Tag: ವಿಶ್ವಕಪ್

  • ಬಿಸಿಸಿಐ ಮನವಿಯನ್ನು ತೆಗೆದುಕೊಳ್ಳುವ ವೇದಿಕೆ ಇದಲ್ಲ: ಐಸಿಸಿ

    ಬಿಸಿಸಿಐ ಮನವಿಯನ್ನು ತೆಗೆದುಕೊಳ್ಳುವ ವೇದಿಕೆ ಇದಲ್ಲ: ಐಸಿಸಿ

    – ಪಾಕ್ ಹೊರಗಿಟ್ಟು ಪಂದ್ಯ ನಡೆಸಿ ಎಂದಿದ್ದ ಬಿಸಿಸಿಐ
    – ಭಾರತದ ಮನವಿಯನ್ನು ತಿರಸ್ಕರಿಸಿದ ಐಸಿಸಿ
    – ಭಾರತ ಸರ್ಕಾರದ ಅಂಗಳಕ್ಕೆ ಚೆಂಡೆಸೆದ ಬಿಸಿಸಿಐ

    ದುಬೈ: ಭಯೋತ್ಪಾದನೆ ಬೆಂಬಲ ನೀಡುವಂತಹ ರಾಷ್ಟ್ರಗಳೊಂದಿನ ಕ್ರಿಕೆಟ್ ಒಪ್ಪಂದಗಳನ್ನು ಕೈಬಿಡುವಂತೆ ಬಿಸಿಸಿಐ ಮನವಿಯನ್ನು ಐಸಿಸಿ ತಿರಸ್ಕಾರ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಜಮ್ಮು ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‍ಪಿಎಫ್ ಯೋಧರು ಸಾವನ್ನಪ್ಪಿದ ಬಳಿಕ ಬಿಸಿಸಿಐ ಪತ್ರ ಬರೆದಿತ್ತು. ಅಲ್ಲದೇ ಭಯೋತ್ಪಾದನೆಗೆ ಬೆಂಬಲ ನೀಡುವಂತಹ ರಾಷ್ಟ್ರಗಳೊಂದಿನ ಒಪ್ಪಂದಗಳನ್ನು ಮುರಿದುಕೊಳ್ಳಬೇಕು ಎಂದು ಐಸಿಸಿಗೆ ಮನವಿ ಮಾಡಿತ್ತು. ಈ ಮನವಿ ಪ್ರತಿಕ್ರಿಯೆ ನೀಡಿರುವ ಐಸಿಸಿ, ಇಂತಹ ನಿರ್ಣಯಗಳನ್ನು ತೆಗೆದುಕೊಳ್ಳುವಂತಹ ವೇದಿಕೆ ಇದಲ್ಲ ಎಂದು ಐಸಿಸಿ ಪ್ರತಿಕ್ರಿಯೆ ನೀಡಿದೆ ಎನ್ನಲಾಗಿದೆ.

    ಐಸಿಸಿ ಶನಿವಾರ ನಡೆಸಿದ ಸಭೆಯಲ್ಲಿ ಈ ಕುರಿತು ಅಧ್ಯಕ್ಷರಾದ ಶಶಾಂಕ್ ಮನೋಹರ್ ಈ ವಿಚಾರವಾಗಿ ಚರ್ಚೆ ನಡೆಸಿ ಅಂತಿಮಗೊಳಿಸಿದ್ದಾರೆ ಎನ್ನಲಾಗಿದ್ದು, ಇಂತಹ ಮನವಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಬಿಸಿಸಿಐ ಅಧಿಕಾರಿ ರಾಹುಲ್ ಜೋಹ್ರಿ ಅವರು ಐಸಿಸಿಗೆ ಪತ್ರ ಬರೆದಿದ್ದರು. ಈ ವಿಚಾರವನ್ನು ಮನೋಹರ್ ಅವರೇ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು, ಆದರೆ ಐಸಿಸಿಗೆ ಕ್ರಿಕೆಟ್ ರಕ್ಷಣೆ ಮಾಡುವುದು ಪ್ರಾಥಮಿಕ ಕರ್ತವ್ಯವಾಗಿದೆ ಎಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಫೆ.22 ರಂದು ಜೋಹ್ರಿ ಅವರು, ಐಸಿಸಿ ಅಧ್ಯಕ್ಷ ಮನೋಹರ್ ಅವರ ಮೂಲಕ ಐಸಿಸಿ ಸಿಎಒಗೆ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಅವರಿಗೆ ಪತ್ರ ಬರೆದಿದ್ದರು. ಅಲ್ಲದೇ ಬಿಸಿಸಿಐ ಆಡಳಿತ ಮಂಡಳಿ ಮೂವರು ಸದಸ್ಯರೊಂದಿಗೆ ಪ್ರಸ್ತಾಪ ಮಾಡಿದ್ದಾಗಿ ತಿಳಿಸಿದರು. ಪತ್ರ ಕಳುಹಿಸುವ ಮುನ್ನವೇ ಬಿಸಿಸಿಐ ಆಡಳಿತ ಸಮಿತಿ ಅಧ್ಯಕ್ಷ ವಿನೋದ್ ರಾಯ್ ಅವರು ಪಾಕಿಸ್ತಾನವನ್ನು ವಿಶ್ವಕಪ್‍ನಿಂದ ನಿಷೇಧ ಮಾಡಬೇಕೆಂಬ ಮನವಿಯ ಬಗ್ಗೆಯೂ ಪರಿಶೀಲನೆ ನಡೆಸಿದ್ದರು.

    ಭಾರತದ ಪತ್ರಕ್ಕೆ ಐಸಿಸಿ ಸಭೆಯ ವೇಳೆ ಪಾಕಿಸ್ತಾನ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎನ್ನಲಾಗಿದೆ. ಆದರೆ ಭಯೋತ್ಪಾದಗೆ ಬೆಂಬಲ ರಾಷ್ಟ್ರಗಳನ್ನು ನಿಷೇಧ ಮಾಡುವ ಪ್ರಸ್ತಾಪ ತಿಸ್ಕರಿಸಿದ್ದರು ಕೂಡ, ವಿಶ್ವಕಪ್ ಪಂದ್ಯಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುವುದು. ಭಾರತ ಪಂದ್ಯಗಳಿಗೆ ಮತ್ತಷ್ಟು ಭದ್ರತೆ ಒದಗಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‍ಗೆ ಮನವಿ ಮಾಡಲಾಗುವುದು ಐಸಿಸಿ ತಿಳಿಸಿದೆ ಎಂದು ವರದಿಯಾಗಿದೆ.

    ಪುಲ್ವಾಮಾ ದಾಳಿಯ ಬಳಿಕ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಬಾರದು ಎಂಬ ಒತ್ತಡ ವ್ಯಕ್ತವಾದ ಪರಿಣಾಮ ಬಿಸಿಸಿಐ ಪತ್ರ ಬರೆದಿತ್ತು. ಮೇ 30 ರಿಂದ ಆರಂಭವಾಗುವ ವಿಶ್ವಕಪ್ ಟೂರ್ನಿಯಲ್ಲಿ ಜೂನ್ 16 ರಂದು ಭಾರತ ಪಾಕಿಸ್ತಾನವನ್ನು ಎದುರಿಸಲಿದೆ.

    ಐಸಿಸಿ ತನ್ನ ಮನವಿಯನ್ನು ತಿರಸ್ಕರಿಸಿರುವ ಪರಿಣಾಮ ಸದ್ಯ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದ್ದು, ಮತ್ತೊಮ್ಮೆ ಭಾರತ ಸರ್ಕಾರ ಮಡಿಲಿಗೆ ಚೆಂಡು ಎಸೆಯುತ್ತಾ ಎಂಬ ಅನುಮಾನ ಮೂಡಿದೆ. ಇಲ್ಲದೇ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬರುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಂಗ್ ಕಮಾಂಡರ್ ಅಭಿನಂದನ್‍ಗೆ ಬಿಸಿಸಿಐ ವಿಶೇಷ ಗೌರವ

    ವಿಂಗ್ ಕಮಾಂಡರ್ ಅಭಿನಂದನ್‍ಗೆ ಬಿಸಿಸಿಐ ವಿಶೇಷ ಗೌರವ

    ಮುಂಬೈ: ಮೂರು ದಿನಗಳ ಕಾಲ ವೈರಿ ಪಾಕ್ ನೆಲದಲ್ಲಿದ್ದು ಭಾರತಕ್ಕೆ ಹಿಂದಿರುಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಬಿಸಿಸಿಐ ವಿಶೇಷ ಗೌರವ ನೀಡಿದ್ದು, ನಂ.1 ಸ್ಥಾನ ನೀಡಿ ವಿಶೇಷ ಜರ್ಸಿ ಬಿಡುಗಡೆ ಮಾಡಿದೆ.

    ವೈರಿ ರಾಷ್ಟ್ರದಿಂದ ಬರುವ ವೇಳೆ ಮುಖದಲ್ಲಿ ಅದೇ ಮಂದಹಾಸ, ಅದೇ ಹುರಿ ಮೀಸೆ, ಅದೇ ಮಾನಸಿಕ ದೃಢತೆಯೊಂದಿಗೆ ಕಾಣಸಿಕ್ಕ ಅಭಿನಂದನ್ ಅವರು ತಾಯ್ನಾಡಿನ ಕಡೆಗೆ ನಗು ಮುಖದಿಂದ ಹೆಜ್ಜೆ ಇಟ್ಟ ಕ್ಷಣ ಎಲ್ಲರನ್ನು ರೋಮಾಂಚನಗೊಳಿಸಿತ್ತು.

    ಅಭಿನಂದನ್ ಭಾರತಕ್ಕೆ ಹಿಂದಿರುಗುತ್ತಿದಂತೆ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ದೇಶದ ಜನರು ಎಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಇತ್ತ ಬಿಸಿಸಿಐ ಕೂಡ ಅಭಿನಂದನ್ ಅವರಿಗೆ ವಿಶೇಷ ಗೌರವ ನೀಡಿ ತಾಯ್ನಾಡಿಗೆ ಸ್ವಾಗತ ಕೋರಿತ್ತು. ಆಕಾಶವನ್ನು ಆಳುತ್ತಿದ್ದ ನೀವು ನಮ್ಮ ಹೃದಯವನ್ನು ಆಳುವಿರಿ. ನಿಮ್ಮ ಧೈರ್ಯ, ಘನತೆ ದೇಶದ ತಲೆಮಾರುಗಳನ್ನು ಉತ್ತೇಜಿಸುತ್ತದೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

    ಟೀಂ ಇಂಡಿಯಾ ಮಾಜಿ ಆಟಗಾರರಾದ ಸಚಿನ್, ಸೆಹ್ವಾಗ್, ಗಂಭೀರ್ ಸೇರಿದಂತೆ ಸುರೇಶ್ ರೈನಾ, ಆರ್ ಅಶ್ವಿನ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ ಹಾಗೂ ಸೈನಾ ನೆಹ್ವಾಲ್, ಹಿಮಾ ದಾಸ್ ಸೇರಿದಂತೆ ಹಲವು ಕ್ರೀಡಾಪಟುಗಳು ಅಭಿನಂದನ್ ಅವರಿಗೆ ಸ್ವಾಗತ ಕೋರಿ ಟ್ವೀಟ್ ಮಾಡಿದ್ದಾರೆ.

    ಅಂದಹಾಗೇ ನೈಕ್ ಕ್ರೀಡಾ ಉತ್ಪನ್ನಗಳ ಕಂಪನಿ ಟೀಂ ಇಂಡಿಯಾ ಹೊಸ ಜೆರ್ಸಿಯನ್ನು ವಿನ್ಯಾಸ ಮಾಡಿದ್ದು, ವಿಶೇಷವಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಿ ಜೆರ್ಸಿಗಳನ್ನು ತಯಾರಿಸಲಾಗಿದೆ ಎಂದು ತಿಳಿಸಿದೆ. ಆಟಗಾರರಿಗೆ ಸ್ಫೂರ್ತಿಯಾಗುವ ಹಾಗೂ ಧರಿಸಿದ ವೇಳೆ ಉತ್ತಮ ಎನಿಸುವಂತಹ ರೀತಿಯಲ್ಲಿ ಸಂಸ್ಥೆ ಜರ್ಸಿಗಳನ್ನು ರೂಪಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ಪಂದ್ಯ ಬಹಿಷ್ಕರಿಸಿದರೆ ನಮಗೆ ನಾವೇ ಗುಂಡಿಟ್ಟುಕೊಂಡಂತೆ: ವಿನೋದ್ ರಾಯ್

    ಪಾಕ್ ಪಂದ್ಯ ಬಹಿಷ್ಕರಿಸಿದರೆ ನಮಗೆ ನಾವೇ ಗುಂಡಿಟ್ಟುಕೊಂಡಂತೆ: ವಿನೋದ್ ರಾಯ್

    ಮುಂಬೈ: ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಬಹಿಷ್ಕಾರ ಮಾಡುವುದು ನಮಗೆ ನಾವೇ ಗುಂಡಿಟ್ಟುಕೊಂಡಂತೆ ಎಂದು ಸುಪ್ರೀಂ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಅಭಿಪ್ರಾಯ ಪಟ್ಟಿದ್ದಾರೆ.

    ಭಯೋತ್ಪಾದನೆಗೆ ಬೆಂಬಲ ನೀಡವಂತಹ ರಾಷ್ಟ್ರಗಳನ್ನು ಐಸಿಸಿ ಕ್ರಿಕೆಟ್ ಸದಸ್ಯತ್ವವನ್ನು ಕಳೆದುಕೊಳ್ಳುವಂತೆ ಮಾಡುವ ಅನಿವಾರ್ಯತೆ ಇದ್ದು, ಬಿಸಿಸಿಐ ಈ ಕ್ರಮಕ್ಕೆ ಮುಂದಾಗಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

    ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅವರು ಶುಕ್ರವಾರವೇ ಐಸಿಸಿಗೆ ಪತ್ರ ಬರೆದಿದ್ದು, ಭಯೋತ್ಪಾದನೆಗೆ ಬೆಂಬಲ ನೀಡುವಂತಹ ರಾಷ್ಟ್ರಗಳೊಂದಿಗೆ ಇರುವ ಒಪ್ಪಂದಗಳನ್ನು ಕಡಿದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಪತ್ರವನ್ನು ನಾನು ಕೂಡ ನೋಡಿದ್ದು, ನಮ್ಮಿಂದ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡುವ ಸಾಮರ್ಥ್ಯವಿದೆ. ಈ ಒಂದು ಕಾರ್ಯ ಉತ್ತಮವಾಗಿದ್ದು, ಭಾರತ ಸರ್ಕಾರ ಕೂಡ ಇಂತಹದ್ದೇ ಕಾರ್ಯದಲ್ಲಿ ತೊಡಗಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ತಂಡ ಭಾರತ ದೇಶವನ್ನು ವಿಶ್ವ ಪಟ್ಟದಲ್ಲಿ ಪ್ರತಿನಿಧಿಸುತ್ತದೆ. ನಮ್ಮ ದೇಶದ ಕ್ರಿಕೆಟ್ ಆಟವನ್ನು ತ್ಯಜಿಸಿದ ರಾಷ್ಟ್ರವಲ್ಲ ಎಂದಿದ್ದಾರೆ.

    ಮೂಲಗಳ ಪ್ರಕಾರ ಬಿಸಿಸಿಐ ಇಂತಹ ದಾರಿಯನ್ನು ಅನುಸರಿಲು ಭಾರತದ ಒಲಿಂಪಿಕ್ ಸಂಸ್ಥೆ ಮೇಲೆ ವಿಶ್ವ ಒಲಿಂಪಿಕ್ ಸಂಸ್ಥೆ ಕೈಗೊಂಡ ಕ್ರಮ ಕಾರಣ ಎನ್ನಲಾಗಿದ್ದು, ಕೆಲ ದಿನಗಳ ಹಿಂದೆ ಪಾಕ್ ಶೂಟರ್ ಗಳಿಗೆ ವಿಶ್ವಕಪ್ ನಲ್ಲಿ ಭಾಗವಹಿಸಲು ಭಾರತ ವೀಸಾ ನಿರಾಕರಣೆ ಮಾಡಿತ್ತು. ಪರಿಣಾಮ ಭಾರತದ ತೀರ್ಮಾನಕ್ಕೆ ಒಲಿಂಪಿಕ್ ಸಮಿತಿ ಅಸಮಾಧಾನ ವ್ಯಕ್ತಪಡಿಸಿ ದೇಶಕ್ಕೆ ನೀಡಿದ್ದ ಕ್ರೀಡಾಕೂಟದ ಅತಿಥ್ಯದ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದೆ.

    ಒಲಿಪಿಂಕ್ ಸಮಿತಿಯ ನಿರ್ಣಯದಿಂದ ಆದ ಸ್ಥಿತಿ ಬಿಸಿಸಿಐ ಆಗಬಾರದು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಪಾಕಿಸ್ತಾನ ತಂಡವನ್ನು ವಿಶ್ವಕಪ್ ನಿಂದಲೇ ಹೊರಗಿಡಲು ಪ್ರಯತ್ನ ನಡೆಸಲಾಗುತ್ತದೆ. ಆದರೆ ವಿಶ್ವಕಪ್‍ನಿಂದ ಪಾಕ್ ತಂಡವನ್ನು ಹೊರಗಿಡುವುದು ಒಂದು ದಿನದಲ್ಲಿ ಸಾಧ್ಯವಾಗುವುದಿಲ್ಲ ಎಂದು ರಾಯ್ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ಪಂದ್ಯದ ನಿಷೇಧ – ಕೊನೆಗೂ ಮೌನ ಮುರಿದ ನಾಯಕ ಕೊಹ್ಲಿ

    ಪಾಕ್ ಪಂದ್ಯದ ನಿಷೇಧ – ಕೊನೆಗೂ ಮೌನ ಮುರಿದ ನಾಯಕ ಕೊಹ್ಲಿ

    ಮುಂಬೈ: ಪುಲ್ವಾಮಾ ಭಯೋತ್ಪಾದನ ದಾಳಿಯ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯ ಆಡಬಾರದು ಎಂಬ ಸಾರ್ವಜನಿಕರ ಆಗ್ರಹದ ಕುರಿತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧರ ಟಿ20 ಸರಣಿಯ ಟೂರ್ನಿ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ವೇಳೆ ಕೊಹ್ಲಿ ಈ ಕುರಿತು ಮಾತನಾಡಿದ್ದು, ಪಾಕಿಸ್ತಾನ ವಿರುದ್ಧ ಆಡಬೇಕಾ ಬೇಡವಾ ಎಂಬ ಬಗ್ಗೆ ಸರ್ಕಾರ ಹಾಗೂ ಬಿಸಿಸಿಐ ಯಾವುದೇ ನಿರ್ಣಯ ತೆಗೆದುಕೊಂಡರು ಗೌರವಿಸಿ ಬದ್ಧರಾಗಿರುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.

    ಇದೇ ವೇಳೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ರು. ಮೇ 30 ರಿಂದ ಆರಂಭವಾಗುವ 2019ರ ವಿಶ್ವಕಪ್ ಸರಣಿಯ ಲೀಗ್ ಹಂತದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಎದುರಿಸಲಿದೆ.

    ಪಂದ್ಯದ ಕುರಿತು ನಿರ್ಧಾರ ಕೈಗೊಳ್ಳಲು ಶುಕ್ರವಾರ ಸಭೆ ಸೇರಿದ್ದ ಬಿಸಿಸಿಐ ದ್ವಂದ್ವ ನಿರ್ಧಾರವನ್ನೇ ಮುಂದುವರಿಸಿತು. ಆದರೆ ಐಸಿಸಿ ಸಮಿತಿಯ ಸದಸ್ಯ ರಾಷ್ಟ್ರಗಳಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳೊಂದಿಗೆ ಕ್ರಿಕೆಟ್ ಒಪ್ಪಂದಗಳನ್ನು ರದ್ದು ಮಾಡಿಕೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿತ್ತು. ಇದರ ನಡುವೆಯೇ ಸಚಿನ್ ತೆಂಡೂಲ್ಕರ್ ಅವರು ಭಾರತ, ಪಾಕ್ ಪಂದ್ಯಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ಆದರೆ ಈ ಟ್ವೀಟ್‍ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿ ದೇಶ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ. ಕ್ರಿಕೆಟಗಿಂತ ನನಗೆ ದೇಶವೇ ಮೊದಲು ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಡೋ-ಪಾಕ್ ಪಂದ್ಯದ ಪರ ಸಚಿನ್ ಬ್ಯಾಟಿಂಗ್- ದ್ವಂದ್ವ ನಿಲುವಿನಲ್ಲಿ ಬಿಸಿಸಿಐ

    ಇಂಡೋ-ಪಾಕ್ ಪಂದ್ಯದ ಪರ ಸಚಿನ್ ಬ್ಯಾಟಿಂಗ್- ದ್ವಂದ್ವ ನಿಲುವಿನಲ್ಲಿ ಬಿಸಿಸಿಐ

    ಮುಂಬೈ: ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ರದ್ದು ಮಾಡುವಂತೆ ದೇಶದ್ಯಾಂತ ಆಗ್ರಹ ಕೇಳಿ ಬಂದರೂ ಕೂಡ ಬಿಸಿಸಿಐ ಈ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳದೆ ದ್ವಂದ್ವ ನಿಲುವು ತಾಳಿದೆ.

    ಇಂದು ಕೂಡ ಬಿಸಿಸಿಐ ಆಡಳಿತ ಸಮಿತಿಯ ಸಭೆ ನಡೆಸಲಾಗಿದ್ದು, ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡುವ ಬಗ್ಗೆ ಸರ್ಕಾರದ ತೀರ್ಮಾನವೇ ಅಂತಿಮ ಎಂದು ಮತ್ತೊಮ್ಮೆ ಹೇಳಿದೆ. ಬಿಸಿಸಿಐ ಈ ಹೇಳಿಕೆ ವಿಶ್ವಕಪ್ ಟೂರ್ನಿಗೆ ಇನ್ನು 3 ತಿಂಗಳು ಸಮಯ ಇರುವುದರಿಂದ ಅಂತಿಮ ತೀರ್ಮಾನ ಕೈಗೊಳ್ಳುವುದನ್ನು ತಡ ಮಾಡುತ್ತಿದ್ದೇಯಾ ಎಂಬ ಅನುಮಾನ ಮೂಡಲು ಕಾರಣವಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಮ್ಯಾಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಲೀಗ್ ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಡದಿರುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪಂದ್ಯಕ್ಕೆ ಇನ್ನು 3 ತಿಂಗಳು ಕಾಲಾವಕಾಶ ಇರುವುದರಿಂದ ಸರ್ಕಾರ ತೀರ್ಮಾನವನ್ನೇ ಅಂತಿಮಗೊಳಿಸಲಿದ್ದೇವೆ. ಈಗಾಗಲೇ ಐಸಿಸಿ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

    ಇಂಗ್ಲೆಂಡ್ ಸೇರಿದಂತೆ ಐಸಿಸಿ ಕ್ರಿಕೆಟ್ ಮಂಡಳಿಯಲ್ಲಿ ಸದಸ್ಯರಾಗಿರುವ ಬಹುತೇಕ ರಾಷ್ಟ್ರಗಳು ಭಾರತದಲ್ಲಿ ನಡೆದ ಭಯೋತ್ಪಾದನ ದಾಳಿಯನ್ನು ಖಂಡಿಸಿದೆ. ಇತ್ತ ಬಿಸಿಸಿಐ ಕೂಡ ಉಗ್ರರಿಗೆ ಬೆಂಬಲ ನೀಡುತ್ತಿರುವ ರಾಷ್ಟ್ರದೊಂದಿಗೆ ಕ್ರಿಕೆಟ್ ಸಂಬಂಧವನ್ನು ಅಂತ್ಯಗೊಳಿಸುವಂತೆ ಎಲ್ಲಾ ರಾಷ್ಟ್ರಗಳೊಂದಿಗೆ ಮನವಿ ಮಾಡಿದೆ.

    ಇತ್ತ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡಿ ಗೆಲ್ಲಬೇಕಿದೆ. ವಿಶ್ವಕಪ್ ಇತಿಹಾಸದಲ್ಲಿ ಭಾರತ ಪಾಕ್ ವಿರುದ್ಧ ಸೋತ್ತಿಲ್ಲ. ಇಂದು ಅವರನ್ನು ಮತ್ತೊಮ್ಮೆ ಅವರನ್ನು ಸೋಲುಣಿಸುವ ಸಮಯ ಬಂದಿದೆ. ಪಂದ್ಯ ಆಡದಿರುವುದರಿಂದ ಅವರಿಗೆ 2 ಅಂಕಗಳು ನೀಡಿ ಪಾಕ್ ತಂಡಕ್ಕೆ ಸಹಾಯ ಮಾಡುವುದನ್ನು ವೈಯಕ್ತಿಕವಾಗಿ ವಿರೋಧಿಸುತ್ತೇನೆ ಎಂದಿದ್ದಾರೆ.

    ಹೇಳಿಕೆ ವಿವಾದವಾಗುತ್ತಿದ್ದಂತೆ ಸಚಿನ್, ನನಗೆ ಮೊದಲು ದೇಶವೇ ಮುಖ್ಯವಾಗಿದ್ದು, ನನ್ನ ದೇಶ ಏನು ನಿರ್ಧಾರ ಮಾಡುತ್ತದೆ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ತಮ್ಮ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ಪಂದ್ಯ ಆಡದಿರುವುದು, ಯುದ್ಧ ಮಾಡದೇ ಶರಣಾದಂತೆ: ಶಶಿ ತರೂರ್

    ಪಾಕ್ ಪಂದ್ಯ ಆಡದಿರುವುದು, ಯುದ್ಧ ಮಾಡದೇ ಶರಣಾದಂತೆ: ಶಶಿ ತರೂರ್

    ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕಿಸ್ತಾನ ವಿರುದ್ಧ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಆಡದಿರುವ ತೀರ್ಮಾನ ಮಾಡುವುದು ಯುದ್ಧ ಮಾಡದೇ ಶರಣಾದಂತೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಶಶಿ ತರೂರ್ ಅಭಿಪ್ರಾಯ ಪಟ್ಟಿದ್ದಾರೆ.

    ತಿರುವನಂತಪುರಂ ಸಂಸದರಾಗಿರುವ ಶಶಿ ತರೂರ್ 1999ರ ಕಾರ್ಗಿಲ್ ಯುದ್ಧದ ವೇಳೆಯೂ ಭಾರತ, ಪಾಕಿಸ್ತಾನದ ಎದುರು ಕ್ರಿಕೆಟ್ ಪಂದ್ಯವನ್ನು ಆಡಿ ಗೆಲುವು ಪಡೆದಿತ್ತು ಎಂದು ತಮ್ಮ ಹೇಳಿಕೆಗೆ ಸಮರ್ಥನೆಯನ್ನು ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಶಶಿ ತರೂರ್, ಪಾಕ್ ವಿರುದ್ಧ ಪಂದ್ಯ ಆಡದಿದ್ದರೆ 2 ಅಂಕಗಳನ್ನು ಮಾತ್ರ ಕಳೆದುಕೊಳ್ಳುವುದಿಲ್ಲ. ಬದಲಿಗೆ ಯುದ್ಧ ಮಾಡದೇ ಶರಣಾಗುವುದಕ್ಕಿಂತ ಕಡೆ ಎಂದು ಬರೆದುಕೊಂಡಿದ್ದಾರೆ.

    ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಜೂನ್ 16 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಆದರೆ ಪುಲ್ವಾಮಾ ದಾಳಿಯ ಬಳಿಕ ಹಲವು ಹಿರಿಯ ಕ್ರಿಕೆಟ್ ಆಟಗಾರರು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ಆಡಬಾರದು, ಅಲ್ಲದೇ ಇದಕ್ಕೆ ಐಸಿಸಿ ಒಪ್ಪಿಗೆ ನೀಡದಿದ್ದರೆ ಟೂರ್ನಿಯಿಂದಲೇ ಹೊರ ನಡೆಯಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.

    ಇದೇ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧವೂ ಆರೋಪ ಮಾಡಿರುವ ತರೂರ್, ಯೋಧರ ಸಾವಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶೋಕಾಚರಣೆಯ ದಿನವನ್ನು ಘೋಷಿಸದ ಸರ್ಕಾರ 3 ತಿಂಗಳ ಮುಂದೇ ನಿಗದಿಯಾಗಿರುವ ಪಂದ್ಯದ ಮೇಲೆ ರದ್ದು ಪಡಿಸಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಯೋಧರ ಸಾವಿಗೆ ಕ್ರಮಕೈಗೊಳ್ಳದ ಸರ್ಕಾರ ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ವಕಪ್ ಇಂಡೋ, ಪಾಕ್ ಪಂದ್ಯ – 25 ಸಾವಿರ ಟಿಕೆಟ್‍ಗೆ 4 ಲಕ್ಷ ಅರ್ಜಿ!

    ವಿಶ್ವಕಪ್ ಇಂಡೋ, ಪಾಕ್ ಪಂದ್ಯ – 25 ಸಾವಿರ ಟಿಕೆಟ್‍ಗೆ 4 ಲಕ್ಷ ಅರ್ಜಿ!

    ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯವನ್ನು ಬಹಿಷ್ಕಾರ ಮಾಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಇದರ ನಡುವೆಯೇ ಈ ಪಂದ್ಯದ ಟಿಕೆಟ್‍ಗಾಗಿ 4 ಲಕ್ಷ ಆನ್‍ಲೈನ್ ಅರ್ಜಿಗಳು ಬಂದಿರುವುದಾಗಿ ವಿಶ್ವಕಪ್ ಟೂರ್ನಿಯ ಆಯೋಜಕ ನಿರ್ದೇಶಕ ಸ್ಟೀವ್ ಎಲ್ವರ್ತಿ ಮಾಹಿತಿ ನೀಡಿದ್ದಾರೆ.

    ಜೂನ್ 16 ರಂದು ಪಾಕಿಸ್ತಾನ ಹಾಗೂ ಭಾರತದ ನಡುವಿನ ಪಂದ್ಯ ನಿಗದಿಯಾಗಿದ್ದು, ಇಂಗ್ಲೆಂಡ್‍ನ ಓಲ್ಡ್ ಟ್ರ್ಯಾಫೋರ್ಡ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಲಿದೆ. 25 ಸಾವಿರ ಮಂದಿ ಕುಳಿತುಕೊಳ್ಳುವ ಸಾಮಥ್ರ್ಯ ಹೊಂದಿರುವ ಕ್ರೀಡಾಂಗಣದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರೀ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದೆ ಎಂದು ಟೂರ್ನಿಯ ಆಯೋಜಕರು ಸ್ಪಷ್ಟಪಡಿಸಿದ್ದಾರೆ.

    ವಿಶ್ವಕಪ್ ಪ್ರಚಾರ ಭಾಗವಾಗಿ ಲಂಡನ್ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟೀವ್ ಎಲ್ವರ್ತಿ, ಲೀಗ್ ಹಂತದಲ್ಲಿ ಪಾಕಿಸ್ತಾನ ಹಾಗೂ ಭಾರತದ ನಡುವಿನ ಪಂದ್ಯದ ಟಿಕೆಟ್‍ಗೆ ಭಾರೀ ಬೇಡಿಕೆ ಬಂದಿದೆ. ಆದರೆ 25 ಸಾವಿರ ಜನರಿಗೆ ಅವಕಾಶ ಲಭಿಸಲಿದ್ದು, ಬಹುತೇಕರು ನಿರಾಸೆ ಅನುಭವಿಸಲಿದ್ದಾರೆ ಎಂದಿದ್ದಾರೆ. ಅಲ್ಲದೇ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಅಥವಾ ಲಾರ್ಡ್ಸ್ ಕ್ರಿಕೆಟ್ ಅಂಗಳದಲ್ಲಿ ನಡೆಯುವ ಫೈನಲ್ ಪಂದ್ಯಕ್ಕಿಂತಲೂ ಹೆಚ್ಚಿನ ಬೇಡಿಕೆಯನ್ನು ಪಡೆದಿದೆ ಎಂದು ವಿವರಿಸಿದ್ದಾರೆ.

    ಈ ಹಿಂದೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕೆ 2.4 ಲಕ್ಷ ಅರ್ಜಿಗಳು ಮಾತ್ರ ಬಂದಿತ್ತು. ಪಾಕ್ ಹಾಗೂ ಭಾರತ ನಡುವೆ ನಡೆಯಲಿರುವ ಪಂದ್ಯ ಟೂರ್ನಿಯ ಬಹು ಮುಖ್ಯ ಪಂದ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಟೀಂ ಇಂಡಿಯಾ ಅನುಭವಿ ಆಟಗಾರ ಹಭರ್ಜನ್ ಸಿಂಗ್ ಸೇರಿದಂತೆ ಹಲವು ಆಟಗಾರರು ಪಾಕ್ ಜೊತೆ ಆಡದೇ ಅವರಿಗೆ ತಿರುಗೇಟು ನೀಡಬೇಕು. ಕ್ರೀಡಾಂಗಣದ ಬದಲು ಯುದ್ಧ ಭೂಮಿಯಲ್ಲಿ ಭೇಟಿ ಆಗೋಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಪಾಕಿಸ್ತಾನ ತಂಡವನ್ನು ಟೂರ್ನಿಯಿಂದ ಹೊರಗಿಡಲು ಐಸಿಸಿ ಒತ್ತಡ ಹಾಕಬೇಕು ಇಲ್ಲವಾದರೆ ಇಡೀ ಟೂರ್ನಿಯನ್ನೇ ಬಹಿಷ್ಕಾರ ಹಾಕಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ವಕಪ್ ಕ್ರಿಕೆಟ್: ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಇಂಡೋ-ಪಾಕ್ ಮ್ಯಾಚ್!

    ವಿಶ್ವಕಪ್ ಕ್ರಿಕೆಟ್: ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಇಂಡೋ-ಪಾಕ್ ಮ್ಯಾಚ್!

    ಮುಂಬೈ: ಒಂದು ವೇಳೆ ಪಾಕ್ ವಿರುದ್ಧ ಪಂದ್ಯ ಆಡಕೂಡದು ಎಂದು ಭಾರತ ಸರ್ಕಾರ ನಿರ್ಧಾರ ತೆಗೆದುಕೊಂಡರೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಕ್ರಿಕೆಟ್ ಆಡುವುದಿಲ್ಲ ಎಂದು ಬಿಸಿಸಿಐ ಹಿರಿಯ ವಕ್ತಾರರು ಬುಧವಾರ ಮಾಹಿತಿ ನೀಡಿದ್ದಾರೆ.

    ಒಂದೊಮ್ಮೆ ಪಾಕ್ ವಿರುದ್ಧ ಆಡದಿದ್ದರೆ ಸರಣಿಯ ನಿಯಮಗಳ ಅನ್ವಯ ಪಾಕ್ ತಂಡಕ್ಕೆ ಪೂರ್ಣ ಅಂಕ ಸಿಗುತ್ತದೆ. ಆದರೆ ಇದುವರೆಗೂ ನಾವು ಪಂದ್ಯದ ನಿಷೇಧದ ಬಗ್ಗೆ ಐಸಿಸಿಗೆ ಯಾವುದೇ ಮಾಹಿತಿ ತಿಳಿಸಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

    ವಿಶ್ವಕಪ್ ಆರಂಭಕ್ಕೂ ಮುನ್ನವೇ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದ್ದು, ಒಂದೊಮ್ಮೆ ಪಂದ್ಯದಲ್ಲಿ ಭಾರತ ಆಡದಿದ್ದರೆ ಪಾಕ್ ಅಂಕಗಳನ್ನು ಪಡೆದುಕೊಳ್ಳಲಿದೆ. ಆದರೆ ಫೈನಲ್ ಪಂದ್ಯದಲ್ಲಿ ನಾವು ಆಡದಿದ್ದರೆ ನಿಯಮದಂತೆ ಪಾಕಿಸ್ತಾನ ಕಪ್ ಪಡೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಫೆ.27 ರಂದು ಐಸಿಸಿ ಸಭೆ ನಿಗದಿಯಾಗಿದ್ದು, ಈ ವೇಳೆ ಇಂಡೋ ಪಾಕ್ ಪಂದ್ಯದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜೋಹ್ರಿ, ಕಾರ್ಯದರ್ಶಿ ಅಮಿತಾಬ್ ಚೌಧರಿ ಭಾಗವಹಿಸಲಿದ್ದಾರೆ.

    ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಜೂನ್ 16 ರಂದು ಪಂದ್ಯ ನಡೆಯಲಿದೆ. ಆದರ ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ 44 ಸೈನಿಕರು ಸಾವನ್ನಪ್ಪಿರುವುದು ಎರಡು ದೇಶಗಳ ನಡುವೆ ಪರಿಸ್ಥಿತಿಯನ್ನ ಮತ್ತಷ್ಟು ಹದಗೆಡುವಂತೆ ಮಾಡಿದೆ. ದಾಳಿಯನ್ನು ಜೈಶ್ ಇ ಮಹಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಪಾಕ್ ವಿರುದ್ಧ ವಿಶ್ವಕಪ್ ಪಂದ್ಯ ಆಡುವುದಕ್ಕೆ ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಒಂದು ವೇಳೆ ಫೈನಲ್ ಗೆ ಬಂದರೂ ಭಾರತ ಪಾಕ್ ವಿರುದ್ಧ ಪಂದ್ಯ ಆಡಬಾರದು. ಈ ಮೂಲಕ ಪಾಕಿಸ್ತಾನಕ್ಕೆ ವಿಶ್ವಮಟ್ಟದಲ್ಲಿ ಮುಜುಗರವನ್ನು ಉಂಟುಮಾಡಬೇಕು. ಕ್ರೀಡೆಗೆ ಗಡಿ ಇಲ್ಲದೇ ಇದ್ದರೂ ಉಗ್ರರನ್ನು ಛೂ ಬಿಟ್ಟು ಪದೇ ಪದೇ ಭಾರತಕ್ಕೆ ಕಿರಿಕ್ ಮಾಡುತ್ತಿರುವ ಪಾಕಿಸ್ತಾನಕ್ಕೆ ಈ ಮೂಲಕ ಟೀ ಇಂಡಿಯಾ ತಂಡ ವಿಶ್ವಕಪ್ ನಲ್ಲಿ ಪಾಠ ಕಲಿಸಬೇಕು ಎನ್ನುವ ಅಭಿಪ್ರಾಯವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

    ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ಪಾಕಿಸ್ತಾನ ವಿರುದ್ಧ ಅಜೇಯ ಗೆಲುವಿನ ದಾಖಲೆಯನ್ನು ಹೊಂದಿದೆ. ಒಂದೊಮ್ಮೆ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧದ ಆಡದಿದ್ದರೆ ಈ ದಾಖಲೆಯೂ ಕೂಡ ಅಳಿಯಲಿದೆ.

    ವಿಶ್ವಕಪ್ ನಲ್ಲಿ ಭಾರತ ಪಾಕ್ ವಿರುದ್ಧ ಪಂದ್ಯವಾಡಬೇಕೇ? ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ವಕಪ್ ಟೂರ್ನಿಗೆ 18 ಆಟಗಾರರ ಟೀಂ ಇಂಡಿಯಾ ಸಿದ್ಧ

    ವಿಶ್ವಕಪ್ ಟೂರ್ನಿಗೆ 18 ಆಟಗಾರರ ಟೀಂ ಇಂಡಿಯಾ ಸಿದ್ಧ

    ಮುಂಬೈ: 2019ರ ವಿಶ್ವಕಪ್ ಟೂರ್ನಿಗೆ 18 ಆಟಗಾರರ ಪಟ್ಟಿ ಸಿದ್ಧವಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ತಿಳಿಸಿದ್ದಾರೆ.

    ವಿಶ್ವಕಪ್ ದೃಷ್ಟಿಯಿಂದ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಪಟ್ಟಿಯಲ್ಲಿರುವ ಆಟಗಾರರು ಆಡುತ್ತಿರುವ ಐಪಿಎಲ್ ತಂಡಗಳ ಪ್ರಾಂಚೈಸಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಅಂತಹ ಆಟಗಾರರ ಮೇಲೆ ಆಗುವ ಹೆಚ್ಚಿನ ಒತ್ತಡವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಮಾರ್ಚ್ 23 ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಮೇ 30ರಿಂದ ಜುಲೈ 14ರ ವರೆಗೂ ಇಂಗ್ಲೆಂಡ್‍ನಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಈಗಾಗಲೇ 18 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಮುಂದಿನ ಅವಧಿಯಲ್ಲಿ ಆಟಗಾರರ ಪಟ್ಟಿ ಬದಲಾಗುವ ಸಾಧ್ಯತೆ ಇದೆ. ಇಲ್ಲಿಯವರೆಗೂ ಆಟಗಾರರ ಮೇಲಿನ ಹೊರೆ ನಿಭಾಯಿಸಿದ್ದು, ಮುಂದಿನ ಅವಧಿಯಲ್ಲೂ ಇಂದು ಮುಂದುವರಿಯುತ್ತದೆ ಎಂದು ಪ್ರಸಾದ್ ತಿಳಿಸಿದ್ದಾರೆ.

    ಆಸೀಸ್ ವಿರುದ್ಧ ಸಿಮೀತ ಓವರ್ ಗಳ ಸರಣಿಗೆ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಸರಣಿಯಲ್ಲಿ ಆಟಗಾರರು ತೋರುವ ಪ್ರದರ್ಶನ ಮೇರೆಗೆ ಆಯ್ಕೆ ತಂಡ ಆಟಗಾರರ ಹೆಸರನ್ನು ಅಂತಿಮಗೊಳಿಸಲಿದೆ. ಸರಣಿಯಲ್ಲಿ ಕೆಎಲ್ ರಾಹುಲ್ ಹಾಗೂ ಪಂತ್ ಸ್ಥಾನ ಪಡೆದಿದ್ದು, ರಾಹುಲ್ ಅವರಿಗೆ ವಿಶ್ವಕಪ್ ತಂಡಕ್ಕೆ ಆಯ್ಕೆ ಆಗಲು ಅಂತಿಮ ಅವಕಾಶವೆಂದೇ ವಿಶ್ಲೇಷಣೆ ಮಾಡಲಾಗಿದೆ. ಆದರೆ ಆಸೀಸ್ ವಿರುದ್ಧ ಸರಣಿಗೆ ದಿನೇಶ್ ಕಾರ್ತಿಕ್ ಅವರನ್ನು ಕೈಬಿಟ್ಟಿರುವುದಕ್ಕೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹರ್ಭಜನ್ ಆಯ್ಕೆಯ ವಿಶ್ವಕಪ್ ತಂಡದಲ್ಲಿ ರಾಹುಲ್, ಪಂತ್‍ಗಿಲ್ಲ ಸ್ಥಾನ

    ಹರ್ಭಜನ್ ಆಯ್ಕೆಯ ವಿಶ್ವಕಪ್ ತಂಡದಲ್ಲಿ ರಾಹುಲ್, ಪಂತ್‍ಗಿಲ್ಲ ಸ್ಥಾನ

    ಮುಂಬೈ: 2019ರ ವಿಶ್ವಕಪ್ ಟೂರ್ನಿಯ ಸಿದ್ಧತೆಯಲ್ಲಿರುವ ಟೀಂ ಇಂಡಿಯಾಗೆ 15 ಆಟಗಾರರನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಕಾರ್ಯ ಪ್ರವೃತ್ತವಾಗಿದೆ. ಈ ವೇಳೆಯಲ್ಲೇ ಅನುಭವಿ ಆಟಗಾರ ಹರ್ಭಜನ್ ಸಿಂಗ್ ತಮ್ಮ ಕನಸಿನ ತಂಡದ ಆಯ್ಕೆ ಮಾಡಿ ಕುತೂಹಲ ಮೂಡಿಸಿದ್ದಾರೆ.

    ಹರ್ಭಜನ್ ಸಿಂಗ್ ಆಯ್ಕೆ ಮಾಡಿರುವ ತಂಡದಲ್ಲಿ ಪ್ರಮುಖವಾಗಿ ಉಮೇಶ್ ಯಾದವ್, ರವೀಂದ್ರ ಜಡೇಜಾ, ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಗಿದೆ. ಆದರೆ ಕನ್ನಡಿಗ ಕೆಎಲ್ ರಾಹುಲ್, ಯುವ ಆಟಗಾರ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಿಲ್ಲ.

    ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಜಯ್ ಶಂಕರ್ ಉತ್ತಮ ಪ್ರದರ್ಶನ ನೀಡಿ ಗಮನಸೆಳೆದರೆ, ಹಾರ್ದಿಕ್ ಪಾಂಡ್ಯ ಅಲೌಂಡರ್ ಸ್ಥಾನವನ್ನು ತುಂಬಿದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ಕಳೆದ ಬಾರಿ ವಾತಾವರಣ ಹೆಚ್ಚು ಬಿಸಿಯಿಂದ ಕೂಡಿದ್ದು, ಪಿಚ್ ವರ್ತನೆಯ ಉದ್ದೇಶದಿಂದ ಜಡೇಜಾ ಆಯ್ಕೆ ಉತ್ತಮ ಹಾಗು ತಂಡಕ್ಕೆ ಮತ್ತೊಬ್ಬ ಅಲೌಂಡರ್ ಲಭ್ಯರಾಗಲಿದ್ದಾರೆ ಎಂದು ಹರ್ಭಜನ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ತಂಡ ಇಂತಿದೆ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಂಬಟಿ ರಾಯುಡು, ಎಂಎಸ್ ಧೋನಿ, ಕೇದರ್ ಜಾಧವ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಯಜುವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ದಿನೇಶ್ ಕಾರ್ತಿಕ್, ಉಮೇಶ್ ಯಾದವ್, ವಿಜಯ್ ಶಂಕರ್. ಸಂಭನೀಯ: ರವೀಂದ್ರ ಜಡೇಜಾ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv