Tag: ವಿಶ್ವಜೀತ್ ರಾಣೆ

  • ಹೈಕಮಾಂಡ್‍ಗೆ ಶಾಕ್: ಗೋವಾ ಹಿರಿಯ ಶಾಸಕ ವಿಶ್ವಜಿತ್ ರಾಣೆ ಕಾಂಗ್ರೆಸ್‍ಗೆ ಗುಡ್‍ಬೈ

    ಹೈಕಮಾಂಡ್‍ಗೆ ಶಾಕ್: ಗೋವಾ ಹಿರಿಯ ಶಾಸಕ ವಿಶ್ವಜಿತ್ ರಾಣೆ ಕಾಂಗ್ರೆಸ್‍ಗೆ ಗುಡ್‍ಬೈ

    ಪಣಜಿ: ಚುನಾವಣೆ ಫಲಿತಾಂಶದಲ್ಲಿ ಅತ್ಯಧಿಕ ಸ್ಥಾನಗಳಿಸಿದರೂ ಗೋವಾದಲ್ಲಿ ಸರ್ಕಾರ ನಡೆಸಲು ಅನುಮತಿ ನೀಡದ್ದಕ್ಕೆ ರಾಜ್ಯಪಾಲರ ನಡೆಯನ್ನು ಟೀಕಿಸಿದ್ದ ಕಾಂಗ್ರೆಸ್‍ಗೆ ಈಗ ಶಾಕಿಂಗ್ ಎನ್ನುವಂತೆ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಯಲ್ಲಿ ಕೈ ಶಾಸಕರೊಬ್ಬರು ರಾಜೀನಾಮೆ ನೀಡಿದ್ದಾರೆ.

    ಕಾಂಗ್ರೆಸ್‍ನ ಹಿರಿಯ ನಾಯಕ ಪ್ರತಾಪ್ ಸಿಂಗ್ ರಾಣೆ ಅವರ ಮಗ ವಿಶ್ವಜಿತ್ ರಾಣೆ ಅವರು ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಮನೋಹರ್ ಪರಿಕ್ಕರ್ ಅವರ ವಿಶ್ವಾಸ ಮತಯಾಚನೆ ವೇಳೆ ಗೈರಾಗಿದ್ದ ರಾಣೆ ಸಂಜೆ ವೇಳೆ ಪಕ್ಷಕ್ಕೆ ಗುಡ್‍ಬೈ ಹೇಳಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಪಕ್ಷದ ಕ್ರಮವನ್ನು ಟೀಕಿಸಿ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದ ರಾಣೆ ಕ್ರಮ ತೆಗೆದುಕೊಳ್ಳದೇ ಇದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.

    ಕಾಂಗ್ರೆಸ್ ಕಾರ್ಯವೈಖರಿಯ ಬಗ್ಗೆ ಬೇಸತ್ತು ಹೋಗಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮುಂದುವರಿಯುವುದಿಲ್ಲ. ಹೊಸದಾಗಿ ಚುನಾವಣೆ ಎದುರಿಸುತ್ತೇನೆ ಎಂದು ವಿಶ್ವಜಿತ್ ರಾಣೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಪಕ್ಷೇತರ ಅಭ್ಯರ್ಥಿಯಾಗಿ ರಾಣೆ ಚುನಾವಣೆಗೆ ನಿಲ್ಲುತ್ತಾರೋ ಅಥವಾ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೋ ಎನ್ನುವ ಬಗ್ಗೆ ಇದೂವರೆಗೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಸಿಎಂ ಮನೋಹರ್ ಪರಿಕ್ಕರ್ ಕಾಂಗ್ರೆಸ್ ಶಾಸಕರೊಬ್ಬರು ನನಗೆ ಮೆಸೇಜ್ ಮಾಡಿದ್ದಾರೆ. ಅವರು ಪಕ್ಷದ ಹಿರಿಯ ನಾಯಕರಿಂದ ಬೇಸತ್ತು ಹೋಗಿದ್ದಾರೆ. ಶೀಘ್ರವೇ ಆ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬುಧವಾರ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಹೀಗಾಗಿ ರಾಣೆ ಅವರ ಬಗ್ಗೆ ಮನೋಹರ್ ಪರಿಕ್ಕರ್ ಹೇಳಿದ್ದಾರಾ ಅಥವಾ ಬೇರೆ ಶಾಸಕರ ಬಗ್ಗೆ ಹೇಳಿದ್ದಾರಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ಮೂರು ಬಾರಿ ಶಾಸಕ: ವಾಲ್‍ಪಾಯ್ ಕ್ಷೇತ್ರದಿಂದ 2007ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 2012, 2017ರಲ್ಲಿ ಕಾಂಗ್ರೆಸ್ ನಿಂದ ನಿಂತು ವಿಶ್ವಜಿತ್ ರಾಣೆ ಗೆದ್ದಿದ್ದರು. ಕೊನೆಯ ಚುನಾವಣೆಯಲ್ಲಿ 13493 ಮತಗಳನ್ನು ಪಡೆಯುವ ಮೂಲಕ 5,678 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು.

    ಅಧಿಕಾರಕ್ಕೆ ಬಿಜೆಪಿ: ಇಂದು ನಡೆದ ಬಹುಮತ ಸಾಬೀತು ಪರೀಕ್ಷೆಯಲ್ಲಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೆದ್ದಿದ್ದಾರೆ. 22 ಮಂದಿ ಶಾಸಕರು ಮನೋಹರ್ ಪರಿಕ್ಕರ್ ಅವರನ್ನು ಬೆಂಬಲಿಸುವ ಮೂಲಕ ಗೋವಾದಲ್ಲಿ ಅಧಿಕೃತವಾಗಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದೆ.

    ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನವನ್ನು ಗೆದ್ದಿದ್ದರೆ ಬಿಜೆಪಿ 13 ಸ್ಥಾನವನ್ನು ಗೆದ್ದುಕೊಂಡಿತ್ತು. ಸರಳ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದ್ದು, ಇಷ್ಟು ಸೀಟ್‍ಗಳು ಯಾವುದೇ ಪಕ್ಷಕ್ಕೆ ಸಿಗದ ಹಿನ್ನೆಲೆಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು. ಈಗ ಎಂಜಿಪಿ, ಜಿಎಫ್‍ಪಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಇಬ್ಬರು ಪಕ್ಷೇತರರು ಮತ್ತು ಓರ್ವ ಎನ್‍ಸಿಪಿ ಶಾಸಕರ ಬೆಂಬಲ ಸೂಚಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಏರಿದೆ.