Tag: ವಿಶ್ವಕಪ್

  • ಶ್ರೇಷ್ಠ ಕೀಪರ್ ವಿಶ್ವಕಪ್‍ಗೆ ಆಯ್ಕೆಯಾದರೆ  ಪ್ರಶ್ನೆ ಮಾಡೋದು ಯಾಕೆ – ಧೋನಿ ಪರ ಶೇನ್ ವಾರ್ನ್ ಬ್ಯಾಟಿಂಗ್

    ಶ್ರೇಷ್ಠ ಕೀಪರ್ ವಿಶ್ವಕಪ್‍ಗೆ ಆಯ್ಕೆಯಾದರೆ ಪ್ರಶ್ನೆ ಮಾಡೋದು ಯಾಕೆ – ಧೋನಿ ಪರ ಶೇನ್ ವಾರ್ನ್ ಬ್ಯಾಟಿಂಗ್

    ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ಒಬ್ಬ ಭಯಂಕರ ಆಟಗಾರ, ಅವರು ತನಗೆ ಬೇಕಾದಾಗ ನಿವೃತ್ತಿ ಹೊಂದುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.

    ಧೋನಿ ಅವರು ಉತ್ತಮ ಆಟಗಾರ. ಆದರೆ ಜನರು ಯಾವಾಗಲೂ ಯಾಕೆ ಅವರ ನಿವೃತ್ತಿಯ ಬಗ್ಗೆ ಮಾತನಾಡುತ್ತಾರೆ? ಭಾರತದ ಕ್ರಿಕೆಟ್ ತಂಡಕ್ಕೆ ಧೋನಿ ಅವರ ಕೊಡುಗೆ ಬಹಳ ಇದೆ. ಈ ರೀತಿ ಇರುವಾಗ ಅವರ ನಿವೃತ್ತಿಯ ಬಗ್ಗೆ ಮಾತನಾಡುವುದು ತಪ್ಪು ಎಂದು ತಿಳಿಸಿದರು.

    ಧೋನಿ ಅವರು ಒಬ್ಬ ಒಳ್ಳೆಯ ಬ್ಯಾಟ್ಸ್‍ಮ್ಯಾನ್ ಮತ್ತು ಚಾಣಾಕ್ಷ ವಿಕೆಟ್ ಕೀಪರ್ ಇಂತಹ ಆಟಗಾರ ವಿಶ್ವಕಪ್ ತಂಡಕ್ಕೆ ಆಯ್ಕೆಯಾದರೆ ಕೆಲವರು ಪ್ರಶ್ನೆ ಮಾಡುತ್ತಾರೆ ಎಂದರೆ ನನಗೆ ನಂಬಲು ಆಗುತ್ತಿಲ್ಲ. ಅವರು ಈ ವಿಶ್ವಕಪ್ ಮುಗಿದ ನಂತರ ಇಲ್ಲವೇ ಇನ್ನೂ 5 ವರ್ಷ ಕಳೆದ ನಂತರವೋ ನಿವೃತ್ತಿ ಪಡೆಯಬಹುದು. ಈ ನಿವೃತ್ತಿ ವಿಷಯದ ಬಗ್ಗೆ ಧೋನಿಗೆ ಚೆನ್ನಾಗಿ ಗೊತ್ತು. ಯಾವ ಸಮಯದಲ್ಲಿ ನಿವೃತ್ತಿ ಹೊಂದಬೇಕು ಎಂದು ಗೊತ್ತಿರುವ ಏಕೈಕ ಆಟಗಾರ ಎಂದರೆ ಆದು ಧೋನಿ ಎಂದು ಶೇನ್ ವಾರ್ನ್ ಹೇಳಿದ್ದಾರೆ.

    2018ರ ನಂತರ 9 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 81.75ರ ಸರಾಸರಿಯಲ್ಲಿ ಭರ್ಜರಿ 327 ರನ್ ಹೊಡೆದಿದ್ದಾರೆ. ಐಪಿಎಲ್ 12 ರ ಅವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದ ಧೋನಿ ಅವರು ಆಡಿದ 15 ಪಂದ್ಯಗಳಲ್ಲಿ 12 ಇನ್ನಿಂಗ್ಸ್‍ಗಳಲ್ಲಿ 83.20ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಧೋನಿ 134.62ರ ಸ್ಟ್ರೈಕ್ ರೇಟ್‍ನಲ್ಲಿ 416 ರನ್ ಸಿಡಿಸಿ ಉತ್ತಮ ಲಯದಲ್ಲಿದ್ದಾರೆ.

    ಪ್ರಸಕ್ತ ಸಂದರ್ಭದಲ್ಲಿ ವಿಶ್ವದ ನಂಬರ್ ಒನ್ ವಿಕೆಟ್ ಕೀಪರ್ ಆಗಿರುವ ಧೋನಿ ಅವರು ವಿಶ್ವಕಪ್ ಟೂರ್ನಿಯಲ್ಲಿ ಭಾರತದ ತಂಡದಲ್ಲಿ ಇರುವುದು ನಮಗೆ ವರದಾನವಾಗಲಿದೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

  • ಊರುಗೋಲು ಹಿಡ್ಕೊಂಡು ಹೋಟೆಲಿಗೆ ಬಂದು ಟೀಂ ಇಂಡಿಯಾಗೆ ಶುಭಾಶಯ ಹೇಳಿದ ಶಾರ್ದೂಲ್

    ಊರುಗೋಲು ಹಿಡ್ಕೊಂಡು ಹೋಟೆಲಿಗೆ ಬಂದು ಟೀಂ ಇಂಡಿಯಾಗೆ ಶುಭಾಶಯ ಹೇಳಿದ ಶಾರ್ದೂಲ್

    ನವದೆಹಲಿ: ಕಾಲಿಗೆ ಗಾಯವಾಗಿ ಲಂಡನ್‍ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ಬೌಲರ್ ಶಾರ್ದೂಲ್ ಠಾಕೂರ್ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಹೋಗಿ ಟೀಂ ಇಂಡಿಯಾಗೆ ಶುಭಾಶಯ ಹೇಳಿದ್ದಾರೆ.

    ಐಪಿಎಲ್ 12 ಅವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಅಡಿದ ಶಾರ್ದೂಲ್ ಠಾಕೂರ್ ಅವರು ಬೌಲಿಂಗ್ ಮಾಡುವ ಸಮಯದಲ್ಲಿ ಬಲಗಾಲಿಗೆ ಪೆಟ್ಟು ಬಿದ್ದಿತ್ತು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಲಂಡನ್‍ನ ಕಾರ್ಡಿಫ್ ಹೋಗಿದ್ದರು.

    ಈ ನಡುವೆ ಊರುಗೋಲು ಸಹಾಯದಿಂದಲೇ ಭಾರತ ತಂಡದ ಆಟಗಾರರು ಇರುವ ಹೋಟೆಲಿಗೆ ತೆರಳಿದ ಶಾರ್ದೂಲ್ ಠಾಕೂರ್ ಟೀಂ ಇಂಡಿಯಾದ ಎಲ್ಲಾ ಆಟಗಾರರನ್ನು ಭೇಟಿಯಾಗಿ ವಿಶ್ವಕಪ್ ಗೆದ್ದು ತರುವಂತೆ ಶುಭಾಶಯ ತಿಳಿಸಿ ಬಂದಿದ್ದಾರೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರನ್ನು ಭೇಟಿಯಾಗಿ ಕೆಲ ಸಮಯ ಸಮಲೋಚನೆ ನಡೆಸಿದರು. ಈ ಸಮಯದಲ್ಲಿ ಭಾರತದ ಉಪನಾಯಕ ರೋಹಿತ್ ಶರ್ಮಾ ಅವರು ಶಾರ್ದೂಲ್ ಠಾಕೂರ್ ಅವರ ಅರೋಗ್ಯದ ಬಗ್ಗೆ ವಿಚಾರಿಸಿ ಲಂಡನ್‍ನಿನಲ್ಲೇ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ.

    https://www.instagram.com/p/Bx7E1xoA6BL/?utm_source=ig_embed

    ಗಾಯದ ಸಮಸ್ಯೆ ನಡುವೆಯೂ ನಮ್ಮನ್ನು ನೋಡಲು ಬಂದ ಶಾರ್ದುಲ್ ಠಾಕೂರ್ ಅವರು ಬೇಗ ಗುಣವಾಗಲಿ ಎಂದು ಟೀಂ ಇಂಡಿಯಾ ಆಟಗಾರರು ದೇವರಲ್ಲಿ ಕೇಳಿಕೊಂಡಿದ್ದಾರೆ.

    2019ರ ವಿಶ್ವಕಪ್ ಟೂರ್ನಿ ಮೇ 30ಕ್ಕೆ ಅರಂಭವಾಗಲಿದ್ದು, ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲೇ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡ ಭಾರತ ಮುಂದಿನ ಅಭ್ಯಾಸ ಪಂದ್ಯವನ್ನು ಮೇ 28ಕ್ಕೆ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಜೂನ್ 6 ರಂದು ಲೀಗ್ ಹಂತದ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

  • ಆಡುವ 11ರ ಬಳಗದಿಂದ ಭುವಿ ಕೈ ಬಿಡಿ: ಸಂಜಯ್ ಮಂಜ್ರೇಕರ್

    ಆಡುವ 11ರ ಬಳಗದಿಂದ ಭುವಿ ಕೈ ಬಿಡಿ: ಸಂಜಯ್ ಮಂಜ್ರೇಕರ್

    ಲಂಡನ್: ಜೂನ್ 5ರಂದು ದಕ್ಷಿಣಾ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ಟೀಂ ಇಂಡಿಯಾ ಅಧಿಕೃತವಾಗಿ 2019ರ ವಿಶ್ವಕಪ್ ಪ್ರಯಾಣವನ್ನು ಆರಂಭ ಮಾಡಲಿದೆ. ಆದರೆ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡ ಕೊಹ್ಲಿ ಬಳಗ ನಿರಾಸೆ ಮೂಡಿಸಿದೆ. ಇದೇ ವೇಳೆ ತಂಡದ ಆಡುವ 11ರ ಬಳಗ ಆಯ್ಕೆ ಬಗ್ಗೆ ಹಲವು ಕ್ರಿಕೆಟ್ ವಿಶ್ಲೇಷಕರು ಸಲಹೆ ನೀಡಿದ್ದು, ಸಂಜಯ್ ಮಂಜ್ರೇಕರ್ ಕೂಡ ತಮ್ಮ ಸಲಹೆಯನ್ನು ಮುಂದಿಟ್ಟಿದ್ದಾರೆ.

    ಇಂಗ್ಲೆಂಡ್ ನೆಲದ ಪಿಚ್‍ಗೆ ಅನುಗುಣವಾಗಿ ತಂಡದ ಬೌಲರ್ ಗಳ ಆಯ್ಕೆ ಆಗಬೇಕಿದೆ. ಪರಿಣಾಮ ಟೀಂ ಇಂಡಿಯಾ ಹೊಂದಿರುವ ಬುಮ್ರಾ, ಶಮಿ, ಭುವನೇಶ್ವರ್ ಮೂವರಲ್ಲಿ ಒಬ್ಬರನ್ನು ಕೈಬಿಟ್ಟು, ಕುಲ್ದೀಪ್ ಯಾದವ್-ಚಹಲ್ ಜೋಡಿಗೆ ಅವಕಾಶ ನೀಡಬೇಕು ಎಂದು ಮಂಜ್ರೇಕರ್ ತಿಳಿಸಿದ್ದಾರೆ.

    ಕಳೆದ 2 ವರ್ಷಗಳಿಂದ ಇಬ್ಬರು ಸ್ಪಿನ್ನರ್ ಗಳು ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರನ್ನು ತಂಡದ ಆಯ್ಕೆ ಸಮಿತಿ ಆಡಲು ಬಯಸಿದರೆ ಭುವನೇಶ್ವರ್ ಅವರನ್ನು ಕೈಬಿಡಬಹುದು ಎಂದಿದ್ದಾರೆ. ತಂಡದಲ್ಲಿ ಬುಮ್ರಾ ಪ್ರಮುಖ ಬೌಲರ್ ಆಗಿದ್ದು, ಶಮಿ ನಿರಂತರವಾಗಿ ಬೌಲಿಂಗ್ ನಲ್ಲಿ ಸ್ಥಿರತೆ ಕಂಡುಕೊಂಡಿದ್ದಾರೆ. ಆದ್ದರಿಂದ ಭುವನೇಶ್ವರ್ ಅವರಿಗೆ ಆಡುವ ಅವಕಾಶ ಮಿಸ್ ಆಗಲಿದೆ ಎನ್ನಲಾಗಿದೆ. ಇತ್ತ ಹಾರ್ದಿಕ್ ಪಾಂಡ್ಯ ಆಲೌಂಡರ್ ಆಗಿರುವುದರಿಂದ ಈ ಸ್ಥಾನದಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದಿದ್ದಾರೆ.

    ಕಳೆದ 6 ತಿಂಗಳ ಅವಧಿಯಲ್ಲಿ ಭುವನೇಶ್ವರ್ ಗಾಯದ ಸಮಸ್ಯೆ ಹಾಗೂ ವಿಶ್ರಾಂತಿ ನೀಡಿದ ಪರಿಣಾಮ ಸಾಕಷ್ಟು ಪಂದ್ಯಗಳನ್ನು ಆಡಿಲ್ಲ. ಭುವಿಗೆ ಏಕದಿನ ಮಾದರಿಯಲ್ಲಿ ಹೇಳಿಕೊಳ್ಳುವಷ್ಟು ಉತ್ತಮ ಸಾಧನೆ ಇಲ್ಲ. ಏಕದಿನ ಮಾದರಿಯಲ್ಲಿ ಭುವಿಗೆ 10 ರಲ್ಲಿ 6 ಅಂಕ ನೀಡಬಹುದು ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ.

    ಟೀಂ ಇಂಡಿಯಾ ಮೇ 28ರ ಮಂಗಳವಾರ ಎರಡನೇ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಕೊಹ್ಲಿ ಬಳಗ ಎದುರಿಸಲಿದೆ.

  • ವಿಶ್ವಕಪ್: 4ನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ  ಕೆಎಲ್ ರಾಹುಲ್

    ವಿಶ್ವಕಪ್: 4ನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಕೆಎಲ್ ರಾಹುಲ್

    ಲಂಡನ್: 2019ರ ಏಕದಿನ ವಿಶ್ವಕಪ್ ಭಾಗವಾಗಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು, ಮೊದಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ.

    ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‍ಗಿಳಿದ ಟೀಂ ಇಂಡಿಯಾ ಉತ್ತಮ ಆರಂಭವನ್ನು ಪಡೆದುಕೊಳ್ಳಲಿಲ್ಲ. ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ತಲಾ ಎರಡು ರನ್ ಗಳಸಿ ವಿಕೆಟ್ ಒಪ್ಪಿಸಿದರು.

    ಇಬ್ಬರು ಆರಂಭಿಕರು ವಿಫಲರಾದ ಹಿನ್ನೆಲೆಯಲ್ಲಿ ನಂ.3 ಆಟಗಾರನ ಸ್ಥಾನದಲ್ಲಿ ಕೊಹ್ಲಿ ಹಾಗೂ 4ನೇ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್ ಪಡೆದರು. ಆ ಮೂಲಕ ಬಹುದಿನಗಳಿಂದ ಟೀಂ ಇಂಡಿಯಾಗೆ ತಲೆನೋವಾಗಿದ್ದ ಕ್ರಮಾಂಕಕ್ಕೆ ಕೊಹ್ಲಿ ಉತ್ತರ ನೀಡಿದ್ದರು. ಆದರೆ ರಾಹುಲ್ ಕೇವಲ 6 ರನ್ ಗಳಿಸಿ ಪಂದ್ಯದಲ್ಲಿ ವಿಕೆಟ್ ಒಪ್ಪಿಸಿದರು.

    ಇನ್ನಿಂಗ್ಸ್‍ನ 6ನೇ ಓವರಿನ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ ಪ್ರಮುಖ 3 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿತ್ತು. ಇದರ ಬೆನ್ನಲ್ಲೇ ತಂಡಕ್ಕೆ ಆಸರೆಯಾಗಿ ನಿಂತಿದ್ದ ಕೊಹ್ಲಿ ಕೂಡ 18 ರನ್ ಗಳಿಸಿ ಔಟಾದರು. ಇದರೊಂದಿಗೆ ಟೀಂ ಇಂಡಿಯಾ 50 ರನ್ ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇತ್ತ ವಿಶ್ವಕಪ್‍ಗೂ ಮುನ್ನ ಟೀಂ ಇಂಡಿಯಾ ಪರ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಸಿದ್ಧ ಎಂದು ಕೆಎಲ್ ರಾಹುಲ್ ಸ್ಪಷ್ಟಪಡಿಸಿದ್ದರು. ಅಲ್ಲದೇ ಟೂರ್ನಿಯಲ್ಲಿ ಎದುರಾಗಬಹುದಾದ ಯಾವುದೇ ಸವಾಲನ್ನು ಎದುರಿಸಲು ತಯಾರಿ ನಡೆಸಿದ್ದಾಗಿ ನಡೆಸಿದ್ದಾಗಿ ಹೇಳಿದ್ದರು.

  • ವಿಶ್ವಕಪ್: ಪಾಕಿಸ್ತಾನ ಜೆರ್ಸಿ ಮೇಲೆ ಧೋನಿ ಹೆಸರು!

    ವಿಶ್ವಕಪ್: ಪಾಕಿಸ್ತಾನ ಜೆರ್ಸಿ ಮೇಲೆ ಧೋನಿ ಹೆಸರು!

    ಲಂಡನ್: ವಿಶ್ವದಾದ್ಯಂತ ವಿಶ್ವಕಪ್ ಫಿವರ್ ಹೆಚ್ಚಾಗುತ್ತಿದೆ. ಟೂರ್ನಿಯಲ್ಲಿ ಯಾವ ತಂಡ ಜಯಗಳಿಸಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಲೆಕ್ಕಾಚಾರ ಆರಂಭಿಸಿದ್ದಾರೆ. ಇತ್ತ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಶುಭಕೋರುತ್ತಿದ್ದಾರೆ.

    ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪಾಕ್ ಕ್ರಿಕೆಟ್ ಪ್ರೇಮಿಯೊಬ್ಬ ತಮ್ಮ ತಂಡದ ಜೆರ್ಸಿ ಮೇಲೆ ಧೋನಿ ಹೆಸರು ಮುದ್ರಿಸಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಪಾಕ್ ಮೂಲದ ಶೆಜಾದ್ ಉಲ್ ಹಸನ್ ಎಂಬಾತ ಧೋನಿ ಹೆಸರು ಹಾಗೂ ಲಕ್ಕಿ ನಂಬರ್ ‘7’ ಇರುವ ಜೆರ್ಸಿಯ ಫೋಟೋ ಟ್ವೀಟ್ ಮಾಡಿದ್ದು, ಈ ಮೂಲಕ ಧೋನಿ ಮೇಲಿನ ಪ್ರೀತಿಯನ್ನ ತೋರಿಸಿದ್ದಾರೆ.

    ಇಂಗೆಂಡ್‍ನಲ್ಲಿ ಮೇ 3 ರಿಂದ ಟೂರ್ನಿ ಆರಂಭವಾಗುತ್ತಿದ್ದು, ಭಾರತ ಹಾಗೂ ಪಾಕಿಸ್ತಾನ ಜೂನ್ 16 ರಂದು ಮುಖಾಮುಖಿ ಆಗುತ್ತಿದೆ. ಪುಲ್ವಾಮ ದಾಳಿ ಬಳಿಕ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು, ವಿಶ್ವಕಪ್ ಪಂದ್ಯವನ್ನು ಕೂಡ ನಿಷೇಧ ಮಾಡಬೇಕು ಎಂದು ಕೆಲ ಮಂದಿ ಆಗ್ರಹಿಸಿದ್ದರು. ಆದರೆ ನಾಯಕ ಕೊಹ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದು, ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದೇವೆ. ಪಂದ್ಯದಲ್ಲಿ ಪಾಕ್ ತಂಡವನ್ನ ಸೋಲಿಸುವ ಮೂಲಕ ಸೈನಿಕರಿಗೆ ಆರ್ಪಿಸುತ್ತೇವೆ ಎಂದಿದ್ದಾರೆ. ಇದುವರೆಗೂ ನಾಲ್ಕು ದಶಕಗಳಿಂದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡಿರುವ 6 ಪಂದ್ಯಗಳಲ್ಲಿ ಟೀಂ ಇಂಡಿಯಾ ಎಲ್ಲಾ ಪಂದ್ಯಗಳನ್ನು ಗೆದ್ದು ಬೀಗಿದೆ.

    2011ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಅಂದು ಟೀಂ ಇಂಡಿಯಾಗೆ 28 ವರ್ಷಗಳ ಬಳಿಕ ಟ್ರೋಫಿ ಲಭಿಸಿತ್ತು, ಈ ಶ್ರೇಯಸ್ಸು ಧೋನಿ ಅವರಿಗೆ ಸಲ್ಲುತ್ತದೆ. ಈ ಬಾರಿಯ ಟೂರ್ನಿಯಲ್ಲಿ ಧೋನಿ ಬ್ಯಾಟಿಂಗ್ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಕೊಹ್ಲಿ ಹಾಗೂ ಧೋನಿ ಕಾಂಬಿನೇಷನ್ ನಲ್ಲಿ ಟೀಂ ಇಂಡಿಯಾ ಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದೆ.

  • ವಿರಾಟ್ ಕೊಹ್ಲಿ ಮಾನವನಲ್ಲ, ಮಷಿನ್- ಬ್ರಿಯಾನ್ ಲಾರಾ

    ವಿರಾಟ್ ಕೊಹ್ಲಿ ಮಾನವನಲ್ಲ, ಮಷಿನ್- ಬ್ರಿಯಾನ್ ಲಾರಾ

    ನವದೆಹಲಿ: ಟೀಂ ಇಂಡಿಯಾ ನಾಯಕರ ವಿರಾಟ್ ಕೊಹ್ಲಿ ಮಾನವನಲ್ಲ, ಮಷಿನ್ ಎಂದು ವೆಸ್ಟ್ ಇಂಡೀಸ್ ಮಾಜಿ ಆಟಗಾರ ಬ್ರಿಯಾನ್ ಲಾರಾ ಅವರು ಪ್ರಶಂಸಿದ್ದಾರೆ.

    ವಿರಾಟ್ ಕೊಹ್ಲಿ ಅವರು ಪಂದ್ಯದ ದಿಕ್ಕನ್ನೂ ಬದಲಿಸಬಲ್ಲ ಆಟಗಾರ. ಅವರು ಭಾರತ ತಂಡಕ್ಕೆ ವರದಾನವಾಗಲಿದ್ದಾರೆ. ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಕೊಹ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಹೇಳಿದ್ದಾರೆ.

    ಕೊಹ್ಲಿ ಭಾರತ ತಂಡದ ರನ್ ಮಷಿನ್. ಅವರು ಕ್ರಿಕೆಟ್ ಆಟದ ರೀತಿಯನ್ನೇ ಬದಲಾವಣೆ ಮಾಡಿದ್ದಾರೆ ಮತ್ತು ಹೊಸ ಅಯಾಮವನ್ನು ಸೃಷ್ಟಿಮಾಡಿದ್ದಾರೆ. ಇದು ಪ್ರಸ್ತುತ ಆಟಗಾರರಿಗೂ ಮತ್ತು ಭವಿಷ್ಯದ ಆಟಗಾರರಿಗೂ ಉತ್ತಮವಾದ ಪಾಠ. 80 ಮತ್ತು 90 ದಶಕ ನಾವು ಆಡಿದ ಕ್ರಿಕೆಟ್‍ಗಿಂತ ವಿಭಿನ್ನ ಕ್ರಿಕೆಟ್ ಆಟವನ್ನು ಅವರು ಪರಿಚಯ ಮಾಡಿದ್ದಾರೆ ಎಂದು ಹೊಗಳಿದ್ದಾರೆ.

    ಆಟದಲ್ಲಿ ಫಿಟ್ನೆಸ್ ತುಂಬ ಮುಖ್ಯವಾದದ್ದು. ಆದರೆ ಈಗ ಪ್ರಸ್ತುತ ಕಾಲದಲ್ಲಿ ಆಟದಲ್ಲಿ ಅದನ್ನು ಕಾಪಡಿಕೊಳ್ಳಲು ಆಗುತ್ತಿಲ್ಲ. ಏಕದಿನ ಪಂದ್ಯಗಳಲ್ಲೂ 11,000 ರನ್ ಹೊಡೆದಿರುವ ಕೊಹ್ಲಿ ಇಷ್ಟು ವರ್ಷದಲ್ಲಿ ಒಂದು ಬಾರಿಯೂ ಅವರು ತಮ್ಮ ದೈಹಿಕ ಸಾಮರ್ಥ್ಯ ವನ್ನು ಕಳೆದುಕೊಂಡಿಲ್ಲ. ಈ ಕಾರಣಕ್ಕೆ ಅವರನ್ನು ರನ್ ಮಷಿನ್ ಎಂದು ಕರೆದಿದ್ದೇನೆ ಎಂದು ಹೇಳಿದರು.

    ವಿರಾಟ್ ಕೊಹ್ಲಿ ಆಡಿದ ಪ್ರತಿ ಪಂದ್ಯದಲ್ಲೂ ಬಹುತೇಕ ರನ್ ಹೊಡೆಯುತ್ತಾರೆ. ನನಗೆ ಪ್ರಕಾರ ಸಚಿನ್ ತೆಂಡೂಲ್ಕರ್ ಅವರು ಒಬ್ಬ ಶ್ರೇಷ್ಠವಾದ ಆಟಗಾರ ಅವರು ಕೂಡ ಉತ್ತಮವಾಗಿ ಆಡಿದ್ದಾರೆ ಆದರೆ ನಾನು ಅವರನ್ನು ಮತ್ತು ಕೊಹ್ಲಿಯನ್ನು ಹೋಲಿಕೆ ಮಾಡಲು ಇಷ್ಟವಿಲ್ಲ. ಇಬ್ಬರು ಉತ್ತನ ಆಟಗಾರರು ಅವರ ಅವರ ಕಾಲದಲ್ಲಿ ಉತ್ತಮ ಪರಂಪರೆಯ ಆಟವಾನ್ನು ಆಡಿದ್ದಾರೆ ಎಂದು ಹೇಳಿದ್ದಾರೆ.

    ಕೊಹ್ಲಿ ತನ್ನ ವೃತ್ತಿ ಜೀವನದ ಮೂರನೇ ವಿಶ್ವಕಪ್ ಆಡುತ್ತಿದ್ದು ಪ್ರಥಮ ಬಾರಿಗೆ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತದ ಎಲ್ಲಾ ಆಟಗಾರರು ಉತ್ತಮ ಲಯದಲ್ಲಿದ್ದು 2019ರ ವಿಶ್ವಕಪ್ ಗೆಲ್ಲಲು ಇದು ಒಳ್ಳೆಯ ಅವಕಾಶ ಎಂದು ಬ್ರಿಯಾನ್ ಲಾರಾ ಅವರು ಹೇಳಿದ್ದಾರೆ.

  • ಏಕದಿನ ಕ್ರಿಕೆಟಿನಲ್ಲಿ ಇಂಗ್ಲೆಂಡ್ 500 ರನ್ ಗಳಿಸುವ ಮೊದಲ ತಂಡವಾಗಲಿದೆ: ಕೊಹ್ಲಿ ಭವಿಷ್ಯ

    ಏಕದಿನ ಕ್ರಿಕೆಟಿನಲ್ಲಿ ಇಂಗ್ಲೆಂಡ್ 500 ರನ್ ಗಳಿಸುವ ಮೊದಲ ತಂಡವಾಗಲಿದೆ: ಕೊಹ್ಲಿ ಭವಿಷ್ಯ

    ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲು ಒಂದು ವಾರ ಬಾಕಿ ಇರುವ ಸಂದರ್ಭದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದು, ಇಂಗ್ಲೆಂಡ್ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ 500 ರನ್ ಗಳಿಸುವ ಸಾಧ್ಯತೆ ಇದೆ ಎಂದಿದ್ದಾರೆ.

    ಈ ಹಿಂದೆ 1996ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಕೀನ್ಯಾ ಎದುರು 398 ರನ್ ಗಳಿಸಿ ದಾಖಲೆ ಬರೆದಿತ್ತು. ಆ ಸಂದರ್ಭದಲ್ಲಿ ಈ ದಾಖಲೆಯನ್ನು ಮುರಿಯುವುದು ಅಸಾಧ್ಯ ಎಂದೇ ಹಲವರು ಭಾವಿಸಿದ್ದರು. ಆದರೆ 2005 ರಲ್ಲಿ ಆಸ್ಟ್ರೇಲಿಯಾ ತಂಡ ಎರಡು ಬಾರಿ 434, 438 ರನ್ ಸಿಡಿಸಿ ಈ ಹಿಂದಿನ ದಾಖಲೆಗಳನ್ನು ಮುರಿದುಹಾಕಿತ್ತು.

    ಇತ್ತೀಚೆಗೆ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ 400 ಪ್ಲಸ್ ರನ್ ಗಳಿಸಿತ್ತು. ಪರಿಣಾಮ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ಅತೀ ಹೆಚ್ಚು ರನ್ ಗಳಿಸುವ ಪಂದ್ಯಗಳಿಗೆ ಸಾಕ್ಷಿಯಾಗಬಹುದು. ಏಕದಿನ ಕ್ರಿಕೆಟ್‍ನಲ್ಲಿ ಇಂಗ್ಲೆಂಡ್‍ಗೆ 500 ರನ್ ಗಳಿಸುವ ಅವಕಾಶ ಇದೆ ಎಂದು ಕೊಹ್ಲಿ ಹೇಳಿದ್ದಾರೆ.

    ಈ ಬಾರಿಯ ಟೂರ್ನಿಯಲ್ಲಿ ಒತ್ತಡವನ್ನು ನಿಭಾಯಿಸುವುದು ಪ್ರಮುಖ ಅಂಶವಾಗಲಿದ್ದು, ತಂಡದ ಆಟಗಾರರು ಒತ್ತಡಕ್ಕೆ ಸಿಲುಕಿದರೆ 260 ರಿಂದ 270 ರನ್ ಗಳಿಸುವುದು ಕಷ್ಟಸಾಧ್ಯವಾಗಲಿದೆ. ಆದರೆ ಈ ಬಾರಿಯ ಟೂರ್ನಿಯಲ್ಲಿ 370 ರಿಂದ 380 ರನ್ ಗುರಿ ಬೆನ್ನಟ್ಟುವ ಸಂದರ್ಭಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಪರಿಣಾಮ ಪಂದ್ಯದ ಸಂದರ್ಭದಲ್ಲಿ ಒತ್ತಡವನ್ನು ನಿಭಾಯಿಸುವುದು ಅತಿ ಮುಖ್ಯ ಎಂದು ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ.

    ಏಕದಿನ ಕ್ರಿಕೆಟಿನಲ್ಲಿ ಇಂಗ್ಲೆಂಡ್ ಅತೀ ಹೆಚ್ಚು ರನ್ ಗಳಿಸಿದ ತಂಡದ ಸ್ಥಾನವನ್ನು ಪಡೆದುಕೊ0ಡಿದ್ದು, ಆಸ್ಟ್ರೇಲಿಯಾ ವಿರುದ್ಧ ಕಳೆದ ವರ್ಷ 481 ರನ್ ಸಿಡಿಸಿತ್ತು.

  • ವಿಶ್ವಕಪ್‍ಗೆ ಹೊರಟ ಕೊಹ್ಲಿಗೆ ಪೂಮಾದಿಂದ ವಿಶೇಷ ವಿನ್ಯಾಸದ ಶೂ – ವಿಡಿಯೋ ನೋಡಿ

    ವಿಶ್ವಕಪ್‍ಗೆ ಹೊರಟ ಕೊಹ್ಲಿಗೆ ಪೂಮಾದಿಂದ ವಿಶೇಷ ವಿನ್ಯಾಸದ ಶೂ – ವಿಡಿಯೋ ನೋಡಿ

    ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಪೂಮಾ ಕಂಪನಿ ಚಿನ್ನದ ಬಣ್ಣದ ವಿಶೇಷ ಶೂ ವಿನ್ಯಾಸ ಮಾಡಿದೆ.

    ಪೂಮಾ ಕಂಪನಿಯವರು ವಿಶ್ವಕಪ್‍ಗೆಂದೇ ಮೊದಲ ಬಾರಿಗೆ ಈ ಬೂಟ್‍ನ್ನು ವಿನ್ಯಾಸ ಮಾಡಿದ್ದು, ಚಿನ್ನ ಮತ್ತು ಬಿಳಿ ಬಣ್ಣದಿಂದ ತುಂಬ ಆಕರ್ಷಣೀಯವಾಗಿ ಕಾಣುವಂತೆ ಈ ಬೂಟ್‍ಗಳನ್ನು ತಯಾರಿಸಲಾಗಿದೆ.

    ಭಾರತ ಮತ್ತು ವಿಶ್ವದಲ್ಲಿ ಈ ವಿನ್ಯಾಸದ ಕೇವಲ 150 ಶೂಗಳನ್ನು ಮಾತ್ರ ತಯಾರಿಸಲಾಗಿದೆ. ಇದರ ಬಗ್ಗೆ ಟ್ವಿಟ್ಟರ್‍ ನಲ್ಲಿ ಪ್ರತಿಕ್ರಿಯಿಸಿರುವ ಕೊಹ್ಲಿ ಈ ಬೂಟ್‍ನ್ನು ವಿಶ್ವಕಪ್‍ನಲ್ಲಿ ಧರಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

    “ನನ್ನ ವಿಶ್ವಕಪ್‍ಗಾಗಿ ನನ್ನ ಬೂಟ್‍ಗಳು ತಯಾರಾಗಿದೆ. ಚಿನ್ನದ ಹಾಗೂ ಬಿಳಿ ಬಣ್ಣದ ಪೂಮಾ ಒನ್8 ಗೋಲ್ಡ್ ಸ್ಪೈಕ್ ಕಲೆಕ್ಟರ್ಸ್ ಎಡಿಶನ್‍ನನ್ನು ನಾನು ನಿಮಗೆ ತೋರಿಸಲು ಉತ್ಸುಕನಾಗಿದ್ದೇನೆ. ಈ ಸೀಮಿತ ಅವೃತ್ತಿಯ ಜೋಡಿಗಳನ್ನು ಪೂಮಾದವರು ತಯಾರಿಸಿದ್ದಾರೆ. ಬನ್ನಿ ಒಟ್ಟಾಗಿ ಇತಿಹಾಸ ಸೃಷ್ಟಿಸೋಣ” ಎಂದು ಬರೆದುಕೊಂಡಿದ್ದಾರೆ.

    ಇದೇ ತಿಂಗಳ 30 ರಂದು ಇಂಗ್ಲೆಂಡ್‍ನಲ್ಲಿ ವಿಶ್ವಕಪ್ ಅರಂಭವಾಗಲಿದ್ದು ಕೊಹ್ಲಿ ನಾಯಕತ್ವದ ಭಾರತ ತಂಡ ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

  • ನಾನು ಆಡಿದ ವಿಶ್ವಕಪ್‍ಗಳಲ್ಲೇ ಅತ್ಯಂತ ಸವಾಲಿನ ಟೂರ್ನಿ ಇದಾಗಿದೆ – ಇಂಗ್ಲೆಂಡಿಗೆ ತೆರಳುವ ಮುನ್ನ ಕೊಹ್ಲಿ ಮಾತು

    ನಾನು ಆಡಿದ ವಿಶ್ವಕಪ್‍ಗಳಲ್ಲೇ ಅತ್ಯಂತ ಸವಾಲಿನ ಟೂರ್ನಿ ಇದಾಗಿದೆ – ಇಂಗ್ಲೆಂಡಿಗೆ ತೆರಳುವ ಮುನ್ನ ಕೊಹ್ಲಿ ಮಾತು

    ನವದೆಹಲಿ: 2019ರ ವಿಶ್ವಕಪ್ ನಾನು ಆಡಿದ ವಿಶ್ವಕಪ್‍ಗಳಲ್ಲೇ ಅತ್ಯಂತ ಸವಾಲಿನ ಟೂರ್ನಿ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಇಂದು ರಾತ್ರಿ ವಿಶ್ವಕಪ್‍ಗೆಂದು ಭಾರತ ತಂಡ ಇಂಗ್ಲೆಂಡ್‍ಗೆ ತೆರಳಲಿದ್ದು, ಇದಕ್ಕೂ ಮುಂಚೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ನಾನು ಇಲ್ಲಿಯವರೆಗೂ ಅಡಿದ ಮೂರು ವಿಶ್ವಕಪ್‍ನಲ್ಲಿ ಈ ಬಾರಿ ವಿಶ್ವಕಪ್ ತುಂಬ ಸವಾಲಿನಿಂದ ಕೂಡಿದೆ ಎಂದರು.

    “ಇದು ನನಗೆ ತುಂಬ ಸವಾಲಿನ ವಿಶ್ವಕಪ್. ನಾವು ಉತ್ತಮ ಕ್ರಿಕೆಟ್ ಅಟದ ಕಡೆ ಗಮನ ನೀಡಬೇಕು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆಟವಾಡಿದರೆ ನಾವು ಆಡಿದ ಪ್ರತಿ ಪಂದ್ಯದಲ್ಲೂ ಉತ್ತಮ ಫಲಿತಾಂಶ ಕಾಣಬಹುದು. ನಮ್ಮ ತಂಡ ಸಾಧ್ಯವದಷ್ಟು ಸರಳವಾಗಿ ಇರಲು ಪ್ರಯತ್ನಮಾಡಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಐಸಿಸಿ ಟೂರ್ನಿಗಳಲ್ಲಿ ಪಿಚ್‍ಗಳು ಉತ್ತಮವಾಗಿರುತ್ತವೆ. ವಿಶ್ವಪಕ್ ವೇಳೆಯ ಪಿಚ್‍ಗಳಿಗೂ ಮತ್ತು ನಾವು ಸಮಾನ್ಯವಾಗಿ ಆಡುವ ಏಕದಿನ ಪಂದ್ಯಗಳ ಪಿಚ್‍ಗಳಿಗೂ ತುಂಬಾ ವ್ಯತ್ಯಾಸವಿರುತ್ತದೆ. ಇಂಗ್ಲೆಂಡ್‍ನಲ್ಲಿರುವ ಪಿಚ್‍ಗಳು ಹೈ ಸ್ಕೋರಿಂಗ್ ಪಂದ್ಯಗಳಿಗೆ ಹೆಚ್ಚು ಅನುಕೂಲವಾಗಿವೆ. ಆದರೆ ಕೆಲ ತಂಡಗಳು 260ರಿಂದ 270 ರನ್‍ಗಳಿಗೆ ಎದುರಾಳಿಗಳನ್ನು ಕಟ್ಟಿಹಾಕುವ ಸಾಮಥ್ರ್ಯ ಹೊಂದಿವೆ ಎಂದು ಹೇಳಿದರು.

    ಮೇ 30 ರಿಂದ ವಿಶ್ವಕಪ್ ಅರಂಭವಾಗಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ದಕ್ಷಿಣ ಅಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ. ನಂತರ ಆಸ್ಟ್ರೇಲಿಯಾ(ಜೂ.9), ನ್ಯೂಜಿಲೆಂಡ್(ಜೂ.13), ಪಾಕಿಸ್ತಾನ(ಜೂ.16), ಅಪ್ಘಾನಿಸ್ತಾನ(ಜೂ.22), ವೆಸ್ಟ್ ಇಂಡೀಸ್(ಜೂ.27), ಇಂಗ್ಲೆಂಡ್(ಜೂ.30), ಬಾಂಗ್ಲಾದೇಶ(ಜು.2), ಶ್ರೀಲಂಕಾ(ಜು.6) ವಿರುದ್ಧ ಆಡಲಿದೆ.

    ಭಾರತದ ತಂಡದ ಹರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ಶಿಖರ್ ಧವನ್, ಎಂಎಸ್ ಧೋನಿ, ಕೆಎಲ್ ರಾಹುಲ್ ಮತ್ತು ಬೌಲರ್‍ ಗಳಾದ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಅವರು ಉತ್ತಮವಾದ ಫಾರ್ಮ್‍ನಲ್ಲಿ ಇರುವುದರಿಂದ ವಿಶ್ವಕಪ್ ಗೆಲ್ಲುವ ತಂಡಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.

  • ವಿಶ್ವಕಪ್ 2019: ಟೀಂ ಇಂಡಿಯಾ ಜೊತೆ ಕೇದಾರ್ ಜಾಧವ್ ಪ್ರಯಾಣ ಫಿಕ್ಸ್

    ವಿಶ್ವಕಪ್ 2019: ಟೀಂ ಇಂಡಿಯಾ ಜೊತೆ ಕೇದಾರ್ ಜಾಧವ್ ಪ್ರಯಾಣ ಫಿಕ್ಸ್

    ಮುಂಬೈ: ಟೀಂ ಇಂಡಿಯಾ ಆಟಗಾರ ಕೇದಾರ್ ಜಾಧವ್ ಗಾಯದ ಸಮಸ್ಯೆಯಿಂದ ಹೊರ ಬಂದಿದ್ದು, ವಿಶ್ವಕಪ್ ಟೂರ್ನಿಗೆ ಫಿಟ್ ಆಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಜಾಧವ್‍ಗೆ ಶುಭಕೋರಿದೆ.

    ಚೆನ್ನೈ ತಂಡದ ಪರ ಐಪಿಎಲ್‍ನಲ್ಲಿ ಭಾಗವಹಿಸಿದ್ದ ಕೇದಾರ್ ಜಾಧವ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು. ಈ ಗಾಯದ ಸಮಸ್ಯೆಯಿಂದ ಅವರು ವಿಶ್ವಕಪ್ ಟೂರ್ನಿ ವೇಳೆಗೆ ಫಿಟ್ ಆಗುತ್ತರಾ ಎಂಬ ಅನುಮಾನ ಮೂಡಿತ್ತು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಈ ಕುರಿತು ಖಚಿತ ಪಡಿಸಿ ಜಾಧವ್ ಮೇ 22 ರಂದು ಟೀಂ ಇಂಡಿಯಾದೊಂದಿಗೆ ಇಂಗ್ಲೆಂಡ್ ನತ್ತ ತೆರಳಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ.

    ಜಾಧವ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುದು ಟೀಂ ಇಂಡಿಯಾಗೆ ಮತ್ತಷ್ಟು ಬಲ ತುಂಬಲಿದೆ. ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‍ನಲ್ಲಿ ಜಾಧವ್ ಮುಖ್ಯ ಪಾತ್ರವಹಿಸಲಿದ್ದಾರೆ. ಅಲ್ಲದೇ ಬೌಲಿಂಗ್‍ನಲ್ಲೂ ಪ್ರಭಾವ ಬೀರಲಿದ್ದಾರೆ. ಮುಂಬೈನಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಜಾಧವ್ ಭಾಗವಹಿಸಿದ್ದರು. ಟೀಂ ಇಂಡಿಯಾ ತಂಡದ ಫಿಸಿಯೊ ಪ್ಯಾಟ್ರಿಕ್ ಫರ್ಹಾರ್ತ್, ಜಾಧವ್‍ರ ಫಿಟ್ನೆಸ್ ವರದಿಯನ್ನು ಬಿಸಿಸಿಐಗೆ ಸಲ್ಲಿಸಿತ್ತು.

    ವಿಶ್ವಕಪ್ ಟೂರ್ನಿಯ ಭಾಗವಾಗಿ ಮೇ 25 ನ್ಯೂಜಿಲೆಂಡ್ ವಿರುದ್ಧದ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಆಡಲಿದ್ದು, ಈ ಹಿನ್ನೆಲೆಯಲ್ಲಿ ಮೇ 22 ರಂದೇ ತಂಡ ಇಂಗ್ಲೆಂಡ್‍ಗೆ ಪ್ರಯಾಣ ಬೆಳೆಸಲಿದೆ ಎಂಬ ಮಾಹಿತಿ ಇದೆ. ಮೇ 28 ರಂದು ಬಾಂಗ್ಲಾದೇಶದ ವಿರುದ್ಧ ಭಾರತ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಲಿದೆ.