Tag: ವಿಶ್ವಕಪ್

  • ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್

    ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್

    ದುಬೈ: ಕ್ಲೈರ್ ಪೊಲೊಸಾಕ್ ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗುವ ಮೂಲಕ ಕ್ರಿಕೆಟಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

    ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ಮೊದಲ ಮಹಿಳಾ ಅಂಪೈರ್ ಎಂಬ ಹೆಗ್ಗಳಿಕೆ ಆಸೀಸ್‍ನ 31 ವರ್ಷದ ಕ್ಲೈರ್ ಪೊಲೊಸಾಕ್ ಅವರಿಗೆ ಲಭಿಸಿದೆ.

    ವಿಶ್ವ ಕ್ರಿಕೆಟ್ ಲೀಗ್ ಭಾಗವಾಗಿ ನಡೆದ ಎರಡನೇ ಡಿವಿಷನ್ ನ ನಮೀಬಿಯಾ ಹಾಗೂ ಓಮನ್ ನಡುವಿನ ಫೈನಲ್ ಪಂದ್ಯದಲ್ಲಿ ಕ್ಲೈರ್ ಪೊಲೊಸಾಕ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದರು. ಇದಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪೊಲೊಸಾಕ್, ಪುರುಷರ ಏಕದಿನ ಪಂದ್ಯಕ್ಕೆ ತೀರ್ಪುಗಾರರಾಗಿ ನನ್ನನ್ನು ಆಯ್ಕೆ ಮಾಡುವ ನಿರೀಕ್ಷೆ ಇರಲಿಲ್ಲ. ವೃತ್ತಿ ಜೀವನದ ಮೊದಲ ಪಂದ್ಯ ಇದಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸಲು ಉತ್ಸಾಹಳಾಗಿದ್ದೇನೆ. ನನ್ನ ಈ ಸಾಧನೆಗೆ ಪತಿಯ ಬೆಂಬಲವೂ ಇದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

    ಅಂದಹಾಗೇ ದೇಶಿಯ ಕ್ರಿಕೆಟ್ ಪುರುಷರ ಪಂದ್ಯಗಳಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ ಅನುಭವವನ್ನು ಕ್ಲೈರ್ ಪೊಲೊಸಾಕ್ ಹೊಂದಿದ್ದು, 2017 ರಲ್ಲಿ ಆಸ್ಟ್ರೇಲಿಯಾ ದೇಶೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ಐಸಿಸಿ ಟಿ-20 ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಐಸಿಸಿ ಅಧಿಕೃತ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳಾ ಅಂಪೈರ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

  • ಗಾಯದ ಸಮಸ್ಯೆ ಬಗ್ಗೆ ಧೋನಿ ಪ್ರತಿಕ್ರಿಯೆ

    ಗಾಯದ ಸಮಸ್ಯೆ ಬಗ್ಗೆ ಧೋನಿ ಪ್ರತಿಕ್ರಿಯೆ

    ಚೆನ್ನೈ: ಹಲವು ಸಮಯದಿಂದ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ವಕಪ್‍ಗೆ ಹೆಚ್ಚಿನ ಜಾಗೃತಿ ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ತಾವು ಫಿಟ್ ಆಗಿದ್ದರೂ ಕೂಡ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ. ವಿಶ್ವಕಪ್‍ಗೆ ಕೆಲ ದಿನಗಳಷ್ಟೇ ಬಾಕಿ ಇರುವುದರಿಂದ ಈ ತಯಾರಿ ಬಹುಮುಖ್ಯ. ಒಂದೊಮ್ಮೆ ಸಮಸ್ಯೆ ಉಂಟಾದರೆ ಖಂಡಿತವಾಗಿಯೂ ಕೂಡ ವಿರಾಮ ತೆಗೆದುಕೊಳ್ಳುತ್ತೇನೆ ಎಂದು ಹೈದರಾಬಾದ್ ಪಂದ್ಯದ ಬಳಿಕ ಮಾತನಾಡಿದ ಧೋನಿ ಹೇಳಿದ್ದಾರೆ.

    ಇತ್ತೀಚೆಗೆ ಧೋನಿ ಚೆನ್ನೈ ತಂಡದ ಪರ ಒಂದು ಪಂದ್ಯದಲ್ಲಿ ಅಲಭ್ಯರಾಗಿದ್ದರು. 2010ರ ಬಳಿಕ ಚೆನ್ನೈ ತಂಡದ ಪರ ಧೋನಿ ಮೊದಲ ಬಾರಿಗೆ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ ಎಂಬುವುದು ಇಲ್ಲಿ ಗಮನಾರ್ಹವಾಗಿತ್ತು. ಹೈದರಾಬಾದ್ ವಿರುದ್ಧ ಆಡಿದ್ದ ಈ ಪಂದ್ಯದಲ್ಲಿ ತಂಡವನ್ನು ರೈನಾ ಮುನ್ನಡೆಸಿದ್ದರು. ಆದರೆ ಪಂದ್ಯದಲ್ಲಿ ಸಿಎಸ್‍ಕೆ 6 ವಿಕೆಟ್‍ಗಳ ಅಂತರದಿಂದ ಸೋಲುಂಡಿತ್ತು.

    ಗಾಯದ ಸಮಸ್ಯೆಯಿಂದಲೇ ಧೋನಿ ಮುನ್ನೆಚ್ಚರಿಕೆ ವಹಿಸಿ ಪಂದ್ಯದಿಂದ ದೂರ ಉಳಿದಿದ್ದರು. ಈ ವೇಳೆ ಅಭಿಮಾನಿಗಳಲ್ಲಿ ಧೋನಿ ಅವರ ಬಗ್ಗೆ ಸಾಕಷ್ಟು ಆತಂಕ ಎದುರಾಗಿತ್ತು. ವಿಶ್ವಕಪ್ ಸಂದರ್ಭದಲ್ಲಿ ಧೋನಿ ಗಾಯದ ಸಮಸ್ಯೆಗೆ ಸಿಲುಕಿದರೆ ತಂಡಕ್ಕೆ ನಷ್ಟವಾಗುತ್ತದೆ ಎಂಬುವುದು ಹಲವು ಅಭಿಮಾನಿಗಳ ಅಭಿಪ್ರಾಯವಾಗಿದೆ. ಅದ್ದರಿಂದಲೇ ಮತ್ತೆ ಸಮಸ್ಯೆ ಉಲ್ಬಣಿಸಬಹುದು ಎಂಬ ಚರ್ಚೆ ಹೆಚ್ಚು ಕೇಳಿ ಬಂದಿತ್ತು.

  • ವಿಶ್ವಕಪ್ ನೋವು ಇನ್ನು ದೂರವಾಗಿಲ್ಲ: ರಿಷಬ್ ಪಂತ್

    ವಿಶ್ವಕಪ್ ನೋವು ಇನ್ನು ದೂರವಾಗಿಲ್ಲ: ರಿಷಬ್ ಪಂತ್

    – ಅಂಕ ಪಟ್ಟಿಯಲ್ಲಿ ಡೆಲ್ಲಿ ನಂ.1

    ಜೈಪುರ: 2019ರ ವಿಶ್ವಕಪ್ ಟೂರ್ನಿಗೆ ತಮ್ಮನ್ನು ಕೈಬಿಟ್ಟ ಪ್ರಕ್ರಿಯೆ ನೋವು ಇನ್ನು ದೂರವಾಗಿಲ್ಲ ಎಂದು ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಹೇಳಿದ್ದಾರೆ.

    ಡೆಲ್ಲಿ ಕ್ಯಾಪಿಟಲ್, ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ 36 ಎಸೆತಗಳಲ್ಲಿ ಸ್ಫೋಟಕ 78 ರನ್ (36 ಎಸೆತ, 8 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡ 6 ವಿಕೆಟ್ ಗೆಲುವು ಪಡೆಯಲು ಪಂತ್ ಕಾರಣರಾಗಿದ್ದರು.

    ಪಂದ್ಯದ ಬಳಿಕ ಮಾತನಾಡಿದ ಪಂತ್, ಇಂದಿನ ಪ್ರದರ್ಶನ ನನಗೆ ಖುಷಿ ತಂದಿದೆ. ತಂಡಕ್ಕೆ ಈ ಪಂದ್ಯ ಬಹುಮುಖ್ಯವಾದದ್ದು ಎಂಬ ಅರಿವು ನನಗಿತ್ತು. ಆದರೆ ನಾನು ಸುಳ್ಳು ಹೇಳಲು ಬಯಸುವುದಿಲ್ಲ. ಈಗಲೂ ವಿಶ್ವಕಪ್ ಆಯ್ಕೆ ಪ್ರಕ್ರಿಯೆಯ ನೋವು ನನ್ನ ಮನಸ್ಸಿನಲ್ಲಿದೆ ಎಂದರು.

    ರಾಜಸ್ಥಾನ್ ರಾಯಲ್ಸ್ ಮಾಜಿ ನಾಯಕ ರಹಾನೆ ಶತಕ (105 ರನ್, 63 ಎಸೆತ, 11 ಬೌಂಡರಿ, 3 ಸಿಕ್ಸರ್)ದ ನೆರವಿನಿಂದ ಡೆಲ್ಲಿಗೆ 192 ರನ್ ಟಾರ್ಗೆಟ್ ನೀಡಿತ್ತು. ಡೆಲ್ಲಿ ಪರ ರಿಷಬ್ ಪಂತ್ 78 ರನ್, ಪೃಥ್ವಿ ಶಾ 42 ರನ್, ಅನುಭವಿ ಆಟಗಾರ ಶಿಖರ್ ಧವನ್ 54 ರನ್‍ಗಳ ಉತ್ತಮ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ 4 ಎಸೆತ ಬಾಕಿ ಇರುವಂತೆಯೇ ಗೆಲುವು ಪಡೆಯಿತು. ರಿಷಬ್ ಪಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಪಡೆದರು.

    ಈ ಬಾರಿಯ ವಿಶ್ವಕಪ್ ಆಯ್ಕೆ ಪ್ರಕ್ರಿಯೆಲ್ಲಿ ರಿಷಬ್ ಪಂತ್ ಕೈ ಬಿಟ್ಟು ದಿನೇಶ್ ಕಾರ್ತಿಕ್‍ರನ್ನು ಆಯ್ಕೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

    https://twitter.com/cricketfeverrr/status/1120396549115338752

    ಡೆಲ್ಲಿ ಸಾಧನೆ: ಇತ್ತ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಡೆಲ್ಲಿ ತಂಡದ ಯುವ ನಾಯಕ ಶ್ರೇಯಸ್ ಅಯ್ಯರ್ ತಂಡದ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಈ ಬಾರಿ ಹೆಸರು ಬದಲಿಸಿಕೊಂಡು ಕಣಕ್ಕೆ ಇಳಿದಿತ್ತು. ಆರಂಭದಿಂದಲೂ ಭರ್ಜರಿಯಾಗಿ ಪ್ರದರ್ಶನ ನೀಡುತ್ತಿರುವ ಯಂಗ್ ಕ್ಯಾಪ್ಟನ್ ನೇತೃತ್ವದ ತಂಡ ಅಂಕಪಟ್ಟಿಯಲ್ಲಿ ಮೊಲದ ಸ್ಥಾನ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ 10 ಪಂದ್ಯದಲ್ಲಿ 14 ಅಂಕಗಳಿಸಿ 2ನೇ ಸ್ಥಾನ ಪಡೆದಿದ್ದು, 11 ಪಂದ್ಯಗಳಿಂದ ಡೆಲ್ಲಿ 14 ಅಂಕ ಪಡೆದಿದೆ. ಕಳೆದ 11 ಆವೃತ್ತಿ ಗಳಲ್ಲಿ ಡೆಲ್ಲಿ ಮೊದಲ ಸ್ಥಾನವನ್ನು ಪಡೆದಿರಲಿಲ್ಲ.

    ಡೆಲ್ಲಿ ತಂಡದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬಗ್ಗೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ. ಡೆಲ್ಲಿ ನಂ.1 ಸ್ಥಾನ ಪಡೆದಿರುವುದನ್ನು ನಂಬಲು ಆಗುತ್ತಿಲ್ಲ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ, ಈ ಹಿಂದೆ ಡೆಲ್ಲಿ ವಾಯಮಾಲಿನ್ಯದಲ್ಲಿ ನಂ.1 ಪಟ್ಟ ಪಡೆದಿತ್ತು, ಆದರೆ ಈಗ ಐಪಿಎಲ್ ನಲ್ಲಿ ನಂ.1 ಎಂದರೆ ಅಚ್ಚರಿ ತಂದಿದೆ ಎಂದು ಕಾಲೆಳೆದಿದ್ದಾರೆ.

  • ಕಾಫಿ ವಿಥ್ ಕರಣ್ ಶೋ ವಿವಾದ – ಭಾರೀ ದಂಡ ತೆತ್ತ ಕೆಎಲ್ ರಾಹುಲ್, ಪಾಂಡ್ಯ

    ಕಾಫಿ ವಿಥ್ ಕರಣ್ ಶೋ ವಿವಾದ – ಭಾರೀ ದಂಡ ತೆತ್ತ ಕೆಎಲ್ ರಾಹುಲ್, ಪಾಂಡ್ಯ

    ಮುಂಬೈ: ‘ಕಾಫಿ ವಿಥ್ ಕರಣ್’ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಟೀಂ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ, ಮಹಿಳೆಯರ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಸಂಬಂಧಿದಂತೆ ಬಿಸಿಸಿಐ ಸುಪ್ರಿಂ ಕೋರ್ಟ್ ನೇಮಿಸಿದ ನ್ಯಾ. ಡಿಕೆ ಜೈನ್ ವಿಶೇಷ ರೀತಿಯಲ್ಲಿ ದಂಡ ವಿಧಿಸಿದ್ದಾರೆ.

    ತಮ್ಮ ವಿವಾದಾತ್ಮಕ ಹೇಳಿಕೆ ಕುರಿತಂತೆ ಏಪ್ರಿಲ್ 9 ಮತ್ತು 10 ರಂದು ರಾಹುಲ್, ಪಾಂಡ್ಯ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ಹಾಜರಾಗಿ ವಿವರಣೆ ನೀಡಿದ್ದರು. ಇಬ್ಬರ ಹೇಳಿಕೆಗಳು ನಿಯಮ 41 (1) ಸಿ ಅನ್ವಯ ಉಲ್ಲಂಘನೆ ಆಗಿದ್ದು, ಇಬ್ಬರಿಗೂ ತಲಾ 20 ಲಕ್ಷ ರೂ.ಗಳನ್ನು ದಂಡವಾಗಿ ವಿಧಿಸಲಾಗಿದ್ದು, ಈ ಮೊತ್ತದಲ್ಲಿ 10 ಲಕ್ಷ ರೂ.ಗಳನ್ನು ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ ಯೋಧರ ಪತ್ನಿಯರಿಗೆ ತಲಾ 1 ಲಕ್ಷ ರೂ.ಗಳನ್ನು ನೀಡುವಂತೆ ತಿಳಿಸಿದೆ. ಉಳಿದ ಹಣ ಸಮಿತಿ ರಚಿಸಿರುವ ಅಂಧರ ಕ್ರಿಕೆಟ್ ಸಂಸ್ಥೆಗೆ ದಾನ ನೀಡಲು ತಿಳಿಸಿದೆ. ಅಲ್ಲದೇ 4 ವಾರಗಳ ಒಳಗೆ ದಂಡ ಪಾವತಿ ಮಾಡಬೇಕೆಂದು ಸೂಚನೆ ನೀಡಲಾಗಿದೆ.

    ಒಂದೊಮ್ಮೆ ನಿಗದಿತ ಸಮಯದೊಳಗೆ ಆಟಗಾರರು ಹಣ ನೀಡಲು ವಿಫಲವಾದಲ್ಲಿ ಈ ಮೊತ್ತವನ್ನು ಬಿಸಿಸಿಐ ಅವರ ಪಂದ್ಯದ ಶುಲ್ಕದಲ್ಲಿ ಕಡಿತಗೊಳಿಸುವಂತೆ ತಿಳಿಸಲಾಗಿದೆ. ಆಟಗಾರರು ಈಗಾಗಲೇ ಬಿಸಿಸಿಐ ನಿಷೇಧ ಮಾಡಿ ಆಸ್ಟ್ರೇಲಿಯಾ ಟೂರ್ನಿಯಿಂದ ಹಿಂದಿರುಗಿದ ಪರಿಣಾಮ ಸುಮಾರು 30 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇದನ್ನು ವಿಚಾರಣೆ ವೇಳೆ ಪರಿಗಣಿಸಲಾಗಿದೆ. ದೇಶದಲ್ಲಿ ಕ್ರೀಡಾಪಟುಗಳನ್ನು ರೋಲ್ ಮಾಡೆಲ್ ಗಳಾಗಿ ಪರಿಗಣಿಸಲಾಗುತ್ತದೆ. ಅವರ ಘನತೆಗೆ ತಕ್ಕಂತೆ ಅವರು ವರ್ತಿಸುವುದು ಅಗತ್ಯವಾಗಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.

    ಆಟಗಾರರಿಗೆ ದಂಡ ವಿಧಿಸುವ ಮೂಲಕ ಈ ವಿಚಾರವನ್ನು ಅಂತಿಮಗೊಳಿಸಲಾಗಿದ್ದು, ನಿಷೇಧ ತೂಗುಗತ್ತಿಯಿಂದ ಇಬ್ಬರು ಆಟಗಾರರು ಪಾರಾಗಿದ್ದಾರೆ ಎನ್ನಬಹುದು. ಸದ್ಯ ಇಬ್ಬರು ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗಿರುವುದರಿಂದ ಪ್ರದರ್ಶನದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ.

    ರಾಹುಲ್, ಪಾಂಡ್ಯ ಹೇಳಿದ್ದೇನು?
    ಬಾಲಿವುಡ್‍ನ ಕರಣ್ ಜೋಹರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭಾಗವಹಿಸಿದ್ದರು. ಈ ಕಾರ್ಯಕ್ರಮ ಜನವರಿಯಲ್ಲಿ ಪ್ರಸಾರಗೊಂಡಿತ್ತು. ಈ ವೇಳೆ ಕೇಳಿದ ಪ್ರಶ್ನೆಗಳಿಗೆ ಮನಸ್ಸಿಗೆ ಬಂದಂತೆ ಹಿಂದೆ ಮುಂದೆ ನೋಡದ ಇಬ್ಬರು ಆಟಗಾರರು ಉತ್ತರಿಸಿದ್ದರು. ಸಚಿನ್ ಹಾಗೂ ಕೊಹ್ಲಿ ಇಬ್ಬರಲ್ಲಿ ಯಾರು ಬೆಟರ್ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಹಾರ್ದಿಕ್ ಹಾಗೂ ಕೆಎಲ್ ರಾಹುಲ್ ಹಿಂದು ಮುಂದು ನೋಡದೇ ಕೊಹ್ಲಿ ಎಂದಿದ್ದರು. ಅಲ್ಲದೇ ಮಹಿಳೆಯರು ಹಾಗೂ ಸೆಕ್ಸ್ ಜೀವನದ ಬಗ್ಗೆ ಕೇಳಿದ ಪ್ರಶ್ನೆಯ ಬಗ್ಗೆ ಕ್ಷಣ ಕಾಲ ಕೂಡ ಯೋಚಿಸದೇ ಹಾರ್ದಿಕ್ ಉತ್ತರಿಸಿದ್ದರು.

    ಕಾರ್ಯಕ್ರಮದ ಸಂಭಾಷಣೆಯ ವೇಳೆಯಲ್ಲಿ ಹಾರ್ದಿಕ್ ಮಹಿಳೆಯರ ಬಗ್ಗೆ ಸ್ತ್ರೀ ದ್ವೇಷಿ ಹಾಗೂ ಕಾಮಪ್ರಚೋದಕ ಹೇಳಿಕೆಯನ್ನು ನೀಡಿದ್ದರು. ಅನೇಕ ಹೆಣ್ಮಕ್ಕಳ ಸಂಗವನ್ನು ತಾವು ಇಷ್ಟಪಡುವುದಾಗಿ ಈ ಬಗ್ಗೆ ಹೆಮ್ಮೆಪಟ್ಟುಕೊಂಡು ಹೆತ್ತವರಲ್ಲಿ ಮುಕ್ತವಾಗಿ ಮಾತನಾಡುವುದಾಗಿ ತಿಳಿಸಿದ್ದರು. ಅಲ್ಲದೇ ಹೆಣ್ಣು ಮಕ್ಕಳ ಬಗ್ಗೆ ಪಾಂಡ್ಯ ಪದ ಬಳಕೆ ಎಷ್ಟು ಕೀಳು ಮಟ್ಟದಲ್ಲಿತ್ತೆಂದರೆ ಮೊದಲ ಬಾರಿ ಅನುಭವದ ಬಳಿಕ ನೇರವಾಗಿ ಹೆತ್ತವರ ಬಳಿ ಬಂದು ‘ಆಜ್ ಮೇ ಕರ್ ಕೇ ಆಯಾ’ (ಇವತ್ತು ನಾನು ಮಾಡಿ ಬಂದೆ) ಎಂದು ಹೇಳಿಕೊಂಡಿದ್ದಾಗಿ ತಿಳಿಸಿದ್ದರು. ಕ್ಲಬ್‍ನಲ್ಲಿ ಮಹಿಳೆಯ ಹೆಸರು ಯಾಕೆ ಕೇಳಿಲ್ಲ ಎಂಬುದಕ್ಕೆ ಉತ್ತರವಾಗಿ, ಮಹಿಳೆಯ ನಡಿಗೆಯನ್ನು ನಾನು ವೀಕ್ಷಿಸಲು ಬಯಸುತ್ತೇನೆ ಎಂದು ಉತ್ತರಿಸಿದ್ದರು.

  • ವಿಶ್ವಕಪ್‍ಗೂ ಮುನ್ನ ಲಂಕಾ ಕ್ರಿಕೆಟ್ ಮಂಡಳಿಯಿಂದ ಮಾಲಿಂಗಗೆ ಶಾಕ್!

    ವಿಶ್ವಕಪ್‍ಗೂ ಮುನ್ನ ಲಂಕಾ ಕ್ರಿಕೆಟ್ ಮಂಡಳಿಯಿಂದ ಮಾಲಿಂಗಗೆ ಶಾಕ್!

    ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ವಿಶ್ವಕಪ್ ಮುನ್ನವೇ ಬೆಳಕಿಗೆ ಬಂದಿದ್ದು, ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿಶ್ವಕಪ್‍ಗೆ ತಂಡದ ನಾಯಕತ್ವವನ್ನು ಬದಲಾವಣೆ ಮಾಡುವ ನಿರ್ಧಾರ ಮಾಡಿದೆ.

    2015 ರಿಂದಲೂ ಒಂದು ಏಕದಿನ ಪಂದ್ಯವನ್ನು ಆಡದ ಎಡಗೈ ವೇಗಿ ದಿಮುತ್ ಕರುಣಾರತ್ನೆ ಅವರನ್ನು ತಂಡದ ಕ್ಯಾಪ್ಟನ್ ಆಗಿ ನೇಮಕ ಮಾಡಿದೆ. 30 ವರ್ಷದ ಕರುಣಾರತ್ನೆ 60 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅಂತಿಮ ಏಕದಿನ ಪಂದ್ಯವನ್ನು 2015ರಲ್ಲಿ ಆಡಿದ್ದರು. ಈ ಮಾದರಿಯಲ್ಲಿ ಕರುಣರತ್ನೆ 17 ಏಕದಿನ ಪಂದ್ಯಗಳಿಂದ ಸರಾಸರಿ 15.83 ರಂತೆ 190 ರನ್ ಗಳನ್ನ ಮಾತ್ರ ಗಳಿಸಿದ್ದಾರೆ.

    ಶ್ರೀಲಂಕಾ ಕ್ರಿಕೆಟ್‍ನಲ್ಲಿ ಫಿಕ್ಸಿಂಗ್ ಆರೋಪ ಕೇಳಿ ಬಂದ ಬಳಿಕ ನಿರಂತರವಾಗಿ ಮಂಡಳಿ ತಂಡದ ನಾಯಕತ್ವದ ಬದಲಾವಣೆಯಲ್ಲಿ ತೊಡಗಿದ್ದು, ಕಳೆದ ಕೆಲ ಸಮಯದಿಂದ ಮಾಲಿಂಗ ತಂಡದ ನಾಯಕತ್ವ ವಹಿಸಿದ್ದರು. ಆದರೆ ಕಳೆದ 14 ಪಂದ್ಯಗಳಲ್ಲಿ ಮಾಲಿಂಗ ನಾಯಕತ್ವದ ತಂಡ 13 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ತಂಡದ ನಾಯಕತ್ವದ ಬದಲಾವಣೆಯಿಂದ ಬೇಸರಗೊಂಡಿರುವ ಅನುಭವಿ ಆಟಗಾರ, ಮಾಜಿ ನಾಯಕ ಲಸಿತ್ ಮಾಲಿಂಗ ಆಟಗಾರರ ವಾಟ್ಸಾಪ್ ಗ್ರೂಪಿನಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಅಂತಿಮವಾಗಿ 15 ಆಟಗಾರರ ಪಟ್ಟಿ ಘೋಷಣೆ ಆಗಿದ್ದು, ಮಾಲಿಂಗ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೇ 30 ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಶ್ರೀಲಂಕಾ ಜೂನ್ 01 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

    ತಂಡ ಇಂತಿದೆ: ಏಂಜಲೊ ಮ್ಯಾಥ್ಯೂಸ್, ಅವಿಷ್ಕ ಫರ್ನಾಂಡೊ, ಲಾಹಿರು ತಿರಿಮನ್ನೆ, ದಿಮುತ್ ಕರುಣಾರತ್ನೆ, ಲಸಿತ್ ಮಾಲಿಂಗ, ಕುಶಾಲ್ ಪೆರೆರಾ, ಕುಶಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಜೀವನ್ ಮೆಂಡಿಸ್, ಮಲಿಂಡಾ ಸಿರಿವರ್ಧನ, ಜೆಫ್ರಿ ವಾಂಡಸ್ರ್ಸೆ, ನುವಾನ್ ಪ್ರದೀಪ್, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ತಿಸರಾ ಪೆರೆರಾ, ಇಸುರು ಉದಾನ.

  • ರಾಯುಡು ‘3ಡಿ ಗ್ಲಾಸ್’ ಟ್ವೀಟ್‍ಗೆ ಬಿಸಿಸಿಐ ಪ್ರತಿಕ್ರಿಯೆ

    ರಾಯುಡು ‘3ಡಿ ಗ್ಲಾಸ್’ ಟ್ವೀಟ್‍ಗೆ ಬಿಸಿಸಿಐ ಪ್ರತಿಕ್ರಿಯೆ

    ಮುಂಬೈ: 2019ರ ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಅಂಬಟಿ ರಾಯುಡು ಅವರು ಆಯ್ಕೆ ಸಮಿತಿ ವಿರುದ್ಧ ವ್ಯಂಗ್ಯವಾಡಿ ಮಾಡಿದ್ದ ಟ್ವೀಟ್‍ಗೆ ಬಿಸಿಸಿಐ ಸಮಿತಿ ಪ್ರತಿಕ್ರಿಯೆ ನೀಡಿದೆ.

    ರಾಯುಡು ವಿಶ್ವಕಪ್ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ಸ್ಥಾನ ಖಚಿತವೆಂದೇ ಭಾವಿಸಿದ್ದರು. ಆದರೆ ಆಯ್ಕೆ ಸಮಿತಿ ಅವರನ್ನು ಕೈ ಬಿಟ್ಟು ಶಾಕ್ ನೀಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದ ರಾಯುಡು, ವಿಶ್ವಕಪ್ ನೋಡಲು 3ಡಿ ಗ್ಲಾಸ್ ಬುಕ್ ಮಾಡಿದ್ದಾಗಿ ಟ್ವೀಟ್ ಮಾಡಿ ಪರೋಕ್ಷವಾಗಿ ಆಯ್ಕೆ ಸಮಿತಿಗೆ ಟಾಂಗ್ ನೀಡಿದ್ದರು.

    ರಾಯುಡು ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರೊಬ್ಬರು, ನಮಗೆ ರಾಯುಡು ಅವರ ಭಾವನೆ ಆರ್ಥವಾಗುತ್ತದೆ. ಅವರ ಟ್ವೀಟ್ ಅನ್ನು ನೋಟ್ ಮಾಡಿದ್ದೇವೆ. ಇತಿಮಿತಿಯನ್ನ ಮೀರದೆ ತಮ್ಮ ಭಾವೋದ್ವೇಗವನ್ನು ಹಂಚಿಕೊಳ್ಳುವ ಅನಿವಾರ್ಯತೆ ರಾಯುಡು ಅವರ ಮೇಲಿದೆ. ಇದರಿಂದ ಹೊರಕ್ಕೆ ಬರಲು ಅವರಿಗೆ ಕೆಲ ಸಮಯ ಬೇಕಾಗುತ್ತದೆ. ಈಗಾಗಲೇ ಅವರು ಸ್ಟಾಂಡ್ ಬೈ ಆಟಗಾರರಾಗಿದ್ದು, ತಂಡದಲ್ಲಿ ಆಟಗಾರರು ಗಾಯಗೊಂಡರೆ ಆಡುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಸದ್ಯ ಅವರ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

    ಇತ್ತ ವಿಶ್ವಕಪ್ ತಂಡದಿಂದ ಪಂತ್‍ರನ್ನು ಕೈಬಿಟ್ಟಿರುವ ಬಗ್ಗೆ ಮೊದಲ ಬಾರಿಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದು, 2017 ರಲ್ಲಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣ ಆರಂಭವಾಯಿತು. ಯಾವುದಾದರೂ ಪ್ರತ್ಯೇಕತೆಯನ್ನು ನನ್ನ ಪ್ರದರ್ಶನದಲ್ಲಿ ತೋರುವಂತೆ ಮಾಡಿದರೆ ಮುಂದಿನ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ ಇಂದು ನಾವು (ಪಂತ್, ಕಾರ್ತಿಕ್) ಈ ವಿಚಾರವಾಗಿ ಮಾತನಾಡುವುದು ಸಮಂಜಸವಲ್ಲ. ಏಕೆಂದರೆ ಆತನಿಗೂ ಇದರ ನೋವಿರುತ್ತದೆ. ಆದರೆ ಆತನಿಗೆ ದೊರೆಯುವ ಅವಕಾಶಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ. ದೀರ್ಘ ಸಮಯ ಆತನಿಗೆ ಕ್ರಿಕೆಟ್ ಆಡುವ ಅವಕಾಶ ಇದೆ ಎಂದು ನನಗೆ ಅನ್ನಿಸುತ್ತಿದೆ ಎಂದು 33 ವರ್ಷದ ದಿನೇಶ್ ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ವಿಶ್ವಕಪ್ 2019ರ ಬಾಗಿಲು ರಾಯುಡು, ಪಂತ್‍ಗೆ ತೆರೆಯುತ್ತಾ?

    ವಿಶ್ವಕಪ್ 2019ರ ಬಾಗಿಲು ರಾಯುಡು, ಪಂತ್‍ಗೆ ತೆರೆಯುತ್ತಾ?

    ಮುಂಬೈ: ಇಂಗ್ಲೆಂಡ್‍ನಲ್ಲಿ ನಡೆಯಲಿರುವ 2019 ವಿಶ್ವಕಪ್ ಟೂರ್ನಿಗೆ ಬಿಸಿಸಿಐ 15 ಆಟಗಾರರ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಹಂತದಲ್ಲಿ ಯುವ ಆಟಗಾರ ರಿಷಬ್ ಪಂತ್, ಅನುಭವಿ ಅಂಬಟಿ ರಾಯುಡುರನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಆಯ್ಕೆ ಸಮಿತಿ ಸಾಕಷ್ಟು ಟೀಕೆ ಎದುರಿಸಿತ್ತು. ಇದರ ಬೆನ್ನಲ್ಲೇ ಸದ್ಯ ಸಮಿತಿ ಇಬ್ಬರು ಆಟಗಾರರಿಗೂ ಮತ್ತೊಂದು ಅವಕಾಶ ನೀಡಿದೆ ಎಂದು ಹೇಳಬಹುದು.

    ಹೌದು, ಬಿಸಿಸಿಐ ರಾಯುಡು ಹಾಗೂ ಪಂತ್ ರೊಂದಿಗೆ ನವದೀಪ್ ಸೈನಿರನ್ನು ಸ್ಟಾಂಡ್ ಬೈ ಪ್ಲೇಯರ್ ಗಳಾಗಿ ಆಯ್ಕೆ ಮಾಡಿ ಪ್ರಕಟಿಸಿದೆ.

    ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಅನುಸರಿಸಿದ ನಿಯಮಗಳನ್ನೇ ಇಲ್ಲಿಯೂ ಬಿಸಿಸಿಐ ಮುಂದುವರಿಸಿದ್ದು, ರಾಯುಡು, ಪಂತ್, ಸೈನಿರನ್ನು ಸ್ಟಾಂಡ್ ಬೈ ಪ್ಲೆಯರ್ ಗಳಾಗಿ ಆಯ್ಕೆ ಮಾಡಿದ್ದಾಗಿ ತಿಳಿಸಿದೆ. ಅಲ್ಲದೇ ಸದ್ಯ ಪ್ರಕಟವಾಗಿರುವ 15 ತಂಡದ ಆಟಗಾರರಲ್ಲಿ ಯಾರದರು ಆಕಸ್ಮಾತ್ ಗಾಯಗೊಂಡರೆ ಈ ಆಟಗಾರರಿಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ವಿಶ್ವಕಪ್ ವೀಕ್ಷಣೆಗೆ ಈಗಷ್ಟೇ 3ಡಿ ಕನ್ನಡಕ ಆರ್ಡರ್ ಮಾಡಿದ್ದೇನೆ: ರಾಯುಡು ವ್ಯಂಗ್ಯ

    ಉಳಿದಂತೆ ಟೀಂ ಇಂಡಿಯಾ ಆಟಗಾರರು ತರಬೇತಿ ಪಡೆಯುವ ವೇಳೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಖಲೀಲ್ ಅಹ್ಮದ್, ದೀಪಕ್ ಚಹರ್, ಆವೇಶ್ ಖಾನ್‍ರನ್ನು ನೇಮಕ ಮಾಡಿದೆ. ಟೀಂ ಇಂಡಿಯಾದೊಂದಿಗೆ ಈ ಮೂವರು ಆಟಗಾರರು ಇಂಗ್ಲೆಂಡ್‍ಗೆ ತೆರಳಿದ್ದಾರೆ. ಆದರೆ ಇವರು ಸ್ಟಾಂಡ್ ಬೈ ಪ್ಲೇಯರ್ ಗಳಲ್ಲ ಎಂದು ಬಿಸಿಸಿಐ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಇತ್ತ ಆಯ್ಕೆ ಸಮಿತಿ ಪ್ರಕಟಿಸಿ ತಂಡದಲ್ಲಿ ರಾಯುಡು ಹೆಸರು ಇಲ್ಲದಿರುವುದು ನನಗೆ ಅಚ್ಚರಿ ತಂದಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೇಳಿದ್ದರು. 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನುಭವ ಉಳ್ಳ ಆಟಗಾರರು ಇರುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ ಗೌತಮ್ ಗಂಭೀರ್ ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದನ್ನು ಓದಿ: ಅಂಬಟಿ ರಾಯುಡು ನೋವನ್ನು ನಾನು ಅನುಭವಿಸಿದ್ದೇನೆ: ಗಂಭೀರ್

  • ಅಂಬಟಿ ರಾಯುಡು ನೋವನ್ನು ನಾನು ಅನುಭವಿಸಿದ್ದೇನೆ: ಗಂಭೀರ್

    ಅಂಬಟಿ ರಾಯುಡು ನೋವನ್ನು ನಾನು ಅನುಭವಿಸಿದ್ದೇನೆ: ಗಂಭೀರ್

    ನವದೆಹಲಿ: ವಿಶ್ವಕಪ್ ಕ್ರಿಕೆಟ್ ತಂಡಕ್ಕೆ ಅಂಬಟಿ ರಾಯುಡು ಅವರನ್ನು ಆಯ್ಕೆ ಮಾಡದಿರುವುದು ತನಗೆ ತೀವ್ರ ನೋವುಂಟು ಮಾಡಿದ್ದು, ನಾನು ಇಂತಹದ್ದೇ ನೋವನ್ನು ಅನುಭವಿಸಿದ್ದೇನೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

    ಕಳೆದ ವರ್ಷ ರಾಯುಡು ಉತ್ತಮವಾಗಿ ಆಡಿದ್ದು, ನಾಯಕ ವಿರಾಟ್ ಕೊಹ್ಲಿ ಕೂಡ ರಾಯುಡು ಆಯ್ಕೆಯನ್ನು ಪರಿಗಣಿಸುವುದಾಗಿ ತಿಳಿಸಿದ್ದರು. ಆದರೆ ಅಚ್ಚರಿ ರೀತಿ ಎಂಬಂತೆ ರಾಯುಡರನ್ನ ಈ ಬಾರಿ ಕೈ ಬಿಡಲಾಗಿತ್ತು.

    ಟೀಂ ಇಂಡಿಯಾಗೆ ಆಯ್ಕೆ ಆಗದ ದೆಹಲಿ ಆಟಗಾರ ಪಂತ್ ಅವರಿಗಿಂತಲೂ ರಾಯುಡು ಆಯ್ಕೆ ಆಗದಿರುವುದು ನೋವು ನೀಡಿದೆ. 33 ವರ್ಷದ ರಾಯುಡು 47ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ ಆಟಗಾರರನ್ನು ಕೈ ಬಿಡಲಾಗಿದೆ. ಆಯ್ಕೆ ಸಮಿತಿ ಮಾಡಿದ ಎಲ್ಲಾ ತೀರ್ಮಾನಗಳಿಗಿಂತ ಇದು ಹೆಚ್ಚು ನೋವು ನೀಡಿದೆ ಎಂದಿದ್ದಾರೆ. ಇದನ್ನು ಓದಿ: ವಿಶ್ವಕಪ್ ವೀಕ್ಷಣೆಗೆ ಈಗಷ್ಟೇ 3ಡಿ ಕನ್ನಡಕ ಆರ್ಡರ್ ಮಾಡಿದ್ದೇನೆ: ರಾಯುಡು ವ್ಯಂಗ್ಯ

    2007 ರಲ್ಲಿ ನನಗೂ ಇದೇ ರೀತಿ ನಡೆದಿತ್ತು. ವಿಶ್ವಕಪ್ ಆಡುವುದು ಪ್ರತಿ ಆಟಗಾರನ ಕನಸಾಗಿರುತ್ತದೆ. ಇಂತಹ ಕನಸು ನನಸು ಆಗದಿದ್ದರೆ ಎಷ್ಟು ನೋವಾಗುತ್ತದೆ ಎಂದು ನನಗೆ ತಿಳಿದಿದೆ. ಸದ್ಯ ಟೆಸ್ಟ್ ನಲ್ಲಿ ರಾಯುಡು ಆಡುತ್ತಿಲ್ಲ. ಆದರೆ ಆಯ್ಕೆ ಸಮಿತಿಯಲ್ಲಿ ರಿಷಬ್ ಪಂತ್ ಆಯ್ಕೆ ಮಾಡದಿರುವುದು ದೊಡ್ಡ ವಿಚಾರವಲ್ಲ. ಪಂತ್ ಯುವ ಆಟಗಾರರ ಆಗಿರುವುದರಿಂದ ಮತ್ತಷ್ಟು ಅವಕಾಶ ಪಡೆಯಬಹುದು. ಕಾರ್ತಿಕ್ ಆಯ್ಕೆ ಉತ್ತಮವಾದರೂ ಸಂಜು ಸ್ಯಾಮ್ಸನ್ ಆಯ್ಕೆ ಆಗಿದ್ದರೆ ಅತ್ಯುತ್ತಮ ಆಗುತಿತ್ತು ಎಂದು ತಿಳಿಸಿದ್ದಾರೆ.

  • ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ ಆಯ್ಕೆ ಹಿಂದಿನ ರಹಸ್ಯ ಬಿಚ್ಚಿಟ್ಟ ಎಂಎಸ್‍ಕೆ ಪ್ರಸಾದ್

    ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ ಆಯ್ಕೆ ಹಿಂದಿನ ರಹಸ್ಯ ಬಿಚ್ಚಿಟ್ಟ ಎಂಎಸ್‍ಕೆ ಪ್ರಸಾದ್

    ಮುಂಬೈ: 2019ರ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಈ ಬಾರಿ ಉತ್ತಮ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. ಇದೇ ವೇಳೆ ತಂಡದಲ್ಲಿ ಸ್ಥಾನ ಪಡೆದಿರುವ ಕೆಎಲ್ ರಾಹುಲ್ ಹಾಗೂ ದಿನೇಶ್ ಕಾರ್ತಿಕ್ ಆಯ್ಕೆ ಹಿಂದಿನ ಬಗ್ಗೆ ಬಿಸಿಸಿಐ ಆಯ್ಕೆ ಸಮತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.

    ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿ ಮಾಧ್ಯಮ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಅವರು, ತಂಡದಲ್ಲಿ ನಂ.4 ಆಟಗಾರರ ಆಯ್ಕೆಗೆ ಹೆಚ್ಚಿನ ಚರ್ಚೆ ನಡೆಸಲಾಯಿತು. ಅಲ್ಲದೇ ಶಿಖರ್ ಧವನ್ ಒಬ್ಬರನ್ನೇ ಆರಂಭಿಕರಾಗಿ ಇರುವುದು ಅಂಶವನ್ನು ಕೂಡ ಚರ್ಚೆಯಲ್ಲಿ ಪ್ರಸ್ತಾಪಿಸಲಾಯಿತು. ಈ ಎರಡು ಸ್ಥಾನದಲ್ಲಿ ಆಡಬಲ್ಲ ವಿಶ್ವಾಸರ್ಹ ಆಟಗಾರ ಕೆಎಲ್ ರಾಹುಲ್ ಅವರಿಗೆ ಅವಕಾಶ ನೀಡಲಾಗಿದೆ. ರಾಹುಲ್ ನಮಗೆ ಆರಂಭಿಕರಾಗಿ ಹೆಚ್ಚಿನ ಆಯ್ಕೆಯಲ್ಲಿ ಇರುತ್ತಾರೆ. ಅಲ್ಲದೇ ನಂ.4 ಸ್ಥಾನದಲ್ಲಿ ಆಡುವುದರ ಬಗ್ಗೆ ತಂಡ ಮ್ಯಾನೇಜ್ ಮೆಂಟ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.

    2017ರ ಚಾಂಪಿಯನ್ಸ್ ಟ್ರೋಫಿ ಬಳಿಕ ಹೆಚ್ಚಿನ ಆಟಗಾರರನ್ನು ಪರೀಕ್ಷೆ ಒಳಪಡಿಸಲು ಅವಕಾಶಗಳನ್ನು ನೀಡಲಾಗಿತ್ತು. ಇದರಲ್ಲಿ ದಿನೇಶ್ ಕಾರ್ತಿಕ್, ಶ್ರೇಯಸ್, ಮನೀಸ್ ಪಾಂಡೆ, ವಿಜಯ್ ಶಂಕರ್, ಅಂಬಟಿ ರಾಯುಡು ಕೂಡ ಅವಕಾಶ ಪಡೆದಿದ್ದರು. ಆದರೆ ಅಂತಿಮವಾಗಿ ವಿಜಯ್ ಶಂಕರ್‍ಗೆ ಸ್ಥಾನ ನೀಡಲಾಗಿದ್ದು, ಬ್ಯಾಟಿಂಗ್ ಹಾಗೂ ಅನಿವಾರ್ಯ ಸಂದರ್ಭದಲ್ಲಿ ಶಂಕರ್ ಬೌಲಿಂಗ್ ಸಹ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಅಲ್ಲದೇ ಅವರು ಉತ್ತಮ ಫೀಲ್ಡರ್ ಕೂಡ ಆಗಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಪಂತ್ ನಮಗೇ ಉತ್ತಮ ಆಯ್ಕೆ ಆಗಿದ್ದರು ಸಹ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಗಿದೆ. ಏಕೆಂದರೆ ವಿಶ್ವಕಪ್ ಟೂರ್ನಿಯಲ್ಲಿ ಪ್ರತಿಯೊಂದು ಪಂದ್ಯವೂ ಪ್ರಮುಖವಾಗಿದ್ದು, ಧೋನಿ ಅನುಪಸ್ಥಿತಿಯಲ್ಲಿ ಆಡುವ ಉತ್ತಮ ವಿಕೆಟ್ ಕೀಪರ್ ರನ್ನ ಆಯ್ಕೆ ಮಾಡಲಾಗಿದೆ. ಅನಿವಾರ್ಯವಾಗಿ ಪಂತ್ ಅವರನ್ನು ಕೈ ಬಿಡಲಾಗಿದೆ ಎಂದರು. ಉಳಿದಂತೆ ಎಲ್ಲಾ ಆಟಗಾರರನ್ನು ಅವರ ಸಾಮಥ್ರ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

  • ವಿಶ್ವಕಪ್‍ಗೆ 15 ಸದಸ್ಯರ ಟೀಂ ಇಂಡಿಯಾ ಪ್ರಕಟ

    ವಿಶ್ವಕಪ್‍ಗೆ 15 ಸದಸ್ಯರ ಟೀಂ ಇಂಡಿಯಾ ಪ್ರಕಟ

    ಮುಂಬೈ: 2019 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಟೀಂ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದ್ದು, ನಾಯಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ.

    ವಿಶ್ವಕಪ್ ಆರಂಭಕ್ಕೆ ಇನ್ನು 50 ದಿನಗಳು ಮಾತ್ರ ಬಾಕಿ ಇದ್ದು, ಬಿಸಿಸಿಐ ಪ್ರಕಟಿಸಿರುವ ಪಟ್ಟಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದರೆ, ರಿಷಬ್ ಪಂತ್ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.

    ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ತಂಡವನ್ನು ಪ್ರಕಟಿಸಿದ್ದು, ಇದಕ್ಕೂ ಮುನ್ನ ಆಯ್ಕೆ ಸಮಿತಿ ಸದಸ್ಯರೊಂದಿಗೆ ನಾಯಕ ವಿರಾಟ್ ಕೊಹ್ಲಿ, ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅವರೊಂದಿಗೆ ಸಭೆ ಏರ್ಪಡಿಸಲಾಗಿತ್ತು.

    ಆಯ್ಕೆ ಸಮಿತಿ ತಂಡ ಪ್ರಕಟಿಸುವ ಮುನ್ನವೇ ಕೆಲ ಆಟಗಾರರು ತಂಡದಲ್ಲಿ ತಮ್ಮ ಸ್ಥಾನ ಗಟ್ಟಿ ಪಡಿಸಿಕೊಂಡಿದ್ದರು. ಆದರೆ ರಿಷಬ್ ಪಂತ್, ದಿನೇಶ್ ಕಾರ್ತಿಕ್ ಅವರ ನಡುವೆ 4ನೇ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿತ್ತು. ಅಲ್ಲದೇ ತಂಡದ ಆರಂಭಿಕರೊಂದಿಗೆ 3ನೇ ಸ್ಥಾನದ ಬ್ಯಾಟ್ಸ್ ಮನ್ ಆಯ್ಕೆ ಕೂಡ ಹೆಚ್ಚಿನ ಕುತೂಹಲ ಮೂಡಿಸಿತ್ತು. ಸದ್ಯ ಬಿಸಿಸಿಐ ಪ್ರಕಟಿಸಿರುವ 15 ಆಟಗಾರರ ತಂಡ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದೆ.

    ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಕೆಎಲ್ ರಾಹುಲ್, ದಿನೇಶ್ ಕಾರ್ತೀಕ್, ರವೀಂದ್ರ ಜಡೇಜಾ, ವಿಜಯ್ ಶಂಕರ್.