Tag: ವಿಶ್ವಕಪ್

  • ವಿಶ್ವಕಪ್‌ ಮುಗೀತು, T20 ಹಂಗಾಮ ಶುರು – ಟೀಂ ಇಂಡಿಯಾದ ಮುಂದಿದೆ ಸಾಲು ಸಾಲು ಸರಣಿ!

    ವಿಶ್ವಕಪ್‌ ಮುಗೀತು, T20 ಹಂಗಾಮ ಶುರು – ಟೀಂ ಇಂಡಿಯಾದ ಮುಂದಿದೆ ಸಾಲು ಸಾಲು ಸರಣಿ!

    ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ (BCCI) ಅಂದುಕೊಂಡಂತೆ ಯಶಸ್ವಿಯಾಗಿ ಏಕದಿನ ವಿಶ್ವಕಪ್‌ ಟೂರ್ನಿಯನ್ನ ನಡೆಸಿಕೊಟ್ಟಿದೆ. ಟೀಂ ಇಂಡಿಯಾ ಮೊದಲ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ರೂ ಫೈನಲ್‌ ಪಂದ್ಯದ ಸೋಲಿನಿಂದ ವಿಶ್ವಕಪ್‌ ಕಳೆದುಕೊಂಡು, ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ವಿಶ್ವಕಪ್‌ ಮುಗಿಯುತ್ತಿದ್ದಂತೆ ಸಾಲು ಸಾಲು ಟಿ20 ಕ್ರಿಕೆಟ್‌ ಸರಣಿಯನ್ನ ಟೀಂ ಇಂಡಿಯಾ ಸಾಲು ಸಾಲು ಸರಣಿಗಳನ್ನ (T20I Series) ಹಮ್ಮಿಕೊಂಡಿದೆ.

    ಇದೇ ನವೆಂಬರ್‌ 23ರಂದು ಆಸ್ಟ್ರೇಲಿಯಾ (Austsralia) ವಿರುದ್ಧ ನಡೆಯಲಿರುವ ಸರಣಿ ಮೂಲಕ ಟೀಂ ಇಂಡಿಯಾ (Team India) ಟಿ20 ಕ್ರಿಕೆಟ್‌ ಹಬ್ಬ ಶುರುವಾಗಲಿದೆ. ನವೆಂಬರ್‌ 23 ರಿಂದ ಡಿಸೆಂಬರ್‌ 3ರ ವರೆಗೆ ಭಾರತ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಡಿಸೆಂಬರ್‌ 10 ರಿಂದ 14ರ ವರೆಗೆ ದಕ್ಷಿಣ ಆಫ್ರಿಕಾ (South Africa) ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ನಂತರ 2024ರ ಜನವರಿ 11 ರಿಂದ 17ರ ವರೆಗೆ ಅಫ್ಘಾನಿಸ್ತಾನದ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

    2024ಕ್ಕೆ ಅಮೆರಿಕ (T20 World Cup 2024) ಮತ್ತು ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯ ಸಿದ್ಧತೆಗಾಗಿ ಭಾರತ ಈ ಅಭಿಯಾನ ಹಮ್ಮಿಕೊಂಡಿದೆ ಎಂದು ಬಿಸಿಸಿಐ ತಿಳಿಸಿವೆ.

    ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಬಲಿಷ್ಠ ಯುವ ಆಟಗಾರರ ತಂಡವನ್ನು ಪ್ರಕಟಿಸಿದ್ದು, ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್​ ಯಾದವ್​ (Suryakumar Yadav) ತಂಡದ ನಾಯಕರಾಗಿದ್ದಾರೆ. ಈ ಸರಣಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ (VVS Laxman) ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಇನ್ನುಳಿದ ಸರಣಿಗಳಿಗೆ ಆಟಗಾರರ ಸಾಮರ್ಥ್ಯ ನೋಡಿಕೊಂಡು ತಂಡವನ್ನ ಪ್ರಕಟಿಸಲಿದೆ.

    ಭಾರತ – ಆಸ್ಟ್ರೇಲಿಯಾ ಯಾವ ದಿನ ಎಲ್ಲಿ ಪಂದ್ಯ?
    ನ.23 – ವಿಶಾಖಪಟ್ಟಣ
    ನ.26 – ತಿರುವನಂತಪುರಂ
    ನ.28 – ಗುವಾಹಟಿ
    ಡಿ.1 – ರಾಯ್‌ಪುರ
    ಡಿ.3 – ಬೆಂಗಳೂರು

    ಭಾರತ ಮತ್ತು ದಕ್ಷಿಣ ಆಫ್ರಿಕಾ – ಯಾವ ದಿನ ಎಲ್ಲಿ ಪಂದ್ಯ?
    ಡಿ.10 – ಕಿಂಗ್ಸ್‌ಮೀಡ್, ಡರ್ಬನ್ (ದಕ್ಷಿಣ ಆಫ್ರಿಕಾ)
    ಡಿ.12 – ಸೇಂಟ್ ಜಾರ್ಜ್ ಪಾರ್ಕ್, ಗ್ಕೆಬರ್ಹಾ
    ಡಿ.14 – ನ್ಯೂ ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್

    ಭಾರತ ಮತ್ತು ಅಫ್ಘಾನಿಸ್ತಾನ – ಯಾವ ದಿನ ಎಲ್ಲಿ ಪಂದ್ಯ?
    ಜ.11(2024) – ಮೊಹಾಲಿ
    ಜ.14 – ಇಂದೋರ್‌
    ಜ.17 – ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ

  • 3 ಬಾರಿ ಆತ್ಮಹತ್ಯೆಗೆ ಯೋಚಿಸಿದ್ದ ಶಮಿ – ಕೋಪವನ್ನೇ ಶಕ್ತಿಯಾಗಿಸಿ ಪಿಚ್‌ಗೆ ಇಳಿದಿದ್ದೇ ರೋಚಕ!

    3 ಬಾರಿ ಆತ್ಮಹತ್ಯೆಗೆ ಯೋಚಿಸಿದ್ದ ಶಮಿ – ಕೋಪವನ್ನೇ ಶಕ್ತಿಯಾಗಿಸಿ ಪಿಚ್‌ಗೆ ಇಳಿದಿದ್ದೇ ರೋಚಕ!

    ಬೆಂಗಳೂರು: ಬದುಕು ಒಂದು ದಂಡೆಗೆ ಬಂದು ನಿಂತಿದೆ ಅಂದಾಗ.. ಕಣ್ಮುಂದೆ ಕತ್ತಲಿದೆ, ಬೆಳಕು ಕಷ್ಟ-ಕಷ್ಟ ಅಂತ ಅನಿಸಿದಾಗ.. ಸಹಜವಾಗಿಯೇ ಬರುವ ದುಷ್ಟ ಆಲೋಚನೆ ನಮ್ಮನ್ನು ನಾವು ಕೊಂದುಕೊಳ್ಳೋದು. ಈ ಕೃತ್ಯ ಮಹಾಪರಾಧ ಎಂದು ಟೀಂ ಇಂಡಿಯಾದ (Team India) ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿಗೆ (Mohammad Shami) ಗೊತ್ತಿದೆ. ತಾನು ಇಷ್ಟೊಂದು ಕಷ್ಟಗಳನ್ನು ದಾಟಿಕೊಂಡು ಈ ಹಂತಕ್ಕೆ ಬಂದಿದ್ದು ಸಾಯೋದಕ್ಕಾ ಎಂದು ಮನಸು ಹೇಳುತ್ತಿದೆ. ಆದರೂ, ಮೂರು ಬಾರಿ ಆತ್ಮಹತ್ಯೆಯ ಯೋಚನೆ ಮಾಡಿದ್ದರು ಶಮಿ. ಸ್ವತಃ ಈ ಮಾತನ್ನು ಅವರೇ ಒಪ್ಪಿಕೊಂಡಿದ್ದಾರೆ. ಆ ಆಲೋಚನೆ ನಾನು ಮಾಡಬಾರದಿತ್ತು ಎಂದು ಈಗಲೂ ನೊಂದುಕೊಳ್ಳುತ್ತಾರೆ. ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ

    ಅಷ್ಟಕ್ಕೂ ಶಮಿ ಇಂಥದ್ದೊಂದು ಆಲೋಚನೆ ಮಾಡಿದ್ದು ಮತ್ತದೇ ಪತ್ನಿಯೊಂದಿಗಿನ ವಿರಸ. ಒಂದು ಕಡೆ ಸಾಲು-ಸಾಲು ಆರೋಪಗಳನ್ನು ಪತ್ನಿ ಹಸೀನ್ ಮಾಡಿದ್ದಾರೆ. ಮತ್ತೊಂದು ಕಡೆ ತಾನು ನಂಬಿದ್ದ ಕ್ರಿಕೆಟ್ (Cricket) ಕೂಡ ಕೈ ಕೊಟ್ಟಿತ್ತು. ಈ ನಡುವೆ ಪೊಲೀಸ್ ನೋಟಿಸ್, ವಿಚಾರಣೆ, ಕೋರ್ಟ್ ಕಟಕಟೆ, ಜಗತ್ತಿನ ನಿಂದನೆ. `ತಾನು ಅಂಥವನಲ್ಲ’ ಎಂದು ಕೂಗಿ ಕೂಗಿ ಹೇಳಿದರೂ, ಕೇಳದ ಜಗತ್ತು. ಇವೆಲ್ಲವೂ ಶಮಿಯನ್ನು ಹೈರಾಣು ಮಾಡಿದ್ದವು. ಇನ್ನೇನು ಈ ಜಗತ್ತಿನಿಂದ ತನಗೆ ಬಿಡುಗಡೆ ಬೇಕು ಅನಿಸಿದಾಗ ಮತ್ತೆ ಕೈ ಹಿಡಿದದ್ದು, ತನ್ನ ಸ್ನೇಹಿತರು. ಮತ್ತು ಕುಟುಂಬ.

    ಸತ್ಯ ನಿನ್ನಲ್ಲಿದ್ದರೇ ನಿನಗೆ ಗೆಲುವು.. ಹೋರಾಟ ಮಾಡು ಅಂದರು ಗೆಳೆಯರು. ನೀನು ಹುಟ್ಟಿದ್ದೇ ಕ್ರಿಕೆಟ್ ಆಡೋಕೆ ಅಂತ ಯಾವಾಗಲೂ ಹೇಳುತ್ತಿದ್ದೆ ಅದನ್ನು ನೆನಪಿಸಿಕೋ ಎಂದಿತ್ತು ಹೆತ್ತ ಒಡಲು. ಮತ್ತೆ ಗಟ್ಟಿಯಾದರೂ ಶಮಿ. ಕೋರ್ಟ್, ಸ್ಟೇಷನ್, ವಿಚಾರಣೆ ಎಲ್ಲವನ್ನೂ ಎದುರಿಸಿಕೊಂಡು ಮತ್ತೆ ಪಿಚ್‌ಗೆ ಇಳಿದರು. ತನ್ನ ಇಡೀ ಕೋಪವನ್ನು ಶಕ್ತಿಯನ್ನಾಗಿ ಬದಲಾಯಿಸಿಕೊಂಡರು. ಬೌಲಿಂಗ್ ವೇಗವನ್ನು ಹೆಚ್ಚಿಸಿಕೊಂಡರು. ನೋವೆಲ್ಲ ಬೆವರಾಗಿ ಹರಿಯಿತು. ಅವಮಾನಗಳು ಬೂಟ್ ಕೆಳಗೆ ಬಿದ್ದವು. ಮತ್ತೆ ಅವರ ಕಠಿಣ ಶ್ರಮ ಕೈ ಹಿಡಿಯುತು.

    ಹೌದು, ಅವಮಾನದಿಂದ ಕುಂದಿಹೋಗಿದ್ದ ಶಮಿ, ಮತ್ತೆ ಮನೆಯಿಂದ ಆಚೆ ಕಾಲಿಡಲಾರೆ ಎಂದು ಶಪಥ ಮಾಡಿದ್ದರು. ಈ ಜಗತ್ತೇ ಬೇಡ ಎಂದು ನಿರ್ಧರಿಸಿದ್ದರು. ಆದರೆ, ಹುಟ್ಟಿದ್ದೇ ಗೆಲ್ಲೋದಕ್ಕೆ ಎನ್ನುವ ಮಾತೊಂದು ಅವರನ್ನು ಬದಲಿಸಿತು. ಹಾಗಾಗಿ ಶಮಿ ಗೆಲ್ಲುತ್ತಾ ಹೋದರು. ಕೇವಲ ಕ್ರಿಕೆಟ್ ಪಂದ್ಯದಲ್ಲಿ ಮಾತ್ರ ಅವರು ಗೆಲ್ಲಲಿಲ್ಲ. ಕೋಟ್ಯಂತರ ಅಭಿಮಾನಿಗಳ ಹೃದಯವನ್ನೂ ಈ ಶಮಿ ಗೆದ್ದಿದ್ದಾರೆ. ಇದನ್ನೂ ಓದಿ: ಇದೇ ಕೊನೆಯಲ್ಲ, ನಾವು ಕಪ್‌ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್‌ ಭಾವುಕ

  • ವಾಸಕ್ಕೆ ಯೋಗ್ಯವಾದ ಮನೆಯಿರಲಿಲ್ಲ, ಶಾಲೆಗೆ ಸೇರಲು ಫೀಸ್ ಇರಲಿಲ್ಲ – ಹಿಟ್‌ಮ್ಯಾನ್ ಬಾಲ್ಯದ ಬದುಕು ಘೋರ

    ವಾಸಕ್ಕೆ ಯೋಗ್ಯವಾದ ಮನೆಯಿರಲಿಲ್ಲ, ಶಾಲೆಗೆ ಸೇರಲು ಫೀಸ್ ಇರಲಿಲ್ಲ – ಹಿಟ್‌ಮ್ಯಾನ್ ಬಾಲ್ಯದ ಬದುಕು ಘೋರ

    ಅಹಮದಾಬಾದ್: ಭಾರತೀಯ ಕ್ರಿಕೆಟ್ ತಂಡ ಕ್ಯಾಪ್ಟನ್, ಹಿಟ್ ಮ್ಯಾನ್, ಅತೀ ಹೆಚ್ಚು ಮಹಿಳಾ ಫ್ಯಾನ್ಸ್ (Women Cricket Fans) ಹೊಂದಿರುವ ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma). ಇನ್ನೂ 10-20 ವರ್ಷಗಳ ನಂತರ ಟಾಪ್-10 ಕ್ರಿಕೆಟಿಗರ ಪಟ್ಟಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಹೆಸರೆಂದರೇ ಅದು ರೋಹಿತ್ ಶರ್ಮಾ. ಈ ಪರಿ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ರೋಹಿತ್ ಶರ್ಮಾ.

    ರೋಹಿತ್ ಶರ್ಮಾ ಅವರು ಈ ಮಟ್ಟಕ್ಕೆ ಬೆಳೆಯಲು ಕಠಿಣಶ್ರಮವೇ ಕಾರಣ. ಯಶಸ್ಸಿಗೆ ಮತ್ತೇನಾದ್ರೂ ಸೂತ್ರ ಇದೆಯಾ ಅಂತ ರೋಹಿತ್ ಅವರನ್ನೊಮ್ಮೆ ಕೇಳಿ ನೋಡಿದ್ರೆ ಅವರು ಕೊಡುವ ಆನ್ಸರ್, `ಹಾರ್ಡ್ ವರ್ಕ್.. ಹಾರ್ಡ್ ವರ್ಕ್.. ಓನ್ಲಿ ಹಾರ್ಡ್ ವರ್ಕ್’. ಇದನ್ನೂ ಓದಿ: ಟೀಂ ಇಂಡಿಯಾ ಅಭಿಮಾನಿಗಳ ಕ್ಷಮೆಯಾಚಿಸಿದ ಡೇವಿಡ್‌ ವಾರ್ನರ್‌ – ಏಕೆ ಗೊತ್ತೇ?

    ತನ್ನನ್ನು ಈ ಕಠಿಣ ಪರಿಶ್ರಮವೇ ಗೆಲ್ಲಿಸಬಲ್ಲದು ಎಂದು ರೋಹಿತ್ ಅವರಿಗೆ ಅರಿವಾದದ್ದು ಬಾಲ್ಯದಲ್ಲಿ. ಇದು ಬಡತನದಿಂದ ಕಲಿತ ಪಾಟವೂ ಹೌದು. ರೋಹಿತ್ ಶರ್ಮಾ ಇಂದು ನೂರಾರು ಕೋಟಿ ಆಸ್ತಿಗೆ ಓಡೆಯನಾಗಿದ್ದಾರೆ, ಒಂದೇ ಒಂದು ಐಪಿಎಲ್ ಟೂರ್ನಿಯನ್ನಾಡಿದ್ರೆ ಸಾಕು, ಕೋಟಿ ಕೋಟಿ ಹಣ ಕಾಲಬಳಿ ಬಂದು ಬೀಳುತ್ತೆ, ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾರೆ. ದುಬಾರಿ ಹೋಟೆಲ್ ಗಳಲ್ಲಿ ತಂಗುತ್ತಾರೆ. ಆದ್ರೆ ಬಾಲ್ಯದಲ್ಲಿ ಅವರ ಬದುಕಿನ ಸ್ಥಿತಿಯನ್ನೂ ಕೇಳಿದ್ರೆ ನಿಜಕ್ಕೂ ಹೌದೇ ಎನ್ನುವಷ್ಟು ಅಚ್ಚರಿಯಾಗುತ್ತದೆ.

    ಅಚ್ಚರಿಯಾದರೂ ನೀವು ನಂಬಲೇಬೇಕು. ಅಂದು ರೋಹಿತ್ ಶರ್ಮಾ ಅವರಿಗೆ ಸರಿಯಾಗಿ ಮನೆ ಕೂಡ ಇರಲಿಲ್ಲ. ಮಲಗಲು ಮನೆಯಲ್ಲಿ ಜಾಗ ಸಾಲದೇ ಇದ್ದ ಕಾರಣಕ್ಕಾಗಿಯೇ ರೋಹಿತ್ ಶರ್ಮಾರನ್ನು ಅವರ ತಂದೆ-ತಾಯಿ, ಅಜ್ಜಿ ಮನೆಯಲ್ಲಿ ಬಿಟ್ಟಿದ್ದರು. ಬಾಲ್ಯದಲ್ಲಿ ಪ್ರತಿ ಮಗು ಬಯಸೋದು ತನ್ನ ತಂದೆ-ತಾಯಿ ಜೊತೆ ಇರಬೇಕು ಅಂತ. ಆ ದಿನಗಳಲ್ಲಿ ಅಮ್ಮನೇ ಪ್ರಪಂಚ, ಅಪ್ಪನೇ ಆಕಾಶ. ಆದ್ರೆ, ರೋಹಿತ್ ಅವರಿಗೆ ಅದೊಂದು ಕನಸಾಗಿತ್ತು. ಅಪ್ಪ-ಅಮ್ಮನನ್ನು ನೋಡೋದಕ್ಕಾಗಿ ಅವರು ವಾರಗಟ್ಟಲೇ ಅಥವಾ ತಿಂಗಳಾನುಗಟ್ಟಲೇ ಕಾಯಬೇಕಿತ್ತು. ತಿಂಗಳಲ್ಲಿ ಮೂರು ದಿನ ಮಾತ್ರ ಅಪ್ಪ-ಅಮ್ಮನೊಂದಿಗಿರಲು ರೋಹಿತ್ ಅವರಿಗೆ ಅವಕಾಶ ಸಿಗುತ್ತಿತ್ತು. ಇದನ್ನೂ ಓದಿ: ಶಾಲೆಗೆ ಸೇರಿಸಲು ಶರ್ಮಾ ಪೋಷಕರಲ್ಲಿ 275 ರೂ. ಫೀಸ್‌ ಕೂಡ ಇರ್ಲಿಲ್ಲ – ಬಾಲ್ಯದಲ್ಲಿ ಹಿಟ್‌ಮ್ಯಾನ್‌ ಕಷ್ಟದ ಜೀವನ!

    ರೋಹಿತ್ ಹುಟ್ಟಿದ್ದು ಮಹಾರಾಷ್ಟ್ರದ ನಾಗ್ಪುರದಲ್ಲಿ. ತಂದೆ ಗುರುನಾಥ್ ಶರ್ಮಾ, ತಾಯಿ ಪೂರ್ಣಿಮಾ ಶರ್ಮಾ. ತಂದೆ ಸಾರಿಗೆ ಸಂಸ್ಥೆಯ ಉಗ್ರಾಣ ನೋಡಿಕೊಳ್ಳುತ್ತಿದ್ದರು. ಅವರಿಗೆ ಬರುತ್ತಿದ್ದ ಅಲ್ಪ-ಸ್ವಲ್ಪ ಹಣದಲ್ಲೇ ಮನೆ ಸಾಗಬೇಕಿತ್ತು. ಗುರುನಾಥ್ ಮತ್ತು ಪೂರ್ಣಿಮಾಗೆ ಮತ್ತೊಂದು ಮಗುವಾದಾಗ 3ನೇ ವ್ಯಕ್ತಿಗೆ ಆ ಮನೆಯಲ್ಲಿ ಉಳಿದುಕೊಳ್ಳುವಷ್ಟೂ ಜಾಗವೇ ಇರಲಿಲ್ಲ. ಅದೊಂದು ಚಿಕ್ಕ ಕೋಣೆಯಂತಿದ್ದ ಮನೆ ಆಗಿತ್ತು. ಹಾಗಾಗಿ ರೋಹಿತ್ ನನ್ನು ಮುಂಬೈನ ಬೊರಿವಲಿಯಲ್ಲಿ ವಾಸವಿದ್ದ ಅಜ್ಜಿ ಮನೆಯಲ್ಲಿ ಬಿಟ್ಟರು ತಂದೆ ತಾಯಿ. ತಮ್ಮನಿಗಾಗಿ ರೋಹಿತ್ ಹುಟ್ಟಿದ ಮನೆಯನ್ನೇ ತೊರೆಯಬೇಕಾಯಿತು. ಇದನ್ನೂ ಓದಿ: ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌ ಮಾತು

    ಬಾಲ್ಯದಿಂದಲೇ ರೋಹಿತ್‌ಗೆ ಕ್ರಿಕೆಟ್ ಅಂದರೆ ಪ್ರಾಣ. ಮುಂಬೈಗೆ ಬಂದ ಮೇಲೆ ಗಲ್ಲಿಗಲ್ಲಿಗಳಲ್ಲಿ ಕ್ರಿಕೆಟ್ ಆಡಿಕೊಂಡಿದ್ದರು. ಶಾಲಾ ದಿನಗಳಲ್ಲಿ ಕ್ರಿಕೆಟ್ ಬಗೆಗಿದ್ದ ಒಲವು ಹೆಚ್ಚಾಯಿತು. ಈತನೊಳಗೆ ಕ್ರೀಡಾ ಆಸಕ್ತಿ ಕಂಡ ಚಿಕ್ಕಪ್ಪ ತಮಗೆ ಕಷ್ಟವಿದ್ದರೂ ರೋಹಿತ್‌ಗೆ ಕ್ರಿಕೆಟ್ ತರಬೇತಿ ಕೊಡಿಸಲು ಮುಂದಾದರು. ಆದ್ರೆ, ತರಬೇತಿ ಕೊಡಿಸಲು ಹಣ ಸಾಲುತ್ತಿಲ್ಲ ಎನ್ನುವ ಒದ್ದಾಟವೂ ಅವರಲ್ಲಿತ್ತುಅ. ಇದೇ ಸಮಯದಲ್ಲಿ ಸಿಕ್ಕಿದ್ದು ಕೋಚ್ ದಿನೇಶ್ ಲಾಡ್. ಬಾಲ್ಯದಲ್ಲಿ ರೋಹಿತ್ ಪ್ರತಿಭೆ ಕಂಡು, ತಾವು ಕೋಚ್ ಮಾಡುತ್ತಿದ್ದ ಸ್ವಾಮಿ ವಿವೇಕಾನಂದ ಸ್ಕೂಲ್‌ಗೆ ಸೇರಿಕೊಳ್ಳುವಂತೆ ರೋಹಿತ್‌ಗೆ ಸಲಹೆ ನೀಡಿದರು. ಅದು ದುಬಾರಿ ಸ್ಕೂಲ್ ಆಗಿದ್ದರಿಂದ, ಫೀಸ್ ಕಟ್ಟಲು ತಮ್ಮಲ್ಲಿ ಹಣವಿಲ್ಲ ಅಂದಿದ್ದರು ರೋಹಿತ್. ಹೇಗಾದರೂ ಮಾಡಿ, ಈ ಹುಡುಗನಿಗೆ ಒಳ್ಳೆಯ ತರಬೇತಿ ಸಿಕ್ಕರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬಹುದು ಎಂದು ಕನಸು ಕಂಡಿದ್ದ ಕೋಚ್ ಲಾಡ್, ಉಚಿತವಾಗಿ ಆ ಶಾಲೆಯಲ್ಲಿ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾದರು.

    ದುಬಾರಿ ಶಾಲೆಯಲ್ಲಿ ಕಲಿಯಲು ಮತ್ತು ಕ್ರಿಕೆಟ್ ತರಬೇತಿ ಪಡೆಯಲು ಉಚಿತವಾಗಿ ಅವಕಾಶವೇನೂ ಸಿಕ್ಕಿತು. ಕ್ರಿಕೆಟ್ ಕಿಟ್ ಕೊಳ್ಳಲು ಏನು ಮಾಡೋದು? ಅದಕ್ಕೆ ಉಪಾಯ ಮಾಡಿದ್ದರು ರೋಹಿತ್. ದಿನವೂ ಬೆಳಗ್ಗೆ ಎಂದು ಮನೆ ಮನೆಗೆ ಹಾಲಿನ ಪ್ಯಾಕೇಟ್ ಹಾಕುತ್ತಿದ್ದರು. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ, ಹಣ ಸಂಪಾದಿಸಿ ಕ್ರಿಕೆಟ್ ಕಿಟ್ ಕೊಂಡುಕೊಂಡಿದ್ದರು. ಕೋಚ್ ದಿನೇಶ್ ಲಾಡ್ ಗರಡಿಯಲ್ಲಿ ಸಖತ್ ತಯಾರಿಯಾದರು. ನಂತರದ ದಿನಗಳಲ್ಲಿ ಹಲವಾರು ವೈಫಲ್ಯ ಕಂಡರೂ, ಅವರ ಗುರಿ ಮಾತ್ರ ಗೆಲುವಿನ ಕಡೆಯೇ ಇರುತ್ತಿತ್ತು. 2011ರಲ್ಲಿ ವಿಶ್ವಕಪ್ ತಂಡದಿಂದ ಹೊರಗುಳಿದ್ದ ಈ ರೋಹಿತ್ ಶರ್ಮಾ, 2023ರಲ್ಲಿ ತಾನೇ ನಾಯಕನಾಗಿ ಮುನ್ನಡೆಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ. 2023ರ ವಿಶ್ವಕಪ್ ಕೈತಪ್ಪಿದರೂ, ರೋಹಿತ್ ಶರ್ಮಾ 2 ಬಾರಿ ತಮ್ಮ ನಾಯಕತ್ವದಲ್ಲಿ ಐಸಿಸಿ ಏಷ್ಯಾಕಪ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ

  • ಕಣ್ಣೀರಿಟ್ಟ ಕಿಂಗ್‌ ಕೊಹ್ಲಿ – ಪ್ರೀತಿಯ ಅಪ್ಪುಗೆ ನೀಡಿ ಸಾಂತ್ವನ ಹೇಳಿದ ಅನುಷ್ಕಾ

    ಕಣ್ಣೀರಿಟ್ಟ ಕಿಂಗ್‌ ಕೊಹ್ಲಿ – ಪ್ರೀತಿಯ ಅಪ್ಪುಗೆ ನೀಡಿ ಸಾಂತ್ವನ ಹೇಳಿದ ಅನುಷ್ಕಾ

    ಅಹಮದಾಬಾದ್: ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ 2023ರ ಏಕದಿನ ವಿಶ್ವಕಪ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆದ್ರೆ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲು ಭಾರತೀಯ ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲಾರದ ನೋವು ತರಿಸಿದೆ. ಟೀಂ ಇಂಡಿಯಾ (Team India) ಬೆಂಬಲಿಸಲು ಮೈದಾನದಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ಕೊನೆಯಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡು ಹೊರಟಿದ್ದನ್ನು ಮರೆಯುವಂತಿಲ್ಲ. ಈಗಲೂ ಅಭಿಮಾನಿಗಳು ಸೋಲಿನ ಕ್ಷಣಗಳನ್ನು ಮೆಲುಕುಹಾಕುತ್ತಿದ್ದಾರೆ.

    ವಿಶ್ವಕಪ್ ಫೈನಲ್‌ನಲ್ಲಿ ಭಾರತ ಆಸೀಸ್ ಎದುರು ಸೋತ ನಂತರ ಟೀಂ ಇಂಡಿಯಾದ ಭಾವುಕ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡ್ತಿವೆ. ಚಿತ್ರರಂಗದ ಸೆಲಬ್ರಿಟಿಗಳು ಸೇರಿದಂತೆ ರಾಜಕೀಯ ನಾಯಕರು ಕೂಡ ಟೀಂ ಇಂಡಿಯಾ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲದರ ಮಧ್ಯೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರ ಭಾವುಕ ಫೋಟೋಗಳು ಅಭಿಮಾನಿಗಳನ್ನೂ ಭಾವುಕರಾಗುವಂತೆ ಮಾಡಿವೆ. ಇದನ್ನೂ ಓದಿ: ಇದೇ ಕೊನೆಯಲ್ಲ, ನಾವು ಕಪ್‌ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್‌ ಭಾವುಕ 

    ವಿಶ್ವಕಪ್‌ನ ಪ್ರತಿ ಪಂದ್ಯಕ್ಕೂ ಹಾಜರಾಗುತ್ತಿದ್ದ ಅನುಷ್ಕಾ ಶರ್ಮಾ, ಕೊಹ್ಲಿ ಅವರಿಂದ ಸಿಡಿದ ಸಾಲು ಸಾಲು ದಾಖಲೆಗಳನ್ನ ಕಣ್ತುಂಬಿಕೊಂಡಿದ್ದರು. ಸ್ಟೇಡಿಯಂನಲ್ಲೇ ಕುಣಿದು ಕುಪ್ಪಳಿಸುತ್ತಾ ಕೊಹ್ಲಿಯನ್ನ ಉರಿದುಂಬಿಸುತ್ತಿದ್ದರು. ಅನುಷ್ಕಾ ಮತ್ತು ವಿರಾಟ್ (Anushka Virat) ಅವರ ಫೋಟೋ-ವೀಡಿಯೊಗಳು ಸಾಕಷ್ಟು ವೈರಲ್ ಆಗುತ್ತಿತ್ತು. ಆದ್ರೆ ವಿಶ್ವಕಪ್ ಸೋಲಿನಿಂದ ನಿರಾಸೆಯಾಗಿ ಬರುತ್ತಿದ್ದ ಕೊಹ್ಲಿಯನ್ನು ಅಪ್ಪಿಕೊಂಡು ಸಂತೈಸಿರುವ ದೃಶ್ಯ ಅಭಿಮಾನಿಗಳ ಕಣ್ಣಿಗೆ ಕಟ್ಟಿದಂತಾಗಿದೆ. ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ 

    ನವೆಂಬರ್ 19ರ ಸೂಪರ್ ಸಂಡೇ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತ ಕೆಲವೇ ಕ್ಷಣಗಳಲ್ಲಿ, ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿಗೆ ಸಮಾಧಾನ ಮಾಡುತ್ತಿರುವುದು ಕಂಡು ಬಂದಿದೆ. ಪಂದ್ಯ ಸೋತು ಕಣ್ಣಲ್ಲಿ ನೀರು ತುಂಬಿಕೊಂಡು ಬೇಸರದಲ್ಲಿದ್ದ ವಿರಾಟ್ ಕೊಹ್ಲಿ ಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಸಹ ಪ್ರೀತಿಯ ಅಪ್ಪುಗೆ ನೀಡಿ ಸಮಾಧಾನ ಪಡಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಅಭಿಮಾನಿಗಳನ್ನೂ ಭಾವುಕರಾಗುವಂತೆ ಮಾಡಿದೆ.

    ವಿಶ್ವಕಪ್ ಫೈನಲ್‌ನಲ್ಲಿ ಸೋಲು ಕಂಡರೂ ಕೂಡ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾರತ ತಂಡವನ್ನು ಅಭಿನಂದಿಸಿದ್ದಾರೆ. ಬಾಲಿವುಡ್ ಸ್ಟಾರ್‌ಗಳಾದ ಸುನೀಲ್ ಶೆಟ್ಟಿ, ಶಾರುಖ್ ಖಾನ್, ದಿಯಾ ಮಿರ್ಜಾಸೋನಾಲಿ ಬೇಂದ್ರೆ, ದಿಯಾ ಮಿರ್ಜಾ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್, ಮೀರಾ ರಜಪೂತ್ ತಮ್ಮ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಇದೇ ಕೊನೆಯಲ್ಲ, ನಾವು ಕಪ್‌ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್‌ ಭಾವುಕ

    ಇದೇ ಕೊನೆಯಲ್ಲ, ನಾವು ಕಪ್‌ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್‌ ಭಾವುಕ

    ಅಹಮದಾಬಾದ್: ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾದ (Team India) ಪ್ರಶಸ್ತಿ ಗೆಲ್ಲುವ ಬರ ಮುಂದುವರಿದಿದೆ. ಭಾನುವಾರ (ನ.19) ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸೋಲನುಭವಿಸಿದ ಟೀಂ ಇಂಡಿಯಾ ತಾಯ್ನಾಡಿನಲ್ಲಿ ಟ್ರೋಫಿ ಗೆಲ್ಲುವ ಅವಕಾಶ ಕೈಚೆಲ್ಲಿತು. 2003ರಲ್ಲೂ ಆಸ್ಟ್ರೇಲಿಯಾ ಎದುರು ಫೈನಲ್‌ನಲ್ಲಿ ಭಾರತ ಮುಗ್ಗರಿಸಿತ್ತು. 2023ರಲ್ಲೂ ಅದೃಷ್ಟ ಕೈ ಹಿಡಿಯದೇ ಹೋಯಿತು. ಆದ್ರೆ ಅಭಿಮಾನಿಗಳಿಗೆ ಮಾತ್ರ ಈ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.

    ಈ ಕುರಿತು ಟೀಂ ಇಂಡಿಯಾ ಯುವ ಆರಂಭಿಕ ಆಟಗಾರ ಶುಭಮನ್‌ ಗಿಲ್‌ (Shubman Gill) ಭಾವುಕ ನುಡಿಗಳನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ರಾತ್ರಿಯಿಂದಲೂ ಇನ್ನೂ ವಿಶ್ವಕಪ್‌ ಕಳೆದುಕೊಂಡ ನೋವು ಕಡಿಮೆಯಾಗಿಲ್ಲ. ಕೆಲವೊಮ್ಮೆ ಎಷ್ಟು ಕೊಡುಗೆ ನೀಡಿದರೂ ಸಾಲೋದಿಲ್ಲ. ಹಾಗಾಗಿ ನಮ್ಮ ಅಂತಿಮ ಗುರಿ ಕಳೆದುಕೊಂಡಿದ್ದೇವೆ. ಆದ್ರೆ ಈ ಪ್ರಯಾಣದ ಪ್ರತಿಯೊಂದು ಹೆಜ್ಜೆಯು ನಮ್ಮ ತಂಡದ ಉತ್ಸಾಹ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಏಳು ಬೀಳುಗಳ ನಡುವೆಯೂ ತಳಮಟ್ಟದಿಂದಲೂ ನಮಗೆ ಅಭಿಮಾನಿಗಳಿಂದ (Team India Fans) ಸಿಕ್ಕ ಬೆಂಬಲ ದೇಶವೇ ನಮ್ಮ ಜೊತೆಗಿದೆ ಎಂಬುದನ್ನು ತೋರಿಸಿತ್ತು. ಆದ್ರೆ ಇದೇ ಅಂತ್ಯವಲ್ಲ, ನಾವು ಗೆಲ್ಲುವವರೆಗೂ ಇದು ಮುಗಿಯಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: World Cup 2023: ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ – ಟೀಂ ಇಂಡಿಯಾಕ್ಕೆ ಮೋದಿ ಅಭಯ

    2023ರ ವಿಶ್ವಕಪ್‌ ಆವೃತ್ತಿಯಲ್ಲಿ 9 ಪಂದ್ಯಗಳನ್ನಾಡಿದ ಶುಭಮನ್‌ ಗಿಲ್‌ ಒಟ್ಟು 354 ರನ್‌ ಗಳಿಸಿದ್ದಾರೆ. ಇದರಲ್ಲಿ 4 ಅರ್ಧಶತಕ, 41 ಬೌಂಡರಿ, 12 ಸಿಕ್ಸರ್‌ಗಳು ಸೇರಿವೆ. ಫೈನಲ್‌ ಪಂದ್ಯದಲ್ಲಿ ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾಕ್ಕೆ ಗಿಲ್‌ ಆರಂಭದಲ್ಲೇ ತಣ್ಣೀರು ಎರಚಿದರು. 4 ಓವರ್‌ ಕಳೆದರೂ ಕೇವಲ 6 ಎಸೆತಗಳನ್ನು ಎದುರಿಸಿದ್ದ ಗಿಲ್‌ 5ನೇ ಓವರ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ಗೆ ಸುಲಭ ಕ್ಯಾಚ್‌ ನೀಡಿ ಔಟಾದರು. 7 ಎಸೆತಗಳಲ್ಲಿ ಗಿಲ್‌ ಕೇವಲ 4 ರನ್‌ ಗಳಿಸಿ ಔಟಾದರು, ಇದು ಟೀಂ ಇಂಡಿಯಾ ಅಭಿಮಾನಿಗಳಿಗೂ ನಿರಾಸೆ ಮೂಡಿಸಿತ್ತು. ಇದನ್ನೂ ಓದಿ: ಕೋಚ್ ಆಗಿ ಮುಂದುವರಿಯೋ ನಿರ್ಧಾರ ಕೈಗೊಳ್ಳಲು ಸಮಯಬೇಕು: ರಾಹುಲ್ ದ್ರಾವಿಡ್

    ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 240 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 43 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ 6ನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿತು. ಇದನ್ನೂ ಓದಿ: ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌ ಮಾತು

  • ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌ ಮಾತು

    ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌ ಮಾತು

    ಅಹಮದಾಬಾದ್: ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ ಆಸ್ಟ್ರೇಲಿಯಾ (Australia) ಕ್ರಿಕೆಟಿಗ ಟ್ರಾವಿಸ್‌ ಹೆಡ್‌ (Travis Head), ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಅವರನ್ನು ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ ಎಂದು ಕರೆದಿದ್ದಾರೆ.

    ಟೀಂ ಇಂಡಿಯಾ (Team India) ವಿರುದ್ಧ 241 ರನ್‌ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ಪರ ಟ್ರಾವಿಸ್‌ ಹೆಡ್‌ 95 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್‌ನೊಂದಿಗೆ ಶತಕ ಸಿಡಿಸಿದರು. ಒಟ್ಟು ಈ ಪಂದ್ಯದಲ್ಲಿ 120 ಎಸೆತಗಳನ್ನು ಎದುರಿಸಿದ ಟ್ರಾವಿಸ್‌ ಹೆಡ್‌ 137 ರನ್‌ (4 ಸಿಕ್ಸರ್‌, 15 ಬೌಂಡರಿ) ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಟ್ರಾವಿಸ್‌ ಹೆಡ್‌, ರೋಹಿತ್ ಶರ್ಮಾರನ್ನು ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ ಎಂದು ಕರೆದಿದ್ದಾರೆ.

    ನಿರೀಕ್ಷೆಯೇ ಮಾಡಿರಲಿಲ್ಲ: ಇದೊಂದು ಅನಿರೀಕ್ಷಿತ ದಿನವಾಗಿದೆ, ನಾವ್ಯಾರೂ ಕೂಡ ಕಪ್‌ ಗೆಲ್ಲುತ್ತೇವೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದ್ರೆ ನಿಜಕ್ಕೂ ಇದೊಂದು ಅಸಾಧಾರಣ ದಿನವಾಗಿದೆ. ಕೆಮ್ಮು ಬಂದು ಮನೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ತಂಡದ ಗೆಲುವಿನಲ್ಲಿ ಕೈಜೋಡಿಸಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ನಾನು ಎದುರಿಸಿದ ಮೊದಲ 20 ಎಸೆತಗಳು ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿತ್ತು. ಅದನ್ನು ಪಂದ್ಯದ ಕೊನೆಯವರೆಗೂ ತೆಗೆದುಕೊಂಡು ಹೋಗಿದ್ದೇನೆ ಅಷ್ಟೇ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: World Cup 2023: ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ – ಟೀಂ ಇಂಡಿಯಾಕ್ಕೆ ಮೋದಿ ಅಭಯ

    ಮಿಚೆಲ್ ಮಾರ್ಷ್ ಅವರು ಬ್ಯಾಟಿಂಗ್‌ಗೆ ಇಳಿದು ತಂಡವನ್ನು ಗೆಲುವಿನ ಹಾದಿಯಲ್ಲಿ ತೆಗೆದುಕೊಂಡು ಹೋಗುವಾಗ ವಿಕೆಟ್ ಪಿಚ್ ಬ್ಯಾಟಿಂಗ್ ನಡೆಸಲು ಸುಲಭವಾಗಿಲ್ಲ ಅನ್ನಿಸಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಕುರಿತು ತಮ್ಮ ಅಭಿಪ್ರಾಯ ಕೇಳಿದಾಗ ಅವರು ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಚ್ ಆಗಿ ಮುಂದುವರಿಯೋ ನಿರ್ಧಾರ ಕೈಗೊಳ್ಳಲು ಸಮಯಬೇಕು: ರಾಹುಲ್ ದ್ರಾವಿಡ್

  • ಮೀಸಲಾತಿ ಇದ್ದಿದ್ದರೇ ಭಾರತ ಸುಲಭವಾಗಿ ವಿಶ್ವಕಪ್‌ ಗೆಲ್ಲುತ್ತಿತ್ತು: ನಟ ಚೇತನ್‌

    ಮೀಸಲಾತಿ ಇದ್ದಿದ್ದರೇ ಭಾರತ ಸುಲಭವಾಗಿ ವಿಶ್ವಕಪ್‌ ಗೆಲ್ಲುತ್ತಿತ್ತು: ನಟ ಚೇತನ್‌

    ಬೆಂಗಳೂರು: ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ (Cricket Reservations) ಇದ್ದಿದ್ದರೇ ಟೀಂ ಇಂಡಿಯಾ ಸುಲಭವಾಗಿ ಈ ವಿಶ್ವಕಪ್‌ ಗೆಲ್ಲುತ್ತಿತ್ತು ಎಂದು ಪುನರುಚ್ಛರಿಸಿರುವ ನಟ ಚೇತನ್‌ (Chetan Kumar) ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ. ಕೋಟ್ಯಂತರ ಅಭಿಮಾನಿಗಳಿಗೆ ಟೀಂ ಇಂಡಿಯಾದ (Team India) ಸೋಲು ನೋವು ತರಿಸಿದ್ದು, ಕಣ್ಣೀರ ಕಡಲಲ್ಲಿ ತೇಲುವಂತೆ ಮಾಡಿದೆ. ಆದ್ರೆ ಆಗಾಗ್ಗೆ ಜಾಲತಾಣದಲ್ಲಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗುತ್ತಿರುವ ನಟ ಚೇತನ್‌ ಮತ್ತೊಮ್ಮೆ ಕ್ರಿಕೆಟ್‌ನಲ್ಲಿ ಮೀಸಲಾತಿ ತರಬೇಕೆಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: World Cup 2023: ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ – ಟೀಂ ಇಂಡಿಯಾಕ್ಕೆ ಮೋದಿ ಅಭಯ

    ಈ ಕುರಿತು ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಬರೆದುಕೊಂಡಿರುವ ಚೇತನ್‌, ನಾನು ಮತ್ತೆ ಹೇಳುತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು ಎಂದು ಪುನರುಚ್ಛರಿಸಿದ್ದಾರೆ. ಇದಕ್ಕೆ ಬೆರಳೆಣಿಯಷ್ಟು ಮಂದಿ ಬೆಂಬಲ ಸೂಚಿಸಿದ್ದರೆ, ಟೀಂ ಇಂಡಿಯಾ ಕ್ರಿಕೆಟ್‌ ಫ್ಯಾನ್ಸ್‌ ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: World Cup 2023: ಆಸ್ಟ್ರೇಲಿಯಾ ಗೆಲುವಿಗೆ ಕಾರಣಗಳೇನು..?

    ಎಂತೆಂತಹ ಮನೋ ರೋಗಿಗಳನ್ನು ವೈದ್ಯರು ಗುಣಪಡಿಸಿದ್ದಾರೆ, ಸಾಧ್ಯವಾದರೆ ಇವರನ್ನು‌ ಗುಣಪಡಿಸಬೇಕು. ಏಕೆಂದರೆ ಇಂತಹ ಪ್ರತಿಭೆ ನಮ್ಮನ್ನು ಬಿಟ್ಟು ಹೋಗಬಾರದು ಎಂದು ತಿವಿದಿದ್ದಾರೆ. ಅಲ್ಲದೇ ನೆಮ್ಮದಿಯಾಗಿ ಅಳೋಕು ಈ ಜನ ಬಿಡ್ತಿಲ್ಲ, ಅಣ್ಣ ರಿಸರ್ವೇಶನ್ ಕ್ರಿಕೆಟ್ ಅಲ್ಲಿ ಬೇಕು ಅಂತ ಅಂಬೇಡ್ಕರ್ ಹೇಳಿದ್ರಾ? ಪೆರಿಯಾರ್ ಹೇಳಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ.

    ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 240 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 43 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ 6ನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿತು. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ

  • World Cup 2023: ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ – ಟೀಂ ಇಂಡಿಯಾಕ್ಕೆ ಮೋದಿ ಅಭಯ

    World Cup 2023: ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ – ಟೀಂ ಇಂಡಿಯಾಕ್ಕೆ ಮೋದಿ ಅಭಯ

    ಅಹಮದಾಬಾದ್‌: ವಿಶ್ವಕಪ್‌ ಸೋಲಿನಿಂದ ನಿರಾಸೆಗೊಂಡಿರುವ ಟೀಂ ಇಂಡಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ. ಆಸ್ಟ್ರೇಲಿಯಾ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸಿರುವ ಮೋದಿ, ಟೀಂ ಇಂಡಿಯಾ ಆಟಗಾರರಿಗೆ ಅಭಯ ನೀಡಿದ್ದಾರೆ.

    ಈ ಕುರಿತು ಸೋಶಿಯಲ್‌ ಮೀಡಿಯಾ ಎಕ್ಸ್‌ ನಲ್ಲಿ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, ಆತ್ಮೀಯ ಟೀಂ ಇಂಡಿಯಾ, ಈ ವಿಶ್ವಕಪ್‌ ಟೂರ್ನಿ ಮೂಲಕ ನಿಮ್ಮ ಅಸಾಧಾರಣ ಪ್ರತಿಭೆ ಗಮನ ಸೆಳೆದಿದೆ. ಉತ್ಸಾಹದಿಂದಲೇ ನೀವು ಆಡಿದ್ದೀರಿ, ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದೀರಿ. ನಾವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ ಎಂದು ಅಭಯ ನೀಡಿದ್ದಾರೆ. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ

    ಇದೇ ವೇಳೆ ವಿಶ್ವಕಪ್‌ನಲ್ಲಿ ಅಮೋಘ ಜಯ ಸಾಧಿಸಿದ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆಸ್ಟ್ರೇಲಿಯಾ ತಂಡವೂ ಶ್ಲಾಘನೀಯ ಪ್ರದರ್ಶನ ನೀಡಿದ್ದು, ಟ್ರಾವಿಸ್‌ ಹೆಡ್‌ ಅವರ ಇಂದಿನ ಆಟ ಗಮನಾರ್ಹವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ಮತ್ತೆ ಮತ್ತೆ ಮರೆಯಲಾಗದ ನೋವು – ಏಕೆ ಗೊತ್ತೇ?

    ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 240 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 43 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ 6ನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿತು. ಇದನ್ನೂ ಓದಿ: World Cup Final: ಅತೀ ಕಡಿಮೆ ರನ್‌ ಬಾರಿಸಿದ್ದರೂ ಗೆದ್ದು ಇತಿಹಾಸ ನಿರ್ಮಿಸಿತ್ತು ಭಾರತ

  • ಟೀಂ ಇಂಡಿಯಾಕ್ಕೆ ಮತ್ತೆ ಮತ್ತೆ ಮರೆಯಲಾಗದ ನೋವು – ಏಕೆ ಗೊತ್ತೇ?

    ಟೀಂ ಇಂಡಿಯಾಕ್ಕೆ ಮತ್ತೆ ಮತ್ತೆ ಮರೆಯಲಾಗದ ನೋವು – ಏಕೆ ಗೊತ್ತೇ?

    ಅಹಮದಾಬಾದ್: 13ನೇ ಆವೃತ್ತಿಯ ಏಕದಿನ ವಿಶ್ವಕಪ್ (ODI World Cup) ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ (Team India) ಭಾರೀ ನಿರಾಸೆಯಾಗಿದೆ. ಶತಕೋಟಿ ಭಾರತೀಯರ ಕನಸು ಭಗ್ನಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಅತೀವ ನೋವುಂಟುಮಾಡಿದೆ.

    ಬೆಳಗ್ಗೆಯಿಂದಲೂ ಹರ್ಷೋದ್ಘಾರ ಹಾಕುತ್ತಾ ಟೀಂ ಇಂಡಿಯಾ ಗೆಲುವಿಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಆಸ್ಟ್ರೇಲಿಯಾ (Australia) ತಂಡದ ಗೆಲುವು ಹೇಳತೀರದ ನೋವು ತರಿಸಿತು. ಭಾರತದ ಧ್ವಜ ಹಾರಿಸುತ್ತಾ ದೇಶಾಭಿಮಾನ ಮೆರೆಯುತ್ತಿದ್ದ ಅಭಿಮಾನಿಗಳು ಕೊನೆಯಲ್ಲಿ ಕಣ್ಣಲ್ಲಿ ನೀರು ಕಚ್ಚಿಕೊಂಡು ಹೋಗುವಂತೆ ಮಾಡಿತು. 12 ವರ್ಷಗಳ ನಂತರ ಟ್ರೋಫಿ ಗೆಲ್ಲುವ ಭಾರತದ ಕನಸು ಮತ್ತೆ ಕನಸಾಗಿಯೇ ಉಳಿಯಿತು.

    ಕೈತಪ್ಪಿದ 9ನೇ ಟ್ರೋಫಿ: ಭಾರತ ತಂಡ ಮಾಜಿ ಕ್ರಿಕೆಟಿಗ ಎಂ.ಎಸ್ ಧೋನಿ (MS Dhoni) ನಾಯಕತ್ವದಲ್ಲಿ 2011ರಲ್ಲಿ ಕೊನೆಯ ವಿಶ್ವಕಪ್ ಕಿರೀಟ ಗೆದ್ದು ಬೀಗಿತ್ತು. ಆದ್ರೆ 2013ರಿಂದ ಈಚೆಗೆ 9 ಐಸಿಸಿ ಟ್ರೋಫಿಗಳನ್ನ ಕಳೆದುಕೊಂಡಿರುವುದನ್ನು ಮರೆಯುವಂತಿಲ್ಲ. ಇದನ್ನೂ ಓದಿ: ಡಿಆರ್‌ಎಸ್‌ ತೆಗೆದುಕೊಳ್ಳದೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ ಸ್ಮಿತ್‌

    2014ರ ಟಿ20 ವಿಶ್ವಕಪ್ ಟೂರ್ನಿ ಫೈನಲ್, 2015ರಲ್ಲಿ ಏಕದಿನ ವಿಶ್ವಕಪ್ ಸೆಮಿಫೈನಲ್, 2016ರ ಟಿ20 ವಿಶ್ವಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್, 2021ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, 2022ರ ಟಿ20 ವಿಶ್ವಕಪ್ ಸೆಮಿಫೈನಲ್, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿ ಐಸಿಸಿ ಟ್ರೋಫಿ ಕಳೆದುಕೊಂಡಿದ್ದ ಭಾರತ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಸೋಲನುಭವಿಸಿ ಮತ್ತೆ ಅಭಿಮಾನಿಗಳ ಆಸೆಗೆ ತಣ್ಣೀರು ಹಾಕಿದೆ.

    ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 240 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 43 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ 6ನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿತು. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ

  • World Cup 2023- ಮೋದಿ ಸ್ಟೇಡಿಯಂನತ್ತ ಹರಿದು ಬಂದ ಜನಸಾಗರ

    World Cup 2023- ಮೋದಿ ಸ್ಟೇಡಿಯಂನತ್ತ ಹರಿದು ಬಂದ ಜನಸಾಗರ

    ಅಹಮದಾಬಾದ್: ಭಾರತ (India) ಮತ್ತು ಆಸ್ಟ್ರೇಲಿಯಾ (Australia) ನಡುವಿನ ಐಸಿಸಿ (ICC) ವಿಶ್ವಕಪ್ (World Cup) ಟೂರ್ನಿಯ ಫೈನಲ್ ಪಂದ್ಯ ಪ್ರಾರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಉಳಿದಿದ್ದು, ಎರಡು ತಂಡಗಳ ರೋಚಕ ಪಂದ್ಯ ವೀಕ್ಷಣೆಗಾಗಿ ಸ್ಟೇಡಿಯಂನತ್ತ ಜನಸಾಗರವೇ ಹರಿದುಬಂದಿದೆ.

    ಅಹಮದಾಬಾದ್‌ನ (Ahmedabad) ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ಒಳಗೆ ಹಾಗೂ ಹೊರಗೆ ಎಲ್ಲಿ ನೋಡಿದರೂ ಜನವೋ ಜನ. ಭಾರತ ತಂಡಕ್ಕೆ ಬೆಂಬಲ ಸೂಚಿಸಲು ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂ ಬಳಿ ಕಿಕ್ಕಿರಿದಿದ್ದು, ನೀಲಿ ಸಮುದ್ರದಂತೆ ಗೋಚರಿಸುತ್ತಿದೆ. ತ್ರಿವರ್ಣ ಧ್ವಜ ಹಿಡಿದ ಅಭಿಮಾನಿಗಳು, ಭಾರತ ಪರ ಜಯಘೋಷ ಮೊಳಗಿಸುತ್ತಾ, ಟೀಂ ಇಂಡಿಯಾ ಗೆದ್ದು ಬರಲಿ ಎಂದು ಶುಭ ಕೋರುತ್ತಿದ್ದಾರೆ. ಇದನ್ನೂ ಓದಿ: ಬ್ಯಾಟಿಂಗ್, ಬೌಲಿಂಗ್‍ನಲ್ಲಿ ನಮ್ಮ ತಂಡ ದಾಖಲೆ ಸೃಷ್ಟಿಸುತ್ತದೆ: ಪ್ರಿಯಾಂಕಾ ಗಾಂಧಿ

    ಇದೇ ವೇಳೆ ಮಾತನಾಡಿದ ಟೀಂ ಇಂಡಿಯಾ ಬೆಂಬಲಿಗ ಮತ್ತು ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುಧೀರ್ ಕುಮಾರ್ ಚೌಧರಿ, ಭಾರತ ತಂಡ 2011ರ ಗೆಲುವನ್ನು ಪುನರಾವರ್ತಿಸುತ್ತದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶತಕ ಗಳಿಸಿ 450 ರನ್‌ಗಳ ಗುರಿ ನೀಡಿ ಸುಲಭವಾಗಿ ಗೆಲ್ಲಬೇಕೆಂದು ಬಯಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: World Cup Final – ಭಾರತದ ಗೆಲುವಿಗಾಗಿ ಬೆಂಗಳೂರಿನ ಹಲವೆಡೆ ವಿಶೇಷ ಪೂಜೆ

    ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದ ನರೇಂದ್ರ ಮೋದಿ ಸ್ಟೇಡಿಯಂ ಈಗ ವಿಶ್ವ ದಾಖಲೆ ಬರೆಯಲು ಸಜ್ಜಾಗಿದೆ. ವರದಿಗಳ ಪ್ರಕಾರ, ಸುಮಾರು 1,320,000 ಜನರು ಪಂದ್ಯವನ್ನು ನೋಡಲು ಬರಲಿದ್ದಾರೆ. ಬಹಳಷ್ಟು ಗಣ್ಯರು ಪಂದ್ಯಕ್ಕೆ ಹಾಜರಾಗಲು ಸಜ್ಜಾಗಿದ್ದಾರೆ. ಬಿಸಿಸಿಐ ಸಹ ಭವ್ಯವಾದ ಐಎಎಫ್ ಸೂರ್ಯಕಿರಣ ಶೋ, ಕಲಾವಿದರ ಪ್ರದರ್ಶನ ಮತ್ತು ಲೇಸರ್ ಮತ್ತು ಲೈಟ್ ಶೋ ಅನ್ನು ಆಯೋಜಿಸಿದೆ. ಇದನ್ನೂ ಓದಿ: ವಿಶ್ವಕಪ್‍ನೊಂದಿಗೆ ಮಗ ಮನೆಗೆ ಮರಳುತ್ತಾನೆ: ಶಮಿ ತಾಯಿ ವಿಶ್ವಾಸ