Tag: ವಿಶ್ವಪ್ರಿಯ

  • ಅದಮಾರು ಮಠಕ್ಕೆ ಶ್ರೀಕೃಷ್ಣ ಪೂಜಾಧಿಕಾರ

    ಅದಮಾರು ಮಠಕ್ಕೆ ಶ್ರೀಕೃಷ್ಣ ಪೂಜಾಧಿಕಾರ

    – ಪರ್ಯಾಯ ಎಂದರೇನು?
    – ಅಕ್ಷಯ ಪಾತ್ರೆ, ಸಟ್ಟುಗದ ಗುಟ್ಟೇನು?

    ಉಡುಪಿ: ಇಲ್ಲಿನ ಶ್ರೀ ಕೃಷ್ಣನ ಪೂಜಾಧಿಕಾರ ಎರಡು ವರ್ಷದ ಮಟ್ಟಿಗೆ ಅದಮಾರು ಮಠಕ್ಕೆ ಹಸ್ತಾಂತರ ಆಗಿದೆ. ಅಕ್ಷಯ ಪಾತ್ರೆ ಮತ್ತು ಅನ್ನದ ಸಟ್ಟುಗ ಹಸ್ತಾಂತರ ಮಾಡುವ ಮೂಲಕ ಪಲಿಮಾರು ಮಠದ ಎರಡು ವರ್ಷದ ಅಧಿಕಾರ ಮುಗಿದಿದೆ.

    ಉಡುಪಿಯ ಅಷ್ಟಮಠಗಳ ಪೈಕಿ ಒಂದಾಗಿರುವ ಅದಮಾರು ಮಠ ಶ್ರೀಕೃಷ್ಣನ ಪೂಜಾ ಕೈಂಕರ್ಯ ಮಾಡುವ ಜವಾಬ್ದಾರಿ ವಹಿಸಿಕೊಂಡಿದೆ. ಕಿರಿಯ ಶ್ರೀಪಾದರಾದ ಈಶಪ್ರಿಯ ತೀರ್ಥ ಸ್ವಾಮೀಜಿ ಸಿಂಹಾಸನ ಏರಿದ್ದಾರೆ. ಕೃಷ್ಣ ಮಠದ 250ನೇ ಪರ್ಯಾಯ ಸ್ವಾಮೀಜಿ ಎಂಬ ಹೆಗ್ಗಳಿಕೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

    ದಂಡ ತೀರ್ಥದಲ್ಲಿ ಪುಣ್ಯಸ್ನಾನ:
    ಶುಕ್ರವಾರ ರಾತ್ರಿ 1.30ಕ್ಕೆನೂತನ ಪರ್ಯಾಯ ಪೀಠಾಧಿಪತಿ ಅದಮಾರು ಮಠದ ಈಶಪ್ರಿಯ ತೀರ್ಥರು ಜಾಪು ತಾಲೂಕಿನ ದಂಡ ತೀರ್ಥ ಮಠದ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದರು. ನೂರಾರು ಕಲಾತಂಡಗಳ ಸಹಿತ ವೈವಿದ್ಯಮಯ ಶೋಭಾಯಾತ್ರೆಯ ಮೂಲಕ ಅಷ್ಟಮಠದ ಪೈಕಿ ಐದು ಸ್ವಾಮೀಜಿಗಳನ್ನು ಡೋಲು, ವೀರಗಾಸೆ, ಸೋಮನಕುಣಿತ, ಕೋಲಾಟ, ಭಜನೆ ಸೇರಿದಂತೆ ವಿವಿಧ ಕಲಾಪ್ರಾಕಾರಗಳು ಶೋಭಾ ಯಾತ್ರೆಗೆ ಮೆರುಗು ನೀಡಿದವು. 50ಕ್ಕೂ ಅಧಿಕ ಟ್ಯಾಬ್ಲೋಗಳು ಮೆರವಣಿಗೆಯಲ್ಲಿತ್ತು.

    ಪಲ್ಲಕ್ಕಿ ಮತ್ತು ಟ್ಯಾಬ್ಲೋ ಪಲ್ಲಕ್ಕಿ:
    ಮೆರವಣಿಗೆಯ ಕಲಾ ತಂಡಗಳನ್ನು ಅನುಸರಿಸಿ ಸ್ವಾಮೀಜಿಗಳು ಮೆರವಣಿಗೆಯಲ್ಲಿ ಹೊರಟರು. ಪರ್ಯಾಯ ಪೀಠಾರೊಹಣ ಮಾಡುವ ಈಶಪ್ರಿಯರು ಮಾನವರು ಹೊರುವ ಪಲ್ಲಕ್ಕಿ ಏರಿ ಸಂಪ್ರದಾಯ ಮೆರೆದರು. ಉಳಿದ ಕೃಷ್ಣಾಪುರ, ಪೇಜಾವರ, ಕಾಣಿಯೂರು, ಸೋದೆ ಸ್ವಾಮೀಜಿಗಳು ಪಲ್ಲಕ್ಕಿಯನ್ನು ಟ್ಯಾಬ್ಲೋ ಮೇಲಿಟ್ಟು ಅದರಲ್ಲಿ ಕುಳಿತು ಸಾಗಿದರು.

    ಕನಕನ ಕಿಂಡಿಯಲ್ಲೇ ದೇವರ ದರ್ಶನ:
    ಅದಮಾರು ಮಠದ ಈಶಪ್ರಿಯ ತೀರ್ಥರು, ರಥಬೀದಿಗೆ ಆಗಮಿಸಿ ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿದರು. ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ದರ್ಶನ ಪಡೆದು ಕೃಷ್ಣ ಮಠ ಪ್ರವೇಶಿಸಿದರು. ಕೃಷ್ಣ ಮಠದ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನ ಗೈದರು.

    ಕೃಷ್ಣ ಮಠದ ಅಧಿಕಾರ ಹಸ್ತಾಂತರ ಅಂದ್ರೆ ಅಕ್ಷಯ ಪಾತ್ರೆ, ಅನ್ನದ ಸೌಟು ನೀಡೋದು. ನಿರಂತರ ಭಕ್ತರಿಗೆ ಪ್ರವಾಸ ನೀಡೋದು ಇದ್ರ ಹಿಂದಿನ ಉದ್ದೇಶ.

    ಅದಮಾರು ಹಿರಿಯ ಶ್ರೀಗಳಿಗೆ ಪಲಿಮಾರು ಶ್ರೀಗಳು ಅಕ್ಷಯ ಪಾತ್ರೆ ಹಸ್ತಾಂತರಿಸಿದರು ಈ ಮೂಲಕ ಕೃಷ್ಣನ ಪೂಜಾ ಅಧಿಕಾರ ವಿದ್ಯುಕ್ತವಾಗಿ ಹಸ್ತಾಂತರವಾಯಿತು. ಹಿರಿಯ ಶ್ರೀಗಳು ಈಶಪ್ರಿಯರಿಗೆ ಅಕ್ಷಯಪಾತ್ರೆ ಹಾಗೂ ಸಟ್ಟುಗ ನೀಡಿ ಅಧಿಕಾರ ವಹಿಸಿಕೊಟ್ಟರು. ಸಿಂಹಾಸನದಲ್ಲಿ ವಿಶ್ವಪ್ರಿಯರನ್ನು ವಿದ್ಯಾಧೀಶರು ಕುಳಿತುಕೊಳ್ಳಿಸಿದ ನಂತರ ಪ್ರಾರ್ಥನೆ ಮಾಡಿ ಕಿರಿಯರಿಗೆ ಅಧಿಕಾರ ವಹಿಸಿಕೊಟ್ಟರು.

    ಅರಳು ಗದ್ದಿಗೆ ಮೇಲೆ ರಾಜ್ಯಭಾರದ ವಿಧಿ:
    ರಾಜಮಹಾರಾಜರಿಗೆ ಚಿನ್ನದ ಸಿಂಹಾಸನವಾದ್ರೆ ಸ್ವಾಮೀಜಿಗಳುಗೆ ಅರಳಿನ ಗದ್ದಿಗೆ. ಮಠದ ಬಡಗು ಮಾಳಿಗೆಯ ಅರಳು ಗದ್ದಿಗೆ ವಿಧಿ ನಡೆಯಿತು. ಎಲ್ಲಾಕ ಮಠಾಧೀಶರ ಸಮ್ಮುಖದಲ್ಲಿ ಅದಮಾರು ಮಠದ ಈಶಪ್ರಿಯ ತೀರ್ಥರು ಅಧಿಕಾರ ಸ್ವೀಕರಿಸಿದರು. ಎಲ್ಲಾ ಸ್ವಾಮೀಜಿಗಳಿಗೆ ಗಂಧ, ಎಣ್ಣೆ ಹಚ್ಚಿ ಶಾಲು ಹೊದೆಸಿ ಕಾಣಿಕೆ ನೀಡಿ ನೂತನ ಪೀಠಾಧಿಪತಿ ಗೌರವಿಸಿದರು. ಎಲ್ಲರಿಂದ ಗೌರವ ಪಡೆದರು. ಇಲ್ಲಿಗೆ ಬೆಳಗ್ಗಿನ ಧಾರ್ಮಿಕ ವಿಧಿ ಮುಕ್ತಾಯಗೊಂಡಿದೆ. ಈ ಮೂಲಕ ಎರಡು ವರ್ಷ ಭಗವಾನ್ ಶ್ರೀಕೃಷ್ಣನ ಪೂಜೆ ಮತ್ತು ಕೃಷ್ಣಮಠದ ಸಂಪೂರ್ಣ ಅಧಿಕಾರ ಅದಮಾರು ಮಠದ ಪಾಲಾಗಿದೆ.

  • ಅದಮಾರು ಶ್ರೀಗಳಿಗೆ ಸನ್ಯಾಸದಲ್ಲೇ ವೈರಾಗ್ಯ- ಮಠದ ಸಂಪೂರ್ಣ ಅಧಿಕಾರ ಬಿಟ್ಟುಕೊಟ್ರು ಹಿರಿಯ ಯತಿ

    ಅದಮಾರು ಶ್ರೀಗಳಿಗೆ ಸನ್ಯಾಸದಲ್ಲೇ ವೈರಾಗ್ಯ- ಮಠದ ಸಂಪೂರ್ಣ ಅಧಿಕಾರ ಬಿಟ್ಟುಕೊಟ್ರು ಹಿರಿಯ ಯತಿ

    – ಈಶಪ್ರಿಯ ಸ್ವಾಮೀಜಿಗೆ ಮಂತ್ರಾಕ್ಷತೆ ಅಧಿಕಾರ

    ಉಡುಪಿ: ಮನುಷ್ಯ ಜೀವನದಲ್ಲಿ ವೈರಾಗ್ಯ ಬಂದಾಗ ಸನ್ಯಾಸಿಯಾಗುತ್ತಾನೆ. ಆದ್ರೆ ಇಲ್ಲಿಯ ಸನ್ಯಾಸಿಗೇ ವೈರಾಗ್ಯ ಬಂದಿದೆ. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಅದಮಾರು ಮಠದ ಎಲ್ಲಾ ಜವಾಬ್ದಾರಿಯನ್ನು ಹಿರಿಯ ಸ್ವಾಮೀಜಿ ಕಿರಿಯ ಯತಿಗಳಿಗೆ ಹಸ್ತಾಂತರಿಸಿ ಶೈಕ್ಷಣಿಕ ಕ್ಷೇತ್ರದತ್ತ ಮುಖ ಮಾಡಿದ್ದಾರೆ.

    ವರ್ತಮಾನದಲ್ಲಿ ಇದೊಂದು ಅಪರೂಪದ ವಿದ್ಯಮಾನ. ಕರ್ನಾಟಕದ ಪ್ರತಿಷ್ಠಿತ ಮಠವೊಂದರ ಹಿರಿಯ ಯತಿಗಳು ತನ್ನಲ್ಲಿ ಎಲ್ಲಾ ಸಾಮಥ್ರ್ಯಗಳಿದ್ದರೂ ಕಿರಿಯರಿಗೆ ಅಧಿಕಾರ ಬಿಟ್ಟುಕೊಟ್ಟಿರುವುದು ಮಾದ್ವ ಪರಂಪರೆಯಲ್ಲಿ ವಿಶೇಷವೆನಿಸಿದೆ. ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಉಡುಪಿಯ ಅದಮಾರು ಮಠದಲ್ಲಿ ಅಪರೂಪದ ವಿದ್ಯಮಾನ ನಡೆದಿದೆ.

    ಅರವತ್ತರ ಹರೆಯದಲ್ಲಿರುವ ಹಿರಿಯ ಯತಿಗಳಾದ ವಿಶ್ವಪ್ರಿಯ ತೀರ್ಥರು ತನ್ನ ಕಿರಿಯ ಸ್ವಾಮೀಜಿಗೆ ಮಠದ ಎಲ್ಲಾ ಅಧಿಕಾರವನ್ನು ಬಿಟ್ಟುಕೊಟ್ಟಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ಸನ್ಯಾಸ ಸ್ವೀಕಾರ ಮಾಡಿರುವ ಈಶಪ್ರಿಯ ತೀರ್ಥರು ಇನ್ನು ಮುಂದೆ ಅದಮಾರು ಮಠದ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ. ಮೂವತ್ತಮೂರರ ಹರೆಯದ ಈಶಪ್ರಿಯರು ಈ ಮೂಲಕ ಮಹತ್ತರ ಜವಾಬ್ದಾರಿ ನಿಭಾಯಿಸಲು ಸಜ್ಜಾಗಬೇಕಾಗಿದೆ. ಎಂಜಿನಿಯರಿಂಗ್ ಪದವೀಧರರಾಗಿರುವ ಕಿರಿಯ ಸ್ವಾಮೀಜಿ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ಪಡೆದ ಅಪರೂಪದ ಪೀಠಾಧಿಪತಿಯಾಗಿದ್ದಾರೆ. ಆಚಾರ್ಯ ಮಧ್ವರಿಂದ ಪ್ರತಿಷ್ಠಾಪಿತ ಅಷ್ಟಮಠಗಳಲ್ಲಿ ಅದಮಾರು ಮಠವೂ ಒಂದು. 800 ವರ್ಷಗಳ ಪರಂಪರೆಯಲ್ಲಿ ಈಶಪ್ರಿಯರು 33 ನೇ ಯತಿಯಾಗಿದ್ದಾರೆ.

    ಈ ಬಗ್ಗೆ ಮಾತನಾಡಿದ ಅದಮಾರು ಹಿರಿಯ ಯತಿ ವಿಶ್ವಪ್ರಿಯ ತೀರ್ಥ, ನನಗೆ ಜವಾಬ್ದಾರಿ ಬಹಳ ಹಗುರವಾಗುತ್ತಿದೆ. ಈಶಪ್ರಿಯರಿಗೆ ವೈದಿಕ ವಿದ್ಯೆಯ ಜೊತೆ ಲೌಕಿಕ ವಿದ್ಯೆ ಇದೆ. ಕಿರಿಯ ಶ್ರೀಗಳಿಗೆ ಒಳ್ಳೆಯ ತಿಳುವಳಿಕೆ ಇದೆ. ಅದಮಾರು ಮಠದ ಸಮಸ್ತ ಜವಾಬ್ದಾರಿ ವಹಿಸಿಕೊಡುತ್ತೇನೆ. ಅದಮಾರು ಸಂಸ್ಥಾನ ಚೆನ್ನಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆಯಿದ್ದು, ನಾನು ನಿರಾಳವಾಗಿ ಇರಲು ಇಚ್ಚಿಸುತ್ತೇನೆ ಅಂತ ಹೇಳಿದ್ದಾರೆ.

    ನಾನು ಪೀಠದಲ್ಲಿ ಇದ್ದು ಕಿರಿಯಶ್ರೀಗೆ ಸಹಕರಿಸುತ್ತೇನೆ. ಮುಂದಿನ ಪರ್ಯಾಯ ಯಾರು ಅಂತ ನಿರ್ಧಾರ ಮಾಡಿಲ್ಲ. ಶಿಕ್ಷಣ ಸಂಸ್ಥೆ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಹಣಕಾಸು, ಪೂಜೆ, ಮಂತ್ರಾಕ್ಷತೆ ಕೊಡುವ ಜವಾಬ್ದಾರಿ ಕಿರಿಯಶ್ರೀಯರದ್ದಾಗಿದೆ. ನಮ್ಮ ಶಿಷ್ಯರು ಪೀಠವನ್ನು ಚೆನ್ನಾಗಿ ನಿಭಾಯಿಸಲಿದ್ದಾರೆ. ಮುಂದಿನ ಪರ್ಯಾಯದಲ್ಲಿ ಕಿರಿಯ ಶ್ರೀ ನಮಗೆ ಸಹಕರಿಸಲಿದ್ದಾರೆ. 2014 ಜೂನ್ 19ಕ್ಕೆ ಶಿಷ್ಯ ಸ್ವೀಕಾರವಾಗಿತ್ತು ಅಂತ ತಿಳಿಸಿದ್ರು.

    ಅದಮಾರು ಮಠವು ದೇಶದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿವೆ. ಬೆಂಗಳೂರಿನ ಪ್ರತಿಷ್ಠಿತ ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಗಳು ಅದಮಾರು ಮಠದ ಆಡಳಿತ ವ್ಯವಸ್ಥೆಗೆ ಒಳಪಟ್ಟಿದೆ. ಸದ್ಯ ಈ ಸಂಸ್ಥೆಗಳ ಜವಾಬ್ದಾರಿಯನ್ನು ಹಿರಿಯ ಯತಿಗಳೇ ನಿಭಾಯಿಸಲಿದ್ದಾರೆ. ಕಾಲಕ್ರಮೇಣ ಈ ಜವಾಬ್ದಾರಿಯನ್ನು ಕೂಡಾ ಕಿರಿಯ ಯತಿಗಳಿಗೆ ಬಿಟ್ಟುಕೊಡಲಿದ್ದಾರೆ. ಅದಮಾರು ಮಠದ ಎಲ್ಲಾ ಧಾರ್ಮಿಕ ಜವಾಬ್ದಾರಿ ಮತ್ತು ಆರ್ಥಿಕ ನಿರ್ವಹಣೆಯನ್ನು ಈಶ ಪ್ರಿಯರೇ ನಿಭಾಯಿಸಬೇಕಾಗಿದೆ. ಭಕ್ತರಿಗೆ ಅನುಗ್ರಹ ಮಂತ್ರಾಕ್ಷತೆ ನೀಡುವುದು, ಪಟ್ಟದ ದೇವರಿಗೆ ಪೂಜೆ ಮಾಡುವುದು ಈಶಪ್ರಿಯರ ಧಾರ್ಮಿಕ ಜವಾಬ್ದಾರಿಯಾಗಲಿದೆ. ಅಷ್ಟಮಠಗಳ ಸಭೆಗಳಿಗೆ ಕಿರಿಯಶ್ರೀಗಳೇ ಹಾಜರಾಗಲಿದ್ದಾರೆ. ಸದ್ಯ ಪಲಿಮಾರು ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದ್ದು, 2020 ರಲ್ಲಿ ಅದಮಾರು ಮಠಕ್ಕೆ ಕೃಷ್ಣ ದೇವರ ಪೂಜಾಧಿಕಾರ ಸಿಗಲಿದೆ. ಪರ್ಯಾಯ ಪೂಜಾಧಿಕಾರವನ್ನು ಯಾರು ನಿಭಾಯಿಸುತ್ತಾರೆ ಅನ್ನೋದು ಸದ್ಯದ ಕುತೂಹಲವಾಗಿದೆ.

    ಪೂರ್ಣಪ್ರಮಾಣದ ಜವಾಬ್ದಾರಿ ಕೊಡಲು ಗುರುಗಳು ಮುಂದಾಗಿದ್ದರು. ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಸದ್ಯ ನನಗೆ ಭಾರವಾಗುತ್ತದೆ. ಅದಮಾರು ಮಠದ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಈ ಸ್ಥಾನಕ್ಕೆ ನಾನು ಬಹಳ ಚಿಕ್ಕವನಾಗಿದ್ದೇನೆ. ಗುರುಗಳು ನನ್ನ ಕೈಹಿಡಿದು ನಡೆಸಲಿದ್ದಾರೆ. ಸಂಸ್ಥಾನದ ಪೂಜೆ, ಸಂಸ್ಕಾರಗಳು- ಆಚರಣೆಯಲ್ಲಿ ಶ್ರದ್ಧೆಯಿಂದ ಭಾಗಿಯಾಗುತ್ತೇನೆ. ಶಿಕ್ಷಣ ಸಂಸ್ಥೆಗೆ ಕಾರ್ಯಾಧ್ಯಕ್ಷರಾಗಿ ನೇಮಿಸಿದ್ದಾರೆ. ಆ ಜವಾಬ್ದಾರಿಯನ್ನು ಕೂಡ ನಿರ್ವಹಣೆ ಮಾಡುತ್ತೇನೆ ಅಂತ ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿ ನುಡಿದ್ರು.

    ಒಂದೋ ಇಳಿವಯಸ್ಸು ಅಥವಾ ಕಾಲಾನಂತರ ಅಧಿಕಾರ ಹಸ್ತಾಂತರ ಮಾಡೋದು ಪದ್ಧತಿ. ಆದ್ರೆ ಅದಮಾರು ಮಠದ ವಿಶ್ವಪ್ರಿಯರು ಅವಧಿಗೂ ಮುನ್ನ ಅಧಿಕಾರ ಹಸ್ತಾಂತರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಮುಂದಿನ ವರ್ಷ ನಡೆಯುವ ಪರ್ಯಾಯ ಪೀಠಕ್ಕೆ ಯಾರು ಉತ್ತರಾಧಿಕಾರಿ ಅನ್ನೋದು ಸದ್ಯದ ದೊಡ್ಡ ಕುತೂಹಲವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews