Tag: ವಿಶ್ವದಾಖಲೆ

  • 135 ಪುಸ್ತಕ ಬರೆದು, 4 ವಿಶ್ವದಾಖಲೆ ನಿರ್ಮಿಸಿದ 13ರ ಪೋರ

    135 ಪುಸ್ತಕ ಬರೆದು, 4 ವಿಶ್ವದಾಖಲೆ ನಿರ್ಮಿಸಿದ 13ರ ಪೋರ

    ಅಯೋಧ್ಯೆ: ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

    ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ ಹೆಚ್ಚಾಗುತ್ತಾ ಬಂತು. ಈವರೆಗೆ ಮೃಗೇಂದ್ರ ಬರೋಬ್ಬರಿ 135 ಪುಸ್ತಕಗಳನ್ನು ಬರೆದಿದ್ದಾನೆ. `ಆಜ್ ಕಾ ಅಭಿಮನ್ಯು’ ಎಂಬ ಕಾವ್ಯನಾಮದಲ್ಲಿ ಮೃಗೇಂದ್ರ ಪುಸ್ತಕಗಳನ್ನು ಬರೆಯುತ್ತಿದ್ದಾನೆ.

    ಮೃಗೇಂದ್ರನ ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಮಗ ಪುಸ್ತಕಗಳನ್ನು ಬರೆಯುವ ಬಗ್ಗೆ ತೋರಿಸುತ್ತಿದ್ದ ಆಸಕ್ತಿಯನ್ನು ಗುರುತಿಸಿ ಆತನನ್ನು ಬೆಂಬಲಿಸಿದ್ದಾರೆ. ಜೊತೆಗೆ ಆತನ ತಂದೆ ರಾಜ್ಯ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

    ಈ ಬಗ್ಗೆ ಮಾತನಾಡಿದ ಬಾಲಕ, ನಾನು ರಾಮಾಯಣದಲ್ಲಿರುವ 51 ಪಾತ್ರಗಳ ಬಗ್ಗೆ ವಿಶ್ಲೇಷಿಸಿ ಪುಸ್ತಕಗಳನ್ನು ಬರೆದಿದ್ದೇನೆ. ನಾನು ಬರೆದ ಎಲ್ಲಾ ಪುಸ್ತಕಗಳು 25 ರಿಂದ 100 ಪುಟಗಳನ್ನು ಹೊಂದಿದೆ. ನನ್ನ ಈ ಪ್ರತಿಭೆಯನ್ನು ಮೆಚ್ಚಿ ಡಾಕ್ಟರೇಟ್ ಪದವಿ ನೀಡುವುದಾಗಿ ಲಂಡನ್ ವರ್ಲ್ಡ್ ಯೂನಿವರ್ಸಿಟಿ ಆಫ್ ರೆಕಾರ್ಡ್ಸ್ ಆಫರ್ ನೀಡಿತ್ತು ಎಂದು ತಿಳಿಸಿದ್ದಾನೆ.

    ದೊಡ್ಡವನಾದ ಮೇಲೆ ನಾನು ಬರಹಗಾರನಾಗಲು ಇಷ್ಟಪಡುತ್ತೇನೆ. ವಿವಿಧ ವಿಷಯಗಳ ಬಗ್ಗೆ, ಬೇರೆ ಬೇರೆ ಆಯಾಮದಲ್ಲಿ ಇನ್ನೂ ಹಲವಾರು ಪುಸ್ತಕಗಳನ್ನು ಬರೆಯಲು ಬಯಸುತ್ತೇನೆ ಎಂದಿದ್ದಾನೆ.

    ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್ ಸೇರಿದಂತೆ ಹಲವು ಗಣ್ಯರ ಬಗ್ಗೆ ಈ ಪೋರ ಪುಸ್ತಕ ಬರೆದಿದ್ದು, ಚಿಕ್ಕವಯಸ್ಸಿನಲ್ಲೇ ಈ ಮಟ್ಟಿಗೆ ಸಾಧನೆ ಮಾಡಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

  • ವಿಶ್ವಕಪ್ ಇತಿಹಾಸದಲ್ಲಿ ವಿಶ್ವದಾಖಲೆ ನಿರ್ಮಿಸಿದ ಶಕೀಬ್

    ವಿಶ್ವಕಪ್ ಇತಿಹಾಸದಲ್ಲಿ ವಿಶ್ವದಾಖಲೆ ನಿರ್ಮಿಸಿದ ಶಕೀಬ್

    ಬೆಂಗಳೂರು: ವಿಶ್ವಕಪ್ ಇತಿಹಾಸದಲ್ಲಿ ಬಾಂಗ್ಲಾದೇಶದ ಆಲ್‍ರೌಂಡರ್ ಶಕೀಬ್ ಅಲ್ ಹಸನ್ ದಾಖಲೆ ನಿರ್ಮಿಸಿದ್ದಾರೆ. ಒಂದೇ ಟೂರ್ನಿಯಲ್ಲಿ 10ಕ್ಕಿಂತ ಅಧಿಕ ವಿಕೆಟ್ ಮತ್ತು 500+ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    2007 ರಲ್ಲಿ ನ್ಯೂಜಿಲೆಂಡಿನ ಸ್ಕಾಟ್ ಸ್ಟೈರಿಸ್ 499 ರನ್ ಮತ್ತು 9 ವಿಕೆಟ್ ಪಡೆದುಕೊಂಡಿದ್ದರು. ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ಶಕೀಬ್ ಭಾರತದ ವಿರುದ್ಧದ ಪಂದ್ಯದಲ್ಲಿ 66 ರನ್(74 ಎಸೆತ, 6 ಬೌಂಡರಿ) ಸಿಡಿಸಿ ಔಟಾಗಿದ್ದರು.

    ಬಾಂಗ್ಲಾ ಪರ ವಿಶ್ವಕಪ್‍ನಲ್ಲಿ 5 ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಶಕೀಬ್ ಆಗಿದ್ದಾರೆ. ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ 29 ರನ್ ನೀಡಿ 5 ವಿಕೆಟ್ ಪಡೆದಿದ್ದರು. ವಿಂಡೀಸ್ ವಿರುದ್ಧ ಶತಕ ಸಿಡಿಸಿ ತಂಡಕ್ಕೆ ಶಕೀಬ್ ಜಯವನ್ನು ತಂದಿಟ್ಟಿದ್ದರು.

    ವಿಂಡೀಸ್ 8 ವಿಕೆಟ್‍ಗೆ 321 ರನ್ ಹೊಡೆದಿದ್ದರೆ ಬಾಂಗ್ಲಾ 41.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿ 7 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಶಕೀಬ್ ಈ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಅಜೇಯ 124 ರನ್(99 ಎಸೆತ, 16 ಬೌಂಡರಿ) ಹೊಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

    ಭಾರತದ ವಿರುದ್ಧ ಪಂದ್ಯದಲ್ಲಿ 10 ನೇ ಓವರಿನಲ್ಲಿ ಕ್ರೀಸಿಗೆ ಬಂದ ಶಕೀಬ್ 34ನೇ ಓವರ್ ವರೆಗೂ ಕ್ರೀಸ್‍ನಲ್ಲಿದ್ದರು. 33.5 ಓವರಿಗೆ ತಂಡದ ಮೊತ್ತ 179 ಆಗಿದ್ದಾಗ 6ನೇಯವರಾಗಿ ಶಕೀಬ್ 66 ರನ್(74 ಎಸೆತ, 6 ಬೌಂಡರಿ) ಸಿಡಿಸಿ ಔಟಾದರು. ಶಕೀಬ್ ಕ್ರೀಸ್ ನಲ್ಲಿ ಇರುವವರೆಗೂ ಬಾಂಗ್ಲಾದ ಗೆಲುವಿನ ಆಸೆ ಜೀವಂತವಾಗಿತ್ತು. ಆದರೆ ಪಾಂಡ್ಯಾ ಎಸೆದ ಬಾಲನ್ನು ಹೊಡೆಯಲು ಹೋಗಿ ಎಕ್ಸ್‌ಟ್ರಾ ಕವರಿನಲ್ಲಿದ್ದ ದಿನೇಶ್ ಕಾರ್ತಿಕ್‍ಗೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ನಡೆದರು. ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಶಕೀಬ್ 10 ಓವರ್ ಎಸೆದು 41 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಇದರಲ್ಲಿ 32 ಎಸೆತಗಳು ಡಾಟ್ ಬಾಲ್ ಆಗಿದ್ದು ವಿಶೇಷ.

    2006ರಲ್ಲಿ ಏಕದಿನ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಶಕೀಬ್ ಇದೂವರೆಗೆ 205 ಏಕದಿನ ಪಂದ್ಯಗಳ 193 ಇನ್ನಿಂಗ್ಸ್ ನಲ್ಲಿ 6,259 ರನ್ ಗಳಿಸಿದ್ದಾರೆ. ಬೌಲಿಂಗ್‍ನಲ್ಲಿ 260 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ವಿಶ್ವಕಪ್ 2019: ಬಾಂಗ್ಲಾ ಆಟಗಾರ ಶಕೀಬ್ ವಿಶೇಷ ದಾಖಲೆ

     

    ರೋಹಿತ್ ವರ್ಸಸ್ ಶಕೀಬ್
    ಇಬ್ಬರು ಆಟಗಾರರು 7 ಪಂದ್ಯಗಳನ್ನು ಆಡಿದ್ದು 90.33 ಸರಾಸರಿಯಲ್ಲಿ ಶಕೀಬ್ 542 ರನ್ ಗಳಿಸಿದರೆ 90.66 ಸರಾಸರಿಯಲ್ಲಿ ರೋಹಿತ್ 544 ರನ್ ಸಿಡಿಸಿದ್ದಾರೆ. ಈ ವಿಶ್ವಕಪ್‍ನಲ್ಲಿ 34.9 ಸ್ಟ್ರೈಕ್ ರೇಟ್‍ನಲ್ಲಿ 11 ವಿಕೆಟ್ ಕಿತ್ತಿದ್ದಾರೆ. 7 ಪಂದ್ಯಗಳಲ್ಲಿ ಶಕೀಬ್ ಕ್ರಮವಾಗಿ 75, 64, 121, 124*, 41, 51, 66 ರನ್ ಗಳಿಸಿದ್ದಾರೆ.

  • ಫ್ಲಿಂಟಾಫ್ ಕಿರಿಕ್‍ಗೆ ಚಿಮ್ಮಿತು 6 ಸಿಕ್ಸ್ – ಸಿಕ್ಸರ್ ಸುರಿಮಳೆಗೈದ ಯುವಿ

    ಫ್ಲಿಂಟಾಫ್ ಕಿರಿಕ್‍ಗೆ ಚಿಮ್ಮಿತು 6 ಸಿಕ್ಸ್ – ಸಿಕ್ಸರ್ ಸುರಿಮಳೆಗೈದ ಯುವಿ

    ಬೆಂಗಳೂರು: ಟಿ 20 ಕ್ರಿಕೆಟ್‍ನಲ್ಲಿ 6 ಎಸೆತಗಳಿಗೆ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆಗೈದ ಯುವರಾಜ್ ಸಿಂಗ್ ಇಂದು ಎಲ್ಲ ಮಾದರಿಯ ಕ್ರಿಕೆಟಿನಿಂದ ನಿವೃತ್ತರಾಗಿದ್ದಾರೆ.

    ಯುವಿ ಆಲ್‍ರೌಂಡರ್ ಬ್ಯಾಟ್ಸ್ ಮನ್ ಎನ್ನುವುದು ಮೊದಲೇ ದೃಢಪಟ್ಟಿತ್ತು. ಆದರೆ ಅವರನ್ನು ಕೆರಳಿಸಿದರೆ ಆಗುವ ಫಲಿತಾಂಶ ಏನು ಎನ್ನುವುದು ಗೊತ್ತಾಗಿದ್ದು 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ.

    ಫ್ಲಿಂಟಾಫ್ ಎಸೆದ 18ನೇ ಓವರಿನಲ್ಲಿ ಯುವಿ 4 ಮತ್ತು 5ನೇ ಎಸೆತದಲ್ಲಿ ಬೌಂಡರಿ ಹೊಡೆದಿದ್ದರು. ಈ ಓವರ್ ಕೊನೆಯ ಎಸೆತದಲ್ಲಿ ಒಂದು ರನ್ ಓಡಿದ್ದರು. ಈ ಸಂದರ್ಭದಲ್ಲಿ ಫ್ಲಿಂಟಾಫ್ ಯುವರಾಜ್ ಬಳಿ ಬಂದು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಇದಕ್ಕೆ ಯುವರಾಜ್ ಸಿಟ್ಟಾಗಿ ಅಲ್ಲೇ ಆಕ್ರೋಶ ಹೊರಹಾಕಿದರು. ಈ ವೇಳೆ ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನ ಮಾಡಿದ್ದಾರೆ.

    https://www.youtube.com/watch?v=alwKupWlO8g

    19ನೇ ಓವರ್ ಎಸೆಯಲು ಬಂದಿದ್ದು ಸ್ಟುವರ್ಟ್ ಬ್ರಾಡ್. ಮೊದಲೇ ಸಿಟ್ಟಿನಲ್ಲಿದ್ದ ಯುವಿ ಮೊದಲ ಎಸೆತವನ್ನು ಸಿಕ್ಸರ್‍ಗೆ ಅಟ್ಟಿದರು. ನಂತರ ಸತತ ಎರಡು ಎಸೆತವನ್ನು ಸಿಕ್ಸರ್‍ಗೆ ಅಟ್ಟಿ ಹ್ಯಾಟ್ರಿಕ್ ಸಾಧನೆ ಮಾಡಿದರು. 4ನೇ ಎಸೆತ ಆಫ್ ಸೈಡ್ ಫುಲ್ ಟಾಸ್ ಬಂದರೂ ಯುವಿ ಅದನ್ನು ಸಿಕ್ಸ್ ಆಗಿ ಪರಿವರ್ತಿಸಿದರು. 5ನೇ ಎಸೆತಕ್ಕೂ ಮುನ್ನ ಬ್ರಾಡ್ ಮತ್ತು ನಾಯಕ ಕಾಲಿಂಗ್‍ವುಡ್ ಚರ್ಚೆ ನಡೆಸಿದರು. ಆದರೆ ಈ ಚರ್ಚೆ ಯಾವುದೇ ಫಲಕಾರಿಯಾಗಲಿಲ್ಲ. 5ನೇ ಎಸೆತವೂ ಸಿಕ್ಸ್‍ಗೆ ಹೋಯಿತು. 5ನೇ ಎಸೆತ ಸ್ಟೇಡಿಯಂ ಹೋಗುತ್ತಿದ್ದಂತೆ ಇಂಗ್ಲೆಂಡ್ ಆಟಗಾರರು ಮುಖದ ಮೇಲೆ ಬೆರಳನ್ನು ಇಟ್ಟರು. ಕೊನೆಗೆ 6ನೇ ಎಸೆತದಲ್ಲೂ ಯುವರಾಜ್ ಸಿಕ್ಸರ್ ಹೊಡೆಯುವ ಮೂಲಕ ಟಿ20 ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದರು.

    ಈ ಓವರಿಗೂ ಮುನ್ನ ಯುವರಾಜ್ 6 ಎಸೆತದಲ್ಲಿ 2 ಬೌಂಡರಿ ನೆರವಿನಿಂದ 14 ರನ್ ಗಳಿಸಿದ್ದರೆ, 19 ಓವರ್ ಮುಕ್ತಾಯಕ್ಕೆ ಯುವರಾಜ್ 12 ಎಸೆತದಲ್ಲಿ 50 ರನ್ ಚಚ್ಚಿ ಟಿ 20 ಕ್ರಿಕೆಟ್‍ನಲ್ಲಿ ವೇಗದ ಅರ್ಧಶತಕ ಸಿಡಿಸಿದರು. 18 ಓವರ್ ವೇಳೆ 3 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದ್ದ ಭಾರತದ ಸ್ಕೋರ್ 19 ಓವರ್ ಮುಕ್ತಾಯಕ್ಕೆ 207 ರನ್ ಗಳಿಸಿತ್ತು. ಫ್ಲಿಂಟಾಫ್ ಎಸೆದ ಕೊನೆಯ ಓವರ್‍ನಲ್ಲೂ ಯುವರಾಜ್ ಸಿಕ್ಸ್ ಸಿಡಿಸಿ 58 ರನ್(16 ಎಸೆತ, 3 ಬೌಂಡರಿ, 7 ಸಿಕ್ಸರ್, 362.50 ಸ್ಟ್ರೈಕ್ ರೇಟ್) ಗಳಿಸಿ ಔಟಾದರು. ಅಂತಿಮವಾಗಿ ಭಾರತ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು.

    ಫ್ಲಿಂಟಾಫ್ ಜೊತೆ ಜಗಳ ಯಾಕಾಯ್ತು ಎನ್ನುವುದನ್ನು ಯುವರಾಜ್ ಸಿಂಗ್ 2016 ರಲ್ಲಿ ಬಹಿರಂಗ ಪಡಿಸಿದ್ದರು. 18ನೇ ಓವರ್ ಬಳಿಕ ನನ್ನ ಬಳಿ ಬಂದ ಫ್ಲಿಂಟಾಫ್, F ***ing ರೆಡಿಕ್ಯೂಲಸ್ ಶಾಟ್ ಎಂದು ಹೇಳಿದರು. ಅದಕ್ಕೆ ನಾನು F*** ಯೂ ಎಂದೆ. ನನ್ನ ಉತ್ತರಕ್ಕೆ ಫ್ಲಿಂಟಾಫ್ ಏನು ಹೇಳಿದ್ದು ಎಂದು ಪ್ರಶ್ನಿಸಿದರು. ಇದಕ್ಕೆ, ನಾನು ಏನು ಹೇಳಿದ್ದು ಏನು ಅನ್ನೋದು ಗೊತ್ತಾಯ್ತು ಅಲ್ಲವೇ ಎಂದು ಹೇಳಿದೆ. ಹೀಗೆ ಹೇಳಿದ್ದಕ್ಕೆ ಫ್ಲಿಂಟಾಫ್ ನಾನು ನಿನ್ನ ಗಂಟಲು ಕತ್ತರಿಸುತ್ತೇನೆ ಎಂದು ತಿರುಗೇಟು ನೀಡಿದರು. ಈ ಮಾತು ನನಗೆ ಸಿಟ್ಟು ತರಿಸಿತ್ತು. ಕೂಡಲೇ ನಾನು, ಈ ಬ್ಯಾಟ್ ನನ್ನ ಕೈಯಲ್ಲಿದೆ. ಈ ಬ್ಯಾಟ್ ಮೂಲಕವೇ ಹೊಡೆಯುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ ಎಂದು ಹಳೆಯ ಘಟನೆಯನ್ನು ರಿವೀಲ್ ಮಾಡಿದ್ದರು.

     

  • ಸಿಕ್ಸರ್‌ಗಳ ಸುರಿಮಳೆ: ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆ ಬರೆದ ಗೇಲ್

    ಸಿಕ್ಸರ್‌ಗಳ ಸುರಿಮಳೆ: ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆ ಬರೆದ ಗೇಲ್

    ಬ್ರಿಡ್ಜ್‌ಟೌನ್: ವೆಸ್ಟ್ಇಂಡೀಸ್ ಆರಂಭಿಕ ಆಟಗಾರ ಕ್ರಿಸ್ ಗೇಲ್ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದು 2 ವಿಶ್ವದಾಖಲೆ ಬರೆದಿದ್ದಾರೆ.

    ಈ ಪಂದ್ಯದಲ್ಲಿ 12 ಸಿಕ್ಸರ್ ಸಿಡಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ 3 ಬಾರಿ 10ಕ್ಕೂ ಹೆಚ್ಚು ಸಿಕ್ಸ್ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದರ ಜೊತೆಯಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆಯನ್ನ ತಮ್ಮ ಹೆಸರಿಗೆ ಗೇಲ್ ವರ್ಗಾಯಿಸಿಕೊಂಡಿದ್ದಾರೆ.

    39 ವರ್ಷದ ಗೇಲ್ ಕಳೆದ ವರ್ಷದ ಮಾರ್ಚ್ ನಲ್ಲಿ ಯುಎಇ ವಿರುದ್ಧ 11 ಸಿಕ್ಸ್ ಸಿಡಿಸಿದ್ದರೆ, 2015ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 16 ಸಿಕ್ಸ್ ಚಚ್ಚಿದ್ದರು.

    ಯಾರು ಎಷ್ಟು ಸಿಕ್ಸ್ ಹೊಡೆದಿದ್ದಾರೆ?
    ಏಕದಿನದಲ್ಲಿ ಗೇಲ್ 479 ಸಿಕ್ಸ್ ಹೊಡೆಯುವ ಮೂಲಕ ಈಗ ಅಗ್ರಸ್ಥಾನಕ್ಕೆ ಏರಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ 476, ನ್ಯೂಜಿಲೆಂಡಿನ ಬ್ರೆಂಡನ್ ಮೆಕ್ಕಲಂ 398 ಸಿಕ್ಸ್ ಹೊಡೆಯುವ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಟಿ20ಯಲ್ಲೂ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಗೇಲ್ 905 ಸಿಕ್ಸ್ ಹೊಡೆದಿದ್ದರೆ, ವೆಸ್ಟ್ ಇಂಡೀಸಿನ ಕಿರಾನ್ ಪೊಲಾರ್ಡ್ 563, ಮೆಕ್ಕಲಂ 485 ಸಿಕ್ಸ್ ಚಚ್ಚಿದ್ದಾರೆ.

    ಇದರ ಜೊತೆಯಲ್ಲೇ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಗೇಲ್ ಇಂಗ್ಲೆಂಡ್ ವಿರುದ್ಧ 100 ಸಿಕ್ಸ್ ಹೊಡೆದಿದ್ದಾರೆ. 31 ಏಕದಿನದಲ್ಲಿ 57 ಸಿಕ್ಸ್, 11 ಟಿ20ಯಲ್ಲಿ 28 ಸಿಕ್ಸ್, 20 ಟೆಸ್ಟ್ ಪಂದ್ಯಗಳಲ್ಲಿ 15 ಸಿಕ್ಸ್ ಹೊಡೆದಿದ್ದಾರೆ. ಈ ಮೂಲಕ ತಂಡವೊಂದರ ವಿರುದ್ಧ 100 ಸಿಕ್ಸರ್ ಹೊಡೆದ ಮೊದಲ ಆಟಗಾರ ಎನ್ನುವ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ.

    ಸಿಕ್ಸರ್‌ಗಳ ಸುರಿಮಳೆ:
    ಆರಂಭಿಕರಾಗಿ ಅಂಗಳಕ್ಕೆ ಇಳಿದ ಗೇಲ್ 76 ಎಸೆತಗಳಲ್ಲಿ 50 ರನ್(2 ಬೌಂಡರಿ, 3 ಸಿಕ್ಸ್) ಹೊಡೆದಿದ್ದರೆ ನಂತರ ಕೇವಲ 24 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ 50 ರನ್ ಚಚ್ಚಿದ್ದರು. 100 ರನ್(3 ಬೌಂಡರಿ, 9 ಸಿಕ್ಸ್) ಹೊಡೆದ ಬಳಿಕ ಅಂತಿಮವಾಗಿ 135 ರನ್(129 ಎಸೆತ, 3 ಬೌಂಡರಿ, 12 ಸಿಕ್ಸ್) ಗಳಿಸಿ ತಂಡದ ಮೊತ್ತ 317 ರನ್ ಆಗಿದ್ದಾಗ 6ನೇಯವರಾಗಿ ಔಟಾದರು.

    ಕ್ರಿಸ್ ಗೇಲ್ ಉತ್ತಮ ಆಟದಿಂದಾಗಿ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 360 ರನ್ ಗಳಿಸಿದ್ದರೂ ಇಂಗ್ಲೆಂಡ್ ಈ ಮೊತ್ತವನ್ನು ಚೇಸ್ ಮಾಡಿ 6 ವಿಕೆಟ್ ಗಳ ಜಯವನ್ನು ಗಳಿಸಿದೆ. ಆರಂಭಿಕ ಆಟಗಾರ ಜೇಸನ್ ರೇ 123 ರನ್(85 ಎಸೆತ, 15 ಬೌಂಡರಿ, 3 ಸಿಕ್ಸ್), ಜೋ ರೂಟ್ 102 ರನ್(97 ಎಸೆತ, 9 ಬೌಂಡರಿ) ಸಿಡಿಸಿದ ಪರಿಣಾಮ ಇಂಗ್ಲೆಂಡ್ 48.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 364 ರನ್ ಗಳಿಸಿ ಗುರಿಮುಟ್ಟಿತು. ಸ್ಫೋಟಕ ಶತಕ ಸಿಡಿಸಿದ ಜೇಸನ್ ರೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ವದಾಖಲೆ ನಿರ್ಮಿಸಿದ ಕೈಗಾ ಅಣುವಿದ್ಯುತ್ ಘಟಕ

    ವಿಶ್ವದಾಖಲೆ ನಿರ್ಮಿಸಿದ ಕೈಗಾ ಅಣುವಿದ್ಯುತ್ ಘಟಕ

    ಕಾರವಾರ: ದೇಶದಲ್ಲಿಯೇ ಅಣುವಿದ್ಯುತ್ ಉತ್ಪಾದನೆಯಲ್ಲಿ ಹೆಸರು ಮಾಡಿರುವ ಕಾರವಾರ ತಾಲೂಕಿನಲ್ಲಿರುವ ಕೈಗಾ ಅಣುವಿದ್ಯುತ್ ಘಟಕ ವಿಶ್ವದಾಖಲೆ ನಿರ್ಮಿಸಿದೆ.

    ಕೈಗಾ ಒಂದನೇ ಘಟಕವು ಸತತ 941 ದಿನಗಳ ಕಾಲ ನಿರಂತರ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಇಂದು ವಿಶ್ವದಾಖಲೆ ನಿರ್ಮಿಸಿದೆ. 2000 ನೇ ಇಸವಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಘಟಕ 1 ನಿರ್ಮಾಣ ಮಾಡಲಾಗಿತ್ತು. ನಂತರ ಮೇ 15, 2016ರಿಂದ ಕೈಗಾ ಒಂದನೇ ಘಟಕವು ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡಿಕೊಂಡು ಬಂದಿದ್ದು ಸೋಮವಾರ ಬೆಳಗ್ಗೆ 9.15ಕ್ಕೆ ಈ ದಾಖಲೆ ಬರೆದಿದೆ.

    ಕಳೆದ 941 ದಿನದಲ್ಲಿ 4,900 ದಶಲಕ್ಷ ಯೂನಿಟ್ ಅಣುವಿದ್ಯುತ್ ಅನ್ನು ನಿರಂತರವಾಗಿ ಉತ್ಪಾದನೆ ಮಾಡಿದೆ. ಈ ಹಿಂದೆ ವಿಶ್ವದಲ್ಲಿಯೇ ಬ್ರಿಟನ್‍ನ ಹೇಶಾಮ್ ಅಣುವಿದ್ಯುತ್ ಘಟಕ 940 ದಿನಗಳ ಕಾಲ ನಿರಂತರ ವಿದ್ಯುತ್ ಉತ್ಪಾದನೆ ಮಾಡಿತ್ತು. ಈಗ ಈ ದಾಖಲೆಯನ್ನು ಮುರಿಯುವ ಮೂಲಕ ವಿಶ್ವದಲ್ಲೇ ಮೊದಲ ನಿರಂತರ ವಿದ್ಯುತ್ ಉತ್ಪಾದನೆ ಮಾಡಿದ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ದೇಶಕ್ಕೆ ಹೆಮ್ಮೆ ತಂದಿದೆ.

    ದಿವಂಗತ ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಅವರು 2000 ಇಸ್ವಿಯ ನವೆಂಬರ್ 16 ರಂದು ಕೈಗಾ ಅಣುಸ್ಥಾವರನ್ನು ದೇಶಕ್ಕೆ ಸಮರ್ಪಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರೋಹಿತ್ ಶರ್ಮಾ 111 ರನ್, ವಿಂಡೀಸ್ 124 ರನ್ : ಸರಣಿ ಗೆದ್ದ ಟೀಂ ಇಂಡಿಯಾ

    ರೋಹಿತ್ ಶರ್ಮಾ 111 ರನ್, ವಿಂಡೀಸ್ 124 ರನ್ : ಸರಣಿ ಗೆದ್ದ ಟೀಂ ಇಂಡಿಯಾ

    ಲಕ್ನೋ: ಎರಡನೇ ಪಂದ್ಯವನ್ನು 71 ರನ್ ಗಳಿಂದ ಗೆಲ್ಲುವ ಮೂಲಕ ಭಾರತ ಮೂರು ಪಂದ್ಯಗಳ ಟಿ 20 ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.

    ಗೆಲ್ಲಲು 196 ರನ್‍ಗಳ ಸವಾಲು ಸ್ವೀಕರಿಸಿದ ವಿಂಡೀಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿತು. ಈ ಮೂಲಕ ವಿಂಡೀಸ್ ವಿರುದ್ಧ ಟೆಸ್ಟ್, ಏಕದಿನ, ಟಿ-20 ಮೂರು ಸರಣಿಯನ್ನು ಭಾರತ ಗೆದ್ದು ಬೀಗಿದಂತಾಗಿದೆ.

    ಎರಡನೇ ಓವರ್ ನಿಂದಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದ ವಿಂಡೀಸ್ 52 ರನ್ ಗಳಿಸುವಷ್ಟರಲ್ಲೇ 5 ವಿಕೆಟ್ ಕಳೆದುಕೊಂಡಿತ್ತು. ಕಬೀರ್ ಅಹ್ಮದ್ ಆರಂಭಿಕ ಆಟಗಾರರನ್ನು ಬೇಗನೇ ಪೆವಿಲಿಯನ್ ಗೆ ಕಳುಹಿಸಿದರೆ ಕುಲದೀಪ್ ಯಾದವ್ 2 ವಿಕೆಟ್ ಕಿತ್ತು ಆಘಾತ ನೀಡಿದರು. ಬ್ರಾವೋ 23 ರನ್, ಹೇಟ್ಮೆಯರ್ 15 ರನ್ ಗಳಿಸಿ ಔಟಾದರು.

    ಅಂತಿಮವಾಗಿ ಕಬೀರ್ ಅಹ್ಮದ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬುಮ್ರಾ ತಲಾ 2ವಿಕೆಟ್ ಪಡೆದರು.

    ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭಿಕ ಜೋಡಿಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ 123 ರನ್ ಜೊತೆಯಾಟವಾಡಿದರು. ಧವನ್ 43 ರನ್(41 ಎಸೆತ, 3 ಬೌಂಡರಿ) ಸಿಡಿಸಿ ಔಟಾದರೆ ನಂತರ ಬಂದ ರಿಷಬ್ ಪಂತ್ 5 ರನ್ ಗಳಿಸಿ ಔಟಾದರು.

    ಮೂರನೇ ವಿಕೆಟ್ ಗೆ ರಾಹುಲ್ ಮತ್ತು ರೋಹಿತ್ ಶರ್ಮಾ 28 ಎಸೆತಗಳಲ್ಲಿ 62 ರನ್ ಚಚ್ಚುವ ಮೂಲಕ ಭಾರತ 2 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. 38 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರೋಹಿತ್ 58 ಎಸೆತಗಳಲ್ಲಿ ಶತಕ ಸಿಡಿಸಿದರು. ಅಂತಿಮವಾಗಿ ಔಟಾಗದೇ 111 ರನ್(61 ಎಸೆತª, 8 ಬೌಂಡರಿ, 7 ಸಿಕ್ಸರ್) ಹೊಡೆದರೆ ಔಟಾಗದೇ ರಾಹುಲ್ 26 ರನ್(14 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಇದನ್ನು ಓದಿ : ಶತಕ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ರೋ`ಹಿಟ್’ ಶರ್ಮಾ

    ಮೂರನೇ ಹಾಗೂ ಅಂತಿಮ ಪಂದ್ಯ ಭಾನುವಾರ ಚೆನ್ನೈನಲ್ಲಿ ನಡೆಯಲಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ 5 ವಿಕೆಟ್ ಗಳಿಂದ ಜಯಗಳಿಸಿತ್ತು.

    ಭಾರತದ ರನ್ ಏರಿದ್ದು ಹೀಗೆ?
    6.1 ಓವರ್ – 50 ರನ್
    12.2 ಓವರ್ – 100 ರನ್
    17.2 ಓವರ್ – 150 ರನ್
    20 ಓವರ್ – 195 ರನ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶತಕ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ರೋ`ಹಿಟ್’ ಶರ್ಮಾ

    ಶತಕ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ರೋ`ಹಿಟ್’ ಶರ್ಮಾ

    ಲಕ್ನೋ: ವಿಂಡೀಸ್ ವಿರುದ್ಧದ ಎರಡನೇ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಇಂದು ನಾಲ್ಕನೇಯ ಶತಕ ಸಿಡಿಸಿ ವಿಶ್ವ ಟಿ20ಯಲ್ಲಿ ನ್ಯೂಜಿಲೆಂಡ್‍ನ ಕಾಲಿನ್ ಮುನ್ರೋ ಸಿಡಿಸಿದ್ದ 3 ಶತಕಗಳ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಈ ಮೂಲಕ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

    ಇದರ ಜೊತೆಯಲ್ಲಿ ಏಕದಿನದಲ್ಲಿ 3 ಬಾರಿ 200ಕ್ಕೂ ಅಧಿಕ ರನ್, ಟಿ 20ಯಲ್ಲಿ ನಾಲ್ಕು ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭಿಕ ಜೋಡಿಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ 123 ರನ್ ಜೊತೆಯಾಟವಾಡಿದರು. ಧವನ್ 43 ರನ್(41 ಎಸೆತ, 3 ಬೌಂಡರಿ) ಸಿಡಿಸಿ ಔಟಾದರೆ ನಂತರ ಬಂದ ರಿಷಬ್ ಪಂತ್ 5 ರನ್ ಗಳಿಸಿ ಔಟಾದರು.

    ಮೂರನೇ ವಿಕೆಟ್ ಗೆ ರಾಹುಲ್ ಮತ್ತು ರೋಹಿತ್ ಶರ್ಮಾ 28 ಎಸೆತಗಳಲ್ಲಿ 62 ರನ್ ಚಚ್ಚುವ ಮೂಲಕ ಭಾರತ 2 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. 38 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರೋಹಿತ್ 58 ಎಸೆತಗಳಲ್ಲಿ ಶತಕ ಸಿಡಿಸಿದರು. ಅಂತಿಮವಾಗಿ ಔಟಾಗದೇ 111 ರನ್(61 ಎಸೆತª, 8 ಬೌಂಡರಿ, 7 ಸಿಕ್ಸರ್) ಹೊಡೆದರೆ ಔಟಾಗದೇ ರಾಹುಲ್ 26 ರನ್(14 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿದರು.

    ಭಾರತದ ರನ್ ಏರಿದ್ದು ಹೀಗೆ?
    6.1 ಓವರ್ – 50 ರನ್
    12.2 ಓವರ್ – 100 ರನ್
    17.2 ಓವರ್ – 150 ರನ್
    20 ಓವರ್ – 195 ರನ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊದಲ ಟಿ-20ಯಲ್ಲಿ ಧೋನಿಯಿಂದ ವಿಶ್ವದಾಖಲೆ

    ಮೊದಲ ಟಿ-20ಯಲ್ಲಿ ಧೋನಿಯಿಂದ ವಿಶ್ವದಾಖಲೆ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಕ್ಯಾಚ್ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಒಟ್ಟು 134 ಕ್ಯಾಚ್ ಪಡೆಯುವ ಮೂಲಕ ಟಿ20ಯಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. 275 ಪಂದ್ಯದಲ್ಲಿ ಧೋನಿ ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಹೆಂಡ್ರಿಕ್ಸ್ ಕ್ಯಾಚ್ ಪಡೆಯುವ ಮೂಲಕ ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.

    ಸಂಗಕ್ಕಾರ ಅವರು 254 ಪಂದ್ಯಗಳಿಂದ 133 ಕ್ಯಾಚ್ ಪಡೆದಿದ್ದರೆ, ದಿನೇಶ್ ಕಾರ್ತಿಕ್ 227 ಪಂದ್ಯಗಳಿಂದ 123 ಕ್ಯಾಚ್ ಪಡೆದಿದ್ದಾರೆ. ಪಾಕಿಸ್ತಾನದ  ಕಮ್ರಾನ್  ಅಕ್ಮಲ್ 211 ಪಂದ್ಯಗಳಿಂದ 115 ಕ್ಯಾಚ್ ಪಡೆದಿದ್ದರೆ, ವೆಸ್ಟ್ ಇಂಡೀಸ್ ನ ದಿನೇಶ್ ರಾಮ್‍ದಿನ್ 168 ಪಂದ್ಯಗಳಿಂದ 108 ಕ್ಯಾಚ್ ಪಡೆದಿದ್ದಾರೆ.

    ಎಲ್ಲ ಮಾದರಿಯ ಕ್ರಿಕೆಟ್ ನ ಒಟ್ಟು 495 ಪಂದ್ಯಗಳಲ್ಲಿ 775 ಬಲಿಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಜನರನ್ನು ಔಟ್ ಮಾಡಿದ ಮೂರನೇ ವಿಕೆಟ್ ಕೀಪರ್ ಧೋನಿ ಆಗಿದ್ದಾರೆ. ಇದನ್ನೂ ಓದಿ: ಕೊಹ್ಲಿ 35ನೇ ಶತಕದೊಂದಿಗೆ ಒಂದೇ ಪಂದ್ಯದಲ್ಲಿ ಮೂರು ವಿಶ್ವ ದಾಖಲೆ!

  • ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ!

    ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ!

    ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿ ರನ್ ಮೆಷಿನ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಈ ಹಿಂದೆ ನಾಯಕನಾಗಿದ್ದುಕೊಂಡು ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಬ್ರಿಯಾನ್ ಲಾರಾ 5 ದ್ವಿಶತಕ ಹೊಡೆದಿದ್ದರು. ಕಳೆದ ಪಂದ್ಯದಲ್ಲಿ ಈ ದಾಖಲೆಯನ್ನು ಸರಿದೂಗಿಸಿದ್ದ ಕೊಹ್ಲಿ ಈ ಪಂದ್ಯದಲ್ಲೂ ದ್ವಿಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ.

    ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ನಾಯಕನಾಗಿದ್ದುಕೊಂಡು 4 ದ್ವಿಶತಕ ಸಿಡಿಸಿದ್ದಾರೆ. ಪಂದ್ಯದ ಎರಡನೇ ದಿನವಾದ ಇಂದು ಕೊಹ್ಲಿ 238 ಎಸೆತಗಳಲ್ಲಿ 20 ಬೌಂಡರಿ ಸಿಡಿಸಿ 200 ರನ್ ಹೊಡೆದರು. ಕೊಹ್ಲಿ ಅಂತಿಮವಾಗಿ 243 ರನ್(287 ಎಸೆತ, 25 ಬೌಂಡರಿ) ಗಳಿಸಿದ್ದಾಗ ಎಲ್‍ಬಿಯಾಗಿ 7ನೇಯವರಾಗಿ ಔಟಾದರು.

    ಟೆಸ್ಟ್ ಕ್ರಿಕೆಟ್ ನಲ್ಲಿ ನಲ್ಲಿ ಅತಿ ಹೆಚ್ಚು ದ್ವಿಶತಕ ದಾಖಲಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಜೊತೆ ಕೊಹ್ಲಿ ಈಗ ಸ್ಥಾನ ಪಡೆದಿದ್ದಾರೆ. ರಾಹುಲ್ ದ್ರಾವಿಡ್ 5 ದ್ವಿಶತಕ, ಸುನಿಲ್ ಗವಾಸ್ಕರ್ 4 ದ್ವಿಶತಕ ದಾಖಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ದ್ವಿಶತಕ ಹೊಡೆದ ವಿಶ್ವದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಬ್ರಾಡ್ಮನ್ 12 ದ್ವಿಶತಕ ಹೊಡೆದಿದ್ದಾರೆ.

    ಕೊಹ್ಲಿ 2011 ರಿಂದ 2015ರವರೆಗೆ 41 ಟೆಸ್ಟ್ ಪಂದ್ಯಗಳ 72 ಇನ್ನಿಂಗ್ಸ್ ಗಳಲ್ಲಿ ಒಂದೇ ಒಂದು ದ್ವಿಶತಕ ಸಿಡಿಸಿರಲಿಲ್ಲ. ಆದರೆ 2016ರ ನಂತರ 22 ಟೆಸ್ಟ್, 33 ಇನ್ನಿಂಗ್ಸ್ ನಲ್ಲಿ 6 ದ್ವಿಶತಕ ಸಿಡಿಸಿರುವುದು ವಿಶೇಷ. ಇನ್ನೊಂದು ವಿಶೇಷ ಏನೆಂದರೆ 2016 ರ ಜುಲೈನಿಂದ ವಿಶ್ವದ ಯಾವೊಬ್ಬ ನಾಯಕ ದ್ವಿಶತಕ ಹೊಡೆದಿಲ್ಲ. ಹೀಗಾಗಿ ಈಗ ಕೊಹ್ಲಿ ಏಕದಿನದಲ್ಲಿ ಸಂಚುರಿ ಮೆಷಿನ್ ಆದಂತೆ ಟೆಸ್ಟ್ ನಲ್ಲೂ ಈಗ ಡಬಲ್ ಸೆಂಚುರಿ ಮೆಷಿನ್ ಆಗುತ್ತಿದ್ದಾರೆ.

    ಕೊಹ್ಲಿಯ ದ್ವಿಶತಕಗಳು: 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 200 ರನ್ ಗಳಿಸುವ ಮೂಲಕ ಮೊದಲ ದ್ವಿಶತಕ ದಾಖಲಿಸಿದ್ದರು. ನಂತರ ಇಂದೋರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ 211 ರನ್, ಮುಂಬೈ  ವಾಂಖೆಡೆಯಲ್ಲಿ  ಇಂಗ್ಲೆಂಡ್ ವಿರುದ್ಧ ಅತ್ಯಧಿಕ 235 ರನ್ ಹಾಗೂ ಹೈದರಾಬಾದ್ ನಲ್ಲಿ ಬಾಂಗ್ಲಾದೇಶ ವಿರುದ್ಧ 204 ರನ್ ಹೊಡೆದಿದ್ದರು. ಲಂಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ 213 ರನ್ ಸಿಡಿಸಿದ್ದರು.

    ಅಮೋಘ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. 39 ರನ್ ಗಳಿಸಿದ್ದಾಗ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಮೂರು ಮಾದರಿಯಲ್ಲಿ ಕೇವಲ 350 ಇನ್ನಿಂಗ್ಸ್ ನಲ್ಲಿ ವೇಗವಾಗಿ 16 ಸಾವಿರ ರನ್ ಪೂರ್ಣಗೊಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ 363 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದರೆ, ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ 374 ಎಸೆತದಲ್ಲಿ ಈ ಸಾಧನೆ ಮಾಡಿದ್ದರು.

    ಕೊಹ್ಲಿ 123 ರನ್ ಗಳಿಸಿದ್ದಾಗ ಟೆಸ್ಟ್ ವೃತ್ತಿಜೀವನದ 105ನೇ ಇನಿಂಗ್ಸ್ ನಲ್ಲಿ  5000 ರನ್‍ಗಳ ಗಡಿ ಮುಟ್ಟಿದ್ದಾರೆ. ಟೆಸ್ಟ್ ನಲ್ಲಿ  5000 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ 11ನೇ ಆಟಗಾರನೆಂಬ ಹಿರಿಮೆಗೆ ಕೊಹ್ಲಿ ಈಗ ಪಾತ್ರರಾಗಿದ್ದಾರೆ.

    ಕೊಹ್ಲಿ ಬ್ಯಾಟಿಂಗ್ ಅಬ್ಬರ ಹೀಗಿತ್ತು
    50 ರನ್ – 52 ಎಸೆತ, 4 ಬೌಂಡರಿ
    100 ರನ್ – 110 ಎಸೆತ, 14 ಬೌಂಡರಿ
    150 ರನ್ – 178 ಎಸೆತ, 16 ಬೌಂಡರಿ
    200 ರನ್ – 238 ಎಸೆತ, 20 ಬೌಂಡರಿ
    243 ರನ್ – 287 ಎಸೆತ, 25 ಬೌಂಡರಿ

     

  • ಟೆಸ್ಟ್ ನಲ್ಲಿ ವಿಶ್ವ ದಾಖಲೆ ಬರೆದ ಸ್ಪಿನ್ನರ್ ಅಶ್ವಿನ್

    ಟೆಸ್ಟ್ ನಲ್ಲಿ ವಿಶ್ವ ದಾಖಲೆ ಬರೆದ ಸ್ಪಿನ್ನರ್ ಅಶ್ವಿನ್

    ನಾಗ್ಪುರ: ಜಮ್ತಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ 239 ರನ್‍ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ  4 ವಿಕೆಟ್ ಕೀಳುವ ಮೂಲಕ ಸ್ಪಿನ್ನರ್ ಆರ್. ಅಶ್ವಿನ್ ವಿಶ್ವದಾಖಲೆ ಬರೆದಿದ್ದಾರೆ.

    ಅತಿ ಕಡಿಮೆ ಪಂದ್ಯದಲ್ಲಿ 300 ವಿಕೆಟ್ ಕಿತ್ತ ಬೌಲರ್ ಎನ್ನುವ ಹೆಗ್ಗಳಿಕೆಗೆ ಆರ್ ಅಶ್ವಿನ್ ಈಗ ಪಾತ್ರವಾಗಿದ್ದಾರೆ. ಅಶ್ವಿನ್ 54 ಪಂದ್ಯಗಳ 101 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.

    ಈ ಹಿಂದೆ ಆಸ್ಟ್ರೇಲಿಯಾ ಡೆನ್ನಿಸ್ ಲಿಲ್ಲಿ 56 ಪಂದ್ಯ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 58 ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದ್ದರು. ನ್ಯೂಜಿಲೆಂಡಿನ ರಿಚರ್ಡ್ ಹ್ಯಾಡ್ಲಿ, ವೆಸ್ಟ್ ಇಂಡೀಸ್ ನ ಮ್ಯಾಲ್ಕಂ ಮಾರ್ಶಲ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ 61ನೇ ಟೆಸ್ಟ್ ಪಂದ್ಯದಲ್ಲಿ 300 ವಿಕೆಟ್ ಪಡೆದಿದ್ದರು.

    ಮೊದಲ ಇನ್ನಿಂಗ್ಸ್ ನಲ್ಲಿ 67 ರನ್ ನೀಡಿ 4 ವಿಕೆಟ್ ಪಡೆದಿದ್ದ ಅಶ್ವಿನ್ ಎರಡನೇ ಇನ್ನಿಂಗ್ಸ್ ನಲ್ಲಿ 63 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದರು.

    54 ಪಂದ್ಯಗಳಲ್ಲಿ ಅಶ್ವಿನ್ ಇದೂವರೆಗೆ 15,636 ಎಸೆತಗಳನ್ನು ಹಾಕಿ 7520 ರನ್ ನೀಡಿದ್ದಾರೆ. ಒಂದು ಇನ್ನಿಂಗ್ಸ್ ನಲ್ಲಿ 59 ರನ್ ನೀಡಿ 7 ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆ ಆಗಿದ್ದು, ಎರಡು ಇನ್ನಿಂಗ್ಸ್ ನಲ್ಲಿ 140 ರನ್ ನೀಡಿ 13 ವಿಕೆಟ್ ಪಡೆದಿರುವುದು ಅಶ್ವಿನ್ ಶ್ರೇಷ್ಠ ಸಾಧನೆಯಾಗಿದೆ.