Tag: ವಿಶ್ವಪಕ್

  • ಪಾಕ್‍ಗೆ ಹೆಚ್ಚು ಬಾರಿ ಸೋಲುಣಿಸಿದ ಭಾರತದ ನಾಯಕರಲ್ಲಿ ಅಜರುದ್ದೀನ್ ಟಾಪ್

    ಪಾಕ್‍ಗೆ ಹೆಚ್ಚು ಬಾರಿ ಸೋಲುಣಿಸಿದ ಭಾರತದ ನಾಯಕರಲ್ಲಿ ಅಜರುದ್ದೀನ್ ಟಾಪ್

    – ವಿಶ್ವಕಪ್ ಲೆಕ್ಕದಲ್ಲಿ ಧೋನಿಗೆ ಅಗ್ರಸ್ಥಾನ

    ನವದೆಹಲಿ: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾವನ್ನು ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯ ನಾಯಕನ ದೊಡ್ಡ ಕನಸು. ಈ ಮೊದಲು ಉಭಯ ತಂಡಗಳ ನಡುವೆ ಸರಣಿ ನಡೆಯುತ್ತಿತ್ತು. ಆದರೆ 2012-13ರಿಂದ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ.

    ಭಾರತವು ವಿಶ್ವಕಪ್ ಮತ್ತು ಏಷ್ಯಾ ಕಪ್ ಸೇರಿದಂತೆ ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಪಾಕ್ ವಿರುದ್ಧ ಆಡುತ್ತದೆ. ಅಷ್ಟೇ ಅಲ್ಲದೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಶೀಘ್ರದಲ್ಲೇ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡುವ ಸಾಧ್ಯತೆಯಿಲ್ಲ. ಪಾಕಿಸ್ತಾನವು ಭಾರತದ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದೆ. ಆದರೆ ವಿಶ್ವಕಪ್‍ನಲ್ಲಿ ಎಲ್ಲಾ ಏಳು ಪಂದ್ಯಗಳನ್ನು ಸೋತಿದೆ.

    ಮೂರು ವಿಶ್ವಕಪ್‍ಗಳಲ್ಲಿ ಭಾರತದ ನಾಯಕತ್ವ ವಹಿಸಿದ್ದ ಮೊಹಮ್ಮದ್ ಅಜರುದ್ದೀನ್, ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು 3 ಸೋಲಿಸಿದ್ದರು. ಅಷ್ಟೇ ಅಲ್ಲದೆ ಅಜರುದ್ದೀನ್ ಅವರ ನಾಯಕತ್ವದಲ್ಲೇ ಭಾರತ ತಂಡವು ಪಾಕಿಸ್ತಾನಕ್ಕೆ 25 ಏಕದಿನ ಪಂದ್ಯಗಳಲ್ಲಿ ಸೋಲುಣಿಸಿದೆ. ಈ ಮೂಲಕ ಪಾಕ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಬಾರಿ ಭಾರತ ತಂಡವನ್ನು ಗೆಲ್ಲಿಸಿದ ದಾಖಲೆ ಅಜರುದ್ದೀನ್ ಅವರ ಹೆಸರಿನಲ್ಲಿದೆ.

    ಈ ಪಟ್ಟಿಯಲ್ಲಿ 21 ಬಾರಿ ತಂಡಕ್ಕೆ ಗೆಲುವು ತಂದುಕೊಟ್ಟ ಸಚಿನ್ ತೆಂಡೂಲ್ಕರ್ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಎಂ.ಎಸ್.ಧೋನಿ ಇದ್ದಾರೆ. ಅವರು ಪಾಕಿಸ್ತಾನದ ವಿರುದ್ಧದ 18 ಏಕದಿನ ಪಂದ್ಯದಲ್ಲಿ ಜಯ ದಾಖಲಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಸೌರವ್ ಗಂಗೂಲಿ ಅವರು ತಮ್ಮ ನಾಯಕತ್ವದಲ್ಲಿ 17 ಬಾರಿ ಗೆದ್ದಿದ್ದಾರೆ.

    2007ರಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದ ಎಂ.ಎಸ್.ಧೋನಿ, ಪಾಕಿಸ್ತಾನ ವಿರುದ್ಧದ ಇತರ ನಾಯಕರಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಏಕೆಂದರೆ ಅವರ ನೇತೃತ್ವದಲ್ಲಿ ಭಾರತ ತಂಡವು ಪಾಕ್ ವಿರುದ್ಧ 2011 ಮತ್ತು 2015ರ ವಿಶ್ವಕಪ್ ಟೂರ್ನಿಯಲ್ಲಿ ಸೇರಿ ಒಟ್ಟು 11 ಬಾರಿ ಜಯಗಳಿಸಿದೆ. 2011ರಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ ಫೈನಲ್‍ಗೆ ಲಗ್ಗೆ ಇಟ್ಟಿತ್ತು. 2015ರ ವಿಶ್ವಕಪ್‍ನಲ್ಲಿಯೂ ಭಾರತವು ಪಾಕ್ ವಿರುದ್ಧ ಅದ್ಭುತ ಜಯದೊಂದಿಗೆ ಸಾಗಿತ್ತು. ಆದರೆ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‍ನಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ 180 ರನ್ ಗಳಿಂದ ಗೆದ್ದು ಬೀಗಿತ್ತು.

    ವಿಶ್ವಕಪ್‍ನಲ್ಲಿ ಪಾಕಿಸ್ತಾನದ ವಿರುದ್ಧ ತಂಡಕ್ಕೆ ಗೆಲುವು ತಂದುಕೊಟ್ಟ ನಾಯಕ ಪಟ್ಟಿಯಲ್ಲಿ ಎಂ.ಎಸ್.ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಧೋನಿ ನಂತರ ಸ್ಥಾನದಲ್ಲಿ ಅಜರುದ್ದೀನ್ ಅವರಿದ್ದಾರೆ. ಅವರ ನೇತೃತ್ವದ ಟೀಂ ಇಂಡಿಯಾ 1992, 1996 ಮತ್ತು 1999ರ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನವನ್ನು 9 ಬಾರಿ ಸೋಲಿಸಿತ್ತು. ನಾಯಕನಾಗಿ ಹೆಚ್ಚು ರನ್ ಗಳಿಸದ ಸಚಿನ್ ತೆಂಡೂಲ್ಕರ್ ಅವರ ನಾಯಕತ್ವದಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ 8 ಬಾರಿ ವಿಶ್ವಪಕ್ ಟೂರ್ನಿಯ ಪಂದ್ಯಗಳಲ್ಲಿ ಜಯಗಳಿಸಿತ್ತು. ಗಂಗೂಲಿ ಅವರ ನೇತೃತ್ವದಲ್ಲಿ ಭಾರತ 7 ಪಂದ್ಯಗಳನ್ನು ಗೆದ್ದಿದೆ.

    2003ರ ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಮುನ್ನಡೆಸಿದ್ದ ಸೌರವ್ ಗಂಗೂಲಿ ಅವರು ಪಾಕಿಸ್ತಾನ ವಿರುದ್ಧ ಜಯ ಸಾಧಿಸಿದ್ದರು. ಇದಲ್ಲದೆ ಅವರು 2004ರಲ್ಲಿ ಪಾಕಿಸ್ತಾನ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದಕ್ಕೆ 3-2 ಅಂತರದಲ್ಲಿ ಗೆಲುವು ತಂದುಕೊಟ್ಟಿದ್ದರು. ಅದೇ ಪ್ರವಾಸದಲ್ಲಿ ಭಾರತವು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು.

  • ಟೀಂ ಇಂಡಿಯಾ ಜರ್ಸಿ ಮೇಲಿನ 3 ಸ್ಟಾರ್‌ಗಳ  ಹಿಂದಿದೆ ಕಥೆ

    ಟೀಂ ಇಂಡಿಯಾ ಜರ್ಸಿ ಮೇಲಿನ 3 ಸ್ಟಾರ್‌ಗಳ ಹಿಂದಿದೆ ಕಥೆ

    ಬೆಂಗಳೂರು: ನಾವು ಕ್ರಿಕೆಟ್ ಅಭಿಮಾನಿಗಳು. ಅದರಲ್ಲೂ ಟೀಂ ಇಂಡಿಯಾ ಮ್ಯಾಚ್ ಇದ್ರೆ ಸಾಕು ಎಷ್ಟೇ ಕೆಲಸ ಇದ್ದರೂ ಕೊಂಚ ಬಿಡುವು ಮಾಡಿಕೊಂಡು ಮ್ಯಾಚ್ ನೋಡುತ್ತೇವೆ. ಆದರೆ ಕೆಲವರಿಗೆ ಕೆಲವು ವಿಚಾರಗಳೇ ಗೊತ್ತಿರುವುದಿಲ್ಲ.

    ಟೀಂ ಇಂಡಿಯಾ ಆಟಗಾರರ ಜರ್ಸಿಯ ಎಡಭಾಗದಲ್ಲಿ ಬಿಸಿಸಿಐ ಲೋಗೋ ಇರುತ್ತದೆ. ಅದನ್ನು ನಾವೆಲ್ಲರೂ ನೋಡಿರುತ್ತೇವೆ. ಅದರ ಮೇಲೆ ಮೂರು ಸ್ಟಾರ್‌ಗಳೂ ಇರುತ್ತವೆ. ಆದರೆ 2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಆಟಗಾರರ ಜರ್ಸಿಯ ಮೇಲೆ ಎರಡು ಸ್ಟಾರ್ ಮಾತ್ರ ಇದ್ವು. ಹಾಗಾದ್ರೆ ಈ ಸ್ಟಾರ್‌ಗಳು ಏನನ್ನ ಪ್ರತಿನಿಧಿಸುತ್ತವೆ? ಯಾರು ನೀಡುತ್ತಾರೆ ಗೊತ್ತಾ?

    ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ನಡೆಸುತ್ತದೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಟೆಸ್ಟ್ ವರ್ಲ್ಡ್ ಚಾಂಪಿಯನ್‍ಶಿಪ್ ಕೂಡ ಆರಂಭಿಸಿದೆ. ಈ ಪೈಕಿ ಟೀಂ ಇಂಡಿಯಾ ಎರಡು ಬಾರಿ ಏಕದಿನ ವಿಶ್ವಕಪ್ ಹಾಗೂ ಒಂದು ಬಾರಿ ಟಿ20 ವಿಶ್ವಕಪ್ ಗೆದ್ದುಗೊಂಡಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು. ಅದಾದ 28 ವರ್ಷಗಳ ಬಳಿಕ ಅಂದ್ರೆ 2011ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಈ ಸಾಧನೆ ಮಾಡಿತ್ತು. ಅಷ್ಟೇ ಅಲ್ಲದೆ 2007ರಲ್ಲಿ ಐಸಿಸಿ ಆರಂಭಿಸಿದ್ದ ಚೊಚ್ಚಲ ಟಿ20 ವಿಶ್ವಕಪ್ ಅನ್ನು ಭಾರತ ಧೋನಿ ನಾಯಕತ್ವದಲ್ಲಿ ತನ್ನ ಮುಡಿಗೆ ಏರಿಸಿಕೊಂಡಿತ್ತು.

    ಇದನ್ನೆಲ್ಲ ಯಾಕೆ ತಿಳಿಯಬೇಕು ಗೊತ್ತಾ? ಟೀಂ ಇಂಡಿಯಾ ಜರ್ಸಿ ಮೇಲೆ ಇರುವ ಸ್ಟಾರ್ ಗಳಿಗೂ ವಿಶ್ವಕಪ್ ಚಾಂಪಿಯನ್‍ಶಿಪ್‍ಗೂ ನಂಟಿದೆ. ಹೌದು, ಐಸಿಸಿ ನಡೆಸುವ ಎರಡು ಮಾದರಿಯ ವಿಶ್ವಕಪ್‍ನಲ್ಲಿ ಭಾರತ ಇದುವರೆಗೂ ಮೂರು ಬಾರಿ ಚಾಂಪಿಯನ್‍ಶಿಪ್ ಆಗಿದೆ. ಹೀಗಾಗಿ ಮೂರು ಸ್ಟಾರ್‌ಗಳು ಟೀಂ ಇಂಡಿಯಾ ಜರ್ಸಿ ಮೇಲಿವೆ.

    ಹಾಗಾದ್ರೆ 2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಭಾರತದ ಆಟಗಾರರು ಎರಡು ಸ್ಟಾರ್‌ಗಳಿರುವ ಜರ್ಸಿಯನ್ನು ಧರಿಸಿದ್ದು ಯಾಕೆ ಗೊತ್ತಾ? ಟೀಂ ಇಂಡಿಯಾ ಇದುವೆರೆಗೂ ಎರಡು ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿದೆ. ಹೀಗಾಗಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆಟಗಾರರು ಎರಡು ಸ್ಟಾರ್ ಇದ್ದ ಜರ್ಸಿ ಧರಿಸಿದ್ದರು. ಇದೇ ಸಮಯದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಆಟಗಾರರು 5 ಸ್ಟಾರ್ ಇದ್ದ ಜರ್ಸಿ ಧರಿಸಿದ್ದರು. ಎರಡು ಬಾರಿ ಚಾಂಪಿಯನ್ ಗರಿಮೆ ಪಡೆದಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರರು 2 ಸ್ಟಾರ್ ಹಾಗೂ ತಲಾ ಒಂದು ಬಾರಿ ಚಾಂಪಿಯನ್ ಆಗಿರುವ ಶ್ರೀಲಂಕಾ ಮತ್ತು ಪಾಕಿಸ್ತಾನದ ಆಟಗಾರರು ಒಂದು ಸ್ಟಾರ್ ಹೊಂದಿದ್ದ ಜರ್ಸಿ ಧರಿಸಿದ್ದರು.