ, ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ಗೆ 25 ಸ್ಥಾನ ಸಿಕ್ಕಿದೆ.

    ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‍ಗೆ 30ನೇ ಶ್ರೇಯಾಂಕ, ಮೈಸೂರು ವಿವಿಗೆ 57ನೇ ಶ್ರೇಯಾಂಕ, ಸುರತ್ಕಲ್ ನಲ್ಲಿರುವ ಎನ್‍ಐಟಿಕೆಗೆ 65 ಶ್ರೇಯಾಂಕ, ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿವಿಗೆ 74ನೇ ಸ್ಥಾನ ಸಿಕ್ಕಿದೆ.

    ಮ್ಯಾನೇಜ್‍ಮೆಂಟ್ ವಿಭಾಗದಲ್ಲಿ ಐಐಎಂ ಅಹಮದಾಬಾದ್‍ಗೆ ಮೊದಲ ಸ್ಥಾನ ಸಿಕ್ಕಿದ್ದರೆ, ಐಐಎಂ ಬೆಂಗಳೂರಿಗೆ ಎರಡನೇ ಸ್ಥಾನ ಸಿಕ್ಕಿದೆ. 2016ರಲ್ಲಿ ಪ್ರಕಟಗೊಂಡ ಪಟ್ಟಿಯಲ್ಲೂ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು.

    ರಾಜ್ಯದ ಟಾಪ್ ವಿವಿಗಳು: ಶುಕ್ರವಾರ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು `ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶ್ರೇಯಾಂಕ ಚೌಕಟ್ಟು’ (ಕೆಎಸ್‍ಯುಆರ್‍ಎಫ್) ಸಿದ್ಧಪಡಿಸಿದ್ದ ಶ್ರೇಯಾಂಕ ಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಬಿಡುಗಡೆಗೊಳಿಸಿದ್ದರು.

    10 ವರ್ಷಕ್ಕಿಂತ ಹಿಂದೆ ಆರಂಭವಾದ ವಿವಿಗಳ ಪಟ್ಟಿಯಲ್ಲಿ ಮಣಿಪಾಲ್ ವಿ.ವಿ 737 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಸಿಕ್ಕಿದ್ದರೆ, ಎರಡನೇ ಸ್ಥಾನದಲ್ಲಿ ಗುಲ್ಬರ್ಗ ವಿವಿ (557) ಮತ್ತು ಕೊನೆಯ ಸ್ಥಾನದಲ್ಲಿ ಮಂಗಳೂರು ವಿವಿ (428) ಇತ್ತು.

    ಐದರಿಂದ ಹತ್ತು ವರ್ಷದೊಳಗೆ ಸ್ಥಾಪನೆಯಾದ ವಿ.ವಿಗಳ ಪಟ್ಟಿಯಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯ (711) ಮೊದಲ ಸ್ಥಾನ ಸಿಕ್ಕಿತ್ತು. ಎರಡನೇ ಸ್ಥಾನದಲ್ಲಿ ಜೈನ್ ವಿಶ್ವವಿದ್ಯಾಲಯ (661) ಇದ್ದರೆ, ದಾವಣಗೆರೆ ವಿ.ವಿ ಕೊನೆಯ ಸ್ಥಾನ (279) ಪಡೆದಿದೆ. 5 ವರ್ಷದೊಳಗಿನ ವಿ.ವಿಗಳ ಪಟ್ಟಿಯಲ್ಲಿ ಪಿಇಎಸ್ ವಿಶ್ವವಿದ್ಯಾಲಯ ಪ್ರಥಮ (617) ಮತ್ತು ರೈ ಟೆಕ್ನಾಲಜಿ ವಿ.ವಿ ಕೊನೆಯ (305) ಸ್ಥಾನದಲ್ಲಿದೆ.

    ವಿಷಯಾಧಾರಿತ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಧಾರವಾಡದ ಕೃಷಿ ವಿ.ವಿ ಪ್ರಥಮ (779), ಬೀದರ್‍ನ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ದ್ವಿತೀಯ (656) ಹಾಗೂ ಜಾನಪದ ವಿಶ್ವವಿದ್ಯಾಲಯ ಕೊನೆ (289) ಸ್ಥಾನ ಸಿಕ್ಕಿತ್ತು.